ADVERTISEMENT

ಮಹಿಳಾ ಮತ | ಸಂಘರ್ಷದ ಉನ್ಮಾದ: ಹೆಣ್ಣು ಮಕ್ಕಳೇ ಗುರಿ

ಸುಕೃತ ಎಸ್.
Published 6 ಆಗಸ್ಟ್ 2023, 23:30 IST
Last Updated 6 ಆಗಸ್ಟ್ 2023, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಣಿಪುರದ ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದ ಪುರುಷರ ಗುಂಪೊಂದು ಬಂದೂಕಿನ ತುದಿಯಿಂದ ಬೆದರಿಸಿ ಬೆತ್ತಲೆಗೊಳಿಸಿ, ರಸ್ತೆಯುದ್ದಕ್ಕೂ ಲೈಂಗಿಕ ಹಿಂಸೆ ನೀಡುತ್ತಿರುವ ವಿಡಿಯೊ ಇದೇ ಜುಲೈ 19ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಬಾರಿ ಹಂಚಿಕೆಯಾದ ಆ ವಿಡಿಯೊ ದೇಶದ ಅಂತಃಸಾಕ್ಷಿಯನ್ನೇ ಕಲಕಿತು. ಸಾಮಾಜಿಕ ಜಾಲತಾಣಗಳಲ್ಲಿ ಆ ಬಗ್ಗೆ ಆವೇಶ, ಆಕ್ರೋಶ ವ್ಯಕ್ತವಾಯಿತು. ಮಣಿಪುರ ಹಿಂಸಾಚಾರದ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ ಈ ವಿಡಿಯೊ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಜುಲೈ 20ರಂದು ಕೈಗೆತ್ತಿಕೊಂಡಿತು. ‘ಮಹಿಳೆಯನ್ನು ಹಿಂಸಾಚಾರದ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗದು’ ಎಂದು ಕಟುವಾಗಿ ಹೇಳಿತು.

ಈ ಘಟನೆ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ, ಛತ್ತೀಸಗಢ ಮತ್ತು ರಾಜಸ್ಥಾನ ಎಲ್ಲಿಯೇ ಇಂತಹ ಘಟನೆ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಅಲ್ಲಿನ ಮುಖ್ಯಮಂತ್ರಿಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳಲ್ಲಿ ಹೆಚ್ಚಿನವು ಮಣಿಪುರದ ಕೃತ್ಯವನ್ನು ಸಾಮಾನ್ಯೀಕರಣಗೊಳಿಸಲಾಯಿತು. ಈ ಸಾಮಾನ್ಯೀಕರಣದ ಯತ್ನವು ಸುಪ್ರೀಂ ಕೋರ್ಟ್‌ನ ಅಂಗಳಕ್ಕೂ ಬಂದಿತು.  ಜುಲೈ 31ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ದೆಹಲಿಯ ಬಿಜೆಪಿಯ ಕಾನೂನು ಕೋಶದ ಸಹ ಸಂಚಾಲಕಿ ಹಾಗೂ ದಿವಂಗತ ಸುಷ್ಮಾ ಸ್ವರಾಜ್‌ ಅವರ ಮಗಳು, ವಕೀಲೆ ಬಾನ್ಸುರಿ ಸ್ವರಾಜ್‌ ಅವರು ಸುಪ್ರೀಂ ಕೋರ್ಟ್‌ಗೆ ಮನವಿಯೊಂದನ್ನು ಮಾಡಿದರು. ‘ಮಣಿಪುರದಲ್ಲಿ ಮಾತ್ರವಲ್ಲ ಪಶ್ಚಿಮ ಬಂಗಾಳ, ಛತ್ತೀಸಗಢ ಹಾಗೂ ರಾಜಸ್ಥಾನದಲ್ಲೂ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥ ಘಟನೆಗಳು ನಡೆಯುತ್ತಿವೆ. ಆದ್ದರಿಂದ, ಮಣಿಪುರದ ಈ ಕೃತ್ಯದ ವಿಚಾರಣೆಯ ಜೊತೆಗೆ, ಈ ಎಲ್ಲಾ ರಾಜ್ಯಗಳಲ್ಲಿ ನಡೆಯುತ್ತಿರುವ ಘಟನೆಗಳನ್ನೂ ಸೇರಿಸಿಕೊಳ್ಳಿ’ ಎಂಬುದು ಅವರ ಮನವಿಯಾಗಿತ್ತು.

