–ರಾಹುಲ್ ಗಾಂಧಿ
ನನ್ನ ಪ್ರೀತಿಯ ಭಾರತ ಮಾತೆಯು ನೆಲವಷ್ಟೇ ಅಲ್ಲ. ಅದು ಒಂದಷ್ಟು ಚಿಂತನೆಗಳೂ ಅಲ್ಲ. ಅದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವೂ ಅಲ್ಲ. ಅದು ಜನರಿಗೆ ನೀಡಲಾಗಿರುವ ಬೇರೆ ಬೇರೆ ಜಾತಿಗಳೂ ಅಲ್ಲ. ಎಷ್ಟೇ ದುರ್ಬಲನಿರಲಿ ಅಥವಾ ಎಷ್ಟೇ ಬಲಶಾಲಿ ಆಗಿರಲಿ, ಅದು ಪ್ರತೀ ಭಾರತೀಯನ ಧ್ವನಿ. ಭಾರತವೆಂದರೆ, ಈ ಎಲ್ಲ ಧ್ವನಿಗಳಲ್ಲಿ ಅಡಗಿರುವ ಸಂತೋಷ, ಭೀತಿ, ನೋವು
***
‘ಮಾತುಗಳು ಹೃದಯದಿಂದ ಬಂದರೆ ಅದು ನೇರವಾಗಿ ಹೃದಯವನ್ನೇ ತಾಕುತ್ತದೆ’– ಇದು ಕವಿ ರೂಮಿಯ ಸಾಲು.
ನಾನು ಮನೆ ಎಂದು ಭಾವಿಸಿರುವ ನೆಲದಲ್ಲಿ ನಡೆದಾಡುತ್ತಾ ನೂರ ನಲವತ್ತೈದು ದಿನಗಳನ್ನು ಕಳೆದ ವರ್ಷ ಕಳೆದಿದ್ದೆ. ಕಡಲ ಕಿನಾರೆಯಿಂದ ನಾನು ಆರಂಭಿಸಿದೆ. ತಾಪ, ದೂಳು, ಮಳೆ ಎಲ್ಲದರ ನಡುವೆ ನಡೆದೆ. ಅರಣ್ಯ, ಪಟ್ಟಣಗಳು, ಬೆಟ್ಟಗಳು ಎಲ್ಲವನ್ನೂ ಎಡತಾಕಿ ನನ್ನ ಪ್ರೀತಿಯ ಮಂಜಿನ ನಾಡು ಕಾಶ್ಮೀರವನ್ನು ತಲುಪಿದೆ.
ದಾರಿಯುದ್ದಕ್ಕೂ ಹಲವು ಜನರು ನನ್ನನ್ನು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ: ನೀನು ಇದನ್ನು ಏಕೆ ಮಾಡುತ್ತಿದ್ದೀಯ? ಇಂದಿಗೂ ಕೆಲವರು ಕೇಳುತ್ತಾರೆ, ಏಕೆ? ನೀನು ಹುಡುಕುತ್ತಿರುವುದಾದರೂ ಏನನ್ನು? ನೀನು ಕಂಡುಕೊಂಡದ್ದು ಏನನ್ನು?
ನಾನು ಇಷ್ಟಪಟ್ಟ ಆ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆ ಒಂದು ವಿಚಾರಕ್ಕಾಗಿ ನನ್ನ ಜೀವವನ್ನೂ ಸೇರಿಸಿ ಎಲ್ಲವನ್ನೂ ತ್ಯಜಿಸಲು ಸಿದ್ಧನಿದ್ದೇನೆ. ಆ ಒಂದು ವಿಚಾರದಿಂದಾಗಿ ಈ ಹಲವು ವರ್ಷಗಳಲ್ಲಿ ನಾನು ಅಷ್ಟೊಂದು ನೋವು ಮತ್ತು ಅಪಮಾನವನ್ನು ಎದುರಿಸಿದ್ದೇನೆ.
