69 ವರ್ಷಗಳ ಬಳಿಕ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಏರ್ ಇಂಡಿಯಾ ಬಂದು ಸೇರಿದೆ. ಸರ್ಕಾರದ ವಶದಲ್ಲಿದ್ದ ವಿಮಾನಾಯಾನ ಸಂಸ್ಥೆಯನ್ನು ₹18,000 ಕೋಟಿ ನೀಡಿ ಖರೀದಿಸಿರುವ ಟಾಟಾ ಬಳಿ ಈಗಾಗಲೇ ಎರಡು ವಿಮಾನಯಾನ ಸಂಸ್ಥೆಗಳಿವೆ. ಏರ್‌ಏಷ್ಯಾ ಇಂಡಿಯಾ ಹಾಗೂ ವಿಸ್ತಾರಾ ಎಂಬ ವಿಮಾನಯಾನ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಈ ಸಂಸ್ಥೆಗೆ ಇದು ಮೂರನೇ ಸೇರ್ಪಡೆ. ಹೀಗಾಗಿ ಮೂರು ಬೃಹತ್ ವಿಮಾನಯಾನ ಕಂಪನಿಗಳ ಒಡೆತನ ಹೊಂದಿರುವ ಹೆಗ್ಗಳಿಕೆ ಟಾಟಾ ಸಂಸ್ಥೆಯದ್ದಾಗಿದೆ.
ದೇಶದಲ್ಲಿ ಮೊದಲು ವಿಮಾನಯಾನ ಸೇವೆ ಆರಂಭಿಸಿದ್ದೇ ಜೆಆರ್‌ಡಿ ಟಾಟಾ. ಸಂಸ್ಥೆಯನ್ನು ಸರ್ಕಾರವು ರಾಷ್ಟ್ರೀಕರಣ ಮಾಡಿ, ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 2007ರಿಂದೀಚೆಗೆ ಏರ್ ಇಂಡಿಯಾ ಸಾಲದ ಶೂಲಕ್ಕೆ ಸಿಲುಕಿ ಹೈರಾಣಾಗಿತ್ತು. ಸಂಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದಾಗ, ಹಲವರು ಹಿಂದೇಟು ಹಾಕಿದರು. ಆದರೆ ಏರ್ ಇಂಡಿಯಾ ಖರೀದಿಯು ಟಾಟಾಗೆ ಭಾವನಾತ್ಮಕ ವಿಷಯವಾಗಿತ್ತು. 2022ರ ಜನವರಿ 27ರಂದು ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ತೆಕ್ಕೆ ಸೇರಿತು.
2015ರ ಜನವರಿ 9ರಂದು ‘ವಿಸ್ತಾರಾ’ ಹೆಸರಿನ ವಾಯುಯಾನ ಸಂಸ್ಥೆಯನ್ನು ಟಾಟಾ ಆರಂಭಿಸಿತ್ತು. ಕೇವಲ 5 ವರ್ಷಗಳಲ್ಲಿ 2 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಿ ಸೈ ಎನಿಸಿಕೊಂಡ ಸಂಸ್ಥೆಯು ಪ್ರಯಾಣಿಕ ಸೇವೆಗೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ.
ಭಾರತದ ಏಕೈಕ ಪ್ರೀಮಿಯಂ ಎಕಾನಮಿ ಕ್ಲಾಸ್ ವಿಮಾನಯಾನ ಸೇವೆ ನೀಡುತ್ತಿರುವ ವಿಸ್ತಾರಾ, ತನ್ನ ಡ್ರೀಮ್‌ಲೈನರ್ ಮತ್ತು ಎ321 ನಿಯೊ ವಿಮಾನಗಳಲ್ಲಿ ಹಾಸಿಗೆಗಳ ಐಷಾರಾಮಿ ಸೌಲಭ್ಯವನ್ನೂ ನೀಡುತ್ತಿದೆ. 35 ಏರ್‌ಬಸ್ ಎ320, ಆರು ಬೋಯಿಂಗ್ 737-800ಎನ್‌ಜಿ, ಎರಡು ಏರ್‌ಬಸ್ ಎ321 ನಿಯೊ, ಮತ್ತು ಎರಡು ಬೋಯಿಂಗ್ ಬಿ787–9 ಡ್ರೀಮ್‌ಲೈನರ್ ಸೇರಿದಂತೆಪ್ರಸ್ತುತ 45 ವಿಮಾನಗಳನ್ನು ವಿಸ್ತಾರಾ ಹೊಂದಿದೆ. ಮುಂದಿನ ವರ್ಷ ವಿವಿಧ ಶ್ರೇಣಿಯ 70 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ.