ADVERTISEMENT

ಆದರೆ ಮಣಿಪುರದ ಕೃತ್ಯವನ್ನು ಹೀಗೆ ಸಾಮಾನ್ಯೀಕರಣಗೊಳಿಸುವ ಯತ್ನವನ್ನು ಸುಪ್ರೀಂ ಕೋರ್ಟ್‌ ಖಡಾಖಂಡಿತವಾಗಿ ನಿರಾಕರಿಸಿತು. ದೇಶದ ಬೇರೆಡೆ ನಡೆದ ಅತ್ಯಾಚಾರ ಪ್ರಕರಣಗಳಿಗೂ, ಮಣಿಪುರದ ಕೃತ್ಯಕ್ಕೂ ಬಹಳ ವ್ಯತ್ಯಾಸವಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ದೃಢವಾಗಿ ಹೇಳಿತು. 

ನ್ಯಾಯಾಲಯ ಹೇಳಿದ್ದೇನು...

1. ಪೊಲೀಸರೇ ಉದ್ರಿಕ್ತ ಗುಂಪಿಗೆ ತಮ್ಮನ್ನು ಒಪ್ಪಿಸಿದರು ಎಂದು ಸಂತ್ರಸ್ತ ಮಹಿಳೆಯರು ಹೇಳಿಕೆ ನೀಡಿದ್ದಾರೆ. ಇದು ‘ನಿರ್ಭಯಾ’ ರೀತಿಯ ಪ್ರಕರಣವಲ್ಲ. ಅದು ಕೂಡ ಭಯಾನಕವಾಗಿಯೇ ಇತ್ತು ಮತ್ತು ಅದು ಪೂರ್ವನಿರ್ಧರಿತ ಘಟನೆ ಆಗಿರಲಿಲ್ಲ. ಆದರೆ, ಮಣಿಪುರದಲ್ಲಿ ನಡೆದದ್ದು ಪೂರ್ವನಿರ್ಧರಿತವಾದುದು. ಮಣಿಪುರಲ್ಲಿ ನಡೆದದ್ದು ವ್ಯವಸ್ಥಿತ ಹಿಂಸಾಚಾರ.

2. ದೇಶದೆಲ್ಲೆಡೆ ಮಹಿಳೆಯರ ಮೇಲೆ ಅಪರಾಧಗಳು ನಡೆಯುತ್ತಿವೆ. ಇದರಲ್ಲಿ ಸಂಶಯವಿಲ್ಲ ಮತ್ತು ಇದು ವಾಸ್ತವ. ಆದರೆ, ಈಗ ನಾವು ಚರ್ಚೆ ಮಾಡುತ್ತಿರುವುದು ಅಸಾಧಾರಣ ಘಟನೆಯಾಗಿದೆ. ಕೋಮು ಸಂಘರ್ಷದಂಥ ಸಂದರ್ಭದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ನಿಮ್ಮ ಮನವಿಗೆ ಒಂದೇ ಉತ್ತರ ಇರುವುದು. ದೇಶದ ಬೇರೆಡೆ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಕಾರಣಕ್ಕೆ ಮಣಿಪುರಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ವಿನಾಯಿತಿ ನೀಡಲು ಬರುವುದಿಲ್ಲ. ಭಾರತದಲ್ಲಿರುವ ಎಲ್ಲಾ ಮಹಿಳೆಯರಿಗೆ ರಕ್ಷಣೆ ನೀಡಿ ಅಥವಾ ಯಾರಿಗೂ ರಕ್ಷಣೆ ನೀಡಬೇಡಿ ಎಂಬಂತಿದೆ ನಿಮ್ಮ ಮಾತು. ಈಗ ನಮ್ಮ ಮುಂದಿರುವುದು ಮಣಿಪುರದ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದಾಗಿ. ಈ ಕುರಿತು ನಿಮ್ಮ ಸಲಹೆ ಇದ್ದರೆ ನೀಡಿ.

