ಜನ ಸಾಮಾನ್ಯರಿಗಾಗಿ ರೂಪಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಗಾತ್ರ, ವ್ಯಾಪ್ತಿಗಳನ್ನು ನಿಗದಿ ಮಾಡಲು ಜನಗಣತಿಯ ವರದಿ ಮತ್ತು ದತ್ತಾಂಶಗಳು ಅತ್ಯಂತ ಮಹತ್ವದ ಆಧಾರಗಳಾಗಿವೆ.ದೇಶದಲ್ಲಿ ಈಗ ಜಾರಿಯಲ್ಲಿರುವ ಬಹುತೇಕ ಕಲ್ಯಾಣ ಕಾರ್ಯಕ್ರಮಗಳ ಗಾತ್ರ ಮತ್ತು ವ್ಯಾಪ್ತಿಯನ್ನು 2011ರ ಜನಗಣತಿ ವರದಿ ಆಧಾರದಲ್ಲಿ ನಿಗದಿ ಮಾಡಲಾಗಿದೆ. ಆದರೆ ಇದು 11 ವರ್ಷಕ್ಕಿಂತಲೂ ಹಳೆಯ ದತ್ತಾಂಶ. ಈ ಮಧ್ಯೆ ದೇಶದ ಜನಸಂಖ್ಯೆಯು ಹಲವು ಕೋಟಿಗಳಷ್ಟು ಏರಿಕೆಯಾಗಿದೆ.2021ರಲ್ಲಿ ಜನಗಣತಿ ನಡೆದಿಲ್ಲ. ಹೀಗಾಗಿ ದೇಶದ ಕೋಟ್ಯಂತರ ಜನರು ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದಾರೆ.
ಮೂಲ ಯೋಜನೆಯ ಪ್ರಕಾರ, 2020 ಏಪ್ರಿಲ್‌ನಿಂದ 2021ರ ಮೊದಲ ಭಾಗದಲ್ಲಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು.ಮೊದಲ ಹಂತದಲ್ಲಿ ಕೌಂಟುಬಿಕ ವಿವರಗಳು, ಮೂಲಸೌಕರ್ಯಗಳು ಮತ್ತು ಕುಟುಂಬಗಳು ಹೊಂದಿರುವ ಸ್ವತ್ತುಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿಸಬೇಕಿತ್ತು. ಎರಡನೇ ಹಂತದಲ್ಲಿ ಜನಸಂಖ್ಯೆ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ಜನಸಂಖ್ಯೆ, ಭಾಷೆ, ಸಾಕ್ಷರತೆ ಮತ್ತು ಆರ್ಥಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕಿತ್ತು. ಆದರೆ 2020ರಲ್ಲಿ ದೇಶಕ್ಕೆ ಕೋವಿಡ್ ಕಾಲಿಟ್ಟ ಕಾರಣ, ಜನಗಣತಿಯನ್ನು ಮುಂದೂಡಲಾಯಿತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದರೂ ಕೇಂದ್ರ ಸರ್ಕಾರವು ಜನಗಣತಿ ನಡೆಸುವ ಬಗ್ಗೆ ಯಾವುದೇ ಸಿದ್ಧತೆ ನಡೆಸಿಲ್ಲ.
ಜನಗಣತಿ ನಡೆಸದೇ ಇರುವುದರ ಬಗ್ಗೆ, ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಗೃಹ ಸಚಿವಾಲಯವನ್ನು 2021ರಲ್ಲೇ ಪ್ರಶ್ನಿಸಿತ್ತು. ಈ ಬಗ್ಗೆ 2021ರ ಮಾರ್ಚ್‌ನಲ್ಲಿ ಗೃಹ ಸಚಿವಾಲಯವು, ಸಮಿತಿಗೆ ಉತ್ತರ ನೀಡಿತ್ತು.
