ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ 12 ಕಿ.ಮೀ. ದೂರದಲ್ಲಿರುವ ಮರಕುಂಬಿ ಎಂಬ ಪುಟ್ಟ ಗ್ರಾಮ ಈಗ ದೇಶದಾದ್ಯಂತ ಸುದ್ದಿಯಲ್ಲಿದೆ. ದಲಿತರ ಮೇಲೆ ದೌರ್ಜನ್ಯ ನಡೆಸಿದ ಹಾಗೂ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಆರೋಪ ಸಾಬೀತಾಗಿದ್ದರಿಂದ ಪ್ರಬಲ ಜಾತಿಗಳ 98 ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ದಶಕದ ಹಿಂದೆ ನಡೆದ ಘಟನೆಗೆ ಸಂಬಂಧಿಸಿದ ತೀರ್ಪು ಇದಾಗಿದ್ದರೂ ಗ್ರಾಮದ ಜಾತಿ ಸಂಘರ್ಷಕ್ಕೆ ಸುಮಾರು 20 ವರ್ಷಗಳ ಇತಿಹಾಸ ಇದೆ; ಜಾತಿ ದೌರ್ಜನ್ಯ ಎಸಗುವುದು ಮತ್ತು ಅದನ್ನು ಲಘುವಾಗಿ ಪರಿಗಣಿಸುವುದರ ಪರಿಣಾಮ ಇಂದು ಗ್ರಾಮದಲ್ಲಿ ಗೋಚರಿಸುತ್ತಿದೆ
ಅದು 2014, ಆಗಸ್ಟ್ 28. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಶಿವೆ ಚಿತ್ರಮಂದಿರದಲ್ಲಿ ಕನ್ನಡದ ‘ಪವರ್’ ಸಿನಿಮಾ ನೋಡಲು ಪ್ರಬಲ ಜಾತಿಗಳ ಒಂದಷ್ಟು ಯುವಕರು ತೆರಳಿದ್ದರು. ಟಿಕೆಟ್ ಪಡೆಯುವ ವಿಚಾರವಾಗಿ ಆ ಯುವಕರಿಗೂ ಮತ್ತು ಅಲ್ಲಿದ್ದ ಬೇರೆ ಜನರಿಗೂ ಜಗಳ ಆರಂಭವಾಗಿ, ಹೊಡೆದಾಟವೇ ನಡೆದಿತ್ತು. ಆಗ ಮರಕುಂಬಿ ಗ್ರಾಮದ ದಲಿತ ಸಮುದಾಯದ ಯುವಕರು ಕೂಡ ಅಲ್ಲಿಯೇ ಇದ್ದರು. ಇದೇ ಸಮುದಾಯದ ಹುಡುಗರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಬಲ ಜಾತಿಯ ಮಂಜುನಾಥ ಈಳಿಗೇರ ಆಕ್ರೋಶಗೊಂಡರು; ಸಿನಿಮಾ ಮುಗಿಸಿಕೊಂಡು ಗ್ರಾಮದ ದಲಿತರ ಕೇರಿಗೆ ತಮ್ಮ ಸಮುದಾಯದ ಜನರೊಂದಿಗೆ ಹೋಗಿ ಅಲ್ಲಿನ ಜನರ ಮೇಲೆ ಹಲ್ಲೆ ಮಾಡಿ, ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದರು. ನಂತರ ದೊಡ್ಡ ಹಿಂಸಾಚಾರವೇ ನಡೆದು, ಎರಡೂ ಗುಂಪಿನ ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಘಟನೆಯ ಸಂಬಂಧ ಮಾದಿಗ ಸಮುದಾಯದ ಭೀಮೇಶ್ ದೊಡ್ಡಮನಿ ದೂರು ನೀಡಿದ್ದರು (ಭೀಮೇಶ್ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದಾರೆ). ಮಂಜುನಾಥನನ್ನೇ ಎ–1 ಆರೋಪಿಯನ್ನಾಗಿ ಮಾಡಲಾಗಿತ್ತು. ಪ್ರಕರಣದ ಬಗ್ಗೆ ಹತ್ತು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ಶಿಕ್ಷೆ ಪ್ರಕಟಿಸಿದೆ.
