ADVERTISEMENT

ಆಳ–ಅಗಲ: ದೇಶಿ ಕ್ರಿಕೆಟ್‌ಗೆ ಟಿ20 ಸವಾಲ್‌

ಐಪಿಎಲ್ ಕಾಲದಲ್ಲಿ ರಣಜಿ ಕಥೆ–ವ್ಯಥೆ; ಪ್ರಥಮ ದರ್ಜೆ ಪಂದ್ಯಗಳಿಗೆ ನಿರುತ್ಸಾಹ

ಗಿರೀಶದೊಡ್ಡಮನಿ
Published 7 ನವೆಂಬರ್ 2024, 23:40 IST
Last Updated 7 ನವೆಂಬರ್ 2024, 23:40 IST
<div class="paragraphs"><p>2014–15ರಲ್ಲಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡ</p></div>

2014–15ರಲ್ಲಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡ

   

ಭಾರತದಲ್ಲಿ ಕ್ರಿಕೆಟ್ ಎಂಬುದು ಜನಪದವೇ ಆಗಿದೆ. ಪ್ರತಿನಿತ್ಯವೂ ಒಂದಿಲ್ಲೊಂದು ಪಂದ್ಯ ನಡೆಯುತ್ತಲೇ ಇರುತ್ತದೆ. ಹೀಗಾಗಿ ಪ್ರತಿದಿನವೂ ಹೊಸದನ್ನು ಬಯಸುವ ಅಭಿಮಾನಿ ವರ್ಗವೂ ಬೆಳೆಯುತ್ತಿದೆ. ಆ ನಾಡಿಮಿಡಿತಕ್ಕೆ ಸಮನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಟಿ20 ಮಾದರಿ ಕ್ರಿಕೆಟ್‌ ಬೆಳೆಯುತ್ತಿದೆ. ಈ ನಡುವೆ ದೇಶದ ಕ್ರಿಕೆಟ್‌ ಬೆಳವಣಿಗೆಗೆ ಅಡಿಪಾಯವಾಗಿರುವ ಪ್ರತಿಷ್ಠಿತ ರಣಜಿ ಟ್ರೋಫಿ ಹೊಳಪು ಮಾಸುತ್ತಿದೆಯಲ್ಲವೇ?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಒಂದು ಕಾರ್ಯಕ್ರಮ ನಡೆದಿತ್ತು. ಅಲ್ಲಿ ಮುಖ್ಯ ಅತಿಥಿಯಾಗಿದ್ದ ಕ್ರಿಕೆಟ್ ದಂತಕಥೆ ಗುಂಡಪ್ಪ ವಿಶ್ವನಾಥ್ ಅವರಿಂದ ಆಟೋಗ್ರಾಫ್ ಪಡೆಯಲು ಹೈಸ್ಕೂಲು ಮಕ್ಕಳು ಸಾಲುಗಟ್ಟಿದ್ದರು.

ADVERTISEMENT

ಆ ಮಕ್ಕಳು ಎಂದಿಗೂ ಜಿ.ಆರ್‌.ವಿ. ಆಡುವುದನ್ನು ನೋಡಿರಲಿಲ್ಲ. ಆದರೆ ಅವರ ಬ್ಯಾಟಿಂಗ್ ಮತ್ತು ನಾಯಕತ್ವದ ಕುರಿತು ತಮ್ಮ ಹಿರಿಯರಿಂದ, ಕೋಚ್‌ಗಳಿಂದ ಮತ್ತು ಪುಸ್ತಕಗಳಿಂದ ತಿಳಿದುಕೊಂಡಿದ್ದರು. ಅದರಿಂದಲೇ ಪ್ರೇರಣೆಗೊಂಡಿದ್ದರು. ಜಿಆರ್‌ವಿ ಆಡುವ ಸಂದರ್ಭದಲ್ಲಿ ಇನ್ನೂ ಟಿ.ವಿ. ಪ್ರಸಾರದ ಭರಾಟೆ ಇಷ್ಟೊಂದು ಇರಲಿಲ್ಲ. ಆದರೂ ಆ ದಿನಗಳ ತಮ್ಮ ಸಾಧನೆಗಳ ಮೂಲಕವೇ ಜಿಆರ್‌ವಿ ಈಗಲೂ ಪ್ರಸ್ತುತರಾಗಿದ್ದಾರೆ.

