ಬಿಹಾರದಲ್ಲಿ ಜೂನ್ 18ರಿಂದ ಜುಲೈ 4ರ ನಡುವೆ 10 ಸೇತುವೆಗಳು ಕುಸಿದಿರುವುದು ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಈ ವಿಚಾರ ರಾಜ್ಯದಲ್ಲಿ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ. ಭ್ರಷ್ಟಾಚಾರ, ಕಳಪೆ ಕಾಮಗಾರಿ, ಅಧಿಕಾರಿಗಳು, ಎಂಜಿನಿಯರ್‌ಗಳ ನಿರ್ಲಕ್ಷ್ಯ, ಸೇತುವೆ ಪಿಲ್ಲರ್‌ಗಳ ಸುತ್ತ ಸೇರಿದಂತೆ ನದಿಯಲ್ಲಿನ ಹೂಳು ತೆರೆವುಗೊಳಿಸಿರುವುದು, ನೇಪಾಳದ ಕಡೆಯಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದು ಹೀಗೆ... ಸೇತುವೆ ಕುಸಿತಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಘಟನೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಬಿಹಾರ ಸರ್ಕಾರ ಉನ್ನತ ಮಟ್ಟದ ತನಿಖೆಗೂ ಆದೇಶಿಸಿದೆ. ಪ್ರಾಥಮಿಕ ವರದಿಯ ಆಧಾರದಲ್ಲಿ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಸೇತುವೆ ಕುಸಿತ ಪ್ರಕರಣಗಳ ಸುತ್ತಲಿನ ನೋಟವನ್ನು ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ...
ಜೂನ್ 18. ಬಿಹಾರದ ಅರರಿಯಾ ಜಿಲ್ಲೆಯ ಪರಾರಿಯಾ ಗ್ರಾಮದಲ್ಲಿ ಬಕರಾ ನದಿಗೆ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ, ಇನ್ನಷ್ಟೇ ಉದ್ಘಾಟನೆಯಾಗಬೇಕಿದ್ದ ಸೇತುವೆ ಕುಸಿದು ಬಿತ್ತು. ಅದಾದ ಬಳಿಕ 15 ದಿನಗಳಲ್ಲಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಒಂಬತ್ತು ಸೇತುವೆಗಳು ನೀರು ಪಾಲಾದವು.
ಕೆಲವು ಸೇತುವೆಗಳು ನಿರ್ಮಾಣವಾಗಿ 10–15 ವರ್ಷಗಳಾಗಿತ್ತಷ್ಟೇ. ಒಂದು ಸೇತುವೆ ನಿರ್ಮಾಣ ಹಂತದಲ್ಲಿತ್ತು. ಇನ್ನೂ ಕೆಲವು ಸೇತುವೆಗಳು 25, 30, 50, 80 ವರ್ಷಗಳ ಹಿಂದೆ ನಿರ್ಮಾಣವಾಗಿದ್ದವು. ಬಿಹಾರದಲ್ಲಿ ಸೇತುವೆಗಳು ಕುಸಿಯುವುದು ಹೊಸತಲ್ಲ. ಕೋಸಿ ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆಯು ಈ ವರ್ಷದ ಮಾರ್ಚ್ 22ರಂದು ಕುಸಿದು ಒಬ್ಬರು ಮೃತಪಟ್ಟು, ಹಲವರು ಸಿಲುಕಿಕೊಂಡಿದ್ದರು. ಆದರೆ, ಸಮೂಹಸನ್ನಿಯ ಮಾದರಿಯಲ್ಲಿ ಸರಣಿ ರೂಪದಲ್ಲಿ ಸೇತುವೆಗಳು ಕುಸಿದಿರುವುದು ಇದೇ ಮೊದಲು.
ಸಿವಾನ್, ಸಾರಣ್, ಮಧುಬನಿ, ಅರರಿಯಾ, ಪೂರ್ವ ಚಂಪಾರಣ್, ಕೃಷ್ಣಗಂಜ್ ಜಿಲ್ಲೆಗಳಲ್ಲಿ ಸೇತುವೆಗಳು ಕುಸಿದಿವೆ.