‘ಜನಗಣತಿ ನಡೆಸಲು ಕಾಲಮಿತಿ ಹಾಕಿಕೊಂಡಿದ್ದೇವೆ. ಒಂದನೇ ಹಂತದ ಜನಗಣತಿಯನ್ನು 2022–23ನೇ ಸಾಲಿನಲ್ಲಿ ಮತ್ತು ಎರಡನೇ ಹಂತದ ಜನಗಣತಿಯನ್ನು 2023–24ನೇ ಸಾಲಿನಲ್ಲಿ ನಡೆಸಲಾಗುತ್ತದೆ. ಮೊದಲ ಹಂತದ ಜನಗಣತಿಯ ಜತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನೂ ಪರಿಷ್ಕರಿಸಲಾಗುವುದು. ಈ ಜನಗಣತಿಗೆ ಸಂಬಂಧಿಸಿದ ಮೊದಲ ಅಂದಾಜು ವರದಿಯನ್ನು 2023–24ರಲ್ಲೇ ನೀಡುವುದಾಗಿ ಮತ್ತು ಪೂರ್ಣ ವರದಿ ಹಾಗೂ ದತ್ತಾಂಶಗಳನ್ನು 2024–25ನೇ ಸಾಲಿನಲ್ಲಿ ನೀಡುವುದಾಗಿ’ ಸಚಿವಾಲಯ ಹೇಳಿತ್ತು. ಜನಗಣತಿ ಕಾರ್ಯಗಳಿಗಾಗಿ ₹8,754.23 ಕೋಟಿ ಮತ್ತು ಎನ್‌ಪಿಆರ್‌ಗಾಗಿ₹3,941.35 ಕೋಟಿ ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು.
ಸಂಸತ್ತಿನ ಸ್ಥಾಯಿ ಸಮಿತಿಗೆ ಗೃಹ ಸಚಿವಾಲಯವು ಈ ಮಾಹಿತಿ ನೀಡಿ 15 ತಿಂಗಳು ಕಳೆದಿವೆ. ಆದರೆ, ಜನಗಣತಿಗೆ ಸಂಬಂಧಿಸಿದ ಒಂದು ಚಟುವಟಿಕೆಯೂ ಆರಂಭವಾಗಿಲ್ಲ. ಜನಗಣತಿ ಯಾವಾಗ ನಡೆಯುತ್ತದೆ ಎಂಬುದರ ಸುಳಿವೂ ಇಲ್ಲ.
ಕ್ಷೇತ್ರ ಮರುವಿಂಗಡಣೆ
ಜನಗಣತಿಯ ದತ್ತಾಂಶಗಳ ಆಧಾರದ ಮೇಲೆ ದೇಶದ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಪರಿಪಾಟವಿದೆ. ಆದರೆ, ಇತ್ತೀಚಿನ ಜನಗಣತಿಯ ಮಾಹಿತಿ ಇಲ್ಲದೆಯೇ ಕೇಂದ್ರ ಸರ್ಕಾರವು ಕೆಲವೆಡೆ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದೆ.
ಜಮ್ಮು–ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಲೆಫ್ಟಿನೆಂಟ್ ಗವರ್ನರ್ ಆಡಳಿತ ಜಾರಿಯಲ್ಲಿದೆ. ಅಲ್ಲಿ ಮತ್ತೆ ಚುನಾಯಿತ ಸರ್ಕಾರವನ್ನು ಸ್ಥಾಪಿಸಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ. ಕ್ಷೇತ್ರಗಳ ಮರುವಿಂಗಡಣೆ ಮಾಡಿ, ಆನಂತರ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ಆದರೆ, ಕ್ಷೇತ್ರಗಳನ್ನು ಮರುವಿಂಗಡಿಸಲು ಸರ್ಕಾರದ ಬಳಿ ಇತ್ತೀಚಿನ ಜನಗಣತಿಯ ವರದಿಯೇ ಇಲ್ಲ. 11 ವರ್ಷಗಳಷ್ಟು ಹಳೆಯದಾದ ದತ್ತಾಂಶಗಳನ್ನು ಆಧಾರವಾಗಿ ಇಟ್ಟುಕೊಂಡು, ಜಮ್ಮು–ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
130+ ವರ್ಷಗಳ ಇತಿಹಾಸ
ಭಾರತದ ಜನಗಣತಿಗೆ 130 ವರ್ಷಕ್ಕಿಂತಲೂ ದೀರ್ಘಾವಧಿಯ ಇತಿಹಾಸವಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ 1872ರಲ್ಲಿ ಮೊದಲ ಬಾರಿಗೆ ಜನಗಣತಿ ನಡೆಸಲಾಗಿತ್ತು. ಮೊದಲ ಜನಗಣತಿಯನ್ನು ಸ್ವಾತಂತ್ರ್ಯಪೂರ್ವ ಭಾರತದ ಎಲ್ಲೆಡೆ ಏಕಕಾಲದಲ್ಲಿ ನಡೆಸಿರಲಿಲ್ಲ. ಆದರೆ, ನಂತರದ ವರ್ಷಗಳಲ್ಲಿ ಜನಗಣತಿಗೆ ಒಂದು ವ್ಯವಸ್ಥಿತ ರೂಪ ನೀಡಲಾಯಿತು.
