ಕೋವಿಡ್‌ನಿಂದ ಅಸಮಾನತೆ ಹೆಚ್ಚಾಗಿದ್ದು, ಅದನ್ನು ಕೃತಕ ಬುದ್ಧಿಮತ್ತೆಯಂಥ ಆವಿಷ್ಕಾರಗಳು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಅಧ್ಯಯನ ತಿಳಿಸಿದೆ. ಜಿಡಿಪಿಯಲ್ಲಿ ಕಾರ್ಮಿಕರ ಆದಾಯದ ಪಾಲು ಕಡಿಮೆ ಆಗುತ್ತಿದೆ.
ಜಾಗತಿಕ ಮಟ್ಟದಲ್ಲಿ ರೂಪಿಸಲಾಗಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಸಾಧಿಸಲು 2030ರ ಗಡುವನ್ನು ನಿಗದಿಗೊಳಿಸಲಾಗಿದೆ. ಗಡುವಿಗೆ ಇನ್ನು ಆರು ವರ್ಷಗಳಷ್ಟೇ ಬಾಕಿ ಇದ್ದರೂ, ಕ್ರಮಿಸಬೇಕಾದ ಹಾದಿ ಇನ್ನೂ ಬಹುದೂರ ಇದ್ದು, ಅಸಾಧ್ಯವೆನ್ನುವಂತಿದೆ. ಜಿಡಿಪಿಯಲ್ಲಿ ಕಾರ್ಮಿಕರ ಆದಾಯದ ಪಾಲು ಇಳಿಕೆಯಾಗುತ್ತಿರುವುದು ಕೂಡ ಈ ದಿಸೆಯಲ್ಲಿ ಒಂದು ಹಿನ್ನಡೆಯಾಗಿದೆ. ಈ ಬಗ್ಗೆ ಐಎಲ್‌ಒ ‘ವರ್ಲ್ಡ್ ಎಂಪ್ಲಾಯ್‌ಮೆಂಟ್ ಆ್ಯಂಡ್ ಸೋಷಿಯಲ್ ಔಟ್‌ಲುಕ್–ಸೆಪ್ಟೆಂಬರ್ 2024’ ಎನ್ನುವ ಅಧ್ಯಯನ ವರದಿಯನ್ನು ಪ್ರಕಟಿಸಿದೆ.
ಕಾರ್ಮಿಕರ ಆದಾಯದ ಪಾಲು (Labour income share) ಎಂದರೆ, ಒಂದು ಆರ್ಥಿಕತೆಯ ಒಟ್ಟು ಆದಾಯದಲ್ಲಿ ಕಾರ್ಮಿಕರು ಗಳಿಸುವ ಪಾಲು. ಬಂಡವಾಳದಿಂದ ಬರುವ ಆದಾಯ (capital income) ಎಂದರೆ, ಭೂಮಿ, ಯಂತ್ರ, ಕಟ್ಟಡ, ಪೇಟೆಂಟ್‌ಗಳಿಂದ ಬರುವ ಆದಾಯ. ಇವೆರಡನ್ನೂ ಸೇರಿಸಿದರೆ, ರಾಷ್ಟ್ರೀಯ ಆದಾಯ (National income) ಸಿಗುತ್ತದೆ.
ಕಾರ್ಮಿಕರ ಆದಾಯದ ಪಾಲು ಬಹಳ ಹಿಂದಿನಿಂದಲೂ ಕುಸಿಯುತ್ತಲೇ ಇದೆ. 2004ರಿಂದ 2024ರವರೆಗೆ ಕಾರ್ಮಿಕರ ಆದಾಯದ ಪಾಲಿನಲ್ಲಿ ಶೇ 1.6 ಅಂಕಗಳಷ್ಟು ಕುಸಿತವಾಗಿದೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ಕಳೆದ ಎರಡು ದಶಕಗಳಲ್ಲಿ ಉಂಟಾದ ಕುಸಿತದಲ್ಲಿ ಶೇ 40ರಷ್ಟು 2020–2022ರ ಅವಧಿಯಲ್ಲಿಯೇ ಸಂಭವಿಸಿದೆ. ನಂತರ ಅದು ಸ್ಥಿರವಾಗಿದೆ.