ಸಿಂಗಪುರ ಏರ್‌ಲೈನ್ಸ್ ಜೊತೆ ಏರ್‌ಏಷ್ಯಾ ಇಂಡಿಯಾ ವಿಮಾನ ಸಂಸ್ಥೆಆರಂಭಿಸಿರುವ ಟಾಟಾ, ಇದರಲ್ಲಿ ಶೇ 84ರಷ್ಟು ಪಾಲು ಹೊಂದಿದೆ. ಇದು ಕಡಿಮೆ ದರದ ವಿಮಾನಯಾನ ಸೇವೆಗೆ ಹೆಸರಾಗಿದೆ. ಆದರೆ, ವಿಸ್ತಾರಾ ಸಂಸ್ಥೆಯ ಗ್ರಾಹಕರೇ ಬೇರೆ, ಏರ್‌ಏಷ್ಯಾ ಇಂಡಿಯಾದ ಗ್ರಾಹಕರೇ ಬೇರೆ.
ಏರ್ ಇಂಡಿಯಾದ ಜತೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಎಂಬ ಸಹ ಸಂಸ್ಥೆಯೂ ಟಾಟಾ ಸಮೂಹಕ್ಕೆ ಸೇರಿದೆ. ಇದು ಏರ್‌ಏಷ್ಯಾದ ರೀತಿ ಅಗ್ಗದ ವಿಮಾನ ಸಂಚಾರ ಒದಗಿಸುತ್ತಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಏರ್‌ಏಷ್ಯಾ ಇಂಡಿಯಾ ಸಂಸ್ಥೆಗಳನ್ನು ವಿಲೀನಗೊಳಿಸುವ ಅಂಶವನ್ನು ಟಾಟಾ ಸಂಸ್ಥೆ ಪರಿಗಣಿಸುತ್ತಿದೆ. ವಿಶ್ವದರ್ಜೆಯ ಪ್ರೀಮಿಯಂ ಸೇವೆ ನೀಡುತ್ತಿರುವ ವಿಸ್ತಾರಾ ಸಂಸ್ಥೆಯನ್ನು ಹಾಗೆಯೇ ಉಳಿಸಿಕೊಳ್ಳಲು ಟಾಟಾ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ನಿಯಂತ್ರಣದಿಂದ ಖಾಸಗಿ ನಿಯಂತ್ರಣಕ್ಕೆ ಬಂದಿರುವ ಏರ್ ಇಂಡಿಯಾ ಉದ್ಯೋಗಿಗಳು ಹಾಗೂ ಅವರ ಸಂಬಳ, ಸೌಲಭ್ಯದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಟಾಟಾ ನಿರ್ಧರಿಸಿದೆ. ಸಂಸ್ಥೆಯ ಪುನರುಜ್ಜೀವನಕ್ಕೆ ರೂಪುರೇಷೆ ಸಿದ್ಧಪಡಿಸಲು 100 ದಿನಗಳ ಕಾರ್ಯಕ್ರಮ ಹಾಕಿಕೊಂಡಿದೆ. ಏರ್ ಇಂಡಿಯಾ ಹೆಸರು ತಾಯ್ನಾಡಿನ ಪ್ರೀತಿ ಹಾಗೂ ಆದರಾತಿಥ್ಯವನ್ನು ನೆನಪಿಸುತ್ತದೆ. ಹೀಗಾಗಿಬ್ರಾಂಡ್ ಮೌಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ‘ಏರ್ ಇಂಡಿಯಾ’ ಹೆಸರು ಹಾಗೂ ಲೋಗೊವನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಟಾಟಾ ಮುಂದಿರುವ ಸವಾಲುಗಳು
ವಿಮಾನಯಾನ ಸಂಸ್ಥೆಗಳನ್ನು ನಿರ್ವಹಿಸಿಟಾಟಾ ಸನ್ಸ್‌ಗೆ ದೀರ್ಘಕಾಲದ ಅನುಭವವಿದೆ. ಏರ್ ಇಂಡಿಯಾದ ಮೊದಲ ಮಾಲೀಕ ಟಾಟಾ ಕಂಪನಿಯೇ ಆಗಿತ್ತು. ಏರ್ ಇಂಡಿಯಾ ರಾಷ್ಟ್ರೀಕರಣದ ನಂತರ ಹಲವು ದಶಕ ಟಾಟಾ ಕಂಪನಿಯು ವಿಮಾನಯಾನ ಉದ್ದಿಮೆಯಿಂದ ದೂರವಿತ್ತು. ಆದರೆ ಈಚಿನ ದಶಕಗಳಲ್ಲಿ ಕಂಪನಿಯು ಬೇರೆ ಕಂಪನಿಗಳ ಪಾಲುದಾರಿಕೆಯಲ್ಲಿ ವಿಮಾನಯಾನ ಕಂಪನಿಗಳನ್ನು ನಡೆಸುತ್ತಿರುವ ಅನುಭವ ಹೊಂದಿದೆ. ಈ ಕಾರಣದಿಂದ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಲಾಭದ ಹಾದಿಗೆ ಮರಳಿಸುವ ಸಾಮರ್ಥ್ಯ ಟಾಟಾ ಕಂಪನಿಗೆ ಇದೆ ಎಂದು ನಿರೀಕ್ಷಿಸಲಾಗಿದೆ.
