ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕಾ ದುರಂತ ಎಂದು ಭೋಪಾಲ್‌ನ ಅನಿಲ ದುರಂತ ಕುಖ್ಯಾತವಾಗಿದೆ. 1984ರ ಈ ದುರಂತಕ್ಕೆ,ದುರಂತದ ದಿನವೇ ಸತ್ತವರು ಮತ್ತು ನಂತರದ ದಿನಗಳಲ್ಲಿ ಸತ್ತವರೂ ಸೇರಿ 15,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಐದು ಲಕ್ಷಕ್ಕೂ ಹೆಚ್ಚು ಜನರು ಅಂಗವೈಕಲ್ಯ ಸೇರಿ ಹಲವು ದೈಹಿಕ ನ್ಯೂನತೆಗಳಿಗೆ ಗುರಿಯಾಗಿದ್ದರು. ಇಂತಹದ್ದೊಂದು ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಡೆಟ್ (ಯುಸಿಐಎಲ್) ಮತ್ತು ಅದರ ಮಾತೃ ಸಂಸ್ಥೆ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ಕಂಪನಿಗಳನ್ನು ಭಾರತದ ನ್ಯಾಯಾಲಯಗಳು ನಿಷೇಧಿಸಿದ್ದವು. ಈ ಕಂಪನಿಗಳು ಭಾರತದಲ್ಲಿ ಯಾವುದೇ ವ್ಯವಹಾರ ನಡೆಸುವುದಕ್ಕೆ ಮತ್ತು ಅವುಗಳ ಉತ್ಪನ್ನಗಳನ್ನು ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆದರೆ ದುರಂತ ನಡೆದ ಮೂರೇ ವರ್ಷದಲ್ಲಿ ಈ ಕಂಪನಿಯು ಷೆಲ್ (ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಕಂಪನಿಗಳು) ಕಂಪನಿಗಳನ್ನು ಆರಂಭಿಸುವ ಮೂಲಕ, ಭಾರತದಲ್ಲಿ ತನ್ನ ವಹಿವಾಟನ್ನು ಆರಂಭಿಸಿತ್ತು ಎಂಬುದು ಕಂಪನಿಯ ಆಂತರಿಕ ದಾಖಲೆಗಳಿಂದ ಈಗ ಪತ್ತೆಯಾಗಿದೆ.
ನಿಷೇಧಕ್ಕೆ ಒಳಗಾಗಿದ್ದ ಕಂಪನಿಯು ಬೇರೊಂದು ಕಂಪನಿಯ ಹೆಸರಲ್ಲಿ ಭಾರತಕ್ಕೆ ಬಂದಿರುವುದು ಗೊತ್ತಿದ್ದರೂ, ಭಾರತ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳ ಅಧೀನ ಸಂಸ್ಥೆಗಳು ಈ ಕಂಪನಿಯ ಜತೆಗೆ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಸಿವೆ. ಯುಸಿಸಿ ನೌಕರರು ಈ ಕಂಪನಿಗಳನ್ನು ತಮ್ಮ ದಾಖಲೆಗಳಲ್ಲಿ ‘ಫ್ರಂಟ್’ ಮತ್ತು ‘ಡಮ್ಮಿ’ ಕಂಪನಿಗಳು ಎಂದು ಉಲ್ಲೇಖಿಸಿದ್ದಾರೆ.ಭಾರತದ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ತಾಮ್ರದ ತಂತಿಗಳು, ಪಿವಿಸಿ ಮತ್ತು ವಿವಿಧ ರಾಸಾಯನಿಕ
ಉತ್ಪನ್ನಗಳಿಗೆ ಆಹ್ವಾನಿಸುತ್ತಿದ್ದ ಟೆಂಡರ್‌ಗಳಿಗೆ, ಈ ನಕಲಿ ಕಂಪನಿಗಳು ಟೆಂಡರ್ ಸಲ್ಲಿಸುತ್ತಿದ್ದವು. ಭಾರತದ ಕಂಪನಿಗಳಿಗೆ ಅಗತ್ಯವಿದ್ದ ಉತ್ಪನ್ನ ಗಳನ್ನು ಯುಸಿಸಿಯಿಂದ ಈ ನಕಲಿ ಕಂಪನಿಗಳು ಖರೀದಿಸುತ್ತಿದ್ದವು. ಆ ಉತ್ಪನ್ನಗಳ ಲೇಬಲ್‌ಗಳನ್ನು ಬದಲಿಸಿ, ಭಾರತದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದವು. ಹೀಗೆ ಖರೀದಿಸಲಾದ ಉತ್ಪನ್ನಗಳು ಮತ್ತು ರಾಸಾಯನಿಕ ವಸ್ತುಗಳಿಂದ ಹಲವು ದಶಕಗಳ ಕಾಲ ಭಾರತದಲ್ಲಿ ಹಲವು ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾಗಿದೆ.
