ADVERTISEMENT

ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಸದಾಶಿವ ಆಯೋಗದ ವರದಿ ಮಾನದಂಡವಾಗದು

ವರದಿಯಲ್ಲಿ ಅವಾಸ್ತವಿಕ ಮಾಹಿತಿ ಇದೆ, ಹೊಸ ಸಮೀಕ್ಷೆ ನಡೆಸುವುದು ಅವಶ್ಯಕ

ಪ್ರಜಾವಾಣಿ ವಿಶೇಷ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸೇರಿದಂತೆ ಹಾಲಿ ಇರುವ ಕೆಲವು ವರದಿಗಳ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಗಳಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಸದಾಶಿವ ಆಯೋಗದ ವರದಿಯ ಪ್ರಮುಖ ಅಂಶಗಳು ಅವಾಸ್ತವಿಕತೆಯಿಂದ ಕೂಡಿವೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ನಿಗದಿಯಾಗಿರುವ ಶೇಕಡ 15ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಅಸ್ಪೃಶ್ಯರು, ಸ್ಪೃಶ್ಯರು ಮತ್ತು ಇತರರಿಗೆ ಹಂಚಿಕೆ ಮಾಡುವ ಬಗ್ಗೆ 2005ರಲ್ಲಿ ರಚನೆಯಾದ ಸದಾಶಿವ ಆಯೋಗವು 2012ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ವರದಿಯ ಪೂರ್ಣ ವಿವರವಿಲ್ಲದೆ ಪರಿಶಿಷ್ಟ ಜಾತಿಯ ಎಡಗೈ ಸಮೂಹವು ವರದಿ ಜಾರಿಗೆ ಹೋರಾಟ ಮಾಡುತ್ತಾ, ರಾಜಕೀಯ ಒತ್ತಡ ಹೇರುತ್ತಾ, ಸಮುದಾಯದ ಭಾವನೆಗಳ ಕೆರಳಿಸುವಂತಹ ಹೇಳಿಕೆಗಳನ್ನು ಪ್ರತಿನಿತ್ಯ ನೀಡುತ್ತಿದೆ. ಬಲಗೈ ಸಮೂಹ ಭಾಗಶಃ ವರದಿಯ ಜಾರಿಗೆ ಸಮ್ಮತಿಸಿದೆ. ಆದರೆ, ವರದಿಯ ಪೂರ್ಣ ಮಾಹಿತಿ ಇಲ್ಲದಿರುವುದರಿಂದ ಅರೆಮನಸ್ಸಿನಿಂದ ಒದ್ದಾಡುತ್ತಿದೆ. ಇನ್ನು ಸ್ಪೃಶ್ಯ ಮತ್ತು ಇತರ ಜನಾಂಗದವರು ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಸದಾಶಿವ ಆಯೋಗದ ವರದಿ ಸೇರಿದಂತೆ ಹಾಲಿ ಇರುವ ಕೆಲವು ವರದಿಗಳ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಗಳಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ನಾನು ಇಲ್ಲಿ ಸದಾಶಿವ ಆಯೋಗದ ವರದಿಯಲ್ಲಿನ ಲೋಪಗಳನ್ನು ಜನರ ಗಮನಕ್ಕೆ ತರಲು ಬಯಸುತ್ತೇನೆ. ಸದಾಶಿವ ಆಯೋಗದ ವರದಿಯ ಪ್ರಮುಖ ಅಂಶಗಳು ಅವಾಸ್ತವಿಕತೆಯಿಂದ ಕೂಡಿದ್ದು, ತಪ್ಪು ಅಂಕಿಅಂಶಗಳನ್ನು ಹೊಂದಿವೆ. 

