ಭಯೋತ್ಪಾದನೆ, ಹಿಂಸಾಚಾರದ ಕಾರಣಕ್ಕೆ ಸದಾ ಬಂದೂಕಿನ ಭದ್ರತೆಯಲ್ಲಿರುವ ಭಾರತದ ಭೂಶಿರ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಸಜ್ಜಾಗುತ್ತಿದೆ. ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಪಡಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು.
ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ರಾಜ್ಯದ ವಿಶೇಷ ಸ್ಥಾನಮಾನ ತೆಗೆದುಹಾಕಿ ಅದನ್ನು ವಿಧಾನಸಭೆಯುಳ್ಳ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಅದರ ಭಾಗವಾಗಿದ್ದ ಲಡಾಖ್ ಅನ್ನೂ (ವಿಧಾನಸಭೆ ಇಲ್ಲದ) ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು. ಆಗಿನಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ತ್ವರಿತವಾಗಿ ಚುನಾವಣೆ ನಡೆಸಬೇಕು ಎನ್ನುವ ಬೇಡಿಕೆ ವಿವಿಧ ವಲಯಗಳಿಂದ ಕೇಳಿಬರುತ್ತಲೇ ಇತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿದ್ದು 2014ರಲ್ಲಿ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯು (ಪಿಡಿಪಿ) ಬಿಜೆಪಿ ಜತೆಗೆ ಮೈತ್ರಿ ಏರ್ಪಡಿಸಿಕೊಂಡು ಸರ್ಕಾರ ರಚನೆ ಮಾಡಿತ್ತು. ಪಿಡಿಪಿ ನಾಯಕ ಮುಫ್ತಿ ಮಹಮ್ಮದ್ ಸಯೀದ್ ಮುಖ್ಯಮಂತ್ರಿ ಆಗಿದ್ದರು. ಅವರು 2015ರಲ್ಲಿ ನಿಧನರಾದ ನಂತರ ಅವರ ಮಗಳು ಮೆಹಬೂಬ ಮುಫ್ತಿ ಮುಖ್ಯಮಂತ್ರಿ ಗಾದಿಗೇರಿದ್ದರು. 2018ರಲ್ಲಿ ಬಿಜೆಪಿಯು ಪಿಡಿಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದರೊಂದಿಗೆ ಸರ್ಕಾರ ಪತನಗೊಂಡಿತ್ತು. ಅಂದಿನಿಂದಲೂ ಚುನಾಯಿತ ಸರ್ಕಾರ ಅಲ್ಲಿಲ್ಲ. ಸುಪ್ರೀಂ ಕೋರ್ಟ್, 2024ರ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು.
ವಿಧಾನಸಭಾ ಚುನಾವಣೆ ನಡೆದರೂ, ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಸಿಗುವುದು ಅತ್ಯಲ್ಪ ಅಧಿಕಾರ ಎನ್ನುವ ಟೀಕೆ ವ್ಯಕ್ತವಾಗಿದೆ. ಏಕೆಂದರೆ, ಕೇಂದ್ರವು ಜುಲೈ 12ರಂದು ಜಮ್ಮು–ಕಾಶ್ಮೀರ ಪುನರ್‌ವಿಂಗಡಣೆ ಕಾಯ್ದೆಗೆ ತಿದ್ದುಪಡಿ ತಂದು, ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ಕೆಲವೇ ವಲಯಗಳ ಅಧಿಕಾರ ಮಾತ್ರ ಸರ್ಕಾರದ ಕೈಯಲ್ಲಿರುತ್ತದೆ. ಉಳಿದ ಅಧಿಕಾರವನ್ನು ಕೇಂದ್ರದಿಂದ ನೇಮಕವಾಗುವ ಎಲ್‌ಜಿ ಹೊಂದಿರುತ್ತಾರೆ.
ಹಿಂದೆ ರಾಜ್ಯದಲ್ಲಿ ಚುನಾವಣೆಗಳು ನಡೆದಾಗಲೆಲ್ಲ ಉಗ್ರರು ಅವನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಸಹಜವಾಗಿಯೇ ಮತದಾನ ಪ್ರಮಾಣ ಕಡಿಮೆ ಇರುತ್ತಿತ್ತು. ಆದರೆ, ಈ ವರ್ಷ ಏಪ್ರಿಲ್–ಮೇನಲ್ಲಿ ಐದು ಲೋಕಸಭಾ ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯು ಬಹುತೇಕ ಶಾಂತಿಯುತವಾಗಿತ್ತು. ಜತೆಗೆ 35 ವರ್ಷಗಳಲ್ಲಿಯೇ ಅತಿಹೆಚ್ಚು ಮತದಾನ ಪ್ರಮಾಣ ದಾಖಲಾಗಿತ್ತು (ಶೇ 58.6). 2019ರ ಲೋಕಸಭಾ ಚುನಾವಣೆಗಿಂತಲೂ ಶೇ 30ರಷ್ಟು ಹೆಚ್ಚು ಮತದಾನವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನ ವಿಶ್ವಾಸ ಇಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಶ್ಲಾಘಿಸಿತ್ತು. ಶೀಘ್ರದಲ್ಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಾಗಿ ಭರವಸೆಯನ್ನೂ ನೀಡಲಾಗಿತ್ತು.