ಭಾರತದಲ್ಲಿ ವಹಿವಾಟು ನಡೆಸಲು ಯುಸಿಸಿಗೆ ನಿಷೇಧ ಇದ್ದ ಮತ್ತು ಅದರ ಸ್ವತ್ತುಗಳೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದ ಕಾರಣ, ಇಲ್ಲಿ ವ್ಯಾಪಾರ ಸಾಧ್ಯವಿರಲಿಲ್ಲ. ಹೀಗಾಗಿಯೇ ಯುಸಿಸಿಯು ಭಾರತದಲ್ಲಿ ವಹಿವಾಟು ನಡೆಸಲೆಂದೇ ಬೇರೆ ಕಂಪನಿಗಳನ್ನು ಹುಟ್ಟು ಹಾಕಿತ್ತು. ‘ಹೀಗೆ ಹುಟ್ಟುಹಾಕಲಾದ ಕಂಪನಿಗಳು ಭಾರತದಲ್ಲಿ ವ್ಯಾಪಾರ ನಡೆಸಲು ಮತ್ತು ಭಾರತದಲ್ಲಿನ ನಿಷೇಧವನ್ನು ತಪ್ಪಿಸಲು ಇರುವ ಕಾನೂನಾತ್ಮಕ ಅಗತ್ಯ’ ಎಂದು ಯುಸಿಸಿ ತನ್ನ ಆಂತರಿಕ ದಾಖಲೆಗಳಲ್ಲಿ ವಿವರಿಸಿದೆ. ‘ಈ ಕಂಪನಿಗಳು ನಮ್ಮ ಎಕ್ಸ್‌ಟೆಂಡೆಡ್ ಆರ್ಮ್‌ಗಳಾಗಿವೆ’ ಎಂದು ಯುಸಿಸಿ ತಮ್ಮ ನೌಕರರಿಗೆ ಹೇಳಿರುವುದು ಈ ದಾಖಲೆಗಳಿಂದ ಗೊತ್ತಾಗಿದೆ.
1987ರ ನವೆಂಬರ್ 29ರಂದು ಯುಸಿಸಿ ಮತ್ತು ಅದರ ಅಧೀನ ಸಂಸ್ಥೆಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆದರೆ ಅದಕ್ಕೆ 15 ದಿನ ಮೊದಲೇ, ನವೆಂಬರ್ 14ರಂದು ಭಾರತದಲ್ಲಿನ ತನ್ನೆಲ್ಲಾ ವಹಿವಾಟುಗಳನ್ನು ನಡೆಸುವ ಹಕ್ಕನ್ನು ಯುಸಿಸಿಯು ವಿಸಾ ಪೆಟ್ರೊಕೆಮಿಕಲ್ಸ್ ಕಂಪನಿಗೆ ವರ್ಗಾಯಿಸಿತ್ತು. ಏಷ್ಯಾದ ದೇಶಗಳ ವಹಿವಾಟನ್ನು ಯುಸಿಸಿಯ ಮತ್ತೊಂದು ಅಂಗಸಂಸ್ಥೆ ಯುಸಿ ಈಸ್ಟರ್ನ್ ಇಂಕ್ (ಯುಸಿಇಐ) ನೋಡಿಕೊಳ್ಳುತ್ತಿತ್ತು. ಈ ಒಪ್ಪಂದವನ್ನು ಯುಸಿಇಐ ಮಾಡಿಕೊಂಡಿತ್ತು.‘ಕಂಪನಿಯ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟ ವಿಸಾ ಪೆಟ್ರೊಕೆಮಿಕಲ್ಸ್‌ನ ಜವಾಬ್ದಾರಿ’ ಎಂದು ಒಪ್ಪಂದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಂದಿನಿಂದ ವಿಸಾ ಪೆಟ್ರೊಕೆಮಿಕಲ್ಸ್ ಕಂಪನಿಯೇ, ಯುಸಿಸಿಯ ಎಲ್ಲಾ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿತ್ತು. ನಂತರದ ವರ್ಷಗಳಲ್ಲಿ ಯುಸಿಇಐ ಅನ್ನು ಯುನೈಟೆಡ್ ಕಾರ್ಬೈಡ್ ಏಷಿಯಾ ಪೆಸಿಫಿಕ್ (ಯುಸಿಎಪಿ) ಎಂದು ಬದಲಿಸಲಾಯಿತು.