*ಭಾರತದ ಜನಗಣಿತಯ ವರದಿಗಳು ದೇಶದ ಜನ, ಜನರ ಕೌಟುಂಬಿಕ–ಶೈಕ್ಷಣಿಕ ಮತ್ತು ಆರ್ಥಿಕ ವಿವರಗಳನ್ನು ಹೊಂದಿರುವ ಅತ್ಯಂತ ದೊಡ್ಡ ದಾಖಲಾತಿಯಾಗಿದೆ
*1881ರಿಂದ 1941ರವರೆಗೆ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸಲಾಗಿದೆ. ಈ ಅವಧಿಯಲ್ಲಿ ಒಟ್ಟು ಏಳು ಬ್ರಿಟಿಷ್ ಅಧಿಕಾರಿಗಳು ಜನಗಣತಿ ಆಯುಕ್ತರಾಗಿ, ಜನಗಣತಿಯನ್ನು ನಡೆಸಿದ್ದಾರೆ
*ಸ್ವಾತಂತ್ರ್ಯಾನಂತರ ಮೊದಲ ಜನಗಣತಿ ನಡೆಸಿದ್ದು 1951ರಲ್ಲಿ. ಆದರೆ ಅದಕ್ಕಾಗಿ 1947ರಿಂದಲೇ ಸಿದ್ಧತೆ ನಡೆದಿತ್ತು. 1948ರಲ್ಲಿ ಜನಗಣತಿ ಕಾಯ್ದೆಯನ್ನು ಜಾರಿಗೆ ತರಲಾಯಿತು
*1949ರಲ್ಲಿ ಭಾರತದ ಜನಗಣತಿ ಪ್ರಧಾನ ರಿಜಿಸ್ಟ್ರಾರ್ ಮತ್ತು ಆಯುಕ್ತರು ಎಂಬ ಹುದ್ದೆಯನ್ನು ಸೃಷ್ಟಿಸಲಾಯಿತು.ಜನಗಣತಿ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಭಾರತೀಯ ಜನಗಣತಿ ಸಂಘಟನೆಯನ್ನು ರಚಿಸಲಾಯಿತು
ಪಡಿತರ ವ್ಯವಸ್ಥೆಯಿಂದ ಹೊರಗಿರುವ ಅರ್ಹರು
2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಒಟ್ಟು ಶೇ 67ರಷ್ಟು ಜನರು ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. ಅಂದರೆ, 2011ರ ಜನಗಣತಿ ಪ್ರಕಾರ 121 ಕೋಟಿ ಜನರ ಪೈಕಿ ಸುಮಾರು 80 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. 2011ರ ಜನಗಣತಿಯ ಬಳಿಕ, ಈ 10 ವರ್ಷಗಳಲ್ಲಿ ದೇಶದ ಜನಸಂಖ್ಯೆ ಏರಿಕೆಯಾಗಿದೆ. 2021ರ ಜನಗಣತಿ ನಡೆದಿದ್ದರೆ, ಕೆಲವು ಕೋಟಿ ಜನರು ಈ ಯೋಜನೆ ವ್ಯಾಪ್ತಿಗೆ ಬರುತ್ತಿದ್ದರು. ಜನಗಣತಿ ವಿಳಂಬವಾಗಿರುವುದರಿಂದ, ಹತ್ತಾರು ಕೋಟಿ ಜನರು ಸರ್ಕಾರದ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ.
