ADVERTISEMENT

ಆಳ–ಅಗಲ: ಕುಬೇರ ರಾಜಕೀಯ ಪಕ್ಷ ಬಿಜೆಪಿ– ಕರಗುತ್ತಿದೆ ಪ್ರಾದೇಶಿಕ ಪಕ್ಷಗಳ ಗಂಟು

ಜಯಸಿಂಹ ಆರ್.
Published 8 ಫೆಬ್ರುವರಿ 2022, 2:31 IST
Last Updated 8 ಫೆಬ್ರುವರಿ 2022, 2:31 IST
   

ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಎನಿಸಿರುವ ಬಿಜೆಪಿಯ ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2015–16ನೇ ಸಾಲಿಗೆ ಹೋಲಿಸಿದರೆ, 2019–20ರಲ್ಲಿ ಬಿಜೆಪಿಯ ಸಂಪತ್ತು ಶೇ 442ರಷ್ಟು ಏರಿಕೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಕ್ಷದ ಸಂಪತ್ತು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2016–17ರಲ್ಲಿ ಸಂಪತ್ತಿನ ಪ್ರಮಾಣವು ಶೇ 35ರಷ್ಟು ಏರಿಕೆಯಾಗಿದ್ದರೆ, 2017–18ರಲ್ಲಿ ಶೇ 22ರಷ್ಟು ಏರಿಕೆಯಾಗಿತ್ತು.

2018ರಲ್ಲಿ ಚುನಾವಣಾ ಬಾಂಡ್‌ ಅನ್ನು ಜಾರಿಗೆ ತಂದ ನಂತರ ಬಿಜೆಪಿಯ ಸಂಪತ್ತು ಹಲವು ಪಟ್ಟು ಏರಿಕೆಯಾಗಿದೆ. 2017–18ಕ್ಕೆ ಹೋಲಿಸಿದರೆ, 2018-19ರಲ್ಲಿ ಬಿಜೆಪಿಯ ಸಂಪತ್ತು ಶೇ 99.80ರಷ್ಟು ಏರಿಕೆಯಾಗಿತ್ತು. 2019–20ರಲ್ಲೂ ಪಕ್ಷದ ಸಂಪತ್ತು ಶೇ 66.9ರಷ್ಟು ಏರಿಕೆಯಾಗಿದೆ.

2018–19ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು ₹1,450.89 ಕೋಟಿ ದೇಣಿಗೆ ಸಂಗ್ರಹಿಸಿತ್ತು. 2019–20ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು ₹2,555 ಕೋಟಿ ದೇಣಿಗೆ ಸಂಗ್ರಹಿಸಿದೆ.ಹೀಗೆ ಸಂಗ್ರಹಿಸಿದ ದೇಣಿಗೆಯಲ್ಲಿ ಸಾಕಷ್ಟು ಮೊತ್ತವನ್ನು ಬಿಜೆಪಿಯು ವಿವಿಧ ಚುನಾವಣೆಗಳಿಗಾಗಿ ವೆಚ್ಚ ಮಾಡಿದೆ.

ADVERTISEMENT

ದೇಶದಲ್ಲಿ ನಡೆಯುವ ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡುತ್ತದೆ. ಈ ಬಾಂಡ್‌ಗಳನ್ನು ಸಾರ್ವಜನಿಕರು ಖರೀದಿಸಿ, ತಮ್ಮಿಷ್ಟದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದು. ಈ ಬಾಂಡ್‌ಗಳನ್ನು ಖರೀದಿಸುವ ವೇಳೆ ಯಾವುದೇ ದಾಖಲಾತಿ ನೀಡುವ ಅವಶ್ಯಕತೆ ಇಲ್ಲ. ಹೀಗಾಗಿ ಯಾರು ಬಾಂಡ್‌ ಖರೀದಿಸಿದರು, ನಗದು ನೀಡಿ ಖರೀದಿಸಿದರೆ ಅಥವಾ ಚೆಕ್‌ ಮೂಲಕ ಖರೀದಿಸಿದರೆ ಎಂಬ ವಿವರವನ್ನು ಎಸ್‌ಬಿಐ ಸಂಗ್ರಹಿಸುವುದಿಲ್ಲ. ಈ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ನಗದೀಕರಿಸಿಕೊಳ್ಳಬೇಕು.

ಚುನಾವಣಾ ಬಾಂಡ್‌ಗಳ ಮೂಲಕ ನಗದೀಕರಿಸಿಕೊಳ್ಳಲಾದ ದೇಣಿಗೆಯನ್ನು ‘ವಿವರಗಳಿಲ್ಲದ ಮೂಲದ ದೇಣಿಗೆ’ ಎಂದು ವರ್ಗೀಕರಿಸಲಾಗುತ್ತದೆ. ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಆದಾಯದ ವಿವರದಲ್ಲೂ ಇದನ್ನು ‘ವಿವರಗಳಿಲ್ಲದ ಮೂಲದ ದೇಣಿಗೆ’ ಎಂದೇ ನಮೂದಿಸಲಾಗುತ್ತದೆ. ‘ಚುನಾವಣಾ ಬಾಂಡ್‌ಗಳಿಂದ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿದೆ’ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿವೆ.

