ADVERTISEMENT

ಆಳ-ಅಗಲ | ಕರಾವಳಿ ಕಂಬಳದ ಸೀಮೋಲ್ಲಂಘನ

ವಿಕ್ರಂ ಕಾಂತಿಕೆರೆ
ಗಣೇಶ ಚಂದನಶಿವ
Published 23 ನವೆಂಬರ್ 2023, 0:30 IST
Last Updated 23 ನವೆಂಬರ್ 2023, 0:30 IST
<div class="paragraphs"><p>ಬಂಟ್ವಾಳ ತಾಲ್ಲೂಕಿನ ಕಕ್ಯಪದವಿನಲ್ಲಿ ನಡೆದ ಈ ಋತುವಿನ ಮೊದಲ ಕಂಬಳದ ನೋಟ </p></div>

ಬಂಟ್ವಾಳ ತಾಲ್ಲೂಕಿನ ಕಕ್ಯಪದವಿನಲ್ಲಿ ನಡೆದ ಈ ಋತುವಿನ ಮೊದಲ ಕಂಬಳದ ನೋಟ

   

–ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ಸಾಂಪ್ರದಾಯಿಕ ‘ಕರಾವಳಿ ಕಂಬಳ’ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತ ಈಗ ಸೀಮೋಲ್ಲಂಘನದ ಪರ್ವದಲ್ಲಿದೆ. ಇದೇ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ತಾರಾ ಮೆರುಗು ನೀಡಿ ಅದರ ಕೀರ್ತಿಯನ್ನು ಎಲ್ಲೆಡೆ ಪಸರಿಸಲು ಸಂಘಟಕರು ಮುಂದಾಗಿದ್ದಾರೆ.

ADVERTISEMENT

ಬತ್ತ ಬೆಳೆಯುವ ಕೆಸರು ಗದ್ದೆಯಲ್ಲಿ ಗುತ್ತು, ಸೀಮೆ ಅಥವಾ ಬರ್ಕೆಯ ಸಂಪನ್ನತೆಯನ್ನು ಪ್ರತಿಫಲಿಸುವ, ಮನುಷ್ಯ–ಪ್ರಾಣಿಗಳ ಬದುಕಿನ ನಂಟಿನ ಸೂಚಕದಂತೆ ಆರಂಭವಾದ ಕೋಣಗಳ ಓಟದ ಸಂಪ್ರದಾಯ ನಂತರ ವೀರ ಜಾನಪದ ಕ್ರೀಡೆಯಾಗಿ ಮಾರ್ಪಟ್ಟಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪ್ರತಿ ವರ್ಷ ನವೆಂಬರ್‌ನಿಂದ ಏಪ್ರಿಲ್‌ ತಿಂಗಳ ಅವಧಿಯಲ್ಲಿ ಕಂಬಳ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತದೆ. ಈ ವರ್ಷ 23 ಕಂಬಳ ಸ್ಪರ್ಧೆಗಳು ನಿಗದಿಯಾಗಿವೆ.

ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರು ಕಂಬಳ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕನ್ನಡದ ಜೊತೆಗೆ ತುಳುವಿಗೆ ಅಧಿಕೃತ ಭಾಷೆಯ ಸ್ಥಾನ ಮಾನ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದು ಹಾಗೂ ತುಳು ಭವನಕ್ಕೆ ಸರ್ಕಾರದಿಂದ ಬೆಂಗಳೂರಿನಲ್ಲಿ ಜಾಗ ಪಡೆಯುವುದು ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಉದ್ದೇಶಗಳಲ್ಲೊಂದು ಎನ್ನುತ್ತಾರೆ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ. ಈ ಎಲ್ಲಾ ಕಾರಣದಿಂದಲೂ ಬೆಂಗಳೂರು ಕಂಬಳ ಒಂದು ಮೈಲುಗಲ್ಲು ಆಗಲಿದೆ.

ಕಂಬಳದ ಮೂಲ: ಕಂಬಳದ ಮುಖ್ಯ ರೆಫರಿ ಹಾಗೂ ಕಂಬಳ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಡಂಬ ಅವರ ಪ್ರಕಾರ ಕೆಸರು ಮಣ್ಣಿನಿಂದ ಕೂಡಿದ ವಿಶಾಲ ಗದ್ದೆಯೇ ಕಂಬಳದ ಮೂಲವಾಗಿದ್ದು ಈ ಕ್ರೀಡೆಯ ಕುರಿತು ತಾಳಿಪ್ಪಾಡಿ ಶಾಸನ, ಶೃಂಗೇರಿ ಶಾಸನ, ಕಲ್ಲುಮಾಗಣೆ ಶಾಸನ ಹಾಗೂ ಸೂರಾಲಿನ ಶಾಸನಗಳಲ್ಲಿ ಉಲ್ಲೇಖವಿದೆ.

