ತಮಿಳುನಾಡಿನ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ. ದಳಪತಿ ಎಂದೇ ಹೆಸರಾಗಿರುವ ನಟ ಸಿ.ಜೋಸೆಫ್ ವಿಜಯ್ ದ್ರಾವಿಡ ರಾಜಕಾರಣದ ನೆಲದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಈ ವರ್ಷದ ಫೆಬ್ರುವರಿಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ರಾಜಕೀಯ ಪಕ್ಷ ಘೋಷಣೆ ಮಾಡಿದ್ದ ಅವರು, ಎಂಟು ತಿಂಗಳ ನಂತರ ತಮ್ಮ ಪಕ್ಷದ ಮೊದಲ ಸಾರ್ವಜನಿಕ ಸಭೆ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ. ತಮಿಳುನಾಡಿನ ಎಂಜಿಆರ್, ಜಯಲಲಿತಾ ಅವರಂತೆ, ಆಂಧ್ರಪ್ರದೇಶದ ಎನ್‌ಟಿಆರ್ ಅವರಂತೆ ರಾಜ್ಯದ ಅಧಿಕಾರದ ಗದ್ದುಗೆಯೇರುವ ಕನಸು ಕಾಣುತ್ತಿದ್ದಾರೆ. ಆದರೆ, ಬದಲಾದ ರಾಜಕೀಯ ಸಂದರ್ಭದಲ್ಲಿ, ದಳಪತಿಯ ಕನಸು ಈಡೇರುವುದು ಸುಲಭವೇನಲ್ಲ
ತಮಿಳಿನ ಸೂಪರ್ ಸ್ಟಾರ್, ನಿರ್ದೇಶಕ ಎಸ್.ಎ.ಚಂದ್ರಶೇಖರ್ ಅವರ ಮಗನಾದ ವಿಜಯ್, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ತಾಯಿ ನಿರ್ಮಾಣ ಮಾಡಿದ, ತಂದೆ ನಿರ್ದೇಶಿಸಿದ ಚಿತ್ರದ ಮೂಲಕ ತನ್ನ 18ನೇ ವಯಸ್ಸಿಗೇ ಹೀರೋ ಆದ ವಿಜಯ್, ಕೆಲವೇ ವರ್ಷಗಳಲ್ಲಿ ಸ್ಟಾರ್ ಆದರು. ಮೂರು ದಶಕಗಳಲ್ಲಿ 68 ಚಿತ್ರಗಳಲ್ಲಿ ನಟಿಸಿರುವ ಅವರ ಇತ್ತೀಚಿನ ಚಿತ್ರ ‘ಗೋಟ್’ ಬಿಡುಗಡೆಯಾದ ಐದೇ ದಿನದಲ್ಲಿ ₹300 ಕೋಟಿ ಗಳಿಸಿತ್ತು. ಹೀಗೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿರುವ ದಳಪತಿ, ಹೊಸ ಪಕ್ಷ ಆರಂಭಿಸಿ ಸಿನಿಮಾದಂತೆಯೇ ರಾಜಕಾರಣದಲ್ಲಿಯೂ ಯಕ್ಷಿಣಿ ಮಾಡಲು ಹೊರಟಿದ್ದಾರೆ. ತಂದೆಯ ನೆರಳಿನಲ್ಲಿ ಸಿನಿಮಾ ನಟರಾದ ಬೆಳೆದ ಅವರಿಗೆ ರಾಜಕೀಯ ಪಯಣ ಎನ್ನುವುದು ಕೆಂಪುಹಾಸಿನ ನಡಿಗೆಯೇನಲ್ಲ.
