ADVERTISEMENT

ಆಳ–ಅಗಲ: 24.28 ಕೋಟಿ ಜನ ಬಡತನದಿಂದ ಹೊರಗೆ ಬಂದಿದ್ದು ಅಂದಾಜು ಮಾತ್ರ

ಜಯಸಿಂಹ ಆರ್.
Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
   

ದೇಶದ 24.28 ಕೋಟಿಯಷ್ಟು ಜನರನ್ನು ಬಹು ಆಯಾಮದ ಬಡತನದಿಂದ ಹೊರಗೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಇಷ್ಟು ಜನರು ಬಡತನದಿಂದ ಹೊರಗೆ ಬಂದಿದ್ದಾರೆ ಎಂಬ ನಿರ್ಧಾರಕ್ಕೆ ಸರ್ಕಾರ ಬಂದದ್ದಾದರೂ ಹೇಗೆ ಎಂದು ಪ್ರಶ್ನಿಸಿದರೆ, ಅದಕ್ಕೆ ಅದೊಂದು ಕಾಗದದ ಮೇಲಿನ ಅಂದಾಜು ಅಷ್ಟೆ ಎಂದು ದೃಢವಾಗಿ ಉತ್ತರಿಸಬಹುದು. ನೀತಿ ಆಯೋಗದ ವರದಿಗಳಲ್ಲೇ ಹೇಳಿಕೊಂಡಿರುವಂತೆ ಇದೊಂದು ಅಂದಾಜು ಮತ್ತು ಈ ಅಂದಾಜು ವಾಸ್ತವ ಸ್ಥಿತಿಯನ್ನು ತೋರಿಸುವುದಿಲ್ಲ. ಆದರೆ ಪ್ರಧಾನಿ, ಹಣಕಾಸು ಸಚಿವರು ಮತ್ತು ಆಡಳಿತಾರೂಢ ಪಕ್ಷದ ನಾಯಕರು ಮಾತ್ರ 24.28 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಿದ್ದೇವೆ ಎಂದೇ ಘೋಷಿಸಿಕೊಳ್ಳುತ್ತಿದ್ದಾರೆ.

ನೀತಿ ಆಯೋಗವು ಬಹು ಆಯಾಮದ ಬಡತನ ಸೂಚ್ಯಂಕವನ್ನು ರೂಪಿಸಿದ್ದು ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–ಎನ್‌ಎಫ್‌ಎಚ್‌ಎಸ್‌’ ದತ್ತಾಂಶಗಳ ಆಧಾರದಲ್ಲಿ. ದೇಶದಲ್ಲಿ ಈಗ ಲಭ್ಯವಿರುವ ತೀರಾ ಇತ್ತೀಚಿನ ಎನ್‌ಎಫ್‌ಎಚ್‌ಎಸ್‌ ವರದಿ 2019–21ನೇ ಅವಧಿಗೆ ಸಂಬಂಧಿಸಿದ್ದು. ಆದರೆ ಅದೇ ದತ್ತಾಂಶಗಳನ್ನು 2022–23ನೇ ಸಾಲಿಗೂ ಅನ್ವಯಿಸಿ, ‘24.28 ಕೋಟಿ ಜನರನ್ನು ಬಹು ಆಯಾಮದ ಬಡತನದಿಂದ ಮೇಲಕ್ಕೆ ಎತ್ತಲಾಗಿದೆ’ ಎಂದು ಘೋಷಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ಅಂದಾಜು ಮಾತ್ರ.