ಕಾರಣಗಳೇನು?: ಒಂದಾದ ನಂತರ ಒಂದು ಸೇತುವೆ ಕುಸಿದಿರುವುದು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ವಿರೋಧ ಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಿತೀಶ್ ಸರ್ಕಾರವನ್ನು ಕುಟುಕಿವೆ. ‘ರಾಜ್ಯದ ಸೇತುವೆಗಳಲ್ಲಿ ಸಂಚರಿಸಲು ಭಯವಾಗುತ್ತಿದೆ’ ಎಂದು ಸರ್ಕಾರದ ಪಾಲುದಾರ ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಎಂದು ಹೇಳಿರುವುದು ಪರಿಸ್ಥಿತಿಯ ತೀವ್ರತೆಯನ್ನು ಬಿಂಬಿಸುತ್ತದೆ.
ಬಿಹಾರದಲ್ಲಿ ಗ್ರಾಮೀಣ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ರಸ್ತೆ ನಿರ್ಮಾಣ ಇಲಾಖೆ ಮತ್ತು ಬಿಹಾರ ರಾಜ್ಯ ಸೇತುವೆ ನಿರ್ಮಾಣ ನಿಗಮಗಳು ರಸ್ತೆಗಳ ನಿರ್ಮಾಣದ ಹೊಣೆ ಹೊತ್ತಿವೆ. ವಿವಿಧ ಯೋಜನೆಗಳ ಅಡಿಯಲ್ಲಿ ಅವುಗಳು ಸೇತುವೆಗಳನ್ನು ನಿರ್ಮಿಸುತ್ತವೆ.
ರಾಜ್ಯದಲ್ಲೀಗ ಮುಂಗಾರು ಆರಂಭವಾಗಿದೆ. ಉತ್ತಮ ಮಳೆಯಾಗುತ್ತಿದೆ. ನೇಪಾಳ ಭಾಗದಿಂದ ಹುಟ್ಟುವ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ರಾಜ್ಯದ ನದಿಗಳು, ಉಪನದಿಗಳು, ಕಾಲುವೆ, ನಾಲೆಗಳು ತುಂಬಿ ಹರಿಯುತ್ತಿವೆ. ಮಳೆಗಾಲದಲ್ಲಿ ಇಲ್ಲಿ ನೆರೆಹಾವಳಿ ಸಾಮಾನ್ಯ.
ಮಳೆಗಾಲ ಆರಂಭವಾಗುವ ಸಂದರ್ಭಲ್ಲೇ ಸೇತುವೆಗಳು ಕುಸಿದಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ವಿವಿಧ ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ.
ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಳಪೆ ಕಾಮಗಾರಿ (ನಿಯಮದ ಅನ್ವಯ ಸಿಮೆಂಟ್, ಕಬ್ಬಿಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಳಸದೇ ಇರುವುದು), ಅಧಿಕಾರಿಗಳು, ಎಂಜಿನಿಯರ್‌ಗಳ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ರಾಜ್ಯದ ಅಧಿಕಾರಿಗಳು ನದಿ, ಹಳ್ಳಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದನ್ನು ಕಾರಣ ಕೊಡುತ್ತಿದ್ದಾರೆ. ನೀರಿನ ಮಟ್ಟ ಹೆಚ್ಚಾಗಿರುವರಿಂದ ಸೇತುವೆಗಳು ಕುಸಿಯುತ್ತಿವೆ ಎಂದು ಹಳೆಯ ಸೇತುವೆಗಳು ಬಿದ್ದ ಪ್ರದೇಶದ ಗ್ರಾಮಸ್ಥರು ಕೂಡ ಹೇಳುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನ ಸರ್ಕಾರವು ಕೆಲವು ಕಾಲುವೆಗಳು, ನಾಲೆಗಳಲ್ಲಿ ಹೂಳು ತೆಗೆಯುವ ಕೆಲಸ ಮಾಡಿತ್ತು. ಇದರ ಗುತ್ತಿಗೆ ವಹಿಸಿಕೊಂಡವರು ಅವೈಜ್ಞಾನಿಕವಾಗಿ ಸೇತುವೆಗಳ ಪಿಲ್ಲರ್‌ಗಳ ಸುತ್ತಮುತ್ತಲಿನಿಂದಲೂ ಮರಳು, ಹೂಳು, ಕಲ್ಲುಗಳನ್ನು ತೆರವುಗೊಳಿಸಿರುವುದರಿಂದ ಸೇತುವೆಗಳು ದುರ್ಬಲವಾಗಿದ್ದವು ಎಂಬ ವಾದವೂ ಇದೆ.