ದ್ರಾವಿಡ ಚಳವಳಿಯ ನೆಲವಾದ ತಮಿಳುನಾಡಿನಲ್ಲಿ ಸಿನಿಮಾ ಹೊರತುಪಡಿಸಿ ರಾಜಕಾರಣ ಇಲ್ಲವೇ ಇಲ್ಲ. ತಮಿಳುನಾಡು ಪ್ರತ್ಯೇಕ ರಾಜ್ಯವಾದ ನಂತರ ಮೊದಲ ಮುಖ್ಯಮಂತ್ರಿಯಾಗಿದ್ದ ಸಿ.ಎನ್.ಅಣ್ಣಾದೊರೆ ಅವರಿಂದ ಆರಂಭವಾದ ಪರಂಪರೆ ಇದು. ಡಿಎಂಕೆ ಸ್ಥಾಪಕರಾದ ಅಣ್ಣಾದೊರೆ ಚಿತ್ರಬರಹಗಾರ ಆಗಿದ್ದವರು. ಇದೇ ರೀತಿ ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆಯುತ್ತಿದ್ದ ಕರುಣಾನಿಧಿ ಕೂಡ ಡಿಎಂಕೆ ಮೂಲಕವೇ ರಾಜಕಾರಣಕ್ಕೆ ಬಂದರು. ತಮ್ಮ ಆರು ದಶಕಗಳ ರಾಜಕೀಯ ಜೀವನದಲ್ಲಿ ಕರುಣಾನಿಧಿ ಐದು ಬಾರಿ ಮುಖ್ಯಮಂತ್ರಿ ಆಗಿದ್ದರು. 13 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಪ್ರತಿ ಚುನಾವಣೆಯಲ್ಲೂ ಗೆದ್ದು ದಾಖಲೆ ನಿರ್ಮಿಸಿದ್ದರು.
ಅವರ ಜತೆಗೇ ರಾಜಕಾರಣದಲ್ಲಿ ಇದ್ದು, ನಂತರ ಹೊರಬಂದು ಎಐಎಡಿಎಂಕೆ ಸ್ಥಾಪಿಸಿದವರು ತಮಿಳರ ಆರಾಧ್ಯದೈವ ಎಂದೇ ಹೆಸರಾಗಿದ್ದ ನಟ ಎಂಜಿಆರ್ ಅವರು ಮೂರು ಬಾರಿ ಮುಖ್ಯಮಂತ್ರಿ ಆಗಿದ್ದರು. ಅವರ ಉತ್ತರಾಧಿಕಾರಿಯಾದ ಕರ್ನಾಟಕ ಮೂಲದ ಜೆ.ಜಯಲಲಿತಾ ಕೂಡ ನಟಿಯೇ. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ, 14 ವರ್ಷ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.
ತಮಿಳುನಾಡಿನ ರಾಜಕಾರಣ ಎಂದರೆ, ಅದು ಎರಡು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆ ನಡುವಣ ಜಿದ್ದಾಜಿದ್ದಿನ ಹೋರಾಟ. ಚಲಾವಣೆಯಾಗುತ್ತಿರುವ ಮತಗಳ ಪೈಕಿ ಶೇ 70ರಷ್ಟು ಮತಗಳು ಈ ಎರಡು ಪಕ್ಷಗಳ ಪಾಲಾಗುತ್ತಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಏಕಾಂಗಿಯಾಗಿ ಒಂದೇ ಒಂದು ಸ್ಥಾನ ಗೆಲ್ಲಲೂ ಇದುವರೆಗೆ ಸಾಧ್ಯವಾಗಿಲ್ಲ.
ಇಷ್ಟಾದರೂ ತಮಿಳುನಾಡಿನಲ್ಲಿ ಮೂರನೇ ಪಕ್ಷಕ್ಕೆ ಒಂದು ಜಾಗ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದು ಡಿಎಂಡಿಕೆ. ಅದನ್ನು ಸ್ಥಾಪಿಸಿದ್ದ ವಿಜಯ್‌ಕಾಂತ್ ಕೂಡ ಸಿನಿಮಾ ನಟರೇ ಎನ್ನುವುದು ವಿಶೇಷ. ವಿಜಯ್‌ಕಾಂತ್ ಪಕ್ಷವು ಮೊದಲ ವಿಧಾನಸಭಾ ಚುನಾವಣೆಯಲ್ಲಿ ಶೇ 8.3ರಷ್ಟು ಮತಗಳನ್ನು ಪಡೆದರೆ, ಮೊದಲ ಲೋಕಸಭಾ ಚುನಾವಣೆಯಲ್ಲಿ ಶೇ 10.5ರಷ್ಟು ಮತ ಪ್ರಮಾಣ ಪಡೆದಿತ್ತು. ಎರಡು ಬಾರಿ ಶಾಸಕರಾಗಿದ್ದ ವಿಜಯ್‌ಕಾಂತ್, ತಮಿಳುನಾಡಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು. 2011ರಲ್ಲಿ ಎಐಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತ್ತು.
