ADVERTISEMENT

ಆಳ–ಅಗಲ: ಏಡನ್‌ ಕೊಲ್ಲಿಯಲ್ಲಿ ಹಡಗುಗಳ ಮೇಲೆ ದಾಳಿ; ಭಾರತಕ್ಕೂ ತಟ್ಟಿದೆ ಬಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 21:00 IST
Last Updated 18 ಜನವರಿ 2024, 21:00 IST
<div class="paragraphs"><p>ಅರಬ್ಬಿ ಸಮುದ್ರದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಹಾಗೂ ಕೆಂಪು ಸಮುದ್ರದಲ್ಲಿ ಭಾರತೀಯ ನೌಕಾ ಪಡೆಯ ನೌಕೆಗಳ ಗಸ್ತು</p></div>

ಅರಬ್ಬಿ ಸಮುದ್ರದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಹಾಗೂ ಕೆಂಪು ಸಮುದ್ರದಲ್ಲಿ ಭಾರತೀಯ ನೌಕಾ ಪಡೆಯ ನೌಕೆಗಳ ಗಸ್ತು

   

 –ಪಿಟಿಐ ಚಿತ್ರ

ಕೆಂಪು ಸಮುದ್ರ ಮತ್ತು ಏಡನ್‌ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ಡ್ರೋನ್‌ ದಾಳಿಯು ಜಾಗತಿಕ ವಾಣಿಜ್ಯ ವಹಿವಾಟನ್ನು ಬಾಧಿಸಿದೆ. ಸರಕು ಸಾಗಣೆ ಹಡಗು ಕಂಪನಿಗಳು ಈ ಮಾರ್ಗವನ್ನು ಸದ್ಯದ ಮಟ್ಟಿಗೆ ತೊರೆದಿವೆ. ಅನ್ಯ ಮಾರ್ಗದ ಮೂಲಕ ಸಾಗಣೆ ನಡೆಸುತ್ತಿರುವ ಕಾರಣ ಸಾಗಣೆ ವೆಚ್ಚ ಏರಿಕೆಯಾಗಿದೆ. ಹಲವು ದೇಶಗಳ ರಫ್ತು ವ್ಯಾಪಾರವೂ ಕುಸಿದಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ

ADVERTISEMENT

ಕೆಂಪು ಸಮುದ್ರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣವು ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅಮೆರಿಕ ಹಾಗೂ ಐರೋಪ್ಯ ದೇಶಗಳಿಗೆ ಭಾರತವು ಸುಯೇಜ್‌ ಕಾಲುವೆ ಮೂಲಕವಾಗಿ ರಫ್ತು ನಡೆಸುತ್ತಿತ್ತು. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡುಗಳ ಮೇಲೆ ನಡೆಯುತ್ತಿರುವ ದಾಳಿಯ ಕಾರಣದಿಂದಾಗಿ ಭಾರತದ ರಫ್ತು ವೆಚ್ಚವು ಎರಡು ಪಟ್ಟು ಅಧಿಕಗೊಂಡಿದೆ. 

ಭಾರತ, ಸಿಂಗಪುರ ಸೇರಿದಂತೆ ಪೂರ್ವದ ಹಲವು ದೇಶಗಳು ತಮ್ಮ ಹಡಗು ಮಾರ್ಗವನ್ನು ಕೆಂಪು ಸಮುದ್ರದಿಂದ ದಕ್ಷಿಣ ಆಫ್ರಿಕಾದ ಕೇಪ್‌ ಆಫ್‌ ಗುಡ್‌ಹೋಪ್‌ ಮಾರ್ಗಕ್ಕೆ ಬದಲಾಯಿಸಿಕೊಂಡಿವೆ. ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳ ಹಡಗುಗಳು ಅಮೆರಿಕ ಅಥವಾ ಐರೋಪ್ಯ ದೇಶಗಳನ್ನು ತಲುಪುಲು ಇದು ಅತೀ ಉದ್ದದ ಮಾರ್ಗ. ಈ ಮೊದಲು ಕೋಲ್ಕತ್ತಾದಿಂದ ಒಂದು ಹಡಗು ನೆದರ್‌ಲೆಂಡ್ಸ್‌ಗೆ ಹೊರಟರೆ, ಕೆಂಪು ಸಮುದ್ರದ ಮೂಲಕ 24–26 ದಿನ ಪ್ರಯಾಣಿಸಬೇಕಿತ್ತು. ಆದರೆ ಈಗ ಆಫ್ರಿಕಾವನ್ನು ಬಳಸಿಕೊಂಡು ಕೇಪ್‌ ಆಫ್ ಗುಡ್ ಹೋಪ್‌ ಮಾರ್ಗದ ಮೂಲಕ ಹೋಗುವುದಾದರೆ 38–40 ದಿನ ಬೇಕಾಗುತ್ತದೆ. ಆದ್ದರಿಂದ, ಭಾರತದಿಂದ ಐರೋಪ್ಯ ದೇಶಗಳಿಗೆ ತಲುಪುವ ಪ್ರಯಾಣದ ದಿನಗಳು 14–20 ದಿನಗಳು ಹೆಚ್ಚಲಿವೆ. ಇದೇ ಕಾರಣಕ್ಕೆ ವೆಚ್ಚವೂ ಏರಿಕೆಯಾಗಲಿದೆ. ಈ ಹೆಚ್ಚುವರಿ ಅವಧಿಯ ಹೆಚ್ಚುವರಿ ವೆಚ್ಚವನ್ನು ಅಂತಿಮವಾಗಿ ಗ್ರಾಹಕನೇ ಭರಿಸಬೇಕಾಗುತ್ತದೆ. 

