ದೇಶದ ಅರ್ಥ ವ್ಯವಸ್ಥೆಯ ದಿಕ್ಸೂಚಿಯಾಗಿರುವ ಆರ್ಥಿಕ ಸಮೀಕ್ಷೆ 2023–24ರಲ್ಲಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಗುರುತಿಸುತ್ತಲೇ, ಮತ್ತಷ್ಟು ಪ್ರಗತಿಯನ್ನು ಸಾಧಿಸಲು ಕೈಗೊಳ್ಳಬೇಕಿರುವ ಉಪಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆಯೂ ಆರ್ಥಿಕ ಮುನ್ನೋಟದಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ದೇಶದಲ್ಲಿ ಆಗಬೇಕಾದ ಕೆಲಸಗಳನ್ನೂ ವಿವರಿಸಲಾಗಿದೆ. ಚಾಲ್ತಿಯಲ್ಲಿರುವ ಜಾಗತಿಕ ಕಾರ್ಯತಂತ್ರಗಳು ದೋಷಪೂರಿತವಾಗಿದ್ದು, ದೇಶವು ಸುಸ್ಥಿರ ಪರಿಹಾರಗಳನ್ನು ಹುಡುಕಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದೆ. ಹವಾಮಾನ ಬದಲಾವಣೆ (Climate Change) ಮತ್ತು ಇಂಧನ ಪರಿವರ್ತನೆ (Energy Transition) ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದರ ಅಗತ್ಯದ ಬಗ್ಗೆ ಸಮೀಕ್ಷೆ ಒತ್ತಿ ಹೇಳಿದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಆರ್ಥಿಕತೆಗಳಲ್ಲಿ ಒಂದಾದ ಭಾರತದ ವಾರ್ಷಿಕ ತಲಾ ಇಂಗಾಲದ ಹೊರಸೂಸುವಿಕೆ ಪ್ರಮಾಣ ಜಾಗತಿಕ ಸರಾಸರಿಯ ಮೂರನೇ ಒಂದರಷ್ಟಿದೆ. 2070ರ ಹೊತ್ತಿಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಮೂಲಕ ದೇಶವು ತನ್ನ ಆರ್ಥಿಕ ಬೆಳವಣಿಗೆ ಸಾಧಿಸುವುದಲ್ಲದೇ, ಸುಸ್ಥಿರ ಅಭಿವೃದ್ಧಿಯ ಮಾರ್ಗವನ್ನು ತೋರಿಸಿಕೊಡಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
‘ಐರೋಪ್ಯ ಒಕ್ಕೂಟವು ಇಂಧನ ಆಧಾರಿತ ಉತ್ಪನ್ನಗಳ ಮೇಲೆ ‘ಇಂಗಾಲದ ತೆರಿಗೆ’ ವಿಧಿಸಲು ಮುಂದಾಗಿರುವುದು ಪ್ಯಾರಿಸ್ ಒಪ್ಪಂದದ ಉಲ್ಲಂಘನೆಯಾಗಿದೆ. ಮುಂದುವರಿದ ದೇಶಗಳು ‘ಇಂಗಾಲದ ತೆರಿಗೆ’ ವಿಧಿಸಲು ಮುಂದಾಗುತ್ತಿದ್ದರೂ, ಕೃತಕ ಬುದ್ಧಿಮತ್ತೆಯ ಗೀಳಿನಿಂದಾಗಿ ಅವರ ಇಂಧನ ಬೇಡಿಕೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹೆಚ್ಚಾಗುತ್ತಿದೆ. ಅಂದರೆ ಭಾರತವು ಹವಾಮಾನ ಬದಲಾವಣೆಯೊಂದಿಗೆ ಸೆಣಸುತ್ತಾ, ಇಂಧನ ಪರಿವರ್ತನೆ ಮಾಡಿಕೊಳ್ಳುವುದರ ಜೊತೆಜೊತೆಯಲ್ಲೇ ಮುಂದುವರಿದ ದೇಶಗಳ ರಕ್ಷಣಾತ್ಮಕ ನೀತಿಗಳ ಜೊತೆಗೂ ಸೆಣಸಬೇಕಾಗಿದೆ’ ಎಂದು ಅದು ಹೇಳಿದೆ.
ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಬೇಕು ಎನ್ನುವ ಮಿತಿ ಇದೆ. ಜಿ20 ರಾಷ್ಟ್ರಗಳ ಪೈಕಿ ಭಾರತವು ಈ ಮಿತಿಯೊಳಗಿರುವ ಏಕೈಕ ದೇಶವಾಗಿದ್ದು, ಹವಾಮಾನ ಬದಲಾವಣೆ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದೆ. ದೇಶದ ನವೀಕರಿಸಬಹುದಾದ ಇಂಧನದ ಸಾಮರ್ಥ್ಯದಲ್ಲಿ ಹೆಚ್ಚಳವಾಗಿದ್ದು, ಪಳೆಯುಳಿಕೆ ಇಂಧನ ಮೂಲಗಳಿಂದ ಉತ್ಪಾದಿಸಲಾಗುವ ವಿದ್ಯುಚ್ಛಕ್ತಿಯ ಪ್ರಮಾಣ ಶೇ 45.4ರಷ್ಟು ಇದೆ. 2047ರ ಹೊತ್ತಿಗೆ ದೇಶದ ಇಂಧನ ಅಗತ್ಯವು ಶೇ 2ರಿಂದ ಶೇ 2.5ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
‘ಹವಾಮಾನ ಬದಲಾವಣೆ ವಿಚಾರದಲ್ಲಿ ಭಾರತವು ಪಶ್ಚಿಮದ ರಾಷ್ಟ್ರಗಳನ್ನು ಅನುಸರಿಸುವ ಅಗತ್ಯವಿಲ್ಲ. ಅಲ್ಲಿನ ಮಾದರಿ ದೇಶದ ಅಗತ್ಯಗಳ ಜೊತೆ ಹೊಂದಾಣಿಕೆಯಾಗದಿರುವುದರಿಂದ ನಾವು ನಮ್ಮದೇ ಮಾರ್ಗ ಕಂಡುಕೊಳ್ಳಬೇಕಿದೆ. ಈ ಸಮಸ್ಯೆ ಎದುರಿಸುವಾಗ ನಮ್ಮ ದೇಶದ ವಿಶಿಷ್ಟ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ಸಮೀಕ್ಷೆ ವಿವರಿಸಿದೆ.
‘ನವೀಕರಿಸಬಹುದಾದ ಇಂಧನಗಳ ಬಳಕೆ ಜಾಸ್ತಿಯಾದಂತೆ ನೀರು ಮತ್ತು ಭೂಮಿಯ ಅಗತ್ಯವನ್ನು ಹೆಚ್ಚಿಸಲಿದೆ. ಇದು ಸಾಧ್ಯವಾಗಬೇಕು ಎಂದರೆ, ಇಂಧನ ಪರಿವರ್ತನೆಯು ಇತರ ಸಂಪನ್ಮೂಲಗಳ ಬೇಡಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ, ಇಂಧನ ಪರಿವರ್ತನೆಯ ಸಮತೋಲಿತ ಕ್ರಮವನ್ನು ಅನುಸರಿಸಬೇಕು ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಅರಿಯಬೇಕು’ ಎಂದು ಸಮೀಕ್ಷೆ ವಿವರಿಸಿದೆ.
ನರೇಗಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಗಳ ನಡುವೆ ವ್ಯತ್ಯಾಸವಿದೆ. ಈ ವಿಷಯದ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಆದರೆ, ಯಾವುದರಲ್ಲೂ ತೃಪ್ತಿದಾಯಕ ವಿವರಣೆ ಸಿಕ್ಕಿಲ್ಲ. ಸರ್ಕಾರವು ಖಾತ್ರಿ ಯೋಜನೆಗೆ ಮಾಡುತ್ತಿರುವ ವೆಚ್ಚ ಗ್ರಾಮೀಣ ಸಂಕಷ್ಟವನ್ನು ಪ್ರತಿಬಿಂಬಿಸುತ್ತಿದೆ ಎಂದು ಕೆಲವು ವರದಿಗಳು ಹೇಳುತ್ತವೆ.