ವಿಜಯ್‌ಕಾಂತ್ ಹಾದಿಯಲ್ಲಿಯೇ ವಿಜಯ್ ಹೆಜ್ಜೆ ಹಾಕುತ್ತಿದ್ದಾರೆ. ಡಿಎಂಕೆಯ 75 ವರ್ಷದ ರಾಜಕಾರಣ, ಎಐಎಡಿಎಂಕೆಯ 50 ವರ್ಷದ ರಾಜಕಾರಣದ ವಿರುದ್ಧ ತೊಡೆ ತಟ್ಟಿದ್ದಾರೆ. ಜಯಲಲಿತಾ ಅವರ ಸಾವಿನ ನಂತರ ಎಐಡಿಎಂಕೆ ಸಮರ್ಥ ನಾಯಕತ್ವ ಇಲ್ಲದೇ ದುರ್ಬಲವಾಗಿದೆ. ಆ ಜಾಗವನ್ನು ತುಂಬುವ ಇರಾದೆ ದಳಪತಿಯದ್ದು. ಹೀಗಾಗಿಯೇ ಅವರು ಮೊನ್ನೆ ನಡೆದ ಸಾರ್ವಜನಿಕ ಸಮಾರಂಭದಲ್ಲಿ ತಮ್ಮ ವಿರೋಧಿ ಡಿಎಂಕೆ ಮತ್ತು ಬಿಜೆಪಿ ಮಾತ್ರ ಎನ್ನುವ ಸೂಚನೆ ನೀಡಿದ್ದು.
ಆದರೆ, ಎಐಎಡಿಎಂಕೆಯ ಶೇ 30ರಷ್ಟಿರುವ ಮತಪ್ರಮಾಣಕ್ಕೆ ಲಗ್ಗೆ ಹಾಕುವುದು ವಿಜಯ್ ಅವರಿಗೆ ಸುಲಭದ ಕೆಲಸವೇನಲ್ಲ. ತಮ್ಮ ತಂದೆಯ ನೆರವಿನಿಂದ ನಟನಾಗಿ, ಸ್ಟಾರ್ ಆಗಿ ಬೆಳೆದ ವಿಜಯ್ ಅವರಿಗೆ ರಾಜಕಾರಣ ಸಂಪೂರ್ಣ ಹೊಸ ಕ್ಷೇತ್ರ. ಕರುಣಾನಿಧಿ ಅವರು ಪೆರಿಯಾರ್, ಅಣ್ಣಾದೊರೆ ಮಾರ್ಗದರ್ಶನದಲ್ಲಿ ರಾಜಕಾರಣ ಆರಂಭಿಸಿದ್ದವರು. ಎಂಜಿಆರ್ ಹೊಸ ಪಕ್ಷ ಸ್ಥಾಪಿಸುವ ಹೊತ್ತಿಗಾಗಲೇ ಡಿಎಂಕೆಯಲ್ಲಿ ರಾಜಕೀಯ ಅನುಭವ ಪಡೆದಿದ್ದರು. ಅವರ ನೆರಳಿನಂತಿದ್ದು ರಾಜಕಾರಣದಲ್ಲಿ ನೆಲೆ ಕಂಡುಕೊಂಡವರು ಜಯಲಲಿತಾ. ಆದರೆ, ವಿಜಯ್ ಅವರಿಗೆ ರಾಜಕಾರಣ ಹೊಸದು. ರಜನಿಕಾಂತ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರೂ, ಆ ಜನಬೆಂಬಲ ಮತಗಳಾಗಿ ಪರಿವರ್ತನೆ ಆಗುತ್ತವೆಂದು ಹೇಳಲಾಗದು. ಜನಪ್ರಿಯತೆಯೆ ಉತ್ತುಂಗದಲ್ಲಿದ್ದಾಗಲೇ ಆಂಧ್ರಪ್ರದೇಶದಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಚುನಾವಣೆಗಳಲ್ಲಿ ಸೋಲುಂಡು ಕೊನೆಗೆ ರಾಜಕಾರಣದಿಂದಲೇ ನಿರ್ಗಮಿಸಿದ್ದು ಇದಕ್ಕೆ ನಿದರ್ಶನ.
