ಕಲಬುರಗಿ: ‘ಬಡತನ, ಅಪಮಾನಗಳ ಚಕ್ರದಿಂದ ಬಿಡುಗಡೆ ಪಡೆದು, ಭವಿಷ್ಯದ ಕನಸುಗಳನ್ನು ಹೊತ್ತು ಹಾಸ್ಟೆಲ್‌ಗಳಿಗೆ ಬರುತ್ತೇವೆ. ಉಣ್ಣಲು ಕನಿಷ್ಠ ಗುಣಮಟ್ಟದ ಅನ್ನ, ಕುಡಿಯಲು ಶುದ್ಧ ನೀರು, ಓದಿಗೆ ಪೂರಕವಾದ ವಾತಾವರಣ ಕೇಳಿದ್ದಕ್ಕೆ ಹಾಸ್ಟೆಲ್ ಸಿಬ್ಬಂದಿ ಕೊಡಬಾರದ ಕಾಟ ಕೊಟ್ಟರು...’ ಕಲಬುರಗಿಯ ಕಲ್ಯಾಣ ನಗರದ ಡಿ.ದೇವರಾಜ ಅರಸು ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿದ್ದು ಬಿ.ಇಡಿ ಮುಗಿಸಿದ ಅಂಬರೀಶ್ ಅವರ ಬೇಸರದ ನುಡಿಗಳಿವು.
‘ಜೇವರ್ಗಿಯ ಮಲ್ಲಾ ಗ್ರಾಮದಿಂದ ಬಂದು ವೃತ್ತಿಪರ ಬಾಲಕರ ವಸತಿ ನಿಲಯ ಸೇರಿದೆ. ಮೆನು ಪ್ರಕಾರ ಉಪಾಹಾರ, ಊಟ, ಶುಚಿ ಕಿಟ್ ಕೊಡುವಂತೆ ಧ್ವನಿ ಎತ್ತಿದ್ದಕ್ಕೆ ಹಾಸ್ಟೆಲ್ ಸಿಬ್ಬಂದಿ ಹೊರಗಿನವರಿಂದ ಹಲ್ಲೆ ಮಾಡಿಸಿ, ಮಾನಸಿಕ ಹಿಂಸೆಯನ್ನೂ ಕೊಟ್ಟರು. ಕೊನೆಗೆ ಹಾಸ್ಟೆಲ್ ಸಹವಾಸವೇ ಬೇಡವೆಂದು ಮಧ್ಯದಲ್ಲಿ ಹಾಸ್ಟೆಲ್ ತೊರೆದು ರೂಮ್ ಮಾಡಿ, ಶಿಕ್ಷಣ ಮುಗಿಸಿದೆ’ ಎಂದು ಭಾವುಕರಾದರು.
ಶೈಕ್ಷಣಿಕ ಬದುಕಿನ ಕನಸಿನ ಮೂಟೆಗಳನ್ನು ಹೊತ್ತು ಬಡ, ಮಧ್ಯಮದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್‌ಗಳಲ್ಲಿ ದಾಖಲಾಗುತ್ತಿದ್ದಾರೆ. ಆದರೆ, ಅಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಕೆಲವು ಸಿಬ್ಬಂದಿಯ ಕಿರುಕುಳ ಅವರಲ್ಲಿನ ಕಲಿಕಾ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತಿದೆ.
ಮತ್ತೊಂದು ಕಡೆ ಶಿಥಿಲಗೊಂಡಿರುವ ಕಟ್ಟಡಗಳು, ಉದುರುತ್ತಿರುವ ಚಾವಣಿಯ ಸಿಮೆಂಟ್, ಸಿಬ್ಬಂದಿ ಕೊರತೆ, ಶೌಚಾಲಯ, ಗ್ರಂಥಾಲಯಗಳು, ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದು, ಉದ್ಘಾಟನೆಯ ಭಾಗ್ಯ ಕಾಣದೇ ಹಾಳುಬಿದ್ದ ಕಟ್ಟಡಗಳು. ಹೀಗೆ ಸಾಲು–ಸಾಲು ಸಮಸ್ಯೆಗಳು ಸರ್ಕಾರದ ಅರಿವಿಗೆ ಬಂದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಾರೆ.
ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿನಿಲಯದ ಕೊರತೆ ಬಹುವಾಗಿ ಕಾಡುತ್ತಿದೆ. ತಾಜಾ ಅಲ್ಲದ ತರಕಾರಿ, ಗುಣಮಟ್ಟವಿಲ್ಲದ ದಿನಸಿ ಬಳಕೆ, ಅರೆಬೆಂದ ಆಹಾರ ನೀಡಿದ್ದಕ್ಕೆ ಹಲವು ಬಾರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆ ಕ್ಷಣಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡುವ ಅಧಿಕಾರಿಗಳು ಆ ನಂತರ, ಕ್ರಮ ವಹಿಸುವುದಿಲ್ಲ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆರೋಪ. ಸ್ವಂತ ಕಟ್ಟಡ ಇಲ್ಲದೆ, ಬಾಡಿಗೆ ಕಟ್ಟಡದಲ್ಲಿ ಎಲ್ಲ ಸೌಲಭ್ಯ ಕಲ್ಪಿಸುವುದು ಕಷ್ಟ ಎಂಬುದು ಅಧಿಕಾರಿಗಳ ಸಮರ್ಥನೆ.