15 ಎಂಜಿನಿಯರ್‌ಗಳ ಅಮಾನತು: ಸೇತುವೆ ಕುಸಿತ ಪ್ರಕರಣದ ತನಿಖೆಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅಲ್ಲದೇ ರಾಜ್ಯದಲ್ಲಿರುವ ಹಳೆಯ ಮತ್ತು ದುರಸ್ತಿ ಅಗತ್ಯವಿರುವ ಸೇತುವೆಗಳ ಪಟ್ಟಿ ಮಾಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೂ ತಿಳಿಸಿದ್ದರು.
ಉನ್ನತ ಮಟ್ಟದ ತನಿಖಾ ಸಮಿತಿಯು ರಾಜ್ಯ ಜಲಸಂಪನ್ಮೂಲ ಇಲಾಖೆಗೆ ಪ್ರಾಥಮಿಕ ವರದಿಯನ್ನು ನೀಡಿದ್ದು, ‘ಕಾಮಗಾರಿಯ ಸಂದರ್ಭದಲ್ಲಿ ಮೇಲ್ವಿಚಾರಣೆ ಸರಿಯಾಗಿ ಮಾಡದೆ ಎಂಜಿನಿಯರ್‌ಗಳ ನಿರ್ಲಕ್ಷ್ಯ ವಹಿಸಿದ್ದು ಘಟನೆಗಳಿಗೆ ಕಾರಣ’ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದರ ಆಧಾರದಲ್ಲಿ ನಾಲ್ವರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸೇರಿದಂತೆ 14 ಮಂದಿ ಎಂಜಿನಿಯರ್‌ಗಳನ್ನು ಸರ್ಕಾರ ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್‌ಗೆ ಮೊರೆ
ಬಿಹಾರದಲ್ಲಿರುವ ನಿರ್ಮಾಣ ಹಂತದಲ್ಲಿರುವುದೂ ಸೇರಿದಂತೆ ಎಲ್ಲ ಸೇತುವೆಗಳ ವಿನ್ಯಾಸದ ಮೌಲ್ಯಮಾಪನ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಬ್ರಿಜೇಶ್ ಸಿಂಗ್ ಎಂಬವರು ಈ ಅರ್ಜಿ ಸಲ್ಲಿಸಿದ್ದು, ‘ಕಾರ್ಯಸಾಧ್ಯತೆ ವರದಿ ಆಧಾರದಲ್ಲಿ ದುರ್ಬಲ ಸೇತುವೆಗಳನ್ನು ಉರುಳಿಸಬೇಕು ಅಥವಾ ದುರಸ್ತಿ ಮಾಡಲು ಹಾಗೂ ಸೇತುವೆಗಳ ಸಾಮರ್ಥ್ಯದ ಮೇಲ್ವಿಚಾರಣೆ ನಡೆಸುವುದಕ್ಕಾಗಿ ವ್ಯವಸ್ಥಿತ ಮತ್ತು ಪರಿಣಾಮಕಾರಿಯಾದ ನೀತಿಯನ್ನೂ ಜಾರಿಗೆ ತರಲು ಬಿಹಾರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅವರು ಕೋರಿದ್ದಾರೆ.
