ADVERTISEMENT

ಆಳ –ಅಗಲ: ಬಿಜೆಪಿಯೇತರ ಪಕ್ಷಗಳಿರುವ ರಾಜ್ಯ ಸರ್ಕಾರಗಳಿಗೆ ರಾಜ್ಯಪಾಲರ ಕಿರುಕುಳ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
   

ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಣ ತಿಕ್ಕಾಟ ತಾರಕ್ಕೇರುತ್ತಿದೆ. ಕೇರಳ, ತಮಿಳುನಾಡು, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಇರುವ ಸರ್ಕಾರಗಳು ಆಯಾ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ದೆಹಲಿ, ಮಹಾರಾಷ್ಟ್ರದಲ್ಲಿ ನಡೆದ ಇಂತಹ ಬೆಳವಣಿಗೆಗಳ ಸಂದರ್ಭಗಳಲ್ಲಿ ರಾಜ್ಯಪಾಲರು ‘ರಾಜಕೀಯ’ ಮಾಡಬಾರದು ಎಂಬಂಥ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ ನೀಡಿದೆ.

***

ಕೇಂದ್ರದಲ್ಲಿ ಇರುವ ಸರ್ಕಾರದ ಶಿಫಾರಸಿನ ಮೇಲೆ ರಾಷ್ಟ್ರಪತಿಯವರು ರಾಜ್ಯಪಾಲರನ್ನು ನೇಮಿಸುತ್ತಾರೆ. ರಾಜ್ಯ ಸರ್ಕಾರಗಳನ್ನು ಆಯಾ ರಾಜ್ಯದ ಜನರು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಯಾರಿಗೆ ಹೆಚ್ಚು ಅಧಿಕಾರ ಇರಬೇಕು ಎನ್ನುವ ಚರ್ಚೆ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಾಜ್ಯ ಸರ್ಕಾರಗಳಿಗೇ ಹೆಚ್ಚು ಅಧಿಕಾರ ಎನ್ನುವುದನ್ನು ಸಂವಿಧಾನವೂ ಹೇಳಿದೆ. ಹಾಗಾದರೆ, ರಾಜ್ಯಪಾಲರ ಅಗತ್ಯ ಏನಿದೆ? ರಾಜ್ಯಗಳಲ್ಲಿ ಸರ್ಕಾರಗಳು ಇರುವಾಗ ಕೇಂದ್ರ ಸರ್ಕಾರದ ‘ಅಂಶ’ದಂತಿರುವ ರಾಜ್ಯಪಾಲರ ಅಗತ್ಯ ಏನು? ಎಂಬಂಧ ಚರ್ಚೆಗಳೂ ಪ್ರಾರಂಭವಾಗಿವೆ.

