ಕುಲಾಂತರಿ ತಳಿಗಳು ಮತ್ತು ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ ಜೇನು ನೊಣಗಳು ಭಾರಿ ಸಂಖ್ಯೆಯಲ್ಲಿ ಸಾಯುತ್ತಿವೆ ಎಂಬ ಕಳವಳಕಾರಿ ಅಂಶ ಅಧ್ಯಯನಗಳಿಂದ ತಿಳಿದು ಬಂದಿದೆ. ಅಮೆರಿಕದಲ್ಲಿ ಈ ಕುರಿತು ಹಲವು ಅಧ್ಯಯನಗಳು ನಡೆದಿವೆ. ಹಾಗಾಗಿ, ಜೇನು ನೊಣಗಳ ಸಾವಿನ ಪ್ರಮಾಣ ಮತ್ತು ಅದಕ್ಕೆ ಕಾರಣ ತಿಳಿದು ಬಂದಿದೆ. ಭಾರತದಲ್ಲಿಯೂ ಪರಿಸ್ಥಿತಿ ಅದೇ ರೀತಿ ಇದ್ದರೂ ಇಲ್ಲಿ ಹೆಚ್ಚು ಅಧ್ಯಯನಗಳು ನಡೆದಿಲ್ಲ. ಜೇನು ನೊಣಗಳು ಎದುರಿಸುತ್ತಿರುವ ಸಂಕಷ್ಟಗಳ ವಿವರಗಳು ಇಲ್ಲಿವೆ
ಕುಲಾಂತರಿ ಸಾಸಿವೆಯ ಕುರಿತು ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ತೆರೆದ ಪರಿಸರದಲ್ಲಿ ಬೆಳೆಯುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಕುರಿತು ಸುಪ್ರೀಂ ಕೋರ್ಟ್‌ನ ಮುಂದೆ ಅರ್ಜಿಗಳಿವೆ. ಈ ಅರ್ಜಿಗಳ ವಿಚಾರಣೆ ವೇಳೆ, ‘ಕುಲಾಂತರಿ ಸಾಸಿವೆಯಿಂದಾಗಿ ಜೇನು ನೊಣಗಳು ಮಕರಂದ ಹೀರಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ ಎಂದಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ವರದಿಯನ್ನು ಯಾಕೆ ಪರಿಗಣಿಸಿಲ್ಲ’ ಎಂದು ಕೇಂದ್ರ ಸರ್ಕಾರವನ್ನು ಕೆಲವು ದಿನಗಳ ಹಿಂದೆ ಪ್ರಶ್ನಿಸಿದೆ. ಇದೇ ವೇಳೆ, ಅಮೆರಿಕದಲ್ಲಿ ಜೇನು ನೊಣಗಳ ಸಾಮೂಹಿಕ ಸಾವಿನ ಕುರಿತು ಅಲ್ಲಿನ ಕೃಷಿ ಸಚಿವಾಲಯ ವರದಿಯೊಂದನ್ನು ಬಿಡುಗಡೆ ಮಾಡಿದೆ. ‘ಇರುವೆಗಳು ಹಾಗೂ ಗೆದ್ದಲುಗಳು ಬರದಂತೆ ತಡೆಯಲು ಬಳಸುವ ರಾಸಾಯನಿಕದ ಕಾರಣದಿಂದಾಗಿ ಸಾವು ಸಂಭವಿಸದೆ’ ಎಂದು ಅದು ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸ್ಯಾನ್ ಡಿಯೇಗೊ ಜೇನು ನೊಣ ಸಂರಕ್ಷಣಾ ತಾಣದಲ್ಲಿ ಸುಮಾರು 24 ತಾಸುಗಳ ಅಂತರದಲ್ಲಿ ಸುಮಾರು 30 ಲಕ್ಷ ಜೇನು ನೊಣಗಳು ಅಂದರೆ, ತಾಣದಲ್ಲಿದ್ದ ಒಟ್ಟು ನೊಣಗಳಲ್ಲಿ ಶೇ 95ರಷ್ಟು ಜೇನು ನೊಣಗಳು ಸತ್ತುಬಿದ್ದಿದ್ದವು. ‘ಉದ್ದೇಶಪೂರ್ವಕವಾಗಿಯೇ ಜೇನು ನೊಣಗಳಿಗೆ ವಿಷ ಉಣಿಸಲಾಗಿದೆ’ ಎಂದು ಸಂರಕ್ಷಣಾ ತಾಣದ ಅಧಿಕಾರಿಗಳು ಅಲ್ಲಿನ ಕೃಷಿ ಸಚಿವಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ಸಚಿವಾಲಯವು ನೇಮಿಸಿದ ತಜ್ಞರ ತಂಡವು ಹಲವು ತಿಂಗಳ ಅಧ್ಯಯನ ನಡೆಸಿದ ಬಳಿಕ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ‘ಇರುವೆ ಹಾಗೂ ಗೆದ್ದಲನ್ನು ನಾಶಪಡಿಸುವ ಫಿಪ್ರೊನಿಲ್ ಎನ್ನುವ ರಾಸಾಯನಿಕದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೇನು ನೊಣಗಳು ಸತ್ತಿವೆ’ ಎಂದು ಹೇಳಿದೆ. ಆದರೆ, ಈ ರಾಸಾಯನಿಕದ ಸಂಪರ್ಕಕ್ಕೆ ಜೇನು ನೊಣಗಳಗಳು ಹೇಗೆ ಬಂದವು ಎನ್ನುವ ಕುರಿತು ತಜ್ಞರ ತಂಡಕ್ಕೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಯುಸಿ ಸ್ಯಾನ್ ಡಿಯೇಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಜೇಮ್ಸ್ ನೀಹ್ ಅವರು ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇವರು ತಜ್ಞರ ತಂಡದಲ್ಲಿಯೂ ಇದ್ದರು.
‘ಫಿಪ್ರೊನಿಲ್ ಎನ್ನುವ ರಾಸಾಯನಿಕವನ್ನು ಕಟ್ಟಡ ನಿರ್ಮಾಣದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹೀಗೆ ಬಳಕೆಯಾದ ರಾಸಾಯನಿಕವು ನೀರಿನ ಮೂಲದ ಸಂಪರ್ಕಕ್ಕೆ ಬಂದಿರಬಹುದು. ಜೇನು ನೊಣಗಳು ಆ ನೀರು ಕುಡಿದಿರಬಹುದು’ ಎಂದು ಜೇಮ್ಸ್ ನೀಹ್ ಅವರು ಊಹಿಸಿದ್ದಾರೆ. ‘ಜೇನು ಪೆಟ್ಟಿಗೆಯನ್ನು ಇರುವೆ ಮುತ್ತಬಾರದು ಎನ್ನುವ ಕಾರಣಕ್ಕೆ ಫಿಪ್ರೊನಿಲ್ ಅನ್ನು ಪೆಟ್ಟಿಗೆಗೆ ಬಳಿಯಲಾಗುತ್ತದೆ. ಆದರೆ, ನಾವು ಇದನ್ನು ಬಳಸುವುದಿಲ್ಲ. ಸ್ವಲ್ಪಪ್ರಮಾಣದಲ್ಲಿ ಬಳಸುವ ಪರಿಪಾಟ ಇದೆ’ ಎನ್ನುತ್ತಾರೆ ಜೇನು ನೊಣ ಸಂರಕ್ಷಣಾ ತಾಣದ ಸಹ ಮಾಲೀಕ ಪಾಲ್ ಗನ್.
ಭಾರತದಲ್ಲಿ ಜೋನು ನೊಣಗಳ ಸ್ಥಿತಿಯು ಇದಕ್ಕೆ ಹೊರತಾಗಿಲ್ಲ. ಕೃಷಿಯಲ್ಲಿನ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಜೇನು ನೊಣವೂ ಸೇರಿದಂತೆ ಪರಾಗಸ್ಪರ್ಶ ಜೀವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕುಲಾಂತರಿ ಹತ್ತಿಯ ಕಾರಣಕ್ಕೆ ಜೇನು ನೊಣಗಳ ಸಂಖ್ಯೆ ಇಳಿಯುತ್ತಿದೆ ಎಂದು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಹರಿಯಾಣದ ರೈತರು ಹಾಗೂ ಜೇನು ನೊಣ ಸಾಕಣೆದಾರರು ದೂರುತ್ತಿದ್ದಾರೆ.