ಶೇಕಡಾವಾರಿನಲ್ಲಿ ಈ ಕುಸಿತವು ದೊಡ್ಡದು ಎಂದು ಅನ್ನಿಸದೇ ಇರಬಹುದು. ಹಣದಲ್ಲಿ ಲೆಕ್ಕ ಹಾಕಿದಾಗ ಅದರ ತೀವ್ರತೆ ಅರಿವಾಗುತ್ತದೆ. 2004ರ ಕಾರ್ಮಿಕರ ಆದಾಯದ ಪಾಲು ಸ್ಥಿರವಾಗಿಯೇ ಮುಂದುವರಿದಿದ್ದಲ್ಲಿ 2024ಕ್ಕೆ ಅವರು ₹201 ಲಕ್ಷ ಕೋಟಿಯಷ್ಟು (2.4 ಟ್ರಿಲಿಯನ್ ಡಾಲರ್) ಹೆಚ್ಚು ಆದಾಯ ಗಳಿಸುತ್ತಿದ್ದರು. ಕಾರ್ಮಿಕರ ಆದಾಯದ ಪಾಲಿನ ಕುಸಿತದಿಂದಾಗಿ ಅಸಮಾನತೆಯ ಪ್ರಮಾಣವೂ ಹೆಚ್ಚಾಗುತ್ತಿದೆ. ಏಕೆಂದರೆ, ಬಂಡವಾಳದಿಂದ ಬರುವ ಆದಾಯಕ್ಕೆ ಹೋಲಿಸಿದರೆ, ಕಾರ್ಮಿಕರ ಆದಾಯದ ಪಾಲು ಹೆಚ್ಚು ಸಮನಾಗಿ ಹಂಚಿಕೆಯಾಗಿರುತ್ತದೆ.
ಬಂಡವಾಳದಿಂದ ಬರುವ ಆದಾಯವು ಉದ್ಯಮಿಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ, ಕಾರ್ಮಿಕರ ಆದಾಯದ ಪಾಲನ್ನು ಅಸಮಾನತೆ ಅಳೆಯಲು ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗೆಯೇ ಇದನ್ನು ಸುಸ್ಥಿರ ಅಭಿವೃದ್ಧಿ ಗುರಿ 10ರ (ದೇಶಗಳ ನಡುವಿನ ಮತ್ತು ಒಳಗಿನ ಅಸಮಾನತೆ ಹೋಗಲಾಡಿಸುವುದು) ಪ್ರಗತಿಯನ್ನು ಅಳೆಯಲು ಕೂಡ ಬಳಸಲಾಗುತ್ತಿದೆ.
ಕಳೆದ ಎರಡು ದಶಕಗಳಲ್ಲಿ ರಾಷ್ಟ್ರೀಯ ಆದಾಯದಲ್ಲಿ ಕಾರ್ಮಿಕರ ಆದಾಯದ ಪಾಲು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. 1980ರಷ್ಟು ಹಿಂದೆಯೇ ಈ ಕುಸಿತ ಆರಂಭವಾಗಿದೆ. ನಡುವೆ ಆಗಾಗ್ಗೆ (2008–10ರಲ್ಲಿ ಆದಂತೆ) ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಅಲ್ಪಮಟ್ಟದಲ್ಲಿ ಏರಿಕೆಯಾಗಿದೆ. 2019ರಲ್ಲಿ ಕಾರ್ಮಿಕರ ಆದಾಯದ ಪಾಲು ಶೇ 52.9 ಆಗಿತ್ತು. ಜಾಗತಿಕ ಆರ್ಥಿಕತೆಯು ಕೋವಿಡ್ ಹೊಡೆತದಿಂದ ಹೊರಬಂದು ಚೇತರಿಕೆ ಕಂಡ ನಂತರ ಅದು ಕೋವಿಡ್‌ಪೂರ್ವ ದಿನಗಳಿಗೇ ವಾಪಸ್ ಆಗಿದೆ (2020ರ ಅಲ್ಪ ಅವಧಿಯ ಏರಿಕೆ ಹೊರತುಪಡಿಸಿ). 2022ರಲ್ಲಿ ಅದರ ಪ್ರಮಾಣವು ಶೇ 52.3 ಇತ್ತು. 