ADVERTISEMENT

ಆಳ-ಅಗಲ| ಕ್ಯಾಸ್ಟ್ರೊ ತೆರೆಮರೆಗೆಕ್ಯೂಬಾಕ್ಕೆ ಹೊಸ ಯುಗ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST
ರಾಲ್‌ ಮತ್ತು ಫಿಡೆಲ್‌ ಕ್ಯಾಸ್ಟ್ರೊ
ರಾಲ್‌ ಮತ್ತು ಫಿಡೆಲ್‌ ಕ್ಯಾಸ್ಟ್ರೊ   

ಕ್ಯೂಬಾ ಮತ್ತು ಕ್ಯಾಸ್ಟ್ರೊ ಎರಡು ಬೇರೆ ಬೇರೆ ಅಲ್ಲ; ಸುಮಾರು 60 ವರ್ಷ ಕ್ಯೂಬಾ ದೇಶವನ್ನು ಕ್ಯಾಸ್ಟ್ರೊ ಕುಟುಂಬದ ಇಬ್ಬರು ಆಳಿದ್ದಾರೆ. ಈಗ, ಅಧಿಕಾರವು ಈ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರಿಗೆ ಹಸ್ತಾಂತರ ಆಗಲಿದೆ.

ಕ್ಯೂಬಾದ ನಿರಂಕುಶಾಧಿಕಾರಿ ಅಧ್ಯಕ್ಷ ಫುಲೆನ್ಸಿಯೊ ಬಟಿಸ್ಟಾ ಸರ್ಕಾರವನ್ನು ಫಿಡೆಲ್‌ ಕ್ಯಾಸ್ಟ್ರೊ ನೇತೃತ್ವದ ಕ್ರಾಂತಿಕಾರಿಗಳು ಸಶಸ್ತ್ರ ಕ್ರಾಂತಿಯ ಮೂಲಕ1959ರಲ್ಲಿ ಉರುಳಿಸಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ಫಿಡೆಲ್‌ ಮತ್ತು ಮುಂಚೂಣಿಯಲ್ಲಿದ್ದ ಫಿಡೆಲ್‌ ಸಹೋದರ ರಾಲ್‌ ಕ್ಯಾಸ್ಟ್ರೊ ಸಹಜವಾಗಿಯೇ ದೇಶದ ಅಧಿಕಾರ ಕೇಂದ್ರಕ್ಕೆ ಬಂದರು. ಸರ್ಕಾರ ಮತ್ತು ನಿಜವಾದ ಅಧಿಕಾರ ಕೇಂದ್ರವಾದ ಕ್ಯೂಬಾ ಕಮ್ಯುನಿಸ್ಟ್‌ ಪಕ್ಷದ ಮೇಲೆ ಕ್ಯಾಸ್ಟ್ರೊ ಸಹೋದರರ ಹಿಡಿತ ಇಷ್ಟೆಲ್ಲ ವರ್ಷಗಳಲ್ಲಿ ಒಂದಿನಿತೂ ಸಡಿಲವಾದದ್ದಿಲ್ಲ.

ದೇಶದಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಇದ್ದರೂ ಪಕ್ಷದ ಮುಖ್ಯಸ್ಥನ ಕೈಯಲ್ಲಿಯೇ ಅಧಿಕಾರವೆಲ್ಲವೂ ಕೇಂದ್ರೀಕೃತ. ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯೇ ಪಕ್ಷದ ಮುಖ್ಯಸ್ಥ. 1961ರ ಜುಲೈಯಲ್ಲಿ ಕ್ಯೂಬಾದ ಕ್ರಾಂತಿಕಾರಿ ಸಂಘಟನೆಯ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗಿ ಫಿಡೆಲ್‌ ಅಧಿಕಾರ ವಹಿಸಿಕೊಳ್ಳುತ್ತಾರೆ. ನಂತರ, ಈ ಪಕ್ಷವು ಯುನೈಟೆಡ್ ಪಾರ್ಟಿ ಫಾರ್‌ ಸೋಷಿಯಲಿಸ್ಟ್ ರೆವಲ್ಯೂಷನರಿ ಕ್ಯೂಬಾ ಎಂದು 1962ರಲ್ಲಿ ಹೆಸರು ಪಡೆದುಕೊಳ್ಳುತ್ತದೆ. ಮುಂದೆ 1965ರಲ್ಲಿ ಕ್ಯೂಬಾ ಕಮ್ಯುನಿಸ್ಟ್‌ ಪಕ್ಷವಾಗುತ್ತದೆ. ಉದ್ದಕ್ಕೂ ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿ ಆಗಿದ್ದದ್ದು ಫಿಡೆಲ್‌ ಕ್ಯಾಸ್ಟ್ರೊ. ದ್ವಿತೀಯ ಕಾರ್ಯದರ್ಶಿ ಆಗಿದ್ದದ್ದು ಅಣ್ಣನ ನೆರಳಿನಂತೆಯೇ ಇದ್ದ ರಾಲ್‌ ಕ್ಯಾಸ್ಟ್ರೊ.