ಈ ಘಟನೆ ನಡೆದು 10 ವರ್ಷವಾಗಿದೆ. ಆದರೆ, ಸುಮಾರು 20 ವರ್ಷಗಳ ಹಿಂದೆಯೇ ಊರಿನಲ್ಲಿ ಜಾತಿ ಸಂಘರ್ಷ ಆರಂಭವಾಗಿತ್ತು. ಅದಕ್ಕೆ ಕಾರಣವಾಗಿದ್ದು ಒಂದು ಸಮುದಾಯ ಭವನ.
‘ಸಭೆ ಸಮಾರಂಭಗಳನ್ನು ನಡೆಸಲು ಸರ್ಕಾರ ಗ್ರಾಮದ ದಲಿತರ ಕೇರಿಯಲ್ಲಿ ಸಮುದಾಯ ಭವನ ನಿರ್ಮಿಸಿತ್ತು. ಇದನ್ನು ಗ್ರಾಮದ ಪ್ರಬಲ ಜಾತಿಯ ಜಮೀನ್ದಾರನೊಬ್ಬ ಭತ್ತ ತುಂಬಿದ ಚೀಲಗಳನ್ನು ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದ. ಆಗ ಗ್ರಾಮದ ದಲಿತರು ಸಭೆ ಮಾಡಿ, ಸಮುದಾಯ ಭವನ ಖಾಲಿ ಮಾಡಿಸಿದರೆ ನಮಗೂ ಸಭೆ ಸಮಾರಂಭ ನಡೆಸಲು ಅನುಕೂಲವಾಗುತ್ತದೆ ಎಂದು ತೀರ್ಮಾನಿಸಿ, ಅದನ್ನು ಊರಿನ ಹಿರಿಯರಿಗೆ ತಿಳಿಸಿದ್ದರು. ಇದು ಜಮೀನ್ದಾರನಿಗೆ ತಿಳಿದು ದಲಿತ ಯುವಕರ ಮೇಲೆ ಹಲ್ಲೆ ನಡೆಯಿತು. ಈ ಸಮುದಾಯಕ್ಕೆ ಸೇರಿದ ಕೆಲವರು ಭತ್ತ ಕಳವು ಮಾಡಿದ್ದಾರೆ ಎಂಬ ಆರೋಪವೂ ನಮ್ಮ ಮೇಲೆ ಬಂದಿದ್ದರಿಂದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮದ ದಲಿತ ಮುಖಂಡ ಮೋಹನ ದೊಡ್ಡಮನಿ. ಕೊನೆಗೆ, ಆಗಿನ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಸಮುದಾಯ ಭವನ ಖಾಲಿ ಮಾಡಿಸಿಕೊಟ್ಟಿದ್ದರು. 2003ರಲ್ಲಿ ನಡೆದ ಈ ಘರ್ಷಣೆ ಗ್ರಾಮದ ದಲಿತರು ಮತ್ತು ಇತರರ ನಡುವೆ ಕಂದಕವನ್ನು ಸೃಷ್ಟಿಸಿತ್ತು. ಮುಂದೆ ಅದು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಯಿತು.
ದಲಿತರಿಗೆ ಗ್ರಾಮದ ಹೋಟೆಲ್‌ಗಳಲ್ಲಿ ಪ್ರವೇಶವಿರಲಿಲ್ಲ. ಹೋಟೆಲ್‌ಗಳಲ್ಲಿ ಪ್ರತ್ಯೇಕ ಲೋಟ, ಅಂಗಡಿಗಳಲ್ಲಿ ಕ್ಷೌರ ನಿರಾಕರಣೆ, ದಿನಸಿ ಸಾಮಾನು ಕೊಡಲು ನಿರಾಕರಿಸಿದ ಘಟನೆಗಳು ಜರುಗಿದವು. ಈ ವೇಳೆ ಹಲವು ಸಂಘಟನೆಗಳು ಮಧ್ಯಪ್ರವೇಶಿಸಿ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಬುದ್ಧಿ ಹೇಳಿದವು. ಅಧಿಕಾರಿಗಳ ದಂಡು ಗ್ರಾಮಕ್ಕೆ ಬಂದು ಶಾಂತಿ ಸಭೆ ನಡೆಸಿ ಸಂಧಾನ ಮಾಡಿ ದಲಿತರಿಗೆ ಹೋಟೆಲ್, ಕ್ಷೌರದಂಗಡಿಗಳಲ್ಲಿ ಅವಕಾಶ ಕಲ್ಪಿಸಿತು. ಆಗ ಸರ್ಕಾರದ ವತಿಯಿಂದಲೇ ಗ್ರಾಮದಲ್ಲಿ ಸಾರ್ವಜನಿಕ ಕ್ಷೌರದಂಗಡಿ ಆರಂಭಿಸಲಾಯಿತು. ಅದು ಈಗ ಅನಾಥ ಸ್ಥಿತಿಯಲ್ಲಿದೆ.
