ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಅವಧಿಗೂ ಮುನ್ನ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಅಪರಾಧಿಗಳನ್ನು ಶಿಕ್ಷೆ ಮುಗಿಯುವ ಮುನ್ನ ಬಿಡುಗಡೆ ಮಾಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದೂ ನ್ಯಾಯಾಲಯ ಹೇಳಿದೆ. ಅಂತಹ ಅಧಿಕಾರ ಯಾವ ಸರ್ಕಾರಕ್ಕೆ ಇರುತ್ತದೆ ಮತ್ತು ಯಾವ ಸಂದರ್ಭದಲ್ಲಿ ಇಂತಹ ಅಧಿಕಾರ ರಾಜ್ಯ ಸರ್ಕಾರಕ್ಕೆ ಬಂದೊದಗುತ್ತದೆ ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ..
ಕಾನೂನು ಹೇಳುವುದೇನು?
ಅಪರಾಧ ನಿಗದಿಯಾಗಿ ಶಿಕ್ಷೆಗೆ ಗುರಿಯಾದ ಯಾವುದೇ ಅಪರಾಧಿಯ ಶಿಕ್ಷೆ ಪ್ರಮಾಣವನ್ನು ಕಡಿತ ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆ’ಯು (ಸಿಆರ್‌ಪಿಸಿ) ಸರ್ಕಾರಗಳಿಗೆ ನೀಡಿದೆ. ಆದರೆ ಈ ಅಧಿಕಾರವನ್ನು ಹೇಗೆ ಬಳಸಬೇಕು ಎಂಬುದನ್ನೂ ಸಂಹಿತೆಯ ವಿವಿಧ ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ. ಸಿಆರ್‌ಪಿಸಿಯ 432, ಅದರ ಉಪಸೆಕ್ಷನ್‌ಗಳು ಮತ್ತು 433ಎ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ
ಶಿಕ್ಷೆ ಕಡಿಮೆ ಮಾಡುವ, ರದ್ದು ಮಾಡುವ ಅಧಿಕಾರ
432(1): ಶಿಕ್ಷೆಗೊಳಗಾದ ಮತ್ತು ಶಿಕ್ಷೆ ಅನುಭವಿಸುತ್ತಿರುವ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಅಧಿಕಾರ ‘ಸೂಕ್ತ ಸರ್ಕಾರ’ಕ್ಕೆ ಇದೆ. ಷರತ್ತುಗಳ ಆಧಾರದಲ್ಲಿ ಅಥವಾ ಯಾವುದೇ ಷರತ್ತು ಇಲ್ಲದೇ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬಹುದು
432(2): ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಮುನ್ನ ಆ ಶಿಕ್ಷೆಯನ್ನು ನೀಡಿದ್ದ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯವನ್ನು ‘ಸೂಕ್ತ ಸರ್ಕಾರ’ ತೆಗೆದುಕೊಳ್ಳಬೇಕು. ಆ ಅಭಿಪ್ರಾಯವು/ವರದಿಯು ಈ ಕೆಳಕಂಡ ವಿವರಗಳನ್ನು ಒಳಗೊಂಡಿರಬೇಕು.