ADVERTISEMENT

ಸದಾಶಿವ ಆಯೋಗದ ವರದಿಯಲ್ಲಿನ ಲೋಪಗಳು

1. ಜನಸಂಖ್ಯೆ: ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಜನಸಂಖ್ಯೆಯು ಬಲಗೈ ಸಮುದಾಯಕ್ಕಿಂತ ಶೇಕಡ 1.46ರಷ್ಟು ಹೆಚ್ಚು ಇದೆ ಎಂಬುದು ತಪ್ಪು ಮಾಹಿತಿ. ಏಕೆಂದರೆ, ವರದಿಯಲ್ಲಿ ನಮೂದಿಸಿರುವಂತೆ 6.52 ಲಕ್ಷ ಜನರು ತಮ್ಮ ಉಪಜಾತಿಯನ್ನು ನಮೂದಿಸಿಲ್ಲದ ಕಾರಣ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಎಂದು ತೀರ್ಮಾನಿಸಿರುವುದು ಸಮಂಜಸವಾದ ಕ್ರಮವಲ್ಲ. ಇದರಿಂದಾಗಿ ವರದಿಯಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇಲ್ಲವಾಗಿದೆ.

ರಾಜ್ಯದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ಆದಿ ಕರ್ನಾಟಕ ಎಂದರೆ ಬಲಗೈ ಸಮೂಹ ಎಂದು; ತುಮಕೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಆದಿ ಕರ್ನಾಟಕ ಎಂದರೆ ಎಡಗೈ ಸಮೂಹ ಎಂದು ಪರಿಗಣಿತವಾಗಿದೆ. ಹಾಗೆಯೇ ಮಂಗಳೂರು, ಉಡುಪಿ, ಕಾರವಾರ ಮುಂತಾದ ಜಿಲ್ಲೆಗಳಲ್ಲಿ ಆದಿ ದ್ರಾವಿಡ ಎಂದರೆ ಬಲಗೈ ಸಮೂಹ ಎಂದು ಪರಿಗಣಿಸಲಾಗುತ್ತಿದೆ; ಕಲಬುರಗಿ ಮತ್ತು ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಛಲವಾದಿ ಎಂದು ಕರೆಯಲಾಗುತ್ತದೆ. ಹೀಗಾಗಿ, ಸದಾಶಿವ ಆಯೋಗವು ಉಪಜಾತಿಗಳ ವರ್ಗೀಕರಣ ಹಾಗೂ ಜನಸಂಖ್ಯೆಯ ಪ್ರಮಾಣವನ್ನು ನಿಗದಿಪಡಿಸುವಲ್ಲಿ ಅನುಸರಿಸಿರುವ ಮಾರ್ಗ ಪಾರದರ್ಶಕವಾಗಿಲ್ಲ.

2. ಉದ್ಯೋಗ: 2012ರಲ್ಲಿ ನೀಡಿರುವ ಸದಾಶಿವ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸರ್ಕಾರಿ ಉದ್ಯೋಗದಲ್ಲಿ ದೊರೆತಿರುವ ಪ್ರಾತಿನಿಧ್ಯ 1,54,525 ಎಂದು ಉಲ್ಲೇಖಿಸಲಾಗಿದೆ. ಈ ವರದಿಯ ಬಗ್ಗೆ ಅನುಮಾನ ಬಂದ ಕಾರಣ 2015ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿಗೆ ದೊರೆತಿರುವ ಪ್ರಾತಿನಿಧ್ಯವನ್ನು ಪರಿಶೀಲಿಸಿದಾಗ, 97,022 ಜನರಿಗೆ ಮಾತ್ರ ಸರ್ಕಾರಿ ಉದ್ಯೋಗ ದೊರಕಿದೆ. ಸದಾಶಿವ ಆಯೋಗದ ವರದಿಯಲ್ಲಿ ಇರುವುದಕ್ಕಿಂತ 2012ರಿಂದ 2015ರ ನಡುವೆ 57,503 ಜನರಿಗೆ ಉದ್ಯೋಗ ಕಡಿಮೆಯಾಗಿರುವುದು ಕಂಡುಬರುತ್ತಿದೆ. 2012ರಿಂದ 2015ರ ನಡುವೆ 57,503 ಜನರು ನಿವೃತ್ತಿಯಾಗಿರುವುದು ಸಾಧ್ಯವೇ ಇಲ್ಲ. ಅದೇ ರೀತಿ 2016ರಲ್ಲಿ 79,401 ಮಂದಿ ಪರಿಶಿಷ್ಟ ಜಾತಿಯವರು ಸರ್ಕಾರಿ ಸೇವೆಯಲ್ಲಿದ್ದು, 2012ರಿಂದ 2016 ರವರೆಗೆ 75,124 ಜನರು ನಿವೃತ್ತಿಯಾಗಿದ್ದಾರೆ ಎಂಬುದು ಸಂಶಯಾಸ್ಪದವಾಗಿದೆ. ಆದ್ದರಿಂದ ವರದಿಯಲ್ಲಿರುವ ಅಂಕಿಅಂಶಗಳು ತಪ್ಪಾಗಿವೆ.

3. ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 1.04 ಕೋಟಿ ಇದ್ದರೂ, ಸದಾಶಿವ ಆಯೋಗದಲ್ಲಿ 96,66,051 ಎಂದು ನಮೂದಿಸಲಾಗಿದೆ.

4. ಭೂಮಿ ಹೊಂದಿರುವ ಪರಿಶಿಷ್ಟ ಜಾತಿಯ ಸಮುದಾಯ ಸದಾಶಿವ ಆಯೋಗದ ವರದಿಯಲ್ಲಿ 3,24,800 ಎಂದು ದಾಖಲಿಸಲಾಗಿದೆ. ಆದರೆ, 2015ರ ಕೃಷಿ ಗಣತಿ ಪ್ರಕಾರ, ಭೂಮಿಯನ್ನು ಹೊಂದಿರುವ ಪರಿಶಿಷ್ಟ ಜಾತಿಯವರು 9.73 ಲಕ್ಷ. 

5. ಆಯೋಗವು ಆಶ್ರಯ, ಡಾ.ಬಿ.ಆರ್.ಅಂಬೇಡ್ಕ‌ರ್ ವಸತಿ ಯೋಜನೆ, ಇಂದಿರಾ ಆವಾಸ್ ವಸತಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಲಕರ ವೇತನ, ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪಡೆದಿರುವ ಕುರಿ, ಕೋಳಿ, ಹಸು ಮುಂತಾದ ಸಣ್ಣಪುಟ್ಟ ಸಾಲ ಪಡೆದಿರುವ ಜನರ ಸಂಖ್ಯೆಯನ್ನು ಆಧರಿಸಿ ಮೀಸಲಾತಿಯನ್ನು ವಿಂಗಡಿಸಿದೆ.

6. ಆಯೋಗದಲ್ಲಿ 6.52 ಲಕ್ಷ ಜನರ ಉಪಜಾತಿಯನ್ನು ನಮೂದಿಸಲಾಗಿಲ್ಲ. ಹಾಗೆಯೇ, ಆಯೋಗವು 7,33,949 ಜನರನ್ನು ಗಣನೆಗೆ ತೆಗೆದುಕೊಂಡಿಲ್ಲ. ಇವರೆಡರ ಒಟ್ಟು ಸಂಖ್ಯೆ 13,85,949 ಆಗುತ್ತದೆ. 

7. ಪರಿಶಿಷ್ಟ ಜಾತಿಯ ಎಡಗೈ ಸಮೂಹ 32,35,517 ಇದ್ದು, ಬಲಗೈ ಸಮೂಹ 30,93,693 ಇದ್ದು, ವ್ಯತ್ಯಾಸ 1,41,824 ಆಗಿದೆ. ವರದಿಯಲ್ಲಿ ಉಲ್ಲೇಖವಾಗಿರುವಂತೆ, ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಆಗಿರುವ 13,85,949 ಜನರನ್ನು ಗಣನೆಗೆ ತೆಗೆದುಕೊಂಡರೆ, ಯಾವ ಸಮುದಾಯದ ಸಂಖ್ಯೆ ಹೆಚ್ಚಾಗುತ್ತದೆ ಎಂಬುದು ನಿಖರವಾಗಿ ತಿಳಿಯುತ್ತದೆ.

