ADVERTISEMENT

ಆಳ–ಅಗಲ | ಹೊಸ ಕ್ರಿಮಿನಲ್‌ ಕಾನೂನುಗಳು: ರಾಜ್ಯದ ಆಕ್ಷೇಪಗಳೇನು?

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 20:46 IST
Last Updated 3 ಜುಲೈ 2024, 20:46 IST
   

ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ಅಪರಾಧ ಕಾನೂನುಗಳಲ್ಲಿರುವ ಕೆಲವು ಅಂಶಗಳ ಬಗ್ಗೆ ಕರ್ನಾಟಕ ಸರ್ಕಾರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಯ್ದೆ ಆಗುವುದಕ್ಕೂ ಮುನ್ನ, ಮೂರು ಮಸೂದೆಗಳ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ನೇತೃತ್ವದಲ್ಲಿ

11 ಸದಸ್ಯರ ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ವರದಿ ನೀಡಿದ್ದು, ಕಾಯ್ದೆಗಳಲ್ಲಿ ಹಲವು ತಿದ್ದುಪಡಿಗಳಿಗೆ ಸಲಹೆ ನೀಡಿತ್ತು. ಈ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಈ ಸಲಹೆಯನ್ನು ಕೇಂದ್ರವು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಅಸಮಾಧಾನಗೊಂಡಿದೆ. ಹಾಗಾಗಿ, ರಾಜ್ಯದಲ್ಲಿ ಮೂರೂ ಕಾಯ್ದೆಗಳ ಕೆಲವು ಕಲಂಗಳಿಗೆ ತಿದ್ದುಪಡಿ ಮಾಡುವುದಾಗಿ ಸರ್ಕಾರ ಹೇಳಿದೆ. 

ತಜ್ಞರ ಸಮಿತಿಯ ವರದಿಯಲ್ಲಿರುವ ಪ್ರಮುಖ ಸಲಹೆಗಳ ಕುರಿತು ಇಲ್ಲಿ ಬೆಳಕು ಚೆಲ್ಲಲಾಗಿದೆ...

ADVERTISEMENT
ಪ್ರಮುಖ ಸಲಹೆಗಳು

* ಕಾಯ್ದೆಯಲ್ಲಿರುವ ‘ನ್ಯಾಯ’ ಮತ್ತು ‘ಸಂಹಿತೆ’ ಪದಗಳು ಇಂಗ್ಲಿಷ್‌ ಪದಗಳಲ್ಲ. ಭಾರತೀಯ ಸಂವಿಧಾನದ ವಿಧಿ 348ರ ಪ್ರಕಾರ, ಸಂಸತ್‌ ಅಥವಾ ರಾಜ್ಯ ವಿಧಾನಸಭೆಗಳು ಅಂಗೀಕರಿಸುವ ಕಾಯ್ದೆಗಳು ಇಂಗ್ಲಿಷ್‌ನಲ್ಲಿರಬೇಕು.

* ಕಾನೂನಿನ ಉದ್ದೇಶ ಮತ್ತು ಆಶಯವನ್ನು ಕಾಯ್ದೆಯ ಹೆಸರು ಪ್ರತಿಧ್ವನಿಸುವುದಿಲ್ಲ. ನಾಗರಿಕರಿಗೆ ಭದ್ರತೆ ನೀಡುವ, ಅವರ ಜೀವ, ಆಸ್ತಿ ರಕ್ಷಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಕ್ರಿಮಿನಲ್‌ ಕಾನೂನಿನ ಸಹಾಯದಿಂದ ಇದನ್ನು ಸಾಧಿಸಬಹುದು. ತಪ್ಪು ಮಾಡಿದವರನ್ನು ಶಿಕ್ಷಿಸುವುದು ಮತ್ತು ಅಪರಾಧಗಳನ್ನು ತಡೆಯುವುದು ಕಾನೂನಿನ ಉದ್ದೇಶ. ವಸಾಹತುಶಾಹಿಯ ಕಾಲದ ಕಾನೂನಿನಿಂದ ಹೊಸ ಕಾನೂನಿಗೆ ಬದಲಾಗುವಾಗ ಕಾಯ್ದೆಯ ಆಶಯವು ‘ಶಿಕ್ಷಿಸುವುದು’ ಎಂಬುವುದರಿಂದ, ‘ನ್ಯಾಯ’ ಕೊಡುವುದು ಎಂದು ಬದಲಾದಂತೆ ಕಾಣುತ್ತದೆ. ‘ಶಿಕ್ಷೆ’ ಎಂಬ ಅಂಶಕ್ಕೆ ಒತ್ತು ನೀಡುವ ಅಗತ್ಯವಿದೆ. ಹಾಗಾಗಿ, ಕಾಯ್ದೆಯ ಹೆಸರು ‘ದಂಡ ಸಂಹಿತೆ’ ಎಂದಿರಬೇಕು.

