ADVERTISEMENT

ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ

ಸುಕೃತ ಎಸ್.
Published 29 ನವೆಂಬರ್ 2023, 22:19 IST
Last Updated 29 ನವೆಂಬರ್ 2023, 22:19 IST
   

ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ಮೂಲ ಉದ್ದೇಶ. ಈ ಕಾಯ್ದೆಯು ಭ್ರೂಣದ ಲಿಂಗವನ್ನು ಪತ್ತೆ ಮಾಡುವುದು ಮತ್ತು ಆ ಮೂಲಕ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವಂತಹ ಅಪರಾಧಗಳನ್ನು ತಡೆಯುವ ಉದ್ದೇಶದ್ದಾಗಿದೆ. ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆಯೂ ಇದೆ. ಆದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ಜನಿಸಿದವರ ಲಿಂಗಾನುಪಾತವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿ ಈ ಸ್ವರೂಪದ ಲಿಂಗಾನುಪಾತವು 1000 ಗಂಡುಮಕ್ಕಳಿಗೆ 724 ಹೆಣ್ಣುಮಕ್ಕಳಷ್ಟಿದೆ. ಮಂಡ್ಯದ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ನಡೆಸುತ್ತಿದ್ದ ಕೃತ್ಯವು ಬೆಳಕಿಗೆ ಬಂದ ಮೇಲೆ, ಈ ಅಂಕಿ ಅಂಶಗಳು ಬೇರೆಯದೇ ಕತೆ ಹೇಳುತ್ತವೆ

‘ಹೆಣ್ಣು ಮಗು ಬೇಡ’ ಎಂದು ನಿರ್ಧಾರಕ್ಕೆ ಬರುವ ಪೋಷಕರು ಹೆಣ್ಣು ಭ್ರೂಣವನ್ನು ಹತ್ಯೆಗೈಯುವ ಕೃತ್ಯ ಎಸಗುತ್ತಿದ್ದಾರೆ. ಇದು ಕಾನೂನುಬಾಹಿರ ಎನ್ನುವ ‘ಪ್ರಜ್ಞೆ’ ಇದ್ದಾಗ್ಯೂ ಇಂತಹದ್ದೊಂದು ನಿರ್ಧಾರಕ್ಕೆ ಪೋಷಕರು ಬರುತ್ತಿದ್ದಾರೆ. 2019–20ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿ ಲಿಂಗಾನುಪಾತದ ಕುರಿತು ಇರುವ ಅಂಕಿ–ಅಂಶಗಳು ಕೆಲವು ಗಂಭೀರವಾದ ವಿಷಯಗಳನ್ನು ಮುಂದಿಡುತ್ತದೆ. 2015–16ರಲ್ಲಿ ಬಂದ ಇದೇ ವರದಿಯಲ್ಲಿ ಇದ್ದ ಅಂಕಿ–ಅಂಶಗಳಿಗೆ ಸೋಲಿಸಿಕೊಂಡರೆ, ಕರ್ನಾಟಕದ 16 ಜಿಲ್ಲೆಗಳಲ್ಲಿ ಲಿಂಗಾನುಪಾತದ ಅಂಕಿಗಳು ತೀರಾ ಕಳವಳಕಾರಿಯಾಗಿದೆ. ದಾವಣಗೆರೆ ಅಂಥ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಜನಿಸಿದವರ ಲಿಂಗಾನುಪಾತವು 2015–16ರ ವರದಿಯಲ್ಲಿ 1000ಕ್ಕೆ 1,029 ಇತ್ತು. ಇದೇ ಅನುಪಾತವು 2019–20 ವರದಿ ಬರುವ ಹೊತ್ತಿಗೆ 797ಕ್ಕೆ ಇಳಿದಿದೆ.

