ಜಮ್ಮುವಿನ ಡೋಡಾದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಕಳೆದ ವಾರವಷ್ಟೇ ಕಠುವಾ ಜಿಲ್ಲೆಯಲ್ಲಿ ಐವರು ಯೋಧರು ಪ್ರಾಣತೆತ್ತಿದ್ದರು. ಬಹುತೇಕ ಶಾಂತಿಯುತವಾಗಿದ್ದ ಜಮ್ಮುವಿನಲ್ಲಿ ಇತ್ತೀಚೆಗೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಹೊಸ ಕಾರ್ಯತಂತ್ರದೊಂದಿಗೆ ದಾಳಿ ಮಾಡುತ್ತಿರುವ ಉಗ್ರರ ಸದೆಬಡಿಯುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಜಮ್ಮುವಿನಲ್ಲಿ ಯಶಸ್ಸು ಸಿಕ್ಕಿಲ್ಲ
‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟ ಕೊನೆಯ ಹಂತದಲ್ಲಿದೆ. ನಾವು ಈ ವಿಚಾರದಲ್ಲಿ ಬಹುಸ್ತರದ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದು, ಅಳಿದುಳಿದ ಉಗ್ರ ಜಾಲವನ್ನು ನಾಶಪಡಿಸಲಾಗುವುದು. ಜಮ್ಮು–ಕಾಶ್ಮೀರದ ಜನರಲ್ಲಿ ಭಯ ಮತ್ತು ಪ್ರತ್ಯೇಕತಾವಾದ ಕೊನೆಗೊಳ್ಳುತ್ತಿದೆ...’
– ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವಾರಗಳ ಹಿಂದೆ ರಾಜ್ಯಸಭೆಯಲ್ಲಿ ಹೇಳಿದ ಮಾತಿದು.
ಆದರೆ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಅಂಕಿ ಅಂಶಗಳು ಮತ್ತು ವರದಿಗಳು ಇದಕ್ಕೆ ವ್ಯತಿರಿಕ್ತವಾದ ಕಥನವನ್ನು ಹೇಳುತ್ತಿವೆ.
ಕೆಲವು ವರ್ಷಗಳವರೆಗೂ ಉಗ್ರರು ನಡೆಸಿದ್ದ ದಾಳಿಗಳು ಕಾಶ್ಮೀರ ಕಣಿವೆಯನ್ನೇ ಗುರಿಯಾಗಿಸಿಕೊಂಡಿದ್ದವು. ಜಮ್ಮು ಪ್ರಾಂತ್ಯದಲ್ಲಿ ಶಾಂತಿ ನೆಲೆಸಿತ್ತು. ಆದರೆ, ಇತ್ತೀಚೆಗೆ ಇಲ್ಲೂ ಭಯೋತ್ಪಾದನಾ ಕೃತ್ಯಗಳು ಜಾಸ್ತಿಯಾಗಿವೆ. ಈ ವರ್ಷದ ಮೊದಲ ಏಳು ತಿಂಗಳ ಅಂಕಿ ಅಂಶಗಳು ಇದನ್ನು ಹೇಳುತ್ತವೆ. ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ಪೂಂಛ್, ರಾಜೌರಿ, ದೋಡಾ, ರಿಯಾಸಿ ಜಿಲ್ಲೆಗಳಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ದಟ್ಟ ಕಾಡಿನಲ್ಲಿ, ಕಡಿದಾದ ಪ್ರದೇಶದಲ್ಲಿ ಅವಿತು ಕುಳಿತಿರುವ ಉಗ್ರರು ಹೊಂಚು ಹಾಕಿ ಭದ್ರತಾ ಪಡೆಗಳು, ಪ್ರವಾಸಿಗರು, ನಾಗರಿಕರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಾರೆ.
