ADVERTISEMENT

ಆಳ–ಅಗಲ: ಕಚ್ಚಾ ತೈಲ ಶೇ‌ 33ರಷ್ಟು ಅಗ್ಗ– ಗ್ರಾಹಕನಿಗೆ ಸಿಗದ ಲಾಭ!

ಹತ್ತು ತಿಂಗಳಿಂದಲೂ ಬದಲಾಗದ ಪೆಟ್ರೋಲ್‌, ಡೀಸೆಲ್‌ ಬೆಲೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 18:41 IST
Last Updated 2 ಏಪ್ರಿಲ್ 2023, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಳೆದ ಹತ್ತು ತಿಂಗಳಲ್ಲಿ ಕಚ್ಚಾತೈಲದ ಬೆಲೆ ಶೇ 33ರಷ್ಟು ಇಳಿಕೆಯಾಗಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸ್ವಲ್ಪವೂ ಇಳಿಕೆಯಾಗಿಲ್ಲ. ತೈಲ ಕಂಪನಿಗಳ ನಷ್ಟವನ್ನು ತುಂಬಿಕೊಳ್ಳಲು ಬೆಲೆಯಲ್ಲಿ ಇಳಿಕೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯ ಆಧಾರದಲ್ಲಿ ಬೆಲೆ ಏರಿಳಿತವಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹70–₹72 ಮಾತ್ರ ತೆರಬೇಕಿತ್ತು. ಪ್ರತಿ ಲೀಟರ್‌ ಡೀಸೆಲ್‌ಗೆ ₹60ರಿಂದ ₹62.06 ಇರಬೇಕಿತ್ತು. ಬದಲಿಗೆ ನಾವೀಗ, ಪೆಟ್ರೋಲ್‌ಗೆ ₹101.94 ಮತ್ತು ಡೀಸೆಲ್‌ಗೆ ₹87.89 ಪಾವತಿಸುತ್ತಿದ್ದೇವೆ.

ಭಾರತದಲ್ಲಿ 2010ರವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡುತ್ತಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಳಿತವಾದರೂ, ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಏರಿಳಿತವಾಗುತ್ತಿರಲಿಲ್ಲ. 2010ರಲ್ಲಿ ಈ ನೀತಿಯನ್ನು ಕೇಂದ್ರದ ಯುಪಿಎ ಸರ್ಕಾರವು ತೆಗೆದುಹಾಕಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗುವ ಏರಿಳಿತದ ಆಧಾರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಬೆಲೆಯನ್ನು ಪ್ರತಿ 15 ದಿನಗಳಿಗೆ ಒಮ್ಮೆ ಬದಲಿಸುವ ಅಧಿಕಾರವನ್ನು ತೈಲ ಸಂಸ್ಕರಣ ಕಂಪನಿಗಳಿಗೆ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಈ ನೀತಿಯನ್ನು 2017ರಲ್ಲಿ ಬದಲಿಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬೆಲೆಯ ಏರಿಳಿತದ ಆಧಾರದಲ್ಲಿ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿದಿನವೂ ಬದಲಿಸುವ ಅಧಿಕಾರವನ್ನು ತೈಲ ಕಂಪನಿಗಳಿಗೆ ನೀಡಿತು. ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದೇ ಇಲ್ಲ. ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುವಾಗ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ಬೆಲೆಯನ್ನು ನಿಯಂತ್ರಿಸಲಾಗುತ್ತಿದೆ. 2022ರ ಮೇ 22ರ ನಂತರ ಈವರೆಗೆ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕೋವಿಡ್‌ ಲಾಕ್‌ಡೌನ್‌ನ ಕಾರಣದಿಂದ 2020ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ವಿಪರೀತ ಪ್ರಮಾಣದಲ್ಲಿ ಕುಸಿದಿತ್ತು. ಪರಿಣಾಮವಾಗಿ ಬೆಲೆಯೂ ಕುಸಿದಿತ್ತು. ಆಗ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿಲ್ಲ. ಏಕೆಂದರೆ ಕಚ್ಚಾತೈಲದ ಬೆಲೆ ಕುಸಿದಂತೆ, ಕೇಂದ್ರ ಸರ್ಕಾರವು ತೆರಿಗೆ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಯಿತು. ಹೀಗಾಗಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ಗಣನೀಯ ಬದಲಾವಣೆಯಾಗಿರಲಿಲ್ಲ. ಆದರೆ, ನಂತರದ ತಿಂಗಳುಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಾ ಹೋಯಿತು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಏರಿಕೆ ಮಾಡಿದ್ದ ತೆರಿಗೆ ಪ್ರಮಾಣವನ್ನು ಇಳಿಸಲೇ ಇಲ್ಲ. ಪರಿಣಾಮವಾಗಿ ಎರಡೂ ಇಂಧನಗಳ ಚಿಲ್ಲರೆ ಮಾರಾಟ ಬೆಲೆ ವಿಪರೀತ ಎನ್ನಿಸುವಷ್ಟು ಏರಿಕೆಯಾಯಿತು.