ಬಿಜೆಪಿಯದ್ದೇ ಸಿಂಹಪಾಲು

ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷ ಎನಿಸಿದೆ. ದೇಶದ ಎಲ್ಲಾ ರಾಷ್ಟ್ರೀಯ ಪಕ್ಷಗಳ ಒಟ್ಟು ಸಂಪತ್ತಿನಲ್ಲಿ ಬಿಜೆಪಿಯ ಸಂಪತ್ತಿನ ಪ್ರಮಾಣ ಶೇ 70ರಷ್ಟು. ದೇಶದ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಸಂಪತ್ತಿನಲ್ಲಿ ಶೇ 53ಕ್ಕೂ ಹೆಚ್ಚು ಸಂಪತ್ತನ್ನು ಬಿಜೆಪಿ ಹೊಂದಿದೆ. 2018–19ಕ್ಕೆ ಹೋಲಿಸಿದರೆ, 2019–20ರಲ್ಲಿ ಸಂಪತ್ತು ಏರಿಕೆಯಾದ ಪಕ್ಷಗಳಲ್ಲಿ ಬಿಜೆಪಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

l ಈ ಅವಧಿಯಲ್ಲಿ ಬಿಜೆಪಿಯ ಸಂಪತ್ತು ₹2,904 ಕೋಟಿಯಿಂದ ₹4,847 ಕೋಟಿಗೆ ಏರಿಕೆಯಾಗಿದೆ. ಅಂದರೆ ಒಂದು ವರ್ಷದಲ್ಲಿ ಬಿಜೆಪಿಯ ಸಂಪತ್ತು ₹1,943 ಕೋಟಿಯಷ್ಟು ಹೆಚ್ಚಳವಾಗಿದೆ

l ದೇಶದ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಸಂಪತ್ತು ಈ ಅವಧಿಯಲ್ಲಿ ಇಳಿಕೆಯಾಗಿದೆ

l ಮಹಾರಾಷ್ಟ್ರದಲ್ಲಿ ಈಗ ಶಿವಸೇನಾ–ಕಾಂಗ್ರೆಸ್‌ ಜತೆ ಮೈತ್ರಿ ಸರ್ಕಾರದ ಪಾಲುದಾರನಾಗಿರುವ ಎನ್‌ಸಿಪಿಯ ಸಂಪತ್ತು ಈ ಅವಧಿಯಲ್ಲಿ ಶೇ 74ರಷ್ಟು ಇಳಿಕೆಯಾಗಿದೆ. ಜತೆಗೆ ಎನ್‌ಸಿಪಿ ದೇಶದ ಅತ್ಯಂತ ಬಡ ರಾಷ್ಟ್ರೀಯ ಪಕ್ಷ ಎನಿಸಿದೆ. ಎನ್‌ಸಿಪಿಯ ಸಂಪತ್ತು ಪ್ರಮುಖ ಪ್ರಾದೇಶಿಕ ಪಕ್ಷಗಳ ಸಂಪತ್ತಿಗಿಂತ ಹಲವು ಪಟ್ಟು ಕಡಿಮೆ ಇದೆ

l ಎಲ್ಲಿಯೂ ಅಧಿಕಾರದಲ್ಲಿ ಇರದ ಬಿಎಸ್‌ಪಿ ದೇಶದ ಎರಡನೇ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷ ಎನಿಸಿದೆ. 2018–19ರಲ್ಲಿ ಕಾಂಗ್ರೆಸ್‌ ಎರಡನೇ ಶ್ರೀಮಂತ ರಾಷ್ಟ್ರೀಯ ಪಕ್ಷ ಎನಿಸಿತ್ತು. 2019–20ರ ವೇಳೆಗೆ ಈ ಎರಡೂ ಪಕ್ಷಗಳ ಸಂಪತ್ತು ಇಳಿಕೆಯಾಗಿದ್ದರೂ, ಹೆಚ್ಚು ಕಳೆದುಕೊಂಡಿದ್ದು ಕಾಂಗ್ರೆಸ್. ಹೀಗಾಗಿ ಬಿಎಸ್‌ಪಿ ಎರಡನೇ ಅತಿ ಶ್ರೀಮಂತ ರಾಷ್ಟ್ರೀಯ ಪಕ್ಷ ಎನಿಸಿದೆ. ಆದರೆ, ಈಗ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲು ತನ್ನ ಬಳಿ ಸಾಕಷ್ಟು ಹಣ ಇಲ್ಲ ಎಂದು ಬಿಎಸ್‌ಪಿ ಹೇಳಿತ್ತು