ADVERTISEMENT

ರಾಜ್ಯಗಳು ‘ಫೆಡರಲ್‌’ ಆಗಿರಬೇಕೊ ಅಥವಾ ಅವು ‘ಯೂನಿಯನ್‌’ ಆಗಿರಬೇಕೊ ಎನ್ನುವಲ್ಲಿ ರಾಜ್ಯಪಾಲರ ಹುದ್ದೆಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಸಂವಿಧಾನದಲ್ಲಿ ಹೇಳಲಾಗಿರಯವ ‘ಯೂನಿಯನ್‌’ ಪದವನ್ನು ಸರಿಯಾಗಿ ಅರ್ಥೈಸದ ಹೊರತು ಅಥವಾ ರಾಜ್ಯಗಳು ‘ಫೆಡೆರಲ್‌’ ಆಗದ ಹೊರತು ಮುಂದೊಂದು ದಿನ ಸಮಸ್ಯೆಗಳನ್ನು ದೇಶ ಎದುರಿಸುತ್ತದೆ ಎಂಬ ವಿಚಾರ ಸಂವಿಧಾನ ಕರಡು ರಚನಾ ಸಭೆಯಲ್ಲಿಯೇ ಚರ್ಚಿತವಾಗಿತ್ತು. ಸಂವಿಧಾನದ 1ನೇ ವಿಧಿಯ ಕುರಿತ ಚರ್ಚೆಯ ವೇಳೆ,  ಕೆಲವು ಮಹತ್ವದ ವಿಷಯಗಳು ಪ್ರಸ್ತಾಪವಾಗಿದ್ದವು. ರಾಜ್ಯಗಳು ‘ಫೆಡರಲ್‌’ ಆಗಿರಬೇಕು ಎಂಬ ಚರ್ಚೆ ನಡೆದಿದೆ. 1ನೇ ವಿಧಿಯಲ್ಲಿ ಹೇಳಿರುವಂತೆ ‘ರಾಜ್ಯ’ ಎಂದು ಸಂಬೋಧಿಸದೆ, ಅವುಗಳನ್ನು //‘ಪ್ರಾಂತ್ಯ’// ಎಂದು ಕರೆಯಬೇಕು ಎಂದು ಮದ್ರಾಸ್‌ ಪ್ರಾಂತ್ಯದ ಸದಸ್ಯರಾಗಿದ್ದ ಮೆಹಬೂಬ್‌ ಅಲಿಭಾಗ್‌ ಸಾಹಿಬ್‌ ಬಹದ್ದೂರ್‌ ಅವರು ತಿದ್ದುಪಡಿ ಸೂಚಿಸಿದ್ದರು.

ಸಾಹಿಬ್‌ ಬಹದ್ದೂರ್‌ ಏನು ಹೇಳಿದ್ದರು?: ‘ಕರಡು ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಸರ್ಕಾರವು ‘ಫೆಡರಲ್‌’ ಆಗಿರಬೇಕು ಹೊರತು ‘ಯೂನಿಟರಿ’ ಸ್ವರೂಪದ್ದಲ್ಲ. ಆದ್ದರಿಂದ ಸರ್ಕಾರವನ್ನು ಸಂಯುಕ್ತ ಸರ್ಕಾರ ಎಂದೂ ಕರೆಯಬಹುದು ಅಥವಾ ಒಕ್ಕೂಟ ಸರ್ಕಾರ ಅಂತಲೂ ಕರೆಯುಬಹುದು ಎಂದು ಡಾ. ಅಂಬೇಡ್ಕರ್‌ ಅವರು ಹೇಳಿದ್ದಾರೆ. ಇನ್ನೂ ಮುಂದುವರಿದು, ‘ಒಕ್ಕೂಟ’ ಎಂದೇ ಕರೆಯಬೇಕು. ಇಲ್ಲವಾದರೆ, ರಾಜ್ಯಗಳು ಸಿಡಿದು, ಬೇರ್ಪಟ್ಟು ಹೋಗಬಹುದು ಎಂದೂ ಅವರು ಹೇಳಿದ್ದಾರೆ’.

‘ಯೂನಿಯನ್‌’ ಎಂಬ ಪದಕ್ಕೆ ಅಂಥ ಮಹತ್ವವೇನಿಲ್ಲ ಎನ್ನುವುದು ಅಂಬೇಡ್ಕರ್‌ ಅವರ ವಾದವಾದರೆ, ನಾವೇಕೆ ‘ಫೆಡರಲ್‌’ ಎನ್ನುವ ಸೂಕ್ತವಾದ ಪದವನ್ನು ಬಳಸಬಾರದು? ‘ಯೂನಿಯನ್‌’ ಪದವನ್ನೇ ಬಳಸಿದೆವು ಎಂದಾದರೆ, ಮುಂದೊಂದು ದಿನ ಅಧಿಕಾರದ ಲಾಲಸೆ ಇರುವ ಸರ್ಕಾರವೊಂದು ಅಧಿಕಾರಕ್ಕೆ ಬಂದರೆ, ಅದು ಇಡೀ ವ್ಯವಸ್ಥೆಯನ್ನು ಏಕಾಧಿಪತ್ಯಕ್ಕೆ ತಳ್ಳಬಹುದು. ಜೊತೆಗೆ, ಆ ಸರ್ಕಾರವು ಫ್ಯಾಸಿಸ್ಟ್‌ ಆಗಬಹುದು ಹಾಗೂ ನಿರಂಕುಶವಾಗಬಹುದು. ಆದ್ದರಿಂದ, ‘ಫೆಡರಲ್‌’ ಅನ್ನುವ ಪದವನ್ನೇ ಬಳಸಬೇಕು’ ಎಂಬುದು ಅವರ ಪ್ರತಿಪಾದನೆಯಾಗಿತ್ತು. 

