ADVERTISEMENT

ಸಣ್ಣ ಅಂಗಡಿಯವರ ದೊಡ್ಡ ಇಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 7 ಮೇ 2020, 4:36 IST
Last Updated 7 ಮೇ 2020, 4:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊರೊನಾ ಕಾಲ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಸಣ್ಣ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದವರ ಸಂಕಷ್ಟ ದುಪ್ಪಟ್ಟು. ವರಮಾನ ಇಲ್ಲ ಎಂಬುದು ಒಂದು ಸಮಸ್ಯೆಯಾದರೆ, ಅಂಗಡಿ ಬಾಡಿಗೆ, ವಿದ್ಯುತ್‌ ಶುಲ್ಕವನ್ನು ಲಾಕ್‌ಡೌನ್‌ ಅವಧಿಗೂ ಅವರು ಕಟ್ಟಬೇಕಿದೆ. ಈಗ ಅಂಗಡಿ ತೆರೆಯಬಹುದಾದರೂ ಹಿಂದಿನ ತಿಂಗಳ ಬಾಡಿಗೆ ಕಟ್ಟಿಯೇ ಅಂಗಡಿ ತೆರೆಯಿರಿ ಎಂದು ಕಟ್ಟಡದ ಮಾಲೀಕರು ಪಟ್ಟು ಹಿಡಿದ ಉದಾಹರಣೆಗಳಿವೆ. ಅದರ ಜತೆಗೆ, ಹೊಸ ಮಾಲು ಖರೀದಿಸಲು ಹಣ ಹೊಂದಿಸಬೇಕು. ಇಷ್ಟೆಲ್ಲ ಮಾಡಿದರೂ, ಜನರು ಅಂಗಡಿಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸಣ್ಣ ಅಂಗಡಿಗಳವರ ಆತಂಕವಾಗಿದೆ...

ಬದುಕೇ ಹೊಲಿಗೆ ಬಿಟ್ಟಿದೆ...: ಬಣ್ಣ ಬಣ್ಣದ ದಿರಿಸು ಹೊಲಿದುಕೊಟ್ಟು ಹೊಸ ಉಡುಗೆಯ ಸಂಭ್ರಮಕ್ಕೆ ಕಾರಣರಾಗುತ್ತಿದ್ದ ಟೈಲರ್‌ಗಳ ಬದುಕಿನ ಹೊಲಿಗೆಯನ್ನೇ ಲಾಕ್‌ಡೌನ್‌ ಬಿಡಿಸಿಬಿಟ್ಟಿದೆ. ತುಮಕೂರಿನ ಗಾಂಧಿನಗರದ ಪಿ. ಸರೋಜಾ ಅವರು 30 ವರ್ಷಗಳಿಂದ ಟೈಲರಿಂಗ್‌ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಮುಗಿದು ಅಂಗಡಿ ತೆರೆದರೂ ಅವರಲ್ಲಿಗೆ ಬಟ್ಟೆ ಹಿಡಿದುಕೊಂಡು ಯಾರೂ ಬಂದಿಲ್ಲ. ‘ಮ್ಯಾಚಿಂಗ್‌ ದಾರ, ಕ್ಯಾನ್‌ವಾಸ್‌, ಗುಂಡಿ, ಜಿಪ್‌, ರವಿಕೆಗೆ ಬೇಕಾದ ಲೈನಿಂಗ್‌ನ ಸಾಮಗ್ರಿಗಳು ಸಿಗುತ್ತಿಲ್ಲ. ನಮ್ಮ ಬದುಕೀಗ ಮೂರಾಬಟ್ಟೆಯಾಗಿದೆ’ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ನಮ್ಮಲ್ಲಿ ಹೊಸ ಬಟ್ಟೆ ಇಲ್ಲದೆ ಹಬ್ಬಗಳೇ ಇಲ್ಲ. ಆದರೆ, ಹಬ್ಬಗಳ ಸಂದರ್ಭದಲ್ಲಿಯೇ ಕೊರೊನಾ ವೈರಾಣು ವಕ್ಕರಿಸಿತು.‘ಲಾಕ್‌ಡೌನ್‌ ಅವಧಿಯಲ್ಲೇ ಯುಗಾದಿ, ರಂಜಾನ್, ಗುಡ್‌ಫ್ರೈಡೆ ಹಬ್ಬಗಳು ಬಂದು ಹೋಗಿವೆ. ಶುಭ ಸಮಾರಂಭಗಳು ರದ್ದಾಗಿವೆ. ಕೆಲಸ ಇಲ್ಲದಾಗಿದೆ’ ಎನ್ನುತ್ತಾರೆ ಮಂಗಳೂರಿನ ಟೈಲರ್ ರವೀಂದ್ರ.

