ADVERTISEMENT

ಆಳ–ಅಗಲ | ಜನಾಂಗೀಯ ಭಿನ್ನತೆ ಪ್ರತಿಪಾದನೆಯಲ್ಲಿ ಮಣಿಪುರ ಕಲಹ

–ಜಯಸಿಂಹ ಆರ್., ಸುಕೃತ ಎಸ್‌.

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 1:19 IST
Last Updated 29 ಜುಲೈ 2023, 1:19 IST
   

–ಜಯಸಿಂಹ ಆರ್., ಸುಕೃತ ಎಸ್‌.

ಮಣಿಪುರದಲ್ಲಿನ ಮೈತೇಯಿ ಹಿಂದೂಗಳು ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಣ ಕಲಹ ಇಂದಿನದ್ದಲ್ಲ. ಈ ಕಲಹಕ್ಕೆ ಶತಮಾನಗಳ ಇತಿಹಾಸವಿದೆ. ಎರಡೂ ಸಮುದಾಯಗಳ ಜನರು ತಾವೇ ಮಣಿಪುರದ ಮೂಲನಿವಾಸಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಜತೆಗೆ ಮಣಿಪುರದ ಸಂಪೂರ್ಣ ಭೌಗೋಳಿಕ ಪ್ರದೇಶದ ಮೂಲ ಹಕ್ಕುದಾರರು ತಾವೇ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಸಂಬಂಧ ಎರಡೂ ಸಮುದಾಯಗಳ ಮಧ್ಯೆ ಹಲವು ಬಾರಿ ಕಲಹ ನಡೆದಿದೆ. ಮೈತೇಯಿ ಮತ್ತು ಕುಕಿಗಳು ಸಂಪೂರ್ಣ ಭಿನ್ನ ಎಂಬ ಜನಾಂಗೀಯ ಭಿನ್ನತೆಯ ಪ್ರತಿಪಾದನೆಯೇ ಈ ಕಲಹದ ಮೂಲ ಎಂದು ವಿಶ್ಲೇಷಿಸಲಾಗಿದೆ.

ಮೈತೇಯಿ ಸಮುದಾಯದ ಜನರು ತಾವು ಮಹಾಭಾರತದ ಅರ್ಜುನ–ಚಿತ್ರಾಂಗದನ ಮಗ ಬಬ್ರುವಾಹನನ ಸಂತತಿಯವರು ಎಂದು ಹೇಳಿಕೊಳ್ಳುತ್ತಾರೆ. 18ನೇ ಶತಮಾನದ ನಂತರದ ಮಣಿಪುರಿ ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಕೃತಿಗಳೂ ಇದನ್ನೇ ಹೇಳುತ್ತವೆ. ‘ಕುಕಿಗಳು ಕಾಡು ಜನರು, ಅವರು ಹೊರಗಿನಿಂದ ಇಲ್ಲಿಗೆ ಬಂದವರು’ ಎಂದು ಮೈತೇಯಿ ಜನರು ಹೇಳುತ್ತಾರೆ. ಕುಕಿ ಜನರೂ ಸಹ, ‘ಮೈತೇಯಿಗಳು ನಮಗಿಂತ ಭಿನ್ನ. ನಾವೇ ಮಣಿಪುರದ ಮೂಲ ನಿವಾಸಿಗಳು’ ಎಂದು ಹೇಳುತ್ತಾರೆ. ಆದರೆ ಈ ಎರಡೂ ಸಮುದಾಯಗಳು ಮೂಲತಃ ಒಂದೇ ಜನಾಂಗಕ್ಕೆ ಸೇರಿದವು ಎಂದು ಮಾನವಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.

