ADVERTISEMENT

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಹೂಳು ತುಂಬಿದ ಭವಿಷ್ಯ

ಕೆ.ಪಿ.ಸುರೇಶ
Published 22 ನವೆಂಬರ್ 2023, 2:31 IST
Last Updated 22 ನವೆಂಬರ್ 2023, 2:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸರ್ಕಾರ ಇನ್ನಷ್ಟು ಜಲಾಶಯ ನಿರ್ಮಾಣದ ಹುಂಬ ನಿರ್ಧಾರದಲ್ಲಿ ಇದೆಯೇ ವಿನಾ ಈಗಿರುವ ಜಲಾಶಯಗಳ ಸಂಗ್ರಹ, ಅದು ಒದಗಿಸುವ ನೀರಾವರಿ, ಅಲ್ಲಿ ಕೈಗೊಳ್ಳಬಹುದಾದ ನೀರುಳಿಸುವ ಉಪಕ್ರಮಗಳ ಬಗ್ಗೆ ಗಂಭಿರವಾದ ಅಧ್ಯಯನ, ಸಾರ್ವಜನಿಕ ಸಂವಾದಗಳಲ್ಲಿ ತೊಡಗಿಯೇ ಇಲ್ಲ

‘ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು’ ಎಂದು ಪಂಡಿತ ಜವಾಹರಲಾಲ್‌ ನೆಹರೂ ಕರೆದಾಗ ಅದೊಂದು ಅಭಿವೃದ್ಧಿಯ ಹೊಸ ವ್ಯಾಖ್ಯಾನವಾಗಿತ್ತು. 60 ವರ್ಷಗಳ ಬಳಿಕ ತಾನು ಕಟ್ಟಿದ ಎಲ್ಲವೂ ಶಿಥಿಲವಾಗುತ್ತಿರುವಾಗ ಆ ಪಟ್ಟಿಯಲ್ಲಿ ಈ ಅಣೆಕಟ್ಟುಗಳೂ ಸೇರುತ್ತವೆ ಎಂದು ನೆಹರೂ ಕೂಡಾ ಊಹಿಸಿರಲಾರರು.

ADVERTISEMENT

ಭಾರತ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದೇಶದಲ್ಲಿ 5,334 ಅಣೆಕಟ್ಟುಗಳಿದ್ದು ಇವುಗಳಲ್ಲಿ 234 ಅಣೆಕಟ್ಟುಗಳು ನೂರು ವರ್ಷಕ್ಕೂ ಹಳೆಯವು. ಕರ್ನಾಟಕದಲ್ಲಿ ಇಂಥಾ ಅಣೆಕಟ್ಟುಗಳ ಸಂಖ್ಯೆ 230. ಇವುಗಳಲ್ಲಿ 15 ಅಣೆಕಟ್ಟುಗಳಿಗೆ ನೂರು ವರ್ಷ ದಾಟಿದೆ.

ನೀತಿ ಆಯೋಗದ ಪ್ರಕಾರ ಪ್ರಸ್ತುತ ನಮ್ಮ ದೇಶ ಕೃಷಿ, ಕೈಗಾರಿಕೆ ಮತ್ತು ಗೃಹೋಪಯೋಗಕ್ಕೆ 634 ಬಿಸಿಎಂ (ಬಿಲಿಯನ್‌ ಘನ ಮೀಟರ್‌) ನೀರು ಉಪಯೋಗಿಸುತ್ತಿದ್ದು 2050ರ ವೇಳೆಗೆ ಈ ಪ್ರಮಾಣ 800 ಬಿಸಿಎಂಗೆ ಏರಲಿದೆ. ಈ ಬೇಡಿಕೆಯನ್ನು ಜಲಾಶಯಗಳ ಮೂಲಕ ತಕ್ಕ ಮಟ್ಟಿಗೆ ಪೂರೈಸುವ ಲೆಕ್ಕಾಚಾರವೂ ಇದೆ. ಆದರೆ ಜಲಾಶಯಗಳ ನಿಜ ಸಂಗ್ರಹ ಎಷ್ಟು ಎಂಬ ಲೆಕ್ಕ ಪರಿಶೋಧನೆ ನಡೆದರೆ ಈ ಭವಿಷ್ಯದ ಲೆಕ್ಕವೂ ಮಸುಕಾಗಲಿದೆ.