ADVERTISEMENT

2006ರಲ್ಲಿ ಫಿಡೆಲ್‌ ಅನಾರೋಗ್ಯಕ್ಕೆ ಒಳಗಾದಾಗ ಅಧಿಕೃತವಾಗಿ ಆದರೆ ತಾತ್ಕಾಲಿಕವಾಗಿ ದೇಶದ ಚುಕ್ಕಾಣಿಯನ್ನು ರಾಲ್‌ಗೆ ವಹಿಸಿಕೊಡಲಾಯಿತು. 2008ರಲ್ಲಿ ಫಿಡೆಲ್‌ ಅವರು ದೇಶದ ಅಧ್ಯಕ್ಷ ಸ್ಥಾನವನ್ನೂ ರಾಲ್‌ಗೆ ನೀಡಿದರು. ಹೀಗೆ 47 ವರ್ಷ ಸೇನೆಯ ಮುಖ್ಯಸ್ಥನಾಗಿದ್ದ ಅತ್ಯಂತ ಪ್ರಭಾವಿ ವ್ಯಕ್ತಿಗೆ ದೇಶದ ಚುಕ್ಕಾಣಿ ದೊರೆಯಿತು. 2011ರಲ್ಲಿ ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗಿಯೂ ರಾಲ್‌ ನೇಮಕಗೊಂಡರು. 2016ರಲ್ಲಿ ಫಿಡೆಲ್‌ ಸಾವಿನೊಂದಿಗೆ ಪಕ್ಷ ಮತ್ತು ದೇಶದ ಪ‍್ರಶ್ನಾತೀತ ನಾಯಕರಾಗಿ ರಾಲ್ ಹೊರ ಹೊಮ್ಮಿದರು.

ದೇಶದ ಅಧ್ಯಕ್ಷ ಸ್ಥಾನವನ್ನುರಾಲ್‌ ಅವರು ಮಿಗೆಲ್‌ ಡಿಯಝ್‌‌ ಕನೆಲ್‌‌ಗೆ2018ರಲ್ಲಿಯೇ ವಹಿಸಿಕೊಟ್ಟಿದ್ದಾರೆ. ಈಗ, 89 ವರ್ಷದ ರಾಲ್‌ ಅವರು ಪಕ್ಷದ ಮುಖ್ಯಸ್ಥನ ಹುದ್ದೆಗೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದೇ 16ರಂದು ಆರಂಭವಾದ ಪಕ್ಷದ ಸಮಾವೇಶವು ಸೋಮವಾರ (ಏಪ್ರಿಲ್‌ 19) ಕೊನೆಗೊಳ್ಳಲಿದೆ. ಈ ಸಮಾವೇಶದಲ್ಲಿ ಹೊಸ ಪ್ರಥಮ ಕಾರ್ಯದರ್ಶಿ ಯಾರು ಎಂಬುದು ಘೋಷಣೆಯಾಗಲಿದೆ. ಕನೆಲ್‌ ಅವರಿಗೆ ಪಕ್ಷದ ಹೊಣೆಗಾರಿಕೆಯೂ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಲ್‌ ಅವರು ತಮ್ಮ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

1959ರ ಕ್ರಾಂತಿಯ ನೇರ ಅನುಭವ ಇಲ್ಲದ ಹೊಸ ತಲೆಮಾರು ದೇಶದಲ್ಲಿ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಆಳ್ವಿಕೆಯು ಕ್ಯಾಸ್ಟ್ರೊ ಕುಟುಂಬದಿಂದ ಹೊರಗಿನ ವ್ಯಕ್ತಿಯೊಬ್ಬರಿಗೆ ದೊರೆಯಲಿದೆ. ಕನೆಲ್‌ ಅವರು ಕೂಡ 1959ರ ಕ್ರಾಂತಿಯ ಬಳಿಕ ಜನಿಸಿದವರು ಎಂಬುದು ವಿಶೇಷ.