* ಕಾಯ್ದೆಯ ಹೆಸರು ಭಾರತೀಯ ನ್ಯಾಯ ಸಂಹಿತೆ ಎಂದಿದ್ದರೂ, ಎಲ್ಲ ಕಲಂಗಳಲ್ಲಿ ‘ಇಂಡಿಯಾ’ ಎಂದು ಬಳಸಲಾಗಿದೆ. ಎಲ್ಲೆಲ್ಲಿ ‘ಇಂಡಿಯಾ’ ಎಂದು ಬಳಸಲಾಗಿದೆಯೋ, ಅಲ್ಲೆಲ್ಲ ‘ಭಾರತ’ ಎಂದು ಬದಲಾಯಿಸಬೇಕು.

* ಭಾರತೀಯ ದಂಡ ಸಂಹಿತೆಯು (ಐಪಿಸಿ) ಪರಿಪೂರ್ಣವಾದಂತಹ ಕಾನೂನು. ಎಲ್ಲ ರೀತಿಯ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಇದರಲ್ಲಿ ನಿಗದಿಪಡಿಸಲಾಗಿದೆ. ಶಿಕ್ಷೆಗಾಗಿ ಬೇರೆ ಕಾಯ್ದೆಗಳನ್ನು ಉಲ್ಲೇಖಿಸಬೇಕಾಗಿಲ್ಲ. ಆದರೆ, ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೆಲವು ನಿರ್ದಿಷ್ಟ ವಿಷಯಗಳ ವ್ಯಾಖ್ಯಾನಕ್ಕಾಗಿ ಬೇರೆ ಕಾನೂನುಗಳನ್ನು ಅವಲಂಬಿಸಬೇಕಾಗಿದೆ. ಇದು ಸರಿಯಲ್ಲ. ಬೇರೆ ಕಾನೂನುಗಳನ್ನು ಅವಲಂಬಿಸದೆ ಎಲ್ಲ ಅಪರಾಧಗಳಿಗೆ ಸಂಬಂಧಿಸಿದ ವ್ಯಾಖ್ಯಾನಗಳು ಕಾಯ್ದೆಯಲ್ಲೇ ಇರಬೇಕು.

* ‘ಶಿಕ್ಷೆ’ಗೆ ಸಂಬಂಧಿಸಿದ ಕಾಯ್ದೆಯ ಎರಡನೇ ಅಧ್ಯಾಯದಲ್ಲಿ 4ನೇ ಕಲಂನ ಉಪ ಕಲಂ (ಎಫ್‌) ನಲ್ಲಿ ‘ಸಮುದಾಯ ಸೇವೆ’ ಎಂಬ ಶಿಕ್ಷೆಯನ್ನು ಉಲ್ಲೇಖಿಸಲಾಗಿದೆ. ಆದರೆ, ಶಿಕ್ಷೆ ರೂಪದ ‘ಸಮುದಾಯ ಸೇವೆ’ಯನ್ನು ಕಾಯ್ದೆಯಲ್ಲಿ ವಿವರಿಸಲಾಗಿಲ್ಲ. ಸ್ಪಷ್ಟವಾದ ವ್ಯಾಖ್ಯಾನ ನೀಡಬೇಕು.

