ADVERTISEMENT

ಆಳ–ಅಗಲ | ಕೈಗೆಟಕುವ ಮನೆಗಳಿಗೆ ಬಡ್ಡಿಯೇ ದುಬಾರಿ!

ವಿಜಯ್ ಜೋಷಿ
Published 28 ಆಗಸ್ಟ್ 2023, 1:14 IST
Last Updated 28 ಆಗಸ್ಟ್ 2023, 1:14 IST
   

2023ರ ಮೊದಲ ಆರು ತಿಂಗಳ ಅವಧಿಯಲ್ಲಿ ದೇಶದ ಮನೆ ಮಾರುಕಟ್ಟೆಯಲ್ಲಿ ‘ಕೈಗೆಟಕುವ ದರ’ದ ಮನೆಗಳ ಮಾರಾಟವು ಕುಸಿದಿದೆ. ಹಣದುಬ್ಬರದ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಹೆಚ್ಚಿಸುತ್ತ ಸಾಗಿದೆ. ಕೈಗೆಟಕುವ ದರಕ್ಕೆ ಮನೆ ಅಥವಾ ಅಪಾರ್ಟ್‌ಮೆಂಟ್‌ ನಿರ್ಮಿಸಲು ಅಗತ್ಯವಿರುವ ಜಮೀನಿನ ಖರೀದಿ ಮೌಲ್ಯ ಹೆಚ್ಚಾಗಿದೆ. ಇಂತಹ ಮನೆಗಳನ್ನು ಕೊಳ್ಳುವ ವರ್ಗದವರ ಖರೀದಿ ಸಾಮರ್ಥ್ಯ ಕಡಿಮೆ ಆಗಿದೆ... ಇವೆಲ್ಲವೂ ಕೈಗೆಟಕುವ ಮನೆಗಳ ಮಾರಾಟ ಕುಸಿತದ ಹಿಂದೆ ಇರುವ ಕಾರಣಗಳು.

ಕೈಗೆಟಕುವ ದರದ ವರ್ಗಕ್ಕೆ ಸೇರಿದ ಮನೆಗಳ ಖರೀದಿ ಕಡಿಮೆ ಆಗಿರುವುದು ಮಾತ್ರವೇ ಅಲ್ಲದೆ, ಬಡ್ಡಿ ದರ ಏರಿಕೆಯ ಇನ್ನೊಂದು ತೀರಾ ಕೆಟ್ಟ ಪರಿಣಾಮ ಇದೆ. ಅದು, ಕೈಗೆಟಕುವ ದರದ ಮನೆಯನ್ನು ಸಾಲ ಮಾಡಿ ಖರೀದಿಸಿದವರಲ್ಲಿ ಕೆಲವರು ಸಾಲ ತೀರಿಸುವ ಹೊತ್ತಿನಲ್ಲಿ ಅಸಲು ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ತೀರಿಸಲಿಕ್ಕಾಗಿ ವಿನಿಯೋಗಿಸಿರುತ್ತಾರೆ!

ಕೈಗೆಟಕುವ ದರದ ಮನೆಗಳನ್ನು ಖರೀದಿಸುವ ವರ್ಗವು ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ಹಣಕಾಸಿನ ತೀವ್ರ ತೊಂದರೆಗೆ ಸಿಲುಕಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ನಡೆಸಿದ ಅಧ್ಯಯನ ವರದಿಯು 2022–23ನೆಯ ಆರ್ಥಿಕ ವರ್ಷದ ಕೊನೆಯಲ್ಲಿ ಹೇಳಿತ್ತು. ‘ಈ ವರ್ಗದ ಜನ ಮನೆ ಖರೀದಿಸುವುದನ್ನು ಮುಂದೂಡಿ, ಬಾಡಿಗೆ ಮನೆಯಲ್ಲಿ ವಾಸಿಸುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೂಡ ಆ ವರದಿ ಹೇಳಿತ್ತು. ₹40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಮನೆಗಳನ್ನು ‘ಕೈಗೆಟಕುವ ದರದ ಮನೆಗಳು’ ಎಂದು ವ್ಯಾಖ್ಯಾನಿಸಲಾಗಿದೆ. ಜಮೀನು ಮಾತ್ರವೇ ಅಲ್ಲದೆ, ಮನೆ ನಿರ್ಮಾಣದಲ್ಲಿ ಅಗತ್ಯ ವಸ್ತುಗಳಾದ ಸಿಮೆಂಟ್‌, ಉಕ್ಕು ಬೆಲೆ ಹೆಚ್ಚಳ ಮತ್ತು ಕಾರ್ಮಿಕರ ಕೂಲಿ ಏರಿಕೆಯು ಕೂಡ ಕೈಗೆಟಕುವ ದರದ ಮನೆಗಳನ್ನು ನಿರ್ಮಿಸುವುದನ್ನು ಡೆವಲಪರ್‌ಗಳ ಪಾಲಿಗೆ ಕಷ್ಟದ ಕೆಲಸವನ್ನಾಗಿಸಿದೆ.

