ರಕ್ತದಲ್ಲಿ ಹಿಮೋಗ್ಲೋಬಿನ್ (ಬಿಳಿ ರಕ್ತ ಕಣ) ಅಂಶ ಕಡಿಮೆ ಆಗುವುದನ್ನು ರಕ್ತಹೀನತೆ (ಅನೀಮಿಯಾ) ಎನ್ನುತ್ತಾರೆ. ಕಬ್ಬಿಣದ ಅಂಶ ಕೊರತೆಯನ್ನು ಇದು ಸೂಚಿಸುತ್ತದೆ. ರಕ್ತಹೀನತೆಯು ಹೆರಿಗೆ ವೇಳೆ ತಾಯಿಯ ಮರಣ, ಮಕ್ಕಳ ಅವಧಿಪೂರ್ವ ಜನನ, ಕಡಿಮೆ ತೂಕ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತದೆ.ಕರ್ನಾಟಕದಲ್ಲಿ ರಕ್ತಹೀನತೆಯು ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಮಕ್ಕಳು ಹಾಗೂ ಮಹಿಳೆಯರನ್ನು ಕಾಡುತ್ತಿದೆ.
ರಾಜ್ಯದ ಶೇ 48ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಅಭಿಪ್ರಾಯಪಟ್ಟಿದೆ. ಈ ಪೈಕಿ ಶೇ 22ರಷ್ಟು ಮಹಿಳೆಯರು ಕಡಿಮೆ ಪ್ರಮಾಣ, ಶೇ 23ರಷ್ಟು ಮಹಿಳೆಯರ ಮಧ್ಯಮ ಪ್ರಮಾಣ ಹಾಗೂ ಶೇ 3ರಷ್ಟು ಮಹಿಳೆಯರು ತೀವ್ರ ಸ್ವರೂಪರದ ರಕ್ತಹೀನತೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣ ಅಧಿಕವಾಗಿದೆ. ಎಲ್ಲ ವಯೋಮಾನದ ಮಹಿಳೆಯರಲ್ಲಿ ಐದನೇ ಎರಡರಷ್ಟು ಮಂದಿಗೆ, ಎಲ್ಲ ವಯೋಮಾನದ ಪುರುಷರಲ್ಲಿ ಐದನೇ ಒಂದರಷ್ಟು ಮಂದಿಗೆ ರಕ್ತಹೀನತೆ ಸಮಸ್ಯೆಯಿದೆ ಎಂದು ವರದಿ ಹೇಳಿದೆ.15ರಿಂದ 19 ವರ್ಷದೊಳಗಿನ ಬಾಲಕರಿಗೆ (ಶೇ 26.5) ಹೋಲಿಸಿದರೆ, ಬಾಲಕಿಯರಲ್ಲಿ (49.4) ರಕ್ತಹೀನತೆ ಪ್ರಮಾಣ ಸರಿಸುಮಾರು ಒಂದು ಪಟ್ಟು ಅಧಿಕವಾಗಿದೆ. ಗರ್ಭಿಣಿಯರು ಹಾಗೂ ಗರ್ಭಿಣಿ ಅಲ್ಲದವರನ್ನೂ ಇದು ಸಮಾನವಾಗಿ ಕಾಡುತ್ತಿದೆ. ನಗರದ ಗರ್ಭಿಣಿಯರಿಗಿಂತ (ಶೇ 37.3) ಗ್ರಾಮೀಣ ಭಾಗದ ಗರ್ಭಿಣಿಯರು (ಶೇ 50.3) ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ.
6ರಿಂದ 59 ತಿಂಗಳು ವಯೋಮಾನದ ಮೂರನೇ ಎರಡರಷ್ಟು ಮಕ್ಕಳಲ್ಲಿ (ಶೇ 66) ರಕ್ತಹೀನತೆ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ವಯೋಮಾನದ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಏರಿಕೆಯಾಗಿದೆ. 2015–16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ ಶೇ 61ರಷ್ಟಿದ್ದ ರಕ್ತಹೀನತೆಯು, 2019–20ರ ವರದಿಯ ಪ್ರಕಾರ, 66ಕ್ಕೆ ಹೆಚ್ಚಳವಾಗಿದೆ.