ಜನಸಂಖ್ಯೆ ಬೆಳವಣಿಗೆ ದರದ ಆಧಾರದ ಮೇಲೆ ಅಂದಾಜು ಜನಸಂಖ್ಯೆ ಲೆಕ್ಕಹಾಕಿದರೆ, 2020ರಲ್ಲಿ ಸುಮಾರು 137 ಕೋಟಿ ಜನ ಇದ್ದರು ಎನ್ನಬಹುದು.ಇದರ ಆಧಾರದಲ್ಲಿ ಲೆಕ್ಕ ಹಾಕಿದರೆ ಯೋಜನೆ ವ್ಯಾಪ್ತಿಯು 92 ಕೋಟಿ ಜನರಿಗೆ ವಿಸ್ತರಣೆಯಾಗಬೇಕಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ಇದರರ್ಥ, ಜನಗಣತಿ ವಿಳಂಬವಾಗಿರುವುದರಿಂದ ಅಂದಾಜು 10 ಕೋಟಿಗೂ ಹೆಚ್ಚು ಜನರು ಸರ್ಕಾರದ ಸಬ್ಸಿಡಿ ಆಹಾರದಿಂದ ವಂಚಿತರಾಗಿದ್ದಾರೆ. ಸರ್ಕಾರವು ಅಂದಾಜು ಜನಸಂಖ್ಯೆಯನ್ನು ಲೆಕ್ಕಹಾಕಿ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು ಎಂದು ಸಲಹೆ ನೀಡುವ ಆರ್ಥಿಕ ತಜ್ಞರು, ಒಂದೊಮ್ಮೆ ಜನಗಣತಿ ದತ್ತಾಂಶ ಲಭ್ಯವಾದ ಬಳಿಕ, ಅಂದಾಜು ಪರಿಷ್ಕರಿಸಬಹುದು ಎನ್ನುತ್ತಾರೆ. ಕಡೆಪಕ್ಷ, ರಾಜ್ಯಗಳ ಹೆಚ್ಚುವರಿ ಆಹಾರಧಾನ್ಯ ಪೂರೈಕೆ ಬೇಡಿಕೆಯನ್ನಾದರೂ ಸರ್ಕಾರ ಈಡೇರಿಸಬೇಕು ಎಂಬ ಸಲಹೆ ನೀಡಿದ್ದಾರೆ. ಆದರೆ, ಹೊಸ ಜನಗಣತಿ ದತ್ತಾಂಶಗಳು ಲಭ್ಯವಾಗುವವರೆಗೆ ಪರಿಷ್ಕರಣೆಯನ್ನು ಪರಿಗಣಿಸುವುದಿಲ್ಲ ಎಂದು ಆಹಾರ ಕಾರ್ಯದರ್ಶಿ ಇತ್ತೀಚೆಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ವಲಸೆಯ ಲೆಕ್ಕ ಎಲ್ಲಿ?
ಕೋವಿಡ್ ಮೊದಲ ಅಲೆಯಲ್ಲಿ ಹೇರಲಾದ ಲಾಕ್‌ಡೌನ್ ಪರಿಣಾಮದಿಂದ ಸಾವಿರಾರು ಕಾರ್ಮಿಕರು ನಗರಗಳನ್ನು ತೊರೆದು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಂಚರಿಸಿ ತಮ್ಮ ಊರುಗಳನ್ನು ಮುಟ್ಟಿಕೊಂಡರು. ಎಷ್ಟೋ ಜನರು ಮಾರ್ಗಮಧ್ಯೆ ಪ್ರಾಣಕಳೆದುಕೊಂಡರು. ಈ ವಿದ್ಯಮಾನವು ದೇಶದ ವಲಸೆ ಕಾರ್ಮಿಕರ ಪಾಡನ್ನು ತೆರೆದಿಟ್ಟಿತು. ವಲಸೆ ಕಾರ್ಮಿಕರ ಸಂಖ್ಯೆ, ಕಾರಣಗಳು ಹಾಗೂ ವಲಸೆಯ ಸ್ವರೂಪವನ್ನು ವಿಶ್ಲೇಷಣೆ ಮಾಡಲು ದಶಕದಷ್ಟು ಹಳತಾಗಿರುವ ಜಣಗಣತಿ ದತ್ತಾಂಶಗಳು ನೆರವಿಗೆ ಬರುವುದಿಲ್ಲ. ಎಷ್ಟು ಸಂಖ್ಯೆಯ ಕಾರ್ಮಿಕರು ಯಾವ ಯಾವ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸರ್ಕಾರದ ಬಳಿಯೂ ಇರಲಿಲ್ಲ.
