ADVERTISEMENT

ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
<div class="paragraphs"><p>ಲಡಾಖ್‌ನ ಪೂರ್ವ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ&nbsp; </p></div>

ಲಡಾಖ್‌ನ ಪೂರ್ವ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ 

   

–ಪಿಟಿಐ ಚಿತ್ರ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು. ಕೇಂದ್ರದ ಆ ನಿರ್ಧಾರದಿಂದ ಲಡಾಖ್‌ಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನ ದೊರೆತಿದ್ದೇ ಅದಕ್ಕೆ ಕಾರಣ. ಆದರೆ ಈಗ ಅದೇ ಜನರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದೆ, ಲಡಾಖ್‌ನ ಗಡಿಯನ್ನು ಚೀನಾ ಅತಿಕ್ರಮಿಸುತ್ತಿದ್ದರೂ ಸರ್ಕಾರ ಸುಮ್ಮನಿದೆ ಎಂದು ಈ ಜನರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಲಡಾಖ್‌ನಲ್ಲಿ ನಿಷೇಧಾಜ್ಞೆ ಹೇರಿ, ಪ್ರತಿಭಟನೆಯನ್ನು ತಡೆಹಿಡಿದಿದೆ.

ADVERTISEMENT

*****

ಇದೇ ಭಾನುವಾರ ಲಡಾಖ್‌ ಸಾಮಾಜಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ‘ಗಡಿ ಮೆರವಣಿಗೆ’ಗೆ ಆಯೋಜಿಸಿದ್ದರು. ಚೀನಾ ಸೈನಿಕರು ಭಾರತದ ಗಡಿಯನ್ನು ಪ್ರವೇಶಿಸಿ ಎಲ್ಲೆಲ್ಲಿ ಒಳಗೆ ಬಂದಿದ್ದಾರೆ ಮತ್ತು ಲಡಾಖ್‌ ಜನರು ತಮ್ಮದೇ ನೆಲಕ್ಕೆ ಕಾಲಿಡುವುದನ್ನು ಹೇಗೆ ಚೀನಾ ಸೈನಿಕರು ತಡೆಯುತ್ತಿದ್ದಾರೆ ಎಂಬುದನ್ನು ಜಗತ್ತಿನೆದುರು ಸಾಕ್ಷ್ಯ ಸಮೇತ ಬಹಿರಂಗಪಡಿಸುವುದು ಆ ‘ಗಡಿ ಮೆರವಣಿಗೆ’ಯ ಉದ್ದೇಶವಾಗಿತ್ತು. ಅಂದಾಜು 10,000 ಲಡಾಖಿಗಳು ಆ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದರು. ಆದರೆ,  ಮೆರವಣಿಗೆಗೆ ಒಂದು ದಿನ ಇದ್ದಾಗಲೇ ಅಲ್ಲಿನ ಆಡಳಿತವು ನಿಷೇಧಾಜ್ಞೆ ಹೇರಿತು. ಯಾರೂ ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ, ರ್‍ಯಾಲಿ, ಮೆರವಣಿಗೆ, ಭಾಷಣ ನಡೆಸುವಂತಿಲ್ಲ ಎಂದು ನಿರ್ಬಂಧ ಹೇರಿತು. ಹೀಗಾಗಿ ಸಂಘಟಕರು ‘ಗಡಿ ಮೆರವಣಿಗೆ’ಯನ್ನು ವಾಪಸ್‌ ಪಡೆದರು.

‘ಗಡಿ ಮೆರವಣಿಗೆ’ಯ ಆಯೋಜಕರಲ್ಲಿ ಒಬ್ಬರಾದ ಶಿಕ್ಷಣ ತಜ್ಞ/ ಮತ್ತು ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅವರು ಸರ್ಕಾರದ ‘ನಿಷೇಧಾಜ್ಞೆ’ ಕ್ರಮದ ವಿರುದ್ಧ ಮಾತನಾಡಿದ್ದರು. ‘ಸತ್ಯವನ್ನು ಮಾತನಾಡುವವರನ್ನು ಈ ಸರ್ಕಾರವು ದೇಶದ್ರೋಹಿಗಳು ಎಂದು ಕರೆಯುತ್ತದೆ. ಈಗ ಗಡಿ ಮೆರವಣಿಗೆಗೆ ನಿಷೇಧ ಹೇರಿದೆ. ಹೀಗಿದ್ದೂ ನಾವು ಮೆರವಣಿಗೆ ನಡೆಸಲು ಯತ್ನಿಸಿದರೆ ಅದು ಭದ್ರತಾ ಸಂಸ್ಥೆಗಳ ಜತೆಗೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಆಗ ನಮ್ಮನ್ನು ಭಯೋತ್ಪಾದಕರು ಎಂದೂ ಕರೆಯಬಹುದು. ಹೀಗಾಗಿ ಮೆರವಣಿಗೆ ಕೈಬಿಟ್ಟಿದ್ದೇವೆ’ ಎಂದು ಘೋಷಿಸಿದ್ದರು. ಆದರೆ ಇದೇ ಸೋನಮ್‌ ವಾಂಗ್‌ಚುಕ್‌ ಅವರು 2019ರಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದರು. ಆದರದು ಕೆಲವೇ ತಿಂಗಳಲ್ಲಿ ಬದಲಾಗಿತ್ತು.

