ADVERTISEMENT

ಆಳ-ಅಗಲ | ಎಸ್‌ಸಿ ಒಳಮೀಸಲಾತಿ ಹೋರಾಟದ ಹಾದಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 23:53 IST
Last Updated 1 ಆಗಸ್ಟ್ 2024, 23:53 IST
   

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರ ದಶಕಗಳಿಂದಲೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಚರ್ಚೆಯಲ್ಲಿದೆ. ಅದಕ್ಕಾಗಿ ಅನೇಕ ಹೋರಾಟಗಳೂ ನಡೆದಿವೆ, ನಡೆಯುತ್ತಿವೆ. ರಾಜಕೀಯ ಅಧಿಕಾರದ ಪ್ರಮುಖ ದಾಳವಾಗಿಯೂ ಇದು ಬಳಕೆಯಾಗಿದೆ. ಜನರ ಬೇಡಿಕೆ ಮತ್ತು ಹೋರಾಟ, ರಾಜಕೀಯ ಪಕ್ಷಗಳ ಅವಕಾಶವಾದಿ ನಿಲುವು, ಕಾನೂನಿನ ತೊಡಕುಗಳಿಂದಾಗಿ ಒಳಮೀಸಲಾತಿಯು ಒಂದು ಸಂಕೀರ್ಣ ಸಮಸ್ಯೆಯಾಗಿ ಮಾರ್ಪಟ್ಟಿತ್ತು. ಸುಪ್ರೀಂ ಕೋರ್ಟ್‌ ತೀರ್ಪು ಈ ಹೋರಾಟಕ್ಕೆ ಹೊಸ ತಿರುವು ನೀಡಬಹುದು... 

ದೇಶದಲ್ಲಿ ಮೊದಲ ಬಾರಿಗೆ ಒಳಮೀಸಲಾತಿ ಬೇಡಿಕೆ ಕೇಳಿಬಂದಿದ್ದು ಪರಿಶಿಷ್ಟ ಜಾತಿಯ ಜನಸಂಖ್ಯೆ ಅತಿ ಹೆಚ್ಚಾಗಿರುವ ಪಂಜಾಬ್‌ನಲ್ಲಿ. ಅಲ್ಲಿ ಮೇ 5, 1975ರಂದು ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಜಾರಿಗೆ ಬಂತು. ಹರಿಯಾಣದಲ್ಲಿ 1994ರಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಅನುಷ್ಠಾನಗೊಂಡಿತು. ದೇಶದ ಒಳಮೀಸಲಾತಿಯ ಇತಿಹಾಸದಲ್ಲಿ ನಿರ್ಣಾಯಕವಾದ ಹೋರಾಟ ನಡೆದದ್ದು ಅವಿಭಜಿತ ಆಂಧ್ರ ಪ್ರದೇಶದಲ್ಲಿ. 

ಮೀಸಲಾತಿಯಲ್ಲಿ ತಮಗೆ ನ್ಯಾಯಯುತ ಪಾಲು ಸಿಗಬೇಕು ಎಂದರೆ, ಒಳಮೀಸಲಾತಿ ಬೇಕು ಎಂದು ಮಾದಿಗ ದಂಡೋರಾ ಸಂಘಟನೆಯು ಆಂಧ್ರಪ್ರದೇಶದಲ್ಲಿ ಹೋರಾಟಕ್ಕಿಳಿಯಿತು. ‘ರಾಜ್ಯದ ಜನಸಂಖ್ಯೆಯಲ್ಲಿ ಮಾದಿಗರ ಸಂಖ್ಯೆಯು ಶೇ 8.5 ಇದ್ದು, ಪರಿಶಿಷ್ಟ ಜಾತಿಗಳ ಪೈಕಿ ತಮ್ಮ ಪ್ರಮಾಣವು ಶೇ 53 ಆಗಿದೆ; ಹೀಗಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕು’ ಎಂದು ಬೇಡಿಕೆಯಿಟ್ಟಿತು. ಅವರ ಬೇಡಿಕೆಯ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಆಗಿನ ಆಂಧ್ರ ಪ್ರದೇಶ ಸರ್ಕಾರವು 1996ರಲ್ಲಿ ನ್ಯಾ.ರಾಮಚಂದ್ರ ರಾಜು ನೇತೃತ್ವದಲ್ಲಿ ಆಯೋಗ ರಚಿಸಿತು.