ಬಿಜೆಪಿ ಮತ್ತು ಡಿಎಂಕೆ ತಮ್ಮ ಮುಖ್ಯ ವಿರೋಧಿಗಳೆಂಬ ಸೂಚನೆ ನೀಡಿರುವ ವಿಜಯ್, ಮೈತ್ರಿಗೂ ಸಿದ್ಧ ಎಂಬ ಸಂದೇಶ ಸಾರಿದ್ದಾರೆ. ಎಚ್ಚರಿಕೆಯಿಂದ ಸಮತೋಲನದ ಹೆಜ್ಜೆಗಳನ್ನು ಇಡುತ್ತಿರುವ ಅವರು, ದ್ರಾವಿಡ ತಾತ್ವಿಕತೆಯ ಜತೆಗೆ ರಾಷ್ಟ್ರೀಯತೆಯನ್ನೂ ಬೆಸೆಯುವುದಾಗಿ ಹೇಳಿದ್ದಾರೆ. ಪೆರಿಯಾರ್ ಅವರನ್ನು ಅನುಸರಿಸುವುದಾಗಿ ಹೇಳಿರುವ ವಿಜಯ್, ಅವರ ದೈವವಿರೋಧವನ್ನು ಮಾತ್ರ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಪ್ರಜ್ಞಾವಂತರಿಗೆ ವಿರೋಧಾಭಾಸದಂತೆ ಕಂಡರೂ, ರಾಜಕಾರಣದಲ್ಲಿ ಇಂಥ ಸಿನಿಮೀಯ ಮಾತುಗಳು ಕೆಲವೊಮ್ಮೆ ಜನರನ್ನು ಆಕರ್ಷಿಸುತ್ತವೆ. ಆಂಧ್ರದ ಪವನ್ ಕಲ್ಯಾಣ್ ಅವರ ರಾಜಕೀಯ ಮಾದರಿ ಇದಕ್ಕೆ ನಿದರ್ಶನ.
ಡಿಎಂಕೆಯ ಪಾಲಾಗುತ್ತಿರುವ ಬಿಜೆಪಿ ವಿರೋಧಿ ಹಾಗೂ ಅಲ್ಪಸಂಖ್ಯಾತ ಮತಗಳ ಮೇಲೂ ಕಣ್ಣು ನೆಟ್ಟಿರುವ ವಿಜಯ್, ವಿಶೇಷವಾಗಿ ಯುವಜನರನ್ನು ನೆಚ್ಚಿಕೊಂಡಿದ್ದಾರೆ; ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಿಮಗಾಗಿ ಸಿನಿಮಾ ರಂಗ ತೊರೆದು ಬಂದಿದ್ದೇನೆ ಎನ್ನುವ ಮಾತುಗಳ ಮೂಲಕ ಭಾವನಾತ್ಮಕ ಬಲೆ ಬೀಸಿದ್ದಾರೆ.
‘ಕೆಲವರು ರಾಜಕಾರಣದಲ್ಲಿ ನಾನು ಇನ್ನೂ ಮಗು ಎಂದಿದ್ದಾರೆ. ಆದರೆ, ಈ ಮಗು ರಾಜಕಾರಣ ಎಂಬ ಹಾವಿನ ಜತೆ ಆತ್ಮವಿಶ್ವಾಸದಿಂದ ಆಟ ಆಡುತ್ತದೆ’ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಹಾವಿನೊಂದಿಗಿನ ಅವರ ಆಟದ ಫಲಶ್ರುತಿ ಏನು ಎನ್ನುವುದು 2026ರ ತಮಿಳುನಾಡಿನ ವಿಧಾನಸಭಾ ಚುನಾವಣೆಯ ನಂತರ ತಿಳಿಯಲಿದೆ.
ನಟ, ನಟಿಯರು ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡವರು ರಾಜಕೀಯ ಪಕ್ಷ ಸ್ಥಾಪಿಸುವುದು, ರಾಜಕೀಯವಾಗಿ ಉನ್ನತ ಹುದ್ದೆಗೇರುವುದು ತಮಿಳುನಾಡಿನಲ್ಲಿ ಹೊಸದಲ್ಲ. ಸಾಹಿತಿ, ನಾಟಕಕಾರ ಮತ್ತು ನಟರಾಗಿದ್ದ ಸಿ.ಎನ್.ಅಣ್ಣಾದೊರೆ ಅವರು ಮದ್ರಾಸ್ ರಾಜ್ಯದ ಕೊನೆಯ ಮುಖ್ಯಮಂತ್ರಿ, ತಮಿಳುನಾಡಿನ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಪೆರಿಯಾರ್ ಅವರ ಶಿಷ್ಯರಾಗಿದ್ದ ಅವರು ಡಿಎಂಕೆ ಸಂಸ್ಥಾಪಕ. ಅವರ ಪರಂಪರೆ ಈಗಿನವರೆಗೂ ಮುಂದುವರಿದಿದೆ.