ಕಮ್ಯುನಿಸ್ಟ್ ಪಾರ್ಟಿ ಆಫ್ ಕ್ಯೂಬಾ

ಫಿಡೆಲ್ 1959ರಲ್ಲಿ ಅಧಿಕಾರಕ್ಕೆ ಬಂದರೂ, ದೇಶದಲ್ಲಿ ಕಮ್ಯುನಿಸ್ಟ್ ಆಳ್ವಿಕೆ ಇದೆ ಎಂದು ಘೋಷಣೆಯಾಗಿರಲಿಲ್ಲ. ಬಟಿಸ್ಟಾ ವಿರುದ್ಧದ ಚಳವಳಿಯಲ್ಲಿ ಜತೆಯಾಗಿದ್ದ ಹಲವು ಬಂಡುಕೋರ ಪಕ್ಷಗಳನ್ನು ಒಟ್ಟುಗೂಡಿಸಿ 1961ರಲ್ಲಿ ಕ್ಯಾಸ್ಟ್ರೊ ಒಕ್ಕೂಟವೊಂದನ್ನು ರಚಿಸಿದ್ದರು. ಈ ಒಕ್ಕೂಟದ ಸರ್ಕಾರದಲ್ಲಿ ಫಿಡೆಲ್ ಕ್ಯಾಸ್ಟ್ರೊ ಪ್ರಧಾನಿಯಾಗಿದ್ದರು. 60ರ ದಶಕದ ಮೊದಲ ದಿನಗಳಲ್ಲೇ ಕ್ಯೂಬಾದ ಎಲ್ಲಾ ಕೈಗಾರಿಕೆಗಳು, ಉದ್ದಿಮೆಗಳನ್ನು ರಾಷ್ಟ್ರೀಕರಣ ಮಾಡಿ ಫಿಡೆಲ್ ಆದೇಶ ಹೊರಡಿಸಿದರು. ಕ್ಯೂಬಾದಲ್ಲಿದ್ದ ಅಮೆರಿಕದ ಉದ್ದಿಮೆಗಳಿಗೆ ಯಾವುದೇ ಪರಿಹಾರ ನೀಡದೆ ರಾಷ್ಟ್ರೀಕರಣ ಮಾಡಲಾಯಿತು. ಇದರ ಪರಿಣಾಮವಾಗಿ ಅಮೆರಿಕವು ಕ್ಯೂಬಾ ಮೇಲೆ ದಿಗ್ಬಂಧನ ಹೇರಿತು. ಇದರಿಂದ ಕ್ಯೂಬಾದ ಆರ್ಥಿಕ ವ್ಯವಸ್ಥೆ ಕುಸಿದುಬಿತ್ತು. ಆಗ ಕ್ಯೂಬಾ ನೆರವಿಗೆ ಬಂದಿದ್ದೇ ಯುಎಸ್‌ಎಸ್ಆರ್‌. ಅದರ ಜತೆಯಲ್ಲೇ ಕಮ್ಯುನಿಸ್ಟ್‌ ಚಿಂತನೆಗಳೂ ಕ್ಯೂಬಾದಲ್ಲಿ ಮುನ್ನೆಲೆಗೆ ಬರಲು ಆರಂಭಿಸಿದವು. 1965ರಲ್ಲಿ ಕ್ಯಾಸ್ಟ್ರೊ ಅವರು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಕ್ಯೂಬಾ (ಪಿಸಿಸಿ) ಸ್ಥಾಪಿಸುವುದಾಗಿ ಘೋಷಿಸಿದರು. ತಾವು ಮಾರ್ಕ್ಸ್‌-ಲೆನಿನ್ ಅನುಯಾಯಿ ಎಂದು ಬಹಿರಂಗವಾಗಿ ಘೋಷಿಸಿದರು.