‌* ‘ಸರ್ಕಾರಿ ಅಧಿಕಾರಿ’ (ಪಬ್ಲಿಕ್‌ ಸರ್ವೆಂಟ್‌) ಬಗ್ಗೆ ವಿವರಣೆ ನೀಡುವ ಕಲಂ 2 (28)ರ ಉಪಕಲಂ 28(ಕೆ) ನಂತರ ನೀಡಿರುವ (ಸಿ) ವಿವರಣೆಯಲ್ಲಿ ‘ಚುನಾವಣೆ’ ಕುರಿತಂತೆ ಅರ್ಥ ವಿವರಿಸಲಾಗಿದ್ದು,  ಈ ಕಲಂ ಅಡಿಯಲ್ಲಿ ಇದರ ಅಗತ್ಯವಿಲ್ಲ. ಚುನಾವಣೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಕಾಯ್ದೆಯ ಒಂಬತ್ತನೇ ಅಧ್ಯಾಯ ಇದೆ. ಹಾಗಾಗಿ, ಚುನಾವಣೆಗೆ ಸಂಬಂಧಿಸಿದ ವಿವರಣೆಗೆ ಪ್ರತ್ಯೇಕ ಉಪ ಕಲಂ 2(29) ಅಗತ್ಯವಿದೆ.

* ಅಪರಾಧದ ಬಗ್ಗೆ ತಿಳಿವಳಿಕೆ ಇದ್ದುಕೊಂಡು ಅಥವಾ ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯವನ್ನು ಹಲವರು ಎಸಗಿದರೆ ಪ್ರತಿಯೊಬ್ಬರೂ ಒಂದೇ ರೀತಿಯ ಶಿಕ್ಷೆ ‍ಅನುಭವಿಸಬೇಕು ಎಂದು ವಿವರಿಸುವ ಕಲಂ 3 (6) ಅನ್ನು ಪ್ರತ್ಯೇಕ ಕಲಂ ಆಗಿ ಪರಿಗಣಿಸಬೇಕು.

* ಶಿಕ್ಷೆಗೆ ಸಂಬಂಧಿಸಿದ ಅಧ್ಯಾಯ 2ರಲ್ಲಿ ಉಪ ಕಲಂ (ಬಿ) ಜೀವಾವಧಿ ಶಿಕ್ಷೆಯನ್ನು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಜೀವಾವಧಿ ಶಿಕ್ಷೆಯನ್ನು ‘ಒಬ್ಬ ವ್ಯಕ್ತಿಯ  ಜೀವಾವಧಿಯ ಬಾಕಿ ಸಹಜ ಜೀವನದ ಅವಧಿ’ ಎಂದು ಹೇಳಲಾಗಿದೆ. ಕಾಯ್ದೆಯ 6ನೇ ಕಲಂ, ‘ಜೈಲು ಶಿಕ್ಷೆಯ ಪ್ರಮಾಣವನ್ನು ಲೆಕ್ಕ ಹಾಕುವಾಗ, ನಿರ್ದಿಷ್ಟ ಅವಧಿಯನ್ನು ಉಲ್ಲೇಖಿಸದೆ, ಜೀವಾವಧಿ ಶಿಕ್ಷೆ ಎಂದರೆ 20 ವರ್ಷಗಳ ಕಾರಾಗೃಹ ಶಿಕ್ಷೆ ಎಂದರ್ಥ’ ಎಂದು ಹೇಳುತ್ತದೆ. ಇವೆರಡೂ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ಹಾಗಾಗಿ, ಇದನ್ನು ಸರಿಪಡಿಸಬೇಕು.