ADVERTISEMENT

‘ಮಾಮೂಲಿ ದಿನಗಳಲ್ಲಿ ದಿನಕ್ಕೆ 15 ರಿಂದ 20 ಗಿರಾಕಿ ಬರುತ್ತಿದ್ದರು. ಈಗ ಒಬ್ಬರು ಬಂದರೆ ಹೆಚ್ಚು’ ಎಂದು ಚಿಕ್ಕಮಗಳೂರು ಬಸವನಹಳ್ಳಿಯ ಟೈಲರ್‌ ಲೋಕೇಶ್‌ ಹೇಳುತ್ತಾರೆ.

‘ಪುಣೆ, ಸೂರತ್‌ಗೆ ಹೋಗಿ ಬಟ್ಟೆ ತಂದು ವ್ಯಾಪಾರ ಮಾಡುತ್ತಿದ್ದೆವು. ಅಲ್ಲಿನ ಕಂಪನಿಗಳಿಗೆ ಮುಂಗಡ ಹಣ ನೀಡಿದ್ದೆವು. ಈಗ ಅಂಗಡಿ ತೆರೆದರೂ ಹೊರ ರಾಜ್ಯಗಳಿಂದಸಾಮಗ್ರಿ ಬಂದಿಲ್ಲ. ಲಕ್ಷದ ಲೆಕ್ಕದಲ್ಲಿ ಮಳಿಗೆ ಬಾಡಿಗೆ ನೀಡಬೇಕಿದೆ’ ಎಂದು ಅಳಲು ತೋಡಿಕೊಂಡರು ಶಿವಮೊಗ್ಗದ ದುರ್ಗಿಗುಡಿ ಇತಿಹಾಸ್ ಕಲೆಕ್ಷನ್ಸ್‌ನ ಮಾಲೀಕ ಅನಿಲ್‌.

ಲಾಕ್‌ಡೌನ್‌ ಸಡಿಲಿಕೆಯಾಗಿದೆ ನಿಜ. ಆದರೆ, ಜನರು ಓಡಾಟಕ್ಕೆ ಸಾರಿಗೆ ವ್ಯವಸ್ಥೆ ಎಲ್ಲಿದೆ?ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಗ್ರಾಮೀಣ ಜನರು ಇನ್ನೂ ನಗರ ಪ್ರದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಪ್ರವಾಸೋದ್ಯಮ ಸ್ತಬ್ಧವಾಗಿದ್ದು, ಹೋಂ ಸ್ಟೇ, ರೆಸಾರ್ಟ್‌ನವರು ದಿನಸಿ ಸಾಮಗ್ರಿ ಖರೀದಿಸುತ್ತಿಲ್ಲ ಎಂದು ಮಡಿಕೇರಿಯ ಸುಭಾಷ್‌ ಹೇಳುತ್ತಾರೆ. ಇದು ದಿಗ್ಬಂಧನದ ಇನ್ನೊಂದು ಪರಿಣಾಮ.

ಒಂದೂವರೆ ತಿಂಗಳು ಜನರು ಮನೆಯಲ್ಲೇ ಇದ್ದರು. ಯಾರಿಗೂ ದುಡಿಮೆ ಇಲ್ಲ. ಅವರ ಬಳಿಯಲ್ಲಿ ಇದ್ದ ಹಣವೂ ಖಾಲಿಯಾಗಿದೆ. ಹಾಗಾಗಿ, ಜನರು ಅಂಗಡಿಗಳತ್ತ ಮುಖ ಮಾಡುತ್ತಿಲ್ಲ ಎಂಬ ಚಿತ್ರಣ ಬಿಡಿಸಿಟ್ಟವರು ಹಾಸನದ ಬಟ್ಟೆ ಅಂಗಡಿಯ ಮಾಲೀಕ ವಸೀಂ. ‘ಒಂದೂವರೆ ತಿಂಗಳಿಂದ ದುಡಿಮೆ ಇಲ್ಲದ ಕಾರಣ ಜನರು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ. ಹಳೇ ಮಾಲು ಖಾಲಿಯಾಗುತ್ತಿಲ್ಲ. ಹೊಸ ಮಾಲು ಬರುತ್ತಿಲ್ಲ. ಮಳಿಗೆ ತೆರೆಯದೇ ಇದ್ದರೂ ಬಾಡಿಗೆ ಮಾತ್ರ ಪಾವತಿಸಬೇಕು’ ಎಂಬುದು ಅವರ ಸಂಕಷ್ಟ.