ADVERTISEMENT

‘ಬೇರೆ ವರ್ಗದ ಮನೆಗಳ ಮಾರಾಟವು ಈಚಿನ ಎರಡು ವರ್ಷಗಳಲ್ಲಿ ಚೇತರಿಕೆ ಕಂಡುಕೊಂಡಿದ್ದರೂ ಕೈಗೆಟಕುವ ದರದ ಮನೆಗಳ ಮಾರಾಟವು ಸುಧಾರಿಸಿಲ್ಲ. ಈ ವರ್ಗದ ಮನೆಗಳನ್ನು ಬಯಸುತ್ತಿದ್ದವರು ಈಗ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಡೆವಲಪರ್‌ಗಳು ಕೂಡ ಈ ವರ್ಗದ ಮನೆಗಳ ನಿರ್ಮಾಣವನ್ನು ಕಡಿಮೆ ಮಾಡಿಬಿಟ್ಟಿದ್ದಾರೆ’ ಎಂದು ಅನರಾಕ್ ಅಧ್ಯಯನ ವರದಿ ಹೇಳಿದೆ.

ಕೋವಿಡ್‌ ನಂತರದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಇಂಗ್ಲಿಷ್‌ನ ‘ಕೆ’ ಅಕ್ಷರದ ಮಾದರಿಯಲ್ಲಿ ಚೇತರಿಕೆ ಕಂಡುಕೊಂಡಿದೆ. ಅಂದರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಬಡವರು ಮತ್ತಷ್ಟು ಬಡವರಾಗಿದ್ದಾರೆ ಎಂಬ ವಾದವೊಂದು ಇದೆ. ಮನೆ ಮಾರುಕಟ್ಟೆಯು ಕೂಡ ಈ ವಾದವನ್ನು ಪುಷ್ಟೀಕರಿಸುವಂತೆ ಇದೆ. 2018ರಿಂದ ಈಚೆಗೆ ಐಷಾರಾಮಿ ಮನೆಗಳ ಮೌಲ್ಯವು ದೇಶದ ಏಳು ನಗರಗಳಲ್ಲಿ ಸರಾಸರಿ ಶೇ 24ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಕೈಗೆಟಕುದ ದರದ ವರ್ಗಕ್ಕೆ ಸೇರಿದ ಮನೆಗಳ ಮೌಲ್ಯದಲ್ಲಿ ಆಗಿರುವ ಸರಾಸರಿ ಹೆಚ್ಚಳ ಶೇ 15ರಷ್ಟು ಮಾತ್ರ. ಅಂದರೆ, ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಿದೆ.

ಎರಡು ವರ್ಷಗಳ ಹಿಂದಿನ ಸಂದರ್ಭಕ್ಕೆ ಹೋಲಿಸಿ ನೋಡಿದರೆ, ಕೈಗೆಟಕುವ ದರದ ಮನೆಗಳನ್ನು ಖರೀದಿಸಲು ಸಾಲ ಮಾಡಿದ್ದವರು ಅದನ್ನು ತೀರಿಸಲು, ಶೇಕಡ 20ರಷ್ಟು ಹೆಚ್ಚು ಇಎಂಐ ಕಟ್ಟುತ್ತಿದ್ದಾರೆ. ಏಕೆಂದರೆ ₹30 ಲಕ್ಷದವರೆಗಿನ ಗೃಹ ಸಾಲಗಳ ಮೇಲಿನ ಬಡ್ಡಿ ದರವು (ರೆಪೊ ದರಕ್ಕೆ ಹೊಂದಿಕೊಂಡಿರುವ ಬಡ್ಡಿ ದರ) 2021ರ ಮಧ್ಯ ಭಾಗದಲ್ಲಿ ಶೇ 6.7ರಷ್ಟು ಇದ್ದಿದ್ದು, ಈಗ ಸರಿಸುಮಾರು ಶೇ 9.15ಕ್ಕೆ ಏರಿಕೆ ಕಂಡಿದೆ.