‘ಕೆಸರು ಮಣ್ಣಿನಿಂದ ಕೂಡಿದ ವಿಶಾಲ ಗದ್ದೆಗಳ ಉಳುಮೆಯಲ್ಲಿ ಅನೇಕ ಜೊತೆ ಕೋಣಗಳು, ಹತ್ತಾರು ಜನರು ಪಾಲ್ಗೊಳ್ಳುತ್ತಿದ್ದರು. ಅದು ಉತ್ಸವದಂತೆ ನಡೆಯುತ್ತಿತ್ತು. ಉಳುಮೆಯ ಕೊನೆಯಲ್ಲಿ ಕೋಣಗಳನ್ನು ಸಾಲಾಗಿ ನಿಲ್ಲಿಸಿ ಓಡಿಸುವ ಸಂಪ್ರದಾಯ ಇತ್ತು. ಭೂತಾರಾಧನೆ, ನಾಗಾರಾಧನೆ, ನಂಬಿದ ದೇವರಿಗೆ ಪ್ರಾರ್ಥನೆ, ಹರಕೆಯ ಹಿನ್ನೆಲೆಯಲ್ಲಿ ಕಂಬಳದ ಗದ್ದೆಗಳಲ್ಲಿ ಆರಾಧನೆಯ ಸಂಪ್ರದಾಯ ಬೆಳೆಯಿತು. ನೇಗಿಲು, ಹಗ್ಗ, ಅಡ್ಡಹಲಗೆ, ಕನೆ ಹಲಗೆ ವಿಭಾಗಗಳು ಕಂಬಳದಲ್ಲಿದ್ದು ಈಗ ಆಧುನಿಕ ಕಂಬಳವೂ ಪ್ರಸಿದ್ಧಿ ಪಡೆದಿದೆ’ ಎನ್ನುತ್ತಾರೆ ಅವರು.

ನವೆಂಬರ್‌ನಿಂದ ಏಪ್ರಿಲ್ ಯಾಕೆ?: 

ನೀರಿನ ಲಭ್ಯತೆಗೆ ಅನುಗುಣವಾಗಿ ಕರಾವಳಿ ಭಾಗದಲ್ಲಿ ಬೆಳೆಯನ್ನು ಏಣೇಲ್‌, ಕೊಳಕೆ ಮತ್ತು ಸುಗ್ಗಿ ಎಂದು ವಿಂಗಡಣೆ ಮಾಡಲಾಗಿದೆ. ಏಣೇಲ್ ಗದ್ದೆಗೆ ಮಳೆ ನೀರೇ ಆಶ್ರಯ. ಮಳೆಗಾಲದಲ್ಲಿ ಸುರಿದ ನೀರನ್ನು ನಿಲ್ಲಿಸಿ ಮಾಡುವುದು ಕೊಳಕೆ ಬೇಸಾಯ. ಇದಾದ ನಂತರ ಸುಗ್ಗಿಕಾಲಕ್ಕೆ ಸಿದ್ಧತೆ ಮಾಡಲಾಗುತ್ತದೆ. ಆಗ ಸ್ವಲ್ಪ ಸಮಯಾವಕಾಶ ಸಿಗುವುದರಿಂದ ಕೋಣಗಳನ್ನು ಓಡಿಸುವ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮಾರ್ಚ್ ನಂತರ ಕೋಣಗಳಿಗೆ ಕೂದಲು ಬೆಳೆಯುತ್ತದೆ. ಆಗ ಮೈ ನೋವು ಇರುತ್ತದೆ. ಆಷಾಢದಲ್ಲಿ ತುಂಬ ಬಿಸಿಲು ಇರುತ್ತದೆ. ಮಳೆಗಾಲ ಮುಗಿದು ಹದವಾದ ನೀರು, ಸುಂದರ ನೋಟದ ಪ್ರಕೃತಿಯ ನಡುವೆ ಕಂಬಳ ಆಯೋಜಿಸಲು ಪೂರ್ವಿಕರು ನಿರ್ಧರಿಸಿದ್ದರು ಎನ್ನುತ್ತಾರೆ, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ.