l ಶಿಕ್ಷೆಯನ್ನು ಕಡಿಮೆ ಅಥವಾ ರದ್ದು ಮಾಡಬೇಕೇ ಅಥವಾ ಅಂತಹ ಅರ್ಜಿಯನ್ನು ತಿರಸ್ಕರಿಸಬೇಕೇ ಎಂಬುದನ್ನು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಬೇಕು. ತಾವು ಅಂತಹ ನಿರ್ಧಾರಕ್ಕೆ ಬರಲು ಕಾರಣಗಳೇನು ಎಂಬುದನ್ನು ಅ ವರದಿಯಲ್ಲಿ ಸ್ಪಷ್ಟವಾಗಿ ವಿವರಿಸಿರಬೇಕು. ಈ ಕಾರಣಗಳು ಸತ್ಯಾಸತ್ಯತೆಗಳನ್ನು ಆಧರಿಸಿರಬೇಕು
l ಜತೆಗೆ ಈ ಸಂಬಂಧ ನಡೆದ ವಿಚಾರಣೆ ಮತ್ತು ಹೇಳಿಕೆಗಳನ್ನು ಒಳಗೊಂಡ ದಾಖಲೆಗಳು ಇದ್ದರೆ, ಅದರ ದೃಢೀಕೃತ ನಕಲು ಪ್ರತಿಯನ್ನು ವರದಿಯೊಟ್ಟಿಗೆ ನೀಡಬೇಕು
# ಈ ನ್ಯಾಯಾಧೀಶನು ಅಪರಾಧಿ ಜೈಲುಶಿಕ್ಷೆ ಅನುಭವಿಸುತ್ತಿರುವ ಜೈಲಿನ ಸಲಹಾ ಸಮಿತಿಯ ಸದಸ್ಯನಾಗಿರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ
# ಅಪರಾಧ ನಿಗದಿ ಮಾಡಿದ ಮತ್ತು ಶಿಕ್ಷೆ ನಿಗದಿ ಮಾಡಿದ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಕಡ್ಡಾಯ (ಈ ಸೆಕ್ಷನ್‌ನಲ್ಲಿ ಇರುವ 'may' ಎಂಬುದನ್ನು 'shall' ಎಂದೇ ಓದಿಕೊಳ್ಳಬೇಕು) ಎಂದು ಸುಪ್ರೀಂ ಕೋರ್ಟ್ ಹೇಳಿದೆ.
432(7): 432(1)ರಲ್ಲಿ ಹೇಳಲಾಗಿರುವ ‘ಸೂಕ್ತ ಸರ್ಕಾರ’ ಎಂಬುದನ್ನು 432(7) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದ, ಅಪರಾಧವನ್ನು ನಿಗದಿಮಾಡಿದ ಮತ್ತು ಶಿಕ್ಷೆಯನ್ನು ನೀಡಿದ ನ್ಯಾಯಾಲಯ ಇರುವ ರಾಜ್ಯದ ಸರ್ಕಾರವೇ ‘ಸೂಕ್ತ ಸರ್ಕಾರ’
433ಎ: ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದು ಮಾಡುವ ಅಧಿಕಾರಕ್ಕೆ ನಿರ್ಬಂಧಗಳು
ಸಿಆರ್‌ಪಿಸಿಯ 432 ಸೆಕ್ಷನ್ ಮತ್ತು ಅದರ ಯಾವುದೇ ಉಪಸೆಕ್ಷನ್‌ಗಳು 433ಎ ವಿವರಿಸುವ ನಿರ್ಬಂಧಗಳಿಗೆ ಅನ್ವಯವಾಗುವುದಿಲ್ಲ. ಮರಣ ದಂಡನೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಮತ್ತು ಮರಣದಂಡನೆಯನ್ನು ಜೀವಿತಾವಧಿ ಶಿಕ್ಷೆಗೆ ಇಳಿಸಿದ ಪ್ರಕರಣಗಳಲ್ಲಿ, ಅಪರಾಧಿಯು ಕನಿಷ್ಠ 14 ವರ್ಷಗಳ ಸೆರೆವಾಸವನ್ನು ಅನುಭವಿಸಿರಬೇಕು. 14 ವರ್ಷಗಳ ಸೆರೆವಾಸವನ್ನು ಅನುಭವಿಸದೇ ಇದ್ದರೆ, ಶಿಕ್ಷೆ ಕಡಿಮೆ ಮಾಡುವಂತೆ ಅಥವಾ ಶಿಕ್ಷೆಯ ಅವಧಿಗೂ ಮುನ್ನವೇ ಬಿಡುಗಡೆ ಮಾಡಿ ಎಂದು ಅರ್ಜಿ ಸಲ್ಲಿಸುವಂತಿಲ್ಲ
ಅಪರಾಧಿಗಳು ಒಟ್ಟು 14 ವರ್ಷಕ್ಕಿಂತ ಹೆಚ್ಚಿನ ಅವಧಿ ಸೆರೆವಾಸದಲ್ಲಿ ಇದ್ದರೂ, ಅವರು ಆ ಅವಧಿಯಲ್ಲಿ ಪೆರೋಲ್ ಮತ್ತು ಪರ್ಲೊ ಆಧಾರದಲ್ಲಿ ಹಲವು ತಿಂಗಳು ಜೈಲಿನಿಂದ ಹೊರಗೆ ಇದ್ದರು. ದಂಡ ಕಟ್ಟದೇ ಇದ್ದುದಕ್ಕೆ ಪ್ರತಿಯಾಗಿ ಅನುಭವಿಸಬೇಕಿದ್ದ ಹೆಚ್ಚುವರಿ ಜೈಲುಶಿಕ್ಷೆಯನ್ನು ಅನುಭವಿಸಿಲ್ಲ. ಅದನ್ನು ಮನ್ನಿಸಿ ಶಿಕ್ಷೆಯನ್ನು ಕಡಿತ ಮಾಡುವ ಅಥವಾ ಅವಧಿಗೂ ಮುನ್ನ ಬಿಡುಗಡೆ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ.