‘ಮನೆಗಳ ಮಾರುಕಟ್ಟೆಯ ಪಾಲಿಗೆ ರಾಜದೂತನಂತೆ ಇದ್ದ ಕೈಗೆಟಕುವ ಮನೆಗಳ ಮಾರಾಟವು 2023ನೆಯ ಇಸವಿಯ ಮೊದಲ ಆರು ತಿಂಗಳುಗಳಲ್ಲಿ, //ಒಟ್ಟು ಮನೆಗಳ ಮಾರಾಟದಲ್ಲಿ ಶೇಕಡ 20ರಷ್ಟಕ್ಕೆ ಕುಸಿದಿದೆ//. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವರ್ಗದ ಮನೆಗಳ ಮಾರಾಟವು ಶೇ 31ರಷ್ಟು ಪಾಲು ಹೊಂದಿತ್ತು. 2023ರ ಮೊದಲ ಆರು ತಿಂಗಳಲ್ಲಿ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾದ ಒಟ್ಟು 2.29 ಲಕ್ಷ ಮನೆಗಳ ಪೈಕಿ 46,650 ಮನೆಗಳು (ಶೇ 20ರಷ್ಟು) ಮಾತ್ರ ಕೈಗೆಟಕುವ ದರದ ವರ್ಗಕ್ಕೆ ಸೇರಿದವು. 2022ರ ಮೊದಲ ಆರು ತಿಂಗಳಲ್ಲಿ ಮಾರಾಟವಾದ ಒಟ್ಟು 1.84 ಲಕ್ಷ ಮನೆಗಳಲ್ಲಿ ಕೈಗೆಟಕುವ ದರದ ವರ್ಗಕ್ಕೆ ಸೇರಿದ ಮನೆಗಳ ಸಂಖ್ಯೆ 57,060 (ಶೇ 31) ಆಗಿತ್ತು’ ಎಂದು ಅನರಾಕ್ ಅಧ್ಯಕ್ಷ ಅನುಜ್ ಪುರಿ ಅವರು ಇನ್ನೊಂದು ವರದಿಯಲ್ಲಿ ಹೇಳಿದ್ದಾರೆ.

ಪ್ರಮುಖ ನಗರಗಳಲ್ಲಿ ಜಮೀನಿನ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಭಾರಿ ಬೆಲೆ ನೀಡಿ ಜಮೀನು ಖರೀದಿಸಿ, ಅಲ್ಲಿ ಕೈಗೆಟಕುವ ದರದ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುವುದು ಡೆವಲಪರ್‌ಗಳ ಪಾಲಿಗೆ ಆಕರ್ಷಕ ವಹಿವಾಟಾಗಿ ಉಳಿದಿಲ್ಲ. ಭಾರಿ ಬೆಲೆ ಕೊಟ್ಟು ಖರೀದಿ ಮಾಡಿದ ಜಮೀನಿನಲ್ಲಿ, ಹೆಚ್ಚಿನ ಬೆಲೆಗೆ ಮಾರಾಟ ಆಗುವ ಐಷಾರಾಮಿ ಮನೆಗಳನ್ನು ನಿರ್ಮಿಸುವುದು ಡೆವಲಪರ್‌ಗಳ ಪಾಲಿಗೆ ಹೆಚ್ಚು ಲಾಭದಾಯಕ. ಕೈಗೆಟಕುವ ದರದ ಮನೆಗಳಿಗೆ ಬೇಡಿಕೆ ತಗ್ಗಿದೆ ಎಂಬ ಅಂಶವು ಡೆವಲಪರ್‌ಗಳನ್ನು ಈ ವರ್ಗದ ಮನೆಗಳ ನಿರ್ಮಾಣದಿಂದ ಮತ್ತಷ್ಟು ವಿಮುಖರನ್ನಾಗಿಬಹುದು. ನಗರಗಳಿಂದ ಆಚೆಗೆ ತುಸು ಕಡಿಮೆ ಬೆಲೆಗೆ ಜಮೀನು ಸಿಗಬಹುದಾದರೂ, ಮೂಲಸೌಕರ್ಯದ ಕೊರತೆಯ ಕಾರಣದಿಂದಾಗಿ ಅಲ್ಲಿ ನಿರ್ಮಾಣವಾಗುವ ಮನೆಗಳಿಗೆ ಬೇಡಿಕೆ ಹೆಚ್ಚು ಬರದೆ ಇರಬಹುದು ಎಂಬ ಅಂದಾಜು ಡೆವಲಪರ್‌ಗಳಲ್ಲಿ ಇದೆ.