2023–24ರ ಅಂದಾಜಿನಂತೆ, ಕಾರ್ಮಿಕರ ಆದಾಯದ ಪಾಲು ಕೋವಿಡ್‌ಪೂರ್ವ ದಿನಗಳಿಗಿಂತಲೂ ಶೇ 0.6 ಅಂಶಗಳಷ್ಟು ಕುಸಿಯಲಿದೆ. ಕಾರ್ಮಿಕರ ಆದಾಯದ ಪಾಲು ಕುಸಿಯಲು ಉತ್ಪಾದನಾ ಮಾರುಕಟ್ಟೆ, ಬಂಡವಾಳ ಮಾರುಕಟ್ಟೆ, ಕಾರ್ಮಿಕ ಮಾರುಕಟ್ಟೆ ಮತ್ತು ಜಾಗತೀಕರಣದಂಥ ಹಲವು ಕಾರಣಗಳಿವೆ. ಆದರೆ, ಬಹುಮುಖ್ಯ ಕಾರಣ, ಕೃತಕ ಬುದ್ಧಿಮತ್ತೆಯಂತಹ (ಎಐ) ತಾಂತ್ರಿಕ ಆವಿಷ್ಕಾರಗಳು. ಚಾಟ್ ಜಿಪಿಟಿಯಂಥ ಎಐ ಸಾಧನಗಳಿಂದ ಕಾರ್ಮಿಕ ಆದಾಯದ ಪಾಲು ಕುಸಿತ ಕಂಡಿದೆ. 36 ದೇಶಗಳಲ್ಲಿ ನಡೆಸಿದ ಅಧ್ಯಯನದಿಂದ ಇದು ದೃಢಪಟ್ಟಿದೆ.
ತಾಂತ್ರಿಕ ಬೆಳವಣಿಗೆಯು ಆರ್ಥಿಕ ಅಭಿವೃದ್ಧಿಯ ಪ್ರಮುಖ ಸಾಧನ. ತಾಂತ್ರಿಕತೆಯ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ದುಪ್ಪಟ್ಟು ಮಾಡಬಹುದೆನ್ನುವ ಅಂದಾಜಿದೆ (2024ರಲ್ಲಿ ಶೇ 3.2). ಇದೇ ವೇಳೆ ಅದು ಕಾರ್ಮಿಕರ ಆದಾಯದ ಪಾಲನ್ನು ಕಡಿಮೆ ಮಾಡಿದೆ. ಹಾಗೆಂದು ಎಐನಿಂದ ಪ್ರತಿಕೂಲ ಪರಿಣಾಮಗಳು ಸಂಭವಿಸುತ್ತವೆ ಎಂಬುದು ಎಲ್ಲ ಕಾಲಕ್ಕೂ ಅನ್ವಯಿಸಬಹುದಾದ ಸತ್ಯ ಎಂದೇನಲ್ಲ. ಇಲ್ಲಿ ನೀತಿ ನಿರೂಪಣೆಯು ಪ್ರಮುಖ ಪಾತ್ರ ವಹಿಸುತ್ತದೆ. ಎಐ ಬೆಳವಣಿಗೆಯು ಅಸಮಾನತೆಯನ್ನು ಹೆಚ್ಚಿಸದಂತೆ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಮತ್ತು ಅದರ (ಎಐ) ಪ್ರಯೋಜನವು ಎಲ್ಲರಿಗೂ ಸಮನಾಗಿ ದಕ್ಕುವಂತೆ ಮಾಡಬೇಕಾದ ಅಗತ್ಯದ ಕಡೆಗೆ ಅಧ್ಯಯನವು ಗಮನ ಸೆಳೆಯುತ್ತದೆ.
ಚಾಟ್ ಜಿಪಿಟಿಯಂಥ ಎಐ ಸಾಧನಗಳ ಬೆಳವಣೆಗೆಯ ಜತೆಯಲ್ಲೇ ಕಾರ್ಮಿಕ ಪಡೆಯನ್ನು ಅದನ್ನು ಬಳಸಲು ಅಗತ್ಯವಾದ ಶಿಕ್ಷಣ, ತರಬೇತಿ ಮತ್ತು ಕೌಶಲವನ್ನು ಕಲಿಯುವಂತೆ ಉತ್ತೇಜಿಸುವುದು ಬಹಳ ಮುಖ್ಯವಾದುದು. ಇದರಿಂದ ದೀರ್ಘ ಕಾಲದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿದೆ.