ಹೆಣ್ಣು ಭ್ರೂಣ ಹತ್ಯೆಯ ಕುರಿತ ರಾಜ್ಯದ ಜಿಲ್ಲೆಗಳ ವರದಿಗಳನ್ನು ಗಮನಿಸಿದಾಗ ಕೆಲವು ಪ್ರಮುಖ ಪ್ರಶ್ನೆಗಳು ಮೂಡುತ್ತವೆ. ನವಯುಗದ ಪೋಷಕರಲ್ಲೂ ‘ಹೆಣ್ಣು ಮಗು ಬೇಡ’ ಎನ್ನುವ ಮನಃಸ್ಥಿತಿ ಹೆಚ್ಚಾಗಿರುವುದು ಈ ಕೆಲವು ಪ್ರಶ್ನೆಗಳಲ್ಲಿ ಪ್ರಮುಖವಾದುದು. ಆಧುನಿಕ ಜಗತ್ತಿಗೆ ತೆರೆದುಕೊಂಡವರು, ಕೈಯಲ್ಲಿ ಮೊಬೈಲ್‌ ಇರುವವರು, ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚು ತಿಳಿದವರು, ಪೇಪರುಗಳಲ್ಲಿ ಸರ್ಕಾರ ಜಾಹೀರಾತು ನೋಡುವವರು, ಇರುವ ಕಾನೂನುಗಳ ಬಗ್ಗೆ ತಿಳಿದವರು... ಈ ಕಾಲಘಟ್ಟದಲ್ಲೂ ‘ಹೆಣ್ಣು ಮಗು ಬೇಡ’ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ ಎನ್ನುವುದು ಬಹಳ ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ಇಂಥದ್ದೇ ವಿಚಾರಗಳನ್ನು ಇಟ್ಟುಕೊಂಡು ವಿಶ್ವ ಸಂಸ್ಥೆ ಕೂಡ ವರದಿವೊಂದನ್ನು 2014ರಲ್ಲಿ ಪ್ರಕಟಿಸಿತ್ತು.

ADVERTISEMENT

‘ಗಂಡು ಬೇಕು ಎನ್ನುವ ಮನಃಸ್ಥಿತಿ ಈ ಹಿಂದಿಗಿಂತ ಭಾರತದಲ್ಲಿ ಈಗ ಕಡಿಮೆಯಾಗಿದೆ. ಆಧುನಿಕತೆ ಬಂದ ಕಾರಣದಿಂದಾಗಿ ಜನರು ಬದಲಾಗಿದ್ದಾರೆ. ಹೆಣ್ಣು–ಗಂಡು ಮಧ್ಯೆ ಇರಬೇಕಾದ ಸಮಾನತೆ ಕುರಿತು ಜನರು ಹೆಚ್ಚು ಎಚ್ಚರಗೊಂಡಿದ್ದಾರೆ ಎಂದೆಲ್ಲಾ ಸಮೀಕ್ಷೆಯ ಸಮಯದಲ್ಲಿ ಜನರು ಮಾತನಾಡಿದರು. ಆದರೆ, ಸಮೀಕ್ಷೆಯ ಅಂಕಿ–ಸಂಕಿಗಳು ಹೇಳುವ ಮಾತೇ ಬೇರೆ. ಈ ಎಲ್ಲಾ ‘ಮನಃಸ್ಥಿತಿ’ಯ ಸ್ಥಿತಿಯನ್ನು ಅಂಕಿಗಳು ವಿವರಿಸಿದ್ದವು’ ಎಂದು ವಿಶ್ವಸಂಸ್ಥೆ ತಮ್ಮ ವರದಿಯಲ್ಲಿ ಹೇಳಿತ್ತು.

‘ಇದೇ ವರದಿಯಲ್ಲಿ ಚರ್ಚಿಸಲಾದ ಮತ್ತೊಂದು ಅಂಶವೂ ತೀರ ಗಂಭೀರವಾದುದು. ಸಾಮಾಜಿಕ ಕಾರಣಗಳು ಜನರ ‘ಮನಃಸ್ಥಿತಿ’ಯ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹೆಣ್ಣಿನ ಮೇಲಾಗುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರಗಳು ಕೂಡ ‘ಹೆಣ್ಣು ಮಗು ಬೇಡ’ ಎನ್ನುವ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 70ರ ದಶಕದಲ್ಲಿ ದೇಶದಾದ್ಯಂತ ವರದಕ್ಷಿಣೆ ವಿರೋಧಿ ಚಳವಳಿಗಳು ಹುಟ್ಟಿಕೊಂಡವು. ಗಂಡನ ಮನೆಗಳಲ್ಲಿ ಸೊಸೆಯಂದಿರಿಗೆ ನೀಡಿದ ಕಿರುಕುಳದ ಸ್ವರೂಪವು ಪೋಷಕರನ್ನು ಆತಂತಕ್ಕೆ ದೂಡಿತ್ತು. ‘ಹೆಣ್ಣು ಮಗು ಬೇಡವೇ ಬೇಡ’ ಎನ್ನುವ ಮಟ್ಟಕ್ಕೆ ಜನರು ಕಂಗೆಟ್ಟರು’ ಎನ್ನುತ್ತದೆ ಆ ವರದಿ.

