ಜಿಂದಾಲ್‌ಗೆ ಬಳ್ಳಾರಿಯಲ್ಲಿ 3,667 ಎಕರೆ ಜಮೀನನ್ನು ಲೀಸ್ ಕಂ ಸೇಲ್ ಒಪ್ಪಂದದಂತೆ ಮಾರಾಟ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ, ‘ಯಡಿಯೂರಪ್ಪ ಸರ್ಕಾರದ ನಿರ್ಧಾರವನ್ನೇ ಜಾರಿಗೆ ತರುತ್ತಿದ್ದೇವೆ. ಹೈಕೋರ್ಟ್‌ನ ಆದೇಶದಂತೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಹೇಳುತ್ತಿದೆ. ‘ಯಡಿಯೂರಪ್ಪ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಮರುಪರಿಶೀಲಿಸುತ್ತೇವೆ’ ಎಂದು ಬಸವರಾಜ ಬೊಮ್ಮಾಯಿ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿತ್ತು. ಮರುಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಸಲ್ಲಿಸಿ ಎಂದು ಹೈಕೋರ್ಟ್ ಸೂಚಿಸಿದ್ದರೂ ಅಂತಹ ಯಾವುದೇ ಪ್ರಮಾಣಪತ್ರ ಹೈಕೋರ್ಟ್‌ಗೆ ಸಲ್ಲಿಸಿಲ್ಲ. ಬದಲಿಗೆ ಒಂದು ಹೇಳಿಕೆ ನೀಡಿ, ಹೈಕೋರ್ಟ್‌ನ ಆದೇಶ ಪಡೆದುಕೊಳ್ಳಲಾಗಿದೆ. ಹೈಕೋರ್ಟ್ ಆದೇಶದಲ್ಲಿ ಇರುವ ವಿವರಗಳು ಮತ್ತು ನಂತರದ ಬೆಳವಣಿಗೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ
ಬಳ್ಳಾರಿಯ ತೋರಣಗಲ್, ಕುರೇಕುಪ್ಪ, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆಯಷ್ಟು ಜಮೀನನ್ನು 2006 ಮತ್ತು 2007ರಲ್ಲಿ ಗುತ್ತಿಗೆ ಮಾರಾಟ ಒಪ್ಪಂದದಂತೆ ಮಂಜೂರು ಮಾಡಲಾಗಿತ್ತು. ಒಪ್ಪಂದದ ಪ್ರಕಾರ ಆ ಜಮೀನನ್ನು 2013 ಮತ್ತು 2017ರಲ್ಲಿ ಕಂಪನಿಗೆ ಮಾರಾಟ ಮಾಡಬೇಕಿತ್ತು ಮತ್ತು ಸರ್ಕಾರವು ನಿಗದಿ ಮಾಡಿದಷ್ಟು ದರವನ್ನು ಕಂಪನಿ ಸರ್ಕಾರಕ್ಕೆ ಪಾವತಿಸಬೇಕಿತ್ತು. 2007ರ ಒಪ್ಪಂದದಂತೆ ಜಮೀನನ್ನು ಶುದ್ಧ ಕ್ರಯಪತ್ರ ಮಾಡಿಕೊಡಿ ಎಂದು 2017ರಲ್ಲಿ ಮತ್ತು 2006ರ ಒಪ್ಪಂದದಂತೆ ಜಮೀನನ್ನು ಶುದ್ಧ ಕ್ರಯಪತ್ರ ಮಾಡಿಕೊಡಿ ಎಂದು 2018ರಲ್ಲಿ ಕಂಪನಿಯು ಸರ್ಕಾರಕ್ಕೆ ಎರಡು ಪತ್ರ ಬರೆದಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಣಕಾಸು ಇಲಾಖೆಯ ಅಭಿಪ್ರಾಯ ಕೇಳಿತ್ತು.
ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆಯು, ‘ದರವನ್ನು ಪರಿಷ್ಕರಿಸಿ ಶುದ್ಧ ಕ್ರಯಪತ್ರ ಮಾಡಿಕೊಡಬಹುದು’ ಎಂದು 2018ರ ಮಾರ್ಚ್ 3ರಂದು ತನ್ನ ಅಭಿಪ್ರಾಯ ತಿಳಿಸಿತ್ತು. ಆದರೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆದು, ಸರ್ಕಾರ ಬದಲಾದ ಕಾರಣ ಶುದ್ಧ ಕ್ರಯಪತ್ರ ಮಾಡಿಕೊಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದ ಎದುರು ಈ ವಿಷಯ ಚರ್ಚೆಗೆ ಬಂದಿತ್ತು. ಜಿಂದಾಲ್‌ಗೆ ಸದರಿ ಜಮೀನನ್ನು ಮಾರಾಟ ಮಾಡಲು 2019ರ ಮೇ 27ರಂದು ಸಂಪುಟ ಒಪ್ಪಿಗೆ ನೀಡಿತ್ತು. ಮೈತ್ರಿ ಸರ್ಕಾರದಲ್ಲಿ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನ ಶಾಸಕರಿಂದಲೇ ತೀವ್ರ ವಿರೋಧ ಬಂದ ಕಾರಣ 2019ರ ಜೂನ್ 14ರಂದು ಸಂಪುಟ ಉಪಸಮಿತಿ ಪರಿಶೀಲನೆಗೆ ವಿಷಯವನ್ನು ಒಪ್ಪಿಸಲಾಯಿತು. ಮುಂದಿನ ಒಂದೇ ತಿಂಗಳಲ್ಲಿ ಸರ್ಕಾರ ಪತನವಾಯಿತು.
ಹೊಸದಾಗಿ ರಚನೆಯಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಈ ಪ್ರಕ್ರಿಯೆ ಮತ್ತೆ ಚಾಲನೆಗೆ ಬಂದಿತು. 2020ರ ಡಿಸೆಂಬರ್ 22ರಿಂದ 2021ರ ಮಾರ್ಚ್ 4ರವರೆಗೆ ಸಂಪುಟ ಉಪಸಮಿತಿಯು ಹಲವು ಸಭೆಗಳನ್ನು ನಡೆಸಿತು. ತಜ್ಞರ ಅಭಿಪ್ರಾಯಗಳನ್ನೂ ಪಡೆದುಕೊಂಡಿತ್ತು. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಒಪ್ಪಿಗೆಯ ಆಧಾರದಲ್ಲೇ ಜಮೀನು ಮಾರಾಟ ಮಾಡಲು 2021ರ ಏಪ್ರಿಲ್ 26ರಂದು ಯಡಿಯೂರಪ್ಪ ಸಂಪುಟ ಸಭೆ ಒಪ್ಪಿಗೆ ನೀಡಿತು. ಅದರ ಪ್ರಕಾರ 2021ರ ಮೇ 21ರಂದು ಸರ್ಕಾರವು ಆದೇಶ ಹೊರಡಿಸಿತು. ‘ತೋರಣಗಲ್ ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2,000 ಎಕರೆ ಜಮೀನನ್ನು ಪ್ರತಿ ಎಕರೆಗೆ ₹1.22 ಲಕ್ಷದಂತೆ ಹಾಗೂ ತೋರಣಗಲ್, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1,667 ಎಕರೆ ಜಮೀನನ್ನು ಪ್ರತಿ ಎಕರೆಗೆ ₹1.50 ಲಕ್ಷದಂತೆ ಮಾರಾಟ ಮಾಡಿ ಶುದ್ಧ ಕ್ರಯಪತ್ರ ಮಾಡಿಕೊಡಲು ನಿರ್ಧರಿಸಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆದೇಶದಲ್ಲಿ ವಿವರಿಸಿತು.
ಈ ಆದೇಶ ಹೊರಬಿದ್ದ ನಂತರ ಅದರ ವಿರುದ್ಧ ಹೈಕೋರ್ಟ್‌ನಲ್ಲಿ ಕೆ.ಎ.ಪೌಲ್ ಪಿಐಎಲ್ ಸಲ್ಲಿಸಿದರು. ‘ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದ ಸಂಪುಟ ಉಪಸಮಿತಿ ನಡೆಸಿದ ಪರಿಶೀಲನೆ, ಸಭೆ ಮತ್ತು ನಿರ್ಧಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. 3,667 ಎಕರೆಯನ್ನು ಜಿಂದಾಲ್‌ಗೆ ನೀಡುವ ಆದೇಶವನ್ನು ರದ್ದುಪಡಿಸಬೇಕು. ಈ ಪ್ರಕ್ರಿಯೆ ಕುರಿತು ಹೈಕೋರ್ಟ್ ಸೂಚಿಸಿದ ಸಂಸ್ಥೆಯ ಮೂಲಕ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಾಗ ಪಿಐಎಲ್ ವಿಚಾರಣೆಗೆ ಬಂದಿತ್ತು. ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲರು, ‘ಈ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮರುಪರಿಶೀಲಿಸುತ್ತೇವೆ’ ಎಂದು ಹೇಳಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್ ಪೀಠವು 2021ರ ನವೆಂಬರ್ 8ರಂದು, ಪಿಐಎಲ್ ಅನ್ನು ವಜಾ ಮಾಡಿತ್ತು.
