ADVERTISEMENT

ಆ್ಯಪಲ್‌ನಿಂದ ‘ಸ್ಟೇಟ್ ಸ್ಪಾನ್ಸರ್ಡ್‌ ಅಟ್ಯಾಕ್‌’ ಎಚ್ಚರಿಕೆ: ಕದ್ದಾಲಿಕೆಯ ಹೊಸರೂಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 19:30 IST
Last Updated 1 ನವೆಂಬರ್ 2023, 19:30 IST
   

ಸರ್ಕಾರ ನಮ್ಮ ವಿರುದ್ಧ ಗೂಢಚರ್ಯೆ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ನಿರ್ದಿಷ್ಟ ಪ್ರಕರಣವೊಂದರಲ್ಲಿ, ಯಾವುದೋ ಒಬ್ಬ ವ್ಯಕ್ತಿಯ ಮೇಲೆ, ನಿಗದಿತ ಅವಧಿಯವರೆಗೆ ಕಣ್ಗಾವಲು/ಕದ್ದಾಲಿಕೆ ನಡೆಸುವ ಅಧಿಕಾರವನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಟೆಲಿಗ್ರಾಫ್‌ ಕಾಯ್ದೆ ಸರ್ಕಾರಕ್ಕೆ ನೀಡುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸರ್ಕಾರ ದಾಖಲಿಸಬೇಕು. ಸರ್ಕಾರವು ಹಾಗೆ ಮಾಡದಿದ್ದರೆ ಅದು ಕಾನೂನುಬಾಹಿರ

ಪೆಗಾಸಸ್‌ ಎಂಬ ತಂತ್ರಾಂಶವನ್ನು ಬಳಸಿಕೊಂಡು ಭಾರತದ 160ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು, ಪತ್ರಕರ್ತರ ಫೋನ್‌ಗಳಿಗೆ ಕನ್ನಹಾಕಲು ಯತ್ನಿಸಲಾಗಿತ್ತು ಎಂದು 2019ರಲ್ಲಿ ಹಲವು ತನಿಖಾ ವರದಿಗಳು ಹೇಳಿದ್ದವು.

ಈಗ, ಆ್ಯಪಲ್‌ ಕಂಪನಿಯು ಭಾರತವು ಸೇರಿದಂತೆ 150 ದೇಶಗಳಲ್ಲಿ ಇರುವ ತನ್ನ ಕೆಲವು ಬಳಕೆದಾರರಿಗೆ ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ನಿಮ್ಮ ಮೊಬೈಲ್‌ ಒಳಗೆ ನುಸುಳಲು ಯತ್ನಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ADVERTISEMENT

– ವ್ಯಕ್ತಿಯೊಬ್ಬರ ಖಾಸಗಿತನಕ್ಕೆ ಧಕ್ಕೆ ತರುವ, ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಈ ಎರಡೂ ಕೃತ್ಯಗಳು ಸದ್ಯ ಭಾರತದ ರಾಜಕಾರಣದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

‘ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇವೆ ಎನ್ನುವ ಹೊತ್ತಿಗೇ ಇಂಥ ಕನ್ನ ಯತ್ನಗಳು ನಡೆಯುತ್ತವೆ’ ಎಂದು ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಅವರು ಮಂಗಳವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಛಡ್ಡಾ ಅವರ ಅಭಿಪ್ರಾಯಕ್ಕೆ ಪೂರಕ ಸಾಕ್ಷ್ಯಗಳೂ ದೊರೆಯುತ್ತವೆ.