ಜತೆಗೆ, ರಾಜ್ಯ ಮತ್ತು ಒಕ್ಕೂಟ ಸರ್ಕಾರದ ಸಂಬಂಧ ಹಾಗೂ ಅಧಿಕಾರ ಹಂಚಿಕೆಯನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದಲ್ಲಿ, ರಾಜ್ಯ ಸರ್ಕಾರಗಳ ಅಧಿಕಾರ ಮೊಟಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಅಂಬೇಡ್ಕರ್‌ ಅವರು ಈ ತಿದ್ದುಪಡಿಯನ್ನು ಒಪ್ಪುವುದಿಲ್ಲ. ತಿದ್ದುಪಡಿಯನ್ನು ಮತಕ್ಕೆ ಹಾಕಲಾಗುತ್ತದೆ. ಮತದಲ್ಲಿ ತಿದ್ದುಪಡಿಯ ಪ್ರಸ್ತಾವವು ಸೋಲುತ್ತದೆ.

ಆದರೆ, ಆ ತಿದ್ದುಪಡಿಗೆ ಸೋಲಾದ ಹಲವು ದಶಕಗಳ ನಂತರದಲ್ಲಿ ರಾಜ್ಯ ಸರ್ಕಾರಗಳು ಮತ್ತು ರಾಜ್ಯದಲ್ಲಿ ಕೇಂದ್ರದ ಪ್ರತಿನಿಧಿಯಂತಿರುವ ರಾಜ್ಯಪಾಲರ ಮಧ್ಯೆ ಸಂಘರ್ಷ ತೀವ್ರವಾಗುತ್ತದೆ. ರಾಜ್ಯ ಸರ್ಕಾರಗಳು ದೈನಂದಿನ ಕಾರ್ಯಗಳನ್ನು ಮಾಡದಿರುವ ಮಟ್ಟಿಗೆ ಅವುಗಳನ್ನು ಕಟ್ಟಿಹಾಕಲು ರಾಜ್ಯಪಾಲರ ಅಧಿಕಾರವು ಬಳಕೆಯಾಗುತ್ತಿದೆ.

ಇಕ್ಕಟ್ಟಿಗೆ ಸಿಲುಕಿಸುವಷ್ಟು ಇದೆ ಅಧಿಕಾರ

ರಾಜ್ಯಪಾಲರೇ ರಾಜ್ಯ ಸರ್ಕಾರದ ಮುಖ್ಯಸ್ಥ. ರಾಜ್ಯದ ಎಲ್ಲಾ ಕಾಯ್ದೆ–ಕಟ್ಟಳೆಗಳು, ನೇಮಕಾತಿ ಆದೇಶಗಳು, ವಿವಿಧ ಆದೇಶಗಳು ಅನುಷ್ಠಾನ ಯೋಗ್ಯವಾಗುವುದು ರಾಜ್ಯಪಾಲರ ಅಂಕಿತ ಬಿದ್ದನಂತರವೇ. ಇವೆಲ್ಲವೂ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟದ ಒಪ್ಪಿಗೆ ಪಡೆದು, ನಂತರದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿ ಅನುಮೋದನೆ ನೀಡಿದ ಬಳಿಕವೇ ರಾಜ್ಯಪಾಲರ ಬಳಿಗೆ ಬರುತ್ತವೆ. ಅವುಗಳಿಗೆ ಅಂಕಿತ ಹಾಕುವುದು ರಾಜ್ಯಪಾಲರ ಕರ್ತವ್ಯ (ಸಂವಿಧಾನದ 200ನೇ ವಿಧಿ).