ಏರ್ ಇಂಡಿಯಾ,ವಿಸ್ತಾರಾ ಮತ್ತು ಏರ್‌ಏಷ್ಯಾ ಮೂರೂ ಕಂಪನಿಗಳು ಸೇರಿದರೆ ಅದು ಭಾರತದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 26.9ರಷ್ಟು ಪಾಲು ಹೊಂದಲಿದೆ. ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಇಂಡಿಗೋದ ನಂತರದ ಸ್ಥಾನದಲ್ಲಿ ಟಾಟಾ ನಿಲ್ಲಲಿದೆ. ಮಾರುಕಟ್ಟೆಯಲ್ಲಿನ ಈ ಪಾಲನ್ನು ಸರಿಯಾಗಿ ಬಳಸಿಕೊಳ್ಳಲು ಮೂರೂ ಕಂಪನಿಗಳನ್ನು ವಿಲೀನ ಮಾಡುವ ಮತ್ತು ಅಥವಾ ಪ್ರತ್ಯೇಕವಾಗಿಯೇ ಇರಿಸುವ ಆಯ್ಕೆ ಟಾಟಾ ಕಂಪನಿಯ ಮುಂದೆ ಇದೆ.
ಏರ್ ಇಂಡಿಯಾ ಸ್ವತಃ 127 ದೊಡ್ಡ ವಿಮಾನಗಳನ್ನು ಹೊಂದಿದೆ. ಜತೆಗೆ ಕಂಪನಿಯ ಖರೀದಿಯ ನಂತರ ಏರ್ ಇಂಡಿಯಾದ 13,000ಕ್ಕೂ ಹೆಚ್ಚು ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರು ಟಾಟಾ ತೆಕ್ಕೆಗೆ ಬಂದಿದ್ದಾರೆ. ಇದರ ಜತೆಯಲ್ಲಿಯೇ ದೇಶ–ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ಹೊಂದಿರುವ ಗ್ರೌಂಡ್ ಫೋರ್ಸ್ ಸಹ ಟಾಟಾಗೆ ದೊರೆತಿದೆ. ಏರ್ ಇಂಡಿಯಾವು 102 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಖರೀದಿಯ ಮೂಲಕ ದೊರೆತಿರುವ ಈ ಸ್ವತ್ತುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ, ಏರ್ ಇಂಡಿಯಾ ಗಳಿಕೆಯ ಹಾದಿಗೆ ಮರಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಏರ್ ಇಂಡಿಯಾದ ನೌಕರರನ್ನು ಟಾಟಾ ಹೇಗೆ ನಿರ್ವಹಣೆ ಮಾಡುತ್ತದೆ ಎಂಬುದೂ ಅತ್ಯಂತ ಮಹತ್ವದ ಅಂಶವಾಗಿದೆ. ಸರ್ಕಾರಿ ಕಂಪನಿಯಾಗಿದ್ದಾಗ ಆಡಳಿತ ಮಂಡಳಿಗೆ ಅನ್ವಯವಾಗುತ್ತಿದ್ದ ಹಲವು ಕಟ್ಟುಪಾಡುಗಳು, ಖಾಸಗಿ ಕಂಪನಿಯಾದ ನಂತರ ಅನ್ವಯವಾಗುವುದಿಲ್ಲ. ನೌಕರರ ಜತೆಗೆ ಆಡಳಿತ ಮಂಡಳಿಯ ತಾಂತ್ರಿಕ ಸಂಬಂಧ ಬದಲಾಗಲಿದೆ. ಇದರಿಂದ ಕಂಪನಿಯು ತನಗೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಇದು ಕಂಪನಿಯ ಕಾರ್ಯನಿರ್ವಹಣೆಯನ್ನು ಸುಗಮವಾಗಿಸಲು ನೆರವಾಗುತ್ತದೆ.