ADVERTISEMENT

ಈ ಮಧ್ಯೆ 2020 ಮತ್ತು 2021ರಲ್ಲಿ ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಗಳು ನಡೆದ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದ್ದರೂ, ಚಿಲ್ಲರೆ ಮಾರಾಟ ಬೆಲೆಯಲ್ಲಿ ಏರಿಕೆಯಾಗಲಿಲ್ಲ.
ಸತತವಾಗಿ ಹಲವು ತಿಂಗಳು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಯಿತು.

2022ರ ಆರಂಭದಲ್ಲೇ ಉಕ್ರೇನ್‌ ಮತ್ತು ರಷ್ಯಾ ಯುದ್ಧದ ನಂತರ, ಪೂರೈಕೆ ಸಮಸ್ಯೆಯಿಂದಾಗಿ ಕಚ್ಚಾತೈಲದ ಬೆಲೆ ಏರಿಕೆಯಾಗಿತ್ತು. ಆದರೆ, ರಿಯಾಯಿತಿ ದರದಲ್ಲಿ ರಷ್ಯಾದೊಂದಿಗೆ ಕಚ್ಚಾತೈಲ ಖರೀದಿಸುವ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿತ್ತು. ಹೀಗಾಗಿ ಭಾರತವು ಖರೀದಿಸಿದ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಲೇ ಹೊಯಿತು. ಚಿಲ್ಲರೆ ಮಾರಾಟ ಬೆಲೆ ಮಾತ್ರ ಇಳಿಕೆಯಾಗಿಲ್ಲ. 2022ರ ಮೇ 22ರಂದು ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಕ್ರಮವಾಗಿ ₹8 ಮತ್ತು ₹6ರಷ್ಟನ್ನು ಸರ್ಕಾರ ಕಡಿತ ಮಾಡಿತು. ಆನಂತರ ಕಚ್ಚಾತೈಲದ ಬೆಲೆ ಮತ್ತಷ್ಟು ಇಳಿಕೆಯಾಯಿತು. 10 ತಿಂಗಳ ಅವಧಿಯಲ್ಲಿ ಶೇ 33ರಷ್ಟು ಇಳಿಕೆಯಾಯಿತು. ಆದರೆ ಬೆಂಗಳೂರಿನಲ್ಲಿ 10 ತಿಂಗಳ ಹಿಂದೆ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹101.94 ಮತ್ತು ಪ್ರತಿ ಲೀಟರ್‌ ಡೀಸೆಲ್‌ ಬೆಲೆ ₹87.84 ಇತ್ತು. ಈಗಲೂ ಅಷ್ಟೇ ಇದೆ.

ತೆರಿಗೆಯದ್ದೇ ಹೊರೆ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರ್ಕಾರವು ಹಲವು ಸ್ವರೂಪದ ತೆರಿಗೆಗಳನ್ನು ವಿಧಿಸುತ್ತಿದೆ. ಈ ತೆರಿಗೆಗಳ ಮೇಲೆ ರಾಜ್ಯ ಸರ್ಕಾರಗಳೂ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುತ್ತವೆ. ಹೀಗಾಗಿ ಎರಡೂ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ತೆರಿಗೆಗಳ ಹೊರೆಯೇ ಹೆಚ್ಚು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿಧಿಸುವ ತೆರಿಗೆಯ ವಿವರ ಇಂತಿದೆ

₹101.94 ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ನ ಸರಾಸರಿ ಬೆಲೆ

–––

₹26.42 ರಾಜ್ಯ ಸರ್ಕಾರವು ವಿಧಿಸುವ ವ್ಯಾಟ್‌ (ಶೇ 25.92ರಂತೆ)

₹19.90 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಹೆಚ್ಚುವರಿ ಆಮದು ಸುಂಕ

₹1.40 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಮೂಲ ಎಕ್ಸೈಸ್‌ ಸುಂಕ

₹11 ಕೇಂದ್ರ ಸರ್ಕಾರವು ವಿಧಿಸುತ್ತಿರುವ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ

₹2.50 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌

₹5 ಕೇಂದ್ರ ಸರ್ಕಾರವು ವಿಧಿಸುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌

₹2.63 ಡೀಲರ್ ಕಮಿಷನ್‌

₹33.09 ಪ್ರತಿ ಲೀಟರ್‌ ಪೆಟ್ರೋಲ್‌ನ ಮೂಲ ಬೆಲೆ (ಶೇ2.50ರಷ್ಟು ಆಮದು ಸುಂಕ, ಸಂಸ್ಕರಣ ಶುಲ್ಕ, ಸಾಗಣೆ ಶುಲ್ಕ ಒಳಗೊಂಡಿದೆ)