ಹೀಗೆ, 2003ರಿಂದ ಗ್ರಾಮದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆದುಕೊಂಡು ಬಂದಿವೆ. ಅವುಗಳ ಪೈಕಿ ದಲಿತರನ್ನು ತೀವ್ರವಾಗಿ ಕಲಕಿದ್ದು ವೀರೇಶಪ್ಪನ ಸಾವಿನ ಪ್ರಕರಣ. 2014ರಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ದಲಿತ ಸಮುದಾಯದ ವೀರೇಶಪ್ಪ ಪಂಚನಾಮೆ ಸಾಕ್ಷಿದಾರರಾಗಿದ್ದರು; ಒಂದು ಬಾರಿ ನ್ಯಾಯಾಲಯದಲ್ಲಿ ಸಾಕ್ಷಿಯನ್ನೂ ಹೇಳಿದ್ದರು. ಕೃಷಿ ಕೂಲಿಕಾರರ ಸಂಘದ ಮುಖಂಡರೂ ಆಗಿದ್ದ ವೀರೇಶಪ್ಪ 2015ರಲ್ಲಿ ಕೊಪ್ಪಳದಲ್ಲಿ ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದರು. ಇದು ದ್ವೇಷದಿಂದ ನಡೆದ ಕೊಲೆ ಎಂದು ಆರೋಪಿಸಿ ಹಲವು ಸಂಘಟನೆಗಳು ಪ್ರತಿಭಟಿಸಿದ್ದವು. ಈ ಘಟನೆಯ ನಂತರ ಗ್ರಾಮದಲ್ಲಿ ದಲಿತರು ಮತ್ತು ಇತರರ ನಡುವಿನ ಸಂಘರ್ಷ ತಾರಕಕ್ಕೇರಿತು.
ದಲಿತರ ಕೇರಿಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಎರಡು ವರ್ಷಗಳ ತನಕ ದಲಿತರು ಮತ್ತು ಇತರರ ನಡುವೆ ಮಾತುಕತೆ ಇರಲಿಲ್ಲ. ಒಂದು ಓಣಿಯ ಅಂತರವಷ್ಟೇ ಇದ್ದರೂ ಯಾರಿಗೆ ಯಾರೂ ಮುಖಕ್ಕೆ ಮುಖ ಕೊಟ್ಟು ನೋಡದಂಥ ಸ್ಥಿತಿಯಿತ್ತು. ವರ್ಷಗಳು ಉರುಳಿದಂತೆ ವಾತಾವರಣ ತಿಳಿಯಾಗುತ್ತ ಬಂದಿತ್ತು. ಕಳೆದ ಎಂಟು ವರ್ಷಗಳಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಜನ ಒಟ್ಟಿಗೆ ಕೆಲಸ ಮಾಡಿದ್ದಾರೆ; ಗ್ರಾಮದಲ್ಲಿ ಜಾತಿ ಸಂಘರ್ಷ, ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿದ್ದವು.
