ADVERTISEMENT

ಆಳ–ಅಗಲ | ‘ದೇವರ ನಾಡ’ಲ್ಲಿ ಆತಂಕ ತಂದ ‘ಮಿದುಳು ತಿನ್ನುವ ಅಮೀಬಾ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 23:46 IST
Last Updated 8 ಜುಲೈ 2024, 23:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
‘ಮಿದುಳು ತಿನ್ನುವ ಅಮೀಬಾ’ ಸೋಂಕು ಎಂದು ಆಡು ಮಾತಿನಲ್ಲಿ ಕರೆಯಲಾಗುವ ಅಮೀಬಿಕ್‌ ಮೆನಿಂಗೊಎನ್ಸೆಫಲಿಟಿಸ್‌ ಎಂಬ ಕಾಯಿಲೆ ನೆರೆಯ ಕೇರಳ ರಾಜ್ಯದಲ್ಲಿ ಆತಂಕ ಉಂಟು ಮಾಡಿದೆ. ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಬಲು ಅಪರೂಪವಾದ ಈ ಕಾಯಿಲೆಗೆ ತುತ್ತಾದ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ. ಈ ಸೋಂಕು ಏನು? ಹೇಗೆ ಬರುತ್ತದೆ? ಜಾಗತಿಕ ಸ್ಥಿತಿ ಗತಿ ಏನು? ಅದರಿಂದ ಪಾರಾಗುವುದು ಹೇಗೆ ಮತ್ತಿತರ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ...

ಎರಡು ತಿಂಗಳ ಅವಧಿಯಲ್ಲಿ ಅ‍‍ಪರೂಪವಾದ ಮತ್ತು ಪ್ರಾಣಕ್ಕೆ ಎರವಾಗುವ ‘ಮಿದುಳು ತಿನ್ನುವ ಅಮೀಬಾ’ ಸೋಂಕಿಗೆ ಕೇರಳದಲ್ಲಿ ಮೂವರು ಮಕ್ಕಳು ಬಲಿಯಾಗಿದ್ದಾರೆ. ಇದೇ ಸೋಂಕಿನಿಂದ ಬಳಲುತ್ತಿರುವ ಮತ್ತೊಬ್ಬ ಬಾಲಕ ಕೋಯಿಕ್ಕೋಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಈ ಕಾಯಿಲೆಯ ವೈಜ್ಞಾನಿಕ ಹೆಸರು ಪ್ರೈಮರಿ ಅಮೀಬಿಕ್‌ ಮೆನಿಂಗೊಎನ್ಸೆಫಲಿಟಿಸ್‌ ( Primary Amoebic meningoencephalitis-PAM). ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅಮೀಬಾದಿಂದ (ಏಕಕೋಶ ಜೀವಿ) ಬರುವ ಈ ಕಾಯಿಲೆಯನ್ನು ಗೆದ್ದವರ ಸಂಖ್ಯೆ ಕ್ಷೀಣ.

ADVERTISEMENT

ಕೇರಳದಲ್ಲಿ ಈ ಸೋಂಕು ಹೊಸದಲ್ಲ. ಹಿಂದೆಯೂ ವರದಿಯಾಗಿವೆ. ಆದರೆ, ಕಡಿಮೆ ಅವಧಿಯಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿರಲಿಲ್ಲ.

ಮೇ 21ರಂದು ಮಲಪ್ಪುರಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಳು.‌ ಜೂನ್‌ 25ರಂದು ಕಣ್ಣೂರಿನಲ್ಲಿ 13 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಳು. ಜುಲೈ 3ರಂದು ಕೋಯಿಕ್ಕೋಡ್‌ನಲ್ಲಿ 14 ವರ್ಷದ ಬಾಲಕ ಸೋಂಕಿಗೆ ಬಲಿಯಾಗಿದ್ದ. 