* ಕಲಂ 41 (ಬಿ)ಯಲ್ಲಿ ಮನೆ ಕಳ್ಳತನ ಎಂಬ ಪದಗಳ ನಂತರ ‘ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೂ ಮೊದಲು’ ಎಂದು ಸೇರಿಸಲಾಗಿದೆ. ಕಲಂ 41, ಸಂತ್ರಸ್ತ ವ್ಯಕ್ತಿಗೆ ಸ್ವಯಂ ರಕ್ಷಣೆ ಲಭ್ಯವಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಹಗಲು ಹೊತ್ತಿನಲ್ಲಿ ನಡೆಯುವ ಮನೆ ಕಳ್ಳತನದ ಸಂದರ್ಭದಲ್ಲೂ ಸಂತ್ರಸ್ತರಿಗೆ ಸ್ವಯಂ ರಕ್ಷಣೆ ಲಭ್ಯವಿರಬೇಕು. ಹಾಗಾಗಿ, ‘ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೂ ಮೊದಲು’ ಎಂಬ ಉಲ್ಲೇಖವನ್ನು ತೆಗೆಯಬೇಕು. 

* ಕಲಂ 101ರ ಉಪ ಕಲಂ 2 ಅನ್ನು ಕಾಯ್ದೆಗೆ ಹೊಸದಾಗಿ ಸೇರಿಸಲಾಗಿದೆ.

– ‘ಹತ್ಯೆಯ ಅಪರಾಧಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡಬೇಕು. ಮತ್ತು ಅಪರಾಧಿಗಳಿಗೆ ದಂಡವನ್ನೂ ವಿಧಿಸಬಹುದು’ ಎಂದು 101ರ ಉಪ ಕಲಂ (1) ಹೇಳುತ್ತದೆ. 

– ಉಪ ಕಲಂ (2)ರಲ್ಲಿ ಐದಕ್ಕಿಂತ ಹೆಚ್ಚು ಜನರ ತಂಡ ಕೊಲೆ ಮಾಡಿದರೆ ವಿಧಿಸಬಹುದಾದ ಶಿಕ್ಷೆಯ ಬಗ್ಗೆ ವಿವರಿಸಲಾಗಿದೆ. ‘ಹಂತಕರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹರು ಮತ್ತು ದಂಡವನ್ನೂ ವಿಧಿಸಬಹುದು ಅಥವಾ ಏಳು ವರ್ಷಕ್ಕಿಂತ ಕಡಿಮೆ ಅವಧಿ ಅಲ್ಲದ ಜೈಲು ಶಿಕ್ಷೆಯನ್ನು ವಿಧಿಸಬಹುದು ಮತ್ತು ದಂಡವನ್ನೂ ಹೇರಬಹುದು’ ಎಂದು ಅದು ಹೇಳಿದೆ. 

ಐದಕ್ಕಿಂತ ಹೆಚ್ಚು ಜನರು ಮಾಡಿರುವ ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಡಿಮೆ ಪ್ರಮಾಣದ ಪರ್ಯಾಯ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬುದು ಈ ಎರಡು ಉಪ ಕಲಂಗಳಿಂದ ಸ್ಪಷ್ಟವಾಗುತ್ತದೆ. ಹಾಗಾಗಿ, (2) ಉಪ ಕಲಂನಲ್ಲಿ ‘ಏಳು ವರ್ಷಕ್ಕಿಂತ ಕಡಿಮೆ ಅವಧಿಯಲ್ಲದ ಜೈಲು ಶಿಕ್ಷೆ’ ಎಂಬ ಸಾಲನ್ನು ತೆಗೆಯಬೇಕು. 

* ಕಾಯ್ದೆಯ 104ನೇ ಕಲಂ ಐಪಿಸಿಯ 304ಎ ಕಲಂ ಆಗಿದ್ದು, ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯವಿದೆ. 

– ವ್ಯಕ್ತಿಯ ಅತಿ ವೇಗ ಅಥವಾ ನಿರ್ಲಕ್ಷ್ಯದಿಂದ ಆಗುವ ಸಾವು ಕೊಲೆ ಉದ್ದೇಶದಿಂದ ಮಾಡಿದ ಹತ್ಯೆ ಆಗಿರುವುದಿಲ್ಲ. ನಿರ್ಲಕ್ಷ್ಯದಿಂದ ಆಗಿರುತ್ತದೆ. ಇಂತಹ ಪ್ರಕರಣಗಳನ್ನು ಅಪಘಾತ ಅಥವಾ ಹಿಟ್‌ ಅಂಡ್‌ ರನ್‌ ಪ್ರಕರಣಗಳ ಸಂದರ್ಭಗಳಿಗೆ ಸೀಮಿತಗೊಳಿಸಬೇಕಾಗಿಲ್ಲ.