ಅಮೆರಿಕವು ತನ್ನ ಕೃಷಿ ಭೂಮಿಯನ್ನು ಹೆಚ್ಚಿಸಿಕೊಂಡಿದೆ. ಅದಕ್ಕೆ ಬಳಸುವ ರಾಸಾಯನಿಕದ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ. 2022ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಕಳೆದ 25 ವರ್ಷಗಳಿಗೆ ಹೋಲಿಸಿದರೆ, ಇತ್ತೀಚೆಗೆ ರಾಸಾಯನಿಕಗಳನ್ನು ಬಳಸುತ್ತಿರುವ ಪ್ರಮಾಣವು ಅಮೆರಿಕದಲ್ಲಿ ಶೇ 140ರಷ್ಟು ಏರಿಕೆಯಾಗಿದೆ. ಬಾದಾಮಿ ಹಾಲಿನ ಉತ್ಪಾದನೆಯು ಅಮೆರಿಕದ ಮುಖ್ಯ ರಫ್ತು ವಸ್ತುಗಳಲ್ಲಿವೊಂದು. ಇದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನಿಯೊ ನಿಕೋಟಿನಾಯ್ಡ್ಸ್ ಹಾಗೂ ಗ್ಲಿಫೋಸೇಟ್ ರಾಸಾಯನಿಕವನ್ನು ಬಳಸುವುದನ್ನು ಹೆಚ್ಚಿಗೆ ಮಾಡಿಕೊಳ್ಳಲಾಗಿದೆ. ಅಮೆರಿಕದಲ್ಲಿ ಜೇನು ನೊಣ ಸಾಕಾಣಿಕೆಯೂ ದೊಡ್ಡ ಉದ್ಯಮ. ಈ ರಾಸಾಯನಿಕದ ಕಾರಣಕ್ಕಾಗಿ ಈ ಉದ್ಯಮಕ್ಕೆ ಅತಿ ಹೆಚ್ಚು ಹೊಡೆತ ಬಿದ್ದಿದೆ. 2022ರಲ್ಲಿ ಖಾಸಗಿ ಜೇನು ನೊಣ ಸಾಕಣೆದಾರರು ಅವರಲ್ಲಿದ್ದ ಜೇನುನೊಣಗಳ ಪೈಕಿ ಶೇ 50ರಷ್ಟನ್ನು ಕಳೆದುಕೊಂಡಿದ್ದಾರೆ. ಯುನಿವರ್ಸಿಟೀಸ್ ಆಫ್ ಮೇರಿಲೆಂಡ್ ಹಾಗೂ ಅಬರ್ನ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಜೊತೆಗೆ, ಹೀಗೆ ಜೇನು ನೊಣಗಳು ದೊಡ್ಡ ಸಂಖ್ಯೆಯಲ್ಲಿ ಸಾಯುವುದು ಅಮೆರಿಕದಲ್ಲಿ ಇದೇ ಮೊದಲೇನಲ್ಲ. 2000ರಿಂದ ಈಚೆಗೆ ಈ ಪ್ರಮಾಣ ಅಧಿಕಗೊಳ್ಳುತ್ತಲೇ ಇದೆ.