ಲಡಾಖ್‌ ಜನರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಸಿದ್ದು ಇದೇ ಮೊದಲಲ್ಲ. 2020ರಿಂದಲೂ ಅಂತಹ ಸಣ್ಣ–ಪುಟ್ಟ ಹೋರಾಟಗಳು ನಡೆಯುತ್ತಲೇ ಇವೆ. ಅದು ಆರಂಭವಾದದ್ದು 2020ರ ಅಂತ್ಯದ ವೇಳೆಗೆ. 2020ರಲ್ಲಿ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಮತ್ತು ಪ್ಯಾಂಗಾಂಗ್‌ ಸರೋವರದ ಬಳಿ ಚೀನಾ ಸೈನಿಕರು ಭಾರತದ ಗಡಿಯೊಳಗೆ ಬಂದಿದ್ದರಿಂದ ಭಾರತದ ಸೈನಿಕರೊಟ್ಟಿಗೆ ಸಂಘರ್ಷ ಆಗಿತ್ತು. ಆ ಸಂಘರ್ಷಗಳ ನಂತರ ಭಾರತದ ನೆಲವನ್ನು ಚೀನಾ ಸೈನಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಲಡಾಖಿ ಜನರು ಆರೋಪಿಸಿದ್ದರು. ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತ್ತು. ವರ್ಷ ಕಳೆದಂತೆ ಅಂತಹ ಆರೋಪ ಹೆಚ್ಚಾಗತೊಡಗಿತು. ಇದೇ ಜನವರಿಯಲ್ಲಿ ಲಡಾಖಿ ಕುರಿಗಾಹಿಗಳು ಚೀನೀ ಸೈನಿಕರೊಟ್ಟಿಗೆ ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಯಿತು. ನಮ್ಮದೇ ನೆಲದಲ್ಲಿ ಕುರಿಗಳನ್ನು ಮೇಯಿಸಲು ಚೀನಾ ಸೈನಿಕರು ತಡೆ ಒಡ್ಡುತ್ತಿದ್ದಾರೆ. ಚೀನಾ ಸೈನಿಕರು ನಮ್ಮ ನೆಲವನ್ನು ಅತಿಕ್ರಮಿಸಿದ್ದಾರೆ ಎಂದು ಲಡಾಖ್ ಜನರು ಆರೋಪಿಸಿದರು. ಯಥಾಪ್ರಕಾರ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತು. 