– ವೇಗ ಅಥವಾ ನಿರ್ಲಕ್ಷ್ಯದಿಂದ ಸಂಭವಿಸಿರುವ ಸಾವಿನ ಘಟನೆಯ ಬಗ್ಗೆ ಆರೋಪಿಯು ಪೊಲೀಸ್‌ ಅಥವಾ ಇತರ ಆಡಳಿತದ ಗಮನಕ್ಕೆ ತರಬೇಕು ಎಂಬ ಹೊಸ ಅಂಶವನ್ನು ಸೇರಿಸಲಾಗಿದೆ. ಅಪಘಾತದ ಪ್ರಕರಣಗಳಲ್ಲಿ ಅಪಘಾತ ಮಾಡಿದವರಿಗೆ ಹೆಚ್ಚುವರಿ ಹೊಣೆ ನೀಡಿರುವುದು ನ್ಯಾಯಸಮ್ಮತವೇ. ಆದರೆ, ಪರಿಷ್ಕೃತ ಶಿಕ್ಷೆಯು ತರ್ಕರಹಿತವಾದುದು ಮತ್ತು ಹೊಂದಿಕೆಯಾಗದ್ದು. ಶಿಕ್ಷೆಯ ಪ್ರಮಾಣವನ್ನು ಬದಲಾಯಿಸಬೇಕು.

–ವೃತ್ತಿಯಲ್ಲಿನ ನಿರ್ಲಕ್ಷ್ಯ ಅಥವಾ ವೈದ್ಯಕೀಯ ನಿರ್ಲಕ್ಷ್ಯದ ಸಂದರ್ಭಗಳಿಗೆ ಸಂಬಂಧಿಸಿದಂತೆ ಹೆಚ್ಚು ಸೂಕ್ತವಾದ ರಚನಾತ್ಮಕವಾದ ವಿವರಣೆ ಅಗತ್ಯ.

* ಕಾಯ್ದೆಯ 109ನೇ ಕಲಂ ‘ಸಂಘಟಿತ ಅಪರಾಧ’ ಶೀರ್ಷಿಕೆ ಅಡಿಯಲ್ಲಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಿಗೆ ಶಿಕ್ಷೆಯ ಪ್ರಮಾಣವನ್ನು ನಿಗದಿ ಪಡಿಸಿದೆ. ಇಲ್ಲಿ ವಿವರಿಸಿರುವ ಕಾನೂನು ಬಾಹಿರ ಚಟುವಟಿಕೆಗಳು, ಈಗ ಜಾರಿಯಲ್ಲಿರುವ ವಿವಿಧ ಅಪರಾಧ ಕಾನೂನುಗಳಲ್ಲಿ ವಿವರಿಸಲಾಗಿರುವ ಅಪರಾಧಗಳ ವಿವರಣೆಯಂತೆಯೇ ಇವೆ. 110ನೇ ಕಲಂ ‘ಸಣ್ಣ ಸಂಘಟಿತ ಅಪರಾಧ’ಗಳಿಗೆ ಶಿಕ್ಷೆ ವಿಧಿಸುತ್ತದೆ. ಆದರೆ, ಸಂಹಿತೆಯಲ್ಲಿ ಎಲ್ಲೂ ‘ಅಪರಾಧ’ವನ್ನು (ಕ್ರೈಂ) ವ್ಯಾಖ್ಯಾನಿಸಿಲ್ಲ. ಕಾಯ್ದೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ಅಫೆನ್ಸ್‌) ಎಂಬ ಪದ ಬಳಸಲಾಗಿದೆ. 