2003ರಿಂದ 2016ರವರೆಗೆ ನಡೆದ ಸಂಘರ್ಷಗಳನ್ನು ಮರೆತಿದ್ದ ಗ್ರಾಮದ ಜನ, ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಭತ್ತದ ಕೃಷಿಯನ್ನೇ ನೆಚ್ಚಿಕೊಂಡಿರುವ ಈ ಗ್ರಾಮದ ಪ್ರಬಲ ಜಾತಿಗಳ ಜನರ ಮನೆ, ಹೊಲಗಳಿಗೆ ಹೋಗಿ ದಲಿತರು ದುಡಿಯತೊಡಗಿದ್ದರು. ಕೆಲವು ತಿಂಗಳ ಹಿಂದೆ ದಲಿತರ ಕೇರಿಯಲ್ಲಿರುವ ದುರ್ಗಮ್ಮ ದೇವಿ ಜಾತ್ರೆಯನ್ನು ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿದ್ದರು. ಆಗ ಹಲವು ಬಾರಿ ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಚರ್ಚೆ ನಡೆದಿತ್ತು; ಕೆಲ ಆರೋಪಿಗಳು ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ ಎಂದರೆ, ಇನ್ನು ಕೆಲವರು ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಬಿಡಿ ಎಂದಿದ್ದರು. ಇಂಥ ಸಂದರ್ಭದಲ್ಲಿಯೇ ನ್ಯಾಯಾಲಯದ ಆದೇಶ ಬಂದಿದೆ. ಜೀವಾವಧಿ ಶಿಕ್ಷೆಗೊಳಗಾದವರಲ್ಲಿ ಈಡಿಗರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ ಮುಸ್ಲಿಮರು, ಮಡಿವಾಳರು, ಕಬ್ಬೇರರು, ವಿಶ್ವಕರ್ಮ, ಲಂಬಾಣಿ ಸಮುದಾಯದ ಜನ ಇದ್ದಾರೆ.
ಈಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಎರಡೂ ಗುಂಪುಗಳ ಜನರಲ್ಲಿಯೂ ಆತಂಕದ ಛಾಯೆ ಮನೆಮಾಡಿದೆ. ತಮ್ಮ ಮೇಲೆ ಆದ ದೌರ್ಜನ್ಯಕ್ಕೆ ನ್ಯಾಯಾಲಯದಲ್ಲಿ ಜಯ ದೊರೆತರೂ ಗ್ರಾಮದಲ್ಲಿ ಇದು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಬಹುದೇನೋ ಎನ್ನುವ ಆತಂಕ ದಲಿತ ಕೇರಿಯ ಜನರನ್ನು ಕಾಡುತ್ತಿದೆ. ಇದೇ ಕಾರಣಕ್ಕೋ ಏನೋ, ಘಟನೆಯ ಬಗ್ಗೆ ಆಗಲಿ, ನ್ಯಾಯಾಲಯದ ಆದೇಶದ ಬಗ್ಗೆ ಆಗಲಿ ಗ್ರಾಮದ ದಲಿತರು ಒಂದು ಮಾತೂ ಆಡಲು ಸಿದ್ಧರಿಲ್ಲ. ಮುಂಜಾಗ್ರತಾ ಕ್ರಮವಾಗಿ ದಿನದ 24 ತಾಸು ಪೊಲೀಸರು ಊರ ಜನರ ಮೇಲೆ ಕಣ್ಗಾವಲು ಇರಿಸಿದ್ದಾರೆ.
ಮರಕುಂಬಿ ಗ್ರಾಮದಲ್ಲಿ ನಡೆದ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯವಾಗಿತ್ತು. ಹತ್ತು ವರ್ಷ ನಿರಂತರವಾಗಿ ಹೋರಾಟ ಮಾಡಿದ್ದರಿಂದ ಈಗ ನ್ಯಾಯ ಸಿಕ್ಕಿದೆ. ಅನೇಕ ಜನ ಧೈರ್ಯ ಮಾಡಿ ಸಾಕ್ಷ್ಯ ಹೇಳಿದ್ದರಿಂದ ಇದು ಸಾಧ್ಯವಾಯಿತುಅಪರ್ಣಾ ಬಂಡಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೊಪ್ಪಳ
ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎನ್ನುವ ಮಹತ್ವವನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ದೂರುದಾರರು ಮಾಡಿದ ಆರೋಪಗಳು ಸತ್ಯ ಇವೆ ಎನ್ನುವುದು ಸಾಕ್ಷಿಗಳಿಂದ ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನಗಳಿದ್ದರೆ ಹೈಕೋರ್ಟ್ ಮೊರೆ ಹೋಗಲು ಅವಕಾಶವಂತೂ ಇದ್ದೇ ಇದೆಪೀರಾ ಹುಸೇನ್ ಹೊಸಳ್ಳಿ ಹಿರಿಯ ವಕೀಲರು ಕೊಪ್ಪಳ
ಬಳ್ಳಾರಿ ಜೈಲಿನಲ್ಲಿ ಅಪರಾಧಿಗಳು...