‘ಇದೇ ಸ್ಥಿತಿ ಈಗಲೂ ಇದೆ’ ಎನ್ನುತ್ತಾರೆ ಜ್ಯೋತಿ ಹಿಟ್ನಾಳ್. ಸದಾ ಜನಸಮುದಾಯದೊಂದಿಗೆ ಇರುವ ಇವರು, ಮಟ್ಟು, ಬಾಲ್ಯ ವಿವಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ, ಅಧ್ಯಯನ ನಡೆಸುವ ಕೆಲಸ ಮಾಡುತ್ತಿದ್ದಾರೆ. ‘ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮನೆಪಾಠಕ್ಕೆ ಕಳುಹಿಸಿದ ಹೆಣ್ಣು ಮಗುವಿನ ಮೇಲೆ ನಡೆದ ಅತ್ಯಾಚಾರದ ಘಟನೆಯು ಜನರ ಮನಸಿನ ಮೇಲೆ ಗಾಢ ಪರಿಣಾಮ ಬೀರಿದೆ. ಅಲ್ಲಿ ಎಂದಲ್ಲ, ಎಲ್ಲ ಕಡೆಯೂ ಇಂತದ್ದೊಂದು ಆಲೋಚನೆ ನವಯುಗದ ಪೋಷಕರನ್ನು ಕಾಡುತ್ತಿದೆ. ದಿನೇ ದಿನೇ ಶೋಷಣೆಯ, ಅತ್ಯಾಚಾರದ ಸುದ್ದಿಗಳನ್ನು ಜನರು ಓದುತ್ತಿದ್ದಾರೆ. ಹೆಣ್ಣು ಮಗುವಿನ ಜವಾಬ್ದಾರಿಯನ್ನು ಹೊರಲು ಯಾರೂ ಸಿದ್ಧರಿಲ್ಲ. ಇದು ನಿಜಕ್ಕೂ ಗಂಭೀರವಾದ ಸಮಸ್ಯೆ. ಈ ರೀತಿ ಯೋಜನೆ ಮಾಡುತ್ತಾರೆ ಎನ್ನುವುದೇ ಸಮಾಜಕ್ಕೆ ಅಪಾಯಕಾರಿಯಾದುದು’ ಎನ್ನುವ ಅಭಿಪ್ರಾಯ ಅವರದು.

‘ತನಗೆ ಯಾವ ಮಗು ಬೇಕು ಎನ್ನುವುದನ್ನು ನಿರ್ಧಾರ ಮಾಡುವುದು ಹೆಣ್ಣು ಅಲ್ಲ. ಬದಲಿಗೆ ಕುಟುಂಬ, ಗಂಡ. ಯುವಕರೂ ಇದನ್ನೇ ಹೇಳುತ್ತಾರೆ. ಮನೆಯನ್ನು ನಿಭಾಯಿಸುವುದು ನಾವು. ಅಂದಮೇಲೆ ಈ ನಿರ್ಧಾರವೂ ನಮ್ಮದೇ ಎನ್ನುತ್ತಾರೆ ಯುವಕರು. ಪದವಿ ಓದುವ ಯುವಕರೂ ಇದ್ದನ್ನೇ ಹೇಳುತ್ತಾರೆ. ಪೋಷಕರು ನವಯುಗದವರು ಸರಿ. ಆದರೆ, ಯಾವ ಮಗು ಬೇಕು ಎನ್ನುವ ನಿರ್ಧಾರವನ್ನು ಈಗಲೂ ಮನೆಯ ಹಿರಿಯರೇ ತೆಗೆದುಕೊಳ್ಳುತ್ತಾರೆ. ನಗರ ಪ್ರದೇಶದ ಸ್ಥಿತಿ ಸ್ವಲ್ಪ ಬದಲಾಗಿರಬಹುದು. ಆದರೆ, ಗ್ರಾಮೀಣ ಭಾಗದ ಸ್ಥಿತಿ ಬದಲಾಗಿಲ್ಲ’ ಎನ್ನುತ್ತಾರೆ ಅವರು.