‘ಒಂದು ವೇಳೆ ನಿಜವೇ ಆಗಿದ್ದರೆ, ಹೆಚ್ಚು ಬಡತನ ಮತ್ತು ನಿರುದ್ಯೋಗ ಪ್ರಮಾಣ ಹೊಂದಿರುವ ರಾಜ್ಯಗಳು ನರೇಗಾ ಅಡಿ ಹೆಚ್ಚು ಅನುದಾನ ಬಳಸಬೇಕಿತ್ತು ಮತ್ತು ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಅಂಕಿ ಅಂಶಗಳು ಬೇರೆಯದನ್ನೇ ಹೇಳುತ್ತವೆ’ ಎಂದು ಹೇಳಿರುವ ಆರ್ಥಿಕ ಸಮೀಕ್ಷೆ, ಈ ವಾದವನ್ನು ತಳ್ಳಿಹಾಕಿದೆ.
ನೀತಿ ಆಯೋಗದ ವರದಿಯ ಪ್ರಕಾರ, ದೇಶದಲ್ಲಿರುವ ಬಡ ಜನರಲ್ಲಿ ತಮಿಳುನಾಡಿನಲ್ಲಿ ಶೇ 1ಕ್ಕಿಂತಲೂ ಕಡಿಮೆ ಸಂಖ್ಯೆಯ ಬಡವರಿದ್ದಾರೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನರೇಗಾ ಅನುದಾನದಲ್ಲಿ ಶೇ 15ರಷ್ಟನ್ನು ತಮಿಳುನಾಡು ಬಳಸಿದೆ. ಶೇ 0.1ರಷ್ಟು ಬಡವರನ್ನು ಹೊಂದಿರುವ ಕೇರಳ ರಾಜ್ಯ ಶೇ 4ರಷ್ಟು ನರೇಗಾ ನಿಧಿಯನ್ನು ಪಡೆದಿದೆ. ಈ ಎರಡು ರಾಜ್ಯಗಳು 51 ಕೋಟಿಯಷ್ಟು ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿ ಮಾಡಿವೆ. ಇದಕ್ಕೆ ಪ್ರತಿಯಾಗಿ ನೀತಿ ಆಯೋಗದ ವರದಿ ಪ್ರಕಾರ ಶೇ 45ರಷ್ಟು ಬಡಜನಸಂಖ್ಯೆ ಹೊಂದಿರುವ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು (ಕ್ರಮವಾಗಿ ಶೇ 20 ಮತ್ತು ಶೇ 25ರಷ್ಟು) ನರೇಗಾ ಅನುದಾನದ ಶೇ 17ರಷ್ಟು (ಕ್ರಮವಾಗಿ ಶೇ 6 ಮತ್ತು ಶೇ 11) ಮಾತ್ರ ಬಳಸಿವೆ. ಇವೆರಡು ರಾಜ್ಯಗಳು 53 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿವೆ ಎಂದು ಸಮೀಕ್ಷೆ ಹೇಳಿದೆ.
ದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ದಾಪುಗಾಲು ಇಡುತ್ತಿದ್ದಾರೆ ಎಂದು ಹೇಳುತ್ತದೆ ಆರ್ಥಿಕ ಸಮೀಕ್ಷೆ.