ಸರ್ವಾಧಿಕಾರಿಯ ಛಾಯೆ

ಸರ್ವಾಧಿಕಾರಿ ಬಟಿಸ್ಟಾ ಆಳ್ವಿಕೆಯನ್ನು ಕಿತ್ತೊಗೆದು ಅಧಿಕಾರಕ್ಕೆ ಬಂದ ಫಿಡೆಲ್ ಸಹ ಸರ್ವಾಧಿಕಾರಿಯಾಗಿ ಬದಲಾದರು ಎಂಬುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರು ದೇಶದ ಎಲ್ಲಾ ಉದ್ದಿಮೆಗಳನ್ನು ಏಕಪಕ್ಷೀಯವಾಗಿ ರಾಷ್ಟ್ರೀಕರಣ ಮಾಡಿದರು. ತಮ್ಮ ರಾಜಕೀಯ ಎದುರಾಳಿ ಬಟಿಸ್ಟಾ ಅವರ ಬೆಂಬಲಿಗರು ಮತ್ತು ಅನುಯಾಯಿಗಳಿಗೆ ಸೇರಿದ ಉದ್ದಿಮೆಗಳಿಗೆ ಯಾವುದೇ ಪರಿಹಾರ ನೀಡದೆ ರಾಷ್ಟ್ರೀಕರಣ ಮಾಡಿದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಅಧಿಕಾರಕ್ಕೆ ಬರುವ ಮುನ್ನ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಫಿಡೆಲ್ ಅವರು, ಅಧಿಕಾರಕ್ಕೆ ಬಂದ ನಂತರ ತಮ್ಮ ವರ್ತನೆಯನ್ನು ಬದಲಿಸಿಕೊಂಡರು. ಆಯ್ದ ಮಾಧ್ಯಮಗಳಿಗೆ ಮಾತ್ರವೇ ಅವರ ಪತ್ರಿಕಾಗೋಷ್ಠಿ, ಹೇಳಿಕೆಗಳು, ಸಂದರ್ಶನಗಳು ದೊರೆಯುತ್ತಿದ್ದವು. ಕಮ್ಯುನಿಸ್ಟ್ ಸಿದ್ಧಾಂತಕ್ಕಿಂತ ಭಿನ್ನ ಸಿದ್ಧಾಂತದ ಪತ್ರಿಕೆಗಳ ಮೇಲೆ ಕಠಿಣ ಸೆನ್ಸಾರ್‌ಶಿಪ್‌ ಹೇರಿದ್ದರು. ಹಲವು ದಶಕ ಈ ನಿರ್ಬಂಧ ಜಾರಿಯಲ್ಲಿತ್ತು.

ಪ್ರಧಾನಿಯಾಗಿದ್ದ ತಮ್ಮ ಹುದ್ದೆಯನ್ನು ಕ್ಯಾಸ್ಟ್ರೊ ಅವರು, ಅಧ್ಯಕ್ಷ ಎಂದು ಬದಲಿಸಿಕೊಂಡದ್ದರ ಹಿಂದೆ ಸರ್ವಾಧಿಕಾರಿ ಧೋರಣೆಯನ್ನು ಗುರುತಿಸಲಾಗಿದೆ. ಅಧಿಕಾರಕ್ಕೆ ಬಂದ ನಂತರದ ಹಲವು ದಶಕ ಪಕ್ಷದ ಕಾಂಗ್ರೆಸ್‌ ಸಭೆ ನಡೆಸಲು ಅವಕಾಶ ದೊರೆತಿರಲಿಲ್ಲ. ಪಕ್ಷದ ಪಾಲಿಟ್‌ಬ್ಯೂರೊ ಸಹ ವರ್ಷದಲ್ಲಿ ಎರಡು ಸಭೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ನೀತಿಗಳನ್ನು ಮತ್ತು ಪಕ್ಷದ ಸಿದ್ಧಾಂತಗಳನ್ನು ಉಲ್ಲಂಘಿಸಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಹೀಗಾಗಿ 1959, 1963, 1970 ಮತ್ತು 1992ರ ಸಮಯದಲ್ಲಿ ವಿವಿಧ ಬಿಕ್ಕಟ್ಟುಗಳು ತಲೆದೋರಿದಾಗಲೆಲ್ಲಾ ಲಕ್ಷಾಂತರ ಜನರು ದೇಶಬಿಟ್ಟು ಓಡಿಹೋದರು. ಕೊನೆಯ ಗಡಿಪಾರಿನಲ್ಲಿ ಸ್ವತಃ ಫಿಡೆಲ್ ಕ್ಯಾಸ್ಟ್ರೊ ಅವರ ಮಗಳು ಸಹ ಕ್ಯೂಬಾದಿಂದ ಓಡಿಹೋದರು.