# ಈ ಎಲ್ಲಾ ಉಲ್ಲಂಘನೆಗಳ ಮೂಲಕ ಗುಜರಾತ್ ಸರ್ಕಾರವು ಅತ್ಯಾಚಾರಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನ ಬಿಡುಗಡೆ ಮಾಡಿತ್ತು
ರಾಜ್ಯ ಸರ್ಕಾರಗಳು ಅಪರಾಧಿಯ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ಶಿಕ್ಷೆಯನ್ನು ರದ್ದುಪಡಿಸುವ ಮುನ್ನ ಈ ಅಂಶಗಳನ್ನು ಪರಿಗಣಿಸಬೇಕು ಎಂದು ರಾಮ ಚಂದರ್ ವರ್ಸಸ್ ಹರಿಯಾಣ ಸರ್ಕಾರದ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ನಂತರದ ಹಲವು ಪ್ರಕರಣಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಅಂಶಗಳನ್ನು ಪದೇ–ಪದೇ ಉಲ್ಲೇಖಿಸಿದೆ
ಗುಜರಾತ್ ಸರ್ಕಾರ ಮಾಡಿದ್ದೇನು: ಸುಪ್ರೀಂ ವಿವರ
ಈ ಪ್ರಕರಣದಲ್ಲಿ ವಿಚಾರಣೆ, ಅಪರಾಧ ನಿಗದಿ ಮತ್ತು ಶಿಕ್ಷೆ ನಿಗದಿ ಮಾಡಿದ್ದು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ. ಸಿಆರ್‌ಪಿಸಿಯ 432(1) ಸೆಕ್ಷನ್ ಪ್ರಕಾರ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದು ಮಾಡುವ ಅಧಿಕಾರ ಇರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಮಾತ್ರ. ಆದರೆ ತನಗೆ ಇಲ್ಲದ ಅಧಿಕಾರವನ್ನು ಗುಜರಾತ್ ಸರ್ಕಾರ ಚಲಾಯಿಸಿದೆ
l ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯವನ್ನು ಕೇಳಲಾಗಿತ್ತು. ಅವರು ಅಪರಾಧಿಗಳ ಶಿಕ್ಷೆಯನ್ನು ಕಡಿಮೆ ಮಾಡುವುದು ಅಥವಾ ಅವರನ್ನು ಶಿಕ್ಷೆಯ ಅವಧಿಗೂ ಮುನ್ನ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ವರದಿ ನೀಡಿದ್ದರು. ಆ ವರದಿಯನ್ನು ಮರೆಮಾಚಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ವರದಿಯನ್ನು ಕಡೆಗಣಿಸಿದ್ದು ಮತ್ತು ಮರೆಮಾಚಿದ್ದು ಕಾನೂನು ಬಾಹಿರ