ಪೆಗಾಸಸ್‌ ಕುತಂತ್ರಾಂಶದ ಕುರಿತು ದೇಶದ ಜನರ ಅರಿವಿಗೆ ಬಂದಿದ್ದು 2019ರ ಹೊತ್ತಿಗೆ. ‘ದಿ ವೈರ್‌’ ಪತ್ರಿಕೆಯು ಈ ಬಗ್ಗೆ ಹಲವು ಸರಣಿ ವರದಿಗಳನ್ನು ಬರೆಯಿತು. ಭಾರತದಲ್ಲಿ ಯಾರು ಯಾರ ಮೊಬೈಲ್‌ಗಳಲ್ಲಿ ಈ ಕುತಂತ್ರಾಂಶವನ್ನು ಅಳವಡಿಸಲಾಗಿದೆ ಎಂಬುದರ ಕುರಿತೂ ವರದಿಗಳನ್ನು ಪ್ರಕಟಿಸಿತು. ಜೊತೆಗೆ, ವಿದೇಶದಲ್ಲಿರುವ ವಿಧಿ ವಿಜ್ಞಾನ ಸಂಸ್ಥೆಗಳಿಂದ ಮೊಬೈಲ್‌ಗಳನ್ನು ಪರೀಕ್ಷೆ ಮಾಡಿಸಿತು. ಇಂಥ ಪರೀಕ್ಷೆಗಳಲ್ಲಿ ತಿಳಿದುಬಂದ ವರದಿಗಳಲ್ಲಿ ಹೇಳಲಾಗಿರುವಂತೆ, ಕೆಲವು ಬಳಕೆದಾರರ ವಾಟ್ಸ್‌ಆ್ಯಪ್‌ಗಳಲ್ಲಿ ಈ ಕುತಂತ್ರಾಂಶವು 2017–18ರಿಂದಲೂ ಇತ್ತು. ಮತ್ತು 2019ರಲ್ಲಿ ಲೋಕಸಭೆ ಚುನಾವಣೆ ನಡೆದಿದೆ.

ಅಕ್ಟೋಬರ್ 31ರಂದು ಆ್ಯಪಲ್‌ ಕಳುಹಿಸಿದ ಸಂದೇಶದ ಭಾಗ
ಈ ಎಚ್ಚರಿಕೆಯನ್ನು ನೀವು ಗಂಭೀರವಾಗೇ ತೆಗೆದುಕೊಳ್ಳಬೇಕು. ಮತ್ತು ನಿಮ್ಮ ಸಾಧನಗಳ ಸುರಕ್ಷತಾ ಸವಲತ್ತುಗಳನ್ನು ಚಾಲೂ ಮಾಡಿ. ಅಗತ್ಯವಿದ್ದಲ್ಲಿ ಲಾಕ್‌ಡೌನ್‌ ಆಯ್ಕೆಯನ್ನೂ ಚಾಲೂ ಮಾಡಿ (ಆ್ಯಪಲ್‌ ಸಾಧನಗಳಲ್ಲಿ ಇರುವ ಅತ್ಯಂತ ಪ್ರಬಲ ಸುರಕ್ಷತಾ ಫೀಚರ್‌)

2024ರಲ್ಲಿ ಮತ್ತೆ ಲೋಕಸಭೆ ಚುನಾವಣೆ ಇದೆ. ಇದಕ್ಕೂ ಕೆಲವು ತಿಂಗಳ ಮೊದಲೇ ಆ್ಯಪಲ್‌ನ ಎಚ್ಚರಿಕೆ ಸಂದೇಶ ಬಂದಿದೆ. ಇದು ಕಾಕತಾಳೀಯ ಇರಲಾರದು ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿ. ಅದು ಪೆಗಾಸಸ್‌ ಕುರಿತಾಗಲಿ, ಆ್ಯಪಲ್‌ನ ಎಚ್ಚರಿಕೆ ಸಂದೇಶಕ್ಕೆ ಸಂಬಂಧಿಸಿದ್ದಾಗಲಿ ವಿರೋಧ ಪಕ್ಷಗಳ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರವು ನಿರಾಕರಿಸುತ್ತಲೇ ಬಂದಿದೆ. 

