ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿರುವ ಕೆಲವೇ ರಾಜ್ಯಗಳಲ್ಲಿ ಬಿಹಾರ ಸಹ ಒಂದು. ಆದರೆ ಬಿಹಾರದಲ್ಲಿನ ಲೋಕಸಭಾ ಚುನಾವಣಾ ಕಣ ದಿನದಿನವೂ ಬದಲಾಗುತ್ತಿದೆ. ಮತದಾನ ಆರಂಭಕ್ಕೂ ಮುನ್ನ ಎನ್‌ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟಗಳು ಅನುಸರಿಸುತ್ತಿದ್ದ ಚುನಾವಣಾ ತಂತ್ರಗಳೇ ಒಂದು, ಎರಡು ಹಂತದ ಮತದಾನ ಮುಗಿದ ನಂತರ ಈಗ ಹೂಡುತ್ತಿರುವ ತಂತ್ರವೇ ಇನ್ನೊಂದು. ಇನ್ನೂ ಐದು ಹಂತದ ಮತದಾನ ಉಳಿದಿದ್ದು, ಪರಿಸ್ಥಿತಿ ಮತ್ತೆ–ಮತ್ತೆ ಬದಲಾಗುವ ಸಾಧ್ಯತೆ ಹೆಚ್ಚೇ ಇದೆ ಎಂದು ನಿರೀಕ್ಷಿಸಲಾಗಿದೆ
ಬಿಹಾರದ ಜಮೂಯಿಯಲ್ಲಿ ಇದೇ ಏಪ್ರಿಲ್ ಮೊದಲ ವಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವೇದಿಕೆ ಹಂಚಿಕೊಂಡಿದ್ದರು. ಸಭೆಯ ಉದ್ದಕ್ಕೂ ಮೋದಿ ಅವರು, ‘ಮತ್ತೆ ಮೋದಿ ಸರ್ಕಾರ’ ಎಂದು ಘೋಷಿಸಿದ್ದರು. ಅದೇ ವೇದಿಕೆಯಲ್ಲಿ ನಿತೀಶ್ ಸಹ ಮಾತನಾಡಿ, ‘ನಾನು ಎಲ್ಲಿಗೂ ಹೋಗುವುದಿಲ್ಲ. ಪ್ರಧಾನಿ ಮೋದಿ ಅವರ ಒಟ್ಟಿಗೇ ಇರುತ್ತೇನೆ’ ಎಂದು ಹೇಳಿದ್ದರು. ಆ ಪ್ರಚಾರ ಸಭೆ ನಡೆದ ಸಂದರ್ಭದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿರಲಿಲ್ಲ.
ಮೊದಲ ಹಂತದ ಮತದಾನದ ನಂತರ ಮೋದಿ ಅವರು ಬಿಹಾರದಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ, 10 ವರ್ಷಗಳ ಹಿಂದಿನ ಯುಪಿಎ ಸರ್ಕಾರದ ಆಡಳಿತದ ಮೇಲೆ ವಾಗ್ದಾಳಿ ಆರಂಭಿಸಿದ್ದರು. ನಿತೀಶ್ ಕುಮಾರ್ ಅವರು, ಬಿಹಾರದಲ್ಲಿ ಈ ಹಿಂದೆ ಇದ್ದ ಆರ್‌ಜೆಡಿ ಸರ್ಕಾರವನ್ನು ‘ಜಂಗಲ್ ರಾಜ್’ ಎಂದು ಟೀಕಿಸತೊಡಗಿದರು. ಇನ್ನೊಂದೆಡೆ ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ಪ್ರಚಾರದ ತೀವ್ರತೆಯನ್ನು ಹೆಚ್ಚಿಸಿದರು. ಎರಡನೇ ಹಂತದ ಮತದಾನದ ನಂತರ ಈ ಸ್ಥಿತಿ ಇನ್ನಷ್ಟು ಬದಲಾಯಿತು. ಏಪ್ರಿಲ್ ನಾಲ್ಕನೇ ವಾರದ ವೇಳೆಗೆ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದಲ್ಲಿ ಹಲವು ಪ್ರಚಾರ ಸಭೆಗಳನ್ನು ನಡೆಸಿದರು. ಆದರೆ ಈ ಇಬ್ಬರು ನಾಯಕರು ಎಲ್ಲಿಯೂ ನಿತೀಶ್ ಕುಮಾರ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿಲ್ಲ. ನಿತೀಶ್ ಸಹ ಬಿಜೆಪಿಯ ಕಾರ್ಯಕ್ರಮಗಳಿಂದ ದೂರವೇ ಉಳಿದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದರು. ರಾಜಕೀಯ ಪಂಡಿತರು ಇದನ್ನು ಬೇರೆಯದ್ದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಯು ಈ ಬಾರಿ ಸೀಟು ಹಂಚಿಕೆ ಮಾಡಿಕೊಳ್ಳುವಾಗ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿತು. ಬಿಜೆಪಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸು ವುದಕ್ಕೆ ಜೆಡಿಯು ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದು ನಿತೀಶ್ ಅವರ ಕೈಕೆಳಗಾದುದರ ಸೂಚನೆ. ಪದೇ–ಪದೇ ಮೈತ್ರಿ ಬದಲಿಸಿ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡಿರುವ ನಿತೀಶ್, ಬಿಹಾರದ ಜನತೆಯ ವಿಶ್ವಾಸವನ್ನು ಕಳೆದುಕೊಂಡಿ ದ್ದಾರೆ. ಹೀಗಾಗಿಯೇ ಪ್ರಬಲ ಪ್ರಾದೇಶಿಕ ಪಕ್ಷವಾದರೂ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಯು ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು ಎಂದು ಸೀಟು ಹಂಚಿಕೆ ಸಂದರ್ಭದಲ್ಲಿ ವಿಶ್ಲೇಷಿಸಲಾಗಿತ್ತು. ಬಿಜೆಪಿ ನಾಯಕರು ನಿತೀಶ್ ಅವರನ್ನು ದೂರವಿಟ್ಟಿರುವುದರ ಹಿಂದೆ, ಜೆಡಿಯು ಅನ್ನು ದುರ್ಬಲಗೊಳಿಸುವ ಉದ್ದೇಶವಿದ್ದಂತಿದೆ ಎಂದು ಈಗ ವಿಶ್ಲೇಷಿಸಲಾಗುತ್ತಿದೆ.
ಇಂತಹ ಬದಲಾವಣೆಯು ವೇದಿಕೆ ಹಂಚಿಕೆಯಲ್ಲಿ ಮಾತ್ರವಲ್ಲ, ಚುನಾವಣಾ ಭಾಷಣದಲ್ಲೂ ಆಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮೋದಿ ಅವರು, ‘‘ಇಂಡಿ’ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಬಿಹಾರದ ಜನತೆಯ ಮೇಲೆ ತೆರಿಗೆ ಹೇರಲಾಗುತ್ತದೆ. ನಿಮ್ಮ ಸಂಪತ್ತನ್ನು ಕಸಿದುಕೊಂಡು ಅನ್ಯರಿಗೆ ನೀಡಲಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು.
ಇನ್ನೊಂದೆಡೆ ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಪ್ರಚಾರದ ಶೈಲಿಯನ್ನು ಬದಲಿಸಿಕೊಂಡರು. ಈ ವಾರದ ಆರಂಭದಲ್ಲಿ ನಡೆದ ಆರ್‌ಜೆಡಿ ಪ್ರಚಾರ ಸಭೆಯಲ್ಲಿ ಅವರು ಒಂದು ಬ್ಲೂಟೂತ್ ಸ್ಪೀಕರ್ ಹಿಡಿದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕುಗಳನ್ನು ಕೇಳಿಸಿದ್ದರು. ಅವು 2014ರ ಮತ್ತು 2019ರ ಚುನಾವಣೆ ವೇಳೆ ಮೋದಿ ಅವರು ನೀಡಿದ್ದ ಭರವಸೆಗಳಾಗಿದ್ದವು. ‘ಸ್ವಿಸ್ ಬ್ಯಾಂಕ್‌ನಿಂದ ಹಣ ತಂದು ದೇಶದ ಬಡವರಿಗೆ ಉಚಿತವಾಗಿ ₹15 ಲಕ್ಷದಿಂದ ₹20 ಲಕ್ಷ ನೀಡಬಹುದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ...’ ಎಂಬ ಭರವಸೆಗಳನ್ನು ನೀಡುವ ಮೋದಿ ಅವರ ಭಾಷಣದ ತುಣುಕುಗಳವು. ಅವನ್ನು ಕೇಳಿಸಿದ ನಂತರ ತೇಜಸ್ವಿ, ‘ನಿಮ್ಮ ಖಾತೆಗೆ ₹15 ಲಕ್ಷ ಬಂದಿದೆಯೇ? ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ’ ಎಂದು ಸಾರ್ವಜನಿಕ ರನ್ನು ಪ್ರಶ್ನಿಸಿದ್ದರು. ಅದಕ್ಕೆ ಇಲ್ಲಾ ಎಂಬ ಉತ್ತರ ಬಂದಾಗ, ಮತ್ತೆ ಅವರಿಗೆ ಮತ ನೀಡುತ್ತೀರಾ ಎಂದು ಮರುಪ್ರಶ್ನಿಸಿದ್ದರು. ಜನರು ಇಲ್ಲಾ ಎಂದೇ ಉತ್ತರಿಸಿದ್ದರು. ಇದೇ ಸ್ವರೂಪದ ಪ್ರಚಾರವನ್ನು ತೇಜಸ್ವಿ ಮತ್ತೆ–ಮತ್ತೆ ಮಾಡುತ್ತಿದ್ದಾರೆ.
ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಮಹಾಮೈತ್ರಿ ಕೂಟದ ಸರ್ಕಾರ ಇದ್ದಾಗ ತೇಜಸ್ವಿ ಉಪಮುಖ್ಯಮಂತ್ರಿಯಾಗಿ ದ್ದರು. ತಾವು ನಿರ್ವಹಿಸುತ್ತಿದ್ದ ಇಲಾಖೆಗಳ ಅಡಿಯಲ್ಲಿ 4.5 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಸಿದ್ದರು. ಇದು ಬಿಹಾರದ ಯುವ ಮತದಾರರನ್ನು ಸೆಳೆಯುತ್ತಿದೆ. ಉದ್ಯೋಗ ಅರಸುತ್ತಿರುವ ಯುವ ಮತದಾರರು ಆರ್‌ಜೆಡಿಯತ್ತಲೇ ವಾಲುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ‘ಇಂಡಿಯಾ’ ಮೈತ್ರಿಕೂಟದ ಮತ್ತೊಂದು ಪ್ರಮುಖ ಪಕ್ಷ ಕಾಂಗ್ರೆಸ್ ಪ್ರಚಾರಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನೇ ನೆಚ್ಚಿಕೊಂಡಿದೆ. ಕಾಂಗ್ರೆಸ್ ಸಭೆಗಳಲ್ಲೂ ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಆದರೆ ಎರಡೂ ಮೈತ್ರಿಕೂಟಗಳ ಪ್ರಚಾರ ಸಭೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿರುವುದು ತೇಜಸ್ವಿ ಯಾದವ್. ಈ ಸಭೆಗಳಲ್ಲಿ ವ್ಯಕ್ತವಾಗುತ್ತಿರುವ ಜನಬೆಂಬಲ ಮತದಾನದಲ್ಲೂ ಪ್ರತಿಬಿಂಬಿತವಾಗುತ್ತದೆಯೇ ಎಂಬುದನ್ನು ಕಂಡುಕೊಳ್ಳಲು ಫಲಿತಾಂಶದವರೆಗೆ ಕಾಯಲೇಬೇಕು.
2009ರ ಲೋಕಸಭಾ ಚುನಾವಣೆಯಿಂದಲೂ ಜೆಡಿಯು ಮತ್ತು ಬಿಜೆಪಿಯು ಬ್ರಾಹ್ಮಣರು ಮತ್ತು ಯಾದವೇತರ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಆರ್‌ಜೆಡಿ ಪಕ್ಷವು ಯಾದವರು ಮತ್ತು ದಲಿತ ಸಮುದಾಯದ ಅಭ್ಯರ್ಥಿಗಳನ್ನೇ ನೆಚ್ಚಿಕೊಂಡಿದೆ. ಯಾದವೇತರ ಹಿಂದುಳಿದ ಜಾತಿಗಳಲ್ಲಿ ಹಲವು ಪ್ರಬಲ ಸಮುದಾಯಗಳಿದ್ದು, ಅವು ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯುವನ್ನೇ ಬೆಂಬಲಿಸುತ್ತಾ ಬಂದಿವೆ. ಈ ಸಮುದಾಯಗಳು ನಿರ್ಣಾಯಕ ಸ್ಥಾನದಲ್ಲಿರುವ ಕ್ಷೇತ್ರಗಳಲ್ಲೂ ಆರ್‌ಜೆಡಿ ಯಾದವ
ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿತ್ತು. ಈ ಕಾರಣದಿಂದಲೇ ಬಿಜೆಪಿ ಮತ್ತು ಜೆಡಿಯುಗೆ ಹೆಚ್ಚಿನ ಮತಗಳು ಬೀಳುತ್ತಿದ್ದವು. 2019ರ ಚುನಾವಣೆಯಲ್ಲೂ ಹೀಗೇ ಆಗಿತ್ತು.
