ADVERTISEMENT

ಆಳ–ಅಗಲ: ಡಿಜಿಟಲ್ ಅರೆಸ್ಟ್; ವಿನೂತನ ಸುಲಿಗೆ

ಫೋನ್, ವಿಡಿಯೊ ಕರೆ ಮೂಲಕ ಗೃಹಬಂಧನ; ಕೂತಲ್ಲಿಂದಲೇ ಹಣ ಲೂಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 23:50 IST
Last Updated 5 ನವೆಂಬರ್ 2024, 23:50 IST
<div class="paragraphs"><p>ಎಐ ಚಿತ್ರ: ಕಣಕಾಲಮಠ</p></div>

ಎಐ ಚಿತ್ರ: ಕಣಕಾಲಮಠ

   

ಸೈಬರ್ ಖದೀಮರು ವಿನೂತನ ವಂಚನೆಯ ವಿಧಾನಗಳನ್ನು ಅನುಸರಿಸತೊಡಗಿದ್ದಾರೆ. ಒಂದು ಫೋನ್/ ವಿಡಿಯೊ ಕರೆ ಮೂಲಕ ಜನರನ್ನು ಅವರ ಮನೆಗಳಲ್ಲೇ ಬಂಧನದಲ್ಲಿರಿಸಿ, ಅವರಿಂದ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ವಿದ್ಯಾವಂತರೇ ಹೆಚ್ಚಾಗಿ ಸೈಬರ್ ಅರೆಸ್ಟ್‌ಗೆ ಒಳಗಾಗುತ್ತಿದ್ದು, ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ

ಡಿಜಿಟಲ್ ಅರೆಸ್ಟ್ ಎಂದರೇನು?

ADVERTISEMENT

ಇದು ಒಂದು ಬಗೆಯ ಸೈಬರ್ ವಂಚನೆಯಾಗಿದ್ದು, ಪೊಲೀಸ್, ಜಾರಿ ನಿ‌ರ್ದೇಶನಾಲಯ (ಇ.ಡಿ), ಸಿಬಿಐ ಮುಂತಾದ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡಿ, ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಹೆದರಿಸಿ ಬೆದರಿಸಿ, ನಂತರ ಹಣಕ್ಕೆ ಬೇಡಿಕೆ ಇಡುವುದು; ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಅವರಿಂದ ಹಣ ಸುಲಿಗೆ ಮಾಡುತ್ತಾರೆ. ವಂಚಕರು ಸಂತ್ರಸ್ತರಿಂದ ಲಕ್ಷ, ಕೋಟಿಗಳ ಲೆಕ್ಕದಲ್ಲಿ
ಹಣ ಸುಲಿಯುತ್ತಿದ್ದಾರೆ.

ಡಿಜಿಟಲ್ ಅರೆಸ್ಟ್ ಮಾಡುವುದು ಹೇಗೆ?

ವಂಚಕರು ಮೊದಲು ಸಂತ್ರಸ್ತರನ್ನು ಫೋನ್ ಮೂಲಕ ಸಂರ್ಪಕಿಸುತ್ತಾರೆ. ತಾವು ಸಿಬಿಐ, ಆರ್‌ಬಿಐ, ತೆರಿಗೆ, ನಾರ್ಕೋಟಿಕ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಾರೆ. ‘ನಿಮಗೆ ನಿಷೇಧಿತ ಅಥವಾ ಅಕ್ರಮ ವಸ್ತು/ಸರಕು ಕೊರಿಯರ್‌ನಲ್ಲಿ ಬಂದಿದೆ‘ ಎಂದೋ, ‘ನೀವು ಅಂಥ ವಸ್ತುಗಳನ್ನು ಕೊರಿಯರ್ ಮೂಲಕ ಕಳಿಸಿದ್ದೀರಿ’ ಎಂದೋ ಪ್ರತಿಪಾದಿಸುತ್ತಾರೆ. ಇಲ್ಲವೇ ಹಣ ಅಕ್ರಮ ವರ್ಗಾವಣೆ, ಸೈಬರ್ ಅಪರಾಧದ ಆರೋಪ ಹೊರಿಸುತ್ತಾರೆ. ನಂತರ ಸ್ಕೈಪ್, ವ್ಯಾಟ್ಸ್ ಆ್ಯಪ್ ಮತ್ತು ಇತರ ವಿಡಿಯೊ ತಂತ್ರಜ್ಞಾನದ ಮೂಲಕ ಸಂತ್ರಸ್ತರೊಂದಿಗೆ ಸಂಪರ್ಕ ಸಾಧಿಸುತ್ತಾರೆ.