ಬಾರುಕೋಲು ರಹಿತವಾಗಿ ಮಾಡುವ ಸವಾಲು: ಪ್ರಾಣಿ ದಯಾಪರರ ಗುಂಪು (ಪೇಟಾ) ಸಲ್ಲಿಸಿದ ಅರ್ಜಿ ಪರಿಗಣಿಸಿ 2014ರಲ್ಲಿ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದ ಹೋರಿ ಹಾಯಿಸುವ ಕ್ರೀಡೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ಹೀಗಾಗಿ ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ಕೋಣಗಳ ಮಾಲೀಕರು ಮತ್ತು ಕಂಬಳ ಪ್ರಿಯರು ಭಾರಿ ಪ್ರತಿಭಟನೆ ನಡೆಸಿದ್ದರು. ಕಾನೂನು ಹೋರಾಟವೂ ನಡೆದಿತ್ತು. ಸರ್ಕಾರ ಈ ಕ್ರೀಡೆಗಳನ್ನು ಆಯೋಜಿಸಲು 2016ರಲ್ಲಿ ಷರತ್ತುಬದ್ಧ ಒಪ್ಪಿಗೆ ನೀಡಿತ್ತು.

ಆದರೂ ಪ್ರಾಣಿ ದಯಾ ಸಂಘಟನೆಗಳ ಹದ್ದಿನ ಕಣ್ಣು ತಮ್ಮ ಮೇಲೆ ಇದೆ ಎಂಬ ಆತಂಕ ಸದಾ ಕಾಡುತ್ತಿತ್ತು. 2019ರಲ್ಲಿ ಕಕ್ಕೆಪದವು ಮತ್ತು ಮೂಡುಬಿದಿರೆ ಕಂಬಳವನ್ನು ‘ಬಾರುಕೋಲು ರಹಿತ’ವಾಗಿ ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರ ಮಾಡಿರುವ ಕಾನೂನು ತಿದ್ದುಪಡಿಯನ್ನು ಮಾನ್ಯ ಮಾಡಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಈ ವರ್ಷದ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಇದರಿಂದ ಕಂಬಳದ ಮೇಲೆ ಇದ್ದ ಆತಂಕದ ಕಾರ್ಮೋಡ ಸರಿದರೂ ಕಾನೂನು ಚೌಕಟ್ಟಿನಲ್ಲಿ ಕಂಬಳ ಆಯೋಜಿಸುವ ಸವಾಲು ಇನ್ನೂ ಇದೆ.

ಘಟ್ಟ ಏರಲಿರುವ ಕೋಣಗಳು

ಕಕ್ಕೆಪದವು ಎಂಬಲ್ಲಿ ನ.18ರಂದು ನಡೆದ ಈ ಋತುವಿನ ಮೊದಲ ಕಂಬಳವು ಬೆಂಗಳೂರು ಕಂಬಳಕ್ಕೆ ಆಯ್ಕೆ ಟ್ರಯಲ್ಸ್ ಕೂಡ ಆಗಿತ್ತು. ಅಲ್ಲಿ ‘ಸಾಲಿಗೆ ಬಂದ ಕೋಣಗಳು’ (ಅರ್ಹತಾ ಮಟ್ಟ ಮೀರಿದವು) ಬೆಂಗಳೂರಿಗೆ ಪಯಣಿಸಲಿವೆ ಎನ್ನುವುದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ವಿವರಣೆ. ಕಂಬಳದ ತಜ್ಞರ ಪ್ರಕಾರ, ಮಂಗಳೂರಿನ ವ್ಯಕ್ತಿಯೊಬ್ಬರು ತುಳು ಕಾರ್ಯಕ್ರಮಕ್ಕಾಗಿ ಕೋಣಗಳ ಜೋಡಿಯೊಂದನ್ನು ಮುಂಬೈಗೆ ಕರೆದುಕೊಂಡು ಹೋದದ್ದು ಬಿಟ್ಟರೆ ಕರಾವಳಿ ಗಡಿಯನ್ನು ದಾಟಿ ಮತ್ತೊಂದು ಕಡೆಯಲ್ಲಿ ಕಂಬಳದ ಕೋಣಗಳು ಓಡಿಲ್ಲ. ಈಗ ಕೋಣಗಳು ಘಟ್ಟ ಹತ್ತಿ ಬೆಂಗಳೂರಿಗೆ ಯಾನ ಬೆಳೆಸಿವೆ.