ಕೋಯಿಕ್ಕೋಡ್‌ ಜಿಲ್ಲೆಯ ಪಯ್ಯೋಳಿಯ 14 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ನಾಲ್ಕು ಪ್ರಕರಣಗಳು ವರದಿಯಾಗುತ್ತಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದಾರೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯನ್ನೂ ವಹಿಸಿದೆ. ‌

ಕೇರಳದಲ್ಲೇ ಹೆಚ್ಚು ಪ್ರಕರಣ

ಕೇರಳದಲ್ಲಿ ಕಳೆದ ವರ್ಷವೂ ಈ ಕಾಯಿಲೆಗೆ 15 ವರ್ಷದ ಬಾಲಕ (ಅಳಪ್ಪುರ ಜಿಲ್ಲೆ) ಮೃತಪಟ್ಟಿದ್ದ. 2016ರಲ್ಲಿ ಅಳಪ್ಪುರ ಜಿಲ್ಲೆಯಲ್ಲಿ. 2019 ಮತ್ತು 2020ರಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ಮತ್ತು 2020ರಲ್ಲಿ ಕೋಯಿಕ್ಕೋಡ್‌ ಮತ್ತು 2022ರಲ್ಲಿ ತ್ರಿಶೂರ್‌ ಜಿಲ್ಲೆಯಲ್ಲಿ ಪ್ರಕರಣ ದೃಢಪಟ್ಟಿತ್ತು. 

ಕೇರಳದ ಪರಿಸರ ಮತ್ತು ವಾತಾವರಣವು ನೆಗ್ಲೇರಿಯಾ ಫೌಲೆರಿಯ ಬೆಳವಣಿಗೆಗೆ ಪೂರಕವಾಗಿರುವುದರಿಂದ ಈ ಕಾಯಿಲೆ ಹೆಚ್ಚು ವರದಿಯಾಗುತ್ತದೆ ಎಂದು ಹೇಳುತ್ತಾರೆ ತಜ್ಞರು. ರಾಜ್ಯದಲ್ಲಿರುವ ಹೆಚ್ಚು ಉಷ್ಣಾಂಶ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಅಮೀಬಾದ ಬೆಳವಣಿಗೆಗೆ ಹೇಳಿಮಾಡಿಸಿದಂತಿದೆ. ಮಳೆಗಾಲದಲ್ಲಿ ನದಿಗಳು, ಕೆರೆ, ಹಳ್ಳಗಳು ತುಂಬಿ ಹರಿಯುತ್ತವೆ. ಜನರು ನದಿ, ಕೆರೆ, ಹಳ್ಳಗಳಂತಹ ನೈಸರ್ಗಿಕ ಜಲಮೂಲಗಳನ್ನು ಸ್ನಾನ ಮಾಡಲು, ಬಟ್ಟೆ, ಪಾತ್ರೆ ತೊಳೆಯಲು ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ಚಟುವಟಿಕೆಗಳಿಗೆ ಬಳಸುತ್ತಾರೆ. ಹೀಗಾಗಿ ಕಲುಷಿತಗೊಂಡ ನೀರಿಗೆ ಜನರು ಹೆಚ್ಚು ತೆರೆದುಕೊಳ್ಳುತ್ತಾರೆ. ಇದು ಪ್ರಾಣ ಘಾತುಕವಾದ ಕಾಯಿಲೆಗೆ ಕಾರಣವಾಗುತ್ತದೆ. 

ಕೇರಳ ಬಿಟ್ಟರೆ, ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಕಾಯಿಲೆ ಹೆಚ್ಚು ವರದಿಯಾಗಿದೆ. ಈ ವರ್ಷಾರಂಭದಲ್ಲಿ ಕೋಲ್ಕತ್ತದಲ್ಲಿ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿತ್ತು. ಕಳೆದ ವರ್ಷವೂ ಒಬ್ಬ ಬಾಲಕ ಮೃತಪಟ್ಟಿದ್ದ. 2015ರಲ್ಲಿ ಬಾಲಕನೊಬ್ಬ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದ. 2016ರಲ್ಲಿ ಸೋಂಕಿಗೆ ತುತ್ತಾಗಿದ್ದ 16 ವರ್ಷದ ಬಾಲಕ ಗುಣಮುಖನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ. 

