ADVERTISEMENT

ಆಳ–ಅಗಲ | ಬಿಹಾರ: ಎನ್‌ಡಿಎ ಸುಸೂತ್ರ, ‘ಇಂಡಿಯಾ’ಕ್ಕಿಲ್ಲ ತಂತ್ರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 23:59 IST
Last Updated 21 ಮಾರ್ಚ್ 2024, 23:59 IST
   
ಸಂಸತ್ತಿಗೆ ಅತಿಹೆಚ್ಚು ಸಂಸದರನ್ನು ಕಳುಹಿಸುವ ರಾಜ್ಯಗಳಲ್ಲಿ ಬಿಹಾರವೂ ಒಂದು. ಬಿಹಾರವು ಲೋಕಸಭೆಗೆ 40 ಸಂಸದರನ್ನು ಕಳುಹಿಸುತ್ತದೆ. ಹೀಗಾಗಿ ರಾಜ್ಯದ ರಾಜಕಾರಣವು ರಾಷ್ಟ್ರರಾಜಕಾರಣದಲ್ಲಿ ಮಹತ್ವ ಪಡೆದೇ ಪಡೆಯುತ್ತದೆ. ಪ್ರಾದೇಶಿಕ ಪಕ್ಷಗಳೇ ಪ್ರಧಾನವಾಗಿರುವ ರಾಜ್ಯದಲ್ಲಿ, ರಾಷ್ಟ್ರೀಯ ಪಕ್ಷಗಳು ಮೈತ್ರಿ ಮೊರೆ ಹೋಗುವುದು ಅನಿವಾರ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯಲ್ಲಿವೆ. ಕಾಂಗ್ರೆಸ್‌ ತನ್ನ ಹಳೆಯ ಮೈತ್ರಿಯನ್ನೇ ಮುಂದುವರಿಸಿದ್ದರೆ, ಬಿಜೆಪಿ ಮೈತ್ರಿಯನ್ನು ಬದಲಿಸಿದೆ. ಇದರ ಜತೆಯಲ್ಲೇ ಮೈತ್ರಿ ಲೆಕ್ಕಾಚಾರ ಮತ್ತು ರಾಜಕೀಯ ಸಂಯೋಜನೆ ಈ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿದೆ

ಲೋಕಸಭಾ ಚುನಾವಣೆಗೆ ಒಂದೆರಡು ತಿಂಗಳು ಇರುವಂತೆಯೇ ಬಿಹಾರದಲ್ಲಿ ಮೈತ್ರಿ ಲೆಕ್ಕಾಚಾರ ಬದಲಾಗಿತ್ತು. ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು, ‘ಇಂಡಿಯಾ’ ಮೈತ್ರಿಕೂಟವನ್ನೂ ತೊರೆದರು. ರಾಜ್ಯದಲ್ಲಿನ ಮಹಾಮೈತ್ರಿಕೂಟವನ್ನೂ ತೊರೆದರು. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಆರ್‌ಜೆಡಿ–ಜೆಡಿಯು–ಕಾಂಗ್ರೆಸ್‌ನ ಮಹಾಮೈತ್ರಿಕೂಟದ ಸರ್ಕಾರವನ್ನು ಬೀಳಿಸಿ, ಬಿಜೆಪಿಗೆ ಹೆಗಲು ಜೋಡಿಸಿದರು. ಹೊಸ ಸರ್ಕಾರವನ್ನೂ ರಚಿಸಿದರು. ಇದು ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಯಿತು.

ಜೆಡಿಯು ಬಿಜೆಪಿಗೆ ಜತೆಯಾಗುವುದರ ಮೂಲಕ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಬಲವಾಯಿತು. ‘ಇಂಡಿಯಾ’ ಮೈತ್ರಿಕೂಟ ದುರ್ಬಲವಾಯಿತು. ಇಂತಹ ಬೆಳವಣಿಗೆ ಅಲ್ಲಿಗೇ ನಿಲ್ಲಲಿಲ್ಲ. ಇನ್ನಿತರ ಸಣ್ಣಪುಟ್ಟ ಪಕ್ಷಗಳನ್ನೂ ಬಿಜೆಪಿ ಸೆಳೆಯತೊಡಗಿತು. ಈ ಬಗ್ಗೆ ಕಾದು ನೋಡುವ ತಂತ್ರದ ಮೊರೆ ಹೋದ ಆರ್‌ಜೆಡಿ–ಕಾಂಗ್ರೆಸ್‌ ತಮ್ಮ ತಂತ್ರಗಾರಿಕೆಯನ್ನೂ ಬದಲಿಸಿದವು. ಅಲ್ಲಿಂದಲೇ ಬಿಹಾರದ ರಾಜಕಾರಣ ಆಸಕ್ತಿಕರ ತಿರುವು ಪಡೆದುಕೊಂಡಿತು.