ಆದರೆ ಟಾಟಾ ಕಂಪನಿಯ ಮುಂದಿರುವ ದೊಡ್ಡ ಸವಾಲೆಂದರೆ, ಏರ್ ಇಂಡಿಯಾದ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿಸುವುದು. ಏಕೆಂದರೆ ಕಂಪನಿಯ ತೆಕ್ಕೆಯಲ್ಲಿರುವ ವಿಸ್ತಾರಾ, ಏರ್‌ಏಷ್ಯಾದ ವಿಮಾನಗಳು ಮತ್ತು ಏರ್ ಇಂಡಿಯಾದ ವಿಮಾನಗಳ ಕಾರ್ಯಾಚರಣೆಯ ಮಧ್ಯೆ ಘರ್ಷಣೆಯಾಗದಂತೆ ನೋಡಿಕೊಳ್ಳಬೇಕಿದೆ. ಮೂರೂ ಕಂಪನಿಯ ವಿಮಾನಗಳು ಒಂದೇ ಮಾರ್ಗದಲ್ಲಿ, ಏಕಕಾಲಕ್ಕೆ ಕಾರ್ಯನಿರ್ವಹಿಸಿದರೆ ಅದು ಮೂರೂ ಕಂಪನಿಗಳಿಗೆ ನಷ್ಟವಾಗುತ್ತದೆ. ಇದನ್ನು ವ್ಯವಸ್ಥಿತವಾಗಿ ಸರಿಪಡಿಸಿದರೆ ಮಾತ್ರ ಏರ್ ಇಂಡಿಯಾವನ್ನು ಗಳಿಕೆಯತ್ತ ಒಯ್ಯಲು ಸಾಧ್ಯವಾಗುತ್ತದೆ.
ಇಲ್ಲಿಯೂ ಒಂದು ಅನುಕೂಲಕರ ಸಂಗತಿ ಇದೆ. ಏರ್ ಇಂಡಿಯಾದ ಗ್ರಾಹಕರು ಮತ್ತು ಕಾರ್ಯಾಚರಣೆಯ ಮಾರ್ಗಗಳು ಬೇರೆ–ಬೇರೆ. ವಿಸ್ತಾರಾದ ಗ್ರಾಹಕರು ಮತ್ತು ಕಾರ್ಯಾಚರಣೆಯ ಮಾರ್ಗಗಳು ಬೇರೆ ಬೇರೆ. ಏರ್‌ಏಷ್ಯಾದ ಸ್ಥಿತಿಯೂ ಹೀಗೇ ಇದೆ. ಮೂರೂ ಕಂಪನಿಗಳು ತಾವು ಹೆಚ್ಚು ಸಕ್ರಿಯವಾಗಿರುವ ಮಾರ್ಗಗಳತ್ತ ಮತ್ತು ಆ ವರ್ಗದ ಗ್ರಾಹಕರತ್ತ ಗಮನ ಕೇಂದ್ರೀಕರಿಸಿದರೆ, ಈ ಸಂಭಾವ್ಯ ಘರ್ಷಣೆಯನ್ನು ತಡೆಗಟ್ಟಬಹುದು. ಆ ಮೂಲಕ ಮೂರೂ ಕಂಪನಿಗಳು ಯಾವುದೇ ನಷ್ಟವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ದೊಡ್ಡ ಮಾರುಕಟ್ಟೆ
ಭಾರತವು ಈಗ ವಿಶ್ವದ ಮೂರನೇ ಅತ್ಯಂತ ದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಎನಿಸಿದೆ. 2024ರ ವೇಳೆಗೆ ಬ್ರಿಟನ್ ವಿಮಾನಯಾನ ಮಾರುಕಟ್ಟೆಯನ್ನು ಭಾರತವು ಹಿಂದಿಕ್ಕಲಿದೆ. 2030ರ ವೇಳೆಗೆ ಚೀನಾ ಮತ್ತು ಅಮೆರಿಕದ ವಿಮಾನಯಾನ ಮಾರುಕಟ್ಟೆಯನ್ನು
ಮೀರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನ ಪ್ರಕಾರ ಈಗ ಭಾರತದ ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ.