ನಾನು ಪ್ರೀತಿಸಿದ ಆ ವಿಚಾರ ಯಾವುದು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಬಯಸಿದ್ದೆ. ಅದು ಈ ನೆಲವೇ? ಈ ಪರ್ವತಗಳೇ? ಈ ಸಮುದ್ರವೇ? ಅದೊಂದು ವ್ಯಕ್ತಿಯೇ? ಅದು ಜನರೇ ಅಥವಾ ಚಿಂತನೆಗಳೇ? ಆದರೆ, ಇನ್ನೂ ಏನೋ ಇದೆ. ಈ ರೀತಿಯಲ್ಲಿ ಮೋಡಿಗೆ ಒಳಗಾಗಬೇಕಾದರೆ ನನ್ನ ಹೃದಯ ಎಂತಹ ರೀತಿಯದ್ದು ಎಂಬುದನ್ನೂ ನಾನು ಅರ್ಥ ಮಾಡಿಕೊಳ್ಳಬೇಕಿತ್ತೇ?
ಹಲವು ವರ್ಷಗಳಿಂದ ದಿನವೂ ಎಂಟರಿಂದ ಹತ್ತು ಕಿಲೋಮೀಟರ್ ಓಡುವ ಅಭ್ಯಾಸ ನನಗೆ ಇದೆ. ಹಾಗಾಗಿ ನಾನು– ‘ಇಪ್ಪತ್ತೈದು?’ 25 ಕಿಲೋಮೀಟರ್ ನಾನು ಬಹಳ ಸುಲಭವಾಗಿ ನಡೆದುಬಿಡಬಲ್ಲೆ ಎಂದು ಭಾವಿಸಿದ್ದೆ. ಈ ನಡಿಗೆ ನನಗೆ ಬಹಳ ಸುಲಭದ್ದು ಎಂಬುದು ಖಚಿತವೇ ಇತ್ತು.
ಕೆಲವೇ ದಿನಗಳಲ್ಲಿ ನೋವಿನ ಅನುಭವ ಆಯಿತು. ನನ್ನ ಮಂಡಿಯ ಹಳೆಯ ನೋವು ಕಾಣಿಸಿಕೊಂಡಿತು. ತಾಸುಗಟ್ಟಲೆ ಪಿಸಿಯೋಥೆರಪಿ ಮಾಡಿಸಿಕೊಂಡ ಬಳಿಕ ಮರೆಯಾಗಿದ್ದ ನೋವು ಮರಳಿ ಬಂದಿದೆ. ಮರುದಿನ ಬೆಳಿಗ್ಗೆ, ಕಬ್ಬಿಣದ ಕಂಟೇನರ್‌ನಲ್ಲಿ ಒಬ್ಬನೇ ಕುಳಿತು ಕಣ್ಣೀರಾದೆ. ನನ್ನ ಮುಂದೆ ಚಾಚಿಕೊಂಡಿರುವ 3,800 ಕಿಲೋಮೀಟರ್‌ಗಳನ್ನು ನಡೆಯುವುದು ಹೇಗೆ? ನನ್ನೊಳಗಿದ್ದ ಅಹಂ ಜಾರಿ ಹೋಗಿತ್ತು.
ಮುಂಜಾನೆ ಬೆಳಕು ಕಾಣಿಸಿಕೊಳ್ಳುವ ಮುನ್ನವೇ ನಾವು ನಡಿಗೆ ಆರಂಭಿಸುತ್ತಿದ್ದೆವು. ಬಹುತೇಕ ತಕ್ಷಣವೇ ನೋವು ಶುರುವಾಗುತ್ತಿತ್ತು. ಹಸಿದ ತೋಳದಂತೆ ಅದು ನಾನು ಹೋದಲ್ಲೆಲ್ಲ ಹಿಂಬಾಲಿಸುತ್ತಿತ್ತು. ನಾನು ನಿಲ್ಲುವುದಕ್ಕೆ ಕಾಯುತ್ತಿತ್ತು. ನಡಿಗೆ ಆರಂಭಿಸಿ ಕೆಲವು ದಿನಗಳಾಗುವಷ್ಟರಲ್ಲಿ ಪಿಸಿಯೋಥೆರಪಿಸ್ಟ್ ನಮ್ಮನ್ನು ಕೂಡಿಕೊಂಡರು. ಅವರು ಬಂದವರು ಸಲಹೆಗಳನ್ನು ಕೊಟ್ಟರು. ನೋವು ಹಾಗೆಯೇ ಮುಂದುವರಿಯಿತು.