ಭಾರತದಲ್ಲಿ ಇಂಥ ಸಮೀಕ್ಷೆ ನಡೆಸುವ ಪರಿಪಾಟ ಇಲ್ಲ. ಕೃಷಿಕರು, ಜೇನು ಸಾಕಣೆದಾರರ ಅನುಭವ ಹಾಗೂ ಅವರ ಹೇಳಿಕೆಗಳಿಂದಲೇ ಜೇನು ನೊಣಗಳ ಸಂಖ್ಯೆಯ ಕುರಿತು ಮಾಹಿತಿ ದೊರೆಯುತ್ತದಷ್ಟೆ. ಕುಲಾಂತರಿ ಬೆಳೆಗಳು ಹಾಗೂ ರಾಸಾಯನಿಕ ಬಳಕೆಯಿಂದ ಪರಾಗಸ್ಪರ್ಶ ಜೀವಿಗಳ ಮೇಲೆ ಪರಿಣಾಮ ಬೀರುವ ಕುರಿತೂ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಕುಲಾಂತರಿ ತಳಿಗಳನ್ನು ಸೃಷ್ಟಿಸುವಲ್ಲಿ ಬಳಸುವ ರಾಸಾಯನಿಕಗಳ ಕಾರಣದಿಂದಾಗಿ ಜೇನು ನೊಣಗಳಿಗೆ ಸಂಕಷ್ಟ ಎದುರಾಗುತ್ತದೆ. ನೈಸರ್ಗಿಕ ತಳಿಗಳಲ್ಲಿ ಹೂವು ಬಿಡುವ ಮೊದಲು ಅಥವಾ ನಂತರದಲ್ಲಿ ಕುಲಾಂತರಿ ತಳಿಗಳಲ್ಲಿ ಹೂವು ಬಿಡುತ್ತವೆ. ಇದೇ ಮುಖ್ಯ ಸಮಸ್ಯೆ. ಇದರಿಂದ ಪರಾಗಸ್ಪರ್ಶ ಪ್ರಕ್ರಿಯೆಗೆ ತೊಡಕಾಗುತ್ತದೆ. ಇದರಿಂದ ಇಳುವರಿಯೂ ಕಡಿಮೆ; ಜೊತೆಗೆ ಇದು ಜೇನು ಉತ್ಪಾದನೆಯನ್ನು ಕಡಿತಗೊಳಿಸುತ್ತದೆ ಎನ್ನುವುದು ಕೃಷಿಕರ ಅಭಿಪ್ರಾಯ.
ದೇಶದಲ್ಲಿ ನಿಯೊ ನಿಕೋಟಿನಾಯ್ಡ್ಸ್ ಹಾಗೂ ಗ್ಲಿಫೋಸೇಟ್ ರಾಸಾಯನಿಕ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಈಗಾಗಲೇ ಭೂಮಿಯಲ್ಲಿ ಡಿಡಿಟಿ ಸೇರಿದಂತೆ ಹಲವು ರಾಸಾಯನಿಕಗಳನ್ನು ಅಧಿಕವಾಗಿ ಬಳಸಿ ಆಗಿದೆ. ಇವುಗಳ ಅಂಶಗಳು ಭೂಮಿಯಲ್ಲಿ ಇನ್ನೂ ಇವೆ. ಬೀಜಗಳನ್ನೂ ರಾಸಾಯನಿಕಗಳಲ್ಲಿ ಅದ್ದಿ ಭೂಮಿಯಲ್ಲಿ ಊರಲಾಗುತ್ತದೆ. ಇವುಗಳಿಂದ ಜೇನು ನೊಣಗಳು ಸಾಯುತ್ತವೆ ಎನ್ನುವುದು ಒಂದು ಕಡೆಯಾದರೆ, ಹೂವುಗಳ ಪರಿಮಳವನ್ನು ಆಘ್ರಾಣಿಸುವ ಜೇನು ನೊಣಗಳ ಶಕ್ತಿಯನ್ನು ಇವು ಕುಂದಿಸುತ್ತವೆ ಎನ್ನುವುದು ಇನ್ನೊಂದು ಕಡೆ. ಕಡಿಮೆ ರಾಸಾಯನಿಕ ಬಳಸುವ ಗದ್ದೆಗಳಿಗಿಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ಸಿಂಪಡಿಸುವ ಪ್ರದೇಶಗಳಲ್ಲಿರುವ ಜೇನು ನೊಣಗಳ ಆಘ್ರಾಣಿಸುವ ಶಕ್ತಿ ಕಡಿಮೆ ಇರುತ್ತದೆ ಎಂದು ಕೋಲ್ಕತ್ತ ವಿಶ್ವವಿದ್ಯಾಲಯವು ತನ್ನ ಅಧ್ಯಯನ ವರದಿಯೊಂದರಲ್ಲಿ ತಿಳಿಸಿದೆ.
