ADVERTISEMENT

ಅನುಭವ ಮಂಟಪ | ಬೊಮ್ಮಾಯಿ ಸರ್ಕಾರದ ತೀರ್ಮಾನ ಜಾರಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 23:18 IST
Last Updated 14 ಅಕ್ಟೋಬರ್ 2024, 23:18 IST
ಸಿಮೆಂಟ್ ಮಂಜು
ಸಿಮೆಂಟ್ ಮಂಜು   

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಅತ್ಯಂತ ಸಮರ್ಪಕವಾದ ನಿರ್ಣಯ ಕೈಗೊಂಡಿತ್ತು. ಈಗಿನ ರಾಜ್ಯ ಸರ್ಕಾರವೂ ಅದನ್ನೇ ಯಥಾವತ್ತಾಗಿ ಜಾರಿ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಮತ್ತು ಪಕ್ಷದ ನಿಲುವೂ ಆಗಿದೆ. ನಮ್ಮ ಸರ್ಕಾರವು ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಅಳೆದು ತೂಗಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ. ಇದಕ್ಕಿಂತ ಉತ್ತಮ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮಾಡುವುದಕ್ಕೆ ಸಾಧ್ಯವಿಲ್ಲ.

ಪರಿಶಿಷ್ಟ ಜಾತಿಯ ಎಡಗೈ ಗುಂಪಿಗೆ ಶೇ 6, ಬಲಗೈ ಗುಂಪಿಗೆ ಶೇ 5.5, ಲಂಬಾಣಿ, ಕೊರಮ, ಕೊರಚ, ಭೋವಿಗಳಿಗೆ ಶೇ 4.5, ಈ ಮೇಲಿನ ಗುಂಪಿಗೆ ಸೇರದ ಜಾತಿಗಳಿಗೆ ಶೇ 1 ಸೇರಿದಂತೆ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ ‘2ಬಿ’ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಮಿಸಲಾತಿಯನ್ನು ರದ್ದು ಮಾಡಿ, ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಮುಸ್ಲಿಮರಿಗೆ ನೀಡುತ್ತಿದ್ದ ಶೇ 4ರಷ್ಟು ಮೀಸಲಾತಿಯನ್ನು ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಹಲವು ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ, ಪ್ರವರ್ಗ 1ಕ್ಕೆ ಶೇ 4, ಪ್ರವರ್ಗ 2ಎಗೆ ಶೇ 15, ಪ್ರವರ್ಗ ಶೇ 2ಸಿಗೆ 6, ಪ್ರವರ್ಗ 2 ಡಿಗೆ ಶೇ 7 ಒಟ್ಟು ಶೇ 32 ರಷ್ಟು ಮೀಸಲಾತಿ ಮರು ಹಂಚಿಕೆ ಮಾಡಲಾಗಿದೆ.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸಿನ ಬದಲಿಗೆ, 2011ರ ಜನಗಣತಿಗೆ ಅನುಗುಣವಾಗಿ ಅಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಮಾಡಿದ್ದ ಮೀಸಲಾತಿಯ ಮರುಹಂಚಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡಿತ್ತು. ಸರ್ಕಾರ ಬದಲಾದ ಕಾರಣ ಅದು ಜಾರಿ ಆಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಜಾರಿ ಮಾಡಬೇಕು ಎಂಬುದೇ ನಮ್ಮ ಆಗ್ರಹ.

ADVERTISEMENT

ಲೇಖಕ: ಬಿಜೆಪಿ ರಾಜ್ಯ ಘಟಕದ ಎಸ್‌ಸಿ ಮೋರ್ಚಾ ಅಧ್ಯಕ್ಷ ಮತ್ತು ಶಾಸಕ

‘ಜನಾಂದೋಲನ ರೂಪಿಸುತ್ತೇವೆ’ ಒಳ ಮೀಸಲಾತಿ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಪಕ್ಷದಲ್ಲಿ ಎಲ್ಲ ನಾಯಕರ ಸಹಮತ ಇದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳು ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಹಿಂದುಳಿದವರಿಗೆ ನ್ಯಾಯೋಚಿತವಾಗಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ನೀಡಿದ ಶಿಫಾರಸನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಈ ವಿಷಯದ ಕುರಿತಾಗಿ ರಾಜ್ಯವ್ಯಾಪಿ ಜನರಲ್ಲಿ ಅರಿವು ಮೂಡಿಸುವ ಜನಾಂದೋಲನ ರೂಪಿಸುತ್ತೇವೆ. ಅದಕ್ಕೂ ಮುನ್ನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಮ್ಮ ಸರ್ಕಾರದ ನಿರ್ಧಾರವನ್ನು ಜಾರಿ ಮಾಡುವಂತೆ ಆಗ್ರಹಿಸುತ್ತೇವೆ.
–ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.