ಬಳಿಕ ನಾನು ಏನನ್ನೋ ಗಮನಿಸಲು ಆರಂಭಿಸಿದೆ. ನಡಿಗೆ ನಿಲ್ಲಿಸೋಣ ಎಂದು, ಕೈಚೆಲ್ಲಿ ಬಿಡೋಣ ಎಂದು ನಾನು ಪ್ರತಿ ಬಾರಿ ಯೋಚಿಸಿದಾಗಲೂ ಯಾರೋ ಒಬ್ಬರು ಬಂದು ಮುಂದುವರಿಸುವ ಚೈತನ್ಯ ತುಂಬುವ ಉಡುಗೊರೆ ಕೊಟ್ಟು ಹೋಗುತ್ತಿದ್ದರು. ಒಂದು ಬಾರಿ ಅದು ಪ್ರೀತಿಯ ಪುಟ್ಟ ಹುಡುಗಿಯ ಚಂದದ ಪತ್ರದ ರೂಪದಲ್ಲಿತ್ತು. ಮತ್ತೊಂದು ಬಾರಿ ಬಾಳೆಕಾಯಿ ಚಿಪ್ಸ್‌ನೊಂದಿಗೆ ಬಂದ ವೃದ್ಧೆ. ಮತ್ತೊಮ್ಮೆ ವ್ಯಕ್ತಿಯೊಬ್ಬರು ಥಟ್ಟಂತ ಓಡಿಬಂದು ನನ್ನ ತಬ್ಬಿಕೊಂಡರು. ಇದು ಹೇಗೆ ಎಂದರೆ ಮೌನ ಚೈತನ್ಯವೊಂದು ನನಗೆ ನೆರವಾಗುತ್ತಲೇ ಇದ್ದಂತೆ, ಕತ್ತಲೆಯ ಅರಣ್ಯದಲ್ಲಿ ಮಿಂಚುಹುಳಗಳ ಬೆಳಕಿನಂತೆ, ಇದು ಎಲ್ಲೆಲ್ಲೂ ಇತ್ತು. ನನಗೆ ನಿಜಕ್ಕೂ ಅದರ ಅಗತ್ಯ ಇತ್ತು ಅನಿಸಿದಾಗಲೆಲ್ಲ ನನಗೆ ನೆರವು ನೀಡಿ ಮಾರ್ಗದರ್ಶನ ಮಾಡಲು ಅದು ಇತ್ತು.
ಯಾತ್ರೆಯು ಮುಂದುವರಿಯಿತು. ಮೊದ ಮೊದಲಿಗೆ, ನನಗೆ ಹೇಳಬೇಕನಿಸಿದ್ದನ್ನು ಹೇಳಬೇಕು ಎಂದುಕೊಂಡಿದ್ದೆ. ನನಗೆ ಅರ್ಥವಾಗಿದೆ ಎಂಬುದನ್ನು ಅವರಿಗೆ ತೋರಿಸಬೇಕು ಎಂದು ಬಯಸಿದ್ದೆ. ಅವರ ಸಮಸ್ಯೆಗಳಿಗೆ ಇರುವ ಪರಿಹಾರಗಳ ಕುರಿತು ಮಾತನಾಡಬೇಕು ಎಂದುಕೊಂಡಿದ್ದೆ. ಬಹಳ ಬೇಗನೆ ಜನರ ಸಂಖ್ಯೆ ದೊಡ್ಡದಾಯಿತು. ನೋವು ಅಷ್ಟೇ ಜೋರಾಯಿತು ಮತ್ತು ನಾನು ಅವರನ್ನು ಗಮನಿಸಲಾರಂಭಿಸಿದೆ ಮತ್ತು ಆಲಿಸಲಾರಂಭಿಸಿದೆ.
ನಾವು ನಡೆಯುವಲ್ಲೆಲ್ಲ ಒಂದು ರೀತಿಯ ಅಬ್ಬರ ಇತ್ತು. ದೊಡ್ಡ ದನಿಯಲ್ಲಿ ಘೋಷಣೆ, ಕ್ಯಾಮೆರಾ ಕ್ಲಿಕ್ಕಿಸುವ ಸದ್ದು, ಜನರ ತಳ್ಳಾಟ, ನೂಕಾಟ. ಮತ್ತೆ ಮತ್ತೆ, ಮತ್ತೆ ಮತ್ತೆ. ಪ್ರತಿ ದಿನವೂ ಎಂಟರಿಂದ ಹತ್ತು ತಾಸು ನಾನು ಸುಮ್ಮನೆ ಆಲಿಸಲಾರಂಭಿಸಿದೆ ಮತ್ತು ಮಂಡಿಯನ್ನು ನಿರ್ಲಕ್ಷಿಸಲು ಶ್ರಮಿಸಿದೆ.