ವಿರೋಧ ಪಕ್ಷದವರೇ ಗುರಿ: ‘ವಿರೋಧ ಪಕ್ಷದ ನೂರಾರು ನಾಯಕರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ ಬಂದಿದೆ ಎನ್ನುವುದಂತೂ ಸತ್ಯ. ಯಾಕಾಗಿ ವಿರೋಧ ಪಕ್ಷದ ನಾಯಕರು ಮಾತ್ರವೇ ಗುರಿ? ವಿರೋಧ ಪಕ್ಷಗಳ ನಾಯಕರ ಮೊಬೈಲ್‌ಗಳಲ್ಲಿ ಏನಿದೆ ಎಂದು ಇಣುಕಿ ನೋಡುವುದಕ್ಕೆ ಯಾರಿಗೆ ತಾನೇ ಆಸಕ್ತಿ ಇದ್ದೀತು?’ ಎನ್ನುವುದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ತರ್ಕ.

ಭಾರತದ ಸುಮಾರು 300 ಜನರ ವಾಟ್ಸ್‌ಆ್ಯಪ್‌ಗಳಲ್ಲಿ ಪೆಗಾಸಸ್‌ ಕುತಂತ್ರಾಂಶವನ್ನು ಅಳವಡಿಸಲಾಗಿತ್ತು. ಈ ಸಂಖ್ಯೆಯು ಇನ್ನಷ್ಟೂ ಇರಬಹುದು ಎಂದು ‘ದಿ ವೈರ್‌’ ಪತ್ರಿಕೆ ಶಂಕಿಸಿತ್ತು. ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳ ಮೊಬೈಲ್‌ ಸಂಖ್ಯೆ, ಕೆಲವು ಪತ್ರಕರ್ತರು, ವ್ಯಾಪಾರಸ್ಥರು, ಸಾಮಾಜಿಕ ಕಾರ್ಯಕರ್ತರು, ಕೇಂದ್ರ ಸರ್ಕಾರದ ಇಬ್ಬರು ಸಚಿವರು, ವಿರೋಧ ಪಕ್ಷಗಳ ಮೂವರು ನಾಯಕರು ಮೊಬೈಲ್‌ಗಳಲ್ಲಿ ಈ ಕುತಂತ್ರಾಂಶಗಳನ್ನು ಅವಳಡಿಸಲಾಗಿತ್ತು ಎಂದು ಅದು ವರದಿ ಪ್ರಕಟಿಸಿತ್ತು.

ಈ ಬಾರಿ, ‘ಇಂಡಿಯಾ’ ಮೈತ್ರಿಕೂಟದ ಹಲವು ನಾಯಕರು, ಕೆಲವು ಪತ್ರಕರ್ತರಿಗೆ ಆ್ಯಪಲ್‌ ಕಂಪನಿಯು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ. ನಿರಂತರವಾಗಿ ವಿರೋಧ ಪಕ್ಷಗಳ ನಾಯಕರ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ಯತ್ನ ನಡೆಯುತ್ತಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಭಾರತದ ರಾಜನ ವಿರುದ್ಧ ಜನರು ಸಿಡಿದೆದ್ದಿದ್ದರು. ಆದರೆ, ಜನರ ಆಕ್ರೋಶವು ರಾಜನಲ್ಲಿಯವರೆಗೆ ತಲುಪುತ್ತಿರಲಿಲ್ಲ. ಯಾಕೆಂದರೆ ರಾಜನು ಕೋಟೆಯೊಳಗೆ ಇದ್ದನು. ನಂತರ, ರಾಜನ ಆತ್ಮವು ಆತನ ಬಳಿ ಇಲ್ಲ. ಚಿಕ್ಕ ಪಂಜರದಲ್ಲಿ ಸೆರೆ ಇರುವ ಗಿಣಿಯ ಬಳಿ ಇದೆ ಎಂದು ಆಕ್ರೋಶಗೊಂಡಿದ್ದ ಜನರಿಗೆ ಋಷಿಯೊಬ್ಬರು ತಿಳಿಸಿದರು. ನರೇಂದ್ರ ಮೋದಿ ಅವರ ಆತ್ಮ ಅದಾನಿ ಅವರ ಬಳಿ ಇದೆ. ಇಲ್ಲಿ ಗಿಣಿಯ ಕುತ್ತಿಗೆ ಹಿಚುಕಿದರೆ ಕ್ರೂರ ರಾಜ ‌ಒದ್ದಾಡುತ್ತಾನೆ. ಅದಾನಿಯನ್ನು ಮುಟ್ಟಿದೊಡನೆ, ಗುಪ್ತಚರ ಸಂಸ್ಥೆಗಳು ಮತ್ತು ಕನ್ನ ಹಾಕುವ ತಂತ್ರಾಂಶಗಳನ್ನು ಚೂಬಿಡಲಾಗುತ್ತದೆ.
–ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ, ಸಂಸದ