‘ದೇಶದಲ್ಲಿರುವ ಸಂಭಾವ್ಯ ಪ್ರವಾಹ ಪೀಡಿತ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ 68,800 ಚದರ ಕಿ.ಮೀ ಪ್ರದೇಶ, ಅಂದರೆ ಒಟ್ಟು ಭೂಭಾಗದ ಶೇ 73.06ರಷ್ಟು ಪ್ರದೇಶದಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ ಸೇತುವೆಗಳ ಸರಣಿ ಕುಸಿತ ಜನರ ಪಾಲಿಗೆ ಅಪಾಯಕಾರಿಯಾಗಿದೆ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಸೇತುವೆ ಕುಸಿದಿದ್ದು ಎಲ್ಲಿ? ಯಾವಾಗ?
ಜೂನ್ 18: ಅರರಿಯಾ ಜಿಲ್ಲೆಯ ಪರಾರಿಯಾ ಗ್ರಾಮದಲ್ಲಿ ಉದ್ಘಾಟನೆಗೆ ಕಾದಿದ್ದ ಸೇತುವೆ
ಜೂನ್ 22: ಸಿವಾನ್ ಜಿಲ್ಲೆ
ಜೂನ್ 23: ಪೂರ್ವ ಚಂಪಾರಣ್ ಜಿಲ್ಲೆಯ ನಿರ್ಮಾಣ ಹಂತದಲ್ಲಿದ್ದ ಸೇತುವೆ
ಜೂನ್ 25: ಮಧುಬನಿ ಜಿಲ್ಲೆಯಲ್ಲಿ ನೀರಿನ ಸೆಳೆತಕ್ಕೆ ಪಿಲ್ಲರ್‌ಗಳು ಕೊಚ್ಚಿಹೋಗಿ ಸೇತುವೆ ನೀರುಪಾಲು
ಜೂನ್ 27:ಕೃಷ್ಣಗಂಜ್ ಜಿಲ್ಲೆಯಲ್ಲಿ ಸೇತುವೆ
ಜೂನ್ 30: ಕೃಷ್ಣಗಂಜ್ ಜಿಲ್ಲೆಯಲ್ಲೇ ಮತ್ತೊಂದು ಸೇತುವೆ
ಜುಲೈ 3: ಸಾರಣ್ ಮತ್ತು ಸಿವಾನ್ ಜಿಲ್ಲೆಗಳಲ್ಲಿ ಮೂರು ಸೇತುವೆಗಳು
ಜುಲೈ 4: ಸಾರಣ್ ಜಿಲ್ಲೆಯ ಗಂಡಕಿ ನದಿಗೆ ಕಟ್ಟಿದ್ದ ಸೇತುವೆ
ದೇಶದಲ್ಲಿ ನಡೆದ ಪ್ರಮುಖ ಘಟನೆಗಳು
ದಿಯು ದಾಮನ್: 2003ರ ಆಗಸ್ಟ್‌ನಲ್ಲಿ, ದಾಮನ್‌ನ ಶತಮಾನದಷ್ಟು ಹಳೆಯ ಸೇತುವೆ ಕುಸಿದು ಬಿದ್ದು, 25 ಮಂದಿ ಸಾವಿಗೀಡಾಗಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳು. ದಾಮನ್‌ಗಂಗಾ ನದಿಗೆ ಕಟ್ಟಲಾಗಿದ್ದ ಸೇತುವೆ ಅದಾಗಿತ್ತು
ಬಿಹಾರ: 2006ರಲ್ಲಿ ಬಿಹಾರದಲ್ಲಿ ಸೇತುವೆಯೊಂದು ಕುಸಿದು 34 ಮಂದಿ ಮೃತರಾಗಿದ್ದರು. ಅದು 150 ವರ್ಷ ಹಳೆಯದಾಗಿದ್ದ ಸೇತುವೆಯು ರೈಲು ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿನ ಮೇಲೆ ಬಿದ್ದಿತ್ತು