ಮೇಲ್ನೋಟಕ್ಕೆ ರಾಜ್ಯಾಪಾಲರಿಗೆ ಏನೂ ಅಧಿಕಾರವಿಲ್ಲ, ಅವರು ರಬ್ಬರ್ ಸ್ಟ್ಯಾಂಪ್‌ ಎಂಬಂತೆ ಭಾಸವಾಗುತ್ತದೆ. ಆದರೆ, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ರಾಜ್ಯದ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವಷ್ಟು ಅಧಿಕಾರ ರಾಜ್ಯಪಾಲರಿಗೆ ಇದೆ. ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ತಮ್ಮ ಬಳಿಗೆ ಬಂದ ಮಸೂದೆಗಳನ್ನು ವಿಲೇವಾರಿ ಮಾಡದೆ, ವರ್ಷಗಳ ಕಾಲ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. (ತಮಿಳುನಾಡಿನ ನೀಟ್‌ ಮಸೂದೆ, ಕೇರಳದ ವಿಶ್ವವಿದ್ಯಾಲಯದ ತಿದ್ದುಪಡಿ ಕಾನೂನು ಮಸೂದೆಗಳು ಇದಕ್ಕೆ ಸ್ಪಷ್ಟ ಉದಾಹರಣೆ). ಇದೇ ಆಯಾ ರಾಜ್ಯಗಳ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷಕ್ಕೆ ಕಾರಣವಾಗಿದೆ.

ರಾಜ್ಯಪಾಲರು ಇಂತಿಷ್ಟೇ ಸಮಯದಲ್ಲಿ ಮಸೂದೆಗಳನ್ನು ವಿಲೇವಾರಿ ಮಾಡಬೇಕು ಎಂದು ಸಂವಿಧಾನವು ಕಾಲಮಿತಿ ನಿಗದಿ ಮಾಡಿಲ್ಲ. ಈ ಸಮಸ್ಯೆಯನ್ನು ತೊಡೆದುಹಾಕಲು, ನೀವೇ ಕಾಲಮಿತಿಯನ್ನು ನಿಗದಿ ಮಾಡಿ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.

ಜಾರ್ಖಂಡ್‌

ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರವಿದೆ. ಈ ಹಿಂದೆ ರಮೇಶ್ ಬೈಸ್‌ ಅವರು ರಾಜ್ಯಪಾಲರಾಗಿದ್ದರು. ಈಗ ಸಿ.ಪಿ.ರಾಧಾಕೃಷ್ಣನ್‌ ಅವರು ರಾಜ್ಯಪಾಲರಾಗಿದ್ದಾರೆ. 20 ಮಸೂದೆಗಳಿಗೆ ಬೈಸ್‌ ಅವರು ಅಂಕಿತ ಹಾಕಲಿಲ್ಲ. ಆದರೆ, ಅಧಿಕಾರ ದುರ್ಬಳಕೆ ಆರೋಪದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ವಿರುದ್ಧ ಕ್ರಮ ತೆಗೆದುಕೊಳ್ಳುಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸನ್ನು ಬೈಸ್‌ ಅವರು ಕಾರ್ಯಗತ ಮಾಡಿರಲಿಲ್ಲ. ಅದರ ಬೆನ್ನಲ್ಲೇ ಬೈಸ್‌ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಈಗ ರಾಧಾಕೃಷ್ಣನ್‌ ಅವರೂ ಬೈಸ್‌ ಅವರ ತಂತ್ರವನ್ನು ಮುಂದುವರಿಸಿದ್ದಾರೆ.