‘ಆರ್ಥಿಕ ಕಾನೂನು ಬಾಹಿರ ಚಟುವಟಿಕೆಗಳು’ ಎಂಬುದನ್ನೂ ವ್ಯಾಖ್ಯಾನಿಸಲಾಗಿಲ್ಲ. ‘ಆರ್ಥಿಕ ಹಗರಣಗಳು’, ‘ಬಂಡವಾಳ ಸಂಗ್ರಹಿಸಿ ವಂಚಿಸುವ ಯೋಜನೆ’ (ಪಾಂಝಿ ಸ್ಕೀಮ್) ಮತ್ತು  ‘ಸಾಮೂಹಿಕ ಮಾರುಕಟ್ಟೆ ವಂಚನೆ’ಯಂತಹ ಅಸ್ಪಷ್ಟ ಪದಗಳನ್ನು ಬಳಸಲಾಗಿದೆ. 

ಈ ಎರಡು ಕಲಂಗಳಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅಪರಾಧೀಕರಣ ಮತ್ತು ಕ್ರಿಮಿನಲ್‌ ಅಪರಾಧಗಳ ಕರಡು ರಚನೆಯ ನಿಯಮಗಳನ್ನು ಅನುಮೋದಿಸುವುದಿಲ್ಲ. ಈ ನಿಯಮಗಳಿಗೆ ಅನುಗುಣವಾಗಿ ಈ ಕಲಂಗಳ ಪೂರ್ಣ ಅಂಶಗಳನ್ನು ಮತ್ತೆ ಸಿದ್ಧಪಡಿಸಬೇಕು.

ಲೈಂಗಿಕ ದೌರ್ಜನ್ಯ: ಲಿಂಗತ್ವ ತಟಸ್ಥ ವ್ಯಾಖ್ಯಾನ ಇರಲಿ

ಕಾಯ್ದೆಯ 5ನೇ ಅಧ್ಯಾಯ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿ ಇದೆ. ಆದರೆ, ವಯಸ್ಕ ಪುರುಷರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವ ಪ್ರಸ್ತಾವವೂ ಕಾಯ್ದೆಯಲ್ಲಿಲ್ಲ. 2000ದಲ್ಲಿ ಭಾರತೀಯ ಕಾನೂನು ಅಯೋಗವು ತನ್ನ 172ನೇ ವರದಿಯಲ್ಲಿ ಅತ್ಯಾಚಾರ ಕಾನೂನುಗಳು ‘ಲಿಂಗತ್ವ ತಟಸ್ಥ’ (ಜೆಂಡರ್‌ ನ್ಯೂಟ್ರಲ್‌) ಆಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. 

ಅತ್ಯಾಚಾರ ಕಾನೂನು ‘ಲಿಂಗತ್ವ ತಟಸ್ಥ’ವಾಗಿರಬೇಕು ಎಂದು ಒತ್ತಾಯಿಸಿ 2017ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಂಸದ ಮತ್ತು ಹಿರಿಯ ವಕೀಲರಾದ ಕೆ.ಟಿ.ಎಸ್‌ ತುಳಸಿ ಅವರು ರಾಜ್ಯಸಭೆಯಲ್ಲೂ ಈ ಬಗ್ಗೆ ಒಂದು ಮಸೂದೆ ಮಂಡಿಸಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳು ಲಿಂಗತ್ವ ತಟಸ್ಥವಾಗಿರಬೇಕು ಎಂಬ ಕುರಿತು ಮಾಡಿದ ಪ್ರಯತ್ನಗಳು ಇದುವರೆಗೆ ಫಲ ನೀಡಿಲ್ಲ. ಭಾರತವು ಪುರುಷ ಪ್ರಧಾನ ಸಮಾಜವಾಗಿರುವುದರಿಂದ ಮತ್ತು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಗಳಿಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ಈ ಪ್ರಯತ್ನಗಳನ್ನು ಪರಿಗಣಿಸಿಲ್ಲ. ‌

ಆದರೆ, ವಿವಿಧ ಸಂದರ್ಭಗಳಲ್ಲಿ ಪುರುಷರು ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, 5ನೇ ಅಧ್ಯಾಯದಲ್ಲಿ ಈ ಅಪರಾಧಗಳನ್ನು ಲಿಂಗತ್ವ ತಟಸ್ಥ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಬೇಕು. ಇದಕ್ಕಾಗಿ ಹೆಚ್ಚುವರಿ ಮೂರು ಕಲಂಗಳನ್ನು ಸೇರಿಸಬೇಕು.