ಹಾಗಾದರೆ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಹಾಗೂ ಯುದ್ಧ ಅಥವಾ ಕೋಮು ಸಂಘರ್ಷಗಳ ಸಮಯದಲ್ಲಿ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ನಡುವೆ ವ್ಯತ್ಯಾಸವೇನು? ಉತ್ತರ ಸ್ಪಷ್ಟ; ಅತ್ಯಾಚಾರ ನಡೆಸುವುದಕ್ಕೆ ಇರುವ ಕಾರಣಗಳು, ಉದ್ದೇಶಗಳು. ಯುದ್ಧ ಅಥವಾ ಕೋಮು ಸಂಘರ್ಷದ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಗಳ ಉದ್ದೇಶ ಏನಿರುತ್ತವೆ ಎಂಬುದಕ್ಕೆ ವಿಶ್ವಸಂಸ್ಥೆ ಹಲವು ವಿಶ್ಲೇಷಣೆಗಳನ್ನು ಮಾಡಿದೆ.

ಗಲಭೆ, ಯುದ್ಧದ ಸಂದರ್ಭಗಳಲ್ಲಿ ನಡೆಸುವ ಲೈಂಗಿಕ ದೌರ್ಜನ್ಯವನ್ನು ವಿಶ್ವಸಂಸ್ಥೆ ಮೂರು ವಿಧಗಳಲ್ಲಿ ವಿಂಗಡಿಸಿದೆ. 1. ಇದೊಂದು ಯುದ್ಧ ತಂತ್ರ, 2. ನಿರ್ದಿಷ್ಟ ಉದ್ದೇಶದೊಂದಿಗೆ ಸಾಮೂಹಿಕವಾಗಿ ನಡೆಸಲಾಗುವ ಕೃತ್ಯ. ಇಂಥ ಕೃತ್ಯಗಳನ್ನು ನಡೆಸಲು ದೇಶದ ನಾಯಕರು ಆಜ್ಞೆ ಕೊಟ್ಟಿರುವುದಿಲ್ಲ, ಆದರೆ, ಇಂಥ ಕೃತ್ಯ ನಡೆಸದಂತೆಯೂ ಹೇಳುವುದಿಲ್ಲ ಅಥವಾ ಇಂಥ ಕೃತ್ಯಗಳ ಕುರಿತು ಮೌನವಹಿಸುತ್ತಾರೆ. 3. ಅವಕಾಶವಿದ್ದಲ್ಲಿ ವ್ಯಕ್ತಿಗಳು ಸ್ವಇಚ್ಛೆಯಿಂದ ನಡೆಸುವ ಕೃತ್ಯ. ಉಕ್ರೇನ್‌, ಹೈಟಿ ಮತ್ತು ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಯುದ್ದಾಪರಾಧಗಳ ಕುರಿತು 2022ರಲ್ಲಿ ನೀಡಿರುವ ವರದಿಯಲ್ಲಿ ವಿಶ್ವ ಸಂಸ್ಥೆ ಈ ವಿಂಗಡಣೆಗಳನ್ನು ಪ್ರಸ್ತಾಪಿಸಿದೆ.

ಎರಡು ಜನಾಂಗ/ಎರಡು ಧಾರ್ಮಿಕ ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಿದ್ದರೆ, ಮಹಿಳೆಯರನ್ನು ಗುರಿಯಾಗಿಸಿಕೊಂಡೇ ಹಿಂಸಾಚಾರ ನಡೆಸಲಾಗುತ್ತದೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು ಅವರನ್ನು ಸಂಘರ್ಷ/ಹಿಂಸಾಚಾರದ ಸಾಧನವನ್ನಾಗಿ ಬಳಸಿಕೊಳ್ಳುವುದರ ಒಂದು ರೂಪ. ಹೀಗೆ ಅತ್ಯಾಚಾರ ಎಸಗುವ ಮೂಲಕ, ಆ ಸಮುದಾಯದ ಜನಾಂಗೀಯ ಶುದ್ಧತೆಯನ್ನು ನಾಶಮಾಡುವುದು ಅದರ ಉದ್ದೇಶ ಎಂದು ‘ವುಮೆನ್‌ ಫಾರ್ ವುಮೆನ್‌ ಇಂಟರ್‌ ನ್ಯಾಷನಲ್‌’ ಎಂಬ ಎನ್‌ಜಿಒ, ಯುದ್ಧಾಪರಾಧಗಳ ಕುರಿತ ತನ್ನ ಅಧ್ಯಯನ ವರದಿ ಯೊಂದರಲ್ಲಿ ಅರ್ಥೈಸಿದೆ. ಮಣಿಪುರದಲ್ಲಿ ಆಗಿದ್ದು ಕೂಡ ಇಂಥದ್ದೇ ವ್ಯವಸ್ಥಿತ ಕೃತ್ಯ.