ಅನ್ನ ಹಾಕಿದವರಿಗೇ ಸಂಕಷ್ಟ: ಬೀದಿಬದಿ ಇಡ್ಲಿ ಮಾರುವವರಿಂದ ದೊಡ್ಡ ಹೋಟೆಲ್‌ ನಡೆಸುವವರ ವರೆಗೆ ಈ ಕ್ಷೇತ್ರದ ಎಲ್ಲರೂ ಅತ್ಯಂತ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಮೊಗ್ಗ ನಗರದ 400 ಸಣ್ಣಪುಟ್ಟ ಹೋಟೆಲ್‌ಗಳು ಸೇರಿ ಜಿಲ್ಲೆಯಲ್ಲಿ ಇರುವ 1,500 ಹೋಟೆಲ್‌ಗಳಲ್ಲಿ ಪಾರ್ಸಲ್‌ಗಾಗಿ ಬಾಗಿಲು ತೆರೆಯಲು ಅನುಮತಿ ದೊರೆತದ್ದು ಹತ್ತಿಪ್ಪತ್ತು ಹೋಟೆಲ್‌ಗಳಿಗೆ ಮಾತ್ರ. ಅಂಥ ಹೋಟೆಲ್‌ಗಳ ಆದಾಯ ವೆಚ್ಚಕ್ಕೂ ಸರಿಹೊಂದಿಲ್ಲ.

‘ದಿನಕ್ಕೆ ₹ 10 ಸಾವಿರ ಆದಾಯ ಇರುವ ಹೋಟೆಲ್‌ ನಮ್ಮದು. 8 ಜನರಿಗೆ ಕೆಲಸ ನೀಡಿದ್ದೆ. ಎಲ್ಲವನ್ನೂ ಸರಿದೂಗಿಸಿಕೊಂಡುಲಾಭವೂ ಇಲ್ಲದೆ, ನಷ್ಟವೂ ಇಲ್ಲದೆ ಜೀವನ ಸಾಗುತ್ತಿತ್ತು. ಲಾಕ್‌ಡೌನ್ ಆದಾಗ 15 ದಿನಕ್ಕೆ ಆಗುವಷ್ಟು ದಿನಸಿ ದಾಸ್ತಾನು ಇತ್ತು. ಹಾಳಾಗುತ್ತದೆ ಎಂದು ಅಂದೇ ಎಲ್ಲ ಕೆಲಸಗಾರರಿಗೂ ಹಂಚಿಕೆ ಮಾಡಿಕೊಟ್ಟೆವು. ಈಗ ಹೋಟೆಲ್‌ ತೆರೆಯಲು ಹೇಳಿದ್ದಾರೆ. ದಿನಸಿ ತರಲು ಹಣವಿಲ್ಲ. ಬರೀ ಪಾರ್ಸಲ್ ನೀಡಲು ಹೇಳಿದ್ದಾರೆ. ಜನ ಸಂಚಾರ ಕಡಿಮೆ ಇರುವ ಕಾರಣ ವ್ಯಾಪಾರವೂ ಸಾಧ್ಯವಿಲ್ಲ ಎಂದು ಮನೆಯಲ್ಲೇ
ಇದ್ದೇವೆ. ಹೋಟೆಲ್‌ ಮಳಿಗೆ, ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ. ಎಷ್ಟೋ ಜನರಿಗೆ ನಿತ್ಯವೂ ಉಚಿತ ಅನ್ನನೀಡಿದನಮಗೇ ಅನ್ನವಿಲ್ಲ’ ಎಂದು ಅಳಲು ತೋಡಿಕೊಂಡರು ಶಿವಮೊಗ್ಗದ ವಿನೋಬನಗರದ ಬಸಮ್ಮ.