ಪಶ್ಚಿಮ ಬಂಗಾಳ: 2016ರ ಆಸುಪಾಸಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವು ಸೇತುವೆಗಳು ಕುಸಿದಿದ್ದವು. ಅವುಗಳ ಪೈಕಿ ನಿರ್ಮಾಣ ಹಂತದಲ್ಲಿದ್ದ ಕೋಲ್ಕತ್ತದ ವಿವೇಕಾನಂದ ಸೇತುವೆ ಪ್ರಮುಖವಾದುದು. ಅವಘಡದಲ್ಲಿ 26 ಮಂದಿ ಮೃತರಾಗಿದ್ದರು
ಪಶ್ಚಿಮ ಬಂಗಾಳ: 2018ರ ಸೆಪ್ಟೆಂಬರ್ 4ರಂದು ಕೋಲ್ಕತ್ತದ ಅಲಿಪೋರ ನೆರೆಯ ಮಜರ್‌ಹಟ್ ಸೇತುವೆ ಕುಸಿದಿತ್ತು. ಘಟನೆಯಲ್ಲಿ ಮೂವರು ಸತ್ತು, 25 ಮಂದಿ ಗಾಯಗೊಂಡಿದ್ದರು. 50 ವರ್ಷದ ಮಜರ್‌ಹಟ್ ಸೇತುವೆಯನ್ನೂ ದುರಸ್ತಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿತ್ತು. 2010ರಲ್ಲಿಯೂ ಸೇತುವೆಯನ್ನು ದುರಸ್ತಿ ಮಾಡಿದ್ದರು. ಆದರೆ, 2016ರ ಹೊತ್ತಿಗೆ ಪರಿಶೀಲಿಸಿದಾಗ ಅದು ಸುರಕ್ಷಿತ ಅಲ್ಲ ಎನ್ನುವುದು ಕಂಡುಬಂದಿತ್ತು. ಜನ ಒತ್ತಾಯ ಮಾಡಿದರೂ ದುರಸ್ತಿ ಕಾಮಗಾರಿ ಆರಂಭವಾಗಿರಲಿಲ್ಲ
ಮಹಾರಾಷ್ಟ್ರ: 2019ರ ಮಾರ್ಚ್ 14ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ರೈಲು ನಿಲ್ದಾಣ ಮತ್ತು ಬದ್ರುದ್ದೀನ್ ತಯಾಬ್ಜಿ ಪಥವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ಕುಸಿದು, ಆರು ಮಂದಿ ಮೃತರಾಗಿದ್ದಲ್ಲದೇ, 30 ಮಂದಿ ಗಾಯಗೊಂಡಿದ್ದರು
ಗುಜರಾತ್: ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ 2022ರ ಅಕ್ಟೋಬರ್ 30ರಂದು ಮುರಿದು ಬಿದ್ದು 135 ಮಂದಿ ಮೃತಪಟ್ಟಿದ್ದರು. 230 ಮೀಟರ್ ಉದ್ದದ ಈ ಸೇತುವೆಯನ್ನು 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದರಿಂದಾಗಿ ಆರು ತಿಂಗಳು ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಸೇತುವೆಯನ್ನು ಸಂಚಾರಕ್ಕೆ ಮುಕ್ತತೊಳಿಸಿದ ನಾಲ್ಕು ದಿನಗಳಲ್ಲೇ ದುರಂತ ನಡೆದಿತ್ತು. ಸೇತುವೆಯ ಕಳಪೆ ನಿರ್ವಹಣೆ ಮತ್ತು ಕಳಪೆ ದುರಸ್ತಿಯೇ ಅವಘಡಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದರು.
ಸೇತುವೆ ರಕ್ಷಣೆ ಯಾರ ಹೊಣೆ?