ಐರೋಪ್ಯ ದೇಶಗಳಿಗೆ ಹಾಗೂ ಅಮೆರಿಕಕ್ಕೆ ಭಾರತವು ಮಾಡುವ ಒಟ್ಟು ರಫ್ತಿನಲ್ಲಿ ಶೇ 80ರಷ್ಟು ಪ್ರಮಾಣವನ್ನು ಸುಯೇಜ್‌ ಕಾಲುವೆ ಮೂಲಕವೇ ಸಾಗುತ್ತದೆ. ಭಾರತವು ತನ್ನ ಒಟ್ಟು ರಫ್ತಿನಲ್ಲಿ ಶೇ 34ರಷ್ಟನ್ನು ಅಮೆರಿಕ ಹಾಗೂ ಐರೋಪ್ಯ ದೇಶಗಳಿಗೆ ಮಾಡುತ್ತದೆ. ಭಾರತದಿಂದ ಐರೋಪ್ಯ ದೇಶಗಳಿಗೆ ಹಡಗಿನ ಮೂಲಕ 20 ಅಡಿ ಉದ್ದದ ಒಂದು ಕಂಟೇನರ್‌ ಅನ್ನು ರವಾನೆ ಮಾಡಲು ಈ ಮೊದಲು (2023ರ ಅಕ್ಟೋಬರ್‌) ₹50 ಸಾವಿರ ಬೇಕಾಗುತ್ತಿತ್ತು. ಆದರೆ, ಈಗ ಈ ಮೊತ್ತವು ₹1.30 ಲಕ್ಷಕ್ಕೆ ಏರಿಕೆಯಾಗಿದೆ. ದೂರದ ಮಾರ್ಗದ ಹೆಚ್ಚುವರಿ ವೆಚ್ಚ ಮಾತ್ರವಲ್ಲದೆ, ಸರಕುಗಳ ಮೇಲೆ ವಿಮೆ ಕಂಪನಿಗಳು ಹೆಚ್ಚಿನ ಪ್ರೀಮಿಯಂ ವಿಧಿಸುತ್ತಿರುವುದೂ ವೆಚ್ಚ ಏರಿಕೆಗೆ ಕಾರಣ. 

ವೆಚ್ಚ ಏರಿಕೆಯ ಕಾರಣದಿಂದ ರಫ್ತು ಭಾರತದಿಂದಾಗುವ ರಫ್ತು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2023ರ ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಭಾರತದಿಂದ ಐರೋಪ್ಯ ದೇಶಗಳತ್ತ ಮತ್ತು ಅಮೆರಿಕದತ್ತ ಸುಯೇಜ್‌ ಕಾಲುವೆ ಮೂಲಕ ರವಾನೆಯಾದ ಕಂಟೇನರ್‌ ಹಡಗುಗಳ ಪ್ರಮಾಣ ಶೇ 9ರಷ್ಟು ಇಳಿಕೆಯಾಗಿದೆ. ಡಿಸೆಂಬರ್‌ಗೆ ಹೋಲಿಸಿದರೆ, ಜನವರಿಯಲ್ಲಿಯೂ ಈ ಪ್ರಮಾಣ ಶೇ 1.2ರಷ್ಟು ಕಡಿಮೆಯಾಗಿದೆ.