ತೆಳ್ಳಗೆ ಇಲ್ಲವೇ ದಢೂತಿ
ರಾಜ್ಯದ ಶೇ 47ರಷ್ಟು ಮಹಿಳೆಯರು ಹಾಗೂ ಶೇ 45ರಷ್ಟು ಪುರುಷರು ತೀರಾ ತೆಳ್ಳಗಿದ್ದಾರೆ ಅಥವಾ ದಢೂತಿಯಾಗಿದ್ದಾರೆ ಎಂದು ವರದಿ ಹೇಳಿದೆ. ತೆಳ್ಳಗಿರುವವರಿಗೆ ಹೋಲಿಸಿದರೆ, ದಪ್ಪಗಿರುವವರ ಪ್ರಮಾಣ ಅಧಿಕವಾಗಿದೆ. ಈ ಪ್ರಮಾಣ ಮಹಿಳೆಯರಲ್ಲಿ ಶೇ 30ರಷ್ಟಿದ್ದರೆ, ಪುರುಷರಲ್ಲಿ ಶೇ 31ರಷ್ಟಿದೆ. 2015–16ರ ಸಮೀಕ್ಷಾ ವರದಿಯಲ್ಲೂ ಇದೇ ಪ್ರವೃತ್ತಿ ಇತ್ತು. ಶೇ 50ಕ್ಕೂ ಹೆಚ್ಚಿನ ಜನರು ಎತ್ತರಕ್ಕೆ ತಕ್ಕ ತೂಕ ಹೊಂದಿದ್ದಾರೆ.ಗ್ರಾಮೀಣ ಭಾಗದಲ್ಲಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಜನರಲ್ಲಿ ಅಪೌಷ್ಟಿಕತೆ ಹೆಚ್ಚು ಕಂಡುಬಂದಿದೆ. ನಗರದಲ್ಲಿ ವಾಸಿಸುವ ಹಿರಿಯ ನಾಗರಿಕರು ಹಾಗೂ ಸುಶಿಕ್ಷಿತರಲ್ಲಿ ಸ್ಥೂಲಕಾಯ ಹೆಚ್ಚು ಎಂದು ವರದಿ ತಿಳಿಸಿದೆ.
ಸಮತೋಲನ: ಮನುಷ್ಯನ ದೇಹ ಸಮತೋಲನದಿಂದ ಕೂಡಿರಬೇಕು. ದೇಹಕ್ಕೆ ಪೂರೈಕೆಯಾಗುವ ಪೌಷ್ಟಿಕಾಂಶಗಳ ಪ್ರಮಾಣ ಕಡಿಮೆ ಅಥವಾ ಹೆಚ್ಚು ಆದರೆ ಅದನ್ನು ಅಸಮತೋಲನ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಎತ್ತರ ಮತ್ತು ತೂಕವನ್ನು ಲೆಕ್ಕಹಾಕಿ, ಇಷ್ಟು ಎತ್ತರ ಇರುವವರಿಗೆ ಇಷ್ಟೇ ತೂಕ ಇರಬೇಕು ಎಂದು ನಿಗದಿ ಮಾಡಲಾಗಿದೆ. ಇದನ್ನೇ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಎನ್ನುತ್ತಾರೆ. ಇದರಲ್ಲಿ ಅಸಮತೋಲನ ಕಂಡುಬಂದರೆ, ಪೌಷ್ಟಿಕಾಂಶಗಳ ಪೂರೈಕೆಯಲ್ಲಿ ಏರುಪೇರಾಗಿದೆ ಎಂದು ಪರಿಗಣಿಸಲಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ: ಸ್ವಂತ ಹಣದ ವೆಚ್ಚ ಏರಿಕೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಾಗಿ ಸಾರ್ವಜನಿಕರು ತಮ್ಮ ಜೇಬಿನಿಂದ ಮಾಡಬೇಕಿರುವ ವೆಚ್ಚವು ಸ್ವಲ್ಪ ಏರಿಕೆಯಾಗಿದೆ. 2015–16ರಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಹೆರಿಗೆಗೆ ಸರಾಸರಿ ₹4,824 ವೆಚ್ಚ ಮಾಡಬೇಕಿತ್ತು. ಇದು 2019–20ರಲ್ಲಿ ₹4,954ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷಗಳಲ್ಲಿ ಕೇವಲ ₹130ರಷ್ಟು ಏರಿಕೆಯಾಗಿದೆ.