ಭಾರತದ ಸೇತುವೆಗಳ ಗುಣಮಟ್ಟದ ಬಗ್ಗೆ ಬಹು ಹಿಂದಿನಿಂದಲೂ ಪ್ರಶ್ನೆಗಳು ಕೇಳಿಬರುತ್ತಿವೆ. ದೇಶದ ಹಲವು ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ದುರಸ್ತಿಯ ಕೊರತೆಯಿಂದಲೂ ಸೇತುವೆಗಳು ಕುಸಿದುಬಿದ್ದದ್ದು ವರದಿಯಾಗಿವೆ. ಸೇತುವೆ ನಿರ್ವಹಣೆ ಯಾರ ಜವಾಬ್ದಾರಿ ಎನ್ನುವುದಕ್ಕೆ ಉತ್ತರ ಸರಳ ಅಲ್ಲ. ವಿವಿಧ ಇಲಾಖೆಗಳ ನಡುವೆ ಸಾಮರಸ್ಯ ಇಲ್ಲದಿರುವುದು ಕೂಡ ಸೇತುವೆಗಳ ಕಳಪೆ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಭಾರತದ ಬಹುತೇಕ ಸೇತುವೆಗಳು ಕುಸಿದು ಬೀಳಲು ಕಾರಣವಾಗುತ್ತಿರುವುದು ಅವುಗಳ ನಿರ್ವಹಣೆಯ ಕೊರತೆ.
ಹೆದ್ದಾರಿಗಳಲ್ಲಿನ ಸೇತುವೆಗಳು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಗಡಿ ರಸ್ತೆಗಳ ಸಂಸ್ಥೆಯು ಗಡಿಯಲ್ಲಿರುವ ಸೇತುವೆಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ರೈಲ್ವೆ ಇಲಾಖೆಯು ಹಳಿಗಳ ಮೇಲಿನ ಸೇತುವೆಗಳ ಜವಾಬ್ದಾರಿ ಹೊತ್ತರೆ, ಉಳಿದ ಸೇತುವೆಗಳ ನಿರ್ವಹಣೆ ಆಯಾ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಸೇತುವೆ ನಿರ್ವಹಣಾ ವ್ಯವಸ್ಥೆಗೆ ಗ್ರಹಣ
2016ರಲ್ಲಿ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರು, ಭಾರತೀಯ ಸೇತುವೆ ನಿರ್ವಹಣಾ ವ್ಯವಸ್ಥೆಗೆ (ಐಬಿಎಂಎಸ್) ನವದೆಹಲಿಯಲ್ಲಿ ಚಾಲನೆ ನೀಡಿದ್ದರು. ದೇಶದಲ್ಲಿರುವ ಸೇತುವೆಗಳ ಡಾಟಾಬೇಸ್ ಅನ್ನು ರೂಪಿಸುವುದು, ಅವುಗಳ ರಚನೆಗೆ ಸಂಬಂಧಿಸಿದ ಸ್ಥಿತಿಗತಿ ದಾಖಲಿಸುವುದು ಮತ್ತು ಸಮಯಕ್ಕೆ ತಕ್ಕಂತೆ ಕ್ರಮ ವಹಿಸುವುದು ಐಬಿಎಂಎಸ್ ಕೆಲಸ ಎಂದು ಗಡ್ಕರಿ ಪ್ರತಿಪಾದಿಸಿದ್ದರು. ಆದರೆ, ಐಬಿಎಂಎಸ್ ಸಮರ್ಪಕ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅದರ ವೆಬ್‌ಸೈಟ್‌ನಲ್ಲಿ ಆರು ವರ್ಷಕ್ಕೂ ಹಿಂದಿನ ಸೇತುವೆಗಳ ಸ್ಥಿತಿ ಕುರಿತ ಮಾಹಿತಿ ಅಷ್ಟೇ ಲಭ್ಯವಿದೆ.
ಆಧಾರ: ಐಬಿಎಂಸ್ ವೆಬ್‌ಸೈಟ್, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.