ಲಾಡು ಪ್ರಸಾದ ಎಂದರೆ ತಕ್ಷಣ ನೆನಪಾಗುವುದು ತಿರುಪತಿ. ಈ ಲಾಡು ಪ್ರಸಾದ ಈಗ ಸುದ್ದಿಯಲ್ಲಿದೆ. ಆಂಧ್ರ ಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ತಯಾರಿಸಲಾಗುತ್ತಿದ್ದ ಲಾಡುಗಳಲ್ಲಿ ಹಂದಿ ಕೊಬ್ಬು, ಮೀನಿನ ಎಣ್ಣೆ ಅಂಶಗಳು ಇದ್ದವು ಎಂಬ ಪ್ರಯೋಗಾಲಯದ ವರದಿ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದೆ. ದೇವಾಲಯದ ಬೀಡಾಗಿರುವ ಕರ್ನಾಟಕ ಹಾಗೂ ರಾಜ್ಯದ ಗಡಿ ಭಾಗದಲ್ಲಿರುವ ಪ್ರಮುಖ ದೇವಾಲಯಗಳು ಕೂಡ ತಮ್ಮ ವಿಶಿಷ್ಟ ಪ್ರಸಾದದಿಂದಲೇ ಗುರುತಿಸಿಕೊಂಡಿವೆ. ಎಲ್ಲ ದೇವಾಲಯಗಳಲ್ಲಿ ಪ್ರಸಾದ ತಯಾರಿಸುವಾಗ ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗುತ್ತಿದ್ದರೂ, ಬಹುತೇಕ ಕಡೆಗಳಲ್ಲಿ ಪ್ರಸಾದ ಹಾಗೂ ಅದನ್ನು ತಯಾರಿಸಲು ಬಳಸುವ ವಸ್ತುಗಳ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಇಲ್ಲ.
ಮಂತ್ರಾಲಯದ ‘ಪರಿಮಳ ಪ್ರಸಾದ’
ರಾಯಚೂರು: ರಾಜ್ಯದ ಗಡಿಭಾಗ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸಾದವು ‘ಪರಿಮಳ ಪ್ರಸಾದ’ ಎಂದೇ ಖ್ಯಾತಿ ಪಡೆದಿದೆ. ಮಂತ್ರಾಲಯದಲ್ಲಿ ನಿತ್ಯ ಸರಾಸರಿ 8ರಿಂದ 10 ಕ್ವಿಂಟಲ್‌ಗಳಷ್ಟು ಪರಿಮಳ ಪ್ರಸಾದ ಮಾರಾಟವಾಗುತ್ತದೆ.
ಆಂಧ್ರ ಪ್ರದೇಶದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟವಾದ ವಿಜಯ ಡೇರಿಯಿಂದ ಖರೀದಿಸಿದ ತುಪ್ಪ, ಗೋಧಿ ರವೆ, ಸಕ್ಕರೆ, ಒಣದ್ರಾಕ್ಷಿ, ಏಲಕ್ಕಿ, ಖಾದ್ಯ ಕರ್ಪೂರ, ಇತರೆ ಮಸಾಲೆ ಬಳಸಿ ಕೇಸರಿ ಅಥವಾ ಬಿಳಿ ಬಣ್ಣದ ಪರಿಮಳ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಪ್ರಸಾದ ತಯಾರಿಸಲು ಶ್ರೀಮಠದ ಆವರಣದಲ್ಲಿ ಪ್ರತ್ಯೇಕ ಪಾಕಶಾಲೆ ಹಾಗೂ ಸಿಬ್ಬಂದಿ ಇದ್ದಾರೆ. ಒಂದು ಕೆ.ಜಿ. ಪರಿಮಳ ಪ್ರಸಾದ ಸಿದ್ಧಪಡಿಸಿಲು 250 ಗ್ರಾಂ ತುಪ್ಪವನ್ನು ಬಳಸಲಾಗುತ್ತಿದೆ. ₹30ಕ್ಕೆ ನಾಲ್ಕು ಗಟ್ಟಿ ಪರಿಮಳ ಪ್ರಸಾದವನ್ನು ಮಠದ ಕೌಂಟರ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಭಕ್ತರು ದೇವಸ್ಥಾನದ ಮಳಿಗೆಯಿಂದ ಪ್ರಸಾದ ಖರೀದಿಸಬಹುದು ಅಥವಾ ಆನ್‌ಲೈನ್‌ನಲ್ಲಿ ಕೂಡ ಆರ್ಡರ್ ಮಾಡಬಹುದಾಗಿದೆ. ರಾಯರ ಆರಾಧನೆ ಸಂದರ್ಭದಲ್ಲಿ ವಿದೇಶದಲ್ಲಿರುವ ಭಕ್ತರಿಗೂ ಈ ಪ್ರಸಾದವನ್ನು ಕಳುಹಿಸಲಾಗುತ್ತದೆ.
