ADVERTISEMENT

ಆಳ–ಅಗಲ: ಡೆಂಗಿಗೆ ತತ್ತರಿಸಿದ ಕರುನಾಡು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 22:07 IST
Last Updated 2 ಜುಲೈ 2024, 22:07 IST
   

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಆರೋಗ್ಯ ಇಲಾಖೆಯ ಪ್ರಕಾರ, ಆರು ತಿಂಗಳ ಅವಧಿಯಲ್ಲಿ 6,377 ಪ್ರಕರಣಗಳು ವರದಿಯಾಗಿವೆ. ಆರು ಮಂದಿ ಮೃತಪಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಪ್ರತಿ ಮಳೆಗಾಲದ ಅವಧಿಯಲ್ಲಿ ಜಾಸ್ತಿ ವರದಿಯಾಗುವ ಪ್ರಕರಣಗಳ ನಿಯಂತ್ರಣಕ್ಕೆ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಫಲಕಾರಿಯಾಗುತ್ತಿರುವಂತೆ ಕಾಣುತ್ತಿಲ್ಲ.

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಗಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಮೇ ತಿಂಗಳ ನಂತರ ಡೆಂಗಿ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಡೆಂಗಿ ಪ್ರಕರಣಗಳ ಲೆಕ್ಕ ಮಾತ್ರ ಸಿಗುತ್ತಿದೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ರೋಗ ಪತ್ತೆ ಕೇಂದ್ರಗಳಲ್ಲಿ ದೃಢಪಡುತ್ತಿರುವ ಪ್ರಕರಣಗಳು ಪೂರ್ಣ ಪ್ರಮಾಣದಲ್ಲಿ ವರದಿಯಾಗುತ್ತಿಲ್ಲ. ಪರೀಕ್ಷೆಗೆ ಒಳಪಡದೆ ಮನೆಯಲ್ಲೇ ಇದ್ದುಕೊಂಡು, ಸ್ವಯಂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಗಣನೆಗೆ ಸಿಗುತ್ತಿಲ್ಲ. 

ರಾಜಧಾನಿಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜ್ವರ, ಮೈ–ಕೈ ನೋವು ರೋಗ ಲಕ್ಷಣದವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವುದು ಹೆಚ್ಚಾಗಿದೆ. ಜಿಲ್ಲೆಗಳ ಪೈಕಿ, ಚಿಕ್ಕಮಗಳೂರಿನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಮೈಸೂರು, ಹಾವೇರಿ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.

ADVERTISEMENT
ಪರೀಕ್ಷೆ ಜಾಸ್ತಿ ಮಾಡಿದ್ದರಿಂದ ಡೆಂಗಿ ಪ್ರಕರಣ ಹೆಚ್ಚು ಎಂಬಂತೆ ಕಾಣಿಸುತ್ತಿದೆ. ಡೆಂಗಿಯಿಂದ ಯಾರೊಬ್ಬರೂ ಮೃತಪಟ್ಟಿಲ್ಲ. ಜನರು ಆತಂಕಪಡುವ ಅಗತ್ಯ ಇಲ್ಲ.
–ಡಾ.ಅಶ್ವತ್ಥಬಾಬು, ಚಿಕ್ಕಮಗಳೂರು ಡಿಎಚ್ಒ

ಆರು ಮಂದಿ ಸಾವು

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಡೆಂಗಿ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ 0.5ಕ್ಕಿಂತ ಹೆಚ್ಚಿದ್ದರೆ ತೀರಾ ಅಪಾಯದ ಸ್ಥಿತಿ. ರಾಜ್ಯದಲ್ಲಿ ಮರಣ ಪ್ರಮಾಣ 0.09% ಇದೆ.‌ 

ರಾಜ್ಯದಲ್ಲಿ ಹಾಸನದಲ್ಲಿ ಇಬ್ಬರು, ಹಾವೇರಿ, ಬೆಂಗಳೂರು, ಧಾರವಾಡ ಮತ್ತು ಶಿವಮೊಗ್ಗಗಳಲ್ಲಿ ತಲಾ ಒಬ್ಬರು ಸೇರಿ 6 ಮಂದಿ ಮೃತಪಟ್ಟಿದ್ದಾರೆ.

ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಾರಕ್ಕೊಮ್ಮೆ ನೀರು ಬದಲಿಸುವ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದೇವೆ.ಫಾಗಿಂಗ್ ಹಾಗೂ ಲಾರ್ವಾ ಸಂಗ್ರಹಕ್ಕೆ ಮಾಡಲಾಗುತ್ತಿದೆ.
–ಡಾ.ಜಯಾನಂದ, ಹಾವೇರಿ ಡಿಎಚ್‌ಒ (ಪ್ರಭಾರ)

ಬೆಂಗಳೂರು ನಗರದಲ್ಲಿ ಡೆಂಗೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುತ್ತಿರುವ ಬಿಬಿಎಂಪಿ ಸಿಬ್ಬಂದಿ ಕಬ್ಬನ್ ಪಾರ್ಕ್ ನಲ್ಲಿ ಕಂಡುಬಂತು.

ಜಾಗತಿಕ ಸಮಸ್ಯೆ

ನಮ್ಮ ರಾಜ್ಯ ಮತ್ತು ದೇಶ ಅಷ್ಟೇ ಅಲ್ಲ; ಜಾಗತಿಕ ಮಟ್ಟದಲ್ಲಿಯೂ ಡೆಂಗಿ ಹಾವಳಿ ತೀವ್ರವಾಗಿದೆ. ಅಮೆರಿಕ ಒಂದರಲ್ಲೇ ಏಪ್ರಿಲ್ ಹೊತ್ತಿಗೆ 70 ಲಕ್ಷ ಮಂದಿ ಡೆಂಗಿಯಿಂದ ನರಳಿದ್ದಾರೆ. ಇದು ದಾಖಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ವರ್ಷ 46 ಲಕ್ಷ ಪ್ರಕರಣಗಳು ವರದಿಯಾಗಿದ್ದವು. 

ಐರೋಪ್ಯ ಒಕ್ಕೂಟದ ದೇಶಗಳು ಸೇರಿದಂತೆ ಜಗತ್ತಿನೆಲ್ಲೆಡೆ ಈಡಿಸ್ ಸೊಳ್ಳೆ ಉಪಟಳ ಹೆಚ್ಚಾಗಿದೆ. ಇದರ ಸಂತತಿ ಹೆಚ್ಚಾಗಲು ಹವಾಮಾನ ಬದಲಾವಣೆಯೂ ಒಂದು ಕಾರಣ ಎನ್ನಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಇದೇ ತಿಂಗಳು ಒಲಿಂಪಿಕ್ಸ್ ಆರಂಭವಾಗಲಿರುವುದರಿಂದ ಫ್ರಾನ್ಸ್ ಸರ್ಕಾರ ಡೆಂಗಿ ನಿಯಂತ್ರಣಕ್ಕೆ ವಿಶೇಷ ಮುತುವರ್ಜಿ ವಹಿಸಿದೆ.

ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ರೋಗ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಾರದಲ್ಲಿ ಒಂದು ದಿನ ಫಾಗಿಂಗ್‌ ಮಾಡಲಾಗುತ್ತಿದೆ.
–ಡಾ.ಪಿ.ಸಿ.ಕುಮಾರಸ್ವಾಮಿ, ಮೈಸೂರು ಡಿಎಚ್‌ಒ
ಡೆಂಗಿ: ಏನು, ಎತ್ತ?
  • ಇದೊಂದು ವೈರಲ್ ಸೋಂಕು 

  • ಹಗಲಿನಲ್ಲಿ ಕಚ್ಚುವ ಈಡೀಸ್‌ ಈಜಿಪ್ಟಿ ಸೊಳ್ಳೆಗಳಿಂದ ಹರಡುತ್ತದೆ

  • ತೆರೆದ ಪಾತ್ರೆ ಅಥವಾ ಇನ್ನಿತರ ಮುಚ್ಚಳ ಇಲ್ಲದಿರುವ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ

  • ಸೊಳ್ಳೆ ಕಚ್ಚಿದ 4–10 ದಿನಗಳ ಒಳಗೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ 

  • ತೀವ್ರ ಜ್ವರ, ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿ ನೋವು, ತಲೆ ನೋವು, ಮೈ-ಕೈ ನೋವು ಪ್ರಮುಖ ರೋಗ ಲಕ್ಷಣ

  • ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಇತರ ರೋಗ ಲಕ್ಷಣಗಳಿಂದ ಡೆಂಗಿ ದೃಢ

  • ನಿರ್ದಿಷ್ಟ ಚಿಕಿತ್ಸೆ, ಲಸಿಕೆ ಇಲ್ಲ

  • ರೋಗ ಲಕ್ಷಣಗಳಿಗೆ ಅನುಸಾರ ಚಿಕಿತ್ಸೆ‌

  • ಮುಂಜಾಗ್ರತೆಯೇ ಮದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು

  • ನಿರ್ಲಕ್ಷ್ಯ ವಹಿಸಿದರೆ ಜ್ವರ ಜೀವಕ್ಕೆ ಎರವಾಗಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.