‘ಅಕ್ರಮದ ಸಂಬಂಧ ವಿಚಾರಣೆಗಾಗಿ ನಿಮ್ಮನ್ನು ಬಂಧಿಸಲಾಗಿದೆ’ (ಕಂಪ್ಯೂಟರ್‌/ಮೊಬೈಲ್‌ ಪರದೆಯಲ್ಲಿ ಕಾಣುವಂತೆ ಒಂದೇ ಜಾಗದಲ್ಲಿ/ಮನೆ, ಕೊಠಡಿಗಳಲ್ಲಿ ಕೂರುವುದು) ಎಂದು ಬೆದರಿಕೆ ಒಡ್ಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಂತ್ರಸ್ತರ ಮನೆಗಳಲ್ಲಿಯೇ ಅವರನ್ನು ಬಂಧನಕ್ಕೊಳಪಡಿಸಲಾಗಿರುತ್ತದೆ. ಸಂತ್ರಸ್ತರನ್ನು ನಂಬಿಸುವ ಸಲುವಾಗಿ ತಾವು ಯಾವ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಹೇಳಿರುತ್ತಾರೋ, ಅಂಥ ಕಚೇರಿಯ ವಾತಾವರಣವನ್ನು ಸೃಷ್ಟಿಸಿರುತ್ತಾರೆ. ಅಧಿಕಾರಿಗಳು ಎನ್ನುವುದನ್ನು ಸಾಬೀತು‍ಪಡಿಸುವ ಸಲುವಾಗಿ ನಕಲಿ ಗುರುತಿನ ಚೀಟಿಗಳನ್ನು ಕೂಡ ತೋರಿಸುತ್ತಾರೆ. ಕೆಲವೊಮ್ಮೆ ನಕಲಿ ಅರೆಸ್ಟ್ ವಾರಂಟ್‌ಗಳನ್ನೂ ಪ್ರಸ್ತುತಪಡಿಸುತ್ತಾರೆ. ಕೂತಲ್ಲಿಂದಲೇ ಅವನ್ನು ವಿಡಿಯೊ ಮೂಲಕ ನೋಡುವ ಸಂತ್ರಸ್ತರು ವಂಚಕರನ್ನು ನಂಬುತ್ತಾರೆ. 

‘ನಿಮ್ಮಿಂದ ಕಾನೂನು ಉಲ್ಲಂಘನೆಯಾಗಿದೆ. ನಿಮ್ಮ ಫೋನ್ ಅನ್ನು ಅಕ್ರಮಕ್ಕೆ ಬಳಸಲಾಗಿದೆ’ ಎಂದೆಲ್ಲ ಹೇಳಿ, ವಿಚಾರಣೆ, ಜೈಲು, ಶಿಕ್ಷೆ ಬಗ್ಗೆ ಪ್ರಸ್ತಾಪಿಸಿ, ಸಂತ್ರಸ್ತರಲ್ಲಿ ಭಯ ಹುಟ್ಟಿಸಲಾಗುತ್ತದೆ. ನಂತರ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಿಷ್ಟು ಹಣ ಕೊಟ್ಟರೆ ಈ ಪ್ರಕರಣದಿಂದ ಮುಕ್ತಗೊಳಿಸುವುದಾಗಿ ಹೇಳುತ್ತಾರೆ. ಈ ಸಮಯದಲ್ಲಿ ಬೇರೆ ಯಾರನ್ನೂ ಸಂಪರ್ಕಿಸದಂತೆ ಮಾಡುತ್ತಾರೆ. ಆನ್‌ಲೈನ್ ಬ್ಯಾಂಕಿಂಗ್ ಮತ್ತಿತರ ಮಾರ್ಗಗಳ ಮೂಲಕ ಹಣವನ್ನು ಮೂರನೇ ವ್ಯಕ್ತಿಯ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. 