‘ಭಾರತದಲ್ಲಿ ಯುಸಿಐಎಲ್ ಅನ್ನು ಮುಚ್ಚಬೇಕಿದ್ದರಿಂದ, ಹೊಸದಾಗಿ ವಿಸಾ ಪೆಟ್ರೊಕೆಮಿಕಲ್ಸ್ ಎಂಬ ಕಂಪನಿ ಸ್ಥಾಪಿಸಲಾಯಿತು. ಯುಸಿಸಿ ಕಂಪನಿಯ ಅಂತರರಾಷ್ಟ್ರೀಯ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ ನೌಕರರೇ ಈ ವಿಸಾ ಪೆಟ್ರೊಕೆಮಿಕಲ್ಸ್ ಅನ್ನು ಸ್ಥಾಪಿಸಿದ್ದರು’ ಎಂಬ ವಿಚಾರವನ್ನು ವಿಸಾ ಪೆಟ್ರೊಕೆಮಿಕಲ್ಸ್‌ನ 1994ರ ವಾರ್ಷಿಕ ವಹಿವಾಟು ಯೋಜನೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
1994ರಲ್ಲಿ ಮುಂಬೈನ ಅಜಯ್ ಮಿತ್ತಲ್ ಎಂಬ ವ್ಯಕ್ತಿ ಯುಸಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾರೆ. ಭಾರತದಲ್ಲಿ ಯುಸಿಸಿಯ ವಹಿವಾಟು ನಡೆಸುವುದು ಹೇಗೆ ಎಂಬುದರ ಬಗ್ಗೆ ಅಜಯ್ ಮಿತ್ತಲ್ ಹೊಸ ಯೋಜನೆಗಳನ್ನು ವಿವರಿಸುತ್ತಾರೆ. ಅವರ ಯೋಜನೆ, ‘ಅದ್ಭುತ ಮತ್ತು ಪ್ರಾಮಾಣಿಕ’ ಎಂದು ಕಂಪನಿಯು ಹೇಳಿಕೊಂಡಿದೆ. ಕಂಪನಿಯ ಅಧಿಕಾರಿಗಳ ಮಧ್ಯೆ ಹಂಚಿಕೆಯಾದ ಫ್ಯಾಕ್ಸ್ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಅಜಯ್ ಮಿತ್ತಲ್ ಅವರು 1993ರಲ್ಲಿ ಮೆಗಾ ಗ್ಲೋಬಲ್ ಸರ್ವೀಸಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. 1994ರಲ್ಲಿ ಯುಸಿಎಪಿಯು ವಿಸಾ ಪೆಟ್ರೊಕೆಮಿಕಲ್ಸ್ ಜತೆಗಿನ ಒಪ್ಪಂದವನ್ನು ರದ್ದುಪಡಿಸಿತು ಮತ್ತು ಮೆಗಾ ಗ್ಲೋಬಲ್ ಸರ್ವೀಸಸ್ ಜತೆಗೆ ಒಪ್ಪಂದ ಮಾಡಿಕೊಂಡಿತು. ‘ಯುಸಿಸಿಯಿಂದ ಉತ್ಪನ್ನಗಳನ್ನು ಖರೀದಿಸಿ, ಭಾರತದಲ್ಲಿನ ಗ್ರಾಹಕರಿಗೆ ಮಾರಾಟ ಮಾಡಬೇಕು’ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಯಿತು. ಆನಂತರ ಯುಸಿಸಿ ಉತ್ಪನ್ನಗಳನ್ನು ‘ಮೆಗಾ ಗ್ಲೋಬಲ್ ಸರ್ವೀಸಸ್’ ಹೆಸರಿನಲ್ಲೇ ಮಾರಲಾಯಿತು. ನಂತರದ ಎರಡೇ ತಿಂಗಳಲ್ಲಿ ವಿಸಾ ಪೆಟ್ರೊಕೆಮಿಕಲ್ಸ್‌ನ ಶೇ 89.5ರಷ್ಟು ಷೇರುಗಳನ್ನು ಅಜಯ್ ಮಿತ್ತಲ್ ಖರೀದಿಸಿದರು. ನಂತರದ ವರ್ಷಗಳಲ್ಲಿ ಮೆಗಾ ಗ್ಲೋಬಲ್ ಸರ್ವೀಸಸ್ ಮತ್ತು ವಿಸಾ ಪೆಟ್ರೊಕೆಮಿಕಲ್ಸ್ ಒಟ್ಟಾಗಿ, ಭಾರತದಲ್ಲಿ ಯುಸಿಸಿ ಉತ್ಪನ್ನಗಳನ್ನು ಮಾರಾಟ ಮಾಡಿದವು.
ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಟೆಂಡರ್ ಹೊರಡಿಸಿದಾಗ ಹಾಗೂ ಅಗತ್ಯವಿದ್ದ ಉತ್ಪನ್ನಕ್ಕೆ ಬೇಡಿಕೆ ಸಲ್ಲಿಸಿದಾಗ, ಮೆಗಾ ಗ್ಲೋಬಲ್ ಮತ್ತು ವಿಸಾ ಪೆಟ್ರೊಕೆಮಿಕಲ್ಸ್ ದರಪಟ್ಟಿ ನೀಡುತ್ತಿದ್ದವು. ದರಪಟ್ಟಿಗೆ ಬಂದ ಪ್ರತಿಕ್ರಿಯೆಯನ್ನು ಅಮೆರಿಕದಲ್ಲಿನ ಯುಸಿಸಿಗೆ ಕಳುಹಿಸುತ್ತಿದ್ದವು. ಯುಸಿಸಿಯಿಂದ ಒಪ್ಪಿಗೆ ಬಂದ ನಂತರವಷ್ಟೇ ಟೆಂಡರ್ ಅಥವಾ ಪೂರೈಕೆ ಒಪ್ಪಂದ ಅಂತಿಮವಾಗುತ್ತಿತ್ತು. ಎಲ್ಲಾ ವಹಿವಾಟನ್ನು ಯುಸಿಸಿ ನೇರವಾಗಿ ನಿರ್ವಹಿಸುತ್ತಿತ್ತು. ಆದರೆ, ಹೆಸರು ಮಾತ್ರ ಮೆಗಾ ಗ್ಲೋಬಲ್ ಮತ್ತು ವಿಸಾ ಪೆಟ್ರೊಕೆಮಿಕಲ್ಸ್‌ಗಳದ್ದು.
1998ರಲ್ಲಿ ಅಜಯ್ ಮಿತ್ತಲ್ ಅವರು ಸಿಂಗಪುರದಲ್ಲಿ ಮೆಗಾ ವಿಸಾ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ಆರಂಭಿಸಿದರು. ನಂತರದಲ್ಲಿ ಯುಸಿಸಿ ಉತ್ಪನ್ನಗಳನ್ನು ಈ ಹೊಸ ಕಂಪನಿಯು ಭಾರತದಲ್ಲಿ ಮಾರಾಟ ಮಾಡಲಾರಂಭಿಸಿತು. 2001ರಲ್ಲಿ ಡೊ ಕೆಮಿಕಲ್ಸ್ ಕಂಪನಿಯು ಯುಸಿಸಿಯನ್ನು ಖರೀದಿಸಿತು. ಮೆಗಾ ವಿಸಾ ಸಲ್ಯೂಷನ್ಸ್ ಮೂಲಕ ನಡೆಸಲಾಗುತ್ತಿದ್ದ ವಹಿವಾಟನ್ನು ಕಡಿಮೆ ಮಾಡಿತು. ಇದರ ವಿರುದ್ಧ ಅಜಯ್ ಮಿತ್ತಲ್ ಅವರು ಅಮೆರಿಕದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದರು. ಕನೆಕ್ಟಿಕಟ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವ್ಯಾಜ್ಯದ ವೇಳೆ ಈ ಎಲ್ಲಾ ಕಂಪನಿಗಳ ಮಧ್ಯೆ ಮಾಡಿಕೊಳ್ಳಲಾಗಿದ್ದ ಒಪ್ಪಂದ ಪತ್ರಗಳನ್ನು ಸಲ್ಲಿಸಲಾಗಿತ್ತು. ನಂತರದ ದಿನಗಳಲ್ಲಿ ವ್ಯಾಜ್ಯವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲಾಯಿತು. ಆದರೆ, ಡೊ ಕೆಮಿಕಲ್ಸ್ ಭಾರತದಲ್ಲಿ ಯುಸಿಸಿ ಉತ್ಪನ್ನಗಳ ಮಾರಾಟವನ್ನು ಮುಂದುವರಿಸಿತು.