ಸರಕು ಕೊರತೆ ಇನ್ನೊಂದು ಹೊಡೆತ: ಅಂಗಡಿ ತೆರೆಯಲು ಅವಕಾಶ ಸಿಕ್ಕರೂ ಸರಕು ಪೂರೈಕೆ ಆಗುತ್ತಿಲ್ಲ. ಸರಕು ಅಭಾವ ಸೃಷ್ಟಿಯಾದ ಪರಿಣಾಮ ಹೆಚ್ಚುವರಿ ಬೆಲೆ ತೆರಬೇಕಾದ ಅನಿವಾರ್ಯ ವ್ಯಾಪಾರಸ್ಥರಿಗೆ ಬಂದೊದಗಿದೆ. ಹೆಚ್ಚು ಹಣ ಕೊಟ್ಟು ಸರಕು ತಂದರೆ, ಅದನ್ನು ಹೆಚ್ಚಿನ ಬೆಲೆಗೇ ಮಾರಬೇಕು. ಜನರಲ್ಲಿ ಮೊದಲೇ ದುಡ್ಡಿಲ್ಲ, ಈಗ, ಬೆಲೆ ಹೆಚ್ಚು ಮಾಡಿದರೆ ವ್ಯಾಪಾರಕ್ಕೇ ಕುತ್ತು ಎಂಬ ಸ್ಥಿತಿ ಎದುರಾಗಿದೆ.

‘ಲಾಕ್‌ಡೌನ್‌ ಸಮಯದಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಸರಕು ಅಭಾವ ಸೃಷ್ಟಿಯಾಗಿದೆ. ಹೀಗಾಗಿ, ಸಗಟು ವ್ಯಾಪಾರಸ್ಥರು ಸರಕು ಬೆಲೆ ಏರಿಕೆ ಮಾಡಿದ್ದಾರೆ. ಹೆಚ್ಚು ಹಣ ನೀಡಿ ಸರಕು ತಂದರೂ ವಹಿವಾಟು ನಡೆಯುವ ಭರವಸೆ ಇಲ್ಲ’ ಎನ್ನುತ್ತಾರೆ ಚಿತ್ರದುರ್ಗದ ಕೆಳಗೋಟೆಯ ಬೀಡಾ ಅಂಗಡಿಯ ವೆಂಕಟೇಶ್‌.

38 ದಿನ ಬೀಡಾ ಅಂಗಡಿ ಬಾಗಿಲು ಹಾಕಿತ್ತು. ವಹಿವಾಟಿಗೆ ಅವಕಾಶ ಸಿಕ್ಕಾಗ ಅವರಿಗೆ ಅಘಾತ ಕಾದಿತ್ತು. ಸ್ಟಾಲ್‌ನಲ್ಲಿ ಇದ್ದ ತಂಪು ಪಾನೀಯ, ನೀರು, ಟೆಟ್ರಾ ಪ್ಯಾಕಿನಲ್ಲಿರುವ ಜ್ಯೂಸ್‌ ಹಾಗೂ ಚಿಪ್ಸ್‌ ಅವಧಿ ಮೀರಿದ್ದವು. ಈ ನಷ್ಟದ ಹೊರೆ ಹೊರಬೇಕಾಯಿತು.

ದ್ವಿಚಕ್ರ ವಾಹನದ ಗ್ಯಾರೇಜ್‌ ಹೊಂದಿರುವ ಮೋಹನ್‌ ಅವರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಟೈರು, ಟ್ಯೂಬ್‌ ಸೇರಿ ಹಲವು ಉಪಕರಣಗಳನ್ನು ಹೆಚ್ಚು ಹಣ ನೀಡಿ ಖರೀದಿ ಮಾಡಬೇಕಾಗಿದೆ. ನಿತ್ಯ ಸರಾಸರಿ ಹತ್ತು ದ್ವಿಚಕ್ರ ವಾಹನಗಳಿಗೆ ಇವರು ಸೇವೆ ಒದಗಿಸುತ್ತಿದ್ದರು. ಈಗ ಎರಡು ವಾಹನ ಗ್ಯಾರೇಜಿಗೆ ಬರುವುದು ಅಪರೂಪ.

ಕುಟುಂಬ ಸಹಿತ ಕ್ವಾರಂಟೈನ್ ಮಾಡಿ’

‘ನಮ್ಮನ್ನು ಸಾಮೂಹಿಕವಾಗಿ ಕುಟುಂಬ ಸಮೇತ ಕ್ವಾರಂಟೈನ್‌ ಮಾಡಿ. ಅಲ್ಲಿಯಾದರೂ ಅನ್ನ–ಸೂರು ಸಿಕ್ಕಿ ಬದುಕಬಹುದು’ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಸರ್ಕಾರದ ಮುಂದಿಟ್ಟಿರುವ ಬೇಡಿಕೆ.

ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿದ್ದು, ಅವರ ಕುಟುಂಬಗಳು ಸುಮಾರು ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೇ, ಮನೆ ಬಾಡಿಗೆ ಪಾವತಿಸಲಾಗದೆ ಪರಿತಪಿಸುತ್ತಿವೆ. ಸಣ್ಣ ಹಾರ್ಡ್‌ವೇರ್‌ ಅಂಗಡಿ, ಜ್ಯೂಸ್‌, ದರ್ಶಿನಿಗಳು ಇತ್ಯಾದಿ ಸಣ್ಣ ಅಂಗಡಿಯವರ ಪಾಡೂ ಹೊರತಾಗಿಲ್ಲ. ವರ್ಷದ ಗರಿಷ್ಠ ದುಡಿಮೆ ಅವಧಿ ಇದಾಗಿದ್ದು, ಅಂಗಡಿ ತೆರೆದರೂ ವ್ಯಾಪಾರ ಇಲ್ಲದಾಗಿದೆ.

ಬಾಡಿಗೆಯೇ ದೊಡ್ಡ ಚಿಂತೆ

ಸುಮಾರು ಒಂದೂವರೆ ತಿಂಗಳ ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಸಣ್ಣ ಪುಟ್ಟ ಗ್ಯಾರೇಜ್‌, ಫರ್ನಿಚರ್‌, ಆಟೊಮೊಬೈಲ್‌ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಮಳಿಗೆಗಳ ಬಾಡಿಗೆಯನ್ನೂ ಕೊಡಲಾಗದ ಸ್ಥಿತಿಗೆ ತಲುಪಿದ್ದು, ಇನ್ನಷ್ಟೇ ಹೊಸ ಬದುಕು ಕಟ್ಟಿಕೊಳ್ಳಬೇಕಿದೆ.

ಸಣ್ಣ ಪಟ್ಟಣಗಳಲ್ಲಿಯೂ ಸಣ್ಣ ಅಂಗಡಿಗಳಿಗೆ₹ 6ರಿಂದ ₹ 8 ಸಾವಿರ ಬಾಡಿಗೆ ಇದೆ. ಇಂತಹ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ
ಮಾಡಿಕೊಂಡಿದ್ದವರಿಗೆ ಈಗ ದುಡಿಮೆಯೇ ಇಲ್ಲ. ಅರ್ಧ ಬಾಡಿಗೆಯನ್ನು ಈಗ ಕಟ್ಟಿ ಉಳಿದಿದ್ದನ್ನು ವ್ಯಾಪಾರ ಒಂದು ಹದಕ್ಕೆ ಬಂದ ಮೇಲೆ ಕೊಡಬಹುದೇ ಎಂದು ವ್ಯಾಪಾರಿಗಳು ಕಟ್ಟಡ ಮಾಲೀಕರ ಜತೆ ಚೌಕಾಸಿ ನಡೆಸುತ್ತಿದ್ದಾರೆ.

ಕಲಬುರ್ಗಿಯ ಸ್ಟೇಶನ್‌ ರಸ್ತೆಯಲ್ಲಿ ಬಸವೇಶ್ವರ ಸರ್ವಿಸ್‌ ಸೆಂಟರ್‌ ಹೆಸರಿನಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್‌ ನಡೆಸುತ್ತಿರುವ ನಾಗರಾಜ ಕೋಟನೂರ ಅವರಿಗೂ ಈ ಸಮಸ್ಯೆ ಕಾಡುತ್ತಿದೆ. ಕೈಯಲ್ಲಿ ಕೆಲಸವಿಲ್ಲದ್ದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಯಾರೂ ಸಹಾಯ ಮಾಡಲಿಲ್ಲ. ಅವತ್ತಿನ ಖರ್ಚಿಗೆ ಅಂದಿನ ದುಡಿಮೆಯೇ ಗತಿ. ಲಾಕ್‌ಡೌನ್‌ನಿಂದಾಗಿ ಗ್ಯಾರೇಜ್‌ ಮುಚ್ಚಬೇಕಾದ್ದರಿಂದ ಅಂಗಡಿ ಬಾಡಿಗೆ ₹ 8 ಸಾವಿರ ಹಾಗೂ ಮನೆ ಬಾಡಿಗೆ ₹ 2800 ಕಟ್ಟಿಲ್ಲ. ಅಂಗಡಿ ಮಾಲೀಕರೂ ನಮ್ಮ ಪರಿಸ್ಥಿತಿ ನೋಡಿ ಇನ್ನೂ ಕೇಳಿಲ್ಲ. ಈಗ ಗಾಡಿ ಸರ್ವಿಸ್‌ ಮಾಡಿದರಷ್ಟೇ ಹೊಟ್ಟೆಗೆ ಏನಾದರೂ ಸಿಗುತ್ತದೆ. ಇದರ ಮಧ್ಯೆ, ಕೆಲ ಅಂಗಡಿಗಳನ್ನು ಪೊಲೀಸರು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ. ಹಾಗೆ ಮಾಡಿದರೆ ಇನ್ನಷ್ಟು ದಿನ ನಮಗೆ ಸಮಸ್ಯೆಯಾಗಲಿದೆ ಎಂದರು.