ವಿಮಾನಯಾನ ಸಂಸ್ಥೆಗಳಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶವಿದೆ. 2025ರ ವೇಳೆಗೆ ದೇಶದಲ್ಲಿ ಇನ್ನೂ ₹35,000 ಕೋಟಿಯಷ್ಟು ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಈಗಾಗಲೇ ಹಲವು ವಿಮಾನಯಾನ ಸ್ಟಾರ್ಟ್‌ಅಪ್‌ಗಳು ನೋಂದಣಿಯಾಗಿವೆ. ಕೆಲವು ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿದೆ. ಕೋವಿಡ್ ನಿರ್ಬಂಧದ ಮಧ್ಯೆಯೂ 2021ರಲ್ಲಿ ದೇಶದಲ್ಲಿ ಪ್ರತಿದಿನ 2.80 ಲಕ್ಷ ಜನರು ವಿಮಾನದಲ್ಲಿ ಓಡಾಟ ನಡೆಸಿದ್ದಾರೆ. ಕೋವಿಡ್ ಕರಿಛಾಯೆ ತಿಳಿಯಾದ ನಂತರ ದೇಶದ ವಿಮಾನಯಾನ ಮಾರುಕಟ್ಟೆ ಮತ್ತಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆ ಇದೆ.
ಗ್ರಾಹಕ ಸ್ನೇಹಿ
ಏರ್ ಇಂಡಿಯಾ ಖಾಸಗಿ ವಲಯಕ್ಕೆ ಪ್ರವೇಶಿಸಿದರೆ, ಅತ್ಯುತ್ತಮ ದರ್ಜೆಯ ಸೇವೆಗಳು ಸಿಗಬಹುದು ಎಂಬುದು ಪ್ರಯಾಣಿಕರ ನಿರೀಕ್ಷೆ. ಸುವ್ಯವಸ್ಥಿತ ಕಾರ್ಯಾಚರಣೆ, ಸುಧಾರಿತ ಸೇವೆಗಳು ಮರಳುತ್ತವೆ ಎಂಬ ಆಶಯವಿದೆ. ಅದನ್ನು ಸಾಕಾರಗೊಳಿಸಲು ಟಾಟಾ ಮುಂದಾಗಿದೆ.ಒಂದು ಕಾಲಕ್ಕೆ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದು ಜನರಿಗೆ ಪ್ರತಿಷ್ಠೆಯಾಗಿತ್ತು. ಆ ಮನಸ್ಥಿತಿಗೆ ಸ್ವಲ್ಪ ಮುಕ್ಕಾಗಿದ್ದರೂ, ಸಂಸ್ಥೆಯು ಖಾಸಗೀಕರಣ ಆಗುವುದಾದರೆ, ಅದನ್ನು ಟಾಟಾ ಸಂಸ್ಥೆಯೇ ತೆಗೆದುಕೊಳ್ಳಲಿ ಎಂಬ ಮನೋಭಾವ ಜನರಲ್ಲಿತ್ತು. ಪ್ರಯಾಣಿಕರಿಗೆ ನೀಡುವ ಸೇವೆ ಹಾಗೂ ಸೌಲಭ್ಯಗಳಿಂದ ಹೆಸರಾಗಿದ್ದ ಏರ್ ಇಂಡಿಯಾ, ಟಾಟಾ ಸಮೂಹವನ್ನು ಸೇರುತ್ತಿದ್ದಂತೆಯೇ ಪ್ರಯಾಣಿಕರಿಗೆ ಅನುಕೂಲಕರವಾದ ಕೆಲವು ಬದಲಾವಣೆಗಳಿಗೆ ಮುನ್ನುಡಿ ಬರೆಯಲಾಗಿದೆ.