ಮಾದಪ್ಪನ ಜನಪ್ರಿಯ ‘ಲಾಡು ಪ್ರಸಾದ’
ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಾಡನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ತಿರುಪತಿ ಲಾಡಿನ ರೀತಿಯಲ್ಲಿ ಇಲ್ಲಿನ ಲಾಡು ಪ್ರಸಾದ ಕೂಡ ಭಕ್ತರ ನಡುವೆ ಜನಪ್ರಿಯ.
ಕಡಲೆಹಿಟ್ಟು, ಸಕ್ಕರೆ, ಸೂರ್ಯಕಾಂತಿ ಎಣ್ಣೆ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಪಚ್ಚಕರ್ಪೂರ, ಲವಂಗ ಹಾಗೂ ‘ನಂದಿನಿ’ ತುಪ್ಪವನ್ನು ಬಳಸಿ ಲಾಡು ತಯಾರಿಸಲಾಗುತ್ತಿದೆ.
ದೇವಾಲಯವು ಹಿಂದೆ ನೇರವಾಗಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿದ್ದಾಗ ಲಾಡು ತಯಾರಿಕೆಗೆ ತುಪ್ಪ ಬಳಸುತ್ತಿರಲಿಲ್ಲ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ, ಅಂದರೆ 2014ರಿಂದ, ‘ನಂದಿನಿ’ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ.
ಆನೆಗುಡ್ಡೆ ವಿನಾಯಕನಿಗೆ ಕಡುಬು ಅಚ್ಚುಮೆಚ್ಚು
ಉಡುಪಿ: ಜಿಲ್ಲೆಯ ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಾಲಯದಲ್ಲಿ ಕಡುಬು (ಮೂಡೆ) ಪ್ರಸಾದ ತುಂಬಾ ವಿಶೇಷ. ಕಡುಬು ಸೇವೆ ಮಾಡಿಸುವವರಿಗೆ ಈ ಪ್ರಸಾದವನ್ನು ನೀಡಲಾಗುತ್ತದೆ. ಭಕ್ತರು ಹರಕೆಯ ರೂಪದಲ್ಲಿ ಮುಡಿ ಅಕ್ಕಿ ಕಡುಬು ಸೇವೆಯನ್ನೂ ಮಾಡಿಸುತ್ತಾರೆ. ಏಕಾದಶಿಯಂದು ಬಿಟ್ಟು ಪ್ರತಿದಿನ ಈ ಪ್ರಸಾದ ಸಿಗುತ್ತದೆ. ಕೇದಗೆ ಗಿಡದ ಎಲೆಯಲ್ಲಿ (ಮುಂಡೇವು ಎಲೆ) ಕೊಟ್ಟೆಯನ್ನು ತಯಾರಿಸಲಾಗುತ್ತದೆ. ಆ ಕೊಟ್ಟೆಯಲ್ಲಿ ಅಕ್ಕಿ ಮತ್ತು ಉದ್ದನ್ನು ಮಿಶ್ರಣ ಮಾಡಿ ತಯಾರಿಸಿದ ಹಿಟ್ಟನ್ನು ತುಂಬಿ ಬೇಯಿಸಿ ಕಡುಬು ಪ್ರಸಾದ ತಯಾರಿಸಲಾಗುತ್ತದೆ. ಕಡುಬನ್ನು ಗಣಪತಿ ದೇವರಿಗೆ ಸಮರ್ಪಣೆ ಮಾಡಿದ ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.