ಈ ವಿಶ್ಲೇಷಣೆಗೆ ಪುಷ್ಟಿ ನೀಡುವಂತೆ ಮಣಿಪುರದ ಬೆತ್ತಲೆ ಮೆರವಣಿಗೆಯ ಕೃತ್ಯದಲ್ಲಿ ಭಾಗಿಯಾಗಿದ್ದ ಬಂಧಿತ ಹಿರೋದಾಸ್‌ ಅವರ ತಾಯಿ ಕೆ. ಲತಾದೇವಿ, ಸುದ್ದಿವಾಹಿನಿಯೊಂದಕ್ಕೆ ಪತ್ರಿಕ್ರಿಯೆ ನೀಡಿದ್ದರು. ಆ ತಾಯಿ, ‘ಇಂಥ ಕೃತ್ಯದ ಬಗ್ಗೆ ಒಂದು ವಾರದ ಹಿಂದೆಯೇ ನನಗೆ ಮಾಹಿತಿ ಸಿಕ್ಕಿತ್ತು. ಆಗ ನಾನು ನನ್ನ ಮಗನನ್ನು ಈ ಕುರಿತು ಪ್ರಶ್ನಿಸಿದೆ. ನಾನು ಇಂಥದೊಂದು ಕೃತ್ಯ ಎಸಗಿರುವುದಾಗಿ ಅವನು ಒಪ್ಪಿಕೊಂಡ. ಆದರೆ, ‘ಇಂಥ ಕೃತ್ಯವನ್ನು ನಾನು ವೈಯಕ್ತಿಕ ಕಾರಣಗಳಿಗಾಗಿ ಮಾಡಿಲ್ಲ. ಬದಲಿಗೆ ನನ್ನ ಸಮುದಾಯದ (ಮೈತೇಯಿ) ಹಿತದೃಷ್ಟಿಯಿಂದ ಮಾಡಿದ್ದೇನೆ’ ಎಂದು ಮಗ ಹೇಳಿದ’ ಎಂದಿದ್ದರು. ತಮ್ಮ ಮಗ ತಪ್ಪು ಮಾಡಿದ್ದಾನೆ ಎಂದು ಹಿರೋದಾಸ್‌ನ ತಾಯಿ ಹೇಳಲಿಲ್ಲ, ಬದಲಿಗೆ ಮಗನ ಕೃತ್ಯವನ್ನು ಸಮರ್ಥಿಸಿ ಕೊಂಡರು. ಆ ತಾಯಿಯ ಸಂದರ್ಶನದ ವಿಡಿಯೊವನ್ನು ಹಲವರು ಹಂಚಿಕೊಂಡರು. ಆಕೆಯ ಸಮರ್ಥನೆಯ ಪರವಾಗಿ ಮತ್ತು ವಿರುದ್ಧವಾಗಿ ಚರ್ಚೆಗಳು ನಡೆದವು. ಆದರೆ ಇನ್ನೊಂದೆಡೆ ಈ ಕೃತ್ಯದ ಕುರಿತ ಪ್ರತಿ ವಿಚಾರಣೆಯಲ್ಲೂ, ಇದು ಸಾಮಾನ್ಯ ಕೃತ್ಯ ಅಲ್ಲವೇ ಅಲ್ಲ. ಮಹಿಳೆಯನ್ನು ಹಿಂಸಾಚಾರದ ಅಸ್ತ್ರವನ್ನಾಗಿ ಬಳಸಿಕೊಂಡ ಕೃತ್ಯ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ.

ಆಧಾರ: ಪಿಟಿಐ, ವಿಶ್ವಸಂಸ್ಥೆ ಯುದ್ಧಾಪರಾಧಗಳ ವರದಿ– 2002

ಅತ್ಯಾಚಾರವೇ ಅಸ್ತ್ರವಾದ ಕೃತ್ಯಗಳು

  • ಕೋಮು ಸಂಘರ್ಷ ಮತ್ತು ಯುದ್ಧದ ವೇಳೆ ಮಹಿಳೆಯರ ಮೇಲೆ ನಡೆಸುವ ಅತ್ಯಾಚಾರದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ಈ ಕೆಲವು ಹೇಳಿಕೆಗಳನ್ನು, ಘಟನಾವಳಿಗಳನ್ನು ನೆನಪಿಸಿಕೊಳ್ಳಬಹುದು.