ಎಷ್ಟು ಅವಧಿಯವರೆಗೆ ಡಿಜಿಟಲ್ ಅರೆಸ್ಟ್ ಮಾಡಲಾಗುತ್ತಿದೆ? 

ಸಾಮಾನ್ಯವಾಗಿ ಸಂತ್ರಸ್ತರಿಗೆ ಮನೆಗಳಲ್ಲೇ ದಿಗ್ಬಂಧನ ವಿಧಿಸಲಾಗುತ್ತದೆಯಾದರೂ ಕೆಲವೊಮ್ಮೆ ಅವರನ್ನು ಹೊರಗೆ ಬರುವಂತೆ ಮಾಡಿ, ಬೇರೊಂದು ಸ್ಥಳದಲ್ಲಿ ಕೂಡಿಹಾಕುವುದುಂಟು. ವಾರದ ಹಿಂದೆ ಹೈದರಾಬಾದ್ ಟೆಕಿ ಒಬ್ಬರಿಗೆ ಕರೆ ಮಾಡಿದ್ದ ವಂಚಕರು, ಅವರನ್ನು ಮನೆಯಿಂದ ಹೊರಗೆ ಕರೆಸಿಕೊಂಡು, 15 ಕಿ.ಮೀ. ದೂರದ ಲಾಡ್ಜ್‌ನಲ್ಲಿ 30 ಗಂಟೆಗಳವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದರು. ಅನಿರೀಕ್ಷಿತವಾಗಿ ಕರೆ ಕಡಿತಗೊಂಡಾಗ ಟೆಕಿ ಪೊಲೀಸರನ್ನು ಸಂರ್ಪಕಿಸಿ ವಂಚಕರಿಂದ ಪಾರಾಗಿದ್ದರು.        

ಸಂತ್ರಸ್ತರಿಂದ ಹಣ ವರ್ಗಾವಣೆ ಆಗುವವರೆಗೆ ವಂಚಕರು ಸಂತ್ರಸ್ತರನ್ನು ಡಿಜಿಟಲ್‌ ಬಂಧನದಲ್ಲಿ ಇರಿಸುತ್ತಾರೆ. ಇತ್ತೀಚೆಗೆ, ಮಧ್ಯಪ್ರದೇಶದ ಇಂದೋರ್‌ನ 65 ವರ್ಷದ ಮಹಿಳೆಯೊಬ್ಬರಿಗೆ ಐದು ದಿನ ಮನೆಯಲ್ಲೇ ದಿಗ್ಬಂಧನ ವಿಧಿಸಿದ್ದ ವಂಚಕರು, ₹46 ಲಕ್ಷ ಸುಲಿಗೆ ಮಾಡಿದ್ದರು.    

ಇದರಿಂದ ಪಾರಾಗುವುದು ಹೇಗೆ?

ಅಪರಿಚಿತ/ಅಂತರರಾಷ್ಟ್ರೀಯ ಫೋನ್‌ ಕರೆಗಳ ಬಗ್ಗೆ ಎಚ್ಚರ ವಹಿಸಬೇಕು. ಅಂಥ ಸಂದರ್ಭ ಸೃಷ್ಟಿಯಾದರೆ, ಆತಂಕಕ್ಕೊಳಗಾಗದೇ ಧೈರ್ಯದಿಂದ ಮಾತಾಡಬೇಕು. ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿದರೆ, ಅದನ್ನು ವಿವರವಾಗಿ ಪರಿಶೀಲಿಸಬೇಕು. ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ, ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದೂ ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಸರ್ಕಾರಿ ಸಂಸ್ಥೆಗಳು ತಮ್ಮ ಅಧಿಕೃತ ಸಂವಹನಕ್ಕೆ ಸ್ಕೈಪ್, ಝೂಮ್‌ ಅಥವಾ ವಾಟ್ಸ್ ಆ್ಯಪ್‌ನಂಥ ವಿಡಿಯೊ ತಂತ್ರಾಂಶಗಳನ್ನು ಬಳಸುವುದಿಲ್ಲ. ಡಿಜಿಟಲ್ ಅರೆಸ್ಟ್‌ ಎಂಬ ಕಾನೂನು, ನಿಯಮ ದೇಶದಲ್ಲಿ ಇಲ್ಲ ಎಂಬುದೂ ಗಮನದಲ್ಲಿರಬೇಕು.