ಬಿಹಾರದಲ್ಲಿ ಹೊಸ ಸರ್ಕಾರ ರಚಿಸುವ ಮೂಲಕ ತಮ್ಮ ನೆಲೆ ಭದ್ರವಾಯಿತು ಎಂದು ನಿತೀಶ್‌ ಕುಮಾರ್‌ ಭಾವಿಸಿದ್ದರು. ಹೊಸ ಮೈತ್ರಿಯ ಬಗ್ಗೆ ಅವರು ಆಡಿದ್ದ ಮಾತುಗಳು ಮತ್ತು ಆರ್‌ಜೆಡಿ ಮುಂದಾಳು ಲಾಲು ಪ್ರಸಾದ್‌ ಅವರ ಆಹ್ವಾನವನ್ನು ತಿರಸ್ಕರಿಸಿದ ರೀತಿ ಇದನ್ನೇ ಸೂಚಿಸುತ್ತವೆ. ಆದರೆ ಇಲ್ಲಿ ನಿತೀಶ್ ಅವರಿಗೆ ಆಗಿದ್ದು ಹಿನ್ನಡೆಯೇ ಹೌದು ಎಂಬುದನ್ನು ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ದೃಢಪಡಿಸುತ್ತದೆ. ಇರುವ 40 ಕ್ಷೇತ್ರಗಳಲ್ಲಿ ಸಿಂಹಪಾಲನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಬಿಜೆಪಿ 17 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುತ್ತಿದ್ದರೆ, ಜೆಡಿಯುಗೆ ದಕ್ಕಿದ್ದು 16 ಕ್ಷೇತ್ರಗಳು ಮಾತ್ರ. ಈಗ ಜೆಡಿಯುವಿನ ಸಂಸದರ ಸಂಖ್ಯೆಯೂ ಅಷ್ಟೇ ಇದೆ. ಆದರೆ ಬಿಜೆಪಿ ಒಂದು ಹೆಚ್ಚುವರಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಮ್ರತ್ ಚೌಧರಿ ಅವರ ಚಾಣಾಕ್ಷತೆಗೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆಯನ್ನು ನಿರ್ಧರಿಸಿದ್ದು ಮತ್ತು ನಿರ್ವಹಿಸಿದ್ದು ಸಮ್ರತ್ ಅವರೇ ಎಂದು ಮೂಲಗಳು ಹೇಳುತ್ತವೆ. ಪದೇ–ಪದೇ ಮೈತ್ರಿ ಬದಲಿಸಿದ ಜೆಡಿಯುವಿನ ವಿಶ್ವಾಸಾರ್ಹತೆ ಕುಂದಿದ್ದನ್ನು ಪರಿಗಣಿಸಿಯೇ ಅದಕ್ಕೆ ಕಡಿಮೆ ಸ್ಥಾನಗಳನ್ನು ನೀಡಲಾಗಿದೆ ಎಂಬುದು ಬಿಜೆಪಿಯ ಮೂಲಗಳ ಅಭಿಪ್ರಾಯ. ಇದನ್ನು ಬಹಿರಂಗವಾಗಿ ಯಾರೂ ಹೇಳುತ್ತಿಲ್ಲ. ಆದರೆ, ವಿರೋಧ ಪಕ್ಷಗಳಂತೂ ಇದನ್ನೇ ಹೇಳುತ್ತಿವೆ.