ಭಾರತದಿಂದ ಐರೋಪ್ಯ ದೇಶಗಳಿಗೆ ಪ್ರಮುಖವಾಗಿ ಜವಳಿ, ಔಷಧ, ಮಸಾಲೆ ಪದಾರ್ಥಗಳು ರಫ್ತಾಗುತ್ತವೆ. ದಕ್ಷಿಣ ಆಫ್ರಿಕಾದ ಮೂಲಕ ಸಾಗಣೆ ನಡೆಯುತ್ತಿರುವುದಿಂದ ಈ ವಸ್ತುಗಳು ಐರೋಪ್ಯ ದೇಶಗಳಿಗೆ ತಲುಪುವುದು ತಡವಾಗುತ್ತಿದೆ. ಇದರಿಂದ ಆ ದೇಶಗಳಲ್ಲಿ ಭಾರತದ ಈ ವಸ್ತುಗಳ ಬೇಡಿಕೆಯು ಕಡಿಮೆಯಾಗಲಿದೆ. ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಭಾರತದಲ್ಲಿ ಈ ವಸ್ತುಗಳ ಉತ್ಪಾದನೆಗೆ ಹೊಡೆತ ಬೀಳಲಿದೆ. ಈ ಹೊಡೆತವು ಕಡಿಮೆ ಅವಧಿಗೆ ಪರಿಣಾಮ ಬೀರಬಹುದು ನಿಜ. ಆದರೆ, ಈ ಹೊಡೆತದಿಂದ ಹೊರಬರಲಿಕ್ಕೆ ಹಲವು ತಿಂಗಳುಗಳು ಬೇಕಾಗಬಹುದು ಎನ್ನುತ್ತಾರೆ ರಫ್ತು ತಜ್ಞರು.

ಕಂಟೇನರ್‌ಗಳನ್ನು ಹೊತ್ತ ಸರಕು ಸಾಗಣೆ ಹಡಗು

‘ಭಾರತದ ಸರಕುಗಳು ಇತರ ದೇಶಗಳನ್ನು ತಲುಪುವುದು ತಡವಾಗುತ್ತಿದೆ ಹಾಗೂ ಹಡಗಿನ ವೆಚ್ಚವು ಏರಿಕೆಯಾಗಿದೆ. ಪರಿಣಾಮವಾಗಿ ರಫ್ತೇ ಕಡಿಮೆಯಾಗಬಹುದು. ಇದರಿಂದಾಗಿ 2023–24 ಆರ್ಥಿಕ ವರ್ಷದ ಮಾರ್ಚ್‌ ಹೊತ್ತಿಗೆ ಭಾರತದ ರಫ್ತು ಮೊತ್ತದಲ್ಲಿ ಅಂದಾಜು ₹83,000 ಕೋಟಿಯಷ್ಟು ನಷ್ಟವಾಗಬಹುದು’ ಎಂದು ಎಂಜಿನಿಯರ್‌ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಅರುಣ್‌ ಕುಮಾರ್‌ ಗರೋಡಿಯಾ ಅವರು ಅಂದಾಜಿಸಿದ್ದಾರೆ.

ಸರಕು ಸಾಗಣೆ ವೆಚ್ಚ ಏರಿಕೆ: ‘//ಸರಕು ಸಾಗಣೆ ವೆಚ್ಚ ಹೆಚ್ಚಿಸುವ ಕುರಿತು ಹಡಗಿನ ಮೂಲಕ ಸಾಗಣೆ ನಡೆಸುವ ಕಂಪನಿಗಳು// ಬೆದರಿಕೆ ಒಡ್ಡುತ್ತಿವೆ’ ಎಂದು ಅರುಣ್‌ ಕುಮಾರ್‌ ಗರೋಡಿಯಾ ಈ ಹಿಂದೆ ಹೇಳಿದ್ದರು. ಈಗ ಸರಕು ಸಾಗಣೆ ವೆಚ್ಚವು ಶೇ 600ರಷ್ಟು ಏರಿಕೆಯಾಗಿದೆ. 40 ಅಡಿ ಉದ್ದದ ಒಂದು ಕಂಟೇನರ್‌ ಅನ್ನು ಕೋಲ್ಕತ್ತದಿಂದ ನೆದರ್‌ಲೆಂಡ್ಸ್‌ನ ರಾಟರ್‌ಡ್ಯಾಮ್‌ಗೆ ಸಾಗಿಸಲು ತಗಲುವ ವೆಚ್ಚವು ಅಂದಾಜು ₹60,000ದಿಂದ ₹3.32 ಲಕ್ಷಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಭಾರತ ಸರ್ಕಾರವು ಗಮನಹರಿಸಿದ್ದು. ಹಣಕಾಸು ಸಚಿವಾಲಯ, ವಾಣಿಜ್ಯ ಸಚಿವಾಲಯ ಸೇರಿದಂತೆ ಇತರ ಸಂಬಂಧಪಟ್ಟ ಸಚಿವಾಲಯಗಳ ಮಧ್ಯೆ ಸರಣಿ ಸಭೆಗಳು ನಡೆಯುತ್ತಿವೆ.

ಆಧಾರ: ರಾಯಿಟರ್ಸ್‌, ಕೀಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫಾರ್ ವರ್ಲ್ಡ್‌ ಎಕಾನಮಿ ವರದಿಗಳು, ಎಎಫ್‌ಪಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.