ಅವರಷ್ಟೇ ಅಲ್ಲ; ಎರ‍್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರ ಪೀಳಿಗೆಯ ಆಟಗಾರರೆಲ್ಲರೂ ನಿವೃತ್ತರಾಗಿ ವರ್ಷಗಳೇ ಕಳೆದರೂ ಹೆಸರು ಉಳಿಸಿಕೊಂಡಿದ್ದಾರೆ. ಅವರು ಹೋದಲ್ಲೆಲ್ಲ ಅಭಿಮಾನಿಗಳ ದಂಡು ಮುತ್ತಿಕೊಳ್ಳುತ್ತದೆ. ಇದಕ್ಕೆ ಕಾರಣ, ಅವರು ತಾವು ಆಡುವಾಗ ತೋರಿದ ಬದ್ಧತೆ ಮತ್ತು ಆಡಿದ ರೀತಿ. ಅವರಲ್ಲಿ ಆ ಗುಣ ಬಂದಿದ್ದು ದೇಶಿ ಕ್ರಿಕೆಟ್‌ ಮೂಲದಿಂದ ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ.

ಇದೀಗ ದೇಶಿ ಕ್ರಿಕೆಟ್‌ನ ರಾಜ ರಣಜಿ ಟ್ರೋಫಿ ಟೂರ್ನಿ ಆರಂಭವಾಗಿ 90 ವರ್ಷಗಳು ಸಂದಿವೆ. ಭಾರತದ ಕ್ರಿಕೆಟ್‌ಗೆ ರಣಜಿ ಟೂರ್ನಿ ನೀಡಿದ ಕೊಡುಗೆ ಅಮೂಲ್ಯವಾದದ್ದು. ಅಲ್ಲಿಂದ ಬೆಳೆದು ಬಂದ ದಿಗ್ಗಜರು ಹಲವಾರು ಮಂದಿ. ಆದರೆ ಟಿ20 ಕ್ರಿಕೆಟ್ ಆರಂಭವಾದ ನಂತರ ರಣಜಿ ಟ್ರೋಫಿಯ ಹೊಳಪು ಮಸುಕಾಯಿತು. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ಮೇಲೆ ಆಟಗಾರರೇ ರಣಜಿ ಟೂರ್ನಿಯಿಂದ ವಿಮುಖರಾಗುತ್ತಿದ್ದಾರೆ. ದೇಶದ ಕ್ರಿಕೆಟ್ ಕ್ಷೇತ್ರದ ಹೆಗ್ಗುರುತಾಗಿರುವ ರಣಜಿ ಟ್ರೋಫಿ ಟೂರ್ನಿ ಈಗ ಉಳಿವಿಗಾಗಿ ಹೋರಾಡುತ್ತಿದೆ.

ಹೌದು; ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಇತ್ತೀಚಿನ ಟೆಸ್ಟ್ ಸರಣಿಯನ್ನು ನೋಡಿದವರಿಗೆ ಹೀಗೆ ಅನಿಸಬಹುದು. ದಶಕದ ಹಿಂದೆ ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿ ಟೂರ್ನಿಗಳ ಸಾಧನೆಯೇ ಮಾನದಂಡವಾಗಿರುತ್ತಿತ್ತು. ಈಗಲೂ ಈ ಟೂರ್ನಿಗಳನ್ನು ಪರಿಗಣಿಸಲಾಗುತ್ತಿದೆ. ಆದರೆ ಇವುಗಳೊಂದಿಗೆ ಐಪಿಎಲ್ ಕೂಡ ಸೇರಿಕೊಂಡಿದೆ. ಇದೀಗ ಆಸ್ಟ್ರೇಲಿಯಾಕ್ಕೆ ಹೊರಡಲು ಸಿದ್ಧವಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಹರ್ಷಿತ್ ರಾಣಾ ಇದಕ್ಕೆ ಉದಾಹರಣೆ. ಕಳೆದ ಐಪಿಎಲ್‌ನಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದರು. ಆದರೆ, ಅವರು ಹತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