‘ಸರ್ಕಾರವೇ ಮಾಡಿಸುವ ಹ್ಯಾಕ್‌’

ಎಲೆಕ್ಟ್ರಾನಿಕ್‌ ಸಂಪರ್ಕ ಸಾಧನಗಳಿಗೆ ಕನ್ನ ಹಾಕಿ, ಅವುಗಳನ್ನು ಅನಧಿಕೃತವಾಗಿ ನಿಯಂತ್ರಿಸುವ, ಅವುಗಳಲ್ಲಿನ ದತ್ತಾಂಶಗಳನ್ನು ಕಳವು ಮಾಡುವ, ಅವುಗಳನ್ನು ಕದ್ದಾಲಿಕೆಗೆ ಮತ್ತು ಕದ್ದುನೋಡುವುದಕ್ಕೆ ಬಳಸಿಕೊಳ್ಳುವ ಕೃತ್ಯವೇ ಹ್ಯಾಕಿಂಗ್‌. (ಸೈಬರ್‌ ಅಪರಾಧ ಪರಿಭಾಷೆಯಲ್ಲಿ ಕನ್ನ ಎಂಬ ಪದವನ್ನು ವಿಶಾಲರ್ಥದಲ್ಲಿ ಹ್ಯಾಕ್‌ಗೆ ಸಂವಾದಿಯಾಗಿ ಬಳಸಲಾಗುತ್ತಿದೆ). ಇಂತಹ ಕೃತ್ಯಗಳನ್ನು ಸರ್ಕಾರವೇ ಪ್ರಾಯೋಜಿಸಿದರೆ ಅದನ್ನು ‘ಸರ್ಕಾರಿ ಪ್ರಾಯೋಜಿತ ಹ್ಯಾಕ್‌’ ಎಂದು ಕರೆಯಲಾಗುತ್ತದೆ ಎಂಬ ವಿವರಣೆಯನ್ನು ಆ್ಯಪಲ್‌ 2021ರಲ್ಲೇ ನೀಡಿತ್ತು. ಭಾರತದ 160 ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ ವಿಶ್ವದ 400 ಜನರ ಫೋನ್‌ಗಳಿಗೆ ಕನ್ನಹಾಕಲು ಇಸ್ರೇಲ್‌ನ ಪೆಗಾಸಸ್ ಕನ್ನತಂತ್ರಾಂಶವನ್ನು ಬಳಸಿಕೊಳ್ಳಲಾಗಿತ್ತು ಎಂಬ ಆರೋಪ ಬಂದ ಹೊತ್ತಿನಲ್ಲಿ ಆ್ಯಪಲ್‌ ಈ ವಿವರಣೆ ನೀಡಿತ್ತು.

ಸರ್ಕಾರಗಳು ತಮ್ಮ ವಿರೋಧಿಗಳು, ವಿರೋಧ ಪಕ್ಷಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲೆ ನಿಗಾ ಇರಿಸಲು ಈ ಕುತಂತ್ರದ ಮೊರೆ ಹೋಗುತ್ತವೆ. ಪೆಗಾಸಸ್‌ ಕನ್ನತಂತ್ರಾಂಶವನ್ನು ಬಳಸಿಕೊಂಡು ಜೋರ್ಡನ್‌, ಹಲವು ಪತ್ರಕರ್ತರ ಫೋನ್‌ಗಳಿಗೆ ಕನ್ನಹಾಕಿತ್ತು ಎಂದು ಆ್ಯಪಲ್ ಹೇಳಿತ್ತು. ಪೆಗಾಸಸ್‌ ವಿರುದ್ಧ ಪ್ರಕರಣವನ್ನೂ ದಾಖಲಿಸಿತ್ತು. ಆನಂತರವೇ ‘ಸರ್ಕಾರಿ ಪ್ರಾಯೋಜಿತ ದಾಳಿ/ಹ್ಯಾಕಿಂಗ್‌ ಎಚ್ಚರಿಕೆ ವ್ಯವಸ್ಥೆ’ಯನ್ನು ಆ್ಯಪಲ್‌ ಅಭಿವೃದ್ಧಿಪಡಿಸಿದ್ದು. ಈಗ ಭಾರತದ ವಿರೋಧ ಪಕ್ಷಗಳ ನಾಯಕರು, ಕೆಲವು ಪತ್ರಕರ್ತರಿಗೆ ಎಚ್ಚರಿಕೆ ಸಂದೇಶ ಬಂದಿರುವುದೂ ಇದೇ ವ್ಯವಸ್ಥೆಯಿಂದ.