ADVERTISEMENT

‘ಎಲ್ಲರೂ ಒಂದೇ’

ಮೈತೇಯಿಗಳು ಹಿಂದೂಗಳು ಎಂದು ‘ಮೈತೇಯಿ ಪುರಾವಾ’ಗಳು (ಪುರಾಣ) ಹೇಳುತ್ತವೆಯಾದರೂ, ಮಾನವಶಾಸ್ತ್ರೀಯ ಮತ್ತು ಭಾಷಾವಿಜ್ಞಾನದ ಪರಿಕಲ್ಪನೆಗಳು ಈ ಪ್ರತಿಪಾದನೆಯನ್ನು ನಿರಾಕರಿಸುತ್ತವೆ ಎಂದು ಮಾನವಶಾಸ್ತ್ರಜ್ಞರು ಹೇಳುತ್ತಾರೆ. 1910–1970ರ ಮಧ್ಯೆ ನಡೆದ ಹಲವು ಮಾನವಶಾಸ್ತ್ರೀಯ ಅಧ್ಯಯನಗಳು ಇದನ್ನೇ ಹೇಳಿವೆ. ಕುಕಿ ಮತ್ತು ಮೈತೇಯಿ ಜನರ ಮಧ್ಯೆ ಜನಾಂಗೀಯವಾಗಿ ವ್ಯತ್ಯಾಸವೇನೂ ಇಲ್ಲ. ಎರಡೂ ಸಮುದಾಯಗಳು ‘ಮಂಗೋಲಾಯ್ಡ್‌’ ಜನಾಂಗಕ್ಕೆ ಸೇರಿದ್ದವಾಗಿವೆ. ಈ ಜನರು ಒಂದು ಕಡೆ ನೆಲೆನಿಂತು ಕೃಷಿ ಮಾಡುವುದಿಲ್ಲ. ಬದಲಿಗೆ ಕಾಡನ್ನು ಸುಡುತ್ತಾ, ತೆರವಾದ ಜಾಗದಲ್ಲಿ ಕೃಷಿ ಮಾಡುತ್ತಾರೆ. ಆ ಭೂಮಿ ಫಲವತ್ತತೆ ಕಳೆದುಕೊಂಡ ನಂತರ ಬೇರೊಂದು ಕಡೆ ಕಾಡು ಸುಟ್ಟು, ಕೃಷಿ ಮಾಡುತ್ತಾರೆ ಎಂಬುದನ್ನು ಈ ಅಧ್ಯಯನಗಳು ದಾಖಲಿಸಿವೆ.

ಮಣಿಪುರದ ಗುಡ್ಡಗಾಡು ಪ್ರದೇಶದ ತಪ್ಪಲಿನಲ್ಲಿದ್ದ ಕುಕಿ ಜನರು ಇದೇ ರೀತಿ, ಮಣಿಪುರದ ಕಣಿವೆ (ಇಂಫಾಲ್‌ ನದಿ ಕಣಿವೆ ಪ್ರದೇಶ) ಪ್ರದೇಶಕ್ಕೆ ಕೃಷಿಗೆಂದು ಬಂದಿದ್ದಾರೆ. ನಂತರ ಅಲ್ಲಿಯೇ ನೆಲೆ ನಿಂತಿದ್ದಾರೆ. ಬಂಗಾಳ–ಅಸ್ಸಾಂ–ಮ್ಯಾನ್ಮಾರ್‌ನ ಚಿನ್‌ ಪ್ರಾಂತ್ಯಕ್ಕೆ ಸಂಪರ್ಕ ಕಲ್ಪಿಸುವ ಕಣಿವೆ ಪ್ರದೇಶದಲ್ಲೇ ಇಂಫಾಲ್‌ ಕಣಿವೆ ಪ್ರದೇಶವೂ ಬರುತ್ತದೆ. ಆರ್ಯರು, ಮಧ್ಯಪ್ರಾಚ್ಯದ ಶಾಗಳು, ಮ್ಯಾನ್ಮಾರ್‌ನ ಬರ್ಮಾಸ್‌ಗಳು ಇತಿಹಾಸದುದ್ದಕ್ಕೂ ಇಂಫಾಲ್‌ ಕಣಿವೆ ಪ್ರದೇಶವನ್ನು ಹಲವು ಬಾರಿ ಹಾದುಹೋಗಿದ್ದಾರೆ. ಹೀಗಾಗಿ ಇಂಫಾಲ್‌ ಕಣಿವೆಯಲ್ಲಿದ್ದ ಜನರ ಸಂಸ್ಕೃತಿ ಮೇಲುನೋಟಕ್ಕೆ ಬದಲಾಗುತ್ತಾ ಬಂದಿದೆ. ಇದು ವ್ಯಾಪಕವಾಗಿ ಬದಲಾಗಿದ್ದು, 18ನೇ ಶತಮಾನದಲ್ಲಿ ವೈಷ್ಣವ ಪಂಥದ ಅನುಯಾಯಿಗಳು ಇಂಫಾಲ್‌ ಕಣಿವೆಗೆ ಬಂದಾಗ.