‘ಮೋಕ್ಷದ ಪರಿಕಲ್ಪನೆ ಬದಲಾಗಬೇಕು’
‘ನಾವೀಗ ಸಮಾಜದಲ್ಲಿ ಬಿತ್ತುತ್ತಿರುವುದು ಜನವಿರೋಧಿ, ಸ್ತ್ರೀ ವಿರೋಧ ಮೌಲ್ಯಗಳನ್ನು. ಅದರ ಬದಲು ಮನುಷ್ಯಪರ, ಸ್ತ್ರೀ ಪರ ಮೌಲ್ಯಗಳನ್ನು ಬಿತ್ತಬೇಕಿತ್ತು. ಇಂದು ಹೀಗಾಗುತ್ತಿಲ್ಲ. ಹೆಣ್ಣು ಬೇಡ ಎನ್ನುವುದಕ್ಕೆ ಹಲವು ಸ್ಥರದ ಕಾರಣಗಳಿವೆ. ‘ಬೇಟಿ ಬಚಾವೊ ಬೇಟಿ ಪಡಾವೊ’ ಎಂದು ಹೇಳಿದರೆ ಸಾಲದು. ಅದರ ಜಾರಿ ಯಾವ ರೀತಿಯಲ್ಲಿದೆ ಎನ್ನುವುದೂ ಮುಖ್ಯವಾಗುತ್ತದೆ. ಎರಡನೆಯದು, ಸಮಾಜದ ಆಳದಲ್ಲಿ ಬೇರೂರಿರುವ ಪುರುಷ ಪ್ರಧಾನ ಮನಃಸ್ಥಿತಿ. ಮೂರನೆಯದು, ಮೋಕ್ಷ ಪ್ರಾಪ್ತಿ ಎನ್ನುವ ಪರಿಕಲ್ಪನೆ ಎಲ್ಲಾ ಧರ್ಮದಲ್ಲೂ, ಎಲ್ಲಾ ಸಮುದಾಯದಲ್ಲೂ ಇದೆ. ಶಿಕ್ಷಿತರಿದ್ದರೂ ಅಷ್ಟೇ, ಶಿಕ್ಷಣ ವಂಚಿತರಲ್ಲೂ ಅಷ್ಟೇ, ಈ ಮನಃಸ್ಥಿತಿ ಬೇರೂರಿ ಬೆಳೆದಿದೆ. ಇತ್ತೀಚಿನ ವರ್ಷಗಳಂತೂ ವಿಜ್ಞಾನವನ್ನು ಬೆಳೆಸುವ, ಪ್ರಚಾರ ಮಾಡುವ ಬದಲು, ಮೌಢ್ಯವನ್ನೇ ಬಿತ್ತುತ್ತಿದ್ದೇವೆ’ ಎನ್ನುವುದು ಸಾಮಾಜಿಕ ಕಾರ್ಯಕರ್ತೆ ಕೆ.ಎಸ್‌. ವಿಮಲಾ ಅವರು ಅಭಿಪ್ರಾಯ.

ಐದು ವರ್ಷದಲ್ಲಿ ಜನಿಸಿದವರ ಲಿಂಗಾನುಪಾತ

ಸಾಮಾನ್ಯವಾಗಿ ಲಿಂಗಾನುಪಾತವನ್ನು ಒಂದು ಪ್ರದೇಶದಲ್ಲಿ (ಅದು ಜಿಲ್ಲೆ/ರಾಜ್ಯ/ದೇಶ ಆಗಿರಬಹುದು) ಇರುವ ಒಟ್ಟು ಜನಸಂಖ್ಯೆಯಲ್ಲಿ ‍ಪುರುಷರ ಸಂಖ್ಯೆ ಎಷ್ಟು ಮತ್ತು ಮಹಿಳೆಯರ ಸಂಖ್ಯೆ ಎಷ್ಟು ಎಂಬುದರ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ. ಇದು ಆ ಪ್ರದೇಶದಲ್ಲಿ 1000 ಪುರುಷರಿಗೆ ಹೋಲಿಸಿದರೆ, ಎಷ್ಟು ಮಹಿಳೆಯರಿದ್ದಾರೆ ಎಂಬುದನ್ನು ಸ್ಥೂಲವಾಗಿ ಹೇಳುತ್ತದೆ. ಆದರೆ ಈಚಿನ ದಿನಗಳಲ್ಲಿ ಲಿಂಗಾನುಪಾತದ ಸ್ಥಿತಿಗತಿ ಏನು ಎಂಬುದನ್ನು ಇದು ವಿವರಿಸುವುದಿಲ್ಲ. ಇದಕ್ಕಾಗಿ ಸರ್ಕಾರವು ಕಂಡುಕೊಂಡ ವಿಧಾನವೇ ‘ಐದು ವರ್ಷದಲ್ಲಿ ಜನಿಸಿದವರ ಲಿಂಗಾನುಪಾತ’. 