ಕೋಣ ಸಾಕುವುದು ಪ್ರತಿಷ್ಠೆ

ಕಂಬಳ ಕೋಣ ಸಾಕುವುದು ಮಾಲೀಕರಿಗೆ ಪ್ರತಿಷ್ಠೆಯ ವಿಷಯ. ಇದು ಶ್ರೀಮಂತಿಕೆಯ ಸಂಕೇತವೂ ಹೌದು. ಒಂದು ಜೋಡಿ ಕೋಣಗಳ ನಿರ್ವಹಣೆಗೆ ವರ್ಷಕ್ಕೆ ಅಂದಾಜು ₹15 ಲಕ್ಷದ ವರೆಗೆ ಖರ್ಚಾಗುತ್ತದೆ ಎಂದು ಕೆಲ ಕೋಣಗಳ ಮಾಲೀಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕೋಣಗಳನ್ನು ಬಹಳ ಕಾಳಜಿ ವಹಿಸಿ ಸಾಕಲಾಗುತ್ತದೆ. ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನೂ ಬದಲಿಸುತ್ತ ಹೋಗಲಾಗುತ್ತದೆ. ಕಂಬಳದ ಋತುವಿನಲ್ಲಿ ನವೆಂಬರ್‌ನಿಂದ ಮಾರ್ಚ್‌ವರೆಗೆ ನಿತ್ಯ ಒಣಹುಲ್ಲು. ಒಂದು ಕೋಣಕ್ಕೆ ನಿತ್ಯ ಸರಾಸರಿ 5 ಕೆ.ಜಿ. ಹುರುಳಿ ಕಾಳು, ಹಣ್ಣು, ತರಕಾರಿ. ಮಾರ್ಚ್‌ ತಿಂಗಳಲ್ಲಿ ಒಣಹುಲ್ಲು, ಹುರುಳಿ ಜೊತೆಗೆ ದೇಹ ತಂಪಾಗಿಸಲು ಕುಂಬಳಕಾಯಿ, ಬಿಟ್‌ರೂಟ್‌, ಗಜ್ಜರಿ. ಮಳೆಗಾಲದಲ್ಲಿ ಹಸಿ ಹುಲ್ಲು, ಮೊಳಕೆ ಕಾಳು, ಹುರುಳಿಯನ್ನು ರುಬ್ಬಿ ಹಿಟ್ಟಿನ ರೂಪದಲ್ಲಿ ಕೊಡಲಾಗುತ್ತದೆ.  ಬೇಸಿಗೆಯಲ್ಲಿ ದೇಹ ತಂಪಾಗಿಸಲು ಹುರುಳಿ ಹಿಟ್ಟಿನಲ್ಲಿ 180 ಮಿಲಿ ಲೀಟರ್‌ ಒಳ್ಳೆಣ್ಣೆ ಮಿಶ್ರಣ ಮಾಡಿ ವಾರದಲ್ಲಿ ಎರಡು ಬಾರಿ ಕೊಡಲಾಗುತ್ತದೆ. ಸಿದ್ಧ ಪಶು ಆಹಾರ ನಿಷಿದ್ಧ. 

ಎಳೆಬಿಸಿಲು ಕಾಯಿಸುವುದು, ಈಜು, ಎಣ್ಣೆಯಲ್ಲಿ ಮಸಾಜ್‌ ಇವು ಕೋಣಗಳ ದಿನಚರಿಯ ಭಾಗ. ಕಂಬಳ ಋತು ಆರಂಭಕ್ಕೆ ಮೂರು ತಿಂಗಳು ಇರುವಂತೆ ಫಿಟ್‌ನೆಸ್‌ಗೆ ಹೆಚ್ಚು ಒತ್ತು. ಈ ಅವಧಿಯಲ್ಲಿ ಬಿಸಿನೀರ ಸ್ನಾನ ಹೆಚ್ಚುವರಿ ಸೇರ್ಪಡೆಯಾಗುತ್ತದೆ. ಆಗಸ್ಟ್‌ನಿಂದ ಅಕ್ಟೋಬರ್‌ ವರೆಗೆ ನಿತ್ಯ 2 ತಾಸು ನೇಗಿಲಿನ ಮೂಲಕ ಭೂಮಿ ಉಳುಮೆ. ಕಂಬಳದ ವೇಳೆ ವಾರಕ್ಕೆ 3 ದಿನ ಉಳುಮೆ ಕಡ್ಡಾಯ. ಉಳುಮೆಯ ನಂತರ ಸ್ನಾನ ಮಾಡಿಸಿ, ಕೊಟ್ಟಿಗೆಯಲ್ಲಿ ಕಟ್ಟಲಾಗುತ್ತದೆ. ಕಂಬಳ ಸ್ಪರ್ಧೆ ಹತ್ತಿರವಾಗುತ್ತಿದ್ದಂತೆ ‘ಕುದಿ’ (ಟ್ರಯಲ್ ಓಟ) ಇರುತ್ತದೆ.