ಏನಿದು ‘ಮಿದುಳು ತಿನ್ನುವ ಅಮೀಬಾ’ ಸೋಂಕು?

ಮಿದುಳಿಗೆ ಹಾನಿ ಮಾಡುವಂತಹ ನೆಗ್ಲೇರಿಯಾ ಫೌಲೆರಿ ಎನ್ನುವ ಹೆಸರಿನ ಪರಾವಲಂಬಿ ಏಕಕೋಶ ಜೀವಿಯಿಂದ ಬರುವ ಸೋಂಕು. ಇದು ಸಾಮಾನ್ಯವಾಗಿ ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಅಭಿವೃದ್ಧಿ ಹೊಂದುತ್ತದೆ. ನಿರ್ವಹಣೆಯ ಕೊರತೆ ಇರುವ ಈಜುಕೊಳಗಳಲ್ಲಿಯೂ ಕಂಡುಬರುತ್ತದೆ. ಈಜಾಡುವಾಗ, ಮೇಲಿನಿಂದ ನೀರಿನೊಳಗೆ ಧುಮುಕಿದಾಗ ಮತ್ತು ಇತರ ಸಂದರ್ಭಗಳಲ್ಲಿ ಮೂಗಿನ ಮೂಲಕ ಮನುಷ್ಯನ ದೇಹ ಪ್ರವೇಶಿಸುವ ಈ ಜೀವಿ ಮಿದುಳು ಸೇರಿ ಗಂಭೀರ ಹಾಗೂ ಪ್ರಾಣಕ್ಕೆ ಕುತ್ತು ತರುವಂತಹ ಸೋಂಕಿಗೆ ಕಾರಣವಾಗುತ್ತದೆ. ಮಿದುಳಿನ ಜೀವಕೋಶಗಳಿಗೆ ಹಾನಿ ಮಾಡಿ, ಮಿದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳಲ್ಲಿನ ಉರಿಯೂತ ಮತ್ತು ಮಿದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ.

ಸೋಂಕಿತರಾದವರ ಪೈಕಿ ಶೇ 97 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಇದುವರೆಗಿನ ಅಂಕಿ ಅಂಶಗಳು ಹೇಳುತ್ತವೆ. ಸಾಮಾನ್ಯವಾಗಿ, ಸೋಂಕು ಕಾಣಿಸಿಕೊಂಡ ನಂತರದ 18 ದಿನಗಳ ಒಳಗೆ ಸಾವು ಸಂಭವಿಸುತ್ತಿರುವುದು ಇದುವರೆಗಿನ ಪ್ರಕರಣಗಳ ಸಾಮಾನ್ಯ ಲಕ್ಷಣವಾಗಿದೆ. 

ಸೋಂಕನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ, ಸೋಂಕಿತನ ಜೀವ ಉಳಿಸಲು ಸಾಧ್ಯವಾಗಬಹುದು. ದೇಹದಲ್ಲಿ ಸೋಂಕು ಅತ್ಯಂತ ವೇಗವಾಗಿ ವ್ಯಾಪಿಸುವ ಮೂಲಕ ನರಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಆಸ್ಟ್ರೇಲಿಯಾದಲ್ಲಿ ಪತ್ತೆ‌

