ADVERTISEMENT

ಆಳ–ಅಗಲ: ಅಮೆಜಾನ್‌ ಕಾಡಿನಲ್ಲಿ ಬರ

ಸುಕೃತ ಎಸ್.
Published 12 ಅಕ್ಟೋಬರ್ 2023, 22:04 IST
Last Updated 12 ಅಕ್ಟೋಬರ್ 2023, 22:04 IST
<div class="paragraphs"><p>ರಿಯೊ ನೆಗ್ರೊ ನದಿಯ ನೋಟ&nbsp;</p></div>

ರಿಯೊ ನೆಗ್ರೊ ನದಿಯ ನೋಟ 

   

–ರಾಯಿಟರ್ಸ್‌ ಚಿತ್ರ

ಭೂಮಿಯ ಮೇಲಿರುವ ಸಿಹಿನೀರಿನ ಒಟ್ಟು ಪ್ರಮಾಣದ ಶೇ 20ರಷ್ಟು ಇರುವುದು ಬ್ರೆಜಿಲ್‌ನ ಅಮೆಜಾನ್‌ ಮಳೆಕಾಡು ಪ್ರದೇಶದಲ್ಲಿರುವ ಅಮೆಜಾನ್‌ ನದಿಯಲ್ಲಿ. ಆದರೆ, ಈ ನದಿಯ ಎರಡು ಪ್ರಮುಖ ಉಪನದಿಗಳಾದ ರಿಯೊ ನೆಗ್ರೊ ಹಾಗೂ ಮಡೈರಾ ಬತ್ತಿ ಹೋಗಿವೆ. ಸೊಲಿಮೊಸ್‌, ಜುರುವಾ, ಪ್ಯುರಸ್‌ ನದಿಗಳಲ್ಲಿನ ನೀರಿನ ಪ್ರಮಾಣವು ಹಿಂದೆಂದೂ ಕಾಣದ ಮಟ್ಟಿಗೆ ಕುಸಿದಿದೆ. ಅಮೆಜಾನ್‌ ಮಳೆಕಾಡು ಪ್ರದೇಶದ ವ್ಯಾಪ್ತಿ ಕೂಡ ಹಂತ ಹಂತವಾಗಿ ಕುಗ್ಗುತ್ತಾ ಬಂದಿದೆ. ಅಮೆಜಾನ್ ಮಳೆಕಾಡು ಪ್ರದೇಶಕ್ಕೆ ಬರ ಬಡಿದಿದೆ.

ADVERTISEMENT

ಈ ಪ್ರದೇಶದಲ್ಲಿ ತೀವ್ರ ಪ್ರವಾಹ ಹಾಗೂ ತೀವ್ರ ಬರ ಹೊಸತೇನಲ್ಲ. ಆದರೆ, ಈ ಬಾರಿ ಬಂದಿರುವ ಬರದ ತೀವ್ರತೆ ಹೆಚ್ಚಿದೆ ಮತ್ತು ಈ ರೀತಿಯ ತೀವ್ರ ಬರವು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೆಗ್ರೊ ಹಾಗೂ ಮಡೈರಾ ನದಿಗಳಿಗೆ ಹೊಂದಿಕೊಂಡಂತೆ ಇರುವ ‘ತೇಲುವ ಗ್ರಾಮ’ಗಳಲ್ಲಿ ವಾಸಿಸುತ್ತಿರುವ ಜನರ ಜೀವನವು ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿರುವ ಒಟ್ಟು 62 ಪುರಸಭೆಗಳ ಪೈಕಿ 60ರಲ್ಲಿ ಬರ ಆವರಿಸಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರ ಬದುಕು ಬತ್ತಿ ಹೋಗಿದೆ.