  • l  ‘ಉಕ್ರೇನ್‌ ರಕ್ತವನ್ನು ಹಂಚಿಕೊಂಡ ಮಗು ಇನ್ನು ಮುಂದೆ ಜನಿಸಲೇಬಾರದು’– ಉಕ್ರೇನ್‌ ಮಹಿಳೆಯನ್ನು ಅತ್ಯಾಚಾರ ಮಾಡುವ ವೇಳೆ ರಷ್ಯಾ ಸೈನಿಕ ಹೇಳಿದ ಮಾತಿದು

  • l  ‘ಒತ್ತಾಯಪೂರ್ವಕವಾಗಿ ಬೆತ್ತಲೆಗೊಳಿಸುವುದು, ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅತ್ಯಾಚಾರ ಮಾಡುವುದು, ಲೈಂಗಿಕ ಕಿರುಕುಳ, ಮಹಿಳೆಯರ ಎದೆಗಳನ್ನು ಕತ್ತರಿಸುವುದು, ಹೊಟ್ಟೆಗಳನ್ನು ಬಗೆದು ಸಂತಾನೋತ್ಪತ್ತಿ ಅಂಗಗಳನ್ನು ಸೀಳುವುದು, ಮುಸ್ಲಿಂ ಮಹಿಳೆಯರ ದೇಹಗಳ ಮೇಲೆ ಹಿಂದೂ ಧಾರ್ಮಿಕ ಚಿಹ್ನೆಯನ್ನು ಕೊರೆಯುವುದು’– ಇವು 2002ರ ಗೋಧ್ರಾ ಸಂದರ್ಭದಲ್ಲಿ ನಡೆದ ಘಟನೆಗಳು ಎಂದು ಅಂತರರಾಷ್ಟ್ರೀಯ ಸತ್ಯಶೋಧನಾ ಸಮಿತಿ ನೀಡಿದ ವರದಿಯಲ್ಲಿ ಉಲ್ಲೇಖವಾಗಿವೆ

  • l  ‘ಎಲ್‌ಟಿಟಿಇ ಸಂಘಟನೆಯ ಸದಸ್ಯೆ ಎಂದು ಆರೋಪಿಸಿ ಶ್ರೀಲಂಕಾ ಸೇನೆಯು ಸಿಕ್ಕ ಸಿಕ್ಕ ತಮಿಳು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದೆ. ತಾವು ಎಲ್‌ಟಿಟಿಇ ಸಂಘಟನೆಯ ಸದಸ್ಯೆ ಎಂದು ಒಪ್ಪಿಕೊಳ್ಳುವಂತೆ ಲೈಂಗಿಕ ಹಿಂಸೆ ನೀಡಲಾಗುತ್ತಿತ್ತು. ರಾತ್ರಿಯಿಂದ ಬೆಳಗಿನವರೆಗೆ ಅತ್ಯಾಚಾರ ನಡೆಸಲಾಗುತ್ತಿತ್ತು. ಶ್ರೀಲಂಕಾ ಸೇನೆಯಲ್ಲಿರುವವರು ಸಿಂಹಳೀಯರು. ತಮ್ಮ ಜನಾಂಗದ ದರ್ಪ ತೋರುವುದಕ್ಕಾಗಿಯೂ, ತಮಿಳರ ಮೇಲಿರುವ ಸಿಟ್ಟು ತೀರಿಸಿಕೊಳ್ಳುವುದಕ್ಕಾಗಿಯೂ ಇಂಥ ಕೃತ್ಯ ನಡೆಸುತ್ತಿದ್ದರು’ ಎಂದು ಶ್ರೀಲಂಕಾ ಸೇನೆಯಿಂದ ಅತ್ಯಾಚಾರಕ್ಕೊಳಗಾದ ತಮಿಳು ಯುವತಿಯೊಬ್ಬರು ಹ್ಯೂಮನ್‌ ರೈಟ್ಸ್‌ ವಾಚ್‌ ಎನ್ನುವ ಸಂಸ್ಥೆಗೆ ನೀಡಿದ ಹೇಳಿಕೆಯಿದು