ಪೂಂಛ್ ಜಿಲ್ಲೆಯಲ್ಲಿ ಮೇ 4ರಂದು ವಾಯುಸೇನೆಯ ಬೆಂಗಾವಲು ಪಡೆ ಮೇಲೆ ನಡೆದ ದಾಳಿ, ರಿಯಾಸಿಯಲ್ಲಿ ಜೂನ್ 9ರಂದು ತೀರ್ಥಯಾತ್ರಿಕರ ಬಸ್ ಮೇಲೆ ನಡೆದ ದಾಳಿ ಮತ್ತು ವಾರದ ಹಿಂದೆ ಕಠುವಾದಲ್ಲಿ ಸೈನಿಕರ ಮೇಲೆ ನಡೆದ ದಾಳಿ... ಇವೆಲ್ಲವೂ ಭಯೋತ್ಪಾದನಾ ಚಟುವಟಿಕೆಗಳ ಹೆಚ್ಚಳಕ್ಕೆ ನಿದರ್ಶನಗಳಾಗಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ತೆರವುಗೊಳಿಸುವರೆಗೂ ಕಾಶ್ಮೀರದಲ್ಲಿ ಕಲ್ಲು ತೂರಾಟದಂತಹ ಚಟುವಟಿಕೆಗಳು ಜಾಸ್ತಿ ನಡೆಯುತ್ತಿದ್ದವು. ವಿಶೇಷ ಸ್ಥಾನಮಾನ ರದ್ದು ಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ನಂತರ ಕೆಲವು ಸಮಯ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾದಂತೆ ಕಂಡು ಬಂದರೂ ಒಂದೂವರೆ ವರ್ಷಗಳಿಂದ ಉಗ್ರರ ಉಪಟಳ ಹೆಚ್ಚಾಗಿದೆ.
‘ಉಗ್ರ’ ತಂತ್ರ ಬದಲುು: ಜಮ್ಮುವಿನಲ್ಲಿ ಹೆಚ್ಚಾದ ಭಯೋತ್ಪಾದನಾ ಚಟುವಟಿಕೆ
ಗುಪ್ತಚರ ಮಾಹಿತಿ ಕೊರತೆ, ನಿಗಾ ಸವಾಲು
ದಟ್ಟ ಕಾಡು, ಕಡಿದಾದ ಬೆಟ್ಟಗುಡ್ಡಗಳನ್ನು ಹೊಂದಿರುವ ಜಮ್ಮು ಪ್ರಾಂತ್ಯದಲ್ಲಿ ಭದ್ರತಾ ಪಡೆಗಳಿಗೆ ಉಗ್ರರ ಚಲನವಲನಗಳ ಮೇಲೆ ನಿಗಾ ಇಡುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ತಳ ಮಟ್ಟದ ಗುಪ್ತಚರ ಮಾಹಿತಿ ಸಂಗ್ರಹಿಸುವ ಸುಸಜ್ಜಿತ ವ್ಯವಸ್ಥೆ ಇಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.
ಮೊದಲು ಕಾಶ್ಮೀರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದತ್ತ ಒಳನುಸುಳುತ್ತಿದ್ದ ಪಾಕಿಸ್ತಾನ ಉಗ್ರರು ಈಗ ಜಮ್ಮು ವ್ಯಾಪ್ತಿಯಲ್ಲೂ ಭಾರತವನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಸ್ಥಳೀಯ ಭದ್ರತಾ ಅಧಿಕಾರಿಗಳು ಅಂದಾಜಿಸಿರುವ ಪ್ರಕಾರ, ಪಾಕಿಸ್ತಾನವು ಎರಡು ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಉಗ್ರರನ್ನು ಜಮ್ಮು ಪ್ರಾಂತ್ಯದ ಮೂಲಕ ಭಾರತಕ್ಕೆ ಕಳುಹಿಸಿದೆ. ಪೂಂಛ್, ರಾಜೌರಿ ಸೇರಿದಂತೆ ವಿವಿಧ ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶ ಉಗ್ರರ ಅಡಗುದಾಣವಾಗಿದೆ.
ಸೇನಾ ಪಡೆಗಳು ಕಟ್ಟೆಚ್ಚರ ವಹಿಸಿದ್ದರೂ, ತಳಮಟ್ಟದ ಬೇಹುಗಾರಿಕೆಯ ಕೊರತೆ ಇದೆ. ಸೇನಾ ಪಡೆಗಳು ಮಾನವ ಬೇಹುಗಾರಿಕೆಗಿಂತ ಹೆಚ್ಚಾಗಿ ತಾಂತ್ರಿಕ ಬೇಹುಗಾರಿಕೆಯನ್ನು ಹೆಚ್ಚು ಅವಲಂಬಿಸಿವೆ. ಇದನ್ನು ಅರಿತಿರುವ ಉಗ್ರರು ತಮ್ಮ ಆನ್‌ಲೈನ್ ಚಟುವಟಿಕೆಗಳ ಮೂಲಕ ಸೇನಾ ಕಾರ್ಯಾಚರಣೆಯ ದಿಕ್ಕು ತಪ್ಪಿಸುತ್ತಿದ್ದಾರೆ. ವಿದೇಶಿ ಉಗ್ರರನ್ನು ಸದೆಬಡಿಯಲು ನಿಗಾ ಚಟುವಟಿಕೆಗಳನ್ನು ತೀವ್ರಗೊಳಿಸುವ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಿದ್ದಾರೆ.