ಪಂಚಕಜ್ಜಾಯವೇ ಪ್ರಮುಖ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಲಾಡು ಮತ್ತು ಪಂಚಕಜ್ಜಾಯ ನೀಡಲಾಗುತ್ತದೆ. ಬೆಲ್ಲ, ಕಾಯಿ, ಅವಲಕ್ಕಿ, ಶ್ರೀಪ್ರಸಾದವೂ ಈ ಭಾಗದ ದೇವಸ್ಥಾನಗಳಲ್ಲಿ ಹೆಸರುವಾಸಿ. ಬಹುತೇಕ ಎಲ್ಲ ದೇವಸ್ಥಾನಗಳಲ್ಲೂ ತುಪ್ಪ, ಹಾಲು ಇತರೆ ಉತ್ಪನ್ನಗಳನ್ನು ‘ನಂದಿನಿ‘ಯಿಂದಲೇ ಖರೀದಿಸಲಾಗುತ್ತದೆ.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಲಾಡಿನ ಜೊತೆಯಲ್ಲಿ ಬೆಲ್ಲ, ಕಾಯಿ, ಶ್ರೀಪ್ರಸಾದ ಮತ್ತು ಅವಲಕ್ಕಿ ಪ್ರಸಾದ ವಿತರಿಸಲಾಗುತ್ತದೆ. ಸಿಹಿಪದಾರ್ಥಗಳು ಹೆಚ್ಚು ಇರುವ ಶ್ರೀಪ್ರಸಾದವನ್ನು ಎಲ್ಲ ಸೇವೆಗಳಿಗೂ ನೀಡಲಾಗುತ್ತದೆ. ವಿಶೇಷ ಸೇವೆ ಮಾಡಿದವರಿಗೆ ಅವಲಕ್ಕಿ ಪ್ರಸಾದ ಸಿಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಕಜ್ಜಾಯ ಮತ್ತು ಲಾಡು ಪ್ರಮುಖ ಪ್ರಸಾದ. ₹100ಕ್ಕೆ ಎರಡು ಲಾಡು ಮತ್ತು ತೀರ್ಥ ಸಿಗುತ್ತದೆ. ಹೆಚ್ಚುವರಿ ಲಾಡು ಬೇಕಾದರೆ ಒಂದಕ್ಕೆ ₹20ರಂತೆ ಪಾವತಿ ಮಾಡಬೇಕು.
ಪೆರ್ಣಂಕಿಲದ ‘ಅಪ್ಪ ಪ್ರಸಾದ’
ಉಡುಪಿಯ ಪೆರ್ಣಂಕಿಲ ದೇವಾಲಯದಲ್ಲಿ ಅಪ್ಪ ಪ್ರಸಾದ ವಿಶೇಷವಾಗಿದೆ. ಅಕ್ಕಿ, ತುಪ್ಪ, ತೆಂಗಿನಕಾಯಿ, ಎಳ್ಳು, ಅರಳು, ಬಾಳೆಹಣ್ಣು ಮತ್ತು ಬೆಲ್ಲದಿಂದ ಅಪ್ಪವನ್ನು ತಯಾರಿಸಲಾಗುತ್ತದೆ. ಇದನ್ನು ಕೊಪ್ಪರಿಗೆ ಅಪ್ಪ ಎಂದು ಕರೆಯಲಾಗುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ಅಪ್ಪ ಸೇವೆ ಅರ್ಪಿಸುತ್ತಾರೆ. ಈ ಸೇವೆಯು ಪ್ರತಿದಿನ ಇರುವುದಿಲ್ಲ ಸಂಕಷ್ಟಿಯ ದಿನ ಇರುತ್ತದೆ. ಯಾರಾದರೂ ಭಕ್ತರು ಕೊಪ್ಪರಿಗೆ ಅಪ್ಪ ಸೇವೆ ಅರ್ಪಿಸಿದರೆ ಅವರಿಗೆ ಈ ಪ್ರಸಾದವನ್ನು ನೀಡಲಾಗುತ್ತದೆ.
ಶೃಂಗೇರಿಯಲ್ಲಿ ಕಾಯಿಪಾಕ
ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠದಲ್ಲಿ ಭಕ್ತರಿಗೆ ಕಾಯಿಪಾಕ, ಪಂಚಕಜ್ಜಾಯ, ಕಲ್ಲು ಸಕ್ಕರೆಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಪ್ರಸಾದ ದೇವಸ್ಥಾನದಲ್ಲೇ ತಯಾರಾಗುತ್ತದೆ. ಕಾಯಿಪಾಕ (ಕೊಬ್ಬರಿ ಮಿಠಾಯಿ) ಇಲ್ಲಿನ ಪ್ರಸಾದದ ವಿಶೇಷ. ಗಣಪತಿ ಪೂಜೆಯನ್ನು ವಿಶೇಷವಾಗಿ ಮಾಡಿಸಿದವರಿಗೆ ಮೊಸರನ್ನ ಮತ್ತು ವಡೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಇತರ ದೇವಾಲಯಗಳಲ್ಲಿ...