ಈ ವೆಚ್ಚವು ನೋಂದಣಿ ಶುಲ್ಕ, ಕೆಲವು ಪರೀಕ್ಷಾ ಶುಲ್ಕಗಳು, ರೋಗಿಯ ಮೇಲ್ವಿಚಾರಕರ ವೆಚ್ಚವನ್ನು ಒಳಗೊಂಡಿದೆ. ಅದರ ಜತೆಯಲ್ಲಿ ಕೆಲಸ ತ್ವರಿತವಾಗಿ ಆಗಲು ಮತ್ತು ಹೆಚ್ಚು ಅನುಕೂಲ ಪಡೆಯಲು ನೀಡಬೇಕಿರುವ ಲಂಚದ ಮೊತ್ತವನ್ನೂ ಈ ವೆಚ್ಚ ಒಳಗೊಂಡಿದೆ. ಸರ್ಕಾರವು ಉಚಿತವಾಗಿ ಹೆರಿಗೆ ಸೇವೆ ನೀಡುತ್ತಿದ್ದರೂ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನರು ತಮ್ಮ ಸ್ವಂತ ಹಣವನ್ನು ವೆಚ್ಚ ಮಾಡಲೇಬೇಕಿದೆ. ಜನರು ಹೀಗೆ ಮಾಡಬೇಕಿರುವ ವೆಚ್ಚದ ಮೊತ್ತವು ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿದೆ.
ಜತೆಗೆ 2015–16ಕ್ಕೆ ಹೋಲಿಸಿದರೆ, 2019–20ರಲ್ಲಿ ಪ್ರತೀ ಜಿಲ್ಲೆಗಳಲ್ಲಿ ಆಗಿರುವ ವೆಚ್ಚ ಬದಲಾವಣೆ ಏಕ ಸ್ವರೂಪದ್ದಲ್ಲ. ಹಲವು ಜಿಲ್ಲೆಗಳಲ್ಲಿ ಈ ಸ್ವರೂಪದ ವೆಚ್ಚವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಯಲ್ಲಿ ಈ ಸ್ವರೂಪದ ವೆಚ್ಚವು ಹಲವು ಪಟ್ಟು ಏರಿಕೆಯಾಗಿದೆ. ಬಳ್ಳಾರಿಯಲ್ಲಿ ಈ ವೆಚ್ಚವು ₹4,413ರಿಂದ ₹12,348ಕ್ಕೆ ಏರಿಕೆಯಾಗಿದೆ. ಹಾವೇರಿಯಲ್ಲಿ ₹2,886ರಿಂದ ₹11,573ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ₹9,333ರಿಂದ ₹3,633ಕ್ಕೆ ಇಳಿಕೆಯಾಗಿದೆ.
ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಮತ್ತು ಮೂಲಸೌಕರ್ಯಗಳ ಕೊರತೆ ಇರುವ ಜಿಲ್ಲೆಗಳಲ್ಲಿ ಈ ಸ್ವರೂಪದ ವೆಚ್ಚವು ಅಧಿಕ. ಜತೆಗೆ ಇಂತಹ ಜಿಲ್ಲೆಗಳಲ್ಲೇ ಈ ವೆಚ್ಚವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ವೆಚ್ಚವು ಇಳಿಕೆಯಾಗಿದೆ.