ಐಪಿಎಲ್ ಆರಂಭವಾದ ಮೊದಲ ಕೆಲವು ವರ್ಷಗಳಲ್ಲಿ ದೇಶಿ ಟೂರ್ನಿಗಳ ಸಾಧನೆಯ ಆಧಾರದ ಮೇಲೆ ಆಟಗಾರರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡವು. ಕಾಲಕ್ರಮೇಣ ಫ್ರಾಂಚೈಸಿಗಳು ತಮ್ಮದೇ ಆದ ಪ್ರತಿಭಾಶೋಧ ವ್ಯವಸ್ಥೆಯನ್ನು ರೂಪಿಸಿಕೊಂಡವು. ಇದರಿಂದ ಹಲವಾರು ಗ್ರಾಮಾಂತರ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದ್ದು ಒಳ್ಳೆಯದೇ. ಆದರೆ, ನಿಧಾನವಾಗಿ ಐಪಿಎಲ್‌ನಲ್ಲಿ ಮಿಂಚಿ ಮರೆಯಾಗುವವರ ಪಟ್ಟಿ ಬೆಳೆಯಿತು. ಅಲ್ಲದೇ ಒಂದು ಆವೃತ್ತಿಯಲ್ಲಿ ಉತ್ತಮವಾಗಿ ಆಡಿದವರನ್ನು ರಾಷ್ಟ್ರೀಯ ತಂಡಗಳಿಗೆ ಆಯ್ಕೆ ಮಾಡುವ ಪರಿಪಾಠ ನಿಧಾನವಾಗಿ ಶುರುವಾಯಿತು. ಇದರಿಂದಾಗಿ ಸ್ವತಃ ಆಟಗಾರರೇ ದೇಶಿ ಕ್ರಿಕೆಟ್‌ನಿಂದ ವಿಮುಖರಾದರು.  

ನ್ಯೂಜಿಲೆಂಡ್‌ ಎದುರಿನ ಸೋಲಿನ ನಂತರ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ದೇಶಿ ಕ್ರಿಕೆಟ್ ಸಾಧನೆಯ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ (ಸರಣಿಯ ಮೊದಲ ಪಂದ್ಯ ಮಾತ್ರ ಆಡಿದ್ದರು) ಅವರಂತಹವರೂ ಸ್ಪಿನ್ ಬೌಲಿಂಗ್ ಎದುರು ವೈಫಲ್ಯ ಅನುಭವಿಸಿದರು. ಅದೂ ತವರು ನೆಲದಲ್ಲಿ. ಭಾರತ ತಂಡವು ಸೋಲುವುದನ್ನು ತಪ್ಪಿಸುವ ಸಾಮರ್ಥ್ಯ ಇವರಿಗಿತ್ತು. ಆದರೆ ಚೆನ್ನಾಗಿ ಆಡಲಿಲ್ಲ ಎಂಬ ಅಸಮಾಧಾನ ಇವರ ಕುರಿತು ಇದೆ.

ಟೆಸ್ಟ್ ಉಳಿವಿಗೆ ದೇಶಿ ಕ್ರಿಕೆಟ್ ಅಗತ್ಯ: ಒಂದು ಕಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಮಾದರಿ ಉಳಿಸಲು ಐಸಿಸಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭಿಸಿದೆ. ಎರಡು ವರ್ಷಗಳಿಗೊಮ್ಮೆ ಡಬ್ಲ್ಯುಟಿಸಿ ಫೈನಲ್‌ ನಡೆಯುತ್ತದೆ. ಅದಕ್ಕಾಗಿ ಎರಡೂ ವರ್ಷಗಳ ಅವಧಿಯಲ್ಲಿ ನಡೆಯುವ ಟೆಸ್ಟ್ ಸರಣಿಗಳೇ ಡಬ್ಲ್ಯುಟಿಸಿ ಫೈನಲ್ ಅರ್ಹತೆಗೆ ಹಾದಿ. ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ತಂಡಗಳು ತಮ್ಮದೇ ಆದ ವೈಖರಿಯಿಂದ ಮತ್ತಷ್ಟು ಉನ್ನತ ದರ್ಜೆಗೆ ಏರುತ್ತಿವೆ. ಅಲ್ಲದೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಪ್ರಮುಖ ಆಟಗಾರರೂ ದೇಶಿ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.