ಬಹುತೇಕ ಜಲಾಶಯಗಳನ್ನು ಕಟ್ಟುವಾಗ ಕ್ಲೈಮು ಮಾಡಿದ ನೀರಾವರಿ ಸಾಮರ್ಥ್ಯದ ಅರ್ಧದಷ್ಟನ್ನೂ ಈ ಜಲಾಶಯಗಳು ಒದಗಿಸುತ್ತಿಲ್ಲ. ಬಹುತೇಕ ಜಲಾಶಯಗಳಲ್ಲಿ ಊಹಿಸಿದ್ದಕ್ಕಿಂತ ಎಷ್ಟೋ ಪಾಲು ಹೂಳು ತುಂಬಿಕೊಂಡಿದೆ. ಕರ್ನಾಟಕದ ಮುಖ್ಯ ಜಲಾಶಯಗಳು ಪಶ್ಚಿಮ ಘಟ್ಟ ಮತ್ತು ಅದರ ಸೆರಗಿನ ಪ್ರದೇಶಗಳ ಮುಂಗಾರು ಮಳೆಯನ್ನು ನೆಚ್ಚಿಕೊಂಡಿದ್ದು ಈ ಮುಂಗಾರು ಮಳೆ ಕೊಚ್ಚಿ ತರುವ ಹೂಳು ಈ ಜಲಾಶಯಗಳನ್ನು ತುಂಬುತ್ತಿದೆ. ಈ ಬಗ್ಗೆ ನಿಖರವಾದ ವಿವರಗಳೇ ಸರ್ಕಾರದಲ್ಲಿಲ್ಲ.

ನಮ್ಮ ತುಂಗಭದ್ರೆಯ ಅಣೆಕಟ್ಟಿನ ಸಂಗ್ರಹ ಪ್ರಮಾಣ ಎಷ್ಟು ಕುಸಿದಿದೆಯೆಂದರೆ ಸರ್ಕಾರವೇ ಈ ಕುಸಿದ ಟಿಎಂಸಿ ಲೆಕ್ಕ ಹಾಕಿ ಅದರ ಕೆಳಗೆ ಇನ್ನೊಂದು ಅಣೆಕಟ್ಟು ಕಟ್ಟುವ ಧಾವಂತದಲ್ಲಿದೆ.

ಕರ್ನಾಟಕದಲ್ಲೇ ಈ ಜಲಾಶಯಗಳನ್ನು ನಿರ್ಮಿಸುವಾಗ ಕ್ಲೈಮು ಮಾಡಿದ ನೀರಾವರಿ ಅಚ್ಚುಕಟ್ಟಿನ ಅರ್ಧದಷ್ಟು ಪ್ರದೇಶಕ್ಕೂ ನೀರು ಪೂರೈಕೆಯಾಗಿಲ್ಲ ಎಂದು ಅಂಕಿ-ಅಂಶಗಳು ಹೇಳುತ್ತವೆ. ಜಲ ಸಂಪನ್ಮೂಲ ಇಲಾಖೆಯ ಪ್ರಕಾರವೇ (ಐಸೆಕ್‌ ಅಧ್ಯಯನ ವರದಿ) ನೀರಾವರಿ ಸಾಮರ್ಥ್ಯದ ಅಂದಾಜು 31 ಲಕ್ಷ ಹೆಕ್ಟೇರ್‌ (ಜಲಾಶಯ ನಿರ್ಮಾಣಕ್ಕಿರುವ ಸಮರ್ಥನೆ ಇದು) ನೀರಾವರಿ ಒದಗಿರುವುದು ಕೇವಲ 16 ಲಕ್ಷ ಹೆಕ್ಟೇರ್. ಅಂದರೆ ಸಾಮರ್ಥ್ಯದ ಅರ್ಧದಷ್ಟು. ಈ ಉಬ್ಬಿಸಿದ ಅಂದಾಜು, ಜಲಾಶಯದ ನಿರ್ಮಾಣ ವೆಚ್ಚವನ್ನು ಹಿಗ್ಗಿಸುತ್ತದೆ. ಇದರ ತಕ್ಷಣದ ಲಾಭ ಎಲ್ಲಿಗೆ ಹೋಗುತ್ತದೆ ಎಂಬುದು ಚಿದಂಬರ ರಹಸ್ಯವೇನಲ್ಲ.