ಎಂ.ಜಿ.ರಾಮಚಂದ್ರನ್
ಎಂಜಿಆರ್ ಎಂದೇ ಜನಮಾನಸದಲ್ಲಿ ನೆಲಸಿರುವ ಎಂ.ಜಿ.ರಾಮಚಂದ್ರನ್ ಅವರು 1977ರಿಂದ 1987ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು. ಸಿನಿಮಾ ವರ್ಚಸ್ಸೇ ರಾಜಕೀಯದಲ್ಲೂ ಅವರಿಗೆ ನೆರವಾಯಿತು. ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದಲ್ಲಿದ್ದ ಅವರು ಎಂ.ಕರುಣಾನಿಧಿ ಅವರೊಂದಿಗೆ ಭಿನ್ನಾಭಿಪ್ರಾಯ ಬಂದು 1972ರಲ್ಲಿ ಪಕ್ಷ ತೊರೆದು ತಮ್ಮದೇ ಎಐಎಡಿಎಂಕೆ ಪಕ್ಷವನ್ನು ಹುಟ್ಟುಹಾಕಿದರು. ತಮಿಳುನಾಡಿನಲ್ಲಿ ಡಿಎಂಕೆಗೆ ಪರ್ಯಾಯವಾದ ರಾಜಕಾರಣ ಮತ್ತು ಪಕ್ಷವನ್ನು ಹುಟ್ಟುಹಾಕಲು ಯಶಸ್ವಿಯಾದ ಅವರು, ಐದೇ ವರ್ಷಗಳಲ್ಲಿ (1977) ಚುನಾವಣೆಯಲ್ಲಿ ಗೆದ್ದು ರಾಜ್ಯದ ಚುಕ್ಕಾಣಿ ಹಿಡಿದರು.
ಜೆ.ಜಯಲಲಿತಾ
ಎಂಜಿಆರ್ ಸಾವಿನ ನಂತರ ಎಐಎಡಿಎಂಕೆ ವಿಭಜನೆಯಾಗಿ ಒಂದು ಬಣದ ಚುಕ್ಕಾಣಿ ಹಿಡಿದು, ತಮ್ಮ ನಾಯಕನ (ಎಂಜಿಆರ್) ಹಾದಿಯಲ್ಲೇ ಸಾಗಿ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿದವರು ಚಿತ್ರನಟಿ ಜೆ.ಜಯಲಲಿತಾ. ಐದು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದ ಅವರು ಪಕ್ಷದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದರು.
ಶಿವಾಜಿ ಗಣೇಶನ್
ತಮಿಳುನಾಡಿನ ರಾಜಕಾರಣದಲ್ಲಿ ಹೆಸರು ಮಾಡಿದ್ದ ಮತ್ತೊಬ್ಬ ಹಿರಿಯ ನಟ ಶಿವಾಜಿ ಗಣೇಶನ್ ಡಿಎಂಕೆಯಲ್ಲಿ ಗುರುತಿಸಿಕೊಂಡಿದ್ದರು. ಅವರು ಕಾಂಗ್ರೆಸ್‌ನ ಕೆ.ಕಾಮರಾಜ್ ಅವರ ನಾಯಕತ್ವವನ್ನು ಒಪ್ಪಿ, ರಾಜ್ಯಸಭೆಯ ಸದಸ್ಯರೂ ಆದರು. 1988ರಲ್ಲಿ ತಮ್ಮದೇ ಆದ ಟಿಎಂಎಂ (ತಮಿಳಗ ಮುನ್ನೇತ್ರ ಮುನ್ನಾನಿ) ಪಕ್ಷ ಸ್ಥಾಪಿಸಿ, ಒಂದೇ ವರ್ಷದಲ್ಲಿ ಜನತಾದಳದೊಂದಿಗೆ ವಿಲೀನಗೊಳಿಸಿದರು.