ಭಾರತ ತಂಡವೂ ಈ ವಿಷಯದಲ್ಲಿ ಮುಂಚೂಣಿಯಲ್ಲಿಯೇ ಇದೆ. ಕಳೆದ ಎರಡೂ ಡಬ್ಲ್ಯುಟಿಸಿ ಫೈನಲ್‌ಗಳಿಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಜಯಿಸುವಲ್ಲಿ ಎಡವಿತು. ಇಂತಹ ಹೊತ್ತಿನಲ್ಲಿ ಕೆಂಪು ಚೆಂಡಿನ ಕ್ರಿಕೆಟ್‌ಗೆ ಹೆಚ್ಚು ಆದ್ಯತೆ ನೀಡುವತ್ತ ಕ್ರಿಕೆಟಿಗರು ಗಮನ ಹರಿಸದಿರುವುದು ಭಾರತದಲ್ಲಿ ಮಾತ್ರ. ಆದ್ದರಿಂದ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಬಿಸಿಸಿಐ ಈಚೆಗೆ ಒಂದು ಸೂಚನೆ ಹೊರಡಿಸಿತು. ಭಾರತ ತಂಡದಲ್ಲಿ ಆಡದಿರುವಾಗ ತಮ್ಮ ರಾಜ್ಯಗಳ ತಂಡಗಳಲ್ಲಿ ಆಡಬೇಕು ಎಂದು ಸೂಚಿಸಿತು. ಇದನ್ನು ಪಾಲಿಸದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರ ಪ್ರಕರಣ ದೊಡ್ಡ ಸುದ್ದಿಯಾಯಿತು. ಅಲ್ಲದೇ ರಣಜಿಯಲ್ಲಿ ಆಡುವವರಿಗೆ ಸಂಭಾವನೆಯನ್ನೂ ಹೆಚ್ಚಿಸಲಾಗಿದೆ.

‘ಈಗ ಎಲ್ಲ ಮಾದರಿಗಳಲ್ಲಿ ಕ್ರಿಕೆಟ್‌ ಪಂದ್ಯಗಳು ಹೆಚ್ಚಾಗಿವೆ. ಆದ್ದರಿಂದ ಆಟಗಾರರಿಗೆ ಆಯ್ಕೆಗಳಿವೆ. ಆದರೆ, ದೀರ್ಘ ಕಾಲದವರೆಗೆ ಆಡುವ ಸಾಮರ್ಥ್ಯ ಎಷ್ಟು ಆಟಗಾರರಿಗೆ ಇದೆ. ರಾಹುಲ್ ದ್ರಾವಿಡ್ ಅವರು ದೊಡ್ಡ ಆಟಗಾರನಾಗಲು ದೇಶಿ ಕ್ರಿಕೆಟ್‌ ಸಹಾಯಕವಾಯಿತು. ಅವರು ರಾಷ್ಟ್ರೀಯ ತಂಡದಲ್ಲಿ ಬಿಡುವು ಸಿಕ್ಕಾಗಲೆಲ್ಲ ಕರ್ನಾಟಕ ತಂಡಕ್ಕೆ ಆಡುತ್ತಿದ್ದರು. ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮುನ್ನ ಐದಾರು ವರ್ಷ ದೇಶಿ ಕ್ರಿಕೆಟ್‌ನಲ್ಲಿ ಆಡಿದರು. ಇದು ಅವರಿಗೆ ಉತ್ತಮ ಬುನಾದಿ ಒದಗಿಸಿತು. ಅದಕ್ಕಾಗಿಯೇ ಅವರು ಇವತ್ತಿಗೂ ಪ್ರಸ್ತುತವಾಗಿದ್ದಾರೆ’ ಎಂದು ಮಾಜಿ ರಣಜಿ ಆಟಗಾರ ಆರ್.ಅನಂತ್ ಅಭಿಪ್ರಾಯಪಡುತ್ತಾರೆ.