ADVERTISEMENT

ಆಯೋಗವು ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಅವುಗಳ ಹಿಂದುಳಿದಿರುವಿಕೆ ಮತ್ತು ಜನಸಂಖ್ಯೆಯ ಆಧಾರದ ಮೇಲೆ ನಾಲ್ಕು ಗುಂಪುಗಳನ್ನಾಗಿ (ಎ, ಬಿ, ಸಿ, ಡಿ) ವಿಂಗಡಿಸಿ, ಅವರಿಗೆ ಒಳಮೀಸಲಾತಿ ನಿಗದಿಪಡಿಸಿ ಶಿಫಾರಸು ಮಾಡಿತು. ವರದಿಯನ್ನು ಆಂಧ್ರ ವಿಧಾನಸಭೆ ಒಪ್ಪಿಕೊಂಡು ಒಳಮೀಸಲು ಆದೇಶ ಹೊರಡಿಸಿತು. ಆದರೆ, ಆಂಧ್ರ ಹೈಕೋರ್ಟ್‌ನ ಏಕಸದಸ್ಯ ಪೀಠವು 1998ರಲ್ಲಿ ಸರ್ಕಾರದ ಆದೇಶವನ್ನು ರದ್ದುಪಡಿಸಿತು. ತನ್ನ ನಿರ್ಧಾರದಿಂದ ಹಿಂದೆ ಸರಿಯದ ಸರ್ಕಾರವು, 2000ದಲ್ಲಿ ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿಯನ್ನು ಕಾಯ್ದೆಬದ್ಧಗೊಳಿಸಿತು. ಮತ್ತೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತಾದರೂ, ಕೋರ್ಟ್ ಸರ್ಕಾರದ ನಿಲುವನ್ನು ಎತ್ತಿಹಿಡಿಯಿತು.

ಒಳಮೀಸಲಾತಿಗಾಗಿ ಆಂಧ್ರ ಕಾಯ್ದೆ ಜಾರಿಗೆ ತಂದಿದ್ದ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು (ಇ.ವಿ.ಚಿನ್ನಯ್ಯ ಮತ್ತು ಆಂಧ್ರಪ್ರದೇಶ ರಾಜ್ಯ ನಡುವಿನ ಪ್ರಕರಣ). ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ಆಂಧ್ರಪ್ರದೇಶದ ಕಾಯ್ದೆಯನ್ನು ರದ್ದುಗೊಳಿಸಿದ್ದಷ್ಟೇ ಅಲ್ಲದೇ, ಈ ವಿಚಾರಕ್ಕೆ ಸಂಬಂಧಿಸಿ ಕಾಯ್ದೆ ಮಾಡುವ ಅಧಿಕಾರ ಸಂಸತ್‌ಗೆ ಮಾತ್ರ ಇರುತ್ತದೆ ಎಂದು 2004ರಲ್ಲಿ ತೀರ್ಪು ನೀಡಿತು. ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಈ ತೀರ್ಪು ಇದುವರೆಗೆ ದೇಶದ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ವಿಚಾರದಲ್ಲಿ ನಿರ್ಣಾಯಕವಾಗಿತ್ತು.

ಅಲ್ಲಿಗೂ ತನ್ನ ಪ್ರಯತ್ನ ನಿಲ್ಲಿಸದ ಆಂಧ್ರ ಸರ್ಕಾರವು, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ವಿಚಾರದಲ್ಲಿ ನ್ಯಾಯ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿತು. ಕೇಂದ್ರವು ಅದಕ್ಕಾಗಿ ನ್ಯಾ. ಉಷಾ ಮೆಹ್ರಾ ನೇತೃತ್ವದಲ್ಲಿ ಆಯೋಗ ರಚಿಸಿತು. ನ್ಯಾ. ಉಷಾ ಮೆಹ್ರಾ ಆಯೋಗವು 2008ರಲ್ಲಿ ತನ್ನ ವರದಿ ಸಲ್ಲಿಸಿ, ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಸಂವಿಧಾನದ 341ನೇ ವಿಧಿ ತಿದ್ದುಪಡಿ ಮಾಡಿ ಹೊಸ ಸೆಕ್ಷನ್‌ (3) ಅನ್ನು ಸೇರಿಸಬೇಕು ಎಂದು ಶಿಫಾರಸು ಮಾಡಿತು.      