‘ರಿಯಲ್ ಎಸ್ಟೇಟ್‌ ಬೆಲೆ ಏರಿಕೆಯ ಕಾರಣದಿಂದಾಗಿ ಕೈಗೆಟಕುವ ದರದ ಮನೆಗಳನ್ನು ಖರೀದಿಸುವ ವರ್ಗದವರು ಮನೆ ಖರೀದಿ ತೀರ್ಮಾನವನ್ನು ಕಳೆದೊಂದು ವರ್ಷದಿಂದ ಮುಂದಕ್ಕೆ ಹಾಕುತ್ತಿದ್ದಾರೆ. ಈ ವರ್ಗದ ಮನೆಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಡೆವಲಪರ್‌ಗಳು ಮಧ್ಯಮ ಶ್ರೇಣಿಯ, ಪ್ರೀಮಿಯಂ ವರ್ಗದ ಮತ್ತು ಐಷಾರಾಮಿ ವರ್ಗದ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ವರ್ಗಗಳಿಗೆ ಸೇರಿದ ಮನೆಗಳಿಗೆ ಹೆಚ್ಚು ಬೇಡಿಕೆ ಇದೆ’ ಎಂದು ವರದಿ ಹೇಳಿದೆ.

ವ್ಯಾಖ್ಯಾನ ಬದಲಾಯಿಸಬೇಕು ಎಂಬ ಆಗ್ರಹ
₹40 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ದರದ ಮನೆಗಳು ‘ಕೈಗೆಟಕುವ ದರ’ದ ಮನೆಗಳು ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ. ಹಣದುಬ್ಬರದಲ್ಲಿ ಏರಿಕೆ ಹಾಗೂ ಜನರ ವರಮಾನ ಏರಿಕೆಯ ಕಾರಣವನ್ನುಉಲ್ಲೇಖಿಸಿ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್ ಕಂಪನಿಯ ಸಿಒಒ ಮಲ್ಲಣ್ಣ ಸಾಸಲು ಅವರು ಕೈಗೆಟಕುವ ದರದ ಮನೆ ಎಂಬ ವ್ಯಾಖ್ಯಾನದಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದ್ದರು. ‘ಮನೆ ಖರೀದಿಸಲು ಬಯಸುವವರು 2–ಬಿಎಚ್‌ಕೆ ಮನೆಗಳನ್ನು ಹೆಚ್ಚಾಗಿ ಬಯಸುತ್ತಾರೆ. ಆದರೆ 2–ಬಿಎಚ್‌ಕೆ ಮನೆಗಳನ್ನು ಕೈಗೆಟಕುವ ದರದಲ್ಲಿ (ಅಂದರೆ ₹40 ಲಕ್ಷಕ್ಕಿಂತ ಕಡಿಮೆ ಬೆಲೆಗೆ) ಕಟ್ಟಲು ಈಗಿನ ಪರಿಸ್ಥಿತಿಯಲ್ಲಿ ಆಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆಯು ಶೇ 9ರಿಂದ ಶೇ 11ರಷ್ಟು ಹೆಚ್ಚಾಗಿದೆ. ವೆಚ್ಚ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಂಡು ಕೈಗೆಟಕುವ ದರದ ಮನೆಯ ವ್ಯಾಖ್ಯಾನವನ್ನು ಬದಲಿಸಬೇಕಾಗಿದೆ.  