ನಿರುದ್ಯೋಗ ಏರಿಕೆ
ಉದ್ಯೋಗ, ಶಿಕ್ಷಣ ಅಥವಾ ತರಬೇತಿಯಲ್ಲಿ ಇಲ್ಲದ ಯುವಜನರ ಸಂಖ್ಯೆಯು (ಎನ್‌ಇಇಟಿ) 2015ರಿಂದ ಈಚೆಗೆ ಅಲ್ಪ ಮಟ್ಟಿಗೆ ಕುಸಿದಿದ್ದು, 2024ರಲ್ಲಿ ಅದರ ಪ್ರಮಾಣವು ಶೇ 20.4 ಆಗಿದೆ. ಅರಬ್ ರಾಷ್ಟ್ರಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ (ಶೇ 33.3).
2015ರಲ್ಲಿ ಎನ್‌ಇಇಟಿ ದರವನ್ನು ಕಡಿಮೆ ಮಾಡುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಹೊಂದಲಾಗಿತ್ತು. ಆಗ ಎನ್‌ಇಇಟಿಯ ಜಾಗತಿಕ ಪ್ರಮಾಣವು ಶೇ 21.3ರಷ್ಟಿತ್ತು. ಈ ಪ್ರಮಾಣವು 2025 ಮತ್ತು 2026ರಲ್ಲಿಯೂ 20.4ರ ಸನಿಹದಲ್ಲಿಯೇ ಇರುತ್ತದೆ ಎಂದು ಅಂದಾಜಿಸಲಾಗಿದೆ. 2015 ಮತ್ತು 2024ರ ನಡುವೆ ಯುವಜನತೆಯ ಸಂಖ್ಯೆ ಹೆಚ್ಚಾಗಿದ್ದರೂ, ಎನ್‌ಇಇಟಿ ಪ್ರಮಾಣ ಸ್ಥಿರವಾಗಿದೆ. ಅದಕ್ಕಿಂತಲೂ ಗಂಭೀರ ವಿಚಾರವೆಂದರೆ, ಎನ್‌ಇಇಟಿ ಪ್ರಮಾಣವು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ.
ಉದ್ಯೋಗ ಮತ್ತು ಶಿಕ್ಷಣದ ಲಭ್ಯತೆಯಲ್ಲಿ ಲಿಂಗ ಅಸಮಾನತೆ ಇನ್ನೂ ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಎನ್‌ಇಇಟಿಯ ಅಂಕಿಅಂಶಗಳು ತೋರಿಸುತ್ತವೆ. ಕಳೆದ ಎರಡು ದಶಕಗಳಿಂದ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ಆಗಿರುವ ಪ್ರಗತಿ ಕಡಿಮೆ. 2024ರಲ್ಲಿ ಪುರುಷರ ಎನ್‌ಇಇಟಿ ಪ್ರಮಾಣವು ಶೇ 13.1 ಇದ್ದರೆ, ಮಹಿಳೆಯರ ಎನ್‌ಇಇಟಿ ದರವು ಅದರ ಎರಡರಷ್ಟಿದೆ (ಶೇ 28.2).
ಎನ್‌ಇಇಟಿಯಲ್ಲಿ ಲಿಂಗ ಅಂತರ ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿದ್ದು, ಅದು 25.3 ಪಿಪಿ ಇದೆ. (ಪಿಪಿ– ಶೇಕಡಾವಾರು ಅಂಕಗಳು; ಪರ್ಸೆಂಟೇಜ್ ಪಾಯಿಂಟ್ಸ್). ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ 19.1 ಪಿಪಿ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ 17.6 ಪಿಪಿ, ಆಫ್ರಿಕಾದಲ್ಲಿ 12.5 ಪಿಪಿ ಇದೆ. ಯುರೋಪ್ ಮತ್ತು ಸೆಂಟ್ರಲ್ ಏಷ್ಯಾ (3.5 ಪಿಪಿ) ಹಾಗೂ ಉತ್ತರ ಅಮೆರಿಕದಲ್ಲಿ (0.2 ಪಿಪಿ) ಲಿಂಗ ಅಂತರ ಅತಿ ಕಡಿಮೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.