ಉದ್ಯೋಗದಲ್ಲಿ ಮಹಿಳೆಯರ ಭಾಗೀದಾರಿಕೆ ಪ್ರಮಾಣ (ಎಲ್‌ಎಫ್‌ಪಿಆರ್) 2017–18ರಲ್ಲಿ ಶೇ 23.3ರಲ್ಲಿತ್ತು. ಅದೀಗ ಶೇ 37ಕ್ಕೆ ಏರಿದೆ. ಗ್ರಾಮೀಣ ಭಾಗದಲ್ಲಿ ನಾಲ್ಕನೇ ಮೂರರಷ್ಟು ಮಹಿಳೆಯರು ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮಹಿಳೆಯರು ಕುಟುಂಬಕ್ಕೆ ‘ಹೊರೆ’ ಎಂಬ ಭಾವನೆ ಹಿಂದೆ ಇತ್ತು. ಆದರೆ, ಈಗ ಅವರು ಉದ್ಯೋಗ ಪಡೆಯುತ್ತಿರುವುದರಿಂದ ಕುಟುಂಬದ ಆಧಾರವಾಗಿ ಬದಲಾಗಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.
ಕೇಂದ್ರ ಸರ್ಕಾರದ ಹಲವು ಯೋಜನೆಗಳ ದೊಡ್ಡ ಮಟ್ಟಿನ ಲಾಭವನ್ನು ಮಹಿಳೆಯರು ಪಡೆದಿದ್ದಾರೆ. ಪಿಎಂ ಜನಧನ ಯೋಜನೆಯಲ್ಲಿ 52.3 ಕೋಟಿ ಮಂದಿ ಬ್ಯಾಂಕ್ ಖಾತೆ ತೆರೆದಿದ್ದು, ಇದರಲ್ಲಿ ಶೇ 55.6ರಷ್ಟು ಖಾತೆದಾರರು ಮಹಿಳೆಯರು. ಇದರಿಂದಾಗಿ ಈ ಖಾತೆಗಳಲ್ಲಿ ಹಣ ಠೇವಣಿ ಇಟ್ಟಿರುವ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ದೀನ ದಯಾಳ್ ಅಂತ್ಯೋದಯ ಯೋಜನೆಯ ಅಡಿಯಲ್ಲಿ ಬರುವ ಸ್ವಸಹಾಯ ಸಂಘಗಳಲ್ಲಿ 8.9 ಕೋಟಿ ಮಹಿಳೆಯರು ತೊಡಗಿಕೊಂಡಿದ್ದಾರೆ.
ಉದ್ಯಮಶೀಲತೆಯಲ್ಲೂ ಮಹಿಳೆಯರು ಮುಂದಿದ್ದಾರೆ. ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ಶೇ 68ರಷ್ಟು ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ. ಸ್ಟ್ಯಾಂಡ್ ಅಪ್ ಇಂಡಿಯಾದ ಫಲಾನುಭವಿಗಳಲ್ಲಿ ಶೇ 53ರಷ್ಟು ನಾರಿಯರು. ಬೈನ್ ಅಂಡ್ ಕಂಪನಿ ಪ್ರಕಾರ, 1.35 ಕೋಟಿಯಿಂದ 1.57 ಕೋಟಿಗಳಷ್ಟು ಮಹಿಳಾ ಉದ್ಯಮಿಗಳು ದೇಶದಲ್ಲಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 3.15 ಕೋಟಿಗೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.
ಕಡ್ಡಾಯ ಗುಣಮಟ್ಟ ನೀತಿ ಮತ್ತು ಸೀಮಾ ಸುಂಕದ ಹೆಚ್ಚಳವು ದೇಶೀಯ ಆಟಿಕೆ ತಯಾರಿಕಾ ಉದ್ಯಮಕ್ಕೆ ನೆರವಾಗಿದ್ದು, ಇದರಿಂದ ರಫ್ತು ಹೆಚ್ಚಾಗಲಿದೆ. ಜತೆಗೆ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ದಶಕದ ಹಿಂದೆ ಭಾರತವು ಚೀನಾದ ಆಮದಿನ ಮೇಲೆ ಶೇ 76ರಷ್ಟು ಅವಲಂಬಿತವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಆಟಿಕೆ ತಯಾರಿಕಾ ಉದ್ಯಮವು ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಈಗ ದೇಶದ ರಫ್ತು ಹೆಚ್ಚಾಗಿದ್ದು, ಕೊರತೆಯ ದೇಶವಾಗಿದ್ದ ಭಾರತದಲ್ಲಿ ಇಂದು ಹೆಚ್ಚು ಆಟಿಕೆಗಳು ಉತ್ಪಾದನೆಯಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ.