ಎಂ.ಎಸ್‌.ಕೆ. ಮಿಲ್‌ ರಸ್ತೆಯಲ್ಲಿ ‘ರಾಯಲ್ ಟಾಯ್ಸ್‌’ ಹೆಸರಿನ ಮಕ್ಕಳ ಸೈಕಲ್ ಮಾರಾಟ ಹಾಗೂ ಫರ್ನಿಚರ್‌ ಅಂಗಡಿಯನ್ನು ಇಟ್ಟುಕೊಂಡಿರುವ ಮೊಹಮ್ಮದ್‌ ಹುಸೇನ್‌ ಶೇಖ್‌ ಅವರದೂ ಇದೇ ಚಿಂತೆ. ‘ಒಂದು ಅಂಗಡಿ ಬಾಡಿಗೆ ₹ 12 ಸಾವಿರ, ಮತ್ತೊಂದರ ಬಾಡಿಗೆ ₹ 9 ಸಾವಿರ. ಮನೆಯ ಬಾಡಿಗೆ ₹ 5,500 ಸೇರಿದಂತೆ ₹ 26,500 ಹಣವನ್ನು ತುರ್ತಾಗಿ ಪಾವತಿ ಮಾಡಬೇಕು. ಅಂಗಡಿಯಲ್ಲಿ ಸ್ಟಾಕ್‌ ಇರುವ ಫರ್ನಿಚರ್‌ ಮಾರಾಟವಾದರೆ ಮಾತ್ರ ಬಾಡಿಗೆ ಕಟ್ಟಲು ಸಾಧ್ಯ. ವಸ್ತುಗಳು ಮಾರಾಟವಾದಂತೆಲ್ಲ ಬಾಡಿಗೆ ಕೊಡುತ್ತಾ ಹೋಗುತ್ತೇನೆ ಎಂದು ಮಾಲೀಕರಿಗೆ ಹೇಳಿದ್ದೇನೆ. ಅವರೂ ಒಪ್ಪಿದ್ದಾರೆ. ಹೊಸ ಫರ್ನಿಚರ್‌ ಬಂದರೂ ಅದನ್ನು ಕೊಳ್ಳುವವರು ಯಾರು? ಕೊರೊನಾ ಸೋಂಕಿತರು ಇದನ್ನು ತಯಾರಿಸಿದ್ದರೆ ಏನು ಮಾಡುವುದು ಎಂಬ ಸಂದೇಹವೂ ಅವರಿಗೆ ಬರಬಹುದು. ಹೀಗಾಗಿ, ಮುಂದಿನ ಭವಿಷ್ಯ ಹೇಗೋ ಏನೋ ಎಂಬಂತಾಗಿದೆ’ ಎಂದು ಚಿಂತಾಕ್ರಾಂತರಾದರು.

ಬೇಸಿಗೆ ಆದಾಯಕ್ಕೆ ಕುತ್ತು

ಬೇಸಿಗೆಯಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ಐಸ್‌ಕ್ರೀಂ ಪಾರ್ಲರ್‌ಗಳು ಹಾಗೂ ಜ್ಯೂಸ್ ಅಂಗಡಿಗಳ ಮಾಲೀಕರು ಗ್ರಾಹಕರಿಲ್ಲದೇ ಕಂಗಾಲಾಗಿದ್ದಾರೆ. ಮೂರು ತಿಂಗಳ ವ್ಯಾಪಾರಕ್ಕೆ ತಡೆಯೊಡ್ಡಿದ ಕೊರೊನಾ ಸೋಂಕು, ಅವರ ವರ್ಷದ ದುಡಿಮೆಯನ್ನೇ ಕಸಿದುಕೊಂಡಿದೆ. ಅವರಿಗೆ ಅಂಗಡಿಯ ಬಾಡಿಗೆ ಹಣವನ್ನು ಹೊಂದಿಸುವುದು ಹೇಗೆ ಎಂಬ ಚಿಂತೆಒಂದೆಡೆ ಕಾಡ ತೊಡಗಿದರೆ, ಇನ್ನೊಂದೆಡೆ ಸಿಬ್ಬಂದಿಗೆ ವೇತನ ನೀಡುವುದು ಸವಾಲಾಗಿದೆ.