ಒಂದು ದಿನ, ನಾನು ಎಂದೂ ಅನುಭವಿಸದ ಮೌನವನ್ನು ಅನುಭವಿಸಿದೆ. ನನ್ನ ಕೈಹಿಡಿದು ಸಾಗುತ್ತಾ ಮಾತನಾಡುತ್ತಿದ್ದ ವ್ಯಕ್ತಿಯ ಧ್ವನಿಯಲ್ಲದೆ ಬೇರೇನೂ ಕೇಳುತ್ತಿರಲಿಲ್ಲ. ಸಣ್ಣವನಿದ್ದಾಗಿನಿಂದ ನನ್ನೊಳಗೆ ಇದ್ದು ಮಾತನಾಡುತ್ತಿದ್ದ ಆ ಒಳಧ್ವನಿ ಇಲ್ಲವಾಗಿತ್ತು. ಏನೋ ಒಂದು ಸತ್ತು ಹೋದಂತೆ ಅನಿಸಿತು.
ಆತ ರೈತ, ತನ್ನ ಬೇಸಾಯದ ಕುರಿತು ಮಾತನಾಡಿದ. ಕೊಳೆತು ಹೋದ ಹತ್ತಿಯ ರಾಶಿ ತೋರಿಸಿ ಆತ ಅಳುತ್ತಿದ್ದ. ವರ್ಷಗಳಿಂದ ಆತ ಪಟ್ಟಿದ್ದ ಸಂಕಷ್ಟ ಆತನ ಕೈಗಳಲ್ಲಿ ಕಾಣಿಸುತ್ತಿತ್ತು. ತನ್ನ ಮಕ್ಕಳ ಕುರಿತು ಆತನಲ್ಲಿದ್ದ ಭಯ ಆ ಹತ್ತಿ ರಾಶಿಯಲ್ಲಿ ಕಾಣುತ್ತಿತ್ತು. ಮುದುಡಿರುವ ಆತನ ಮುಖದಲ್ಲಿ ಆತ ಹಸಿವಿನಲ್ಲಿ ಕಳೆದ ರಾತ್ರಿಗಳನ್ನು ಕಾಣಬಹುದಿತ್ತು. ತನ್ನ ತಂದೆ ಸಾಯುವುದನ್ನು ಅಸಹಾಯಕವಾಗಿ ನೋಡಬೇಕಾಗಿ ಬಂದದ್ದರ ಕುರಿತು ಆತ ಹೇಳಿದ. ಹೆಂಡತಿಗೆ ಕೊಡಲು ಹಣವೇ ಇಲ್ಲದೆ ಅವಮಾನಿತನಾದದ್ದನ್ನೂ ಹೇಳಿದ. ನಾನು ಹೇಳುವಂತಹುದು ಏನೂ ಇರಲಿಲ್ಲ. ನಡೆಯುವುದನ್ನು ನಿಲ್ಲಿಸಿ ಆತನನ್ನು ತಬ್ಬಿಕೊಂಡೆ.