ಮಣಿಪುರಿ ಭಾಷೆಯಲ್ಲಿನ ಪುರಾಣಗಳು ಮೈತೇಯಿ ಜನರ ಸುದೀರ್ಘ ಇತಿಹಾಸವನ್ನು ದಾಖಲಿಸಿವೆ. ಕ್ರಿಸ್ತ ಪೂರ್ವ 14ನೇ ಶತಮಾನದಷ್ಟು ಹಿಂದಿನವರೆಗಿನ ಪ್ರತಿಯೊಂದು ರಾಜಮನೆತನವು ಮತ್ತು ಪ್ರತಿಯೊಬ್ಬ ರಾಜನ ಇತಿಹಾಸವನ್ನೂ ಈ ಪುರಾಣಗಳು ದಾಖಲಿಸಿವೆ. ಕ್ರಿ.ಶ.1789ರವೆಗಿನ ಪುರಾಣಗಳಲ್ಲಿ ಮಣಿಪುರವನ್ನು ಕಾಂಗ್ಲ್‌ಪೋಕ್‌ ಎಂದೇ ಕರೆಯಲಾಗಿದೆ. ಅಲ್ಲಿಯವರೆಗಿನ ರಾಜರ ಹೆಸರುಗಳು ಭಿನ್ನವಾಗಿಯೇ ಇವೆ. 1773ರಲ್ಲಿ ಚಿನ್‌–ಥಾಂಗ್‌–ಕೋಂಬಾ ರಾಜನಾಗುತ್ತಾನೆ. ಆತನ ಕಾಲದಲ್ಲಿಯೇ ವೈಷ್ಣವ ಪಂಥವು ಮಣಿಪುರಕ್ಕೆ ಕಾಲಿಡುತ್ತದೆ. ಆತನೊಂದಿಗೆ ಮೈತೇಯಿ ಜನರೂ ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಾರೆ. ಆತ ತನ್ನ ಹೆಸರನ್ನು ಭಾಗ್ಯಚಂದ್ರ ಎಂದು ಬದಲಿಸಿಕೊಳ್ಳುತ್ತಾನೆ. ತನ್ನ ರಾಜಧಾನಿ ಲಮಂಗ್‌ಡಾಂಗ್‌ನ ಹೆಸರನ್ನು ಬಿಷ್ಣುಪುರ (ಈಗ ವಿಷ್ಣುಪುರ) ಎಂದು ಬದಲಿಸುತ್ತಾನೆ. ಕಾಂಗ್ಲ್‌ಪೋಕ್‌ ಮನೆತನವೂ ಮಣಿಪುರ ಎಂದಾಗುತ್ತದೆ. ಆದರೆ, ಕುಕಿಗಳು ಬುಡಕಟ್ಟು ಸಮುದಾಯವಾಗಿಯೇ ಉಳಿಯುತ್ತಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಬದಲಾಗುತ್ತಾರೆ.