ಮತ್ತೊಂದು ಮುಖ್ಯ ವಿಚಾರ, ಈಗಲೇ ಕೆಲಸ ಆಗಬೇಕು, ಪ್ರಕರಣ ಇವತ್ತೇ ಮುಗಿಯಬೇಕು ಎನ್ನುವಂತೆ ಒತ್ತಡ ಹೇರಿ, ತುರ್ತು ಸ್ಥಿತಿ ಸೃಷ್ಟಿಸುವವರನ್ನು ನಂಬಬಾರದು. ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಖಾಸಗಿ ವಿಷಯಗಳನ್ನು, ಗೋಪ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು. ವಂಚನೆಯ ಬಗ್ಗೆ ಅನುಮಾನ ಬಂದರೆ, ಕೂಡಲೇ ಸೈಬರ್ ಸಹಾಯವಾಣಿ/ ಪೊಲೀಸರನ್ನು ಸಂಪರ್ಕಿಸಬೇಕು. 

ಸೈಬರ್ ವಂಚನೆಯಿಂದ ಪಾರಾಗಬೇಕು ಎಂದರೆ, ಮೊದಲು ವಂಚಕರ ಕಾರ್ಯವಿಧಾನವನ್ನು ಅರಿಯಬೇಕು. ವಂಚಕರು ಹೇಗೆ ಸೈಬರ್ ಅಪರಾಧಗಳನ್ನು ಎಸಗುತ್ತಾರೆ ಎಂಬ ಬಗ್ಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಆರ್‌ಇಟಿ–ಐಎನ್) ಮಾಹಿತಿ ಪ್ರಕಟಿಸಿದ್ದು, ಅದರಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ. 

ವಂಚನೆಗೊಳಗಾದವರು ಏನು ಮಾಡಬೇಕು?

ನೀವು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ಪಕ್ಷದಲ್ಲಿ ಮೊದಲು ಮಾಡಬೇಕಾದ ಕೆಲಸ ಬ್ಯಾಂಕ್ ಅನ್ನು ಸಂಪರ್ಕಿಸಿ ಖಾತೆಯನ್ನು ಸ್ಥಗಿತಗೊಳಿಸುವುದು. ನಂತರ ಸೈಬರ್ ಸಹಾಯವಾಣಿ (1930) ಸಂಪರ್ಕಿಸಬೇಕು. ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ತನಿಖೆಯ ಅನುಕೂಲಕ್ಕಾಗಿ, ನಿಮ್ಮ ಕರೆ, ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