ಸರ್ಕಾರದ ನಿರ್ಧಾರವನ್ನು ಅಲ್ಲಗಳೆಯುವ ಮತ್ತು ಚೀನಾ ಸೈನಿಕರು ಭಾರತದ ನೆಲವನ್ನು ಅತಿಕ್ರಮಿಸಿದ್ದಾರೆ ಎಂಬುದನ್ನು ತೋರಿಸುವ ಸಲುವಾಗಿಯೇ ‘ಗಡಿ ಮೆರವಣಿಗೆ’ಯನ್ನು ಆಯೋಜಿಸಲಾಗಿತ್ತು. ಪೂರ್ವ ಲಡಾಖ್‌ನ ಹಲವು ಗಡಿಭಾಗಗಳಿಗೆ ಹೋಗಿ, ಅಲ್ಲಿನ ಸ್ಥಿತಿಯನ್ನು ತೋರಿಸಲು ಯೋಜಿಸಲಾಗಿತ್ತು. ‘ಇದರಿಂದ ಶಾಂತಿ ಕದಡುವ ಅಪಾಯವಿದೆ’ ಎಂದ ಆಡಳಿತವು, ಮೆರವಣಿಗೆಗೆ ತಡೆಯೊಡ್ಡಿತು. ‘ಕೇಂದ್ರ ಸರ್ಕಾರಕ್ಕೆ ದೇಶದ ಭದ್ರತೆ ಬಗ್ಗೆ ಕಾಳಜಿಯೇ ಇಲ್ಲ. ಚುನಾವಣೆ ಗೆಲ್ಲುವುದಷ್ಟೇ ಅದಕ್ಕೆ ಮುಖ್ಯ’ ಎಂದು ಮೆರವಣಿಗೆ ಆಯೋಜಕರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸರ್ಕಾರದ ಈ ಕ್ರಮದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಬಹುತೇಕ ಜನರು, ಗಡಿಯಲ್ಲಿ ಸಮಸ್ಯೆ ಇದೆ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಗಡಿ ಮೆರವಣಿಗೆ ನಡೆದರೆ ಆ ಸಮಸ್ಯೆಗಳು ಜಗಜ್ಜಾಹೀರಾಗುತ್ತವೆ. ಅದನ್ನು ತಪ್ಪಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ನಿಷೇಧಾಜ್ಞೆ ಹೇರಿದೆ ಎಂದು ಟೀಕಿಸಲಾಗುತ್ತಿದೆ. ಆದರೆ ಈ ಆರೋಪ ಮತ್ತು ಟೀಕೆಯ ಬಗ್ಗೆ ಕೇಂದ್ರ ಸರ್ಕಾರದ ಮುಂದಾಳುಗಳಾಗಲೀ ಪ್ರತಿನಿಧಿಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಕ್ಕು ಮರಳಿ ಪಡೆಯಲು ಸತ್ಯಾಗ್ರಹ

2019ರಲ್ಲಿ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದಾಗ ಲಡಾಖಿ ಜನರು ಹಲವು ಕನಸುಗಳನ್ನು ಕಂಡಿದ್ದರು. ಮುಂದೊಂದು ದಿನ ಲಡಾಖ್‌ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಲಾಗುತ್ತದೆ ಲಡಾಖ್‌ಗೆ ರಾಜ್ಯದ ಸ್ಥಾನ ದೊರೆಯುತ್ತದೆ ಎಂಬ ಬೇಡಿಕೆಗಳು ಕೈಗೂಡುತ್ತವೆ ಎಂದು ಎಣಿಸಿದ್ದರು. ಸೋನಮ್‌ ವಾಂಗ್‌ಚುಕ್‌ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಇಂಥದ್ದೇ ಮಾತುಗಳನ್ನು ಆಗ ಆಡಿದ್ದರು. ಆದರೆ ಜಮ್ಮು–ಕಾಶ್ಮೀರದ ಜತೆಗೆ ಲಡಾಖ್‌ನ ವಿಶೇಷ ಸ್ಥಾನವೂ ರದ್ದಾಯಿತು. ಇದರಿಂದ ಹೊರರಾಜ್ಯದ ಮಂದಿ ಲಡಾಖ್‌ನಲ್ಲಿ ಜಮೀನು ಖರೀದಿಸಲು ಮತ್ತು ಸರ್ಕಾರಿ ನೇಮಕಾತಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಪ್ರಬಲ ಉದ್ಯಮಿಗಳು ಭೂಮಿ ಖರೀದಿಸಿ ಗಣಿಗಾರಿಕೆ ಮತ್ತು ಕಾರ್ಖಾನೆ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿತು. ನಿರ್ಮಾಣ ಕಾಮಗಾರಿಗಳೂ ಆರಂಭವಾದವು. ಲಡಾಖಿ ಜನರು ತಮ್ಮ ನಾಡಿಗೆ ಎದುರಾಗಿರುವ ಅಪಾಯವನ್ನು ಗ್ರಹಿಸಿದ್ದು ಅಲ್ಲಿಂದಲೇ. ಲಡಾಖ್‌ ಭಾರತ ಮಾತ್ರವಲ್ಲ ಜಗತ್ತಿನ ಕೆಲವೇ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದು. ಗಣಿಗಾರಿಕೆ ಸರ್ವಋತು ಹೆದ್ದಾರಿ ನಿರ್ಮಾಣದಂತಹ ಕಾಮಗಾರಿಗಳಿಂದ ಅಲ್ಲಿನ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ ಎಂಬುದು ಲಡಾಖಿ ಜನರ ಹೋರಾಟಕ್ಕೆ ಮೆಟ್ಟಿಲಾಯಿತು. ವಿಶೇಷ ಸ್ಥಾನ ರದ್ದಾಗುವುದರ ಜತೆಗೆ ಲೆಹ್‌ ಮತ್ತು ಕಾರ್ಗಿಲ್‌ ಜಿಲ್ಲಾ ಮಂಡಳಿಗಳಿಗೆ ಇದ್ದ ಅಧಿಕಾರಗಳನ್ನು ಕೇಂದ್ರ ಸರ್ಕಾರವು ಮೊಟಕುಗೊಳಿಸಿತು. ಈ ಮಂಡಳಿಗಳು ಭೂಮಿಯ ಹಕ್ಕು ನಿರ್ಧಾರ ಉದ್ಯಮ–ಕೈಗಾರಿಕೆಗಳಿಗೆ ಭೂಮಿ ಹಂಚಿಕೆಯ ಅಧಿಕಾರವನ್ನು ಹೊಂದಿದ್ದವು. ಈಗ ಆ ಅಧಿಕಾರವನ್ನು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳಿಗೆ ನೀಡಲಾಗಿದೆ. ಇದು ಸಹ ಅಲ್ಲಿನ ಜನರಲ್ಲಿ ಅಂತಂತ್ರದ ಭಾವವನ್ನು ಮೂಡಿಸಿದೆ. ಈ ಅಧಿಕಾರಗಳನ್ನು ಮರಳಿ ಪಡೆಯಬೇಕು ಎಂಬುದೂ ಈ ಹೋರಾಟದ ಮತ್ತೊಂದು ಆಗ್ರಹ. ಇದರ ಸಂಬಂಧವೇ 2023ರ ಜನವರಿ ಮತ್ತು ಫೆಬ್ರುವರಿಯಲ್ಲಿ ಸೋನಮ್‌ ವಾಂಗ್‌ಚುಕ್‌ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗಲೂ ಇಂಥದ್ದೇ ಬಹಿರಂಗ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದ್ದರು. ಆಗ ಕೇಂದ್ರ ಸರ್ಕಾರವು ಅವರನ್ನು ಗೃಹಬಂಧನದಲ್ಲಿ ಇರಿಸಿ ರ‍್ಯಾಲಿಯನ್ನು ತಡೆಹಿಡಿಯಿತು. ಲಡಾಖ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅಲ್ಲಿನ ಜನರ ಕೂಗು ಭಾರತದ ಬೇರೆ ಭಾಗಗಳ ಜನರಿಗೆ ಕೇಳಿದ್ದು ಆಗಲೇ. ಅಂದಿನಿಂದ ಈವರೆಗೆ ಅಲ್ಲಿನ ಜನರು ಇಂತಹ ಹಲವು ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಇದೇ ಜನವರಿಯಲ್ಲಿ ಫೆಬ್ರುವರಿಯಲ್ಲಿ ಸಣ್ಣ ಮಟ್ಟದ ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಮಾರ್ಚ್‌ನಲ್ಲಿ ಸೋನಮ್‌ ನೇತೃತ್ವದಲ್ಲಿ 21 ದಿನ ಉ‍ಪವಾಸ ಸತ್ಯಾಗ್ರಹ ನಡೆದಿತ್ತು. ಪರಿಸರಕ್ಕೆ ಮಾರಕವಾಗುವಂತಹ ಅಭಿವೃದ್ಧಿ ಮಾದರಿಗಳನ್ನು ತಡೆಹಿಡಿಯುವುದು ಮತ್ತು ತಮ್ಮ ಹಕ್ಕುಗಳನ್ನು ಮರಳಿ ಪಡೆಯುವುದು ಈ ಸತ್ಯಾಗ್ರಹಗಳ ಉದ್ದೇಶವಾಗಿತ್ತು. 