ರಾಜ್ಯದಲ್ಲೂ ಕೇಳಿದ ಕೂಗು

ನೆರೆಯ ಆಂಧ್ರದ ಮಾದಿಗ ದಂಡೋರಾದ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಮಾದಿಗರು ಒಳಮೀಸಲಾತಿ ಹೋರಾಟ ಆರಂಭಿಸಿದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೋರಾಟ ತೀವ್ರಗೊಂಡಿತ್ತು. ಕೊನೆಗೆ, ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕರ್ನಾಟಕ ಸರ್ಕಾರವು ಆಯೋಗವೊಂದನ್ನು ರಚಿಸಿತು. ಮೊದಲು ನ್ಯಾ.ಎನ್‌.ವೈ. ಹನುಮಂತಪ್ಪ ಮತ್ತು ನಂತರ ನ್ಯಾ.ಎಚ್‌.ಜಿ.ಬಾಲಕೃಷ್ಣ ಅಧ್ಯಕ್ಷರಾಗಿ ನೇಮಕವಾದರೂ ಕಾರಣಾಂತರಗಳಿಂದ ಆಯೋಗದ ಕೆಲಸ ಆರಂಭವಾಗಲಿಲ್ಲ. 2005ರಲ್ಲಿ ಅಧ್ಯಕ್ಷರಾಗಿ ಎ.ಜೆ.ಸದಾಶಿವ ನೇಮಕವಾದ ನಂತರ ಆಯೋಗ ಕಾರ್ಯಾರಂಭ ಮಾಡಿತು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳಿವೆ.

ಅವುಗಳಲ್ಲಿ ಮಾದಿಗರಂತಹ ಅಸ್ಪೃಶ್ಯ ಜಾತಿಗಳ ಜತೆಗೆ ಭೋವಿ, ಲಂಬಾಣಿ, ಕೊರಚ, ಕೊರಮ ಮುಂತಾದ ಹಲವು ಸ್ಪಶ್ಯ ಜಾತಿಗಳೂ ಇವೆ. ಸ್ಪೃಶ್ಯರಾದರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅವರ ಸ್ಥಿತಿ ಅಸ್ಪೃಶ್ಯರಂತೆಯೇ ಇದೆ ಎಂದು ಮೈಸೂರು ಮಹಾರಾಜರ ಕಾಲದಲ್ಲೇ ಅವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸ್ವಾತಂತ್ರ್ಯಾನಂತರವೂ ಅದೇ ಪಟ್ಟಿ ಮುಂದುವರಿಯುತ್ತಿದೆ. 

ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ತೀವ್ರಗೊಂಡಾಗ ನ್ಯಾ. ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು 2019ರಲ್ಲಿ ಬಿಜೆಪಿ ಸರ್ಕಾರ ರಚಿಸಿತು. ಅದರ ವರದಿ ಆಧಾರದ ಮೇಲೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ‍ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಕಾನೂನು ತೊಡಕಿನಿಂದ ಅದು ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿಲ್ಲ.

‍ಪಕ್ಷಗಳಿಗೆ ರಾಜಕೀಯ ದಾಳ

ಪರಿಶಿಷ್ಟ ಜಾತಿಗಳ ಮೀಸಲಾತಿಯ ವಿಚಾರವನ್ನು ರಾಜಕೀಯ ಪಕ್ಷಗಳು ಒಂದು ದಾಳವಾಗಿ ಬಳಸುತ್ತಾ ಬಂದಿವೆ. ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯು 2008–2013ರ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರದ ಕೈಸೇರಿತ್ತು. ವರದಿ ಸ್ವೀಕರಿಸಿದ ಬಿಜೆಪಿ, ಈ ಬಗ್ಗೆ ಯಾವುದೇ ಕ್ರಮ ಜರುಗಿಸಲಿಲ್ಲ. ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಂದೆ ವರದಿ ಜಾರಿಯ ಪ್ರಶ್ನೆ ಉದ್ಭವಿಸಿತ್ತು. ಸಿದ್ದರಾಮಯ್ಯನವರಿಗೆ ವೈಯಕ್ತಿಕವಾಗಿ ಮನಸ್ಸಿದ್ದರೂ ಸಚಿವ ಸಂಪುಟ ಹಾಗೂ ‍ಪಕ್ಷದ ಶಾಸಕರ ವಿರೋಧದಿಂದಾಗಿ ಅದನ್ನು ಅನುಷ್ಠಾನ ಮಾಡಲಿಲ್ಲ.