ಮುಚ್ಚಿಡಲು ನನ್ನ ಬಳಿ ಏನೂ ಇಲ್ಲ. ನನ್ನ ಬಗ್ಗೆ ಎಲ್ಲರಿಗೂ ತಿಳಿದಿದೆ. ನನ್ನ ಇ–ಮೇಲ್‌ಗೆ ಕನ್ನ ಹಾಕಿ ಅವರಿಗೆ ಏನು ದೊರೆಯಲಿದೆ. ಬಹುಷಃ ಭಾರತೀಯ ಇತಿಹಾಸವನ್ನು ಅರ್ಥೈಸಿಕೊಳ್ಳಬಹುದು ಅಥವಾ ಉತ್ತಮ ಇಂಗ್ಲಿಷ್‌ ಅನ್ನು ಕಲಿಯಬಹುದು.
–ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಸಾಮಾನ್ಯ ಹ್ಯಾಕರ್‌ಗಳಿಂದ ಈ ಮಟ್ಟದ ಕನ್ನ ಹಾಕಲು ಸಾಧ್ಯವಿಲ್ಲ. ಐಫೋನ್‌ಗಳಿಗಂತೂ ಅಂತಹ ಕನ್ನ ಸಾಧ್ಯವೇ ಇಲ್ಲ. ಆದರೆ, ಸರ್ಕಾರವೇ ಕೋಟ್ಯಂತರ ರೂಗಳನ್ನು ನೀಡಿ, ಕನ್ನತಂತ್ರಾಂಶವನ್ನು ಅಭಿವೃದ್ಧಿ‍ಪಡಿಸಿದರೆ ಅವು ಅತ್ಯಂತ ಪ್ರಬಲವಾಗಿರುತ್ತವೆ ಮತ್ತು ಅಭೇದ್ಯವಾಗಿರುತ್ತವೆ ಎಂದು 2021ರಲ್ಲಿ ಬಿಡುಗಡೆ ಮಾಡಿದ್ದ ತನಿಖಾ ವರದಿಯಲ್ಲಿ ಆ್ಯಪಲ್‌ ಹೇಳಿತ್ತು. ಈಗ ಭಾರತದ ವಿರೋಧ ಪಕ್ಷಗಳ ನಾಯಕರಿಗೆ ಕಳುಹಿಸಿರುವ ಎಚ್ಚರಿಕೆ ಸಂದೇಶದಲ್ಲೂ ಆ್ಯಪಲ್‌ ಇದನ್ನೇ ಹೇಳಿದೆ.

‘ಸರ್ಕಾರಿ ಪ್ರಾಯೋಜಿತ ಕನ್ನ ಯತ್ನಗಳನ್ನು ಪತ್ತೆ ಮಾಡಲು ಕೆಲವು ಮಾನದಂಡಗಳನ್ನು ರೂಪಿಸಿಕೊಂಡಿದ್ದೇವೆ. ಅವಕ್ಕೆ ಪೂರಕವಾದ ಕನ್ನ ಯತ್ನಗಳು ನಡೆದ ಕೂಡಲೇ, ಅದನ್ನು ಈ ವ್ಯವಸ್ಥೆ ಪತ್ತೆ ಮಾಡುತ್ತದೆ. ಅಂತಹ ಕನ್ನಕ್ಕೆ ಗುರಿಯಾದವರಿಗೆ ಸಂದೇಶ ಕಳುಹಿಸಲಾಗುತ್ತದೆ’ ಎಂದು ಆ್ಯಪಲ್‌ ಹೇಳಿದೆ.