ಅಪಾರ ಪ್ರಮಾಣದ ಖನಿಜ ನಿಕ್ಷೇಪ

‘ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಕಲ್ಲು ಮತ್ತು ಖನಿಜ ಗಣಿಗಾರಿಕೆಗೆ ವಿಫುಲ ಅವಕಾಶಗಳಿವೆ’. ಕೇಂದ್ರ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‌ಎಂಇ) ಅಭಿವೃದ್ಧಿ ಸಂಸ್ಥೆಯು ಸಿದ್ಧಪಡಿಸಿರುವ ‘ಲೆಹ್‌ ಜಿಲ್ಲೆಯಲ್ಲಿನ ಕೈಗಾರಿಕಾ ಸ್ಥಿತಿಗತಿಯ ಕಿರುಚಿತ್ರಣ’ ವರದಿಯಲ್ಲಿನ ಉಲ್ಲೇಖವಿದು. ‘ಲಡಾಖ್‌ ಪ್ರದೇಶದಲ್ಲಿ ಗ್ರಾನೈಟ್‌ ಚಿನ್ನ ಆರ್ಸೆನಿಕ್‌ ಕೊಬಾಲ್ಟ್‌ ಜಿಪ್ಸಂ ಸುಣ್ಣದಕಲ್ಲು ನಿಕ್ಕಲ್ ಯುರೇನಿಯಂ ಮತ್ತು ಇನ್ನೂ ಅನೇಕ ಸ್ವರೂಪದ ಖನಿಜ ಸಂಪತ್ತು ಹೇರಳವಾಗಿದೆ. ಆದರೆ ಅವುಗಳನ್ನು ಇನ್ನಷ್ಟೇ ಹೊರತೆಗೆಯಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖನಿಜ ನಿಕ್ಷೇಪಗಳ ಲಭ್ಯತೆ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಸರ್ವೇಕ್ಷಣೆ ಕೆಲಸ ನಡೆಸಿದೆ. ಇಲ್ಲಿನ ಗಣಿಗಳನ್ನು ಗುತ್ತಿಗೆ ನೀಡಲು ಟೆಂಡರ್‌ ಪ್ರಕ್ರಿಯೆ ಸಿದ್ದತೆಯ ಹಂತದಲ್ಲಿದೆ.  ಲಡಾಖ್‌ನ ನೆಲದಲ್ಲಿ ಲಿಥಿಯಂ ನಿಕ್ಷೇಪವೂ ಅಪಾರ ಪ್ರಮಾಣದಲ್ಲಿ ಇದೆ ಎಂಬುದು ಪತ್ತೆಯಾಗಿದೆ. ಅದರ ಗಣಿಗಾರಿಕೆಗೂ ಸಿದ್ಧತೆಗಳು ನಡೆಯುತ್ತಿವೆ. ಇಲ್ಲಿನ ಜನರು ಗಣಿಗಾರಿಕೆ ಪ್ರಕ್ರಿಯೆಯನ್ನೂ ವಿರೋಧಿಸುತ್ತಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಇಲ್ಲಿ ಗಣಿಗಾರಿಕೆ ನಡೆಸಿದರೆ ಪರಿಸರಕ್ಕೆ ತೀವ್ರ ಹಾನಿಯಾಗುತ್ತದೆ. ಆ ಹಾನಿಯನ್ನು ಸರಿಪಡಿಸಲು ಸಧ್ಯವಾಗುವುದಿಲ್ಲ. ಅಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಲಡಾಖ್‌ ಜನರ ಮತ್ತೊಂದು ಆಗ್ರಹ.

ಆಧಾರ: ಪಿಟಿಐ, ಬಿಬಿಸಿ, ಸೊನಮ್ ವಾಂಗ್ಚುಕ್‌ ಅವರ ಟ್ವೀಟ್‌ಗಳು ಮತ್ತು ಯುಟ್ಯೂಬ್‌ ವಿಡಿಯೊ, ಗೃಹ ವ್ಯವಹಾರಗಳ ಸಂಸದೀಯ ಸಮಿತಿ ವರದಿ–2022, ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಪತ್ರಿಕಾ ಪ್ರಕಟಣೆ, ಕೇಂದ್ರ ಸರ್ಕಾರದ ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ‘ಲೆಹ್‌ನಲ್ಲಿ ಕೈಗಾರಿಕಾ ಸ್ಥಿತಿಗತಿ’ ವರದಿ

ಸೋನಮ್‌ ವಾಂಗ್‌ಚುಕ್‌ ಮುಂದಾಳತ್ವದಲ್ಲಿ ನಡೆದಿದ್ದ ಉಪವಾಹ ಸತ್ಯಾಗ್ರಹ   

ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಂಡೆಯಲ್ಲಿ ದನಗಾಹಿಗಳು ಮತ್ತು ಜಾನುವಾರುಗಳು... ಸರೋವರದ ಉತ್ತರದ ದಂಡೆಯ ಹಲವು ಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿದ್ದಾರೆ ಎಂಬುದು ಅಲ್ಲಿನ ಜನರ ಆರೋಪ. ಉಪಗ್ರಹ ಚಿತ್ರಗಳೂ ಆ ಆರೋಪವನ್ನು ದೃಢಪಡಿಸುತ್ತವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.