ಹಿಂದಿನ ಚುನಾವಣೆಗಳ ವೇಳೆ, ಮತದಾನ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ಪ್ರಮುಖ ಪ್ರತ್ಯೇಕತಾವಾದಿ ನಾಯಕರು ಈಗ ಜೈಲಿನಲ್ಲಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜನರೂ ಮತದಾನದ ಬಗ್ಗೆ ಉತ್ಸಾಹ ಹೊಂದಿದ್ದಾರೆ. ಇಂಥ ಸ್ಥಿತಿಯಲ್ಲಿ, ಒಂದು ದಶಕದ ನಂತರ, ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ
ಎಲ್‌ಜಿಗೆ ಹೆಚ್ಚಿನ ಅಧಿಕಾರ ನೀಡುವ ಜಮ್ಮು–ಕಾಶ್ಮೀರ ಪುನರ್‌ವಿಂಗಡಣೆ ಕಾಯ್ದೆಯ ತಿದ್ದುಪಡಿ
ವಿಶೇಷ ಸ್ಥಾನಮಾನ ರದ್ದತಿಯ ನಂತರದ ಎಲ್‌ಜಿ ಆಡಳಿತ ವೈಖರಿ
ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ವ್ಯವಸ್ಥೆ, ಹೆಚ್ಚಿದ ಸೇನಾ ಸಿಬ್ಬಂದಿ –ಪೊಲೀಸರ ಹತ್ಯೆ
ಹೊರ ರಾಜ್ಯದ ಕಾರ್ಮಿಕರು, ಪ್ರವಾಸಿಗರ ಮೇಲೆ ನಡೆಯುತ್ತಿರುವ ದಾಳಿಗಳು
ಒಳನುಸುಳುವಿಕೆ, ಜಮ್ಮು ಪ್ರಾಂತ್ಯದಲ್ಲಿ ಹೆಚ್ಚಾದ ಹಿಂಸಾಚಾರ
ರಾಜ್ಯದಾದ್ಯಂತ ತೀವ್ರವಾಗಿರುವ ವಿದ್ಯುತ್ ಸಮಸ್ಯೆ
2019ರ ನಂತರ ರಾಜ್ಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು`
ಜಮ್ಮು ಮತ್ತು ಕಾಶ್ಮೀರದಲ್ಲಿ 2024ರ ಸೆಪ್ಟೆಂಬರ್ 30ರ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ 2023ರ ಡಿಸೆಂಬರ್‌ನಲ್ಲಿ ಆದೇಶ ನೀಡಿತ್ತು. ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ಆದಷ್ಟು ಬೇಗ ರಾಜ್ಯದ ಸ್ಥಾನಮಾನ ಮರಳಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು.ದೇಶದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ಪರಿಪೂರ್ಣವಾಗಿ ಅನ್ವಯವಾಗುತ್ತದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, 370ನೇ ವಿಧಿಯು ತಾತ್ಕಾಲಿಕ ಉದ್ದೇಶಕ್ಕೆ ಜಾರಿಯಾಗಿತ್ತು ಎಂದು ಹೇಳಿತ್ತು.
ಚುನಾವಣೆ ಮೇಲೆ ಉಗ್ರರ ಕರಿ ನೆರಳು ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ಹೊಂದಿದ್ದ ರಾಜ್ಯವಾಗಿದ್ದಾಗ ಹೆಚ್ಚು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿದ್ದದ್ದು ಕಾಶ್ಮೀರ ಕಣಿವೆಯಲ್ಲಿ. ವಿಶೇಷ ಸ್ಥಾನಮಾನದ ರದ್ದತಿಯ ನಂತರ ಒಂದಷ್ಟು ಕಾಲ ಉಗ್ರ ದಾಳಿಗಳು ಕಡಿಮೆಯಾದಂತೆ ಕಂಡಿತು. ಆದರೆ, ಇತ್ತೀಚೆಗೆ ಉಗ್ರರು ತಮ್ಮ ತಂತ್ರಗಾರಿಕೆ ಬದಲಿಸಿದ್ದು, ಜಮ್ಮುವಿನತ್ತ ಗಮನ ಕೇಂದ್ರೀಕರಿಸಿದ್ದಾರೆ. ಅದರಲ್ಲೂ ಪೂಂಚ್, ರಾಜೌರೀ, ಕಠುವಾ, ರಿಯಾಸಿ, ಉಧಂಪುರ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಚುನಾವಣೆಯ ಕಾಲದಲ್ಲಿ ಉಗ್ರರು ಹಾಗೂ ಭಾರತ ವಿರೋಧಿ ಶಕ್ತಿಗಳು ಪಿತೂರಿ ನಡೆಸಲು ಪ್ರಯತ್ನಿಸುವುದು ಸಹಜ. ಈ ದಿಸೆಯಲ್ಲಿ ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಿ, ಚುನಾವಣಾ ಪ್ರಕ್ರಿಯೆಯನ್ನು ನಿರ್ವಿಘ್ನವಾಗಿ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.