ಸಮ್ರತ್ ಅವರು ಬಿಹಾರದಲ್ಲಿ ಹೊಸ ತಲೆಮಾರಿನ ನಾಯಕತ್ವವನ್ನು ಬೆಳೆಸುವ ಮೂಲಕ ತಮ್ಮ ಮತ್ತು ತಮ್ಮ ಪಕ್ಷದ ನೆಲೆಯನ್ನು ಗಟ್ಟಿಗೊಳಿಸಲು ತಂತ್ರ ರೂಪಿಸಿದ್ದಾರೆ ಎಂಬ ವಿಶ್ಲೇಷಣೆಯೂ ಇದೆ. ಸೀಟು ಹಂಚಿಕೆಯಲ್ಲಿ ರಾಮ್‌ ವಿಲಾಸ್ ಪಾಸ್ವಾನ್‌ ಅವರ ಸೋದರ ಪಶುಪತಿ ಪಾರಸ್ ಅವರ ಆರ್‌ಎಲ್‌ಜೆಪಿಯನ್ನು ಹೊರಗಿಟ್ಟು, ಪಾಸ್ವಾನ್‌ ಅವರ ಮಗ ಚಿರಾಗ್‌ ಅವರ ಎಲ್‌ಜೆಪಿಗೆ ಮಣೆ ಹಾಕಿದ್ದು ಇದನ್ನೇ ಸೂಚಿಸುತ್ತದೆ. ಇದಿಷ್ಟೇ ಅಲ್ಲದೆ ಪಾಸ್ವಾನ್‌ ಕುಟುಂಬಕ್ಕೆ ಅತ್ಯಂತ ಪ್ರತಿಷ್ಠೆಯ ಕಣವಾದ ಹಾಜಿಪುರ ಕ್ಷೇತ್ರವನ್ನು ಹಾಲಿ ಸಂಸದ ಪಶುಪತಿ ಅವರಿಂದ ಕಿತ್ತುಕೊಂಡು, ಚಿರಾಗ್‌ ಅವರಿಗೆ ನೀಡಲಾಗಿದೆ. ಈ ಮೂಲಕ ಚಿರಾಗ್‌ ಅವರ ವಿಶ್ವಾಸವನ್ನು ಬಿಜೆಪಿ, ಅರ್ಥಾತ್ ಸಮ್ರತ್ ಗಟ್ಟಿಗೊಳಿಸಿಕೊಂಡಿದ್ದಾರೆ. 

2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 39 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆನಂತರ ನಿತೀಶ್ ಅವರ ಜೆಡಿಯು ಎನ್‌ಡಿಎಯನ್ನು ತೊರೆದಿತ್ತು. ಈ ಚುನಾವಣೆಯಲ್ಲಿ ಎನ್‌ಡಿಎ ಮತ್ತದೇ ಗೆಲುವುನ್ನು ಸಾಧಿಸುವ ಗುರಿಯಲ್ಲಿದೆ. ಎಲ್ಲಾ 40 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಎನ್‌ಡಿಎ ವಕ್ತಾರರು ಹೇಳುತ್ತಿದ್ದಾರೆ. ಈ ಬಾರಿಯ ಸೀಟು ಹಂಚಿಕೆ ಸಂಯೋಜನೆ ಯಶಸ್ವಿಯಾದರೆ, ಬಿಜೆಪಿ ಮತ್ತು ಸಮ್ರತ್ ಅವರ ನೆಲೆ ಮತ್ತಷ್ಟು ಗಟ್ಟಿಯಾಗಲಿದೆ. ಅದು ನಿತೀಶ್‌ ಅವರ ‘ದೊಡ್ಡಣ್ಣ’ನ ಸ್ಥಾನಕ್ಕೆ ಕುತ್ತಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಬೇರೆಲ್ಲಾ ರಾಜ್ಯಗಳಲ್ಲಿ ಪ್ರಬಲ ನಾಯಕರನ್ನು ಮೂಲೆಗೆ ತಳ್ಳಿದ ಬಿಜೆಪಿ ಇಲ್ಲಿ, ಯುವ ನಾಯಕರನ್ನು ಬೆಳೆಸುತ್ತದೆಯೇ ಎಂಬುದನ್ನೂ ಕಾದು ನೋಡಬೇಕು ಎಂಬುದು
ತಜ್ಞರ ಅಭಿಪ್ರಾಯ.