ದಶಕದ ಹಿಂದೆ ಜಗದೀಶ್‌ ಶೆಟ್ಟರ್ ಅವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕದ ಅಂದಾಜು 2.5 ಲಕ್ಷ ಹೆಕ್ಟೇರ್‌ ಚೌಳು ಭೂಮಿಯಾಗಿ ರೂಪಾಂತರಗೊಂಡಿದ್ದು ಅವುಗಳನ್ನು ಮರುಪಡೆಯಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂಬ ವಿವರ ಇದೆ. ಇದೇವೇಳೆಗೆ ವಿಧಾನಮಂಡಲದಲ್ಲಿ ನೀಡಲಾದ ಉತ್ತರದ ಪ್ರಕಾರ ಬೆಳಗಾವಿ ಜಿಲ್ಲೆ ಒಂದರಲ್ಲೇ 1 ಲಕ್ಷ ಹೆಕ್ಟೇರ್‌ ಜಮೀನು ಚೌಳು. ಈ ಅಂಕಿ-ಅಂಶ ಹತ್ತು ವರ್ಷ ಹಳೆಯದು. ಸದ್ಯದ ಸ್ಥಿತಿ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅತಿ ನೀರಾವರಿ ತಂದಿರುವ ವೈರುಧ್ಯ ಇದು.

ಇನ್ನೊಂದೆಡೆ ಭಾರತದಲ್ಲಿ ಕೃಷಿಗೆ ಶೇ 80ರಷ್ಟು ನೀರು ಬಳಕೆಯಾಗುತ್ತಿದ್ದು ಇದರ ದಕ್ಷತೆಯ ಪ್ರಮಾಣ ಶೇ 30 ಮಾತ್ರ. ಅಂದರೆ ಬಹುಪಾಲು ನೀರು ಪೋಲಾಗುತ್ತಿದೆ. ಆದ್ದರಿಂದಲೇ ಬೆಳೆಗೆ ಬೇಕಾದ ನೀರೆಷ್ಟು? ಎಷ್ಟು ಹರಿಸಬಹುದು, ಎಷ್ಟು ಪೋಲಾಗುತ್ತದೆ ಎಂಬ ಬಗ್ಗೆ ಯಾವ ವೈಜ್ಞಾನಿಕ ತಂತ್ರೋಪಾಯಗಳ ದಾಖಲೆಯೂ ಸಾರ್ವಜನಿಕವಾಗಿ ಲಭ್ಯವಿಲ್ಲ.

ಈ ನೀರಾವರಿ ಸೃಷ್ಟಿಸಿರುವ ಬೆಳೆ ವಿನ್ಯಾಸ ನೋಡಿದರೆ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.

ಜಲಾಶಯಗಳ ನೀರಿನ ಶೇ 80ರಷ್ಟು ಭತ್ತ ಮತ್ತು ಕಬ್ಬು ಬೆಳೆಯಲು ಬಳಕೆಯಾಗುತ್ತಿದ್ದು ಇಲ್ಲೆಲ್ಲ ಬೆಳೆ ವೈವಿಧ್ಯ ಸಂಪೂರ್ಣ ನಾಶವಾಗಿ ಭತ್ತದಂಥಾ ಏಕಬೆಳೆ ಹರಡಿ ಕೂತಿದೆ. ಇಲ್ಲಿ ಬಳಕೆಯಾಗುವ ರಾಸಾಯನಿಕ ಗೊಬ್ಬರ, ಕ್ರಿಮಿ/ ಕೀಟನಾಶಕಗಳನ್ನು ಲೆಕ್ಕ ಹಾಕಿದರೆ ನೀರಾವರಿ ಸೃಷ್ಟಿಸಿರುವ ಬಹು ಆಯಾಮದ ಸಂಕಷ್ಟಗಳ ರಾಕ್ಷಸೀ ಸ್ವರೂಪ ಅನಾವರಣಗೊಳ್ಳುತ್ತದೆ (ಕರ್ನಾಟಕ ಸರ್ಕಾರಕ್ಕೆ ಈ ಕೀಟನಾಶಕಗಳ ಬಳಕೆ ಪ್ರಮಾಣ ಎಷ್ಟಿದೆ ಎಂಬುದೂ ಅಧಿಕೃತವಾಗಿ ಗೊತ್ತಿಲ್ಲ).

