ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಯೋಜನೆಯಾದ ‘ಚಂದ್ರಯಾನ–3’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಪೂರ್ವನಿಗದಿಯಂತೆ ಎಲ್ಲವೂ ನಡೆದರೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಚಂದ್ರಯಾನ–3ರ ಉಪಗ್ರಹವನ್ನು ಹೊತ್ತ ಎಲ್‌ಎಂವಿ–3 ರಾಕೆಟ್ ನಭದತ್ತ ಜಿಗಿಯಲಿದೆ. ಚಂದ್ರನ ಅಂಗಳದಲ್ಲಿ ‘ವಿಕ್ರಂ ಲ್ಯಾಂಡರ್’ ಮತ್ತು ‘ರೋವರ್’ ಬಂಡಿಯನ್ನು ಇಳಿಸುವ ಈ ಕಾರ್ಯಾಚರಣೆಯು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
2019ರಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ನೌಕೆಯನ್ನು ಇಳಿಸುವ ಚಂದ್ರಯಾನ–2 ಕಾರ್ಯಚಾರಣೆಯು ಭಾಗಶಃ ಯಶಸ್ವಿಯಾಗಿತ್ತು. ಚಂದ್ರನ ಪರಿಭ್ರಮಣ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ, ಚಂದ್ರನ ನೆಲಮುಟ್ಟುವಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು, ಎರಡನೇ ಹಂತದ ಕಾರ್ಯಾಚರಣೆ ವಿಫಲವಾಗಿತ್ತು. ಆ ಕಾರ್ಯಾಚರಣೆಯಲ್ಲಿ ಎದುರಾಗಿದ್ದ ತೊಡಕುಗಳನ್ನು ನಿವಾರಿಸುವ ಕಾರ್ಯತಂತ್ರವನ್ನು ಚಂದ್ರಯಾನ–3ರಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಇಸ್ರೊ ಹೇಳಿದೆ. ವಿಕ್ರಮ್ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವಲ್ಲಿ ತೊಡಕುಗಳು ಎದುರಾದರೆ, ರೋವರ್ ಬಂಡಿಯನ್ನು ವಿಕ್ರಮ್‌ನಿಂದ ಹೊರಗೆ ಕಳುಹಿಸುವಲ್ಲಿ ತೊಂದರೆಗಳು ಎದುರಾದರೆ, ಏನು ಮಾಡಬೇಕು ಎಂಬುದನ್ನೂ ಪೂರ್ವನಿಗದಿ ಮಾಡಲಾಗಿದೆ ಎಂದು ಇಸ್ರೊ ಹೇಳಿದೆ.
ಚಂದ್ರಯಾನ–2ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸಲು ಇಸ್ರೊ ಯೋಜನೆ ಹಾಕಿಕೊಂಡಿತ್ತು. ಚಂದ್ರಯಾನ–3ರಲ್ಲೂ ದಕ್ಷಿಣ ಧ್ರುವದಲ್ಲೇ ಲ್ಯಾಂಡರ್ ಇಳಿಸಲಾಗುವುದು. ಚಂದ್ರನಲ್ಲಿ ಲ್ಯಾಂಡರ್ ಮತ್ತು ರೋವರ್‌ಗಳನ್ನು ಈಗಾಗಲೇ ಇಳಿಸಿರುವ ಅಮೆರಿಕ, ರಷ್ಯಾ ಮತ್ತು ಚೀನಾ ಉತ್ತರ ಧ್ರುವದಲ್ಲಿ ಆ ಕಾರ್ಯಾಚರಣೆ ನಡೆಸಿವೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸುವಲ್ಲಿ ಮತ್ತು ರೋವರ್ ಅನ್ನು ಲ್ಯಾಂಡರ್ ಒಳಗಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರೆ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಆ ಕಾರ್ಯಾಚರಣೆ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜತೆಗೆ, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಾಲ್ಕನೇ ದೇಶ ಎನಿಸಲಿದೆ.
ಬೇರೆ ದೇಶಗಳು ಈವರೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಂತಹ ಕಾರ್ಯಾಚರಣೆ ನಡೆಸದೇ ಇರುವುದೇ, ಆ ಕಾರ್ಯಾಚರಣೆಯ ಸಂಕೀರ್ಣತೆಯನ್ನು ತೋರಿಸುತ್ತದೆ. ಅಂತಹ ಮಹತ್ವದ ಕಾರ್ಯಾಚರಣೆಗೆ ಇಸ್ರೊ ಮುಂದಾಗಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ, ಅಂತರಗ್ರಹ ಕಾರ್ಯಾಚರಣೆಗಳನ್ನು ನಡೆಸಲು ಇಸ್ರೊಗೆ ನೆರವಾಗಲಿದೆ.