ಕಾಂಗ್ರೆಸ್‌– ಆರ್‌ಜೆಡಿ: ಅಂತಿಮವಾಗದ ಸೀಟು ಹಂಚಿಕೆ

ಬಿಹಾರದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಮೂಲಕ ಎನ್‌ಡಿಎ ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಆದರೆ ಎದುರಾಳಿ ಪಾಳಯವು ಇನ್ನೂ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಲ್ಲ. ‘ಇಂಡಿಯಾ’ ಮೈತ್ರಿಕೂಟದ ಅಥವಾ ಬಿಹಾರದ ಮಹಾಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಧ್ಯೆ ಇನ್ನೂ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ಆರ್‌ಜೆಡಿ, ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತಿರುವಷ್ಟು ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ಗೆ ಸಮಾಧಾನವಿಲ್ಲ. ಇನ್ನೂ ಹೆಚ್ಚಿನ ಕ್ಷೇತ್ರಗಳು ಬೇಕು ಎಂಬುದು ಕಾಂಗ್ರೆಸ್‌ನ ವಾದ. ಈ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಇನ್ನೊಂದೆರಡು ದಿನಗಳಲ್ಲಿ ಸೀಟು ಹಂಚಿಕೆ ಅಂತಿಮವಾಗಲಿದೆ ಎಂದು ಎರಡೂ ಪಕ್ಷಗಳ ನಾಯಕರು ಹೇಳಿ ಎರಡು ದಿನ ಕಳೆದಿದೆ. ಆದರೆ ಸೀಟು ಹಂಚಿಕೆ ಅಂತಿಮವಾಗಿಲ್ಲ.

ಇನ್ನೊಂದೆಡೆ ಪಪ್ಪು ಯಾದವ್ ಅವರು ಕಾಂಗ್ರೆಸ್‌ ಸೇರಿದ್ದಾರೆ ಮತ್ತು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಟ್ಟಿಗೆ ವಿಲೀನ ಮಾಡಿದ್ದಾರೆ. ಪಪ್ಪು ಯಾದವ್ ಅವರ ಜನ ಅಧಿಕಾರ್‌ ಪಕ್ಷವು 2019ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿದಿತ್ತು. ಆ ಪಕ್ಷವು ಯಾವೊಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲವಾದರೂ, ಹಲವಾರು ಕ್ಷೇತ್ರಗಳಲ್ಲಿ ಆರ್‌ಜೆಡಿಯ ಮತಗಳನ್ನು ವಿಭಜಿಸಿತ್ತು. ಇದರಿಂದಾಗಿ ಆರ್‌ಜೆಡಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ನ ಸ್ಥಿತಿಯೂ ಹಾಗೇ ಇತ್ತು.

ಪಪ್ಪು ಯಾದವ್ ಮತ್ತು ಲಾಲು ಪ್ರಸಾದ್‌ ಅವರ ನಡುವಣ ಪೈಪೋಟಿಯನ್ನು ಮರೆತು ಈ ಬಾರಿ ಸೀಟು ಹಂಚಿಕೊಳ್ಳಬೇಕಿದೆ. ಆರ್‌ಜೆಡಿ ತನ್ನ ಸ್ಥಾನಗಳನ್ನು ಪಪ್ಪು ಯಾದವ್ ಮತ್ತು ಅವರ ಸಂಗಡಿಗರಿಗೆ ಬಿಟ್ಟುಕೊಡಲು ತಯಾರಿಲ್ಲ. ಕಾಂಗ್ರೆಸ್‌ ತನಗೆ ದೊರೆಯಲಿರುವ ಕ್ಷೇತ್ರಗಳನ್ನೇ ಪಪ್ಪು ಯಾದವ್ ಅವರಿಗಾಗಿ ತ್ಯಾಗ ಮಾಡಬೇಕಿದೆ. ಹೀಗಾಗಿಯೇ ಕಾಂಗ್ರೆಸ್‌ ಇನ್ನಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಮಂಚ್‌ಗೆ (ಆರ್‌ಎಲ್‌ಎಂ) ಬಿಜೆಪಿ ನೀಡಿದ್ದು ಒಂದು ಕ್ಷೇತ್ರ ಮಾತ್ರ. ಪಕ್ಷವು ಎರಡು ಸೀಟುಗಳಿಗೆ ಬೇಡಿಕೆ ಇಟ್ಟಿತ್ತು. ಒಂದನ್ನಷ್ಟೇ ಬಿಟ್ಟುಕೊಟ್ಟಿರುವ ಕಾರಣ, ಕುಶ್ವಾಹಾ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ ನಾಯಕರೊಟ್ಟಿಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಕುಶ್ವಾಹಾ ಅವರೂ ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿದರೆ, ಅಲ್ಲಿ ಸೀಟು ಹಂಚಿಕೆ ಮತ್ತಷ್ಟು ಕಠಿಣವಾಗಲಿದೆ. ಆದರೆ ಅದನ್ನು ಸರಿಯಾಗಿ ನಿರ್ವಹಿಸಿದರೆ, ಕಾಂಗ್ರೆಸ್‌ ಮತ್ತು ಆರ್‌ಜೆಡಿಯ ಮತಗಳು ವಿಭಜನೆ ಆಗುವುದನ್ನು ತಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ.