ಆದರೆ ಇಂತಹ ಕಠಿಣ ನಿಲುವಿನ ಕಾರಣದಿಂದಲೇ ಅಮೆರಿಕವನ್ನು ಎದುರು ಹಾಕಿಕೊಂಡೂ, ಕ್ಯೂಬಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಯಿತು. ಬೆನ್ನೆಲುಬಾಗಿದ್ದ ಯುಎಸ್‌ಎಸ್‌ಆರ್ ಪತನದ ನಂತರವೂ, ಕ್ಯೂಬಾ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿತು ಎಂಬುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಈ ಎಲ್ಲಾ ಸಂಘರ್ಷಗಳ ನಡುವೆಯೂ ಕ್ಯೂಬಾದ ಆರೋಗ್ಯ ಸೇವಾ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಿಸುವಲ್ಲಿ ಫಿಡೆಲ್ ಮಹತ್ವದ ಪಾತ್ರ ವಹಿಸಿದ್ದಾರೆ.

ಸುಧಾರಣಾವಾದಿ ರಾಲ್‌

ಫಿಡೆಲ್‌ ಅವರ ಯಾವುದೇ ನಿಲುವು ಅಥವಾ ನಿರ್ಧಾರವನ್ನು ರಾಲ್ ಎಂದೂ ಪ್ರಶ್ನಿಸಿರಲಿಲ್ಲ. ಉಪಾಧ್ಯಕ್ಷನಾಗಿ ಅಧಿಕಾರದಲ್ಲಿ ಇದ್ದರೂ, ರಾಲ್ ಅವರು ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದು ಕಡಿಮೆ. ಅಧ್ಯಕ್ಷರಾದ ನಂತರವೂ ಅವರು ಮಾಧ್ಯಮಗಳಿಂದ ದೂರವೇ ಇದ್ದರು.

1961ರಲ್ಲಿ ಅಮೆರಿಕವು ಕ್ಯೂಬಾ ಮೇಲೆ ದಿಗ್ಬಂಧನ ಹೇರಿದಾಗ, ಅಮೆರಿಕದ ಬಣದಲ್ಲಿದ್ದ ಎಲ್ಲಾ ರಾಷ್ಟ್ರಗಳು ಅದನ್ನು ಪಾಲಿಸಿದವು. ಕ್ಯೂಬಾದ ಸಕ್ಕರೆ ರಫ್ತು ಬಹುತೇಕ ಸ್ಥಗಿತವಾಯಿತು. ಕಬ್ಬಿಣದ ಅದಿರು ಆಮದು ನಿಂತುಹೋಯಿತು. ಇದರಿಂದ ಕೈಗಾರಿಕೆಗಳು ಕುಸಿದುಬಿದ್ದವು. ಕ್ಯೂಬಾಗೆ ಕಚ್ಚಾತೈಲದ ಆಮದೂ ನಿಂತುಹೋಯಿತು. ದೇಶದಲ್ಲಿನ ತೈಲಬಾವಿಯನ್ನೇ ಕ್ಯೂಬಾ ಅವಲಂಬಿಸಿತು. ಕ್ಯೂಬಾದಲ್ಲಿ ರಷ್ಯಾ ತನ್ನ ಅಣುಕ್ಷಿಪಣಿ ತಂದಿರಿಸಿದಾಗ, ಮೂರನೇ ಮಹಾಯುದ್ಧ ನಡೆಯುವ ಭೀತಿಯೂ ಎದುರಾಗಿತ್ತು. 15 ದಿನಗಳ ಸಂಘರ್ಷದ ನಂತರ ಕ್ಯೂಬಾದಿಂದ ಕ್ಷಿಪಣಿಯನ್ನು ತೆರವು ಮಾಡಿಸುವಲ್ಲಿ ಅಮೆರಿಕ ಯಶಸ್ವಿಯಾಯಿತು. ಅಮೆರಿಕದ ಜತೆಗಿನ ಈ ಶತ್ರುತ್ವ 21ನೇ ಶತಮಾನದಲ್ಲಿ, ಕ್ಷೀಣಿಸುವಲ್ಲಿ ರಾಲ್ ಅವರ ಪಾತ್ರ ದೊಡ್ಡದಿದೆ.