ಇನ್ನು ಈ ನೀರಾವರಿ ಅಚ್ಚುಕಟ್ಟಿನಲ್ಲಿ ಬೆಳೆ ಬೆಳೆಯುವ ರೂಲುಬುಕ್ಕು ನೋಡಿದರೆ ಬೆಳೆ ಬದಲಾವಣೆ ಮಾಡಬೇಕು ಇತ್ಯಾದಿ ಶಿಫಾರಸುಗಳಿವೆ. ಇದೇನಿದ್ದರೂ ಮುದ್ರಣದಲ್ಲಿರುವ ಅಕ್ಷರಗಳಷ್ಟೇ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲೇ ವರ್ಷಕ್ಕೆ 20 ಸಾವಿರ ಹೆಕ್ಟೇರಿನಲ್ಲಿ ಒಂದು ಬೆಳೆ ದ್ವಿದಳ ಧಾನ್ಯ ಬೆಳೆಯಲು ಸಬ್ಸಿಡಿ ನೀಡಿ ಅದನ್ನು ಸರ್ಕಾರವೇ ಕೊಂಡುಕೊಂಡರೂ ಹೆಚ್ಚೆಂದರೆ ₹60 ಕೋಟಿ ವೆಚ್ಚವಾಗಬಹುದು. ಆದರೆ ಇದರಿಂದ ಉಳಿಯುವ ನೀರಿನ ಪ್ರಮಾಣ ಅಮೂಲ್ಯವಾದದ್ದು. ಅಷ್ಟೇ ಅಲ್ಲ. ಬೆಳೆ ಬದಲಾವಣೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಆಗುವ ಬದಲಾವಣೆ ಇನ್ನೂ ಅಮೂಲ್ಯವಾದದ್ದು. ಆವರ್ತದ ಮೂಲಕ ಇಡೀ ಅಚ್ಚುಕಟ್ಟು ಪ್ರದೇಶದಲ್ಲಿ ಇದನ್ನು ಜಾರಿ ಮಾಡಿದರೂ ಈಗಿರುವ ನೀರಿನ ಪೋಲು, ಮಣ್ಣಿನ ಬರಡುತನ ಎರಡನ್ನೂ ತಡೆಗಟ್ಟಬಹುದು.

ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ನೀರಿನ ಉಪಯೋಗದ ಮೇಲೆ ಬೀಳುವ ಒತ್ತಡ ಊಹಿಸಲೂ ಅಸಾಧ್ಯ. ಬೆಂಗಳೂರು ರಾಕ್ಷಸಾಕಾರವಾಗಿ ಬೆಳೆಯುತ್ತಾ ಅದರ ದಾಹ ತಣಿಸಲು ಮತ್ತೆ ಕಾವೇರಿಯ ಮೊರೆ ಹೋಗುವ ಧಾವಂತ ಹೆಚ್ಚಬಹುದು.

ಆಗ ನಮ್ಮ ಮುಖ್ಯ ಜಲಾಶಯಗಳ ಸ್ಥಿತಿ ಹೇಗಿರಬಹುದು? ನೀರಾವರಿಗಿರುವ ಹಾರಂಗಿ, ಕಬಿನಿ ಹೇಮಾವತಿಗಳು ನೇರ ಮಳೆ ನೀರು ಕೊಚ್ಚಿ ತರುವ ಮಣ್ಣಿನ ಸಂಗ್ರಹಾಗಾರಗಳೇ. ಇದರೊಂದಿಗೇ ಪಶ್ಚಿಮ ಘಟ್ಟದ ಮಳೆ ಬಿರುಸು ನಂಬಿರುವ ಜಲ ವಿದ್ಯುದಾಗಾರಗಳನ್ನೂ ಲೆಕ್ಕ ಹಾಕಿದರೆ ಬಹುತೇಕ ಭವಿಷ್ಯದ ಲೆಕ್ಕಾಚಾರಗಳೆಲ್ಲಾ ನೆಲ ಕಚ್ಚುವುದು ಖಚಿತ.