ಲಾಕ್‌ಡೌನ್‌ ಸಡಿಲವಾದರೂ ಜನತೆ ತಂಪು ಪಾನೀಯಗಳನ್ನು ಸೇವಿಸಲೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಅಂಗಡಿಗಳಲ್ಲಿಯೇ ಹಣ್ಣುಗಳು ಬಾಡುತ್ತಿವೆ. ಪರಿಣಾಮ ಕೆಲವರು ಶಾಶ್ವತವಾಗಿ ಬೀಗ ಹಾಕಿ, ಪರ್ಯಾಯ ಉದ್ಯೋಗಕ್ಕೆ ಹುಡುಕಾಟ ನಡೆಸಲಾರಂಭಿಸಿದ್ದಾರೆ. ಅದೇ ರೀತಿ, ಎಲ್ಲ ವಯೋಮಾನದವರೂ ಇಷ್ಟ ಪಡುವ ಐಸ್‌ಕ್ರೀಂ ಕೂಡ ಕರಗಿಹೋಗಿದೆ. ಐಸ್‌ಕ್ರೀಮ್‌ ವ್ಯಾಪಾರದ ಶೇ ಶೇ 40 ರಷ್ಟು ಬೇಸಿಗೆಯ ಮೂರು ತಿಂಗಳಲ್ಲಿ ನಡೆಯುತ್ತಿತ್ತು. ಈ ವರ್ಷ ಎಲ್ಲವೂ ಕರಗಿ ಹೋಗಿದೆ.

ವ್ಯಾಪಾರಿಗಳ ಬೇಡಿಕೆಗಳು

lವಹಿವಾಟು ಸ್ಥಗಿತಗೊಂಡ ಅವಧಿಯಲ್ಲಿನ ಮಳಿಗೆ, ಮನೆಯ ಬಾಡಿಗೆ ಹಾಗೂ ವಿದ್ಯುತ್ ಶುಲ್ಕಕ್ಕೆ ವಿನಾಯಿತಿ ಕೊಡಿ

lಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಪ್ರಕ್ರಿಯೆ ಸರಳಗೊಳಿಸಿ, ಆದಷ್ಟು ಬೇಗ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಮಾಡಿ

lಮಕ್ಕಳ ಶಾಲಾ ಶುಲ್ಕಕ್ಕೆ ವಿನಾಯಿತಿ ನೀಡಿ

lಪ್ರತಿ ಕುಟುಂಬಕ್ಕೆ ಆಹಾರದ ಕಿಟ್‌ ಕೊಡಿ

lಲಾಕ್‌ಡೌನ್‌ ಅವಧಿಗೆ ಸರ್ಕಾರ ಪರಿಹಾರ ನೀಡಬೇಕು, ಕನಿಷ್ಠ ಐದು ಸಾವಿರ ನೀಡಿ

l2 ತಿಂಗಳ ಅಂಗಡಿ ಬಾಡಿಗೆ, ವಿದ್ಯುತ್‌ ಬಿಲ್‌ ವಸೂಲಿ ರದ್ದುಗೊಳಿಸಬೇಕು

lಕೈಸಾಲ, ಸಂಘಗಳ ಸಾಲ ವಸೂಲಿಗೆ ಆರು ತಿಂಗಳು ತಡೆ ನೀಡಬೇಕು

10 ವರ್ಷಗಳಿಂದ ಹಿಟ್ಟಿನ ಗಿರಣಿ ನಡೆಸುತ್ತಿದ್ದೇನೆ. ಖರ್ಚು ಕಳೆದು ಒಂದಿಷ್ಟು ಉಳಿಯುತಿತ್ತು. ಈಗ ಬಾಡಿಗೆ ಕಟ್ಟಲೂ ಹಣವಿಲ್ಲ. ಸರ್ಕಾರ ₹5 ಸಾವಿರ ನೀಡಿದರೂ ಸಾಕು. ವಿದ್ಯುತ್‌ ಬಿಲ್‌ ಮೂಲಕ ಅವರಿಗೇ ಆ ಹಣ ವಾಪಸ್‌ ಹೋಗುತ್ತೆ