‘ಭಾರತ ತಂಡದಲ್ಲಿ ಆಡುವ ಒಬ್ಬ ಆಟಗಾರ ಬಿಡುವಿನಲ್ಲಿ ಮರಳಿ ರಾಜ್ಯ ತಂಡಕ್ಕೆ ರಣಜಿ ತಂಡಕ್ಕೆ ಆಡಲು ಬರಬೇಕು. ಆಗ ಅವರ ಅನುಭವವು ತಂಡದ ಇತರ ಆಟಗಾರರ ಅರಿವಿಗೆ ಬರುತ್ತದೆ. ಇದು ಇನ್ನಷ್ಟು ಹುಡುಗರನ್ನು ಪ್ರೇರೇಪಿಸುತ್ತದೆ. ಅಲ್ಲದೇ ಆ ಆಟಗಾರನನ್ನು ನೋಡಲು ಮೈದಾನಕ್ಕೆ ಜನ ಬರುತ್ತಾರೆ. ಆಗ ರಣಜಿ ಪಂದ್ಯಗಳಿಗೂ ಒಂದು ವೈಭವ ಬರುತ್ತದೆ’ ಎಂದೂ ಅನಂತ್ ಹೇಳುತ್ತಾರೆ.

1974ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಎರ‍್ರಪಳ್ಳಿ ಪ್ರಸನ್ನ ಅವರು ಸುನಿಲ್ ಗಾವಸ್ಕರ್ ಅವರನ್ನು ಔಟ್ ಮಾಡಿದ ಮ್ಯಾಜಿಕ್ ಬಾಲ್ ಇವತ್ತಿಗೂ ಜನಜನಿತ. ಟಿ.ವಿ. ಇರದ ಆ ಕಾಲದ ಆಟವು ಅಕ್ಷರಗಳು, ಮಾತುಗಳ ಮೂಲಕ ಈಗಲೂ ಮನಸ್ಸನ್ನು ಮುದಗೊಳಿಸುತ್ತದೆ. ಅಂತಹದೊಂದು ಚುಂಬಕ ಶಕ್ತಿ ರಣಜಿ ಟ್ರೋಫಿ ಟೂರ್ನಿಗೆ ಇದೆ. ಆದರೆ ಐಪಿಎಲ್‌ನಲ್ಲಿ ಈ ರೀತಿಯ ನೆನಪು ಕೆದಕಿದರೆ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರರ ಒಂದಿಷ್ಟು ಹೆಸರುಗಳು ನೆನಪಿಗೆ ಬರಬಹುದಷ್ಟೇ.

ವಿರಾಟ್ ಕೊಹ್ಲಿ

ರಣಜಿ ಟ್ರೋಫಿಗೆ 90 ವರ್ಷ
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪ್ರಥಮ ದರ್ಜೆ ಪಂದ್ಯ ನಡೆದು ಈಗ 90 ವರ್ಷಗಳು ತುಂಬಿವೆ. ಒಂದೇ ದಿನದಲ್ಲಿ ಆ ಪಂದ್ಯದ ಫಲಿತಾಂಶ ಹೊರಹೊಮ್ಮಿತ್ತು. ಹೌದು; 1934ರ ನವೆಂಬರ್ 4ರಂದು ಚೆನ್ನೈನಲ್ಲಿ ನಡೆದ ಮೊದಲ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವೇ ಆ ದಾಖಲೆ. ಮದ್ರಾಸ್ ಮತ್ತು ಮೈಸೂರು (ಈಗ ತಮಿಳುನಾಡು ಮತ್ತು ಕರ್ನಾಟಕ) ತಂಡಗಳ ನಡುವಣ ನಡೆದ ಪಂದ್ಯ ಅದಾಗಿತ್ತು. ಮೊದಲ ದಿನದಾಟ ಮುಗಿಯಲು ಕೆಲವು ನಿಮಿಷಗಳು ಬಾಕಿಯಿದ್ದಾಗಲೇ ಮದ್ರಾಸ್ ತಂಡವು ಇನಿಂಗ್ಸ್‌ ಹಾಗೂ 23 ರನ್‌ಗಳಿಂದ ಜಯಿಸಿತ್ತು.