ಇದೇ ರೀತಿ, ಭಾರತವು ನಿರ್ಣಾಯಕ ಖನಿಜಗಳಿಗಾಗಿ ಚೀನಾ ಮೇಲೆ ಅವಂಬಿಸಿರುವುದರ ಪರಿಣಾಮಗಳು ಮತ್ತು ಸವಾಲುಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
l ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ಜನರ ಉದ್ಯೋಗ ಮತ್ತು ಆದಾಯಕ್ಕೆ ಕುತ್ತು ತರುವ ಸಾಧ್ಯತೆ ಇದ್ದು, ಮುಂಬರುವ ವರ್ಷಗಳಲ್ಲಿ ಆದಾಯ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ತೆರಿಗೆ ನೀತಿಗಳು ಪ್ರಮುಖ ಪಾತ್ರ ವಹಿಸಲಿವೆ
l ಗ್ರಾಹಕರ ಮೇಲೆ ಹೊರೆ ಹಾಕಿ ಅಲ್ಪಾವಧಿ ಲಾಭವನ್ನು ಪಡೆಯುವ ಪ್ರವೃತ್ತಿಗೆ ಬ್ಯಾಂಕ್‌ಗಳು ಕಡಿವಾಣ ಹಾಕಬೇಕು
l ದೇಶೀಯ ಉತ್ಪಾದನೆಗೆ ಪ್ರೋತ್ಸಾಹ, ರಫ್ತಿನಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಭಾರತದ ವ್ಯಾಪಾರ ಕೊರತೆ ಇನ್ನಷ್ಟು ಕಡಿಮೆಯಾಗಲಿದೆ
l ಡಾಟಾ ಖಾಸಗಿತನ ವಿಚಾರ ಮತ್ತು ಆನ್‌ಲೈನ್ ವಂಚನೆಯು
ಇ–ವಾಣಿಜ್ಯದ ಅಭಿವೃದ್ಧಿಗೆ ತೊಡಕಾಗಿವೆ
l ಕೇಂದ್ರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಿಂದ ಕುಟುಂಬಗಳಿಗೆ ಚಿಕಿತ್ಸಾ ಹೊರೆ ಕಡಿಮೆಯಾಗಿದೆ. ಚಿಕಿತ್ಸೆಗಾಗಿ ಸಾಲ ಮಾಡುವುದನ್ನು ತಪ್ಪಿಸಿದೆ
l ಹಿಂದಿನ ವರ್ಷಕ್ಕೆ ಹೋಲಿಸಿದರೆ 2023–24ರಲ್ಲಿ ರೈಲಿನಲ್ಲಿ
ಪ್ರಯಾಣಿಸಿದವರ ಸಂಖ್ಯೆ ಶೇ 5.2ರಷ್ಟು ಹೆಚ್ಚಾಗಿದೆ. 673ಕೋಟಿ ಮಂದಿ ಪ್ರಯಾಣಕ್ಕೆ ರೈಲುಗಳನ್ನು ಬಳಸಿದ್ದಾರೆ.
l ದೇಶದ ಹಿರಿಯ ನಾಗರಿಕರ ಕಾಳಜಿಗಾಗಿ ರಚನಾತ್ಮಕವಾದ ನೀತಿಗಳ ಅಗತ್ಯವಿದೆ
l ಹೆಚ್ಚುತ್ತಿರುವ ಬೊಜ್ಜು ಆತಂಕಕಾರಿ. ಉತ್ತಮ ಜೀವನ ಶೈಲಿ ಪಾಲನೆಗೆ ಕ್ರಮ ಕೈಗೊಳ್ಳಬೇಕು. ಮಾನಸಿಕ ಆರೋಗ್ಯ ಕಾಪಾಡಲೂ ಕ್ರಮ ಅಗತ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.