ಕನಕಗಿರಿ ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ವ್ಯಾಪ್ತಿಯಲ್ಲಿರುವ ಮರಕುಂಬಿ ಗ್ರಾಮ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಹೊಂದಿದೆ. ಪೊಲೀಸರು ಪ್ರಕರಣದಲ್ಲಿ ಒಟ್ಟು 117 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ 98 ಮಂದಿಗೆ ಜೀವಾವಧಿ ಮೂವರಿಗೆ ತಲಾ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆ ಹಂತದಲ್ಲಿಯೇ 11 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಬಾಲಕರೂ ಪ್ರಕರಣದಲ್ಲಿದ್ದರು. ಇನ್ನುಳಿದವರ ಹೆಸರು ಪುನರಾವರ್ತನೆಯಾಗಿದ್ದವು. ಇದರಲ್ಲಿ ಪ್ರಬಲ ಜಾತಿಗೆ ಸೇರಿದ 98 ಮಂದಿಗೆ ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹5000 ದಂಡ ವಿಧಿಸಲಾಗಿದೆ. ಇನ್ನುಳಿದ ಮೂವರು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಅನ್ವಯವಾಗದು. ಇವರಿಗೆ ಐದು ವರ್ಷ ಜೈಲು ಹಾಗೂ ತಲಾ ₹2 ಸಾವಿರ ದಂಡ ಹಾಕಲಾಗಿದೆ. ಆದೇಶ ಪ್ರಕಟವಾದ ಮರುದಿನವೇ ಒಬ್ಬ ಅಪರಾಧಿ ಮೃತಪಟ್ಟಿದ್ದಾರೆ. 100 ಜನ ಬಳ್ಳಾರಿ ಕಾರಾಗೃಹದಲ್ಲಿದ್ದಾರೆ.
ಜೀವಕಳೆ ಕಳೆದುಕೊಂಡ ಮರಕುಂಬಿ...
ಮರಕುಂಬಿ ಗ್ರಾಮದಲ್ಲಿ ಅಂದಾಜು 1500 ಜನಸಂಖ್ಯೆಯಿದ್ದು ಈಡಿಗ ಮುಸ್ಲಿಂ ರಡ್ಡಿ ಹಾಗೂ ಭೋವಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದ ಜನರಲ್ಲಿ ಈಗ ಮೊದಲಿನ ಜೀವಕಳೆಯಿಲ್ಲ. ಘಟನೆ ಬಗ್ಗೆ ವಿಚಾರಿಸಿದರೆ ‘ಬದುಕಿನಲ್ಲಿ ಹಿಂಡಿ ಹಿಪ್ಪೆಯಾಗಿದ್ದೇವೆ. ಇದೊಂದು ವಿಷಯ ಬಿಟ್ಟು ಬೇರೆ ಮಾತನಾಡಿ’ ಎಂದು ಕೈ ಮುಗಿಯುತ್ತಾರೆ. ಗ್ರಾಮದ ಸರ್ಕಾರಿ ಶಾಲೆಯ ಎದುರಿರುವ ಮನೆಯೊಂದರ ಐದು ಜನ ಜೈಲು ಸೇರಿದ್ದಾರೆ. ಬದುಕಿನ ಇಳಿಸಂಜೆಯಲ್ಲಿರುವ ಅದೇ ಮನೆಯ ವೃದ್ಧರೊಬ್ಬರು ಮನೆಯ ಮುಂದಿನ ಮರಕ್ಕೆ ಒರಗಿಕೊಂಡು ಜೈಲಿನಲ್ಲಿರುವವರ ಬರುವಿಕೆಗಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಭತ್ತದ ಕೃಷಿಯೇ ಈ ಗ್ರಾಮದ ಜನರ ಬದುಕಿಗೆ ಆಧಾರವಾಗಿದ್ದು ಈಗಾಗಲೇ ಫಸಲು ಕಟಾವಿನ ಹಂತಕ್ಕೆ ಬಂದಿದೆ. ಹೊಲದಲ್ಲಿ ಕೆಲಸ ಮಾಡಬೇಕಿದ್ದ ಮನೆಯ ಯಜಮಾನರು ಜೈಲು