ಆದರೆ, ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಯುಸಿಸಿ ನೀಡಿದ್ದ ಪರಿಹಾರ ಸಾಲದು ಎಂದು ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿಮತ್ತೆ ದಾವೆ ಹೂಡಿತು. ಯುಸಿಸಿ, ಯುಸಿಐಎಲ್ ಮತ್ತು ಡೊ ಕೆಮಿಕಲ್ಸ್ ವಿರುದ್ಧದ ಈ ಮೊಕದ್ದಮೆಯ ವಿಚಾರಣೆ ಇನ್ನೂ ನಡೆಯುತ್ತಿದೆ. ಕೊನೆಯ ವಿಚಾರಣೆ ನಡೆದದ್ದು ಇದೇ ಅಕ್ಟೋಬರ್‌ನಲ್ಲಿ. ಸಂತ್ರಸ್ತರ ಬೇಡಿಕೆಗಳನ್ನು ಪಟ್ಟಿ ಮಾಡಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಹಿಂಬಾಗಿಲ ಮೂಲಕ ಯುಸಿಸಿ ಉತ್ಪನ್ನ ಮಾರಾಟ
l ಕೇಂದ್ರ ಸರ್ಕಾರಿ ಒಡೆತನದ ಸಂಸ್ಥೆಗಳಾದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ಹಿಂದೂಸ್ತಾನ್ ಫೋಟೊ ಫಿಲ್ಮ್ಸ್
ಮ್ಯಾನುಫ್ಯಾಕ್ಚರಿಂಗ್ ಕಂಪನಿ, ಹಿಂದೂಸ್ತಾನ್ ಕೇಬಲ್ಸ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೊತೆ ಪಾಲುದಾರಿಕೆ ಹೊಂದಿದ್ದ ಲುಬ್ರಿಝೋಲ್ ಇಂಡಿಯಾ ಕಂಪನಿಯು ಯುಸಿಸಿ ಉತ್ಪನ್ನಗಳ ಗ್ರಾಹಕರಾಗಿದ್ದರು
l ವಿವಿಧ ರಾಜ್ಯ ಸರ್ಕಾರಗಳ ಪ್ರವರ್ತಕ ಕಂಪನಿಗಳಾದ, ಗುಜರಾತ್ ಆಲ್ಕಲೈಸ್ ಅಂಡ್ ಕೆಮಿಕಲ್ಸ್, ತಮಿಳುನಾಡಿನ ಅಡಿಟಿವ್ಸ್, ಮಧ್ಯಪ್ರದೇಶದ ವಿಂಧ್ಯ ಟೆಲಿಲಿಂಕ್ಸ್ ಸಂಸ್ಥೆಗಳೂ ಯುಸಿಸಿ ಉತ್ಪನ್ನಗಳ ಗ್ರಾಹಕರು