ಪರಿಶಿಷ್ಟ ಜಾತಿಗೆ ಕಾಂಗ್ರೆಸ್‌ ಒಳ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕೆ 2018ರ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಮಾದಿಗ (ಎಡಗೈ) ಸಮುದಾಯದವರು ಬಿಜೆಪಿ ಜತೆ ಹೋಗಿದ್ದರು. ಇದರಿಂದ ಕಾಂಗ್ರೆಸ್ ಹೊಡೆತ ತಿಂದಿತ್ತು. ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ, ಈ ವಿಷಯದಲ್ಲಿ ಗಟ್ಟಿ ನಿರ್ಧಾರವನ್ನೇನೂ ತೆಗೆದುಕೊಳ್ಳಲಿಲ್ಲ. ಹೀಗಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.

2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುತ್ತಿದ್ದಂತೆಯೇ, ಸದಾಶಿವ ಆಯೋಗದ ವರದಿ ಜಾರಿಯ ಬೇಡಿಕೆ ಮತ್ತೆ ಮುಂಚೂಣಿಗೆ ಬಂತು. 2024ರ ಲೋಕಸಭೆ ಚುನಾವಣೆ ವೇಳೆಗೆ ಈ ವಿಷಯ ಮುನ್ನೆಲೆಗೆ ಬರಬಹುದೆಂಬ ಮುನ್ಸೂಚನೆ ಇದ್ದುದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ವಿಷಯವನ್ನು ಕೇಂದ್ರದ ಹೆಗಲಿಗೆ ದಾಟಿಸಿದ್ದರು. ಈಗ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಅದು ಮತ್ತೆ ರಾಜ್ಯಗಳ ಅಂಗಳಕ್ಕೆ ಬಂದು ನಿಂತಿದೆ.

ಸಂವಿಧಾನ ತಿದ್ದುಪಡಿಗೆ ಕಾಂಗ್ರೆಸ್ ಸರ್ಕಾರ ಶಿಫಾರಸು

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಕೂಗು ಕಾಂಗ್ರೆಸ್‌ ಪಕ್ಷದ ಒಳಗೂ ಕೇಳಿ ಬಂದಿದ್ದರಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರ್ಷಾರಂಭದಲ್ಲಿ ಒಳಮೀಸಲಾತಿ ಕಲ್ಪಿಸಲು ಸಂವಿಧಾನದ 341ನೇ ವಿಧಿಗೆ ಮೂರನೇ ಸೆಕ್ಷನ್‌ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

341(3) ವಿಧಿ: ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣದ ಬಗ್ಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ರಾಷ್ಟ್ರೀಯ ಆಯೋಗವು ಸಂವಿಧಾನದ ವಿಧಿ 341ರಲ್ಲಿ ಹೊಸತಾಗಿ (3)ನೇ ಸೆಕ್ಷನ್‌ ಸೇರಿಸುವ ಕುರಿತಂತೆ ಶಿಫಾರಸು ಮಾಡಿದೆ. ಅದನ್ನು ಯಥಾವತ್‌ ಸೇರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. 

341(1)ನೇ ವಿಧಿಯಲ್ಲಿ ಅಧಿಸೂಚಿಸಲಾದ ಅಥವಾ 341(2)ನೇ ವಿಧಿಯ ಪ್ರಕಾರ ಸಂಸತ್ತು ರೂಪಿಸಿದ ಪಟ್ಟಿಯಲ್ಲಿರುವ ಯಾವುದೇ ಜಾತಿ, ಜನಾಂಗ ಅಥವಾ ಬುಡಕಟ್ಟು ಅಥವಾ ಜನರ ಗುಂಪುಗಳಿಗೆ ಸಂಬಂಧಿಸಿದಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ನೀಡಿದ ಶಿಫಾರಸಿನ ಆಧಾರದಲ್ಲಿ ಉಪ ವರ್ಗೀಕರಣ ಮಾಡಲು ಅಥವಾ ಉಪ ವರ್ಗೀಕರಣವನ್ನು ತೆಗೆದುಹಾಕಲು 341(3) ವಿಧಿಯು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸುತ್ತದೆ. 

ಸದಾಶಿವ ವರದಿ ಅಪ್ರಸ್ತುತ ಎಂದಿದ್ದ ಬೊಮ್ಮಾಯಿ ಸರ್ಕಾರ

ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ' ಮುಸ್ಲಿಮರಿಗಿದ್ದ ಶೇ 4ರಷ್ಟು ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರದ್ದುಪಡಿಸಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಹೆಚ್ಚಳ ಮಾಡಿತು. ಒಳಮೀಸಲಾತಿಯನ್ನೂ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು 2023ರ ಮಾರ್ಚ್‌ 24ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು. 