ಬಹು ಆಯಾಮದ ಬಡತನ ಸೂಚ್ಯಂಕವನ್ನು ರೂಪಿಸಲು ನೀತಿ ಆಯೋಗವು, 2005–06, 2015–16ನೇ ಸಾಲಿನ ಮತ್ತು 2019–21ರ ಎನ್ಎಫ್‌ಎಚ್‌ಎಸ್‌ ವರದಿಗಳನ್ನು ಆಧಾರವಾಗಿ ಬಳಸಿಕೊಂಡಿತ್ತು. ಎನ್‌ಎಫ್‌ಎಚ್‌ಎಸ್‌ ವರದಿಯಲ್ಲಿ ಕುಟುಂಬದ ಅಪೌಷ್ಟಿಕತೆ ಮಟ್ಟ, ಆರೋಗ್ಯ ಸೇವೆಗಳ ಲಭ್ಯತೆ, ಮೂಲಸೌಕರ್ಯಗಳ ಲಭ್ಯತೆ, ಆರೋಗ್ಯದ ಮಟ್ಟ, ಶಿಕ್ಷಣದ ಮಟ್ಟ ಮತ್ತಿತರ ದತ್ತಾಂಶಗಳು ಇರುತ್ತವೆ. ನೀತಿ ಆಯೋಗವು ತಾನು ರೂಪಿಸಿಕೊಂಡ ಬಹು ಆಯಾಮದ ಬಡತನ ಸೂಚಿಗಳಿಗೆ ಅಗತ್ಯವಾದ ಮಾಹಿತಿಗಳನ್ನು ಈ ಮೇಲಿನ ದತ್ತಾಂಶಗಳಿಂದ ತೆಗೆದುಕೊಂಡಿದೆ.

ADVERTISEMENT

ಬಹು ಆಯಾಮದ ಬಡತನ ಸೂಚ್ಯಂಕದ ಸೂಚಿಗಳಾದ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿ ಆದ ಬದಲಾವಣೆಗಳನ್ನು ಆಧಾರಿಸಿ ಬಡತನ ಇಳಿಕೆಯಾಗಿದೆಯೇ ಅಥವಾ ಏರಿಕೆಯಾಗಿದೆ ಎಂದು ನಿರ್ಧರಿಸಲಾಗಿದೆ. 2015–16ರಿಂದ 2019–21ರ ನಡುವೆ ಅಪೌಷ್ಟಿಕತೆ, ಶಿಶುಮರಣ ಇಳಿಕೆಯಾಗಿದೆ. ಅಡುಗೆ ಅನಿಲ, ವಿದ್ಯುತ್, ಶುದ್ಧಕುಡಿಯುವ ನೀರು, ಬ್ಯಾಂಕ್‌ ಖಾತೆ, ಶೌಚಾಲಯ ಲಭ್ಯತೆ ಏರಿಕೆಯಾಗಿದೆ. ಹೀಗಾಗಿ ಜನರ ಜೀವನಮಟ್ಟ ಸುಧಾರಿಸಿದ್ದು, ಬಡತನ ಇಳಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಅವಧಿಯಲ್ಲಿ, ಮೇಲ್ಕಂಡ ಸೂಚಿಗಳಲ್ಲಿ ವಾರ್ಷಿಕ ಸರಾಸರಿ ಶೇ 10.66ರಷ್ಟು ಬದಲಾವಣೆಯಾಗಿದೆ. ಅಂದರೆ ಆರು ವರ್ಷಕ್ಕೆ ಈ ಪ್ರಮಾಣವು ಶೇ 63.94ರಷ್ಟಾಗುತ್ತದೆ. ದೇಶದಲ್ಲಿ ಇದ್ದ ಒಟ್ಟು ಬಡವರಲ್ಲಿ ಶೇ 63.94ರಷ್ಟು ಮಂದಿ ಬಹು ಆಯಾಮದ ಬಡತನದ ವ್ಯಾಪ್ತಿಯಿಂದ ಹೊರಗೆ ಬಂದಿದ್ದಾರೆ ಎಂದು ನಿರ್ಧರಿಸಲಾಗಿದೆ. 