ರಿಯೊ ನೆಗ್ರೊ ನದಿ ಉಪನದಿಯೊಂದು ಬತ್ತಿರುವುದು

ಏನಿದು ತೇಲುವ ಗ್ರಾಮ

ಗ್ರಾಮಗಳ ಸುತ್ತ ನೀರೇ ನೀರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಎಂದರೆ, ರಸ್ತೆ ಅಲ್ಲ ನೀರಿನಲ್ಲೇ ಸಂಚರಿಸಬೇಕು. ಜನರ ಬಳಿ ಬೋಟ್‌ ಬಿಟ್ಟರೆ ಬೇರೆ ವಾಹನಗಳಿಲ್ಲ. ಜೊತೆಗೆ, ಈ ನದಿಯ ರಭಸ ಮತ್ತು ಹರಿವ ಗುಣದ ಕಾರಣಕ್ಕಾಗಿ ಈ ಗ್ರಾಮಗಳು ತುಸು ಮಟ್ಟಿಗೆ ಸ್ಥಳಾಂತರವಾಗುತ್ತವೆ. ಇದಕ್ಕಾಗಿಯೇ ಇವಕ್ಕೆ ತೇಲುವ ಗ್ರಾಮಗಳು ಎನ್ನಲಾಗುತ್ತದೆ. ಆದರೆ, ಈಗ ನೀರಿಲ್ಲದೇ ಗ್ರಾಮಗಳು ‘ತೇಲುವ ಗ್ರಾಮ’ಗಳಾಗಿ ಉಳಿದಿಲ್ಲ.

ತಿನ್ನಲು ಆಹಾರವಿಲ್ಲ, ಕುಡಿಯಲು ನೀರಿಲ್ಲ, ಸುರಕ್ಷಿತ ಪ್ರದೇಶಕ್ಕೆ ಹೋಗಲು ಬರುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಇಲ್ಲಿ ವಾಸಿಸುವ ವಿವಿಧ ಬುಡಕಟ್ಟು ಸಮುದಾಯಗಳ ಜನರು ದಿನ ದೂಡುತ್ತಿದ್ದಾರೆ. ಮೀನುಗಾರಿಕೆ ಸಂಪೂರ್ಣ ನಿಂತಿದೆ. ಕಾಡಿನ ಹಣ್ಣುಗಳನ್ನು ದೂರದ ಊರುಗಳಿಗೆ ಹೋಗಿ ಮಾರಲಾಗುತ್ತಿತ್ತು. ಇದೂ ನಿಂತಿದೆ. ನೀರಿಲ್ಲದೆ ಪ್ರವಾಸಿಗರೂ ಇಲ್ಲ. ಇದರಿಂದ ಬೋಟಿಂಗ್‌ ಉದ್ಯಮವೂ ಸ್ಥಗಿತಗೊಂಡಿದೆ. ಕುಡಿಯುವ ನೀರು, ಪಾತ್ರೆಗಳ ಅಂಗಡಿ, ಮನೆಯ ನಿತ್ಯ ಬಳಕೆಯ ವಸ್ತುಗಳ ಅಂಗಡಿಯಂತಹ ಸಣ್ಣ ಉದ್ಯಮ ಕೂಡ ಬಾಗಿಲು ಮುಚ್ಚಿದೆ. ‘ದೇವರೇ ಮಳೆ ಸುರಿಸು’ ಎಂದು ಬುಡಕಟ್ಟು ಸಮುದಾಯಗಳ ಹಿರಿಯರು, ಬತ್ತಿದ ನದಿಯ ಮುಂದೆ ಕೂತು ಆಕಾಶ ನೋಡುತ್ತಿದ್ದಾರೆ.

ಮೀನುಗಾರರ ಬದುಕು

ಸರ್ಕಾರದ ಕ್ರಮ

ಬರದ ಕಾರಣದಿಂದ ತೊಂದರೆಗೆ ಈಡಾಗಿರುವ ಜನರನ್ನು ರಕ್ಷಿಸಲು ಬ್ರೆಜಿಲ್‌ ಅಧ್ಯಕ್ಷ ಲೂಯಿ ಇನ್ಯಾಸಿಯೊ ಲುಲ ಡಿಸಿಲ್ವ ನೇತೃತ್ವದ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಆಹಾರ, ಕುಡಿಯುವ ನೀರು ಸೇರಿದಂತೆ ಬರ ಪೀಡಿತ ಪ್ರದೇಶಗಳ ಜನರ ಅಗತ್ಯವನ್ನು ಪೂರೈಸಲು ಮುಂದಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿದೆ.