ರೋಹಿತ್ ಶರ್ಮಾ

ಕೆಲವು ವರ್ಷಗಳ ಹಿಂದೆ ಖ್ಯಾತನಾಮ ಆಟಗಾರರು ಭಾರತ ತಂಡದಲ್ಲಿ ಪಂದ್ಯ ಮುಗಿದಾಕ್ಷಣ ರಾಜ್ಯ ತಂಡಕ್ಕೆ ಮರಳಿ ದೇಶಿ ಟೂರ್ನಿಗಳಲ್ಲಿ ಆಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ವಿರಾಟ್ ಕೊಹ್ಲಿ 2013ರಲ್ಲಿ ಮತ್ತು ರೋಹಿತ್ ಶರ್ಮಾ 2015ರಲ್ಲಿ ರಣಜಿ ಪಂದ್ಯಗಳನ್ನು ಕೊನೆಯ ಬಾರಿಗೆ ಆಡಿದ್ದರು. ನಮ್ಮ ರಾಜ್ಯದ ಕೆ.ಎಲ್. ರಾಹುಲ್ ನಾಲ್ಕು ವರ್ಷಗಳ ಹಿಂದೆ ಕೊನೆಯ ಸಲ ರಣಜಿ ಆಡಿದ್ದರು
ಎಚ್‌.ಆರ್.ಗೋಪಾಲಕೃಷ್ಣ, ಅಂಕಿ ಅಂಶ ತಜ್ಞ

ಎರ‍್ರಪಳ್ಳಿ ಪ್ರಸನ್ನ, ಬಿ.ಎಸ್‌. ಚಂದ್ರಶೇಖರ್ ಮತ್ತು ಬಿಷನ್ ಸಿಂಗ್ ಬೇಡಿ

ಮಿಂಚಿ ಮರೆಯಾದವರು
ಪ್ರತಿವರ್ಷವೂ ಝಗಮಗಿಸುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಬಹಳಷ್ಟು ಆಟಗಾರರು ಹಾತೊರೆಯುತ್ತಾರೆ. ಹಣದ ಆಕರ್ಷಣೆ ಮತ್ತು ಜನಪ್ರಿಯತೆ ಲಭಿಸುವ ಈ ಟೂರ್ನಿಯಿಂದ ಉನ್ನತ ಮಟ್ಟಕ್ಕೆ ಏರಿದವರು ಇದ್ದಾರೆ. ಮಿಂಚಿ ಮರೆಯಾದವರೂ ಬಹಳಷ್ಟಿದ್ದಾರೆ. ಅಂತಹವರಲ್ಲಿ ಪಾಲ್ ವಾಲ್ತಾಟಿ, ಮನಪ್ರೀತ್ ಗೋನಿ, ಸ್ವಪ್ನಿಲ್ ಅಸ್ನೋಡಕರ್, ಮನ್ವಿಂದರ್ ಬಿಸ್ಲಾ, ರಾಹುಲ್ ಶರ್ಮಾ, ಕಮ್ರನ್ ಖಾನ್, ಸೌರಭ್ ತಿವಾರಿ, ಜೋಗಿಂದರ್ ಶರ್ಮಾ, ಉಮ್ರಾನ್ ಮಲಿಕ್ ಪ್ರಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.