8. ಆಯೋಗದ ವರದಿಯಲ್ಲಿ ಮೂರು ಪುಟಗಳನ್ನು ಕೈನಿಂದ ಬರೆಯಲಾಗಿದೆ. ಅದನ್ನು ಯಾರು ಬರೆದರು, ಯಾಕೆ ಬರೆದರು ಎಂಬುದು ಸ್ಪಷ್ಟವಾಗಿಲ್ಲ.

9. ಆಯೋಗವು ಗ್ರೂಪ್ ‘ಎ’ ಮತ್ತು ‘ಬಿ’ ನೌಕರ ವರ್ಗಕ್ಕೆ ಒಂದೇ ತಲೆಮಾರಿಗೆ ಮೀಸಲಾತಿ ಮಿತಿಗೊಳಿಸಿದೆ. ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ವರ್ಗದ ನೌಕರರ ಮಕ್ಕಳಿಗೆ ಮೀಸಲಾತಿ ನೀಡಬಾರದೆಂದು ಮಾಡಿರುವ ಶಿಫಾರಸು ಅವೈಜ್ಞಾನಿಕವಾಗಿದೆ. ಏಕೆಂದರೆ, ಭಾರತದಲ್ಲಿ ಆರ್ಥಿಕ ಮಾನದಂಡಕ್ಕಿಂತ ಸಾಮಾಜಿಕ ಮಾನದಂಡವೇ ವ್ಯಕ್ತಿಯ ಘನತೆಗೆ ಕುಂದು ತರುವಂತಹ ಕೆಲಸ ನಿರ್ವಹಿಸುತ್ತಿದ್ದು, ಅದರ ಆಧಾರದಲ್ಲಿಯೇ ಮೀಸಲಾತಿ ನಿಗದಿ‍‍ಪಡಿಸಬೇಕು.  

ಕರ್ನಾಟಕದಲ್ಲಿ 1.05 ಕೋಟಿ ಜನಸಂಖ್ಯೆ ಹೊಂದಿರುವ ಏಕೈಕ ಸಮುದಾಯ ಪರಿಶಿಷ್ಟ ಜಾತಿ; ಸಮುದಾಯದಲ್ಲಿ ದಕ್ಷ, ಪ್ರಾಮಾಣಿಕ, ಸೋಲರಿಯದ ರಾಜಕಾರಣಿಗಳಿದ್ದರೂ ಈವರೆಗೂ ರಾಜ್ಯ ದಲಿತ ಮುಖ್ಯಮಂತ್ರಿಯನ್ನು ಕಂಡಿಲ್ಲ. ಇಂತಹ ರಾಜ್ಯದಲ್ಲಿ ಮೊದಲ ತಲೆಮಾರಿಗೆ ಮೀಸಲಾತಿ ಮಿತಿಗೊಳಿಸುವುದು ದಲಿತ ವಿರೋಧಿ ಮನಃಸ್ಥಿತಿಯ, ಸಾಮಾಜಿಕ ಸಮಾನತೆ ಹಾಗೂ ದಲಿತರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಹಿಸದ ಮನುವಾದವನ್ನು ಬೇರೆ ಮುಖವಾಡದೊಂದಿಗೆ ಬಿಂಬಿಸುವ ವರದಿ ಇದು. ಈ ವರದಿಯನ್ನು ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ತಿರಸ್ಕರಿಸಿತ್ತು. ಆದರೆ, ಇದೇ ಅಂಕಿಅಂಶ ಬಳಸಿಕೊಂಡು ಒಳ ಮೀಸಲಾತಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ‌ತ್ತು.