ಈ ಸೋಂಕು ಮೊದಲು ಪತ್ತೆಯಾಗಿದ್ದು ಆಸ್ಟ್ರೇಲಿಯಾದಲ್ಲಿ. ಅಡಿಲೇಡ್‌ನಲ್ಲಿ 1961–65ರ ಅವಧಿಯಲ್ಲಿ ನಾಲ್ವರು ಈ ಕಾಯಿಲೆಯಿಂದ ಮೃತಪಟ್ಟಿದ್ದರು. ಫೌಲರ್‌ ಮತ್ತು ಕಾರ್ಟರ್‌ ಎಂಬುವವರು ಈ ಕಾಯಿಲೆಗೆ ಕಾರಣವಾಗುವ ನೆಗ್ಲೇರಿಯಾ ಫೌಲೆರಿ ಅಮೀಬಾವನ್ನು ಗುರುತಿಸಿದ್ದರು. 

ತಾಪಮಾನದ ಏರಿಕೆಯೂ ಕಾರಣ

ಜಗತ್ತಿನ ಹಲವೆಡೆ ‘ಮಿದುಳು ತಿನ್ನುವ ಅಮೀಬಾ’ ಸೋಂಕು ಕಾಣಿಸಿಕೊಂಡಿದೆ. ಮುಖ್ಯವಾಗಿ, ತಾಪಮಾನದ ಏರಿಕೆ, ನಿಂತ ಹಾಗೂ ಕಲುಷಿತ ನೀರು, ಜಲಮೂಲಗಳು ಕಲುಷಿತಗೊಳ್ಳುತ್ತಿರುವುದು ಅದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಅಮೀಬಾ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. 40ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿ ಇರುವ ನೀರಿನಲ್ಲೂ ಇದು ಬದುಕಬಲ್ಲದು. ಉಪ್ಪು ನೀರಿನಲ್ಲಿ ಇದು ಬದುಕುವುದಿಲ್ಲ.

ಮಕ್ಕಳಲ್ಲಿ ಹೆಚ್ಚು

ಈ ಕಾಯಿಲೆ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ಅದರಲ್ಲೂ 10ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ದೃಢಪಟ್ಟಿದೆ. ಆದರೆ, 5 ತಿಂಗಳ ಮಗುವಿನಿಂದ ಹಿಡಿದು (ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ವರ್ಷಗಳ ಹಿಂದೆ ವರದಿಯಾಗಿದೆ) ವೃದ್ಧರವರೆಗೂ ಇದು ಕಾಡಬಹುದು. 

ಈ ಸೋಂಕು ಸಾಂಕ್ರಾಮಿಕವಲ್ಲ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ ಹರಡುವುದಿಲ್ಲ. ಅಮೀಬಾ ಇರುವ ನೀರನ್ನು ಕುಡಿಯುವುದರಿಂದಲೂ ಹರಡುವುದಿಲ್ಲ.        

ರೋಗ ಲಕ್ಷಣಗಳು

ವೈರಲ್ ಜ್ವರದ ಲಕ್ಷಣಗಳು: ಜ್ವರ, ತಲೆ ನೋವು, ವಾಂತಿ, ಸುಸ್ತು, ಕುತ್ತಿಗೆ ನೋವು 

ನರಸಂಬಂಧಿ ಲಕ್ಷಣಗಳು: ತೀವ್ರ ತಲೆನೋವು, ಏಕಾಗ್ರತೆಯ ಕೊರತೆ, ಮಾನಸಿಕ ಅಸ್ಥಿರತೆ, ಗೊಂದಲ, ಭ್ರಮಾಧೀನ ಮನಸ್ಥಿತಿ, ಕೋಮಾಗೆ ಜಾರುವುದು

ರೋಗ ಪತ್ತೆ ಹೇಗೆ?

ರೋಗವು 3ರಿಂದ 7 ದಿನಗಳಲ್ಲಿ ಪಕ್ವ ಸ್ಥಿತಿ ಮುಟ್ಟುತ್ತದೆ     

ಸೋಂಕಿತನ ಸೂಕ್ಷ್ಮ ಪರಿಶೀಲನೆ, ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅನಾಲಿಸಿಸ್ (ಸಿಎಸ್‌ಎಫ್) (ಬೆನ್ನುಹುರಿಯಲ್ಲಿನ ದ್ರವದ ಪರೀಕ್ಷೆ), ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್‌) ಮುಂತಾದ ವಿಧಾನಗಳ ಮೂಲಕ ರೋಗ ಪತ್ತೆ ಮಾಡಲಾಗುತ್ತದೆ.