ಐದು ವರ್ಷಗಳ ಅವಧಿಯಲ್ಲಿ ಜನಿಸಿದ ಒಟ್ಟು ಮಕ್ಕಳಲ್ಲಿ, ಗಂಡು ಮಕ್ಕಳೆಷ್ಟು ಮತ್ತು ಹೆಣ್ಣು ಮಕ್ಕಳೆಷ್ಟು ಎಂಬುದನ್ನು ಲೆಕ್ಕಹಾಕಿ ಈ ಲಿಂಗಾನುಪಾತವನ್ನು ನಿರ್ಧರಿಸಲಾಗುತ್ತದೆ. ಹೆಣ್ಣು ಶಿಶುಗಳ ಜನನ ಹೆಚ್ಚುತ್ತಿದೆಯೇ, ಹೆಣ್ಣು ಭ್ರೂಣಗಳ ಹತ್ಯೆ ನಿಂತಿದೆಯೇ ಎಂಬುದರತ್ತ ಈ ಲಿಂಗಾನುಪಾತವು ಬೊಟ್ಟುಮಾಡುತ್ತದೆ. ಹೀಗಾಗಿಯೇ ಈ ಲಿಂಗಾನುಪಾತವನ್ನು ವಾಸ್ತವಕ್ಕೆ ಹತ್ತಿರ ಎಂದು ಪರಿಗಣಿಸಲಾಗುತ್ತದೆ. ಈ ಲಿಂಗಾನುಪಾತದಲ್ಲಿ ಆಗುವ ಏರಿಳಿಕೆಯು, ಹೆಣ್ಣುಮಕ್ಕಳ ವಿಚಾರದಲ್ಲಿ ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಇದೇ ಮಾತು ಯಾವುದೇ ರಾಜ್ಯ ಅಥವಾ ಯಾವುದೇ ಜಿಲ್ಲೆಗೂ ಅನ್ವಯವಾಗುತ್ತದೆ.

ಸಾಮಾನ್ಯ ಲಿಂಗಾನುಪಾತಕ್ಕೂ, ಐದು ವರ್ಷದಲ್ಲಿ ಜನಿಸಿದವರ ಲಿಂಗಾನುಪಾತಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಭಾರತದ ಒಟ್ಟು ಜನಸಂಖ್ಯೆಯ ಲಿಂಗಾನುಪಾತವು 1000 ಪುರುಷರಿಗೆ:1020 ಮಹಿಳೆಯರಷ್ಟಿದೆ. ಇದನ್ನು ನೋಡಿದರೆ, ದೇಶದಲ್ಲಿನ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು ಎಂದು ಭಾಸವಾಗುತ್ತದೆ. ಆದರೆ 2016–2020ರ ಮಧ್ಯೆ ದೇಶದಲ್ಲಿ ಜನಿಸಿದವರ ಲಿಂಗಾನುಪಾತವು 1000 ಗಂಡುಮಕ್ಕಳಿಗೆ: 929 ಹೆಣ್ಣುಮಕ್ಕಳಷ್ಟಿದೆ. ದೇಶವು ಲಿಂಗಾನುಪಾತದಲ್ಲಿ ಇನ್ನೂ ಸಮಾನತೆ ಸಾಧಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಕರ್ನಾಟಕದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾನುಪಾತವು 1000 ಪುರುಷರಿಗೆ:1034 ಮಹಿಳೆಯರಷ್ಟಿದೆ. ಆದರೆ ರಾಜ್ಯದಲ್ಲಿ 2016–2020ರ ನಡುವಣ ಐದು ವರ್ಷಗಳಲ್ಲಿ ಜನಿಸಿದವರ ಲಿಂಗಾನುಪಾತವು 1000 ಗಂಡುಮಕ್ಕಳಿಗೆ: 978 ಹೆಣ್ಣುಮಕ್ಕಳಷ್ಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಲಿಂಗಾನುಪಾತವು ಕಡಿಮೆಯೇ ಇದೆ.

ಆದರೆ, 16 ಜಿಲ್ಲೆಗಳಲ್ಲಿ 2011–2015ರ ಮಧ್ಯೆ ಜನಿಸಿದವರ ಲಿಂಗಾನುಪಾತಕ್ಕೆ ಹೋಲಿಸಿದರೆ, 2016–2020ರ ನಡುವಣ ಐದು ವರ್ಷಗಳಲ್ಲಿ ಜನಿಸಿದವರ ಲಿಂಗಾನುಪಾತವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಅಂತಹ ಜಿಲ್ಲೆಗಳಲ್ಲಿನ ಐದು ವರ್ಷದಲ್ಲಿ ಜನಿಸಿದವರ ಲಿಂಗಾನುಪಾತವು ಈ ರೀತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.