ನಿಗದಿತ ಸಮಯಕ್ಕೆ ವಿಮಾನ ಟೇಕಾಫ್ ಹಾಗೂ ಲ್ಯಾಂಡಿಂಗ್ ವಿಚಾರದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಅಸಮಾಧಾನಗಳಿವೆ. ಆದರೆ ಟಾಟಾ ತನ್ನ ಎರಡು ವಿಮಾನಯಾನ ಸಂಸ್ಥೆಗಳಲ್ಲಿ ಸಮಯ ಪಾಲನೆಗೆ ಆದ್ಯತೆ ನೀಡಿದೆ. ಟಾಟಾ ಒಡೆತನಕ್ಕೆ ಸಿಕ್ಕ ಬಳಿಕ, ಏರ್ ಇಂಡಿಯಾದ ವಿಮಾನಗಳ ಹಾರಾಟ ಮತ್ತೆ ಹಳಿಗೆ ಮರಳಿದೆ. ನಿಗದಿತ ಸಮಯಕ್ಕೆ ಕಾರ್ಯಾಚರಣೆ ಶುರುವಾಗಿದೆ. ಹಾಗೆಯೇ,ಪ್ರಯಾಣಿಕರಿಗೆ ಕಡಿಮೆ ದರದ ವಿಮಾನಸೇವೆಯ ಪ್ರಯೋಜನವನ್ನು ಟಾಟಾ ನೀಡುವ ನಿರೀಕ್ಷೆಯಿದೆ.
ಪ್ರಯಾಣಿಕರನ್ನು ‘ಅತಿಥಿಗಳು’ ಎಂದು ಟಾಟಾ ಪರಿಗಣಿಸಿದೆ. ಟಾಟಾ ಒಡೆತನಕ್ಕೆ ಸಿಕ್ಕ ಮೊದಲ ದಿನ ರತನ್ ಟಾಟಾ ಅವರ ಸಂದೇಶದ ಧ್ವನಿ ಪ್ರಸಾರ ಮಾಡಿದ ವಿಮಾನ ಸಿಬ್ಬಂದಿ, ಪ್ರಯಾಣಿಕರನ್ನು ಅತಿಥಿಗಳು ಎಂದು ಕರೆದರು.ಆತಿಥ್ಯಕ್ಕೆ ಹೆಸರಾಗಿರುವ ಟಾಟಾ ಒಡೆತನದ ತಾಜ್ ಹೋಟೆಲ್ ಸಮೂಹದ ಆತಿಥ್ಯ ಇನ್ನು ಮುಂದೆ ವಿಮಾನದ ಪ್ರಯಾಣಿಕರಿಗೆ ಸಿಗುವ ಸಾಧ್ಯತೆಯಿದೆ. ವಿಸ್ತಾರಾ ಪ್ರಯಾಣಿಕರಿಗೆ ಈಗಾಗಲೇ ಈ ಸೌಲಭ್ಯ ನೀಡಲಾಗುತ್ತಿದೆ.
ಮುಂಬೈನಿಂದ ಕಾರ್ಯಾಚರಣೆ ನಡೆಸುವ ನಾಲ್ಕು ವಿಮಾನಗಳಲ್ಲಿ ನೀಡುವ ಊಟದ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾಂಸಾಹಾರವನ್ನು ಮುಂಬೈ–ನೆವಾರ್ಕ್ ಮಾರ್ಗದ ವಿಮಾನದಲ್ಲಿ ಪೂರೈಸಲಾಗಿದೆ.ವಿಮಾನದ ಟಿಕೆಟ್ ಬುಕಿಂಗ್ ಮಾಡುವ ಆ್ಯಪ್ ಹಾಗೂ ಬ್ಯಾಕ್‌ಎಂಡ್ ಸೇವೆಯು ಟಾಟಾ ಸಂಸ್ಥೆ ಸಮೂಹದ ಟಿಸಿಎಸ್‌ಗೆ ನೀಡುವ ಸಾಧ್ಯತೆಯಿದ್ದು, ಪ್ರಯಾಣಿಕರು ಸುಲಭವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಇಂತಹ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಟಾಟಾ ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ನಿರೀಕ್ಷೆ ದಟ್ಟವಾಗಿದೆ.
ಆಧಾರ: ಪಿಟಿಐ, ರಾಯಿಟರ್ಸ್, ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.