ಕರಗುತ್ತಿದೆ ಪ್ರಾದೇಶಿಕ ಪಕ್ಷಗಳ ಗಂಟು

2018–19ಕ್ಕೆ ಹೋಲಿಸಿದರೆ, 2019–20ರಲ್ಲಿ ಹಲವು ಪ್ರಾದೇಶಿಕ ಪಕ್ಷಗಳ ಸಂಪತ್ತು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೆಲವೇ ಪ್ರಾದೇಶಿಕ ಪಕ್ಷಗಳ ಸಂಪತ್ತು ಏರಿಕೆಯಾಗಿದೆ. ಹೀಗೆ ಸಂಪತ್ತು ಏರಿಕೆಯಾದ ಪ್ರಾದೇಶಿಕ ಪಕ್ಷಗಳಲ್ಲಿ ಬಿಜೆಡಿ ಮೊದಲ ಸಾಲಿನಲ್ಲಿದೆ. ಅಧಿಕಾರದಲ್ಲಿ ಇರುವ ಕೆಲವು ಪಕ್ಷಗಳ ಸಂಪತ್ತು ಇಳಿಕೆಯಾಗಿದ್ದರೆ, ಅಧಿಕಾರದಲ್ಲಿ ಇಲ್ಲದೇ ಇರುವ ಕೆಲವು ಪಕ್ಷಗಳ ಸಂಪತ್ತು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ

l ತೆಲಂಗಾಣದಲ್ಲಿ ಎರಡು ಅವಧಿಯಿಂದ ಅಧಿಕಾರದಲ್ಲಿರುವ ತೆಲುಗು ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಸಂಪತ್ತು ಈ ಅವಧಿಯಲ್ಲಿ ಇಳಿಕೆಯಾಗಿದೆ. ಅಧಿಕಾರದಲ್ಲಿದ್ದೂ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತು ಕಳೆದುಕೊಂಡ ಪ್ರಾದೇಶಿಕ ಪಕ್ಷಗಳಲ್ಲಿ ಟಿಆರ್‌ಎಸ್‌ ಮೊದಲ ಸಾಲಿನಲ್ಲಿ ನಿಲ್ಲುತ್ತದೆ

l ಮಹಾರಾಷ್ಟ್ರದಲ್ಲಿ ಈಗ ಅಧಿಕಾರದಲ್ಲಿರುವ ಶಿವಸೇನಾದ ಸಂಪತ್ತು ಸ್ವಲ್ಪ ಕರಗಿದೆ. ಶಿವಸೇನಾವು ಈ ಹಿಂದಿನ ಅವಧಿಯಲ್ಲೂ ಬಿಜೆಪಿ ಜತೆಗಿನ ಮೈತ್ರಿಕೂಟದಲ್ಲಿ ಸರ್ಕಾರದ ಭಾಗವಾಗಿತ್ತು

l ಬಿಹಾರದಲ್ಲಿ ಅಧಿಕಾರದಲ್ಲಿ ಇರುವ ಜೆಡಿಯುವಿನ ಸಂಪತ್ತು ಸಹ ಕರಗಿದೆ. ಆಂಧ್ರಪ್ರದೇಶದಲ್ಲಿ ಈಗ ಅಧಿಕಾರದಲ್ಲಿ ಇರುವ ವೈಎಸ್‌ಆರ್‌ ಕಾಂಗ್ರೆಸ್‌ನ ಸಂಪತ್ತು ಸಹ ಶೇ 34ರಷ್ಟು ಇಳಿಕೆಯಾಗಿದೆ

l ಎಲ್ಲಿಯೂ ಅಧಿಕಾರದಲ್ಲಿ ಇಲ್ಲದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ಸಂಪತ್ತು ಏರಿಕೆಯಾಗಿದೆ

l ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾ ದಳದ (ಬಿಜೆಡಿ) ಸಂಪತ್ತು ಈ ಅವಧಿಯಲ್ಲಿ ಶೇ 62.23ರಷ್ಟು ಏರಿಕೆಯಾಗಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಸಂಪತ್ತು ಏರಿಕೆಯಾದ ಗರಿಷ್ಠ ಪ್ರಮಾಣ ಇದಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೂ, ಸಂಪತ್ತು ಏರಿಕೆಯ ಪ್ರಮಾಣದಲ್ಲಿ ಬಿಜೆಡಿ ಎರಡನೇ ಸ್ಥಾನದಲ್ಲಿದೆ

ಆಧಾರ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ‘ರಾಜಕೀಯ ಪಕ್ಷಗಳ ಸಂಪತ್ತಿನ ವಿಶ್ಲೇಷಣೆ ವರದಿಗಳು:2015–2020’, ‘ರಾಜಕೀಯ ಪಕ್ಷಗಳ ಆದಾಯದ ಮೂಲ ವರದಿಗಳು:2018–2020, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.