ಕಾರ್ಮಿಕರ ಮೂಲ ರಾಜ್ಯ, ಅವರು ಕೆಲಸ ಮಾಡಲು ತೆರಳುವ ಸ್ಥಳ, ವಲಸೆಗೆ ಕಾರಣ ಮೊದಲಾದ ಸಮಗ್ರ ಮಾಹಿತಿಯನ್ನು ಜನಗಣತಿ ದಾಖಲೆಗಳು ಒದಗಿಸುತ್ತವೆ. ಈ ದತ್ತಾಂಶಗಳು ಲಭ್ಯವಿದ್ದರೆ, ಒಂದು ದಶಕದ ಅವಧಿಯ ಕಾರ್ಮಿಕರ ವಲಸೆಯ ಸ್ಥಿತಿಗತಿಯನ್ನು ಅರಿತುಕೊಂಡು, ಅದಕ್ಕೆ ಪರಿಹಾರವನ್ನು ಹುಡುಕುವುದು ಸುಲಭವಾಗುತ್ತದೆ ಎನ್ನುತ್ತಾರೆ ತಜ್ಞರು. ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಿಂದ ಜನರ ವಲಸೆಯ ಪ್ರಮಾಣ ಎಷ್ಟಿದೆ, ಅವರು ಉದ್ಯೋಗ ಕಂಡುಕೊಳ್ಳುವ ಮೆಟ್ರೊಪಾಲಿಟನ್ ನಗರಗಳಲ್ಲಿ ಅವರಿಗೆ ಆರೋಗ್ಯ ಹಾಗೂ ಸಾಮಾಜಿಕ ಸೇವೆ ಕಲ್ಪಿಸಲು ಈ ದತ್ತಾಂಶಗಳು ನೆರವಾಗುತ್ತವೆ. ನಗರಗಳಿಗೆ ಜನರ ವಲಸೆಯನ್ನು ತಡೆಗಟ್ಟಿ, ಅವರ ಊರುಗಳಲ್ಲೇ ನರೇಗಾ ಮೊದಲಾದ ಯೋಜನೆಗಳಿಂದ ಉದ್ಯೋಗ ಲಭಿಸುವಂತೆ ಯತ್ನಿಸಲೂ ಜನಗಣತಿ ಅಂಶಗಳು ಸಹಕಾರಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಡವರ ಪಿಂಚಣಿಗೂ ಸಮಸ್ಯೆ
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಗಳ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಿಧವೆಯರು, ದುರ್ಬಲರು ಹಾಗೂ ವಯಸ್ಸಾದ ಸುಮಾರು 3.09 ಕೋಟಿ ಜನರಿಗೆ ಪಿಂಚಣಿ ನೀಡಲಾಗುತ್ತಿದೆ. ಇಲ್ಲೂ ಜನಗಣತಿದತ್ತಾಂಶಗಳೇ ಆಧಾರ. ಈಗಿನ ಅಂದಾಜಿನ ಪ್ರಕಾರ, ಪಿಂಚಣಿಗೆ ಅರ್ಹತೆ ಇರುವವರ ಸಂಖ್ಯೆ ಸುಮಾರು 6 ಕೋಟಿಗೆ ಏರಿಕೆಯಾಗಿರಬಹುದು. 2011ರ ಬಳಿಕ ಈ ಯೋಜನೆಗಳ ವ್ಯಾಪ್ತಿಗೆ ಬಂದಿರುವ ಹೆಚ್ಚುವರಿ ಫಲಾನುಭವಿಗಳು ಹೊಸ ಜನಗಣತಿವರೆಗೂ ಕಾಯಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು 2011ರ ಸಾಮಾಜಿಕ–ಆರ್ಥಿಕ–ಜಾತಿ ಗಣತಿಯ ಆಧಾರದ ಮೇಲೆ ಫಲಾನುಭವಿಗಳನ್ನು ನಿರ್ಧರಿಸುತ್ತವೆ. ಈ ಗಣತಿ ಸಹ ದಶಕದಷ್ಟು ಹಳೆಯದು. ಉದಾಹರಣೆಗೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ, ಗರ್ಭಿಣಿಯರು ಸಮೀಪದ ಅಂಗನವಾಡಿಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಸಮಸ್ಯೆ ಎಂದರೆ, ಸಂಭಾವ್ಯ ಫಲಾನುಭವಿಗಳ ಸಂಖ್ಯೆ ಎಷ್ಟಿರಬಹುದು ಎಂಬ ಅಂದಾಜು ಸಹ ರಾಜ್ಯಗಳಿಗೆ ಇಲ್ಲವಾಗಿದೆ. ಕೆಲವು ರಾಜ್ಯಗಳು ಈ ಯೋಜನೆಯಡಿ ಹಣಕಾಸು ನೆರವು ನೀಡಲು ಪ್ರತಿ ಅಂಗನವಾಡಿಗಳಿಗೆ ಇಂತಿಷ್ಟು ಸಂಖ್ಯೆಯನ್ನು ಮಿತಿಗೊಳಿಸಿವೆ. ಎಷ್ಟೋ ಗರ್ಭಿಣಿಯರು ಹಾಗೂ ಮಕ್ಕಳು ಅರ್ಹತೆಯ ವ್ಯಾಪ್ತಿಯಲ್ಲಿದ್ದರೂ, ಹಣಕಾಸು ನೆರವಿನಿಂದ ವಂಚಿತರಾಗುತ್ತಿದ್ದಾರೆ.
ಕೋವಿಡ್ ನಡುವೆಯೇ ಜನಗಣತಿ ಮುಗಿಸಿದ್ದ ಅಮೆರಿಕ
ಭಾರತದಂತೆ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸುವ ಅಮೆರಿಕ, ಕೋವಿಡ್ ನಡುವೆಯೂ 2020ರ ಜನಗಣತಿಯನ್ನು ಮುಗಿಸಿದೆ. ನಿಗದಿಯಂತೆ 2019ರ ಜನವರಿಯಲ್ಲಿ ಜನಗಣತಿ ಪ್ರಕ್ರಿಯೆ ಆರಂಭವಾಯಿತು. ಇದಕ್ಕೂ ಒಂದು ವರ್ಷದ ಹಿಂದೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನೇರವಾಗಿ ಮನೆಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸುವ ಸಾಂಪ್ರದಾಯಿಕ ವಿಧಾನದ ಜೊತೆಗೆ ಡಿಜಿಟಲ್ ರೂಪದ ದತ್ತಾಂಶ ಸಂಗ್ರಹಕ್ಕೂ ಅವಕಾಶವಿತ್ತು. ಜನರು ಫೋನ್, ಇ–ಮೇಲ್ ಮೂಲಕ ದತ್ತಾಂಶವನ್ನು ದಾಖಲು ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ, 2021ರ ಏಪ್ರಿಲ್‌ನಲ್ಲಿ ಜನಗಣತಿಯ ಮೊದಲ ವರದಿಯನ್ನು ಅಮೆರಿಕ ಬಿಡುಗಡೆ ಮಾಡಿತು. ಸೆಪ್ಟೆಂಬರ್‌ನಲ್ಲಿ ಪರಿಷ್ಕೃತ ವರದಿ ಪ್ರಕಟವಾಯಿತು.
ಆಧಾರ: ಜನಗಣತಿ ಸಂಘಟನೆ, ಕೇಂದ್ರ ಗೃಹ ಸಚಿವಾಲಯ, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.