ಆಧಾರ:ಪಿಟಿಐ, ಎನ್‌ಸಿಆರ್‌ಬಿ,
ಸಂಸತ್ತಿನ ಗೃಹಸಚಿವಾಲಯದ ಹೇಳಿಕೆ

ದೂರು ನೀಡಲು ಪೋರ್ಟಲ್‌, 1930 ಸಹಾಯವಾಣಿ
ಸೈಬರ್‌ ವಂಚನೆ ಯತ್ನ ಮತ್ತು ವಂಚನೆಗೆ ಒಳಗಾದ ಸಂದರ್ಭದಲ್ಲಿ ಅದರ ಬಗ್ಗೆ ದೂರು ನೀಡಲು ರಾಷ್ಟ್ರೀಯ ಮಟ್ಟದಲ್ಲಿ ‘ಸಿಟಿಜನ್‌ ಫೈನಾನ್ಶಿಯಲ್‌ ಸೈಬರ್‌ ಫ್ರಾಡ್‌ ರಿಪೋರ್ಟಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌’ ಅನ್ನು ರೂಪಿಸಲಾಗಿದೆ. 2021ರಲ್ಲಿ ಇದು ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್‌ ಅಪರಾಧ ದೂರು ನೀಡುವ ಪೋರ್ಟಲ್‌ www.cybercrime.gov.in ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸೈಬರ್‌ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ ‘1930’ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ 7.6 ಲಕ್ಷಕ್ಕೂ ಹೆಚ್ಚು ಸೈಬರ್‌ ವಂಚನೆ ದೂರು ದಾಖಲಾಗಿದ್ದು, ₹2,400 ಕೋಟಿಗೂ ಹೆಚ್ಚು ಹಣ ವಂಚಕರ ಕೈ ಸೇರದಂತೆ ತಡೆಯಲಾಗಿದೆ ಎಂದು ಗೃಹ ಸಚಿವಾಲಯವು ಈ ವರ್ಷದ ಆಗಸ್ಟ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು.
ದೇಶದಲ್ಲಿ ದೊಡ್ಡ ಜಾಲ ಸಕ್ರಿಯ
ನಕಲಿ ಷೇರು ಮಾರುಕಟ್ಟೆ ಹೂಡಿಕೆಗಳು ಮತ್ತು ಡಿಜಿಟಲ್‌ ಅರೆಸ್ಟ್‌ನಂತಹ ಸೈಬರ್‌ ಹಗರಣಗಳನ್ನು ನಡೆಸುವ ದೊಡ್ಡ ಜಾಲವೇ ದೇಶದಲ್ಲಿ ಕಾರ್ಯಾಚರಿಸುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಮತ್ತು ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ಈ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂಬ ಸಂಗತಿ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು ವರದಿಯಾಗಿದ್ದ ನಕಲಿ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಹಂಚಿಕೆ ಮತ್ತು ವಂಚನೆ ಉದ್ದೇಶದ ಆ್ಯಪ್‌ ಬಳಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿ ಜನರನ್ನು ವಂಚಿಸಿದ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಇ.ಡಿಯು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ₹159 ಕೋಟಿಯಷ್ಟು ಹಣ ವಂಚಿಸಲಾಗಿದೆ ಎಂದು ಇ.ಡಿ ಹೇಳಿದೆ. ‘ಕಡಿಮೆ ಹಣ ಹೂಡಿಕೆ ಮಾಡಿ ದೊಡ್ಡ ಮೊತ್ತವನ್ನು ಗಳಿಸಬಹುದು ಎಂಬ ಆಮಿಷ ಒಡ್ಡಿ ಜನರನ್ನು ವಂಚಿಸಲಾಗುತ್ತಿದೆ. ನಕಲಿ ವೆಬ್‌ಸೈಟ್‌ಗಳು ಮತ್ತು ದಾರಿತಪ್ಪಿಸುವ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಬಳಸಲಾಗುತ್ತಿದ್ದು, ಇವುಗಳು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿವೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನಕಲಿ ಜಾಹೀರಾತು ಮತ್ತು ಸುಳ್ಳು ಯಶಸ್ಸಿನ ಕಥೆಗಳನ್ನು ಸೃಷ್ಟಿಸಿ ಸಂತ್ರಸ್ತರು ಹೆಚ್ಚು ಹಣವನ್ನು ಹೂಡುವಂತೆ ಮಾಡಲಾಗುತ್ತಿದೆ’ ಎಂದು ಇ.ಡಿ. ವಿವರಿಸಿದೆ.
ವಿದೇಶದಲ್ಲಿ ಕುಳಿತು ಕೃತ್ಯ
ಡಿಜಿಟಲ್‌ ಅರೆಸ್ಟ್‌ ವಂಚಕರಲ್ಲಿ ಬಹುತೇಕರು ದೇಶದ ಹೊರಗಡೆಯಿಂದ ಕಾರ್ಯಾಚರಿಸುತ್ತಾರೆ. ಮ್ಯಾನ್ಮಾರ್‌, ಲಾವೊಸ್‌, ತೈವಾನ್‌, ಕಾಂಬೋಡಿಯಾದಂತಹ ದೇಶಗಳಲ್ಲಿ ಕುಳಿತು ಕರೆ ಮಾಡಿ ವಂಚನೆ ಎಸಗುತ್ತಾರೆ. ವಿದೇಶಿಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ವಂಚನೆಗೆ ಒಳಗಾಗುತ್ತಿರುವವರಲ್ಲಿ ನಗರ ಪ್ರದೇಶದವರು, ವಿದ್ಯಾವಂತರು, ಸೇವೆಯಿಂದ ನಿವೃತ್ತಿ ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.