ಪಿಂಕ್‌ ಡಾಲ್ಫಿನ್‌ ಸತ್ತಿರುವುದು –ರಾಯಿಟರ್ಸ್‌ ಚಿತ್ರ

ಪಿಂಕ್‌ ಡಾಲ್ಫಿನ್‌ ಸತ್ತಿರುವುದು –ರಾಯಿಟರ್ಸ್‌ ಚಿತ್ರ

ಡಾಲ್ಫಿನ್‌ಗಳ ಸಾವು

ಅಮೆಜಾನ್‌ ನದಿ ಪ್ರದೇಶದಲ್ಲಿ ಮಾತ್ರವೇ ಅಪರೂಪ ಜಾತಿಯ ಡಾಲ್ಫಿನ್‌ಗಳು (ಪಿಂಕ್‌ ಡಾಲ್ಫಿನ್‌ ಅಥವಾ ಬೊಟೊ) ಕಾಣಸಿಗುತ್ತವೆ. ಟೆಫೆ ನಗರದಲ್ಲಿರುವ ಟೆಫೆ ನದಿಯ ನೀರು ಬಿಸಿಯಾಗಿದ್ದರಿಂದ ಸುಮಾರು 125 ಡಾಲ್ಫಿನ್‌ಗಳು ಸತ್ತು ಹೋಗಿವೆ. ಈ ಜಾತಿಯ ಡಾಲ್ಫಿನ್‌ಗಳು ಅಳಿವಿನಂಚಿನಲ್ಲಿವೆ ಎಂದು ವಿಶ್ವಸಂಸ್ಥೆ ಗುರುತಿಸಿದೆ. ನದಿ ನೀರಿನ ಸಾಮಾನ್ಯ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌. ಆದರೆ ಸೆ. 28ಕ್ಕೆ ಇದು 39 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಅ.3ರ ಹೊತ್ತಿಗೆ ತಾಪಮಾನವು 36.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಿತು. ಬಿಸಿ ತಾಳಲಾರದೆ ಡಾಲ್ಫಿನ್‌ಗಳು ಮೃತಪಟ್ಟಿವೆ. ನದಿಯ ತೀರಕ್ಕೆ ಹೆಣಗಳು ಬಂದು ಬಿದ್ದಿವೆ. ಇವುಗಳ ಸಾವಿಗೆ ಬೇರೆ ಯಾವುದಾದರೂ ಕಾರಣ ಇರಬಹುದೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ. ಕೆಲವು ನದಿಗಳು ಬತ್ತಿ ಹೋಗಿರುವ ಕಾರಣ ಮೀನುಗಳು ಸತ್ತಿವೆ. ಸಾವಿರಾರು ಮೀನುಗಳ ಹೆಣಗಳು ನದಿಯಲ್ಲಿ ತೇಲುತ್ತಿವೆ ಮತ್ತು ಕೊಳೆಯುತ್ತಿವೆ. ಡಾಲ್ಫಿನ್‌ ಹಾಗೂ ಮೀನುಗಳ ಹೆಣಗಳ ಕಾರಣದಿಂದ ನದಿಯಲ್ಲಿ ಉಳಿದಿರುವ ಅಲ್ಪಸ್ವಲ್ಪ ನೀರನ್ನು ಬಳಸಲಾರದ ಸ್ಥಿತಿ ಎದುರಾಗಿದೆ. ಹೆಣಗಳ ವಾಸನೆಯೂ ತಾಳಲಾರದಾಗಿದೆ.