ಸೇರಿದ್ದಾರೆ. ನೂರಾರು ಕುರಿಗಳನ್ನು ಹೊಂದಿರುವ ಮನೆಯೊಂದರ ಮಾಲೀಕನೂ ಶಿಕ್ಷೆಗೆ ಒಳಗಾಗಿರುವ ಕಾರಣ ಅದರ ಜವಾಬ್ದಾರಿ ಮಗ ಹೊತ್ತಿದ್ದಾನೆ. ಗ್ರಾಮದಲ್ಲಿ ಗುಂಪು ಚೀಟಿ ಮಾಡಿ ವಾರಕ್ಕೆ ಇಂತಿಷ್ಟು ಸಾಲದ ಕಂತು ಕಟ್ಟುವುದು ಹೇಗೆ ಎಂದು ಮಹಿಳೆಯರು ಕಣ್ಣೀರು ಹಾಕುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.
ಕಂಬಾಲಪಲ್ಲಿ ಬದನವಾಳು ಪ್ರಕರಣಗಳ ನೆನಪು
ಕರ್ನಾಟಕದಲ್ಲಿ ಜಾತಿ ದೌರ್ಜನ್ಯ ಹಿಂಸೆ ಎಂದರೆ ತಕ್ಷಣ ನೆನಪಾಗುವುದು ಕಂಬಾಲಪಲ್ಲಿ ಮತ್ತು ಬದನವಾಳು ಪ್ರಕರಣಗಳು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರವೇಶಕ್ಕೆ ಸಂಬಂಧಿಸಿದಂತೆ 1993ರ ಮಾರ್ಚ್ 25ರಂದು ಲಿಂಗಾಯತ ಹಾಗೂ ದಲಿತ ಸಮುದಾಯದ ಮುಖಂಡರ ನಡುವೆ ಸಂಘರ್ಷ ಉಂಟಾಗಿತ್ತು. ಘಟನೆಯಲ್ಲಿ ಮೂವರು ದಲಿತ ಯುವಕರು ಮೃತಪಟ್ಟಿದ್ದರು. ಘಟನೆ ನಡೆದ 17 ವರ್ಷಗಳ ನಂತರ ಮೈಸೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಹೈಕೋರ್ಟ್ 7 ಮಂದಿಯನ್ನು ಖುಲಾಸೆಗೊಳಿಸಿ 13 ಮಂದಿಯ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿತ್ತು.
ಕಂಬಾಲಪಲ್ಲಿ ನರಮೇಧ ನಡೆದಿದ್ದು 2000ದ ಮಾರ್ಚ್ 11ರಂದು. ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ಪ್ರಬಲ ರೆಡ್ಡಿ ಜಾತಿಯ ಗುಂಪೊಂದು ದಲಿತರ ಮನೆಗಳ ಮೇಲೆ ದಾಳಿ ಮಾಡಿತ್ತು; ಏಳು ಮಂದಿ ದಲಿತರನ್ನು ಮನೆಯಲ್ಲಿ ಕೂಡಿಹಾಕಿ ಚಿಮಣಿಗಳಿಂದ ಸೀಮೆಎಣ್ಣೆ ಸುರಿದು ಸಜೀವವಾಗಿ ಸುಟ್ಟು ಹಾಕಲಾಗಿತ್ತು. ಘಟನೆಯ ಸಂಬಂಧ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು 32 ಮಂದಿ ಆಪಾದಿತರ ಮೇಲೆ ಆರೋಪಪಟ್ಟಿ ಸಿದ್ಧಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2006ರಲ್ಲಿ ಸಾಕ್ಷ್ಯ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ 2014ರಲ್ಲಿ ಅಲ್ಲಿಯೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾದರು. ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿಲ್ಲವೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.