ಹೊಸ ಕಲಂ 150ಎ ಸೇರಿಸಿ
ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದವರಿಗೆ ಶಿಕ್ಷೆ ವಿಧಿಸುವ ನಿಯಮಗಳು ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಇರಲಿಲ್ಲ. ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಕಲಂ ಸೇರಿಸುವ ಅಗತ್ಯವಿದೆ. ತ್ರಿವರ್ಣಧ್ವಜ, ರಾಷ್ಟ್ರಗೀತೆ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ಅಥವಾ ಸಂಕೇತದ ಮೂಲಕ ಅಥವಾ ಕಣ್ಣಿಗೆ ಕಾಣುವಂತಹ ರೀತಿಯಲ್ಲಿ ಅಥವಾ ಹೇಳಿಕೆ ಮುದ್ರಿಸುವ ಮೂಲಕ ಅವಮಾನಿಸಿದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತಹ ಕಲಂ ಅನ್ನು ಸೇರ್ಪಡೆಗೊಳಿಸಬೇಕು.
ಭಾರತೀಯ ಸಾಕ್ಷ್ಯ ಕಾಯ್ದೆ–2023
  • ಹಿಂದಿನ ಹೆಸರು: ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ –1872

  • ಇಂಡಿಯನ್ ಎವಿಡೆನ್ಸ್ ಆ್ಯಕ್ಟ್‌ನಲ್ಲಿ ಇದ್ದ ಕಲಂಗಳು: 167

  • ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿರುವ ಕಲಂಗಳು: 170

  • 146 ಕಲಂಗಳಲ್ಲಿ ಯಾವುದೇ ಬದಲಾವಣೆ ಇಲ್ಲ

  • 35 ಕಲಂಗಳಲ್ಲಿ ಅಲ್ಪ ಬದಲಾವಣೆ

  • 2 ಹೆಚ್ಚುವರಿ ಕಲಂಗಳ ಸೇರ್ಪಡೆ

  • 5 ಕಲಂಗಳನ್ನು ತೆಗೆದುಹಾಕಲಾಗಿದೆ

ಸಮಿತಿಯ ಸಲಹೆಗಳು...

* 2ಇ ಕಲಂನ ‘ಸಾಕ್ಷ್ಯ’ದ ‘ವಿವರಣೆ’ಯಲ್ಲಿ, ‘ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಮಾಹಿತಿ ನೀಡುವುದು’ ಎಂದಿದೆ. ಅದಕ್ಕೆ ವಿವರಣೆಯ ಅಗತ್ಯವಿದ್ದು, ‘ನ್ಯಾಯಾಲಯವು ಸಾಕ್ಷಿಯ ಹೇಳಿಕೆಯನ್ನು ವಿಡಿಯೊ ಕಾನ್ಫರೆನ್ಸ್ ಅಥವಾ ವರ್ಚ್ಯುಯಲ್ ಮೂಲಕ ದಾಖಲಿಸಿಕೊಳ್ಳಬೇಕು’ ಎನ್ನುವುದನ್ನು ಸೇರಿಸಬೇಕು.