ಹಣದುಬ್ಬರ ಹೆಚ್ಚಳವನ್ನು ಪರಿಗಣಿಸಿ ₹60 ಲಕ್ಷ ಅಥವಾ ₹65 ಲಕ್ಷದವರೆಗಿನ ಬೆಲೆಯ ಮನೆಗಳನ್ನೆಲ್ಲ ಕೈಗೆಟಕುವ ದರದ ಮನೆಗಳು ಎಂಬ ವ್ಯಾಖ್ಯಾನದ ಅಡಿ ತರಬೇಕು’ ಎಂಬುದು ಮಲ್ಲಣ್ಣ ಅವರು ಪ್ರತಿಪಾದನೆ.
ಅಸಲಿಗಿಂತ ಬಡ್ಡಿಯೇ ಹೆಚ್ಚು
‘ಕೈಗೆಟಕುವ ದರದ ಮನೆ ಖರೀದಿಸಲು ₹30 ಲಕ್ಷ ಸಾಲ ಮಾಡಿ 20 ವರ್ಷಗಳ ಮರುಪಾವತಿ ಅವಧಿ ಆಯ್ಕೆ ಮಾಡಿಕೊಂಡು 2021ರ ಜುಲೈ ಹೊತ್ತಿಗೆ ತಿಂಗಳಿಗೆ ಅಂದಾಜು ₹22700 ಇಎಂಐ ಪಾವತಿ ಮಾಡುತ್ತಿದ್ದವರು ಈಗ ಬಡ್ಡಿ ಏರಿಕೆಯ ಪರಿಣಾಮವಾಗಿ ಅಂದಾಜು ₹27300 ಪಾವತಿ ಮಾಡುತ್ತಿದ್ದಾರೆ. ಅಂದರೆ ಅವರ ಇಎಂಐ ಮೊತ್ತವು ತಿಂಗಳಿಗೆ ₹4600ರಷ್ಟು ಹೆಚ್ಚಾಗಿದೆ. ಇಎಂಐ ಮೊತ್ತದಲ್ಲಿ ಆಗಿರುವ ಶೇ 20ರಷ್ಟು ಹೆಚ್ಚಳವು ಅವರು ಪಾವತಿ ಮಾಡಬೇಕಿರುವ ಬಡ್ಡಿಯ ಮೊತ್ತ ₹11 ಲಕ್ಷದಷ್ಟು ಹೆಚ್ಚಾಗುವಂತೆ ಮಾಡಿದೆ (ಸಾಲದ ಮರುಪಾವತಿ ಈಗಷ್ಟೇ ಶುರುವಾಗಿದೆ ಎಂದು ಭಾವಿಸಿದರೆ)’ ಎಂದು ಅನರಾಕ್ ಸಂಸ್ಥೆಯ ಸಂಶೋಧನಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಹಾಗೂ ಮುಖ್ಯಸ್ಥ ಪ್ರಶಾಂತ್ ಠಾಕೂರ್ ಅಂದಾಜಿಸಿದ್ದಾರೆ. ₹30 ಲಕ್ಷ ಸಾಲ ಪಡೆದ ವ್ಯಕ್ತಿಯು ಶೇ 6.7ರ ಬಡ್ಡಿ ದರ ಇದ್ದಾಗ ಅಸಲು ಮೊತ್ತದ ಮೇಲೆ ಬಡ್ಡಿಯ ರೂಪದಲ್ಲಿ ₹24.5 ಲಕ್ಷ ಪಾವತಿಸಬೇಕಿತ್ತು (20 ವರ್ಷ ಅವಧಿಯಲ್ಲಿ). ಆದರೆ ಈಗ ಬಡ್ಡಿಯು ಶೇ 9.15ಕ್ಕೆ ಹೆಚ್ಚಾಗಿರುವ ಕಾರಣದಿಂದಾಗಿ ಅಷ್ಟೇ ಅಸಲು