ಭಾರತದ ಇತಿಹಾಸದಲ್ಲಿ ಯಾವುದೇ ಬುಡಕಟ್ಟು ಮುಖ್ಯವಾಹಿನಿಗೆ ಬಂದೊಡನೆ, ಅದು ಹಿಂದೂ ಧರ್ಮವನ್ನು ಸೇರುತ್ತದೆ ಮತ್ತು ಅದನ್ನು ಅನುಸರಿಸಲು ತೊಡಗುತ್ತದೆ. ಇದನ್ನು ಮಾನವಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸನ್‌ ‘ಸಂಸ್ಕೃತೀಕರಣ’ ಎಂದಿದ್ದಾರೆ. ಮೈತೇಯಿ ಜನರ ಮಾನವಶಾಸ್ತ್ರೀಯ ಅಧ್ಯಯನವನ್ನೂ ‘ಸಂಸ್ಕೃತೀಕರಣ’ದ ಸಿದ್ಧಾಂತದಲ್ಲೇ ವಿಶ್ಲೇಷಿಸಲಾಗಿದೆ. ಬುಡಕಟ್ಟು ಸಮುದಾಯವಾಗಿದ್ದ ಮೈತೇಯಿ ಜನರು, ವೈಷ್ಣವ ಜನರ ಸಂಪರ್ಕದ ನಂತರ ಹಿಂದೂ ಧರ್ಮಕ್ಕೆ ಬಂದರು. ನಂತರ ಗುಡ್ಡಗಾಡಿನಲ್ಲಿನ ಬುಡಕಟ್ಟು ಜನರಿಗಿಂತ ತಾವು ಭಿನ್ನ ಎಂದು ಪ್ರತಿಪಾದಿಸತೊಡಗಿದರು ಎಂದು ಮಣಿಪುರದ ಖ್ಯಾತ ಮಾನವಶಾಸ್ತ್ರಜ್ಞ ಎನ್‌.ಟೋಂಬಿ ಸಿಂಗ್‌ ಅವರು ತಮ್ಮ ‘ಮಣಿಪುರ್: ಸ್ಟಡಿ’ ಅಧ್ಯಯನ ಕೃತಿಯಲ್ಲಿ ಹೇಳಿದ್ದಾರೆ.

ಬ್ರಿಟಿಷರ ಆಳ್ವಿಕೆಯಲ್ಲಿ ಕಲಹ

ನಾಗಾಗಳು ಇಂಫಾಲ್‌ ಕಣಿವೆ ಪ್ರದೇಶಕ್ಕೆ ಬರುವುದನ್ನು ತಡೆಯಲು ಗುಡ್ಡಗಾಡು ಜನರನ್ನು (ಕುಕಿಗಳು) ಮೈತೇಯಿ ರಾಜಮನೆತನವು ಬಳಸಿಕೊಳ್ಳುತ್ತಿತ್ತು ಎಂಬುದನ್ನು ಮೈತೇಯಿ ಪುರಾಣಗಳು ದಾಖಲಿಸಿವೆ. ಕುಕಿಗಳು ನಾಗಾಗಳ ದಾಳಿಗಳನ್ನು ಎದುರಿಸುವ ಮೂಲಕ ಇಂಫಾಲ್‌ ಕಣಿವೆ ಪ್ರದೇಶದಲ್ಲಿ ಇದ್ದ ಮೈತೇಯಿ ಜನರನ್ನು ರಕ್ಷಿಸಿದ್ದರು ಎಂದು ಈ ಪುರಾಣ ಕಾವ್ಯಗಳು ಹೇಳುತ್ತವೆ. ಹೀಗೆ ತಮ್ಮ ರಕ್ಷಣೆಗಾಗಿ ಕುಕಿಗಳನ್ನು ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದ ಪರಿಪಾಟವೇ ಕುಕಿ ಮತ್ತು ಮೈತೇಯಿ ಜನರ ನಡುವಣ ಕಲಹಕ್ಕೆ ಕಾರಣವಾಯಿತು ಎಂಬುದನ್ನು ಬ್ರಿಟಿಷ್ ಅಧಿಕಾರಿಗಳು ದಾಖಲಿಸಿದ್ದಾರೆ.