‘ಆಲ್ಟ್ರಾ ಸೆಟ್’ ಫೋನ್ ಬಳಕೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಪಾಕಿಸ್ತಾನದ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜೊತೆಗೆ ತಮ್ಮ ಜಾಲದೊಂದಿಗೆ ಸಂವಹನ ನಡೆಸಲು ‘ಆಲ್ಟ್ರಾ ಸೆಟ್’ನಂತಹ ಆಧುನಿಕ ತಂತ್ರಜ್ಞಾನ ಬಳಸುವ ಭೇದಿಸಲು ಸಾಧ್ಯವಾಗದ (ಎನ್‌ಕ್ರಿಪ್ಟೆಡ್) ಫೋನ್‌ಗಳನ್ನು ಬಳಸುತ್ತಿದ್ದಾರೆ.
ಚೀನಾ ನಿರ್ಮಿತ ಈ ಫೋನ್ ಅನ್ನು ಪಾಕಿಸ್ತಾನ ಸೇನೆ ಬಳಸುತ್ತದೆ. ಅಲ್ಲಿನ ಸೇನೆಯು ಅವುಗಳನ್ನು ಉಗ್ರರ ಕೈಗಿತ್ತಿದೆ ಎಂದು ಹೇಳುತ್ತಾರೆ ಸೇನೆ, ಪೊಲೀಸ್ ಅಧಿಕಾರಿಗಳು.ರೇಡಿಯೊ ಮಾದರಿಯ ಈ ಸಾಧನ ಮೊಬೈಲ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನಡೆಸುವ ಮಾತುಕತೆಯನ್ನು ಬೇರೆಯವರಿಗೆ ಕದ್ದಾಲಿಸಲು ಆಗುವುದಿಲ್ಲ.
ಹೊಂಚು ಹಾಕಿ ಎರಗುತ್ತಿರುವ ಉಗ್ರರು
ಭಯೋತ್ಪಾದಕರ ಇತ್ತೀಚಿನ ಕೃತ್ಯಗಳನ್ನು ಪರಿಶೀಲಿಸಿದರೆ, ಅವರ ಗಮನವು ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಂಡಿರುವುದು ತಿಳಿಯುತ್ತದೆ. ಮೊದಲು ಉಗ್ರರು ಹೆಚ್ಚಾಗಿ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಈಗ ಅವರು ಸೇನಾ ಪಡೆಗಳ ಜತೆಗೆ (ಪ್ರವಾಸಿಗರು ಸೇರಿದಂತೆ) ನಾಗರಿಕರನ್ನೂ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ದಾಳಿಯ ತಂತ್ರವನ್ನೂ ಬದಲಾಯಿಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ಅವರು ಹೊಂಚು ಹಾಕಿ ದಾಳಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ.
‘ಉಗ್ರರು, ತಮ್ಮ ದಾಳಿಯ ಸ್ವರೂಪ ಬದಲಾಯಿಸಿದ್ದಾರೆ. ಇತ್ತೀಚೆಗೆ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಅನುಸರಿಸುತ್ತಿದ್ದಾರೆ. ಪಾಕಿಸ್ತಾನದಿಂದ ಒಳನುಸುಳುತ್ತಿರುವ ಅವರು, ಆರಂಭದಲ್ಲಿ ಒಂದಷ್ಟು ಕಾಲ ಯಾವುದೇ ಕಾರ್ಯಚಟುವಟಿಕೆಗೆ ಕೈಹಾಕುವುದಿಲ್ಲ. ಪಾಕಿಸ್ತಾನದಲ್ಲಿರುವ ತಮ್ಮ ನಾಯಕರಿಂದ ಸೂಚನೆ ಬರುವವರೆಗೆ ಸುಮ್ಮನಿರುತ್ತಾರೆ. ಆದಷ್ಟೂ ಸ್ಥಳೀಯರೊಂದಿಗೆ ಬೆರೆಯುತ್ತಾರೆ. ಮೇಲಿನವರಿಂದ ಸೂಚನೆ ಸಿಕ್ಕ ಕೂಡಲೇ ದಾಳಿ ನಡೆಸುತ್ತಾರೆ. ಹೆಚ್ಚು ಸಾವು ನೋವು ಸಂಭವಿಸುವಂತಹ ದಾಳಿ ಮಾಡುತ್ತಾರೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ಏಪ್ರಿಲ್ 26ರಂದು ಸೊಪೊರ್‌ನಲ್ಲಿ ಸೇನಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಅದರಲ್ಲಿ ಭಾಗಿಯಾಗಿದ್ದ ವಿದೇಶಿ ಉಗ್ರರು, 18 ತಿಂಗಳು ಅವಿತಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಅವರು, ಕಾಶ್ಮೀರ ಕಣಿವೆಯ ಉಗ್ರರೊಂದಿಗೆ ನಂಟು ಹೊಂದಿದ್ದರು.