ವಿಜಯಕಾಂತ್
ಸಿನಿಮಾ ನಟನಾಗಿ ಹೆಸರು ಮಾಡಿ, ಡಿಎಂಕೆ, ಎಐಎಡಿಎಂಕೆಗಳಿಗೆ ಪರ್ಯಾಯವಾಗಿ ಸ್ವಂತ ಪಕ್ಷವನ್ನು ಸ್ಥಾಪಿಸಿ ತಮಿಳು ರಾಜಕಾರಣದಲ್ಲಿ ಒಂದಷ್ಟು ಯಶಸ್ಸು ಗಳಿಸಿದ ಮತ್ತೊಬ್ಬ ನಟ ವಿಜಯಕಾಂತ್. ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷ ಹುಟ್ಟುಹಾಕಿದ್ದ ಅವರ ಪಕ್ಷವು 2006ರ ವಿಧಾನಸಭೆ ಚುನಾವಣೆಯಲ್ಲಿ (ಒಂದು ಸ್ಥಾನ ಗೆಲುವು, ಶೇ 8ರಷ್ಟು ಮತಗಳಿಕೆ) ಮತ್ತು (2009ರ) ಲೋಕಸಭಾ ಚುನಾವಣೆಯಲ್ಲಿ ಶೇ 10.3ರಷ್ಟು ಮತಗಳಿಕೆ ಮಾಡಿತ್ತು. 2011ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ 41 ಕ್ಷೇತ್ರಗಳಲ್ಲಿ 29 ಕ್ಷೇತ್ರಗಳಲ್ಲಿ ಅವರ ಪಕ್ಷ ಗೆಲುವು ಸಾಧಿಸಿದ್ದರಿಂದ ವಿರೋಧ ಪಕ್ಷದ ನಾಯಕನೂ ಆದರು.
ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕೂಡ ರಾಜಕೀಯ ಪ್ರವೇಶಕ್ಕೆ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಲು ಚಿಂತಿಸಿದವರು. ಆದರೆ, ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು, ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದವರು.
ಕಮಲ್ ಹಾಸನ್
ತಮಿಳುನಾಡಿನ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಮತ್ತೊಬ್ಬ ನಟ ಕಮಲ್ ಹಾಸನ್; 2018ರ ಫೆಬ್ರುವರಿಯಲ್ಲಿ ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷವನ್ನು ಸ್ಥಾಪಿಸಿದರು. ಆದರೆ, ಇದುವರೆಗೂ ಅವರ ಪಕ್ಷ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ.
ಎನ್.ಟಿ.ರಾಮರಾವ್ (ಎನ್‌ಟಿಆರ್)
ತೆಲುಗು ಚಿತ್ರರಂಗದಲ್ಲಿ ನಟರಾಗಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಎನ್‌ಟಿಆರ್ ಅವರು 1982ರಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಹುಟ್ಟುಹಾಕಿ ತೆಲುಗು ರಾಜಕಾರಣಕ್ಕೆ ಹೊಸ ದಿಕ್ಕು ತೋರಿದವರು. ಪಕ್ಷ ಕಟ್ಟಿದ ಆರೇ ತಿಂಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರಿದ ದಾಖಲೆ ಅವರದು. 1983ರಿಂದ 95ರ ನಡುವೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
ಚಿರಂಜೀವಿ
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು 2008ರಲ್ಲಿ ಪ್ರಜಾ ರಾಜ್ಯಂ ಪಕ್ಷ ಸ್ಥಾಪಿಸಿದರು. ಆರಂಭಿಕವಾಗಿ ಸ್ವಲ್ಪ ಯಶಸ್ಸು ಕಂಡರೂ, ನಂತರ ಸ್ವಂತ ಬಲದ ಮೇಲೆ ಬೆರಳೆಣಿಕೆಯ ಸ್ಥಾನ ಗೆಲ್ಲಲೂ ಸಾಧ್ಯವಾಗದ ಅವರು ಕಾಂಗ್ರೆಸ್ ಜತೆಗೆ ಪಕ್ಷವನ್ನು ವಿಲೀನಗೊಳಿಸಿದರು.
ಪವನ್ ಕಲ್ಯಾಣ್
ಆಂಧ್ರಪ್ರದೇಶದ ಹಾಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಿನಿಮಾ ನಟರಾಗಿ ಗಳಿಸಿದ ವರ್ಚಸ್ಸಿನ ಆಧಾರದಲ್ಲೇ, 2014ರ ಮಾರ್ಚ್‌ನಲ್ಲಿ ಜನ ಸೇನಾ ಪಾರ್ಟಿಯನ್ನು (ಜೆಎಸ್‌ಪಿ) ಸ್ಥಾಪಿಸಿದ್ದರು. ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಮತ್ತು ರಾಜ್ಯದಲ್ಲಿ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಜೆಎಸ್‌ಪಿ ರಾಜ್ಯ ರಾಜಕಾರಣದಲ್ಲಿ ತಾನು ಕೂಡ ನಿರ್ಣಾಯಕ ಎಂಬುದನ್ನು ತೋರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.