ನಗರಗಳಲ್ಲಿ ಮದ್ಯ, ಗ್ರಾಮಗಳಲ್ಲಿ ತಂಬಾಕು ಬಳಕೆ ಹೆಚ್ಚು
ರಾಜ್ಯದ 15–49 ವಯಸ್ಸಿನ ಪುರುಷರಲ್ಲಿ ಶೇ 27ರಷ್ಟು ಮಂದಿ ವಿವಿಧ ರೂಪದಲ್ಲಿ ತಂಬಾಕು ಸೇವಿಸುತ್ತಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ ಹೇಳುತ್ತದೆ. ಇದೇ ವಯಸ್ಸಿನ ಮಹಿಳೆಯರಲ್ಲಿ ತಂಬಾಕು ಸೇವಿಸುವವರ ಪ್ರಮಾಣ ಶೇ 3ರಷ್ಟಿದೆ. ಆದರೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಬಳಸುವವರ ಪ್ರಮಾಣವು ನಗರ ಪ್ರದೇಶ ಮತ್ತು ರಾಜ್ಯ ಸರಾಸರಿಗಿಂತ ಹೆಚ್ಚು. ನಗರ ಪ್ರದೇಶದ ಶೇ 22ರಷ್ಟು ಪುರುಷರು ಮತ್ತು ಶೇ 1ರಷ್ಟು ಮಹಿಳೆಯರು ತಂಬಾಕು ಬಳಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಶೇ 31ರಷ್ಟು ಪುರುಷರು ಮತ್ತು ಶೇ 4ರಷ್ಟು ಮಹಿಳೆಯರು ತಂಬಾಕು ಸೇವಿಸುತ್ತಾರೆ.
ಸಿಗರೇಟ್ ರೂಪದಲ್ಲಿ ತಂಬಾಕು ಸೇವಿಸುವವರ ಪ್ರಮಾಣ ಹೆಚ್ಚು. ಗುಟ್ಕಾ, ಪಾನ್ ಮಸಾಲ, ಬೀಡಿ ರೂಪದಲ್ಲಿ ತಂಬಾಕು ಬಳಸುವವರ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಸಿಗರೇಟ್ ಸೇದುವ ಪುರುಷರಲ್ಲಿ ಶೇ 69ರಷ್ಟು ಜನರು ದಿನವೊಂದರಲ್ಲಿ ಐದು ಮತ್ತು ಅದಕ್ಕಿಂತಲೂ ಹೆಚ್ಚು ಸಿಗರೇಟ್ ಸೇದುತ್ತೇವೆ ಎಂದು ಸಮೀಕ್ಷೆ ವೇಳೆ ಹೇಳಿಕೊಂಡಿದ್ದಾರೆ.
ರಾಜ್ಯದ ಇದೇ ವಯಸ್ಸಿನ ಶೇ 23ರಷ್ಟು ಪುರುಷರು ಮದ್ಯ ಸೇವಿಸುತ್ತಾರೆ. ಪುರುಷರಿಗೆ ಹೋಲಿಸಿದರೆ ಮದ್ಯ ಸೇವಿಸುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ ಇದೆ. ರಾಜ್ಯದ ಶೇ 0.3ರಷ್ಟು ಮಹಿಳೆಯರಷ್ಟೇ ಮದ್ಯ ಸೇವಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಪುರುಷರಿಗೆ (ಶೇ 21) ಹೋಲಿಸಿದರೆ, ಮದ್ಯ ಸೇವಿಸುವ ನಗರ ಪ್ರದೇಶದ ಪುರುಷರ ಪ್ರಮಾಣ (ಶೇ 26) ಹೆಚ್ಚು. ಮದ್ಯ ಸೇವಿಸುವವರಲ್ಲಿ ಶೇ 54ರಷ್ಟು ಜನರು ವಾರಕ್ಕೆ ಒಮ್ಮೆ ಮತ್ತು ಶೇ 19ರಷ್ಟು ಮಂದಿ ಪ್ರತಿದಿನವೂ ಮದ್ಯ ಸೇವಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.