ಒಳಮೀಸಲಾತಿ ಬಗ್ಗೆ ಚರ್ಚಿಸಿ ಶಿಫಾರಸು ಮಾಡಲು ರಚಿಸಿದ್ದ ಸಂಪುಟ ಉಪಸಮಿತಿಯು 2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಶೇಕಡವಾರು ಮೀಸಲಾತಿ ನಿಗದಿಪಡಿಸಿ ಸಚಿವ ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಅನುಮೋದನೆ ನೀಡಿದ್ದ ಸರ್ಕಾರ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಈಗ ‘ಅಪ್ರಸ್ತುತ’ ಎಂದು ಉಲ್ಲೇಖಿಸಿತ್ತು.

ಸಚಿವ ಸಂಪುಟ ಸಭೆ ನೀಡಿದ್ದ ಅನುಮೋದನೆಯಂತೆ ಸಮಾಜ ಕಲ್ಯಾಣ ಇಲಾಖೆಯು 2023ರ ಮಾರ್ಚ್‌ 27ರಂದು ‘ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳು ಇನ್ನು ಮುಂದೆ ಅಪ್ರಸ್ತುತ’ ಎಂಬ ಆದೇಶವನ್ನೂ ಹೊರಡಿಸಿತ್ತು.

ಒಳ ಮೀಸಲಾತಿ ಅಗತ್ಯ ಪ್ರತಿಪಾದಿಸಿದ್ದ ನ್ಯಾ. ಸದಾಶಿವ ಆಯೋಗ

ಪರಿಶಿಷ್ಟ ಜಾತಿಗಳಲ್ಲಿ ಕೆಲವು ಉಪಜಾತಿಗಳು ಒಳಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿದ್ದ ಹೋರಾಟದ ನಡುವೆಯೇ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಸ್ಥಿತಿಗತಿ ಮತ್ತು ಸಂವಿಧಾನದ 15 ಮತ್ತು 16ನೇ ಕಲಂಗಳು ಪರಿಶಿಷ್ಟ ಜಾತಿಗೆ ನೀಡಿರುವ ಮೀಸಲಾತಿ ಸೌಲಭ್ಯ ಎಲ್ಲ ಸಮುದಾಯಗಳಿಗೆ ಸಮನಾಗಿ ಸಿಗುತ್ತಿದೆಯೇ ಎಂಬುದನ್ನು ಅಧ್ಯಯನ ಮಾಡಿ, ವರದಿ ನೀಡಲು 2005ರ ಸೆಪ್ಟೆಂಬರ್‌ 24ರಂದು ಎನ್‌.ಧರಂ ಸಿಂಗ್‌ ನೇತೃತ್ವದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಿ ಅಧಿಸೂಚನೆ ಹೊರಡಿಸಿತ್ತು. 

2007ರ ಏಪ್ರಿಲ್‌ವರೆಗೂ ಸದಾಶಿವ ಅವರೊಬ್ಬರೇ ಆಯೋಗದಲ್ಲಿದ್ದರು. ನಂತರ ಆಯೋಗಕ್ಕೆ ಕಾರ್ಯದರ್ಶಿ ಮತ್ತು ಉಸ್ತುವಾರಿ ಸಮಿತಿಯ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ 101 ಜಾತಿಗಳ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯನ್ನು ಆಯೋಗ ಮಾಡಿತ್ತು. ಅದಕ್ಕಾಗಿ ಸಮುದಾಯ, ಸಂಘಟನೆಗಳು, ಮುಖಂಡರು, ತಜ್ಞರು ಸೇರಿದಂತೆ ಹಲವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿತ್ತು. ಮೀಸಲಾತಿಗೆ ಸಂಬಂಧಿಸಿದಂತೆ ಹಿಂದೆ ರಚಿಸಲಾಗಿದ್ದ ಆಯೋಗಗಳು, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನೂ ಅಧ್ಯಯನ ನಡೆಸಿತ್ತು.  2012ರ ಜೂನ್‌ 12ರಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿತ್ತು. 

ನ್ಯಾ. ಎ.ಜೆ.ಸದಾಶಿವ ಅವರು 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿದ ಸಂದರ್ಭದ ಚಿತ್ರ. ಅಂದು ಸಚಿವರಾಗಿದ್ದ ಎ.ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ ಚಿತ್ರದಲ್ಲಿದ್ದಾರೆ

ಆಧಾರ: ಡಿಜಿಟಲ್ ಸಂಸತ್, ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ, ಎಸ್‌ಟಿ ರಾಷ್ಟ್ರೀಯ ಆಯೋಗ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.