2015–16ರ ಮಧ್ಯೆ ಬಡತನದಲ್ಲಿ ಆದ ಇಳಿಕೆಯನ್ನು ಲೆಕ್ಕಹಾಕಲು ನೀತಿ ಆಯೋಗದ ಬಳಿ ಎನ್‌ಎಫ್‌ಎಚ್‌ಎಸ್‌ ವರದಿಗಳಾದರೂ ಇದ್ದವು. ಆದರೆ 2021–22 ಮತ್ತು 2022–23ನೇ ಸಾಲಿಗೆ ಲೆಕ್ಕಾಚಾರ ಮಾಡಲು ಆಯೋಗದ ಬಳಿ ಯಾವುದೇ ದತ್ತಾಂಶ ಇರಲಿಲ್ಲ. ಹೀಗಿದ್ದೂ ಆಯೋಗವು ಬಡತನ ಇಳಿಕೆಯಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಿತು. ಈ ಎರಡು ವರ್ಷಗಳ ಅವಧಿಯಲ್ಲಿ ಬಡತನದ ಪ್ರಮಾಣವು ಪ್ರತಿ ವರ್ಷ ಶೇ 10.66ರಷ್ಟು ಇಳಿಕೆಯಾಗಿದೆ ಎಂದು ಅಂದಾಜಿಸಿತು. ಅದನ್ನೇ 2011–12ರಲ್ಲಿ ದೇಶದಲ್ಲಿ ಇದ್ದರೆಂದು ಹೇಳಲಾದ 27 ಕೋಟಿ ಬಡವರಿಗೆ ಅನ್ವಯಿಸಿತು. ಆ ಮೂಲಕ 2011-12ರಿಂದ 2022–23ರ ಅವಧಿಯಲ್ಲಿ 24.28 ಕೋಟಿ ಬಡವರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಅಂದಾಜಿಸಿತು. ಕೇಂದ್ರದ ಬಿಜೆಪಿ ಸರ್ಕಾರ ಅದನ್ನೇ ಘೋಷಿಸಿ, ದೇಶದಲ್ಲಿ ಬಹು ಆಯಾಮದ ಬಡವರ ಸಂಖ್ಯೆ ಇಳಿಕೆಯಾಗಿದೆ ಎನ್ನುತ್ತಿದೆ.