ಸೋಲಿಮೊಸ್‌ ನದಿ ಬತ್ತಿರುವುದರಿಂದ ಮೀನುಗಳು ಸತ್ತಿರುವುದು –ರಾಯಿಟರ್ಸ್‌ ಚಿತ್ರ

ಅರಣ್ಯ ನಾಶ

ಜಾಗತಿಕ ತಾಪಮಾನವು ನಿಯಂತ್ರಣದಲ್ಲಿ ಇರುವಲ್ಲಿ ಅಮೆಜಾನ್‌ ಕಾಡುಗಳು ಬಹುದೊಡ್ಡ ಪಾತ್ರ ವಹಿಸುತ್ತವೆ. ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಸುಮಾರು 16 ಸಾವಿರ ಮರಗಳ ತಳಿಗಳು ಪತ್ತೆಯಾಗಿವೆ. ಇನ್ನೂ ನೂರಾರು ಮರಗಳ ತಳಿ ಇರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಅರಣ್ಯ ನಾಶ ಈಗಾಗಲೇ ಆಗಿದೆ. ಇದೂ ಇಂದಿನ ಬರ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಸರಿಸುಮಾರು ಕತಾರ್‌ ದೇಶದ ವ್ಯಾಪ್ತಿಯಷ್ಟು ಅರಣ್ಯವನ್ನು ಅಮೆಜಾನ್‌ನಲ್ಲಿ 2021ರ ಆ.1ರಿಂದ 2022ರ ಜುಲೈ 31ರ ನಡುವೆ ನಾಶ ಮಾಡಲಾಗಿದೆ ಎಂದು ಬ್ರೆಜಿಲ್‌ನ ನ್ಯಾಷನಲ್‌ ಸ್ಪೇಸ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹೇಳಿದೆ. ಆದರೆ 2023ರ ಹೊತ್ತಿಗೆ ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿಕೊಂಡರೆ 2023ರ ಮೊದಲ ಭಾಗದಲ್ಲಿ ಅರಣ್ಯ ನಾಶ ಪ್ರಮಾಣವು ಶೇ 34ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿದೆ. ಬ್ರೆಜಿಲ್‌ ದೇಶವು ದನದ ಮಾಂಸ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ಕಾಡು ಕಡಿದು ದನಗಳಿಗೆ ಮೇಯುವ ಜಾಗವನ್ನು ಮಾಡಿಕೊಳ್ಳಲಾಗುತ್ತಿದೆ. ಅಮೆಜಾನ್‌ ಕಾಡು ಪ್ರದೇಶದಲ್ಲಿ ತೈಲ ಉತ್ಪಾದನೆಯು ನಡೆಯತೊಡಗಿದೆ. ವಾಹನಗಳಿಗೆ ಎಥೆನಾಲ್‌ ಬಳಸುವುದರಿಂದ ಕಾಡು ಕಡಿದು ಸೋಯಾಬೀನ್ಸ್‌ ಕೃಷಿ ಮಾಡಲಾಗುತ್ತಿದೆ. ವಿವಿಧ ಜಾತಿಗಳ ಮರಗಳ್ಳತನವು ದೊಡ್ಡ ಪ್ರಮಾಣದಲ್ಲಿದೆ. ಆದರೆ ಸರ್ಕಾರವು ಅರಣ್ಯ ನಾಶ ತಡೆಯಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬುಡಕಟ್ಟು ಸಮುದಾಯಗಳು ವಾಸಿಸುವ ಪ್ರದೇಶಗಳನ್ನು ಮೀಸಲು ಅರಣ್ಯ ಎಂದು ಘೋಷಿಸುವುದು ಇದರಲ್ಲಿ ಒಂದು. 2030ರ ಹೊತ್ತಿಗೆ ಅರಣ್ಯ ನಾಶದ ಪ್ರಮಾಣವನ್ನು ಸೊನ್ನೆಗೆ ಇಳಿಸುವ ಗುರಿಯನ್ನು ಇರಿಸಿಕೊಂಡು ಇದನ್ನು ಸಾಕಾರಗೊಳಿಸುವುದಕ್ಕಾಗಿ ಆಗಸ್ಟ್‌ನಲ್ಲಿ ‘ಅಮೆಜಾನ್‌ ಶೃಂಗಸಭೆ’ ನಡೆದಿದೆ. ಇದನ್ನು ಬ್ರೆಜಿಲ್‌ ಆಯೋಜಿಸಿತ್ತು. ಅಮೆಜಾನ್‌ ಮಳೆಕಾಡು ಹಬ್ಬಿಕೊಂಡಿರುವ ಬೊಲಿವಿಯಾ ಪೆರು ಕೊಲಂಬಿಯಾ ಸೇರಿದಂತೆ 8 ದೇಶಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು.