l ರಿಲಯನ್ಸ್ ಇಂಡಸ್ಟ್ರೀಸ್, ಸ್ಟರ್‌ಲೈಟ್ ಇಂಡಸ್ಟ್ರೀಸ್, ಫಿನೊಲೆಕ್ಸ್ ಕೇಬಲ್ಸ್, ಕ್ರಾಂಪ್ಟನ್ ಗ್ರೀವ್ಸ್, ಬರ್ಗರ್ ಪೈಂಟ್ಸ್, ಕ್ಯಾಸ್ಟ್ರೋಲ್ ಇಂಡಿಯಾ ಮೊದಲಾದ 150ಕ್ಕೂ ಹೆಚ್ಚು ಖಾಸಗಿ ಕಂಪನಿಗಳೂ ಯುಸಿಸಿ ಉತ್ಪನ್ನ ಖರೀದಿಸುತ್ತಿದ್ದವು
l 1995–2000 ಅವಧಿಯಲ್ಲಿ ಯುಸಿಸಿ ಕಂಪನಿಯು ನಕಲಿ ಕಂಪನಿಗಳ ಮೂಲಕ ಭಾರತದ ಮಾರುಕಟ್ಟೆಗೆ 55,800 ಟನ್ ಕೇಬಲ್ ಹಾಗೂ ವೈರ್‌ಗಳನ್ನು ಮಾರಾಟ ಮಾಡಿದೆ
‘ಸಾವಿಗಿಂತ ಭೀಕರಈ ಬದುಕು’
‘ಅಂದಿನ ರಾತ್ರಿ ನನಗೆ ನೆನಪಿದೆ. ಅದು ನಿನ್ನೆಯಷ್ಟೇ ನಡೆದಿದೆ ಎಂಬಷ್ಟು ಸ್ಪಷ್ಟವಾಗಿ ನೆನಪಿನಲ್ಲಿದೆ. ನಮ್ಮ ಕಣ್ಣುಗಳು ಸುಟ್ಟುಹೋದವು. ಜನರು ವಾಂತಿ ಮಾಡಲು ಶುರು ಮಾಡಿದರು. ಅಲ್ಲಿ ಅಕ್ಷರಶಃ ಕಾಲ್ತುಳಿತವೇ ನಡೆದುಹೋಯಿತು. ಈಗ ನಮ್ಮ ಬದುಕು ಸಾವಿಗಿಂತ ಭೀಕರವಾಗಿದೆ’ ಎಂಬುದಾಗಿ ಲೀಲಾಬಾಯಿ ಅವರು ಕಣ್ಣೀರಿಡುತ್ತಲೇ ಅಂದಿನ ದುರಂತವನ್ನು ವಿವರಿಸಿದರು.
60 ವರ್ಷದ ಲೀಲಾಬಾಯಿ ಹಾಗೂ ಅವರ ಪತಿ ಭೋಪಾಲ್‌ನಲ್ಲಿ ದುರಂತ ನಡೆದ ಸ್ಥಳದ ಸಮೀಪದಲ್ಲಿರುವ ಜೆ.ಪಿ. ನಗರದಲ್ಲಿ ಈಗ ವಾಸಿಸುತ್ತಿದ್ದಾರೆ. ಇವರು ತಮ್ಮ ಮೂವರು ಮಕ್ಕಳನ್ನು ದುರಂತದಲ್ಲಿ ಕಳೆದುಕೊಂಡರು. ಘಟನೆಯಿಂದ ತೀವ್ರ ಆನಾರೋಗ್ಯಕ್ಕೆ ಈಡಾಗಿದ್ದ ಮಕ್ಕಳು ಬದುಕುಳಿಯಲಿಲ್ಲ. ಕುಟುಂಬದಲ್ಲಿ ಜೀವ ಉಳಿಸಿಕೊಂಡಿದ್ದು ಇವರಿಬ್ಬರು ಮಾತ್ರ.
‘ರಾಸಾಯನಿಕಗಳು ಇಷ್ಟೊಂದು ಅಪಾಯಕಾರಿ ಎಂಬುದರ ಸುಳಿವೂ ನಮಗೆ ಆಗ ಇರಲಿಲ್ಲ’ ಎಂದು ದುರಂತದಲ್ಲಿ ಬದುಕುಳಿದ ಸಾವಿತ್ರಿಬಾಯಿ ಎಂಬುವರು ಹೇಳುತ್ತಾರೆ.