ಅಪೌಷ್ಟಿಕತೆ ಲೆಕ್ಕ: ರಕ್ತಹೀನತೆ ಕೈಬಿಟ್ಟ ಸರ್ಕಾರ
ಬಹು ಆಯಾಮದ ಬಡತನ ಸೂಚ್ಯಂಕ ಲೆಕ್ಕಾಚಾರದಲ್ಲಿ ಅಪೌಷ್ಟಿಕತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಅನುಸರಿಸುವ ಸೂತ್ರದಲ್ಲೂ ಅಪೌಷ್ಟಿಕತೆಗೇ ಹೆಚ್ಚಿನ ಮಹತ್ವ ಇದೆ. ಆದರೆ ಅಪೌಷ್ಟಿಕತೆಗೆ ಸಂಬಂಧಿಸಿದ ಪ್ರಮುಖ ದತ್ತಾಂಶಗಳನ್ನೇ ನೀತಿ ಆಯೋಗವು ಕೈಬಿಟ್ಟಿದೆ. ಈ ಸೂಚ್ಯಂಕಕ್ಕೆ ಆಯೋಗವು ಆಯ್ಕೆ ಮಾಡಿಕೊಂಡ ವ್ಯಾಪ್ತಿಯು ದೇಶದ ಎಲ್ಲಾ ಜನರನ್ನು ಒಳಗೊಳ್ಳುವುದೇ ಇಲ್ಲ. ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುವ ಸೂಚ್ಯಂಕದಲ್ಲಿ ಅಪೌಷ್ಟಿಕತೆಯನ್ನು ಲೆಕ್ಕಹಾಕುವಾಗ ದೇಶವೊಂದರಲ್ಲಿ ಇರುವ 70 ವರ್ಷದೊಳಗಿನ ಎಲ್ಲರನ್ನೂ ಪರಿಗಣಿಸಲಾಗುತ್ತದೆ. ಹೀಗಾಗಿ ಅಲ್ಲಿ ವಾಸ್ತವಕ್ಕೆ ಹತ್ತಿರವಿರುವ ಸ್ಥಿತಿಯ ಚಿತ್ರಣ ದೊರೆಯುತ್ತದೆ. ಆದರೆ ನೀತಿ ಆಯೋಗವು ದೇಶದಲ್ಲಿನ 5 ವರ್ಷದೊಳಗಿನ ಮಕ್ಕಳು, 15–49 ವರ್ಷದ ವಯಸ್ಕರನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡಿದೆ. 5–15 ವರ್ಷದ ಮಕ್ಕಳು ಮತ್ತು 49–70 ವರ್ಷದ ವಯಸ್ಕರನ್ನು ಆಯೋಗವು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ನೀತಿ ಆಯೋಗವು ಬಹು ಆಯಾಮದ ಬಡತನ ಸೂಚ್ಯಂಕ ವರದಿಯಲ್ಲಿ ಹೇಳುತ್ತಿರುವಂತೆ ದೇಶದಲ್ಲಿನ ಜನರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪ್ರಮಾಣ ಶೇ 31 ಎಂಬುದು ವಾಸ್ತವಕ್ಕೆ ಹತ್ತಿರವಾದ ಮಾಹಿತಿಯಲ್ಲ. ರಕ್ತಹೀನತೆಯನ್ನು ಅಪೌಷ್ಟಿಕತೆಯ ಒಂದು ಲಕ್ಷಣ ಮತ್ತು ಪರಿಣಾಮ ಎಂದು ಪರಿಗಣಿಸಲಾಗುತ್ತದೆ. ಆದರೆ ಬಹು ಆಯಾಮದ ಬಡತನ ಸೂಚ್ಯಂಕವನ್ನು ಲೆಕ್ಕಾಚಾರ ಮಾಡುವಾಗ ಆಯೋಗವು ರಕ್ತಹೀನತೆಯಿಂದ ಬಳಲುತ್ತಿರುವವರ ಪ್ರಮಾಣವನ್ನು ಪರಿಗಣಿಸಿಯೇ ಇಲ್ಲ. ಎನ್‌ಎಫ್‌ಎಚ್‌ಎಸ್‌–5 ಪ್ರಕಾರ ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ 15–49 ವರ್ಷದ ವಯಸ್ಕರ ಮತ್ತು ಐದು ವರ್ಷದವರೆಗಿನ ಮಕ್ಕಳ ಸರಾಸರಿ ಪ್ರಮಾಣವು ಶೇ 49.8ರಷ್ಟಾಗುತ್ತದೆ. ಇಂತಹ ದೊಡ್ಡ ಪ್ರಮಾಣದ ಸಂಖ್ಯೆಯನ್ನು ಆಯೋಗವು ಬಡತನದ ಲೆಕ್ಕಾಚಾರ ಮಾಡುವಾಗ ಕೈಬಿಟ್ಟಿದೆ. ನೀತಿ ಆಯೋಗವು ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪ್ರಮಾಣ ಶೇ 31ರಷ್ಟು ಎಂದು ಲೆಕ್ಕಹಾಕಿದ ಕಾರಣಕ್ಕೇ, ಬಡತನದ ವ್ಯಾಪ್ತಿಗೆ ಒಳಪಡುವ ಜನರ ಪ್ರಮಾಣ ಕಡಿಮೆಯಾಗಿದೆ. ಆದರೆ ರಕ್ತಹೀನತೆಯಿಂದ ಬಳಲುತ್ತಿದ್ದ ಜನರ ಪ್ರಮಾಣವನ್ನೂ ಪರಿಗಣಿಸಿದ್ದರೆ, ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರ ಸರಾಸರಿ ಪ್ರಮಾಣವು ಶೇ39.11ರಷ್ಟಾಗುತ್ತಿತ್ತು. ಆಗ ಬಹು ಆಯಾಮದ ಬಡತನದ ವ್ಯಾಪ್ತಿಗೆ ಒಳಪಡುವ ಜನರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು

ಜಾಗತಿಕ ಮಟ್ಟದಲ್ಲಿ ಬಹು ಆಯಾಮದ ಬಡತನ ಸೂಚ್ಯಂಕವನ್ನು ಲೆಕ್ಕಚಾರ ಮಾಡಲು ಆಲ್ಕೈರ್ ಫಾಸ್ಟರ್‌ ವಿಧಾನವನ್ನು ಬಳಸಲಾಗುತ್ತದೆ. ಈ ಸೂತ್ರವನ್ನೇ ಬಳಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರೂ, ನೀತಿ ಆಯೋಗವು ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಗಳು ಬಡತನ ಕಡಿಮೆಯಾಗಿದೆ ಎಂದು ತೋರಿಸಲು ಪೂರಕವಾಗುವಂತೆ ಇವೆ.