ಪ್ಯುರಕ್ಯುಕ್ವಾರ ನದಿ ಸಂಪೂರ್ಣ ಬತ್ತಿರುವುದು 

ಮಳೆ ಇಲ್ಲ

ಮೊದಲೇ ಉಲ್ಲೇಖಿಸಿದ ಹಾಗೆ ಅಮೆಜಾನ್‌ ಮಳೆಕಾಡು ಪ್ರದೇಶದಲ್ಲಿ ಬರ ಹಾಗೂ ಪ್ರವಾಹ ಹೊಸತಲ್ಲ. ಪ್ರತಿ 10 ವರ್ಷಗಳಿಗೊಮ್ಮೆ ಇಲ್ಲಿ ಈ ರೀತಿಯ ವೈಪರೀತ್ಯಗಳು ಆಗುತ್ತವೆ. ಎಲ್‌ ನೀನೊ ಕಾರಣದಿಂದಾಗಿ ಹೀಗಾಗುತ್ತದೆ. ಆದರೆ ಈ ಬಾರಿಯ ಪರಿಣಾಮವು ಭೀಕರವಾಗಿದೆ. ‘ಅಕ್ಟೋಬರ್‌ ಅಂತ್ಯದ ಹೊತ್ತಿಗೆ ಬರದ ತೀವ್ರತೆಯು ಇನ್ನಷ್ಟು ಹೆಚ್ಚಲಿದೆ. ನವೆಂಬರ್‌ನಲ್ಲಿ ಮಳೆಯಾಗಬಹುದು. ಆದರೆ ಈ ಮಳೆಯು ಬತ್ತಿ ಹೋದ ನದಿಗಳು ತುಂಬುವುದಕ್ಕೆ ಸಾಕಾಗುವುದಿಲ್ಲ. ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದಷ್ಟೇ’ ಎನ್ನುತ್ತಾರೆ ಹವಾಮಾನ ತಜ್ಞರು.  ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್‌ ವರೆಗೆ ಮಳೆಯ ಪ್ರಮಾಣ ಕಡಿಮೆ ಇರುತ್ತದೆ. ಕಾಲ ಕ್ರಮೇಣ ಈ ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಆದರೆ ಈ ಬಾರಿ ಇದು ಮತ್ತಷ್ಟು ಕಡಿಮೆಯಾಗಿದೆ. ಸುಮಾರು 50 ವರ್ಷಗಳಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿರಲಿಲ್ಲ. ‘ಬರ ಬಡಿದಿರುವ ನಮ್ಮ ಪ್ರದೇಶಗಳನ್ನು ‘ಹವಾಮಾನ ತುರ್ತು’ ಎಂದು ಘೋಷಿಸಿ ಎಂದು 63 ಬುಡಕಟ್ಟು ಸಮುದಾಯಗಳ ಒಕ್ಕೂಟ ‘ಎಪಿಐಎಎಂ’ ಬ್ರೆಜಿಲ್‌ ಸರ್ಕಾರವನ್ನು ಒತ್ತಾಯಿಸಿದೆ. ಎಲ್‌ ನೀನೊ ಒಂದು ಕಾರಣವಾದರೆ ಜಾಗತಿಕ ಹವಾಮಾನ ವೈಪರೀತ್ಯ ಇನ್ನೊಂದು ಕಾರಣ. ಜಾಗತಿಕ ತಾಪಮಾನವು ಏರುತ್ತಲೇ ಇದೆ. ಜಗತ್ತಿನಲ್ಲೇ ಸೆಪ್ಟೆಂಬರ್‌ನಲ್ಲಿ ಇದು ತೀವ್ರ ಏರಿಕೆ ಕಂಡುಬಂದಿತ್ತು. ಇದರಿಂದಾಗಿ ಬ್ರೆಜಿಲ್‌ನಲ್ಲಿ ಬಿಸಿಗಾಳಿ ಎದ್ದಿತ್ತು. ಜೊತೆಗೆ ಇದೇ ತಿಂಗಳಲ್ಲಿ ಅಮೆಜಾನ್‌ನಲ್ಲಿ 7 ಸಾವಿರ ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಇದು 1998ರ ಈಚೆಗೆ ಗರಿಷ್ಠ ಸಂಖ್ಯೆಯ ಕಾಳ್ಗಿಚ್ಚಾಗಿದೆ.