ತಮಿಳುನಾಡು

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ. ಆರ್‌.ಎನ್‌. ರವಿ ಇಲ್ಲಿನ ರಾಜ್ಯಪಾಲರು. ರವಿ ಅಧಿಕಾರವಹಿಸಿಕೊಂಡ ದಿನದಿಂದಲೂ ಅವರ ಮತ್ತು  ಸರ್ಕಾರದ ಮಧ್ಯ ತಿಕ್ಕಾಟ ನಡೆಯುತ್ತಲೇ ಇದೆ. 19 ಮಸೂದೆಗಳು ಮತ್ತು 20ಕ್ಕೂ ಹೆಚ್ಚು ಸೂಚನೆಗಳು ರಾಜ್ಯಪಾಲರ ಬಳಿ ವಿಲೇವಾರಿಯಾಗದೇ ಉಳಿದಿವೆ. ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಬೇಕಿದ್ದ ಭಾಷಣವನ್ನು ಸರ್ಕಾರ ಸಿದ್ಧಪಡಿಸಿತ್ತು. ಆದರೆ, ಆ ಭಾಷಣದಲ್ಲಿದ್ದ ಹಲವು ಅಂಶಗಳನ್ನು ಕೈಬಿಟ್ಟು ರವಿ ಅವರು ತಮ್ಮದೇ ಭಾಷಣವನ್ನು ಓದತೊಡಗಿದರು. ಇದರ ವಿರುದ್ಧ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ತಕ್ಷಣವೇ ನಿರ್ಣಯವನ್ನು ಮಂಡಿಸಲು ಆರಂಭಿಸಿದರು.

ಕೇರಳ

ರಾಜ್ಯ ಸರ್ಕಾರದ ವಿಶ್ವವಿದ್ಯಾಲಯ ನಿಯಮಗಳ ತಿದ್ದುಪಡಿ ಮಸೂದೆ, ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಮತ್ತು ಕೇರಳ ಲೋಕಾಯುಕ್ತ ಮಸೂದೆಗಳನ್ನು ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್‌ ಅವರು ಅಂಕಿತ ಹಾಕದೇ ಮೂರು ವರ್ಷಗಳಿಂದ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಇದಲ್ಲದೇ ಇನ್ನೂ ಐದು ಮಸೂದೆಗಳಿಗೆ ಅಂಕಿತ ಹಾಕದೆ, ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಇದು ಆರಿಫ್‌ ಮತ್ತು ಕೇರಳ ಸರ್ಕಾರದ ನಡುವಣ ಜಟಾಪಟಿಗೆ ಕಾರಣವಾಗಿದೆ. ರಾಜ್ಯಪಾಲರ ನಡೆಯ ವಿರುದ್ಧ ಕೇರಳ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದೆ.

ತೆಲಂಗಾಣ

ತೆಲಂಗಾಣ ರಾಜ್ಯಪಾಲೆ ತಮಿಳ್‌ ಇಸೈ ಸೌಂದರರಾಜನ್‌ ಮತ್ತು ರಾಜ್ಯದ ಬಿಆರ್‌ಎಸ್‌ ಸರ್ಕಾರದ ಸಂಬಂಧ ಉತ್ತಮವಾಗೇನೂ ಇಲ್ಲ. ಇಲ್ಲಿ ಮಸೂದೆಗಳು, ಆದೇಶಗಳನ್ನು ತಡೆಹಿಡಿಯುವಂತಹ ಸಂಘರ್ಷ ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ಇಲ್ಲ. ಆದರೆ, ಸರ್ಕಾರದ ನಡೆ ಮತ್ತು ಕಾರ್ಯವೈಖರಿಯನ್ನು ತಮಿಳ್‌ ಇಸೈ ಅವರು ಹಲವು ಬಾರಿ ಬಹಿರಂಗವಾಗಿಯೇ ಟೀಕಿಸಿದ್ದಾರೆ.‌ ಮಹಿಳೆ ಎಂಬ ಕಾರಣಕ್ಕೆ ತಮ್ಮನ್ನು ಸರ್ಕಾರವು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ತಮಿಳ್‌ ಇಸೈ ಅವರು ಹಲವು ಬಾರಿ ಹೇಳಿದ್ದಾರೆ. ರಾಜ್ಯಪಾಲರು ಪಕ್ಷವೊಂದರ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ ಎಂದು ಬಿಆರ್‌ಎಸ್‌ ಹೇಳಿತ್ತು.