ಮುನ್ನೆಚ್ಚರಿಕೆಗಳೇನು?

  • ಕೆರೆ, ಕುಂಟೆ, ನದಿಗಳಲ್ಲಿ ಸ್ನಾನ ಮಾಡಬಾರದು 

  • ನೀರಿಗೆ ಧುಮುಕಬಾರದು 

  • ಕ್ಲೋರಿನ್‌ ಬಳಸಿ ನೀರಿನ ಥೀಮ್ ಪಾರ್ಕ್ ಮತ್ತು ಈಜು ಕೊಳಗಳನ್ನು ಶುಚಿಗೊಳಿಸುತ್ತಿರಬೇಕು

  • ಈಜಾಡುವ ಮಕ್ಕಳು ಮೂಗಿಗೆ ಕ್ಲಿಪ್ ಬಳಸುವುದು ಉತ್ತಮ

  • ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಲು ಕುದಿಸಿ ಆರಿಸಿದ ನೀರು ಬಳಕೆ 

ಜಾಗತಿಕ ಚಿತ್ರಣ

ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ನ್ಯಾಷನಲ್‌ ಲೈಬ್ರೆರಿ ಆಫ್‌ ಮೆಡಿಸಿನ್‌ ಪೋರ್ಟಲ್‌ನಲ್ಲಿ ಈ ಕಾಯಿಲೆಗೆ ಸಂಬಂಧಿಸಿದಂತೆ ಕೆಲವು ಅಧ್ಯಯನ ವರದಿಗಳು ಪ್ರಕಟವಾಗಿವೆ. ಈ ಸೋಂಕಿನ ಕುರಿತು ಜಾಗತಿಕ ಚಿತ್ರಣದ ಬಗ್ಗೆ ವಿಶ್ಲೇಷಣೆಯೂ ಇದೆ. ಅದರಲ್ಲಿ 2018ರವರೆಗಿನ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. 2020ರಲ್ಲಿ ಈ ವರದಿ ಪ್ರಕಟವಾಗಿದೆ. 

ಅದರ ಪ್ರಕಾರ, ಅಂಟಾರ್ಕ್ಟಿಕಾ ಬಿಟ್ಟು ಉಳಿದ ಖಂಡಗಳ 33 ರಾಷ್ಟ್ರಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಅಮೆರಿಕದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದೃಢಪಟ್ಟಿವೆ. 

ವರದಿಯಲ್ಲಿ 381 ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ 182 ಪ್ರಕರಣಗಳನ್ನು ದೃಢಪಡಿಸಲಾಗಿದೆ. 89 ಪ್ರಕರಣಗಳನ್ನು ಸಂಭಾವ್ಯ ಮತ್ತು 110 ಪ್ರಕರಣಗಳನ್ನು ಶಂಕಿತ ಎಂದು ಗುರುತಿಸಲಾಗಿದೆ. 381 ಸೋಂಕಿನ ಪ್ರಕರಣಗಳಲ್ಲಿ ಅಮೆರಿಕದಲ್ಲಿ 156, ಮೆಕ್ಸಿಕೊದಲ್ಲಿ 33, ಪಾಕಿಸ್ತಾನದಲ್ಲಿ 41, ಭಾರತದಲ್ಲಿ 26 ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿದೆ.

ಆಧಾರ: ಪಿಟಿಐ, ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ನ್ಯಾಷನಲ್‌ ಲೈಬ್ರೆರಿ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಗಳು, ಆಸ್ಟ್ರೇಲಿಯಾ ಆರೋಗ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.