ಈಗ ‘ಇಂಡಿಯಾ’ ಮೈತ್ರಿಕೂಟವು ಯಾದವರು, ಯಾದವೇತರ ಹಿಂದುಳಿದ ವರ್ಗಗಳು, ದಲಿತರು, ಅತ್ಯಂತ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿಸಿದೆ. ಎನ್‌ಡಿಎ ಮೈತ್ರಿಕೂಟವು ಕಣಕ್ಕೆ ಇಳಿಸಿರುವ ಯಾದವೇತರ ಹಿಂದುಳಿದ ವರ್ಗಗಳ ಅಭ್ಯರ್ಥಿ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆ ಸಮುದಾಯದ ಅಭ್ಯರ್ಥಿಗಳನ್ನು ‘ಇಂಡಿಯಾ’ ಮೈತ್ರಿಕೂಟವು ಕಣಕ್ಕೆ ಇಳಿಸಿದೆ. ಇದು ಮೈತ್ರಿಕೂಟಕ್ಕೆ ಗೆಲುವು ತಂದೇಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ ಅದರ ಮತಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾತಿ ಸಮೀಕರಣದಲ್ಲಿ ಜೆಡಿಯು ಸಹ ಹಿಂದೆ ಬಿದ್ದಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಒಟ್ಟಿಗೆ ಮೈತ್ರಿ ಸರ್ಕಾರದಲ್ಲಿ ಇದ್ದಾಗ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದರು. ಅದರ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿದ್ದರು. ಇದರಿಂದ ಈ ಸಮುದಾಯಗಳ ಮತಗಳನ್ನು ಜೆಡಿಯು ಹಿಡಿದಿಟ್ಟುಕೊಂಡಂತಾಗಿದೆ. ಹೀಗಾಗಿ ‘ಇಂಡಿಯಾ’ ಮೈತ್ರಿಕೂಟದ ತಂತ್ರಗಾರಿಕೆ ನಿರೀಕ್ಷಿತ ಫಲ ನೀಡದೇ ಇರುವ ಸಾಧ್ಯತೆಯೂ ಇದೆ. ದೇಶದ ಬೇರೆ–ಬೇರೆ ರಾಜ್ಯಗಳಲ್ಲಿ ಬಿಜೆಪಿ ನಾಯಕರು ಮೀಸಲಾತಿಯನ್ನು ತೆಗೆದುಹಾಕುವ ಮತ್ತು ಸಂವಿಧಾನವನ್ನು ಬದಲಿಸುವ ಮಾತುಗಳನ್ನು ಆಡಿದ್ದು, ಜೆಡಿಯು ಮತ್ತು ಬಿಜೆಪಿಗೆ ಮುಳುವೂ ಆಗಬಹುದು ಎಂದು ವಿಶ್ಲೇಷಿಸಿದ್ದಾರೆ.
ಚುನಾವಣೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಮಹಿಳೆಯರು ಮತಗಟ್ಟೆಗೆ ಬಂದು ಮತ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಬಿಹಾರದಂಥ ಹಿಂದುಳಿದ ರಾಜ್ಯದ ಮಟ್ಟಿಗೆ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಎನ್ನುವುದು ದೂರದ ಮಾತೇ ಸರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ, ಮಹಿಳೆಯರು ಮತಗಟ್ಟೆಗೆ ಬಂದು ಮತ ಹಾಕುವ ವಿಚಾರದಲ್ಲಿ ಬಿಹಾರ ತುಸು ಮುಂದಿದೆ ಎನ್ನಬಹುದೇನೊ.