ಆಲ್ಕೈರ್ ಫಾಸ್ಟರ್‌ ವಿಧಾನದ ಪ್ರಕಾರ ಆರೋಗ್ಯ ಸೂಚಿಯಲ್ಲಿ ಅಪೌಷ್ಟಿಕತೆ ಮತ್ತು ಶಿಶು–ಮಕ್ಕಳ ಮರಣ ಎಂದ ಎರಡು ಸೂಚಿಗಳನ್ನು ಮಾತ್ರ ಬಳಸಲಾಗುತ್ತದೆ. ಈ ಎರಡಕ್ಕೂ ಸಮಾನವಾದ ಮಹತ್ವ ನೀಡಲಾಗುತ್ತದೆ. ಆದರೆ ನೀತಿ ಆಯೋಗವು ಶಿಶು–ಮಕ್ಕಳ ಮರಣ ಸೂಚಿಯನ್ನು ವಿಭಜಿಸಿ, ಶಿಶು–ಮಕ್ಕಳ ಮರಣ ಪ್ರಮಾಣ ಮತ್ತು ತಾಯ್ತನ ಆರೈಕೆ ಲಭ್ಯತೆ ಎಂದು ಹೊಸ ಸೂಚಿಗಳನ್ನು ರೂಪಿಸಿದೆ. 

ಮೂಲ ಸೂತ್ರದಂತೆ ಕುಟುಂಬವೊಂದು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಮತ್ತು ಕುಟುಂಬದಲ್ಲಿ ಶಿಶು–ಮಕ್ಕಳ ಮರಣ ಸಂಭವಿಸಿದ್ದರೆ ಅದು ಬಹು ಆಯಾಮದ ಬಡತನದ ವ್ಯಾಪ್ತಿಗೆ ಬರುತ್ತಿತ್ತು. ಆದರೆ ಈಗ ಈ ಸೂಚಿಗಳನ್ನು ಬದಲಿಸಿರುವ ಕಾರಣ, ಕುಟುಂಬವೊಂದು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಮತ್ತು ಕುಟುಂಬದಲ್ಲಿ ಶಿಶು–ಮಕ್ಕಳ ಮರಣ ಸಂಭವಿಸಿದ್ದರೂ ಅದು ಬಹು ಆಯಾಮದ ಬಡತನದ ವ್ಯಾಪ್ತಿಗೆ ಬರುವುದಿಲ್ಲ.

‘ಕೋವಿಡ್‌ ನಂತರದ ಮಾಹಿತಿ ಒಳಗೊಂಡಿಲ್ಲ’
‘ಬಹು ಆಯಾಮ ಬಡತನ ಸೂಚ್ಯಂಕವನ್ನು ಸಿದ್ಧಪಡಿಸಲು ಬಳಸಿಕೊಂಡ ದತ್ತಾಂಶಗಳು ಕೋವಿಡ್‌ ಅವಧಿಯ ಮತ್ತು ಕೋವಿಡ್‌ ನಂತರದ ಆರ್ಥಿಕ ಸ್ಥಿತಿಯ ಮಾಹಿತಿಯನ್ನು ಒಳಗೊಂಡಿಲ್ಲ. ಹೀಗಾಗಿ ಬಡತನದ ವಾಸ್ತವ ಸ್ಥಿತಿಯನ್ನು ಇದು ತೆರೆದಿಡುವುದಿಲ್ಲ’ ಎಂದು ಇದೇ ಜನವರಿಯಲ್ಲಿ ನೀತಿ ಆಯೋಗವು ಬಿಡುಗಡೆ ಮಾಡಿದ ‘ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನಾ ವರದಿ’ಯಲ್ಲಿ ಘೋಷಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.