19ನೇ ಶತಮಾನದ ಅಂತ್ಯದ ವೇಳೆಗೆ ಅಸೋಂ ಸಂಸ್ಥಾನ, ಮಣಿಪುರ ಸಂಸ್ಥಾನಗಳು ಬ್ರಿಟಿಷ್‌ ಭಾರತದ ಅಸ್ಸಾಂ ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದವು. ಬ್ರಿಟಿಷರಿಗೆ ಅಗತ್ಯವಿದ್ದಾಗ ಈ ಸಂಸ್ಥಾನಗಳೆರಡೂ ಸೇನೆಯನ್ನು ಒದಗಿಸಬೇಕಿತ್ತು. 1917ರಲ್ಲಿ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ, ಈಜಿಪ್ಟ್‌ನಲ್ಲಿ ಕಾರ್ಯಾಚರಣೆಗೆ ಹೆಚ್ಚಿನ ಸೈನಿಕರ ಅವಶ್ಯಕತೆ ಇತ್ತು. ಇದಕ್ಕಾಗಿ ಅಸ್ಸಾಂ ರಾಜ್ಯದಿಂದ ತಲಾ 2,000 ಮಂದಿಯ 15 ತುಕಡಿಗಳನ್ನು ತರಿಸುವಂತೆ ಬ್ರಿಟಿಷ್ ವೈಸ್‌ರಾಯ್ ಆದೇಶಿಸಿದ್ದರು. ಈ ಪ್ರಕಾರ ತಲಾ 2,000 ಜನರು ಇರುವ ಎರಡು ತುಕಡಿಗಳನ್ನು ಕಳುಹಿಸಲು ಮಣಿಪುರ ಸಂಸ್ಥಾನಕ್ಕೂ ಆದೇಶಿಸಲಾಗಿತ್ತು. ಮಣಿಪುರ ಸಂಸ್ಥಾನವು 4,000 ಕುಕಿ ಜನರನ್ನು ಯುದ್ಧಕ್ಕಾಗಿ ಕಳುಹಿಸುವಂತೆ ಕುಕಿ ಬುಡಕಟ್ಟು ಮಂಡಲಗಳ ಮುಖ್ಯಸ್ಥರಿಗೆ ಆದೇಶಿಸಿದ್ದರು. ಇದನ್ನು ಕುಕಿ ಬುಡಕಟ್ಟು ಮಂಡಲಗಳ ಮುಖ್ಯಸ್ಥರು ನಿರಾಕರಿಸುತ್ತಾರೆ. ಈ ಅಸಹಕಾರದ ವಿರುದ್ಧ 1919ರ ಮಾರ್ಚ್‌ನಲ್ಲಿ ಬ್ರಿಟಿಷ್‌ ಸೇನೆ ಮತ್ತು ಮೈತೇಯಿ ಸೇನೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತವೆ. ಕುಕಿ ಜನರ ಮನೆಗಳು ಮತ್ತು ಹೊಲಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಕುಕಿ ಬುಡಕಟ್ಟು ಜನರು ಮೈತೇಯಿ ಗ್ರಾಮಗಳ ಮೇಲೆ ದಾಳಿ ನಡೆಸುತ್ತಾರೆ. ಮೈತೇಯಿ ಜನರ ಮನೆ ಮತ್ತು ಹೊಲಗಳಿಗೆ ಬೆಂಕಿ ಹಚ್ಚುತ್ತಾರೆ. ಇಂತಹ ಪರಸ್ಪರ ದಾಳಿಗಳು 1920ರವರೆಗೂ ಹಲವು ಬಾರಿ ಪುನರಾವರ್ತನೆಯಾಗುತ್ತವೆ. ಆನಂತರ ದಾಳಿಗಳು ನಿಲ್ಲುತ್ತವೆ ಎಂದು ಬ್ರಿಟಿಷ್ ಅಧಿಕಾರಿಗಳು ತಮ್ಮ ವೈಸ್‌ರಾಯ್‌ಗೆ ಸಲ್ಲಿಸಿದ ವರದಿಗಳಲ್ಲಿ ವಿವರಿಸಿದ್ದಾರೆ ಎಂದು ಎಸ್‌.ಎಂ.ಎ.ಡಬ್ಲ್ಯು ಷಿಸ್ತಿ ಅವರು ತಮ್ಮ ‘ಕುಕಿ ಅಪ್‌ರೈಸಿಂಗ್‌ ಇನ್ ಮಣಿಪುರ್:1919–20’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಎರಡೂ ಸಮುದಾಯಗಳು ಪರಸ್ಪರರ ಮೇಲೆ ದಾಳಿ ನಡೆಸುವಾಗ ಈಗಲೂ ಮನೆ ಮತ್ತು ಹೊಲಗಳಿಗೆ ಬೆಂಕಿ ಹಚ್ಚುವ ವಿಧಾನವನ್ನೇ ಪ್ರಧಾನವಾಗಿ ಬಳಸುತ್ತಿವೆ.