ಈಗ ಆಗಬೇಕಿರುವುದೇನು?

* ಎಸ್‌ಸಿ ಎಸ್‌ಪಿ–ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡಿ ಮೂರು ತಿಂಗಳಲ್ಲಿ ಸಮಗ್ರವಾದ ಸಮೀಕ್ಷೆ ನಡೆಸಿ ಒಳ ಮೀಸಲಾತಿಯನ್ನು ಜಾರಿಗೊಳಿಸುವುದು ಸೂಕ್ತ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಜಾತಿ ಗಣತಿಯನ್ನು ಪ್ರಕಟಿಸಿ ಅಲ್ಲಿರುವ ಅಂಕಿಅಂಶಗಳ ಆಧಾರದಲ್ಲಿ ಒಳ ಮೀಸಲಾತಿ ನಿಗದಿಪಡಿಸುವುದು ಸೂಕ್ತ

* ಆದಿ ಕರ್ನಾಟಕ, ಆದಿ ದ್ರಾವಿಡ ಪದಗಳನ್ನು ವಿವಿಧ ಜಿಲ್ಲೆಗಳಲ್ಲಿ ವಿವಿಧ ಉಪಜಾತಿಗಳಿಗೆ ಬಳಸಲಾಗುತ್ತಿದ್ದು, ಅದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ 

* ಸರ್ಕಾರಿ ನೌಕರರ ಸಂಖ್ಯೆಯ ಸರಿಯಾದ ಮಾಹಿತಿ ಕಲೆಹಾಕಬೇಕಿದೆ

* ಭೂಮಿ ಹೊಂದಿರುವ ಪರಿಶಿಷ್ಟ ಜಾತಿಯ ಒಳಪಂಗಡಗಳ ಬಗ್ಗೆ ಸ್ಪಷ್ಟ ಮಾಹಿತಿ ಬೇಕಿದೆ

* ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಕೆನೆಪದರದ ಬಗ್ಗೆ ಪ್ರಸ್ತಾಪಿಸಿದೆ. ಸಂವಿಧಾನದ 15 ಮತ್ತು 16 ಪರಿಚ್ಛೇದಕ್ಕೆ ಇದು ವ್ಯತಿರಿಕ್ತವಾಗಿರುವುದರಿಂದ ಕೆನೆಪದರವನ್ನು ಕೈಬಿಡಬೇಕಾಗಿದೆ. ಪ್ರತಿ ಜಿಲ್ಲೆಯ ಪ್ರತಿ ಒಳಪಂಗಡದ ತಲಾ ಐದು ಮುಖಂಡರನ್ನು ಕೂರಿಸಿಕೊಂಡು ಎಡ ಸಮುದಾಯಕ್ಕೆ ಬರುವ ಜಾತಿಗಳ ವಿವರ ಹಾಗೂ ಬಲ ಸಮುದಾಯಕ್ಕೆ ಬರುವ ಜಾತಿಗಳ ವಿವರಗಳನ್ನು ಪಡೆದು, ಎಡ ಮತ್ತು ಬಲ ಜಾತಿಗಳನ್ನು ವರ್ಗೀಕರಿಸುವುದು ಸೂಕ್ತ.