ಫೇಸ್ ಫಿನಿಶಿಂಗ್ ತಂತ್ರಜ್ಞಾನ

ಕಕ್ಕೆಪದವು ಕಂಬಳದಲ್ಲಿ 100 ಮೀಟರ್‌ ಓಟದ ಕರೆಯಲ್ಲಿ 8.78 ಸೆಕೆಂಡುಗಳಲ್ಲಿ ಕೋಣಗಳನ್ನು ದಾಟಿಸಿ ಹೆಸರು ಮಾಡಿದ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರು ಸುದ್ದಿಯಾದ ನಂತರ ಕಂಬಳದ ‘ಟೈಮರ್‌’ ಬಗ್ಗೆ ಅಸಮಾಧಾನದ ಹೊಗೆಯೂ ಎದ್ದಿತ್ತು. ಈ ಸಂದರ್ಭದಲ್ಲಿ ಕಂಬಳದ ಖ್ಯಾತಿಯೂ ಹೆಚ್ಚಾಗಿತ್ತು. ಹೀಗಾಗಿ ಹೊಸ ತಂತ್ರಜ್ಞಾನದ ಬಳಕೆಗೆ ಕಂಬಳ ಸಮಿತಿ ಮುಂದಾಗಿತ್ತು. ಟಿವಿ ಅಂಪೈರ್, ಲೇಜರ್ ಬೀಮ್ ತಂತ್ರಜ್ಞಾನ, ವಿಡಿಯೊ ಫಿನಿಶಿಂಗ್‌ ಇತ್ಯಾದಿ ಸೌಲಭ್ಯಗಳು ಬಂದವು. ಕೋಣಗಳ ಓಟದ ವೇಗವನ್ನು ಖಾತರಿಪಡಿಸಿಕೊಳ್ಳಲು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ದಕ್ಷಿಣ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು ಪೈವಳಿಕೆ ಕಂಬಳಕ್ಕೆ ಭೇಟಿ ನೀಡಿದರು.

ಈ ಬಾರಿ ಕಾಲದ ನಿಖರ ದಾಖಲಾತಿಗಾಗಿ ಲೆಗ್ ಫಿನಿಶಿಂಗ್ ಬದಲಿಗೆ ಫೇಸ್ ಫಿನಿಶಿಂಗ್ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಲಾಗಿದೆ. ಕಾಲಮಿತಿಯಲ್ಲಿ ಸ್ಪರ್ಧೆ ಮುಗಿಸುವುದಕ್ಕಾಗಿ ಸೈರನ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಇವೆರಡರ ಪರೀಕ್ಷೆ ಇದೇ ತಿಂಗಳ 11ರಂದು ಕಾರ್ಕಳದ ಮಿಯಾರಿನಲ್ಲಿ ನಡೆದಿದ್ದು ಬೆಂಗಳೂರು ಕಂಬಳದಲ್ಲಿ ಅಧಿಕೃತವಾಗಿ ಪ್ರಯೋಗಿಸಲು ಕಂಬಳ ಸಮಿತಿ ಮುಂದಾಗಿದೆ.

ಕರಾವಳಿಯ ನೀರು

ಕಂಬಳದ ಕೋಣಗಳಿಗೆ ಕುಡಿಯಲು ಮಾಲೀಕರ ಬಾವಿಯ ನೀರನ್ನೇ ನೀಡಲಾಗುತ್ತದೆ. ಕರಾವಳಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಿದಾಗ ನೀರು ಬದಲಾದರೂ ಭೇದಿ ಆರಂಭವಾಗುತ್ತದೆ. ಹೀಗಾಗಿ ಬೆಂಗಳೂರಿಗೆ ಕರಾವಳಿಯ ಬಾವಿ ನೀರನ್ನೇ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೋಣಗಳನ್ನು ಕರೆದುಕೊಂಡು ಹೋಗುವಾಗ ನೀರು ತುಂಬಿದ ಟ್ಯಾಂಕರ್‌ಗಳು ಕೂಡ ಜೊತೆಯಲ್ಲಿ ಸಾಗಲಿವೆ.

‘ವರ್ಷಗಟ್ಟಲೆ ಒಂದೇ ಬಾವಿಯ ನೀರು ಕುಡಿದ ಕೋಣಗಳಿಗೆ ಇಲ್ಲಿನ ನದಿ ನೀರು ಕುಡಿದರೂ ತೊಂದರೆಯಾಗುತ್ತದೆ. ಹುರುಳಿ, ಬೈ ಹುಲ್ಲಿನ ಸಮಸ್ಯೆ ಇಲ್ಲ. ನೀರಿನ ವಿಷಯದಲ್ಲಿ ಅತಿಸೂಕ್ಷ್ಮವಾಗಿ ಇರಬೇಕು’ ಎಂದು ಲೋಕೇಶ್ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.