ದೇಶದಾದ್ಯಂತ ಪರಿಶಿಷ್ಟ ಜಾತಿಗಳ ಜನರ ಮೇಲೆ ಎಸಗಲಾಗುತ್ತಿರುವ ದೌರ್ಜನ್ಯ ಮತ್ತು ಅಪರಾಧಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ಆದರೆ ಪ್ರಕರಣಗಳನ್ನು ವಿಲೇವಾರಿ ಮಾಡಿ, ಶಿಕ್ಷೆ ನೀಡುವುದರಲ್ಲಿ ಕರ್ನಾಟಕವು ಬೇರೆಲ್ಲಾ ರಾಜ್ಯಗಳಿಗಿಂತ ತೀರಾ ಹಿಂದೆ ಬಿದ್ದಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣವು 2018–2022ರ ಮಧ್ಯೆ ಕಳವಳಕಾರಿ ಮಟ್ಟಕ್ಕೆ ಕುಸಿದಿದೆ
ರಾಜ್ಯದ ವಿವಿಧ ನ್ಯಾಯಾಲಯಗಳು ಪರಿಶಿಷ್ಟ ಜಾತಿಗಳ ಜನರ ಮೇಲೆ ದೌರ್ಜನ್ಯ ನಡೆದ 1,124 ಪ್ರಕರಣಗಳನ್ನು 2022ರಲ್ಲಿ ವಿಲೇವಾರಿ ಮಾಡಿವೆ. ಆದರೆ, ಇವುಗಳಲ್ಲಿ ಶಿಕ್ಷೆಯಾಗಿದ್ದು 15 ಪ್ರಕರಣಗಳಲ್ಲಿ ಮಾತ್ರ. ವಿಲೇವಾರಿಯಾದ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ, ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 1.3ರಷ್ಟು. ಪರಿಶಿಷ್ಟ ಜಾತಿಯ ಜನರ ಮೇಲೆ ಅತಿಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ, ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದು ರಾಜ್ಯದಲ್ಲೇ.
ರಾಜ್ಯದಲ್ಲಿ ಈ ಮೊದಲು ಸ್ಥಿತಿ ಇಷ್ಟು ಕಳವಳಕಾರಿಯಾಗಿ ಇರಲಿಲ್ಲ. 2018ರಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 7.4ರಷ್ಟಿತ್ತು. ಆನಂತರದ ವರ್ಷಗಳಲ್ಲಿ ಈ ಪ್ರಮಾಣ ಕುಸಿಯುತ್ತಲೇ ಬಂದಿದೆ. 2021ರಲ್ಲಿ ಆ ಪ್ರಮಾಣ ಶೇ 1.6ಕ್ಕೆ ಕುಸಿದಿತ್ತು. ಈಗ ಅದು ಇನ್ನಷ್ಟು ಕುಸಿದಿದೆ. ಈ ಸಮುದಾಯಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷಾನುವರ್ಷ ಏರಿಕೆಯಾಗುತ್ತಿರುವುದರ ಜತೆಯಲ್ಲೇ, ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣ ಕುಸಿಯುತ್ತಿರುವುದು ಕಳವಳಕಾರಿ.