ಇಂತಹುದು ಮತ್ತೆ ಮತ್ತೆ ನಡೆಯಿತು. ಮಕ್ಕಳೊಂದಿಗೆ, ತಾಯಂದಿರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಆಯಿತು. ವರ್ತಕರು, ಬಡಗಿಗಳು ಮತ್ತು ಕಾರ್ಮಿಕರೊಂದಿಗೆ ಆಯಿತು. ಸೈನಿಕರೊಂದಿಗೂ ಆಯಿತು. ಈಗ, ನನಗೆ ನನ್ನ ಧ್ವನಿ ಅಥವಾ ಗುಂಪಿನ ಧ್ವನಿ ಕೇಳಿಸುತ್ತಲೇ ಇಲ್ಲ. ನನ್ನ ಕಿವಿಯಲ್ಲಿ ಮಾತನಾಡುತ್ತಿರುವ ವ್ಯಕ್ತಿಯಿಂದ ನನ್ನ ಗಮನ ಬೇರೆಲ್ಲೂ ಹೋಗುತ್ತಿರಲಿಲ್ಲ. ನನ್ನೊಳಗಿದ್ದ ವಟಗುಟ್ಟುವಿಕೆ ಮತ್ತು ನ್ಯಾಯತೀರ್ಮಾನದ ಸ್ವಭಾವ ಹೋಗಿಯೇ ಬಿಟ್ಟಿದೆ. ಅನುತ್ತೀರ್ಣನಾಗುವುದರ ಭೀತಿಯ ಕುರಿತು ವಿದ್ಯಾರ್ಥಿಯೊಬ್ಬ ಹೇಳಿಕೊಂಡಾಗ ನಾನು ಅದನ್ನು ಆಲಿಸಿದೆ. ಒಂದು ಬೆಳಿಗ್ಗೆ, ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಬೀದಿಗೆ ತಳ್ಳಲ್ಪಟ್ಟ ಸಣ್ಣ ಮಕ್ಕಳ ಗುಂಪೊಂದು ನನ್ನ ಮುಂದೆ ನಡುಗುತ್ತಿರುವುದನ್ನು ಕಂಡ ಬಳಿಕ, ಟಿ–ಶರ್ಟ್ ಹಾಕಿಕೊಂಡು ಎಲ್ಲಿಯವರೆಗೆ ನಡೆಯಲು ಸಾಧ್ಯವೋ ಅಲ್ಲಿಯವರೆಗೆ ನಡೆಯಬೇಕು ಎಂದು ನಿರ್ಧರಿಸಿದೆ.
ನನ್ನ ಪ್ರೀತಿಯು ಯಾವುದಾಗಿತ್ತು ಎಂಬುದು ನನ್ನ ಮುಂದೆ ದಿಢೀರ್ ತೆರೆದುಕೊಂಡಿತು. ನನ್ನ ಪ್ರೀತಿಯ ಭಾರತ ಮಾತೆಯು ನೆಲವಷ್ಟೇ ಅಲ್ಲ. ಅದು ಒಂದಷ್ಟು ಚಿಂತನೆಗಳೂ ಅಲ್ಲ. ಅದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವೂ ಅಲ್ಲ. ಅದು ಜನರಿಗೆ ನೀಡಲಾಗಿರುವ ಬೇರೆ ಬೇರೆ ಜಾತಿಗಳೂ ಅಲ್ಲ. ಎಷ್ಟೇ ದುರ್ಬಲನಿರಲಿ ಅಥವಾ ಎಷ್ಟೇ ಬಲಶಾಲಿ ಆಗಿರಲಿ, ಅದು ಪ್ರತೀ ಭಾರತೀಯನ ಧ್ವನಿ. ಭಾರತವೆಂದರೆ, ಈ ಎಲ್ಲ ಧ್ವನಿಗಳಲ್ಲಿ ಅಡಗಿರುವ ಸಂತೋಷ, ಭೀತಿ, ನೋವು.
ಭಾರತದ ಧ್ವನಿಯನ್ನು ಆಲಿಸಿದ ಬಳಿಕ ನನ್ನ ಧ್ವನಿ, ನನ್ನ ಬಯಕೆಗಳು, ನನ್ನ ಮಹತ್ವಾಕಾಂಕ್ಷೆಗಳು ಎಲ್ಲವೂ ಧ್ವನಿ ಕಳೆದುಕೊಂಡವು. ಭಾರತವು ತನ್ನವರೊಂದಿಗೆ ಮಾತನಾಡುತ್ತದೆ, ಆದರೆ ಆ ವ್ಯಕ್ತಿಯು ವಿನೀತನಾಗಿದ್ದಾಗ ಮತ್ತು ಪೂರ್ಣವಾಗಿ ಮೌನಿಯಾಗಿದ್ದಾಗ ಮಾತ್ರ.
ಇದು ಎಷ್ಟೊಂದು ಸರಳವಿದೆ ನೋಡಿ. ಸಮುದ್ರದಲ್ಲಿಯಷ್ಟೇ ಕಾಣಿಸಬಹುದಾದುದನ್ನು ನಾನು ಈವರೆಗೆ ನದಿಯಲ್ಲಿ ಹುಡುಕಾಡುತ್ತಿದ್ದೆ.
ಲೇಖಕ: ವಯನಾಡ್‌ನ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.