ಪ್ಯುರಕ್ಯುಕ್ವಾರ ನದಿ ಬತ್ತಿರುವುದರಿಂದ ಬೋಟಿಂಗ್‌ ಉದ್ಯಮ ಸ್ಥಗಿತಗೊಂಡಿರುವುದು –ರಾಯಿಟರ್ಸ್‌ ಚಿತ್ರ

ಏನಿದು ಎಲ್‌ ನಿನೊ?

ಪೆಸಿಫಿಕ್‌ ಸಾಗರದಲ್ಲಿ ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯು ಸಮಭಾಜಕ ರೇಖೆ ಉದ್ದಕ್ಕೂ ಪಶ್ಚಿಮಕ್ಕೆ ಚಲಿಸುತ್ತದೆ. ಇದರಿಂದಾಗಿ ದಕ್ಷಿಣ ಅಮೆರಿಕ ಭಾಗದಲ್ಲಿರುವ ಬಿಸಿ ನೀರು ಏಷ್ಯಾದತ್ತ ನುಗ್ಗುತ್ತದೆ. ಈ ಬಿಸಿ ನೀರಿನ ಬದಲಿಗೆ ಸಾಗರದ ಆಳದಿಂದ ತಂಪು ನೀರು ಮೇಲಕ್ಕೆ ಬರುತ್ತದೆ. ಈ ಬಿಸಿಯಾದ ನೀರು ಗಾಳಿಯ ಬಿಸಿಯನ್ನು ಹೆಚ್ಚಿಸಿ ಆ ಮೂಲಕ ಗಾಳಿಯಲ್ಲಿ ತೇವ ಉಂಟಾಗಲು ಕಾರಣವಾಗುತ್ತದೆ. ಪರಿಣಾಮವಾಗಿ ಮೋಡಗಳು ರೂಪುಗೊಳ್ಳುತ್ತವೆ. ಈ ಮೋಡಗಳು ತಂಪು ಗಾಳಿ ಇರುವ ಪೂರ್ವ ಪ್ರದೇಶದತ್ತ ಸಾಗುತ್ತವೆ. ಅಲ್ಲಿರುವ ತಂಪು ಗಾಳಿಯ ಕಾರಣಕ್ಕೆ ಮಳೆಯಾಗಿ ಸುರಿಯುತ್ತದೆ. ಆದರೆ ಎಲ್‌ ನಿನೊ ಈ ಪ್ರಕ್ರಿಯೆ ನಡೆಯದಂತೆ ಮಾಡುತ್ತದೆ. ಎಲ್‌ ನಿನೊದಿಂದಾಗಿ ಸಾಗರದ ಮೇಲಿನ ಮಾರುತವು ದುರ್ಬಲಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.