* ಹೊರನಾಡು ದೇವಸ್ಥಾನದಲ್ಲಿ ಪ್ರಸಾದವಾಗಿ ಏನನ್ನೂ ನೀಡುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಅನ್ನವೇ ಮಹಾಪ್ರಸಾದ ಎಂಬುದು ಭಕ್ತರ ನಂಬಿಕೆ
* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಿರ್ದಿಷ್ಟ ಪ್ರಸಾದ ನೀಡುವ ಕ್ರಮ ಇಲ್ಲ. ಭಕ್ತರು ನೀಡುವ ಸೇವೆಯ ಆಧಾರದ ಮೇಲೆ ತಿನ್ನುವ ತ್ರಿಮಧುರ ಹಾಗೂ ಮಹಾಪ್ರಸಾದಗಳನ್ನು ನೀಡಲಾಗುತ್ತದೆ. ಪ್ರಸಾದ ರೂಪದ ಲಾಡು ಲಭ್ಯವಿದ್ದು, ಭಕ್ತರು ಕೌಂಟರ್‌ನಲ್ಲಿ ಹಣ ನೀಡಿ ಖರೀದಿಸಬಹುದು
* ಉಡುಪಿ ಕೃಷ್ಣ ಮಠದಲ್ಲಿ ಪ್ರತ್ಯೇಕವಾದ ಪ್ರಸಾದವಿಲ್ಲ. ಕರಾವಳಿಯ ಎಲ್ಲ ದೇವಾಲಯಗಳಲ್ಲಿ ನೀಡುವಂತೆ ಪಂಚಕಜ್ಜಾಯ ಮತ್ತು ಲಾಡು ಪ್ರಸಾದವನ್ನು ನೀಡಲಾಗುತ್ತದೆ. ಹೆಸರುಕಾಳು, ಬೆಲ್ಲ, ಕೊಬ್ಬರಿ ಬಳಸಿ ಪಂಚಕಜ್ಜಾಯ ತಯಾರಿಸಲಾಗುತ್ತದೆ
* ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಲಾಡು ನೀಡಲಾಗುತ್ತದೆ. ಪ್ರತಿ ವರ್ಷ ಟೆಂಡರ್ ಕರೆದು ಮಾರಾಟಗಾರರನ್ನು ಗುರುತಿಸಲಾಗುತ್ತದೆ. ಕಡ್ಲೆಹಿಟ್ಟು, ಸಕ್ಕರೆ, ನಂದಿನಿ ತುಪ್ಪ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಏಲಕ್ಕಿ, ಡಬಲ್ ರಿಫೈನ್ಡ್ ಆಯಿಲ್, ಕಡಲೆಕಾಯಿ ಎಣ್ಣೆ ಬಳಸಿ ಲಾಡು ತಯಾರಿಸಲಾಗುತ್ತದೆ
* ದಕ್ಷಿಣ ಕನ್ನಡದ ಗಡಿ ಭಾಗ ಕೇರಳದ ಕಾಸರಗೋಡು ಜಿಲ್ಲೆಯ ಮಧೂರಿನ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ‘ಅಪ್ಪ’ ಪ್ರಸಾದಕ್ಕೆ ಹೆಸರುವಾಸಿ. ಅಕ್ಕಿ, ತುಪ್ಪ, ಬೆಲ್ಲ, ತೆಂಗಿನಕಾಯಿ ಇದಕ್ಕೆ ಬಳಸುವ ಪ್ರಮುಖ ವಸ್ತುಗಳು
* ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ನೈವೇದ್ಯ ಪ್ರಸಾದ ನೀಡಲಾಗುತ್ತಿದ್ದು, ರವೆ, ಕೊಬ್ಬರಿ ತುರಿ, ಜಾಯಿಕಾಯಿ, ಸಕ್ಕರೆ ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ
* ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಹತ್ತು ವರ್ಷಗಳಿಂದ ಈಚೆಗೆ ಲಾಡು ಪ್ರಸಾದ ನೀಡುವ ಸಂಪ್ರದಾಯ ಆರಂಭಗೊಂಡಿದೆ. ಕಡಲೆ ಹಿಟ್ಟು, ಸಕ್ಕರೆ, ಕೊಬ್ಬರಿ ಎಣ್ಣೆ ಬಳಸಿ ಈ ಪ್ರಸಾದ ತಯಾರು ಮಾಡಲಾಗುತ್ತದೆ
* ಧರ್ಮಸ್ಥಳ ಬಳಿಯ ಬಯಲು ದೇವಾಲಯ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಅವಲಕ್ಕಿ ಪಂಚಕಜ್ಜಾಯ ಪ್ರಮುಖ ಪ್ರಸಾದ. ಅವಲಕ್ಕಿ, ಬೆಲ್ಲ, ತುಪ್ಪ, ಏಲಕ್ಕಿ ಬಳಸಿ ಇದನ್ನು ತಯಾರಿಸಲಾಗುತ್ತದೆ. ‘ಅಪ್ಪ’ ಪ್ರಸಾದವೂ ಇಲ್ಲಿ ಹೆಚ್ಚುವರಿಯಾಗಿ ಸಿಗುತ್ತದೆ
ನಡೆಯುತ್ತಿಲ್ಲ ವೈಜ್ಞಾನಿಕ ಪರೀಕ್ಷೆ
ಎಲ್ಲ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡಲಾಗುತ್ತಿದ್ದರೂ ಪ್ರಸಾದ ಸಿದ್ಧಪಡಿಸಲು ಬಳಸುವ ವಸ್ತುಗಳು ಮತ್ತು ತಯಾರಿಕೆ ನಂತರ ಪ್ರಸಾದದ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ವ್ಯವಸ್ಥೆ ಇಲ್ಲ.