ಯುದ್ಧಾಪರಾಧ

ಜಗತ್ತಿನ ಮೊದಲನೇ ಹಾಗೂ ಎರಡನೇ ಯುದ್ಧದ ಸಂದರ್ಭದಲ್ಲಿಯೂ ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರವನ್ನು, ದೌರ್ಜನ್ಯವನ್ನು ಯುದ್ಧದ ಅಸ್ತ್ರವನ್ನಾಗಿಯೇ ಬಳಸಲಾಗಿದೆ. ಒತ್ತಾಯಪೂರ್ವಕವಾಗಿ ಬೆತ್ತಲು ಮಾಡುವುದು, ಅತ್ಯಾಚಾರ ಎಸಗುವುದು, ಅಪಹರಣ ಮಾಡುವುದು, ಲೈಂಗಿಕವಾಗಿ ಒತ್ತೆಯಾಳುವಾಗಿ ಇರಿಸಿಕೊಳ್ಳುವುದು, ಅಂಗವಿಕಲರನ್ನಾಗಿ ಮಾಡುವುದು, ಒತ್ತಾಯದ ಗರ್ಭಪಾತ ಮುಂತಾದ ಹಿಂಸೆಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ.

ರಾಜಕೀಯ ಮತ್ತು ಆರ್ಥಿಕ ದಿವಾಳಿತನದ ಕಾರಣಕ್ಕಾಗಿ 1992–95ರಲ್ಲಿ ಯುಗೊಸ್ಲಾವಿಯಾದಲ್ಲಿ ಜನಾಂಗೀಯ ಕಾರಣಕ್ಕಾಗಿ ಯುದ್ಧ ನಡೆದಿತ್ತು. ಈ ಅವಧಿಯಲ್ಲಿ ಸುಮಾರು 60 ಸಾವಿರ ಅತ್ಯಾಚಾರ ಪ್ರಕರಣಗಳು ದಾಖಲಾದವು. ಈ ಬಳಿಕವಷ್ಟೇ ಮಹಿಳೆಯರ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವನ್ನೂ ಯುದ್ಧಾಪರಾಧ ಎಂದು ಪರಿಗಣಿಸಬೇಕು ಎಂಬ ಒತ್ತಾಯ ತೀವ್ರವಾಯಿತು. ಆದರೂ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಯುದ್ಧಾಪರಾಧ ಎಂದು ವಿಶ್ವಸಂಸ್ಥೆ ಘೋಷಿಸಿದ್ದು 2008ರಲ್ಲಿ.

ಹೀಗೆ ನಡೆಯುವ ಸಾವಿರಾರೂ ಅತ್ಯಾಚಾರ ಪ್ರಕರಣಗಳು ಸಾಮಾಜಿಕ ಕಾರಣಗಳಿಗಾಗಿ ಬೆಳಕಿಗೇ ಬರುವುದಿಲ್ಲ. ಆದ್ದರಿಂದ ಪ್ರಕರಣಗಳ ನಿಖರ ಮಾಹಿತಿ, ಅಂಕಿ ಸಂಖ್ಯೆ ಲಭ್ಯವಾಗುವುದಿಲ್ಲ. ಇಂತಹ ಲೈಂಗಿಕ ದೌರ್ಜನ್ಯ, ಅತ್ಯಾಚಾರವು ಎಷ್ಟರ ಮಟ್ಟಿಗೆ ವ್ಯಾಪಿಸಿದೆ, ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ, ಯಾರು ಇಂಥ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ, ಯಾರು ಸಂತ್ರಸ್ತರು ಎಂಬುದರ ಮಾಹಿತಿ ನಿಖರವಾಗಿ ಸಿಗುವಂತಾಗುವವರೆಗೂ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದು ಕಷ್ಟಸಾಧ್ಯ ಎನ್ನುತ್ತಾರೆ ಆಸ್ಟ್ರೇಲಿಯಾದ ಮೊನಾಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಯೊಲಾಂಡಾ ರಿವೆರೋಸ್‌, ಮೊರೆಲ್ಸ್‌ ಹಾಗೂ ಜ್ಯಾಕ್ವಿ ಟ್ರೂ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.