–––––––––––

₹87.84 ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ನ ಸರಾಸರಿ ಬೆಲೆ

–––

₹12.59 ರಾಜ್ಯ ಸರ್ಕಾರವು ವಿಧಿಸುವ ವ್ಯಾಟ್‌ (ಶೇ 14.34ರಂತೆ)

₹18.8 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಹೆಚ್ಚುವರಿ ಆಮದು ಸುಂಕ

₹1.80 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಮೂಲ ಎಕ್ಸೈಸ್‌ ಸುಂಕ

₹8 ಕೇಂದ್ರ ಸರ್ಕಾರವು ವಿಧಿಸುತ್ತಿರುವ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ

₹4 ಕೇಂದ್ರ ಸರ್ಕಾರವು ವಿಧಿಸುತ್ತಿರುವ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌

₹2 ಕೇಂದ್ರ ಸರ್ಕಾರವು ವಿಧಿಸುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌

₹2 ಡೀಲರ್ ಕಮಿಷನ್‌

₹38.65 ಪ್ರತಿ ಲೀಟರ್‌ ಪೆಟ್ರೋಲ್‌ನ ಮೂಲ ಬೆಲೆ (ಶೇ 2.50ರಷ್ಟು ಆಮದು ಸುಂಕ, ಸಂಸ್ಕರಣ ಶುಲ್ಕ, ಸಾಗಣೆ ಶುಲ್ಕ ಒಳಗೊಂಡಿದೆ)

ರಷ್ಯಾದ ಕಚ್ಚಾತೈಲದ ಬೆಲೆಯೆಷ್ಟು?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಇರುವ ಬೆಲೆಗಿಂತ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾತೈಲವನ್ನು ರಷ್ಯಾ ಪೂರೈಸುತ್ತಿದೆ. ರಷ್ಯಾ ಮೇಲಿರುವ ನಿರ್ಬಂಧಗಳ ಕಾರಣದಿಂದಾಗಿ ಈ ವಹಿವಾಟು ರೂಪಾಯಿ ಮತ್ತು ರೂಬಲ್‌ನಲ್ಲಿಯೇ ನಡೆಯುತ್ತಿದೆ. ಆದರೆ, ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಪ್ರತಿ ಬ್ಯಾರಲ್‌ ಕಚ್ಚಾತೈಲಕ್ಕೆ ಪಾವತಿಸುತ್ತಿರುವ ಮೊತ್ತವೆಷ್ಟು ಎಂಬುದನ್ನು ಸರ್ಕಾರವು ಬಹಿರಂಗಪಡಿಸಿಲ್ಲ. ಈ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ಬೆಲೆಯಲ್ಲಿ ಇಳಿಕೆಯಾಗದೇ ಇರುವ ಕಾರಣ, ರಷ್ಯಾದಿಂದ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಕಚ್ಚಾತೈಲದ ಲಾಭವು ಗ್ರಾಹಕರಿಗೆ ಸಿಗುತ್ತಿಲ್ಲ.

ಉಕ್ರೇನ್‌ ಮತ್ತು ರಷ್ಯಾ ಯುದ್ಧದ ನಂತರ, ರಷ್ಯಾದಿಂದ ಭಾರತವು ಖರೀದಿಸುತ್ತಿರುವ ಕಚ್ಚಾತೈಲದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. 2021–22ರಲ್ಲಿ ಭಾರತವು ರಷ್ಯಾದಿಂದ ಒಟ್ಟು 43.16 ಲಕ್ಷ ಟನ್‌ಗಳಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಂಡಿತ್ತು. ಆದರೆ ರಷ್ಯಾದಿಂದ ಕಚ್ಚಾತೈಲದ ಆಮದು ಪ್ರಮಾಣವು 2022–23ನೇ ಸಾಲಿನ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಒಟ್ಟು 3.82 ಕೋಟಿ ಟನ್‌ಗಳಿಗೆ ಏರಿಕೆಯಾಗಿದೆ. ಒಂಬತ್ತೇ ತಿಂಗಳಲ್ಲಿ ರಷ್ಯಾದಿಂದ ಕಚ್ಚಾತೈಲದ ಆಮದು ಪ್ರಮಾಣ ಶೇ 785ರಷ್ಟು ಏರಿಕೆ ಕಂಡಿದೆ.


ಆಧಾರ: ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಬೆಲೆ ವಿಶ್ಲೇಷಣಾ ಘಟಕ’ದ ವರದಿಗಳು, ವಾಣಿಜ್ಯ ಸಚಿವಾಲಯದ ಆಮದು–ರಫ್ತು ದತ್ತಾಂಶ ಬ್ಯಾಂಕ್‌ ವರದಿಗಳು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.