ಆದರೆ ಫಿಡೆಲ್ ಅವರ ನಿಧನದ ನಂತರ, ಕ್ಯೂಬಾದ ವಿದೇಶಾಂಗ ನೀತಿಯನ್ನು ರಾಲ್‌ ಬದಲಿಸಿದರು. 50 ವರ್ಷ ಜಾರಿಯಲ್ಲಿದ್ದ ಅಮೆರಿಕದ ಆರ್ಥಿಕ ದಿಗ್ಬಂಧನವು ಸಡಿಲವಾಗುವುದರಲ್ಲಿ ರಾಲ್ ಅವರ ಕೊಡುಗೆ ದೊಡ್ಡದಿದೆ. 2016ರ ನಂತರ ಕ್ಯೂಬಾದಲ್ಲಿ ಅಮೆರಿಕವು ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಿತು. ಅಮೆರಿಕದ ಜತೆಗೆ ವ್ಯಾಪಾರ ವಹಿವಾಟು ಸಣ್ಣಮಟ್ಟದಲ್ಲಿ ಆರಂಭವಾಯಿತು. ಸಕ್ಕರೆ ರಫ್ತಿಗೆ ಕಮ್ಯುನಿಸ್ಟ್ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಯಿತು. ರಾಲ್ ಅವರು, ಆಸ್ತಿ ಮಾಲೀಕತ್ವ ನೀತಿಯಲ್ಲಿ ಬದಲಾವಣೆ ತಂದರು. ವಿದೇಶಿ ಕಂಪನಿಗಳು ಕ್ಯೂಬಾದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟರು. ಇದರಿಂದ ದೇಶದ ಆರ್ಥಿಕತೆ ಚೇತರಿಸಿಕೊಂಡಿತು.

ಆರ್ಥಿಕ ಚೇತರಿಕೆ ಅಮೆರಿಕದ ಮೇಲೆ ಅವಲಂಬಿತ

ಮಿಗೆಲ್‌ ಡಿಯೆಝ್‌ ಕನೆಲ್‌ ಕ್ಯೂಬಾದ ಹೊಸ ತಲೆಮಾರಿನ ನಾಯಕ. ಇಲ್ಲಿಯವರೆಗೂ ಕ್ಯಾಸ್ಟ್ರೊ ಸಹೋದರರು ನಿಭಾಯಿಸಿದ್ದ, ದೇಶದ ಅತ್ಯಂತ ಪ್ರಭಾವಿ ಹುದ್ದೆಗೆ ಅವರು ಆಯ್ಕೆಯಾಗಿದ್ದಾರೆ. ಆದರೆ, ಜಗತ್ತಿನ ಐದು ಕಮ್ಯುನಿಸ್ಟ್‌ ರಾಷ್ಟ್ರಗಳಲ್ಲಿ ಒಂದೆನಿಸಿರುವ ಕ್ಯೂಬಾ, ಹಿಂದಿನ ಇಬ್ಬರು ನಾಯಕರ ನೀತಿಗಳನ್ನೇ ಮುಂದುವರಿಸಲಿದಯೇ, ಬದಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಅದು ಸಾಧ್ಯವಾಗಬಹುದೇ ಎಂಬುದು ಪ್ರಶ್ನೆಯಾಗಿದೆ.

ಕನೆಲ್‌ ಅವರು ಕ್ಯಾಸ್ಟ್ರೊ ಸಹೋದರರಿಗಿಂತ ಭಿನ್ನ. ಸೂಟ್‌– ಟೈ ಧರಿಸುವ, ತಂತ್ರಜ್ಞಾನವನ್ನು ಪ್ರೀತಿಸುವ, ವಿದೇಶಿ ಸಂಗೀತ ಆಲಿಸುವ ಅವರು ನಿಜಾರ್ಥದಲ್ಲಿ ಹೊಸ ತಲೆಮಾರಿನ ನಾಯಕ. ಪಕ್ಷದ ಸಿದ್ಧಾಂತಕ್ಕೆ ನಿಷ್ಠರಾಗಿರುವುದರಿಂದ ಅವರ ನೀತಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಇರಲಿಕ್ಕಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ, ಅಮೆರಿಕದ ನೀತಿಗಳು ಹೇಗೆ ಬದಲಾಗುತ್ತವೆ ಎಂಬುದರ ಮೇಲೆ ಕ್ಯೂಬಾದ ಆರ್ಥಿಕ ಚೇತರಿಕೆ ಹಾಗೂ ಮುಂದಿನ ಕೆಲವು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ.

ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಮೆರಿಕ– ಕ್ಯೂಬಾ ನಡುವಿನ ಹಲವು ದಶಕಗಳ ವೈರತ್ವವನ್ನು ತಿಳಿಗೊಳಿಸುವ ಕೆಲಸ ಆರಂಭಿಸಿದ್ದರು. ಕ್ಯೂಬಾ ಮೇಲೆ ಅಮೆರಿಕ ಹೇರಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡುತ್ತಾ ಬಂದಿದ್ದರು. ಪರಿಣಾಮ ಕ್ಯೂಬಾದ ಪ್ರವಾಸೋದ್ಯಮ, ಹೊಟೇಲ್‌ ಉದ್ಯಮ ಬೆಳವಣಿಗೆ ಕಾಣಲಾರಂಭಿಸಿತು. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಂಡವು. ಹಣದ ವರ್ಗಾವಣೆಯ ನಿರ್ಬಂಧವನ್ನು ಸಡಿಲಿಸಿದ್ದರಿಂದ ಕ್ಯೂಬಾ ಮೂಲದ ಅಮೆರಿಕನ್ನರು ಬೇಕಾದಷ್ಟು ಹಣವನ್ನು ತಮ್ಮ ದೇಶಕ್ಕೆ ಕಳುಹಿಸಲು ಸಾಧ್ಯವಾಯಿತು. ಕ್ಯೂಬಾ– ಅಮೆರಿಕ ಮಧ್ಯೆ ಐದು ದಶಕಗಳ ನಂತರ ವಿಮಾನ ಹಾರಾಟ ಆರಂಭವಾಯಿತು.

ಆದರೆ, ಟ್ರಂಪ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ನಿರ್ಬಂಧಗಳನ್ನು ಹೇರಿದರು. ಹವಾನಾ ಬಿಟ್ಟರೆ ಬೇರೆ ನಗರಗಳಿಗೆ ಅಮೆರಿಕದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದರು, ವ್ಯಾಪಾರ ವಹಿವಾಟಿನ ಮೇಲೂ ನಿರ್ಬಂಧಗಳಾದವು. ಕ್ಯೂಬಾಗೆ ಹಣ ವರ್ಗಾವಣೆಯ ಮೇಲೆ ಮಿತಿ ಹೇರಲಾಯಿತು, ಪ್ರವಾಸಿಗರಿಗೂ ನಿಷೇಧ ಹೇರಲಾಯಿತು. ಅದರ ಜತೆಗೆ ಕಳೆದ ವರ್ಷ ಕೊರೊನಾ ಪಿಡುಗು ಆ ರಾಷ್ಟ್ರಕ್ಕೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ.

ಈಗ ಅಮೆರಿಕದ ಆಡಳಿತದಲ್ಲೂ ಬದಲಾವಣೆಯಾಗಿದೆ. ಕ್ಯೂಬಾ ವಿಚಾರದಲ್ಲಿ ಟ್ರಂಪ್‌ ನೀತಿಗಳನ್ನು ಬದಲಿಸಿ ಮತ್ತೆ ಒಬಾಮ ಕಾಲದ ನೀತಿಗೆ ಮರಳುವುದಾಗಿ ಜೋ ಬೈಡನ್‌ ಆಡಳಿತ ಹೇಳಿದೆ. ಅದು ಎಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂಬುದರ ಮೇಲೆ ಕ್ಯೂಬಾದ ಆರ್ಥಿಕತೆಯ ಚೇತರಿಕೆ ಅವಲಂಬಿಸಿದೆ.

ಆಧಾರ: ಎಎಫ್‌ಪಿ, ರಾಯಿಟರ್ಸ್‌, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.