ಮೊತ್ತಕ್ಕೆ ಪಾವತಿ ಮಾಡಬೇಕಿರುವ ಬಡ್ಡಿಯ ಮೊತ್ತವು ₹35.5 ಲಕ್ಷಕ್ಕೆ ತಲುಪಿದೆ. ಇಲ್ಲಿ ಸಾಲ ಪಡೆದವನು ಅಸಲು ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಬಡ್ಡಿಯ ರೂಪದಲ್ಲಿ ಪಾವತಿಸುತ್ತಾನೆ ಎಂದು ಠಾಕೂರ್ ಹೇಳಿದ್ದಾರೆ. ಸಾಲ ಮಾಡಿ ಖರೀದಿಸಿದ ಮನೆಯ ಬಡ್ಡಿ ಪಾವತಿಯೇ ದೊಡ್ಡ ಹೊರೆಯಾದರೆ? ಅಸಲು ಮೊತ್ತಕ್ಕಿಂತ ಬಡ್ಡಿಯೇ ಜಾಸ್ತಿ ಆದರೆ? ಸಾಲವನ್ನು ಹೇಗೋ ತೀರಿಸಬಹುದು. ಆದರೆ ಮುಂದೊಂದು ದಿನ ಮನೆಯನ್ನು ಮಾರಾಟ ಮಾಡುವ ಸಂದರ್ಭ ಸೃಷ್ಟಿಯಾದರೆ ಆ ಆಸ್ತಿಯ ಮೌಲ್ಯವರ್ಧನೆಯಿಂದ ಸಿಗುವ ಲಾಭಕ್ಕೆ ಪೆಟ್ಟು ಬೀಳುತ್ತದೆ. ₹30 ಲಕ್ಷ ಸಾಲ ಮಾಡಿ ಕೈಗೆಟಕುವ ದರದ ಮನೆಯನ್ನು ಖರೀದಿಸಿ ಅದಕ್ಕೆ 20 ವರ್ಷಗಳ ಅವಧಿಯಲ್ಲಿ ₹35.5 ಲಕ್ಷದಷ್ಟು ಬಡ್ಡಿ ಪಾವತಿಸಿ (ಅಸಲು ಮತ್ತು ಬಡ್ಡಿ ಸೇರಿಸಿ ₹65.5 ಲಕ್ಷ) ಹತ್ತು ವರ್ಷಗಳ ನಂತರ ₹70 ಲಕ್ಷಕ್ಕೆ ಮನೆಯನ್ನು ಮಾರಾಟ ಮಾಡಿದರೆ ಮಾರಿದ ವ್ಯಕ್ತಿಗೆ ಸಿಗುವ ವಾಸ್ತವ ಲಾಭ ₹4.5 ಲಕ್ಷ ಮಾತ್ರ! ಏಕೆಂದರೆ ₹65.5 ಲಕ್ಷ ಸಾಲದ ಮರುಪಾವತಿಗಾಗಿ ವಿನಿಯೋಗ ಆಗಿರುತ್ತದೆ. ‘ಅಸಲು ಮೊತ್ತಕ್ಕಿಂತ ಪಾವತಿ ಮಾಡಬೇಕಿರುವ ಬಡ್ಡಿಯು ಹೆಚ್ಚಾಗುವುದು ಸಾಲ ಪಡೆದ ವ್ಯಕ್ತಿಗಾಗಲಿ ಮನೆ ಮಾರುಕಟ್ಟೆಗಾಗಲಿ ಒಳ್ಳೆಯದಲ್ಲ. ಕೈಗೆಟಕುವ ದರದ ಮನೆಗಳ ಮಾರುಕಟ್ಟೆಯು ಹಳಿತಪ್ಪದಂತೆ ನೋಡಿಕೊಳ್ಳಲು ಈ ಸಮಸ್ಯೆಯ ಬಗ್ಗೆ ಕೇಂದ್ರವು ಮುಂದಿನ ಬಜೆಟ್‌ನಲ್ಲಿ ಅಥವಾ ಅದಕ್ಕೂ ಮೊದಲು ಸೂಕ್ತ ನೀತಿಗಳ ಮೂಲಕ ಗಮನ ನೀಡಬೇಕಿದೆ’ ಎಂದು ಅನರಾಕ್ ವರದಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.