‘ನೀವು ಯಾರು ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದೇ ನೀವು ಸರ್ಕಾರಿ ಪ್ರಾಯೋಜಿತ ಕನ್ನದ ಗುರಿಯಾಗಲು ಏಕೈಕ ಕಾರಣ. ಕೆಲವೇ ಮಂದಿಯನ್ನು ಗುರಿಯಾಗಿಸಿಕೊಂಡು ಇಂತಹ ಕನ್ನವನ್ನು ಯೋಜಿಸಲಾಗುತ್ತದೆ. ಮತ್ತು ಸರ್ಕಾರವೇ ಅದರ ವೆಚ್ಚವನ್ನು ಭರಿಸುವುದರಿಂದ ಇಂತಹ ಕನ್ನತಂತ್ರಾಂಶಗಳನ್ನು ಅತ್ಯಂತ ಸಂಕೀರ್ಣವಾಗಿ ಮತ್ತು ಪ್ರಬಲವಾಗಿ ರೂಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ, ಅದನ್ನು ಪತ್ತೆ ಮಾಡುವುದು ಮತ್ತು ತಡೆಯುವುದೂ ಕಡುಕಷ್ಟಸಾಧ್ಯ’ ಎಂದು ಆ್ಯಪಲ್‌ ತನ್ನ ಎಚ್ಚರಿಕೆ ಸಂದೇಶದಲ್ಲಿ ವಿವರಿಸಿದೆ.

‘ಸರ್ಕಾರಿ ಪ್ರಾಯೋಜಿತ ಕನ್ನ ಯತ್ನಗಳನ್ನು ಪತ್ತೆ ಮಾಡಲು ದಾಳಿ ಯತ್ನ ಸೂಚನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲಾಗಿದೆ. ಮಿತಿಯೇ ಇಲ್ಲದಷ್ಟು ಪ್ರಾಯೋಜಕತ್ವ ಇರುವ ಕಾರಣ ಸರ್ಕಾರಿ ಪ್ರಾಯೋಜಿತ ಕನ್ನ/ದಾಳಿ ತಂತ್ರಾಂಶಗಳನ್ನು ಸದಾ ಅಭಿವೃದ್ಧಿಪಡಿಸಲಾಗುತ್ತಿರುತ್ತದೆ. ಹೀಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಅಂತಹ ಕನ್ನತಂತ್ರಾಶಗಳ ಎದುರು ‘ದಾಳಿ ಯತ್ನ ಸೂಚನೆಗಳು’ ಅಪರಿಪೂರ್ಣ ಎನಿಸಿಬಿಡುತ್ತವೆ. ಹೀಗಾಗಿ ಕೆಲವೊಮ್ಮೆ ಹುಸಿ ಎಚ್ಚರಿಕೆಗಳೂ ಬರಬಹುದು ಅಥವಾ ದಾಳಿ ಯತ್ನವನ್ನು ಪತ್ತೆ ಮಾಡಲು ಸಾಧ್ಯವಾಗದೇ ಹೋಗಬಹುದು’ ಎಂದು ಆ್ಯಪಲ್‌ ತನ್ನ ಎಚ್ಚರಿಕೆ ಸಂದೇಶದಲ್ಲಿ ಹೇಳಿದೆ.