ಬ್ರಿಟಿಷರು ಮೈತೇಯಿಗಳನ್ನೂ ಪರಿಶಿಷ್ಟ ಪಂಗಡ ಎಂದೇ ಕರೆದಿದ್ದರು. 1948–49ರಲ್ಲಿ ಮಣಿಪುರ ಸಂಸ್ಥಾನವು ಭಾರತದೊಂದಿಗೆ ವಿಲೀನವಾದ ನಂತರ ಮೈತೇಯಿಗಳನ್ನು ಪರಿಶಿಷ್ಟ ಪಂಗಡದಿಂದ ಹೊರಗಿಡಲಾಯಿತು. ಪರಿಶಿಷ್ಟ ಪಂಗಡಗಳಿಗೆ ಅರಣ್ಯ ಪ್ರದೇಶಗಳ ಒಡೆತನದ ಹಕ್ಕನ್ನು ನೀಡುವ ಸಂವಿಧಾನದ ಆರು ಮತ್ತು ಎಂಟನೇ ಪರಿಚ್ಛೇದದಲ್ಲಿ ಮಣಿಪುರವನ್ನು ಸೇರಿಸಲಾಯಿತು. ಇದರಿಂದ ಮಣಿಪುರದ ಅರಣ್ಯ ಪ್ರದೇಶಗಳಲ್ಲಿ ಭೂಮಿ ಖರೀದಿಸುವ ಹಕ್ಕನ್ನು ಮೈತೇಯಿಗಳು ಕಳೆದುಕೊಂಡರು. ಆಗ ಮೈತೇಯಿ ಜನಸಂಖ್ಯೆಗೆ ಅಗತ್ಯವಿದ್ದುದ್ದಕ್ಕಿಂತ ಹೆಚ್ಚು ಭೂಮಿ ಇಂಫಾಲ್‌ ಕಣಿವೆ ಪ್ರದೇಶದಲ್ಲೇ ಇತ್ತು. ಈಗ ಮೈತೇಯಿ ಜನರ ಸಂಖ್ಯೆಯೂ ಏರಿಕೆಯಾಗಿದ್ದು, ಭೂಮಿಯ ಕೊರತೆ ಉಂಟಾಗಿದೆ. ಹೀಗಾಗಿ ತಮಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಿ, ಆಗ ನಾವೂ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಖರೀದಿಸಬಹುದು ಎಂಬುದು ಮೈತೇಯಿ ಜನರ ಬೇಡಿಕೆ. ಹೀಗೆ ಮಾಡಿದರೆ, ತಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂಬುದು ಕುಕಿ ಜನರ ಪ್ರತಿರೋಧ.

ಹಿಂದೊಮ್ಮೆ ಒಂದೇ ಜನಾಂಗಕ್ಕೆ ಈ ಸಮುದಾಯಗಳು ಸೇರಿದ್ದವು. ಈಗ ಮೈತೇಯಿಗಳು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದರೆ, ಕುಕಿಗಳು ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದಾರೆ. ಎರಡೂ ಸಮುದಾಯಗಳು ಈಗ ಬೇರೆ–ಬೇರೆ ಧರ್ಮವನ್ನು ಅನುಸರಿಸುತ್ತಿರುವುದೂ, ಕಲಹ ದೊಡ್ಡದಾಗಲು ಕಾರಣವಾಗಿದೆ. ರಾಜಕೀಯ ಆಯಾಮ ಪಡೆದುಕೊಂಡಿದೆ.
ರಮ್‌ಜಾವ್‌ ಚಚೌಕ್‌, ಜಾಮಿಯಾ ಮಿಲಿಯಾ ವಿ.ವಿಯಲ್ಲಿ ಮಾನವಶಾಸ್ತ್ರ ಸಂಶೋಧನಾ ವಿದ್ಯಾರ್ಥಿ

ಹಿಂಸಾಚಾರದ ಸುತ್ತ...

ಮೆರವಣಿಗೆ...