ಇದೇ ರೀತಿ ಜೂನ್‌ನಲ್ಲಿಯೂ ವಿದೇಶಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿತ್ತು. ಆಗಲೂ ಉಗ್ರರ ಬದಲಾದ ಕಾರ್ಯತಂತ್ರ, ಅವರ ಸಾಮರ್ಥ್ಯದ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ವಿದೇಶದಿಂದ ಒಳನುಸುಳುತ್ತಿರುವುದು ತಿಳಿದುಬಂದಿತ್ತು. ಏಪ್ರಿಲ್ 26ರ ಎನ್‌ಕೌಂಟರ್‌ನಲ್ಲಿ ಹತರಾದ ಇಬ್ಬರು ಉಗ್ರರು ಪಾಕಿಸ್ತಾನದ ರಾವಲ್‌ಕೋಟ್‌ಗೆ ಸೇರಿದವರಾದರೆ, ಜೂನ್ 19ರಂದು ಹತನಾದವನು ಪಾಕಿಸ್ತಾನದ ಕುಖ್ಯಾತ ಉಗ್ರವಾದಿ ಉಸ್ಮಾನ್ ಲಂಗ್ಡಾ ಎನ್ನಲಾಗಿದೆ.
ಕಾಶ್ಮೀರದಲ್ಲಿ ಬಳಸಲಾಗುತ್ತಿರುವ ಉಗ್ರ ದಮನ ತಂತ್ರಗಾರಿಕೆ ಜಮ್ಮುವಿನ ಭಿನ್ನ ಭೌಗೋಳಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ಹೆಚ್ಚು ಫಲಪ್ರದ ಆಗುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಜಮ್ಮು ಪ್ರಾಂತ್ಯಕ್ಕೆ ಸೀಮಿತವಾಗಿ ಭಿನ್ನ ರೀತಿಯ ಕಾರ್ಯಾಚರಣೆ, ಕಾರ್ಯತಂತ್ರ ಅಗತ್ಯವಿದೆ ಎಂಬುದು ವಿಶ್ಲೇಷಕರ ಪ್ರತಿಪಾದನೆ.
ಸರ್ಕಾರವನ್ನು ಪ್ರಶ್ನಿಸಿದ ವಿಪಕ್ಷಗಳು
ಮಂಗಳವಾರ ರಾತ್ರಿ ಡೋಡಾದಲ್ಲಿ ನಾಲ್ವರು ಮತ್ತು ಕಳೆದವಾರ ಕಠುವಾದಲ್ಲಿ ಐವರು ಯೋಧರು ಹುತಾತ್ಮರಾದ ಪ್ರಕರಣ ಸೇರಿದಂತೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾದ ನಂತರ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಗಳನ್ನು ಪ್ರಸ್ತಾಪಿಸಿ, ಉಗ್ರರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಯತಂತ್ರವನ್ನು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ.
ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 38 ದಿನಗಳಲ್ಲಿ ಒಂಬತ್ತು ಭಯೋತ್ಪಾದನಾ ದಾಳಿ ನಡೆದಿವೆ ಎಂದು ಕಾಂಗ್ರೆಸ್ ಕೇಂದ್ರವನ್ನು ಕುಟುಕಿದೆ.
‘ಇಷ್ಟೆಲ್ಲ ನಡೆಯುತ್ತಿದ್ದರೂ, ಏನೂ ನಡೆದಿಲ್ಲವೇನೋ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ’ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರೆ, ‘ಕೇಂದ್ರ ಸರ್ಕಾರದ ತಪ್ಪು ನೀತಿಗಳಿಗೆ ಯೋಧರು ಮತ್ತು ಅವರ ಕುಟುಂಬದವರು ಬೆಲೆ ತೆರಬೇಕಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಭಯೋತ್ಪಾದಕರ ನಿರ್ಮೂಲನೆಗೆ
ಬದ್ಧವಿರುವುದಾಗಿ ಸೇನೆ ಮತ್ತು ಸರ್ಕಾರ ಹೇಳಿವೆ.
ಆಧಾರ: ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.