ಇನ್ನು ಹವಾಮಾನ ವೈಪರೀತ್ಯದ ಕಾರಣಕ್ಕೆ ಮುಂದಿನ 30 ವರ್ಷಗಳಲ್ಲಿ ಅರ್ಧಕ್ಕರ್ಧ ವರ್ಷ ಬರ ಪೀಡಿತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳಿವೆ. ಇದರ ಪರಿಣಾಮ?

ಸರ್ಕಾರ ಇನ್ನಷ್ಟು ಜಲಾಶಯ ನಿರ್ಮಾಣದ ಹುಂಬ ನಿರ್ಧಾರದಲ್ಲಿ ಇದೆಯೇ ವಿನಃ ಈಗಿರುವ ಜಲಾಶಯಗಳ ಸಂಗ್ರಹ, ಅದು ಒದಗಿಸುವ ನೀರಾವರಿ, ಅಲ್ಲಿ ಕೈಗೊಳ್ಳಬಹುದಾದ ನೀರುಳಿಸುವ ಉಪಕ್ರಮಗಳ ಬಗ್ಗೆ ಗಂಭಿರವಾದ ಅಧ್ಯಯನ, ಸಾರ್ವಜನಿಕ ಸಂವಾದಗಳಲ್ಲಿ ತೊಡಗಿಯೇ ಇಲ್ಲ.

ಈ ಅಧ್ಯಯನ ಮತ್ತು ಕಾರ್ಯ ಯೋಜನೆ ಆರಂಭಿಸದಿದ್ದರೆ ಭವಿಷ್ಯದ ದಿನಗಳನ್ನು ನಿಭಾಯಿಸಲು ಇನ್ನಷ್ಟು ಭರವಸೆಗಳ ಸುಳ್ಳು ಹೇಳಬಹುದು. ಇಲ್ಲ ಇನ್ನೊಂದು ಸುತ್ತಿನ ಹಣದ ಹೊಳೆ ಹರಿಸುವ ಸಂಭ್ರಮ ತೋರಬಹುದು.

ಭವಿಷ್ಯದ ಚಿಂತೆ ವರ್ತಮಾನದ ದುಗುಡವಾದರಷ್ಟೇ ಹೊರದಾರಿ ಕಾಣಬಹುದು. ಕಣ್ಣಿಗೆ ಗಿಡಿಯುವ ಈ ಭವಿಷ್ಯದ ಮುಂಗಾಣ್ಕೆಯನ್ನು ನಿಭಾಯಿಸುವುದು ಉತ್ತಮ ನಾಗರಿಕ ಆಡಳಿತದ ಹೊಣೆ. 5ಜಿಯಿಂದ 10ಜಿಗೆ ಜಿಗಿಯುವುದೇ ಪರಮ ಸಾಧನೆ ಎಂದು ಭಾವಿಸಿದರೆ ಅನ್ನ ಬೆಳೆವ ಜಮೀನು ಶಾಶ್ವತವಾಗಿ ಬಂಜೆಯಾಗುತ್ತದೆ. ‘ಪೃಥ್ವಿ ಗತ ಯೌವ್ವನಾ’ ಎಂದು ಭರ್ತೃಹರಿ ಹೇಳಿದ್ದು ಸಾವಿರ ವರ್ಷಗಳ ಹಿಂದೆ. ಭೂಮಿಯ ಯೌವ್ವನ ಕಳೆದು ಹೋಯಿತು ಎಂದು ನಾವು ನಮ್ಮ ಮಕ್ಕಳಿಗೆ ಹೇಳುವುದು ಮಹಾ ಸಂಕಟದ ವಿಷಯ.

ಲೇಖಕ:  ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.