ಪಿಐಎಲ್ ವಜಾ ಆಗಿರುವ ಕಾರಣ, ಶುದ್ಧ ಕ್ರಯಪತ್ರ ಮಾಡಿಕೊಡಿ ಎಂದು ಜಿಂದಾಲ್ ಕಂಪನಿ 2022ರ ಅಕ್ಟೋಬರ್ 1ರಂದು ಸರ್ಕಾರಕ್ಕೆ ಪತ್ರ ಬರೆಯಿತು. ಸರ್ಕಾರ ಕ್ರಮವಹಿಸದ ಕಾರಣ, ಕಂಪನಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತು. ಹೈಕೋರ್ಟ್, ಸರ್ಕಾರದ ಅಭಿಪ್ರಾಯ ಕೇಳಿತು. ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ನ್ಯಾಯಾಲಯದ ನಿರ್ದೇಶನಕ್ಕೆ ಕಾಯಲಾಗುತ್ತಿದೆ. ಶುದ್ಧ ಕ್ರಯಪತ್ರ ಮಾಡಿಕೊಡಬೇಕು ಎಂದು 2021ರ ಮೇ 6ರಂದು ಸರ್ಕಾರವು ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಜಾರಿಗೆ ತರಲು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದ್ದರು.
‘ಈ ವಿಷಯವನ್ನು ಮರುಪರಿಶೀಲಿಸಿ. ಆ ಸಂಬಂಧ ಪ್ರಮಾಣಪತ್ರವನ್ನು ಸಲ್ಲಿಸಿ’ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಆದರೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಹೈಕೋರ್ಟ್‌ಗೆ ಯಾವುದೇ ಪ್ರಮಾಣಪತ್ರ ಸಲ್ಲಿಸಲಿಲ್ಲ. ಆದರೆ, ‘ಈ ವಿಷಯವನ್ನು ಸರ್ಕಾರ ಪುನರ್‌ಪರಿಶೀಲಿಸಿದೆ. ನ್ಯಾಯಾಲಯ ಆದೇಶ ನೀಡಿದರೆ ಶುದ್ಧ ಕ್ರಯಪತ್ರ ಮಾಡಿಕೊಡ ಬೇಕಾಗುತ್ತದೆ’ ಎಂದು ಪೀಠದ ಎದುರು ಹೇಳಿಕೆ ನೀಡಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ‘ಜಿಂದಾಲ್ ಕಂಪನಿಗೆ ಶುದ್ಧ ಕ್ರಯಪತ್ರ ಮಾಡಿಕೊಡಿ’ ಎಂದು 2024ರ ಮಾರ್ಚ್ 12ರಂದು ಆದೇಶಿಸಿತ್ತು. ಆದರೆ ಹೈಕೋರ್ಟ್ ನಿರ್ದೇಶಿಸಿದ್ದಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪೌಲ್ ಅವರ ಪಿಐಎಲ್ ಅನ್ನು ವಜಾ ಮಾಡುವಾಗ, ‘ಈ ನ್ಯಾಯಾಲಯದ ಆದೇಶದನ್ವಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಶ್ನಿಸುವ ಮತ್ತು ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸುವ ಎಲ್ಲ ಅವಕಾಶಗಳೂ ಅರ್ಜಿದಾರರಿಗೆ ಇರುತ್ತದೆ’ ಎಂದು 2021ರ ನವೆಂಬರ್ 8ರ ಆದೇಶದಲ್ಲಿ ಹೈಕೋರ್ಟ್ ಹೇಳಿತ್ತು. ಈಗ 2024ರ ಮಾರ್ಚ್ 12ರಂದು ನೀಡಿದ ತೀರ್ಪಿನಲ್ಲಿ ಹಿಂದಿನ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ‘ಹಿಂದಿನ ತೀರ್ಪಿನಲ್ಲಿ ಹೇಳಿದಂತೆ ಆದೇಶ ಮರುಪರಿಶೀಲನೆಗೆ ಮನವಿ ಮಾಡಿಕೊಳ್ಳುವ ಅವಕಾಶ ಅರ್ಜಿದಾರರಿಗೆ ಇರುತ್ತದೆ’ ಎಂದು ಹೇಳಿದೆ.
ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. 2021ರಲ್ಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾದಾಗಲೂ ಇದೇ ವಿಚಾರ ಚರ್ಚೆಗೆ ಬಂದಿತ್ತು. ಜಿಂದಾಲ್ ಕಂಪನಿಯು 2022ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ, ‘ಸರ್ಕಾರ ಈ ಜಮೀನಿನ ಭೂಸ್ವಾಧೀನಕ್ಕೆ ಮಾಡಿದ್ದ ವೆಚ್ಚಕ್ಕಿಂತ 13 ಪಟ್ಟು ಹೆಚ್ಚು ಬೆಲೆ ಪಾವತಿಗೆ ಒಪ್ಪಿದ್ದೆವು’ ಎಂದು ಹೇಳಿತ್ತು.
‘ಬಳ್ಳಾರಿಯಲ್ಲಿ ವಿಜಯನಗರ ಸ್ಟೀಲ್ ಲಿಮಿಟೆಡ್ (ವಿಎಸ್‌ಎಲ್) ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 1971–77ರಲ್ಲಿ 9,341 ಎಕರೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅಷ್ಟೂ ಜಮೀನನ್ನು 1995ರಲ್ಲಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿತ್ತು. ವಿಎಸ್‌ಎಲ್ ಷೇರುಗಳು ಸೇರಿದಂತೆ ಜಮೀನು ಖರೀದಿಗೆ ರಾಜ್ಯ ಸರ್ಕಾರ ₹12.90 ಕೋಟಿ ಪಾವತಿಸಿತ್ತು’ ಎಂದು ಜಿಂದಾಲ್ ತನ್ನ ಅರ್ಜಿಯಲ್ಲಿ ವಿವರಿಸಿತ್ತು.
‘9,341 ಎಕರೆಗೆ ರಾಜ್ಯ ಸರ್ಕಾರ ₹6.42 ಕೋಟಿ ಪಾವತಿಸಿತ್ತು. ಪ್ರತಿ ಎಕರೆಗೆ ಸರ್ಕಾರಕ್ಕೆ ತಗುಲಿದ ವೆಚ್ಚ ₹6,908. ಇದೇ ಜಮೀನನ್ನು ನಾವು 2006ರಲ್ಲಿ ಲೀಸ್ ಕಂ ಸೇಲ್ ಒಪ್ಪಂದದಂತೆ ಪಡೆದುಕೊಳ್ಳುವಾಗ ಪ್ರತಿ ಎಕರೆಗೆ ₹90,000 ಸಾವಿರ ನೀಡಲು ಒಪ್ಪಿಗೆ ನೀಡಿದ್ದೆವು. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ತಗುಲಿದ ವೆಚ್ಚಕ್ಕಿಂತ ಇದು 13 ಪಟ್ಟು ಹೆಚ್ಚು’ ಎಂದು ಕಂಪನಿ ಹೈಕೋರ್ಟ್‌ಗೆ ವಿವರಿಸಿತ್ತು.
‘ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಭೂಮಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ನಮ್ಮ ಕಂಪನಿ ಅಲ್ಲಿ ಕಾರ್ಖಾನೆ ಆರಂಭಿಸಿದ ನಂತರವೇ ವಾಣಿಜ್ಯ ಚಟುವಟಿಕೆಗಳು ಆರಂಭವಾದವು. ನಮ್ಮ ಕಾರ್ಖಾನೆಯ ಚಟುವಟಿಕೆಗಳ ಕಾರಣದಿಂದಲೇ ಅಲ್ಲಿ ಭೂಮಿಯ ಬೆಲೆ ಹೆಚ್ಚಾಗಿದೆ. ಭೂಮಿಗೆ ದರ ನಿಗದಿ ಮಾಡುವಾಗ ಕಂಪನಿಯಿಂದ ಆಗಿರುವ ಈ
ಅನುಕೂಲಗಳನ್ನು ಪರಿಗಣಿಸಲು ಸರ್ಕಾರವನ್ನು ಕೋರಿದ್ದೆವು’ ಎಂದೂ ಜಿಂದಾಲ್ ಹೈಕೋರ್ಟ್‌ಗೆ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.