ಹತ್ತಾರು ಆರೋಗ್ಯ ಸಮಸ್ಯೆ: ಶ್ವಾಸಕೋಶ ಸೋಂಕು, ಮಿದುಳು ವೈಫಲ್ಯ, ಮೂತ್ರಪಿಂಡ ಸಮಸ್ಯೆ, ನರಮಂಡಲ ವೈಫಲ್ಯ ಹಾಗೂ ರೋಗನಿರೋಧಕ ಶಕ್ತಿ ಕಳೆದುಕೊಂಡ ಸಾವಿರಾರು ಜನರು ಘಟನೆ ನಂತರದ ವರ್ಷಗಳಲ್ಲಿ ಅಸುನೀಗಿದರು. ಕಾರ್ಖಾನೆ ಉಗುಳಿದ್ದ ಹೊಗೆಯನ್ನು ಕುಡಿದ ಜನರಲ್ಲಿ ಮಿದುಳಿಗೆ ರಕ್ತ ಸರಬರಾಜು ನಿಂತುಹೋಯಿತು. ಇದು ತಕ್ಷಣದ ಸಾವಿಗೆ ಕಾರಣವಾಯಿತು. ಭೋಪಾಲ್‌ನ ಮಣ್ಣು ಹಾಗೂ ನೀರಿನಲ್ಲಿ ಸೇರಿಹೋದ ವಿಷಕಾರಿ ರಾಸಾಯನಿಕಗಳು ಸುದೀರ್ಘ ವರ್ಷಗಳ ಕಾಲ ಅಲ್ಲಿನ ಜನರ ಆರೋಗ್ಯವನ್ನು ಕಾಡಿದವು.
ದುರಂತದ ಬಳಿಕದ ಘಟನಾವಳಿ... (ಟೈಮ್‌ಲೈನ್)
1984 ಡಿ.2;ಭೋಪಾಲ್ ಅನಿಲ ದುರಂತ
1987 ಅ.;ಯುಸಿಸಿ ಮಾಜಿ ಉದ್ಯೋಗಿಗಳಿಂದ ವಿಸಾ ಪೆಟ್ರೊಕೆಮಿಕಲ್ಸ್ ಕಂಪನಿ ಸ್ಥಾಪನೆ
1987 ನ.;ಭಾರತದಲ್ಲಿ ಉತ್ಪನ್ನ ಮಾರಾಟ ಒಪ್ಪಂದಕ್ಕೆ ವಿಸಾ ಜೊತೆ ಯುಸಿಸಿ ಸಹಿ
1992 ಏ.;ಯುಸಿಸಿಗೆ ಸೇರಿದ ಎಲ್ಲ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ
1993 ಮಾ.;ಮುಂಬೈ ಮೂಲದ ಉದ್ಯಮಿ ಅಜಯ್ ಮಿತ್ತಲ್ ಅವರಿಂದ ಹ್ಯೂಸ್ಟನ್‌ನಲ್ಲಿ ಮೆಘಾ ಗ್ಲೋಬಲ್ ಸರ್ವೀಸ್ ಕಂಪನಿ ಸ್ಥಾಪನೆ
1993 ಏ.;ಮೆಘಾ ಗ್ಲೋಬಲ್ ಮೂಲಕ ಭಾರತದಲ್ಲಿ ಮಾರಾಟ ಆರಂಭಿಸಿದ ಯುಸಿಸಿ
1994–98;ವಿಸಾ ಪೆಟ್ರೊಕೆಮಿಕಲ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಅಜಯ್ ಮಿತ್ತಲ್. ಈ ಎರಡೂ ಕಂಪನಿಗಳಿಂದ ಯುಸಿಸಿ ಉತ್ಪನ್ನಗಳ ಮಾರಾಟ
1998;ಮೆಘಾ ಗ್ಲೋಬಲ್ ಸರ್ವೀಸ್ ಕಾರ್ಯಾಚರಣೆಯನ್ನು ತನ್ನದೇ ಒಡೆತನದ ಸಿಂಗಪುರದ ಮೆಘಾ ವಿಸಾ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾಯಿಸಿದ ಮಿತ್ತಲ್
ಸಿ.ಎಂ. ಖಾಸಗಿ ವಿಮಾನದಲ್ಲಿ ಆ್ಯಂಡರ್ಸನ್ ಪಲಾಯನ!