ಈ ಬಾರಿ ಆರ್‌ಜೆಡಿ ಪಾಳಯಕ್ಕೆ 26 ಸೀಟುಗಳು ದೊರೆತಿವೆ. ಕಾಂಗ್ರೆಸ್‌ಗೆ 9 ಸೀಟುಗಳಿವೆ. ಉಳಿದಿದ್ದನ್ನು ಎಡಪಕ್ಷಗಳಿಗೆ ಬಿಟ್ಟುಕೊಡಲಾಗಿದೆ. ಇಲ್ಲಿ ತುಸುವೇ ಸಮಾಧಾನಕರ ಸಂಗತಿ ಎಂದರೆ, ಆರ್‌ಜೆಡಿ ತನ್ನ 26 ಸೀಟುಗಳ ಪೈಕಿ 6 ಸೀಟುಗಳನ್ನು ಮಹಿಳೆಯರಿಗೆ ನೀಡಿದೆ. ಇವುಗಳಲ್ಲಿ ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಇಬ್ಬರು ಹೆಣ್ಣುಮಕ್ಕಳಿಗೆ ಟಿಕೆಟ್ ದೊರೆತಿದೆ. ಜೆಡಿಯು ಹಾಗೂ ಎಲ್‌ಜೆಪಿ ತಲಾ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಅಲ್ಲಿಗೆ ಬಿಹಾರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ದೊಡ್ಡ ಪಕ್ಷಗಳಿಂದ ಸೇರಿ ಒಟ್ಟು 10 ಮಹಿಳೆಯರಿಗೆ ಟಿಕೆಟ್ ನೀಡಿದಂತಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್– ಎರಡೂ ರಾಷ್ಟ್ರೀಯ ಪಕ್ಷಗಳು ಒಬ್ಬ ಮಹಿಳೆಗೂ ಟಿಕೆಟ್ ನೀಡಿಲ್ಲ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಬ್ಬ ಮಹಿಳೆಗೆ ಹಾಗೂ ಕಾಂಗ್ರೆಸ್–ಆರ್‌ಜೆಡಿ ‘ಮಹಾಘಟಬಂಧನ’ವು ಐವರು ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಜೆಡಿಯು ಮೂವರು ಮಹಿಳೆಯರಿಗೆ ಟಿಕೆಟ್ ನೀಡಿತ್ತು.
‘ಗೌಪ್ಯ’ ಮತದಾರರು: ನಿತೀಶ್ ಕುಮಾರ್ ಅವರ ಜೆಡಿಯು ಹಲವು ವರ್ಷಗಳಿಂದ ಬಿಹಾರದ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದಕ್ಕೆ ‘ಗೌಪ್ಯ’ ಮತದಾರರೇ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಮಹಿಳಾ ಮತದಾರರೇ ಈ ‘ಗೌಪ್ಯ’ರು. ಮನೆಯಲ್ಲಿ ಪುರುಷರು ಯಾವುದೇ ಪಕ್ಷಕ್ಕೆ ಮತ ನೀಡಿದರೂ ಮಹಿಳೆಯರು ಮಾತ್ರ ನಿತೀಶ್ ಅವರಿಗೇ ಮತ ನೀಡುತ್ತಾ ಬಂದಿದ್ದಾರೆ. ಆದರೆ, ಈ ಬಾರಿಯೂ ಇದು ಹೀಗೆಯೇ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ಎರಡು–ಮೂರು ವಿಧಾನಸಭೆ ಚುನಾವಣೆಗಳಿಂದ ಈಚೆಗೆ ಹಾಗೂ ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬರುತ್ತಿದ್ದಾರೆ. 2014 ಹಾಗೂ 2019ರ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ, 2014ರಲ್ಲಿ ಮಹಿಳೆಯರ ಮತಪ್ರಮಾಣವು ಪುರುಷರಿಗಿಂತ ಅಧಿಕವಾಗಿತ್ತು. 2014ರ ಚುನಾವಣೆಗಿಂತ 2019ರ ಚುನಾವಣೆಯ ಹೋಲಿಕೆಯಲ್ಲಿ ಮಹಿಳೆಯರ ಮತಪ್ರಮಾಣ ಅಧಿಕಗೊಂಡಿದೆ.
ಇದೇ ಕಾರಣಕ್ಕೆ, ಬಿಹಾರ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯವೂ ತುಸು ಅಧಿಕಗೊಂಡಿದೆ. ಇದೇ ಕಾರಣಕ್ಕಾಗಿಯೇ ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತಿದೆ. ಆರ್‌ಜೆಡಿಯು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, 6 ಮಹಿಳೆಯರಿಗೆ ಟಿಕೆಟ್ ನೀಡಿದೆ. ಈ ಮೂಲಕ ಮಹಿಳಾ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.