l 2022ರಲ್ಲಿ ಕೃತ್ಯ ನಡೆದಿದ್ದ ಗೋದ್ರಾ ಪಟ್ಟಣವಿರುವ ಗುಜರಾತ್‌ನ ಪಂಚಮಹಲ್ ಜಿಲ್ಲಾ ನ್ಯಾಯಾಧೀಶರ ಅಭಿಪ್ರಾಯವನ್ನೂ ಗುಜರಾತ್ ಸರ್ಕಾರ ಕೇಳಿತ್ತು. ಪಂಚಮಹಲ್ ಜಿಲ್ಲಾ ನ್ಯಾಯಾಧೀಶರು ಅಪರಾಧಿಗಳ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ಶಿಕ್ಷೆಯ ಅವಧಿಗೂ ಮುನ್ನ ಬಿಡುಗಡೆ ಮಾಡುವ ಕ್ರಮವು ಸೂಕ್ತವಲ್ಲ ಎಂದು ವರದಿ ನೀಡಿದ್ದರು. ಈ ನಿರ್ಧಾರವು ಸರಿಯಾದುದಾದರೂ, ಈ ಪ್ರಕರಣವು ಅವರ ವ್ಯಾಪ್ತಿಗೆ ಬರುವುದಿಲ್ಲವಾದ ಕಾರಣ ಈ ವರದಿಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ
l ಆನಂತರ ಅಪರಾಧಿಗಳು ಸೆರೆವಾಸ ಅನುಭವಿಸುತ್ತಿದ್ದ ಕಾರಾಗೃಹವಿದ್ದ ದಾಹೋದ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಅಭಿಪ್ರಾಯವನ್ನು ಗುಜರಾತ್ ಸರ್ಕಾರ ಕೇಳಿತ್ತು. ಅವರು ಅಪರಾಧಿಗಳ ಅರ್ಜಿಯನ್ನು ಪರಿಗಣಿಸುವಂತೆ ವರದಿ ನೀಡಿದ್ದರು. ವರದಿ ನೀಡುವಲ್ಲಿ ಪಾಲಿಸಬೇಕಾದ (ಕಾರಣಗಳು ವಿವರಿಸುವ) ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ದಾಹೋದ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ವ್ಯಾಪ್ತಿಗೆ ಇದು ಬರುವುದಿಲ್ಲವಾದ ಕಾರಣ, ಅವರ ವರದಿಗೆ ಕಾನೂನಿನ ಮಾನ್ಯತೆ ಇಲ್ಲ. ಜತೆಗೆ ಅವರು ಕಾರಾಗೃಹ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಕಾರಣದಿಂದಲೂ ಈ ವರದಿ ಗಣನೆಗೆ ಬರುವುದೇ ಇಲ್ಲ.
ಕ್ಷಮಾದಾನ ಅರ್ಜಿ ಪರಿಗಣನೆಗೆ ಇರುವ ಐದು ಅಂಶಗಳು
1. ಅಪರಾಧಿಯು ಎಸಗಿರುವ ಕೃತ್ಯವು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಪ್ರಮುಖವಾಗಿ ಗಮನಿಸಬೇಕು. ಜೊತೆಗೆ, ಅಪರಾಧಿಯ ಕೃತ್ಯವು ಯಾವುದೋ ಸರಣಿ ಅಥವಾ ಸಾಮೂಹಿಕ ಅಪರಾಧಗಳ ಭಾಗವಾಗಿತ್ತೇ ಅಥವಾ ಪ್ರತ್ಯೇಕ ಅಪರಾಧವಾಗಿತ್ತೇ ಎನ್ನುವುದು ಮುಖ್ಯವಾಗಿ ಪರಿಗಣಿಸಬೇಕು
2. ಅಪರಾಧ ಕೃತ್ಯ ಎಸಗಿದ ವ್ಯಕ್ತಿಯು ಬಿಡುಗಡೆಗೊಂಡರೆ, ಆತ ಮುಂದೊಂದು ದಿನ ಮತ್ತೆ ಅಂತಹ ಅಪರಾಧ ಕೃತ್ಯ ಎಸಗುವುದಿಲ್ಲ ಎನ್ನುವ ಖಚಿತತೆ ಇದೆಯೇ ಎಂಬುದನ್ನು ಪರಿಗಣಿಸಬೇಕು
3. ಅಂತಹ ಅಪರಾಧ ಕೃತ್ಯವನ್ನು ಮತ್ತೆ ಎಸಗುವ ಎಲ್ಲಾ ಸ್ವರೂಪದ ಸಾಮರ್ಥ್ಯಗಳು ಅಪರಾಧಿಗೆ ಇವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸಬೇಕು
4.ಅಪರಾಧಿಯ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದು ಪಡಿಸುವ ಕ್ರಮದಿಂದ ನಿಜವಾಗಿಯೂ ಉಪಯೋಗವಿದೆಯೇ ಎಂಬುದನ್ನು ಸರ್ಕಾರವು ವಿವೇಚಿಸಬೇಕು
5. ಅಪರಾಧಿಯ ಕುಟುಂಬದ ಸಾಮಾಜಿಕ–ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು
ಕಟ್ಟದ ದಂಡ: ಹೆಚ್ಚುವರಿ ಶಿಕ್ಷೆ ಕಡ್ಡಾಯ
ಮುಂಬೈನ ಸಿಬಿಐನ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ದಂಡವನ್ನೂ ವಿಧಿಸಿತ್ತು. ಒಂದುವೇಳೆ ದಂಡ ಪಾವತಿಸಲು ಅಪರಾಧಿಗಳು ವಿಫಲವಾದರೆ, ಮತ್ತೆ ಜೈಲುಶಿಕ್ಷೆ ಅನುಭವಿಸಬೇಕು ಎಂದೂ ಹೇಳಿತ್ತು. ಆದರೆ, ಅಪರಾಧಿಗಳು ದಂಡದ ಮೊತ್ತವನ್ನು 2022ರವರೆಗೂ ಪಾವತಿಸಿರಲಿಲ್ಲ. ಈ ಅಂಶವನ್ನು ಕಡೆಗಣಿಸಿ, ಗುಜರಾತ್ ಸರ್ಕಾರ ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಜೈಲಿನಿಂದ ಬಿಡುಗಡೆಗೊಳಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕಟುವಾಗಿ ಟೀಕಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯ ಏನು ಹೇಳಿತ್ತು?
ಕೊಲೆ ಹಾಗೂ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ಸಿಬಿಐ ನ್ಯಾಯಾಲಯವು ಪ್ರತ್ಯೇಕವಾದ ದಂಡವನ್ನು ವಿಧಿಸಿತ್ತು. ಪ್ರತಿಯೊಬ್ಬ ಅಪರಾಧಿಯೂ ಒಟ್ಟು ₹34,000 ದಂಡವನ್ನು ಪಾವತಿಸಬೇಕು ಎಂದು ಕೋರ್ಟ್ ಹೇಳಿತ್ತು. ಒಂದು ವೇಳೆ ದಂಡವನ್ನು ಪಾವತಿಸಲು ಅಪರಾಧಿಗಳು ವಿಫಲರಾದರೆ, 34 ವರ್ಷಗಳ ಹೆಚ್ಚುವರಿ ಜೈಲುಶಿಕ್ಷೆಯನ್ನು ಅನುಭವಿಸಬೇಕು ಎಂದಿತ್ತು. ಆದರೆ, 11 ಮಂದಿ ಅಪರಾಧಿಗಳು ದಂಡವನ್ನು ಕಟ್ಟಲಿಲ್ಲ ಮತ್ತು ಹೀಗೆ ದಂಡ ಕಟ್ಟದಿದ್ದಕ್ಕಾಗಿ ಅನುಭವಿಸಬೇಕಿದ್ದ ಶಿಕ್ಷೆಯನ್ನು ರದ್ದು ಪಡಿಸಲಾಗದು. ಅದನ್ನು ಪ್ರತ್ಯೇಕವಾಗಿಯೇ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆಧಾರ: ಸುಪ್ರೀಂ ಕೋರ್ಟ್ ತೀರ್ಪು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ
–––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.