'ಇತರ ಪರಾಗಸ್ಪರ್ಶ ಜೀವಿಗಳಿಗೆ ಕುತ್ತು'
‘ಪರಾಗಸ್ಪರ್ಶದಲ್ಲಿ ಜೇನುನೊಣಗಳ ಪಾತ್ರ ಬಹಳ ಮುಖ್ಯವಾದುದು. ಹಾಗಾಗಿ, ಅವುಗಳ ಸಂರಕ್ಷಣೆ ಅಗತ್ಯ ಎಂದು ಜನರು ಜೇನು ಸಾಕಣೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಹೀಗೆ ಹೆಚ್ಚು ಹೆಚ್ಚು ಜೇನು ನೊಣಗಳನ್ನು ಸಾಕುವುದರಿಂದ ಇತರ ಪರಾಗಸ್ಪರ್ಶ ಜೀವಿಗಳಿಗೆ ಹೆಚ್ಚು ತೊಂದರೆ’ ಎಂದು ಟೊರಾಂಟೊ ಯಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಂರಕ್ಷಣಾ ಜೀವಶಾಸ್ತ್ರಜ್ಞೆ ಶೀಲಾ ಕೋಲಾ ಹೇಳುತ್ತಾರೆ. ಈ ಬಗ್ಗೆ ಪ್ರಬಂಧವೊಂದನ್ನು ಅವರು ಪ್ರಕಟಿಸಿದ್ದಾರೆ.
‘ಜೇನು ನೊಣಗಳನ್ನು ಬಿಟ್ಟರೆ ಜನರಿಗೆ ಇತರ ಪರಾಗಸ್ಪರ್ಶ ಜೀವಿಗಳ ಕುರಿತು ಮಾಹಿತಿಯೇ ಇಲ್ಲ. ಅಮೆರಿಕದಲ್ಲಂತೂ ಜೇನು ಸಾಕಾಣಿಕೆ ದೊಡ್ಡ ಉದ್ಯಮವೇ ಆಗಿದೆ. ಹೀಗೆ ಹೆಚ್ಚು ಹೆಚ್ಚು ಜೇನು ನೊಣಗಳನ್ನು ಸಾಕುವುದರಿಂದ ಇತರ ಪರಾಗಸ್ಪರ್ಶ ಜೀವಿಗಳಿಗೆ, ನೈಸರ್ಗಿಕವಾಗಿ ಇರುವ ಜೇನು ನೊಣಗಳಿಗೆ ಆಹಾರವೇ ಇಲ್ಲದಂತಾಗುತ್ತದೆ. ಮೊದಲೇ ಇವುಗಳು ಸಂಕಷ್ಟದಲ್ಲಿವೆ. ಆಹಾರ ಕೊರತೆಯು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಅವರು.
ಸ್ಪ್ಯಾನಿಷ್ ನ್ಯಾಷನಲ್ ರಿಸರ್ಚ್ ಕೌನ್ಸಿಲ್‌ನ ಅಲ್‌ಪ್ರಿಡೊ ವಾಲಿಡೊ ಹಾಗೂ ಪೆಡ್ರೊ ಜೋರ್ಡನ್ ಎನ್ನುವ ಇಬ್ಬರು ಸಂಶೋಧಕರು ಆಫ್ರಿಕಾದ ಕ್ಯಾನರಿ ದ್ವೀಪದಲ್ಲಿ ಅಧ್ಯಯನ ನಡೆಸಿದ್ದಾರೆ. ‘ಜೇನು ನೊಣಗಳನ್ನು ಸಾಕುವುದರಿಂದ ಗಿಡಗಳು ಹಾಗೂ ಪರಾಗಸ್ಪರ್ಶ ಜೀವಿಗಳ ನಡುವಿನ ಜೈವಿಕವಾದ ಸಂಪರ್ಕ ಕೊಂಡಿ ಕಡಿದು ಹೋಗುತ್ತದೆ. ಜೇನು ನೊಣಗಳು ಇರುವ ಪ್ರದೇಶದಲ್ಲಿ ಬೇರೆ ಯಾವ ಪರಾಗಸ್ಪರ್ಶ ಜೀವಿಯೂ ಇರುವುದಿಲ್ಲ. ಜೇನು ನೊಣ ಪೆಟ್ಟಿಗೆ ಇಟ್ಟಿರುವ ತುಸು ದೂರದ ಪ್ರದೇಶದಲ್ಲಿ ಕೆಲವು ಬೆಳೆಗಳು ಹೆಚ್ಚಿನ ಇಳುವರಿ ನೀಡಬಹುದಷ್ಟೇ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.