ಈ ಜಾತಿ ಸಮುದಾಯಗಳ ಜನರ ಮೇಲೆ ದೌರ್ಜನ್ಯ ನಡೆದ ಸಂಬಂಧ 2022ರಲ್ಲಿ ಪೊಲೀಸರು ಒಟ್ಟು 1,977 ಪ್ರಕರಣಗಳನ್ನು ದಾಖಲಿಸಿದ್ದರು. 2022ಕ್ಕೂ ಹಿಂದಿನ ವರ್ಷಗಳಿಂದ ಉಳಿದಿದ್ದ 632 ಪ್ರಕರಣಗಳು ಸೇರಿ, 2022ರಲ್ಲಿ ಒಟ್ಟು 2,609 ಪ್ರಕರಣಗಳು ರಾಜ್ಯದ ಪೊಲೀಸರ ಮುಂದಿದ್ದವು. ಇವುಗಳಲ್ಲಿ ಸುಳ್ಳು ಆರೋಪಗಳು ಎಂದು ಪೊಲೀಸರು 225 ಪ್ರಕರಣಗಳನ್ನು ವಜಾ ಮಾಡಿದ್ದಾರೆ. ಜತೆಗೆ ಪರಿಶಿಷ್ಟ ಜಾತಿಗಳ ಜನರ ಮೇಲೆ ದೌರ್ಜನ್ಯ ನಿಜ ಎಂದು ಗೊತ್ತಿದ್ದೂ, ಸಾಕ್ಷ್ಯ ಇಲ್ಲದೇ ಇರುವ ಕಾರಣಕ್ಕೆ 2 ಪ್ರಕರಣಗಳನ್ನು ವಜಾ ಮಾಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊಗೆ (ಎನ್‌ಸಿಆರ್‌ಬಿ) ರಾಜ್ಯದ ಪೊಲೀಸರೂ ನೀಡಿರುವ ಮಾಹಿತಿಯಲ್ಲಿ ಇದನ್ನೇ ಉಲ್ಲೇಖಿಸಿದ್ದಾರೆ.
ಇವುಗಳ ಹೊರತಾಗಿ 1,636 ಪ್ರಕರಣಗಳಲ್ಲಿ ಪೊಲೀಸರು ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯಗಳಿಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಸುಳ್ಳು ಮತ್ತು ಸಾಕ್ಷ್ಯ ಇಲ್ಲದ ಪ್ರಕರಣಗಳು ಪೊಲೀಸರ ತನಿಖಾ ಹಂತದಲ್ಲೇ ವಜಾ ಆಗಿವೆ. ಆದರೆ, ಸಾಕ್ಷ್ಯ ಇದೆ ಎಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪ್ರಕರಣಗಳಲ್ಲೇ ಹೆಚ್ಚಿನವು ಖುಲಾಸೆ ಆಗಿವೆ. 2022ರಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳು ಒಟ್ಟು 1,122 ಪ್ರಕರಣಗಳನ್ನು ವಿಲೇವಾರಿ ಮಾಡಿವೆ. ಇವುಗಳಲ್ಲಿ 1,096 ಪ್ರಕರಣಗಳು ಖುಲಾಸೆಯಾಗಿವೆ. ಈ ಪ್ರಕರಣಗಳು ಏಕೆ ಖುಲಾಸೆಯಾಗಿವೆ ಎಂಬುದರ ವಿವರವು ಎನ್‌ಸಿಆರ್‌ಬಿ ದತ್ತಾಂಶದಲ್ಲಿ ಇಲ್ಲ.
ಪರಿಶಿಷ್ಟ ಜಾತಿಗಳ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 2021ರಲ್ಲಿ ಈ ಸಮುದಾಯಗಳ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಒಟ್ಟು ಪ್ರಕರಣಗಳು 7,168. ಇದು 2022ರಲ್ಲಿ 7,756ಕ್ಕೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿಗಳ ಮಹಿಳೆಯರ ಮೇಲಿನ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಈ ರಾಜ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟ ಮಹಿಳೆಯರ ಸಂಖ್ಯೆ 821. ಎರಡನೇ ಸ್ಥಾನದಲ್ಲಿ ರಾಜಸ್ಥಾನವಿದೆ (608). ಕರ್ನಾಟಕದಲ್ಲಿ ಈ ಸಂಖ್ಯೆಯು 296 ಇದೆ. ಇಂತಹ ದೌರ್ಜನ್ಯಕ್ಕೆ ಅತಿಹೆಚ್ಚು ಮಹಿಳೆಯರು ಒಳಗಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಐದನೇ ಸ್ಥಾನದಲ್ಲಿದೆ.