ಮೇ 3: ಆಲ್‌ ಟ್ರೈಬಲ್‌ ಸ್ಟೂಡೆಂಟ್‌ ಯೂನಿಯನ್‌ ಆಫ್‌ ಮಣಿಪುರವು (ಎಟಿಎಸ್‌ಯುಎಂ) ರಾಜ್ಯದಾದ್ಯಂತ ಟ್ರೈಬಲ್‌ ಸಾಲಿಡಾರಿಟಿ ಮಾರ್ಚ್‌ ನಡೆಸಲು ಕರೆ ನೀಡಿತ್ತು. ಇದಕ್ಕೆ ಸುಮಾರು 60 ಸಾವಿರ ಮಂದಿ ಸೇರಿದ್ದರು. ರ್‍ಯಾಲಿಯ ವೇಳೆಯಲ್ಲಿ ತೋರ್ಬಂಗ್‌ ಹಾಗೂ ಚುರಾಚಂದ್‌ಪುರ ಪ್ರದೇಶದಲ್ಲಿ ಗಲಭೆ ಉಂಟಾಯಿತು. 11 ಮಂದಿ ಗಾಯಗೊಂಡರು, ಕಾಂಗ್ಪೋಕಿ ಜಿಲ್ಲೆಯಲ್ಲಿ ಗುಂಡೇಟಿಗೆ ಇಬ್ಬರು ಮೃತಪಟ್ಟರು. ಪ್ರತಿಭಟನೆ ನಡೆಸಿದವರು ನಿಷೇಧಿತ ಕುಕಿ ಬಂಡುಕೋರರು ಎಂಬ ವದಂತಿ ಹಬ್ಬಿತು

ಬೆಂಕಿ ಹಚ್ಚಿದ ಸುಳ್ಳು ಸುದ್ದಿಗಳು

ಮೇ 4–8: ಕುಕಿಗಳು ಮೈತೇಯಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬಂತಹ ಸುಳ್ಳು ಸುದ್ದಿಗಳು ಮತ್ತು ತಿರುಚಲಾದ ವಿಡಿಯೊಗಳು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾದವು. ಇದು ಹಿಂಸಾಚಾರ ಹೆಚ್ಚಲು ಕಾರಣವಾಯಿತು. ಆರು ಜಿಲ್ಲೆಗಳಲ್ಲಿ ಮಾತ್ರವಿದ್ದ ಗಲಭೆಯು ಇಂಫಾಲ್‌ಗೂ ಹಬ್ಬಿತು. ರಾಜ್ಯದಾದ್ಯಂತ ಅಂತರ್ಜಾಲವನ್ನು ಬಂದ್‌ ಮಾಡಲಾಯಿತು. ಪರಿಸ್ಥಿತಿ ಕೈ ಮೀರಿದರೆ, ಕಂಡಲ್ಲಿ ಗುಂಡು ಹಾರಿಸಲು ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿತು

ಪ್ರಧಾನಿ ಮೌನ

ಮೇ 9–14: ಮಣಿಪುರದ ಗಲಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ಆಮ್‌ ಆದ್ಮಿ ಪಕ್ಷವು ಪ್ರಶ್ನಿಸಿತು. ರಾಜ್ಯದಲ್ಲಿ ಶಾಂತಿ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ಕಾಂಗ್ರೆಸ್‌ ದೂರಿತು. ಭದ್ರತಾ ಪಡೆಗಳಿಂದ, ಪೊಲೀಸ್‌ ಠಾಣೆಗಳಿಂದ ಶಸ್ತ್ರಾಸ್ತ್ರಗಳನ್ನು ಕದಿಯಲು ಆರಂಭಿಸಲಾಯಿತು

l ಬಿರೇನ್‌ ಸಿಂಗ್‌ ಅವರು ಬುಡಕಟ್ಟು ಸಮುದಾಯವನ್ನು ರಕ್ಷಿಸುವಲ್ಲಿ ಸಂಪೂರ್ಣ ಸೋತಿದ್ದಾರೆ. ಆದ್ದರಿಂದ ನಮ್ಮನ್ನು ಮಣಿಪುರದಿಂದ ಬೇರ್ಪಡಿಸಿ, ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಮಾಡಿಕೊಡುವಂತೆ ಎಲ್ಲ 10 ಮಂದಿ ಕುಕಿ ಸಮುದಾಯದ ಶಾಸಕರು ಹಾಗೂ ಇಬ್ಬರು ಸಂಸದರು ಮನವಿ ಮಾಡಿದರು