ಅಮೆರಿಕದ ಅತ್ಯಂತ ಪ್ರಭಾವಿ ಉದ್ಯಮಿ ಹಾಗೂ ಯುಸಿಸಿ ಮುಖ್ಯಸ್ಥ ಆ್ಯಂಡರ್ಸನ್, ಭೋಪಾಲ್ ಘಟನೆ ನಡೆದ ಮೂರು ದಿನಗಳ ಬಳಿಕ ಭಾರತಕ್ಕೆ ಬಂದಿದ್ದ. ಅವನನ್ನು ಯುಸಿಐಎಲ್‌ನ ಐಷಾರಾಮಿ ಅತಿಥಿಗೃಹದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಆದರೆ ಕೇವಲ 3 ಗಂಟೆ ಕಳೆಯುವಷ್ಟರಲ್ಲಿ ₹25,000 ಬಾಂಡ್ ಆಧಾರದಲ್ಲಿ ಅವನಿಗೆ ಜಾಮೀನು ನೀಡಲಾಗಿತ್ತು. 24 ಗಂಟೆ ಕಳೆಯುವಷ್ಟರಲ್ಲಿ ಆ್ಯಂಡರ್ಸನ್ ಭೋಪಾಲ್‌ನಿಂದ ನಿಗೂಢವಾಗಿ ಕಾಲ್ಕಿತ್ತಿದ್ದ. ಅಂದಿನ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ ಅವರ ಖಾಸಗಿ ವಿಮಾನದಲ್ಲಿ ಪಲಾಯನ ಮಾಡಿದ್ದ ಎನ್ನಲಾಗಿದೆ. ನಂತರ, ಯುಸಿಸಿ ಸಂಸ್ಥೆಯ ವಿಮಾನವನ್ನೇರಿ ಸುರಕ್ಷಿತವಾಗಿ ಅಮೆರಿಕವನ್ನು ತಲುಪಿದ್ದ. ಆ್ಯಂಡರ್ಸನ್ ಭಾರತಕ್ಕೆ ಮತ್ತೆಂದೂ ಬರಲೇ ಇಲ್ಲ, ವಿಚಾರಣೆಗೂ ಹಾಜರಾಗಲಿಲ್ಲ. ನಿರ್ಲಕ್ಷ್ಯದಿಂದ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಆ್ಯಂಡರ್ಸನ್ 2014ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಿಧನನಾದ.
ತಲಾ ₹8,500 ಪರಿಹಾರ
ನ್ಯಾಯಾಲಯದಲ್ಲಿ ಹೂಡಲಾಗಿದ್ದ ಮೊಕದ್ದಮೆಯ ವಿಚಾರಣೆ ನಡೆದು, ಭೋಪಾಲ್ ದುರಂತ ಸಂತ್ರಸ್ತರಿಗೆ 47 ಕೋಟಿ ಅಮೆರಿಕನ್ ಡಾಲರ್ ಅಂದರೆ, ₹800 ಕೋಟಿ (ಅಂದಿನ ಅಮೆರಿಕನ್ ಡಾಲರ್ ಮೌಲ್ಯದಲ್ಲಿ) ಪರಿಹಾರ ನೀಡುವುದಾಗಿ ಯುಸಿಸಿ ಒಪ್ಪಿಕೊಂಡಿತು. ಅಂದರೆ ಸಂತ್ರಸ್ತರಿಗೆ ಸಿಕ್ಕಿದ್ದು ತಲಾ ₹8,500 ಪರಿಹಾರ. ಸರ್ಕಾರ ಕೇಳಿದ್ದ ಆರನೇ ಒಂದು ಭಾಗದಷ್ಟು ಪರಿಹಾರ ಮಾತ್ರ ಸಿಕ್ಕಿತ್ತು. ಹೀಗಿದ್ದರೂ, ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸದ ಸರ್ಕಾರ, ಈ ಪರಿಹಾರ ಮೊತ್ತ ಸ್ವೀಕರಿಸಲು ಒಪ್ಪಿಗೆ ಸೂಚಿಸಿತ್ತು ಎಂದು ವರದಿ ತಿಳಿಸಿದೆ.
ಈ ವರದಿಯ ಇಂಗ್ಲಿಷ್ ಆವೃತ್ತಿಯು ‘ಅಲ್ ಜಝೀರಾ’ದಲ್ಲಿ ಪ್ರಕಟವಾಗಿದೆ
ಶ್ರೀಗಿರೀಶ್ ಜಾಲಿಹಾಳ್, ಕುಮಾರ ಸಂಭವ ಅವರು ರಿಪೋರ್ಟರ್ಸ್ ಕಲೆಕ್ಟಿವ್‌ನ ಸದಸ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.