ಪಂಜಾಬ್‌

ಪಂಜಾಬ್‌ನಲ್ಲಿ ಎಎಪಿ ಸರ್ಕಾರವಿದ್ದು, ಬನ್ವರಿಲಾಲ್‌ ಪುರೋಹಿತ್ ಅವರು ರಾಜ್ಯಪಾಲರಾಗಿದ್ದಾರೆ. ಹಲವು ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿದ ಕಾರಣ ಸಂಘರ್ಷ ಆರಂಭವಾಗಿತ್ತು. ಉಚಿತ ವಿದ್ಯುತ್ ಯೋಜನೆಗೆ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಇದರ ವಿರುದ್ಧ ಸರ್ಕಾರ ಬಹಿರಂಗವಾಗಿ ಟೀಕೆ ಮಾಡಿತ್ತು. ಅದರ ಬೆನ್ನಲ್ಲೇ ಪುರೋಹಿತ್ ಅವರು ಯೋಜನೆಗೆ ಅನುಮೋದನೆ ನೀಡಿದ್ದರು. ಇನ್ನೂ ಹಲವು ಮಸೂದೆಗಳಿಗೆ ಅಂಕಿತ ಹಾಕದೇ ಅವರು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಅದರ ವಿರುದ್ಧ ಸರ್ಕಾರವು ಈಚೆಗಷ್ಟೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದರ ಮರುದಿನವೇ ಪುರೋಹಿತ್ ಅವರು ತಮ್ಮ ಬಳಿ ಇದ್ದ ಎಲ್ಲಾ ಮಸೂದೆಗಳಿಗೆ ಸಹಿ ಮಾಡಿದ್ದರು.

ಪಶ್ಚಿಮ ಬಂಗಾಳ

ಇಲ್ಲಿ ಟಿಎಂಸಿ ಸರ್ಕಾರವಿದ್ದು, ಈ ಹಿಂದೆ ಜಗದೀಪ್‌ ಧನಕರ್ ಅವರು ರಾಜ್ಯಪಾಲರಾಗಿದ್ದರು. ಧನಕರ್ ಮತ್ತು ಸರ್ಕಾರದ ಸಂಘರ್ಷಗಳು ದೇಶದ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದವು. ಈಗ ಸಿ.ವಿ. ಆನಂದ್‌ ಬೋಸ್‌ ಅವರು ರಾಜ್ಯಪಾಲರಾಗಿದ್ದಾರೆ. ರಾಜ್ಯಪಾಲ ಮತ್ತು ಸರ್ಕಾರದ ಮಧ್ಯೆ ಇಲ್ಲಿ ಆಡಳಿತಾತ್ಮಕ ಗುದ್ದಾಟ ನಡೆಯುತ್ತಿದೆ. ಕುಲಪತಿಗಳ ನೇಮಕದ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಮಸೂದೆಗೆ ಆನಂದ್‌ ಅವರು ಅಂಕಿತ ಹಾಕಿಲ್ಲ. ಜೊತೆಗೆ, ಇನ್ನು ಹಲವು ಮಸೂದೆಗಳಿಗೆ ಅಂಕಿತ ಹಾಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.