ಶಾ–ಬಿರೇನ್‌ ಭೇಟಿ: ಬದಲಾದ ಆರೋಪ

l ಮೇ 14ರಂದು ಬಿರೇನ್‌ ಸಿಂಗ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು. ಮಾರನೆಯ ದಿನ ಪ್ರತಿಕಾ ಹೇಳಿಕೆ ನೀಡಿದ ಬಿರೇನ್‌ ಸಿಂಗ್‌ ಅವರು, ‘ಕುಕಿ ಬಂಡುಕೋರರು ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಮಣಿಪುರದಲ್ಲಿ ದಾಳಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು

l ಕುಕಿ ಬಂಡುಕೋರರೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದು ಮಾಡುವಂತೆ ನಾಲ್ವರು ಬಿಜೆಪಿ ಶಾಸಕರು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದರು

l ‘ಶಾಂತಿ ಕಾಪಾಡಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಕುಕಿ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಆರೋಪಿಸಿದರು

ಮಣಿಪುರಕ್ಕೆ ಶಾ ಭೇಟಿ

ಮೇ 29–ಜೂನ್‌ 22

l ಗೃಹ ಸಚಿವ ಅಮಿತ್‌ ಶಾ ಅವರು ಮಣಿಪುರಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಮಣಿಪುರದ ಕುರಿತು ಪ್ರಸ್ತಾಪ ಮಾಡದೇ ಇದ್ದುದ್ದಕ್ಕೆ ಜನರು ರೇಡಿಯೊವನ್ನು ಒಡೆದು ಹಾಕಿ ಪ್ರತಿಭಟನೆ ನಡೆಸಿದರು

l ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ಹಲವು ಎನ್‌ಜಿಒಗಳು, ಮಣಿಪುರದ ಬಿಜೆಪಿ ಶಾಸಕ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು, ವಸ್ತುಸ್ಥಿತಿ ವರದಿ ನೀಡುವಂತೆ ಮಣಿಪುರ ಸರ್ಕಾರಕ್ಕೆ ಸೂಚಿಸಿತು. ಹಿಂಸಾಚಾರದಲ್ಲಿ 98 ಮಂದಿ ಮೃತಪಟ್ಟು, 310 ಮಂದಿ ಗಾಯಗೊಂಡಿದ್ದಾರೆ ಎಂದು ಮಣಿಪುರ ಸರ್ಕಾರ ಹೇಳಿತು

ಸರ್ವಪಕ್ಷಗಳ ಸಭೆ

ಜೂನ್‌ 24–30

l ಗೃಹ ಸಚಿವ ಅಮಿತ್‌ ಶಾ ಅವರು ಜೂನ್‌ 24ರಂದು ಸರ್ವಪಕ್ಷ ಸಭೆ ನಡೆಸಿದರು

l ಜೂನ್‌ 29ಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎರಡು ದಿನಗಳ ಮಣಿಪುರ ಭೇಟಿ ಮಾಡಿದರು. ‘ಕಾಂಗ್ರೆಸ್‌ ಒಂದು ಬೇಜವಾಬ್ದಾರಿ ಪಕ್ಷ’ ಎಂದು ಬಿಜೆಪಿ ಆರೋಪಿಸಿತು

ಬೆತ್ತಲೆ ಮೆರವಣಿಗೆ: ವಿಡಿಯೊ ಬಹಿರಂಗ

ಜುಲೈ 19–28: ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಲೈಂಗಿಕ ಕಿರುಕುಳ ನೀಡಿದ ವಿಡಿಯೊವೊಂದು ಜುಲೈ 19ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಯಿತು. ಈ ಘಟನೆಯು ದೇಶದ ಜನರನ್ನು ಬೆಚ್ಚಿಬೀಳಿಸಿತು. ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎನ್ನುವುದೂ ಬೆಳಕಿಗೆ ಬಂದಿತು. ಈ ಘಟನೆಯು ಮೇ 4ರಂದೇ ನಡೆದಿತ್ತು. ಈ ಬಗ್ಗೆ ಸುಪ್ರೀಂ ಕೊರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು. ‘ಮಹಿಳೆಯನ್ನು ಹಿಂಸಾಚಾರಕ್ಕಾಗಿ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಅಭಿಪ್ರಾಯ
ಪಟ್ಟರು. ಸದ್ಯ ಈ ಕೃತ್ಯದ ತನಿಖೆಯನ್ನು ಸಿಬಿಐಗೆ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.