ಲ್ಯಾಂಡಿಂಗ್ ಕ್ಲಿಷ್ಟ ಕಾರ್ಯಾಚರಣೆ
ಎಲ್‌ಎಂವಿ–3 ನೌಕೆಯು ನೆಲದಿಂದ ಜಿಗಿದ ಕೆಲವೇ ನಿಮಿಷಗಳಲ್ಲಿ ಪ್ರೊಪಲ್ಷನ್ ನೌಕೆಯನ್ನು ಭೂಮಿಯಿಂದ ಪೂರ್ವನಿಗದಿತ ಎತ್ತರದ ಕಕ್ಷೆಗೆ ಸೇರಿಸಲಿದೆ. ಭೂಮಿಯ ಸುತ್ತ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುವ ಪ್ರೊಪಲ್ಷನ್ ನೌಕೆಯು ಹಲವು ಹಂತಗಳಲ್ಲಿ ತನ್ನ ಕಕ್ಷೆಯ ಎತ್ತರವನ್ನು ಹೆಚ್ಚಿಸಿಕೊಳ್ಳಲಿದೆ. ನಂತರ ಭೂಮಿಯ ಕಕ್ಷೆಯಿಂದ ಚಂದ್ರನ ಕ್ಷಕೆಯತ್ತ ಪ್ರಯಾಣ ಆರಂಭಿಸಲಿದೆ.
ಹಲವು ದಿನಗಳ ಪ್ರಯಾಣದ ನಂತರ ಪ್ರೊಪಲ್ಷನ್ ನೌಕೆಯು ಚಂದ್ರನ ಕಕ್ಷೆಯನ್ನು ಸೇರಲಿದೆ. ಆರಂಭದಲ್ಲಿ ಅರೆಗೋಲಾಕಾರದ ಕಕ್ಷೆಯಲ್ಲಿ ಚಂದ್ರನನ್ನು ಸುತ್ತಲಿದೆ. ನಂತರ ಹಲವು ಹಂತಗಳಲ್ಲಿ ಕಕ್ಷೆಯ ಎತ್ತರವನ್ನು ಕಡಿಮೆ ಮಾಡಿಕೊಳ್ಳಲಿದೆ. ಚಂದ್ರನ ಮೇಲ್ಮೈನಿಂದ 100 ಕಿ.ಮೀ. ಎತ್ತರದ ವೃತ್ತಾಕಾರದ ಕಕ್ಷೆ ತಲುಪಿದಾಗ, ಲ್ಯಾಂಡರ್ ನೌಕೆಯಿಂದ ಪ್ರೊಪಲ್ಷನ್ ನೌಕೆಯು ಬೇರ್ಪಡಲಿದೆ. ಇಷ್ಟು ಕಾರ್ಯಾಚರಣೆಗೆ 40 ದಿನ ಬೇಕಾಗಲಿದೆ.
ಒಂದು ಚಂದ್ರ ದಿನದ ಕಾರ್ಯಾಚರಣೆ
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದ ನಂತರ, ಲ್ಯಾಂಡರ್ ಮತ್ತು ರೋವರ್ ನೌಕೆಗಳೆರಡೂ ಕಾರ್ಯಾಚರಣೆ ನಡೆಸುವ ಒಟ್ಟು ಅವಧಿ ಒಂದು ಚಂದ್ರ ದಿನ ಮಾತ್ರ. ಆದರೆ ಚಂದ್ರನಲ್ಲಿನ ಒಂದು ದಿನ, ಭೂಮಿಯಲ್ಲಿನ 14 ದಿನಗಳಿಗೆ ಸಮ.
ಈ ಅವಧಿಯಲ್ಲಿ ಎರಡೂ ನೌಕೆಗಳು ಹಲವು ಮಹತ್ವದ ಕಾರ್ಯಾಚರಣೆಗಳನ್ನು ನಡೆಸಲಿವೆ. ಈ ಕಾರ್ಯಾಚರಣೆಗಳನ್ನು ಭೂಮಿಯಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ಈ ಕಾರ್ಯಾಚರಣೆಗಳಲ್ಲಿ ನಡೆಸುವ ವೈಜ್ಞಾನಿಕ ಪರಿಶೀಲನೆಗಳು ಚಂದ್ರನ ಮೇಲ್ಮೈನಲ್ಲಿನ ಖನಿಜ ಸಂಪತ್ತು, ನೀರಿನ ಇರುವಿಕೆ, ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೆಚ್ಚಿನ ಅರಿವಿಗೆ ಕಾರಣವಾಗಲಿದೆ.
ಆಧಾರ: ಇಸ್ರೊ, ಪಿಟಿಐ, -ವರದಿ ಮತ್ತು ಪರಿಕಲ್ಪನೆ: ಜಯಸಿಂಹ ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.