ಈ ಸಮುದಾಯಗಳ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳೆಲ್ಲವೂ ಗೌರವಕ್ಕೆ ಧಕ್ಕೆ ತರುವ ಸ್ವರೂಪದವೇ ಆಗಿವೆ. ಅವುಗಳಲ್ಲಿ ಅತ್ಯಾಚಾರದ್ದೇ ಸಿಂಹಪಾಲು. ಜತೆಗೆ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ತೆಗಳುವುದು–ಹಲ್ಲೆ ನಡೆಸುವುದು, ಸಾರ್ವಜನಿಕವಾಗಿ ಬೆತ್ತಲುಗೊಳಿಸುವುದು, ಅತ್ಯಾಚಾರ ಯತ್ನದಂತಹ ಕೃತ್ಯಗಳಿಗೆ ಈ ಮಹಿಳೆಯರು ಸಂತ್ರಸ್ತೆಯರಾಗಿದ್ದಾರೆ. ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಕದ್ದು ನೋಡಿದಂತಹ ಮತ್ತು ಗೋಪ್ಯವಾಗಿ ಚಿತ್ರೀಕರಿಸಿದಂತಹ ಕೃತ್ಯಗಳೂ ಇದರಲ್ಲಿ ಸೇರಿವೆ. ಕರ್ನಾಟಕಕ್ಕೆ ಸೀಮಿತಗೊಳಿಸಿ ವಿಶ್ಲೇಷಿಸುವುದಾದರೆ, ಮಹಿಳೆಯ ಗೌವರಕ್ಕೆ ಧಕ್ಕೆ ತರುವ ಉದ್ದೇಶದ ಬೈಗುಳ ಮತ್ತು ಹಲ್ಲೆ ಪ್ರಕರಣಗಳ ಸಂಖ್ಯೆಯೇ ಹೆಚ್ಚಿದೆ.
2022ರಲ್ಲಿ ಮಹಿಳೆಯರನ್ನು ಅವರ ಜಾತಿಯ ಕಾರಣದಿಂದ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಸಾರ್ವಜನಿಕವಾಗಿ ಬೆತ್ತಲುಗೊಳಿಸಿದ 343 ಪ್ರಕರಣಗಳಿಗೆ ದೇಶವು ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಇಂಥ 36 ಪ್ರಕರಣಗಳು ದಾಖಲಾಗಿವೆ.
ದೇಶದಾದ್ಯಂತ ಪರಿಶಿಷ್ಟ ಜಾತಿಗಳ ಜನರ ಮೇಲೆ ಎಸಗಲಾದ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳು ಏರಿಕೆಯಾಗಿವೆ. 2020ರಲ್ಲಿ ಇಂತಹ 50,291 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 50,900 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇದು 57,582ಕ್ಕೆ ಏರಿಕೆಯಾಗಿದೆ
2022ರಲ್ಲಿ ಉತ್ತರ ಪ್ರದೇಶದಲ್ಲಿ 15,368 ಪ್ರಕರಣಗಳು ದಾಖಲಾಗಿವೆ. ಇಂತಹ ಅತಿಹೆಚ್ಚು ಪ್ರಕರಣ ದಾಖಲಾಗಿದ್ದು ಈ ರಾಜ್ಯದಲ್ಲೇ
ರಾಜಸ್ಥಾನದಲ್ಲಿ 8,752 ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ
ಮಧ್ಯಪ್ರದೇಶದಲ್ಲಿ 7,733 ಪ್ರಕರಣಗಳು ದಾಖಲಾಗಿದ್ದು, ಮೂರನೇ ಸ್ಥಾನದಲ್ಲಿದೆ
2020ರಲ್ಲಿ ರಾಜ್ಯದ ಎಲ್ಲೆಡೆ ಇಂತಹ 1,398 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 1,673 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇದು 1,977ಕ್ಕೆ ಏರಿಕೆಯಾಗಿದೆ
ಆಧಾರ: ಎನ್‌ಸಿಆರ್‌ಬಿಯ ಭಾರತದಲ್ಲಿ ಅಪರಾಧ– 2018, 2019, 2020, 2021, 2022 ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.