ದೇವಾಲಯದ ಆಡಳಿತ ಮಂಡಳಿ ಹಾಗೂ ಪ್ರಸಾದ ತಯಾರಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ, ವಸ್ತುಗಳ ಗುಣಮಟ್ಟವನ್ನು ಮೇಲ್ನೋಟಕ್ಕೆ ನೋಡಿ ಖಾತರಿಪಡಿಸಿಕೊಂಡು ಮುಂದುವರಿಯುತ್ತಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕೂಡ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಕೆಲವು ದೇವಾಲಯಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಗಳಲ್ಲಿ, ಪ್ರಸಾದ ತಯಾರಿಕೆಯ/ಮಾರಾಟದ ಜವಾಬ್ದಾರಿಯನ್ನು ಟೆಂಡರ್ ಮೂಲಕ ನೀಡುವ ವ್ಯವಸ್ಥೆ ಇದೆ. ಪ್ರಾಧಿಕಾರದ ವ್ಯಾಪ್ತಿಗೆ ಬರುವ ದೇವಾಲಯಗಳು ಮತ್ತು ಖಾಸಗಿ ಒಡೆತನದ ದೇವಾಲಯಗಳು ಪ್ರಸಾದ ತಯಾರಿಸಲು ಪ್ರತ್ಯೇಕ ವಿಭಾಗವನ್ನೇ ಹೊಂದಿವೆ.
‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಿರ್ದಿಷ್ಟ ಅವಧಿಯಲ್ಲಿ ಗುಣಮಟ್ಟ ಪರಿಶೀಲನೆ ಮಾಡುತ್ತಾರೆ. ಅದರ ನಡುವೆ ನಮ್ಮ ತಂಡವೂ ಜಾಗೃತವಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ಸಂದೇಹ ಬಂದರೆ ನಿರ್ದಾಕ್ಷಿಣ್ಯವಾಗಿ ವಸ್ತುಗಳನ್ನು ವಾಪಸ್ ಕಳುಹಿಸುತ್ತೇವೆ’ ಎಂದು ಹೇಳುತ್ತಾರೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ಕಚೇರಿ ಸಿಬ್ಬಂದಿ.
ಸುರಕ್ಷತಾ ನಿಯಮ ಪಾಲನೆ
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ಲಾಡು ಪ್ರಸಾದ ಕೊಡಲಾಗುತ್ತಿದೆ. ಎರಡು ಲಾಡುಗಳ ಪ್ಯಾಕೆಟ್‌ಗೆ ₹30 ಇದೆ. ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಇಲ್ಲಿನ ದಾಸೋಹ ಭವನದಲ್ಲಿ ಬಹಳ ವರ್ಷದಿಂದಲೂ ಲಾಡು ತಯಾರಿಸಲಾಗುತ್ತಿದೆ. ಬಾಣಸಿಗರು ‘ನಂದಿನಿ’ ತುಪ್ಪ, ಬಿಟಿಎಸ್ ಭಾಗ್ಯಲಕ್ಷಿ ಕಡ್ಲೆಹಿಟ್ಟು, ಸಕ್ಕರೆ ಬಳಸುತ್ತಾರೆ. ಆಹಾರ ಸಾಮಗ್ರಿಗಳನ್ನು ಗುಣಮಟ್ಟ ಪರಿಶೀಲಿಸಿ ಟೆಂಡರ್ ಮೂಲಕ ಖರೀದಿಸಲಾಗುತ್ತಿದೆ–ರೂಪಾ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.