ನೋವಿನ ದನಿ

ಚೇತನ್‌,ಹಿಟ್ಟಿನ ಗಿರಣಿ, ಮೈಸೂರು

ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿ ಸೈಬರ್‌ ಕೆಫೆ ಇದೆ. ಲಾಕ್‌ಡೌನ್‌ ಅದರ ಬಾಗಿಲಿಗೆ ಬೀಗ ಜಡಿಯಿತು. ಕೆಫೆ ತೆರೆಯದಿದ್ದರೂ ಬಾಡಿಗೆ, ಬ್ರಾಡ್‌ಬ್ಯಾಂಡ್‌ ಬಿಲ್‌ ಕಟ್ಟಬೇಕು. ಸಾಲದ ಕಂತು ತಿಂಗಳಿಗೆ ₹30 ಸಾವಿರ ಕಟ್ಟಬೇಕು

ಎಂ.ಎಚ್‌.ಗಿರೀಶ್‌,ತುಮಕೂರು

ಜೆರಾಕ್ಸ್‌ ಅಂಗಡಿ ಇಟ್ಟುಕೊಂಡು ಎಷ್ಟು ದುಡಿಯಬಹುದು ಯೋಚಿಸಿ. ಆದರೂ ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈ ರೀತಿ ತಿಂಗಳುಗಟ್ಟಲೇ ಲಾಕ್‌ಡೌನ್‌ ಮಾಡಿದರೆ ಜೀವನ ಸಾಗಿಸುವುದಾದರೂ ಹೇಗೆ?

ನಾಗೇಂದ್ರ,ಜೆರಾಕ್ಸ್‌ ಅಂಗಡಿ, ಮೈಸೂರು

ಚಮ್ಮಾರಿಕೆ ಬಿಟ್ಟರೆ ಮತ್ತೊಂದು ಕೆಲಸ ಗೊತ್ತಿಲ್ಲ. ಬದುಕು ಹೇಗೋ ಒಂದು ಹದಕ್ಕೆ ಬಂದಿತ್ತು. ಇಂಥ ಸಮಯದಲ್ಲಿ ಈ ರೀತಿ ಕಷ್ಟ ಎದುರಾದರೆ ಹೇಗೆ ತಡೆದುಕೊಳ್ಳುವುದು? ಮುಂದೇನು ಎಂಬ ಯೋಚನೆಯಲ್ಲೇ ದಿನ ದೂಡುತ್ತಿದ್ದೇನೆ

ಕಿರಣ್‌,ಚಮ್ಮಾರ, ಮೈಸೂರು

ಗುಜರಿ ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿರುವವರು ನಾವು. ಲಾಕ್‌ಡೌನ್‌ಗಿಂತಲೂ ಮೊದಲು ಖರೀದಿಸಿದ ಗುಜರಿ ವಸ್ತುಗಳು ರಾಶಿ ಬಿದ್ದಿವೆ. ಅವನ್ನು ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ

ಮುಜಾಮಿಲ್‌ ಪಾಷ‌,ಗುಜರಿ ಅಂಗಡಿ, ಕೊಳ್ಳೇಗಾಲ

ಅಂಗಡಿಯಲ್ಲಿ ದಿನಕ್ಕೆ ₹ 200–300ರವರೆಗೆ ಲಾಭವಾಗುತ್ತಿತ್ತು, ನಿತ್ಯದ ಮನೆಯ ಖರ್ಚಿಗೆ ಕೈಹಿಡಿಯುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಅಂಗಡಿಯಲ್ಲಾದ ನಷ್ಟ ಒಂದೆಡೆಯಾದರೆ, ಮನೆಯಲ್ಲಿ ಕೂತು ಉಂಡ ಖರ್ಚು ಇನ್ನೊಂದೆಡೆ. ಮನೆಯಲ್ಲೂ ಕೂತು ಉಂಡು ಇದ್ದ ಹಣ ಕರಗಿಸಿದ್ದಕ್ಕೆ ಬೇಸರವಿದೆ

ದೇವರಾಜೇಗೌಡ,ಪೆಟ್ಟಿಗೆ ಅಂಗಡಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.