ಕಲಂ 62ರಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳಲ್ಲಿನ ವಿಷಯವನ್ನು ಕಲಂ 59ರ ನಿಬಂಧನೆಗಳ ಅನ್ವಯ ಸಾಬೀತುಪಡಿಸಬೇಕು ಎಂದು ಇದೆ. ಇದನ್ನು ಕಲಂ 63ರ ನಿಬಂಧನೆಗಳ ಅನ್ವಯ ಸಾಬೀತುಪಡಿಸಬೇಕು ಎಂದು ಬದಲಾಯಿಸಬೇಕಿದೆ. ಏಕೆಂದರೆ, ಕಲಂ 59 ದಾಖಲೆಗಳ ನೈಜತೆಗೆ ಸಂಬಂಧಿಸಿದ್ದಾಗಿದ್ದು, ಕಲಂ 63 ಎಲೆಕ್ಟ್ರಾನಿಕ್ ದಾಖಲೆಗಳನ್ನು ಅಂಗೀಕರಿಸುವುದಕ್ಕೆ ಸಂಬಂಧಿಸಿದೆ. ಕಲಂ 62ರಲ್ಲಿ 59ನೇ ಕಲಂ ಸೇರಿಸಿದರೆ, ಕಲಂ 63 ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತದೆ.

* ಕಲಂ 39, ಅಗತ್ಯಬಿದ್ದಾಗ ತಜ್ಞರ ಅಭಿಪ್ರಾಯಗಳ ಪಡೆಯುವ ಬಗ್ಗೆ ಹೇಳುತ್ತದೆ.

ಕೈ ಬರಹ, ಬೆರಳಚ್ಚು ಗುರುತಿಸುವ ಬಗ್ಗೆ ಕಲಂ ಪ್ರಸ್ತಾಪಿಸುವುದರಿಂದ ಎಲೆಕ್ಟ್ರಾನಿಕ್‌ ಅಥವಾ ಡಿಜಿಟಲ್‌ ಸಾಕ್ಷ್ಯ ಅಂದರೆ, ಧ್ವನಿ, ಚಿತ್ರ, ಕಣ್ಣಿನ ಪಾಪೆ ಪದಗಳನ್ನು ಸೇರಿಸಬೇಕು ಮತ್ತು ‘ತಾಂತ್ರಿಕ ತಜ್ಞ’ ಪದವನ್ನೂ ಸೇರಿಸಬೇಕು.

* ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆಯ ಕಲಂ 64, 65, 67, 68, 70, 71, 73, 74, 75, 76 ಮತ್ತು 77ರ ಅಡಿಯಲ್ಲಿ ಕೆಲವು ಪ್ರಕರಣಗಳಲ್ಲಿ ಸಂತ್ರಸ್ತೆಯ ನಡತೆ ಮತ್ತು ಹಿಂದಿನ ಲೈಂಗಿಕ ಅನುಭವಗಳು ಮುಖ್ಯವಲ್ಲ ಎಂದು ಕಲಂ 48ರಲ್ಲಿ ಹೇಳಲಾಗಿದೆ. ಆದರೆ, ಇದು ಭಾರತೀಯ ನ್ಯಾಯ ಸಂಹಿತೆ ಕಾಯ್ದೆಗೆ ಸಂಬಂಧಿಸಿದ ಕಲಂಗಳಾಗಿವೆ. ಈ ಕಾಯ್ದೆಯಲ್ಲಿ ನಾಗರಿಕ ಸುರಕ್ಷಾ ಸಂಹಿತೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆ ಎಂಬುದನ್ನು ತೆಗೆದು ಭಾರತೀಯ ನ್ಯಾಯ ಸಂಹಿತೆ ಎಂದು ಸೇರಿಸಬೇಕು.

* ಕಾಯ್ದೆಯ 58ನೇ ಕಲಂ ಎರಡನೇ ಸಾಕ್ಷ್ಯದ ಬಗ್ಗೆ ಪ್ರಸ್ತಾ‍ಪಿಸುತ್ತದೆ. ಇದರಲ್ಲಿ ಎಂಟು ಉಪ ಕಲಂಗಳಿದ್ದು,  ಈ ಪೈಕಿ ಉಪ ಕಲಂ (6) ‘ಮೌಖಿಕವಾಗಿ ತಪ್ಪೊಪ್ಪಿಗೆ’ ಮತ್ತು (7) ‘ಲಿಖಿತ ತಪ್ಪೊಪ್ಪಿಗೆ’ ತೆಗೆಯಬೇಕು.

ಆಧಾರ: ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.