ಪಶುಪತಿ ಮೂಲೆಗುಂಪು

ಪಶುಪತಿ ಪಾರಸ್ ಅವರ ಆರ್‌ಎಲ್‌ಜೆಪಿ ಸದ್ಯ ಐವರು ಸಂಸದರನ್ನು ಹೊಂದಿದೆ. ಮೈತ್ರಿಧರ್ಮದ ಹೆಸರಿನಲ್ಲಿ ಬಿಜೆಪಿ ಪಶುಪತಿ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವನ ಸ್ಥಾನವನ್ನೂ ಒದಗಿಸಿತ್ತು. ಅಂತಹ ಆರ್‌ಎಲ್‌ಜೆಪಿಯನ್ನೇ ಮೂಲೆಗುಂಪು ಮಾಡುವಲ್ಲಿ ಚಿರಾಗ್‌ ಪಾಸ್ವಾನ್‌ ಯಶ್ವಸಿಯಾಗಿದ್ದಾರೆ. ಪಶುಪತಿ ಅವರ ಪಕ್ಷಕ್ಕೆ ಬಿಜೆಪಿ ಒಂದು ಕ್ಷೇತ್ರವನ್ನೂ ನೀಡಿಲ್ಲ.

ಇದರಿಂದ ಬೇಸತ್ತ ಪಶುಪತಿ ಅವರು ಕೇಂದ್ರ ಸಚಿವನ ಸ್ಥಾನವನ್ನೇ ತೊರೆದರು ಮತ್ತು ಎನ್‌ಡಿಎ ಮೈತ್ರಿಕೂಟವನ್ನೂ ತ್ಯಜಿಸಿದರು. ಅವರ ಪಕ್ಷವು ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತದೆಯೇ ಅಥವಾ ‘ಇಂಡಿಯಾ’ ಒಕ್ಕೂಟ ಸೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆರ್‌ಎಲ್‌ಜೆಪಿ ಸ್ವತಂತ್ರವಾಗಿ ಕಣಕ್ಕೆ ಇಳಿಯುವ ಸಾಧ್ಯತೆಯೇ ಹೆಚ್ಚು ಎಂಬುದು ನಿರೀಕ್ಷೆ.

ಅದು ಹೇಗೇ ಕಣಕ್ಕೆ ಇಳಿದರೂ ಎಲ್‌ಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮತಗಳನ್ನು ವಿಭಜಿಸುತ್ತದೆ. ಬಿಜೆಪಿ ಕಣಕ್ಕೆ ಇಳಿಯಲಿರುವ ಕೆಲವು ಕ್ಷೇತ್ರಗಳಲ್ಲೂ ಅದು ಮತಗಳನ್ನು ವಿಭಜಿಸುವ ಸಾಧ್ಯತೆ ಇದೆ. ಇದು ‘ಇಂಡಿಯಾ’ ಮೈತ್ರಿಕೂಟಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.

 ಆಧಾರ: ಪಿಟಿಐ, ರಾಯಿಟರ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.