ಡಿ. ಚಂದ್ರಶೇಖರಯ್ಯ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ

ತೋರ್ಪಡಿಕೆಯ ಬೆಂಬಲ

ಹಲವು ದಶಕ ರಕ್ತ, ಬೆವರು ಹರಿಸಿ ನಡೆಸಿದ ಒಳ ಮೀಸಲಾತಿ ಹೋರಾಟ ಈಗ ಒಂದು ನಿರ್ಣಾಯಕ ಹಂತ ತಲುಪಿದೆ. ಒಳಗೊಳಗೆ ವಿರೋಧಿಸುತ್ತಾ ಹೊರಗೆ ಮಾತ್ರ ಒಳ ಮೀಸಲಾತಿ ಜಾರಿಯಾಗಲಿ ಎಂದು ಆಶಿಸುವ ಒಂದು ದೊಡ್ಡ ಗುಂಪು ಒಳ ಮೀಸಲಾತಿ ಜಾರಿಯಾಗದಂತೆ ಇನ್ನಿಲ್ಲದ ನೆಪಗಳನ್ನು ಸೃಷ್ಟಿಸುತ್ತಾ, ಕಾಗಕ್ಕ ‌ಗುಬ್ಬಕ್ಕನ ಕಥೆಯಲ್ಲಿನ ಮುಂದೂಡುವ ತಂತ್ರ ಪ್ರಯೋಗಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮೀಸಲಾತಿ ಪ್ರಮಾಣ ಹಂಚಿಕೆಯ ಬಗ್ಗೆ ಮೊದಲಿನಿಂದಲೂ ತಕರಾರುಗಳಿವೆ. ಅದನ್ನು ಇತ್ಯರ್ಥಪಡಿಸಿ ಕೊಳ್ಳುವುದು ಕಷ್ಟವೇನಲ್ಲ. ಸರಳವಾಗಿ ಹೇಳುವುದಾದರೆ, ಒಳ ಮೀಸಲಾತಿ ಹಂಚಿಕೆಯಾಗಬೇಕಾಗಿರುವುದು ಅಸ್ಪೃಶ್ಯ ಜಾತಿಗಳಾದ ಹೊಲೆಯ ಮತ್ತು ಸಂಬಂಧಿತ ಜಾತಿಗಳ ಒಂದು ಗುಂಪು ಹಾಗೂ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳ ಇನ್ನೊಂದು ಗುಂಪು ಹಾಗೂ ಸ್ಪೃಶ್ಯ ಜಾತಿಗಳ ಮತ್ತೊಂದು ಗುಂಪು ಹಾಗೂ ಇನ್ನುಳಿದ ಜಾತಿಗಳ ನಡುವೆ. ಇವುಗಳ ವರ್ಗೀಕರಣ ಸುಲಭವಲ್ಲ ಎಂಬ ವಾದ ಮುಂದಿಡಲಾಗುತ್ತಿದೆ.

ಪ್ರಸ್ತುತ ವಿವಿಧ ಜಾತಿಯ ಪರಿಶಿಷ್ಟ ಜನಾಂಗದವರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವರಲ್ಲಿ ಗೊಂದಲಗಳು ಇರುವುದು ನಿಜ. ಆದರೆ, ಅದನ್ನು ನಿವಾರಿಸುವುದು ಕಷ್ಟವೇನಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿವಿಧ ಪರಿಶಿಷ್ಟ ಜಾತಿಯ ಜನರ ಗಣತಿಯನ್ನು ಮಾಡಿಸುವ ಬಗ್ಗೆ ಸೂಕ್ತ ನಿರ್ದೇಶನಗಳನ್ನು ಕೊಟ್ಟು ಆಯಾ ಜಾತಿಯ ಜನರಿಗೆ ಅದೇ ಜಾತಿಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ವಿತರಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಂತ ಕಡಿಮೆ ಅವಧಿಯಲ್ಲಿ ಜಾತಿ ಗಣತಿ ಆಗುತ್ತದೆ. ಸುಲಭದಲ್ಲಿ ಬಗೆಹರಿಯ ಬಹುದಾದ ಹಂಚಿಕೆಯ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಾ ಆಳುವ ಸರ್ಕಾರಗಳ ಪಾಲಿಗೆ ಮುಂದೂಡುವ ಅಸ್ತ್ರಗಳನ್ನು ನೀಡಿ ಒಳ ಮೀಸಲಾತಿಯ ಲಾಭ ಪಡೆಯದಂತೆ ವಂಚಿಸುವ ಹುನ್ನಾರ ನಿಲ್ಲಬೇಕು.

–ಮಧುಕುಮಾರ ಸಿ.ಎಚ್., ಚಾಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.