ಸರ್ಕಾರಗಳಷ್ಟೇ ಬಳಸಬಹುದಿತ್ತು

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿ, ಮಾರಾಟ ಮಾಡುತ್ತಿದ್ದ ಪೆಗಾಸಸ್‌ ಕನ್ನತಂತ್ರಾಂಶವನ್ನು ಬಳಸಲು ಸಾಧ್ಯವಿದ್ದದ್ದು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ. ‘ನಾವು ಸರ್ಕಾರಗಳಿಗಷ್ಟೇ ಪೆಗಾಸಸ್‌ ಅನ್ನು ಮಾರಾಟ ಮಾಡುತ್ತೇವೆ’ ಎಂದು ಎನ್‌ಎಸ್‌ಒ ಗ್ರೂಪ್‌ 2019ರಲ್ಲಿ ಹೇಳಿತ್ತು. ಭಾರತದ 160ಕ್ಕೂ ಹೆಚ್ಚು ಜನರ ಫೋನ್‌ಗಳಿಗೆ ಪೆಗಾಸಸ್ ಬಳಸಿಕೊಂಡು ಕನ್ನ ಹಾಕಲು ಯತ್ನಿಸಲಾಗಿದೆ ಎಂಬ ವರದಿ 2019ರಲ್ಲಿ ಬಂದಿತ್ತು. ಈ ವರದಿಯ ಬೆನ್ನಲ್ಲೇ ಎನ್‌ಎಸ್‌ಒ ಗ್ರೂಪ್‌ ಮೇಲಿನ ವಿವರಣೆ ನೀಡಿತ್ತು.

ಆ ವರದಿಯ ಆಧಾರದಲ್ಲಿ ಹಲವು ಜನರು ಮತ್ತು ಹಲವು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಈ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ಸಮಿತಿಯನ್ನೂ ರಚಿಸಿತ್ತು. ಸಮಿತಿಯು, ‘ಪರಿಶೀಲನೆಗೆ ಒಳಪಡಿಸಿದ 29 ಫೋನ್‌ಗಳಲ್ಲಿ 5ರಲ್ಲಿ ಕನ್ನತಂತ್ರಾಶಗಳು ಪತ್ತೆಯಾಗಿವೆ. ತನಿಖೆಗೆ ಸರ್ಕಾರದ ಅಧಿಕಾರಿಗಳು ಸಹಕರಿಸಲಿಲ್ಲ’ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಈ ವಿಚಾರಣೆ ಅಲ್ಲಿಗೇ ನಿಂತಿದೆ. ಈ ಬಗ್ಗೆ ಅರ್ಜಿದಾರರು ಇದೇ ಆಗಸ್ಟ್‌ನಲ್ಲಿ ಪೂರಕ ಅರ್ಜಿಯೊಂದನ್ನು ಸಲ್ಲಿಸಿದ್ದರು. ವಿಚಾರಣೆಯನ್ನು ಮತ್ತೆ ಆರಂಭಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠವು ಹೇಳಿತ್ತು. 

ಸಂಸದರು, ರಾಜಕೀಯ ನಾಯಕರನ್ನೂ ಸೇರಿ ಹಲವರಿಗೆ ಆ್ಯಪಲ್‌ನಿಂದ ‘ಎಚ್ಚರಿಕೆ ಸಂದೇಶ’ ಬಂದಿದೆ. ಒಂದು ವೇಳೆ ಅವರ ಮೊಬೈಲ್‌ಗಳು ಅಷ್ಟೊಂದು ಸುರಕ್ಷಿತವಾಗಿದ್ದರೆ, ಯಾಕಾಗಿ ‘ಎಚ್ಚರಿಕೆ ಸಂದೇಶ’ಗಳು ಬರುತ್ತಿವೆ.
– ರಾಜೀವ್‌ ಚಂದ್ರಶೇಖರ್‌, ಕೇಂದ್ರ ಐಟಿ ಖಾತೆ ರಾಜ್ಯ ಸಚಿವ
ಆಧಾರ: ಆ್ಯಪಲ್‌ ನೀಡಿದ ಎಚ್ಚರಿಕೆ ಸಂದೇಶ, 2021ರಲ್ಲಿ ಆ್ಯಪಲ್‌ ಬಿಡುಗಡೆ ಮಾಡಿದ್ದ ತನಿಖಾ ವರದಿ, ಸುಪ್ರೀಂ ಕೋರ್ಟ್‌ ಆದೇಶಗಳು, ಪಿಟಿಐ, ವಿರೋಧ ಪಕ್ಷಗಳ ನಾಯಕರ ಎಕ್ಸ್‌ಪೋಸ್ಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.