‘ಅವರಿವರ ಪ್ರಭಾವ ಬಳಸಿ ನಿಗದಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಗೆ ದಾಖಲಿಸಿಕೊಳ್ಳುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳ ಕಾರಣ ಹೇಳಿ, ಗುಣಮಟ್ಟದ ಆಹಾರ ನೀಡುವುದಿಲ್ಲ. ಕಡಿಮೆ ದರದ ಉತ್ಪನ್ನಗಳನ್ನು ತಂದು, ಹೆಚ್ಚು ದರದ ಬಿಲ್ ನೀಡಿ ವಂಚಿಸಿದ ಹಲವು ಪ್ರಕರಣಗಳಿವೆ’ ಎನ್ನುತ್ತಾರೆ ಎಸ್‌ಎಫ್‌ಐ ರಾಜ್ಯ ಘಟಕದ ಪದಾಧಿಕಾರಿ ಎಸ್.ಬಸವರಾಜ್.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳನ್ನು ಕಲಿಸುವ ಕಾಲೇಜುಗಳ ಸಂಖ್ಯೆ ಹೆಚ್ಚಿವೆ. ಹೀಗಾಗಿ, ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿದೆ.
ತುಮಕೂರು ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ದಿನೇ ದಿನೇ ವಿಸ್ತಾರವಾಗುತ್ತಾ ‘ಶಿಕ್ಷಣದ ಹಬ್’ ಆಗಿ ಬದಲಾಗುತ್ತಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ವೈದ್ಯಕೀಯ ಕೋರ್ಸ್‌ಗಳ ಅಭ್ಯಾಸಕ್ಕಾಗಿ ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವೇ ಸಿಗುತ್ತಿಲ್ಲ.
ಕೊಠಡಿ ಕೊರತೆ ಇರುವ ಕಾರಣ ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವುದು ಕಷ್ಟ. ಇರುವ ಜಾಗದಲ್ಲೇ ಪುಸ್ತಕ ಸಂಗ್ರಹಿಸಿ, ಓದಲು ವ್ಯವಸ್ಥೆ ಮಾಡಿಕೊಡಲಾಗಿದೆ.–ಗೋಪಾಲ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ, ಧಾರವಾಡ
ಸುಧಾರಿಸದ ಮೂಲಸೌಕರ್ಯ
ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಲಾಖೆಗಳು ಮಾಡುತ್ತಿರುವ ಖರ್ಚು ಕೂಡ ಜಾಸ್ತಿಯಾಗುತ್ತಿದೆ. ಆದರೆ, ಮೂಲಸೌಕರ್ಯಗಳ ಕೊರತೆ ಸುಳಿಯಿಂದ ಪಾರಾಗಲು ಸಾಧ್ಯವಾಗಿಲ್ಲ.
ಸರ್ಕಾರಿ ಮೆಟ್ರಿಕ್ ಪೂರ್ವದ ಪ್ರತಿ ವಿದ್ಯಾರ್ಥಿಗೆ ಮಾಸಿಕ ₹1,650 ಮತ್ತು ಮೆಟ್ರಿಕ್ ನಂತರದ ಪ್ರತಿ ವಿದ್ಯಾರ್ಥಿಗೆ ಮಾಸಿಕ ವೆಚ್ಚ ₹1,750 ಖರ್ಚು ಮಾಡಲಾಗುತ್ತಿದೆ. ದುಬಾರಿ ದಿನಗಳಲ್ಲಿ ಈ ಹಣ ಸಾಲುವುದಿಲ್ಲ ಎಂಬುದು ವಾರ್ಡನ್‌ಗಳ ವಾದ.
‘ವಿದ್ಯಾರ್ಥಿಗಳ ಮಾಸಿಕ ವೆಚ್ಚವನ್ನು ಏರಿಕೆ ಮಾಡುವಂತೆ ಕಳೆದ ವರ್ಷವೇ ಹಾಸ್ಟೆಲ್ ವಾರ್ಡನ್ ಸಂಘದ ವತಿಯಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ’ ಎಂದು ಕಲಬುರಗಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಬಸಮ್ಮ ಬೂದಿ ತಿಳಿಸಿದರು.
ವಿದ್ಯಾರ್ಥಿನಿಲಯಗಳ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆಯಾದರೆ, ಬೇರೆ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಅವಕಾಶ ಮಾಡಿಕೊಡಲಾಗುತ್ತಿದೆ.–ಮಾಲತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ, ದಕ್ಷಿಣ ಕನ್ನಡ
ಕಾಮಗಾರಿಗೆ ಆಮೆಗತಿ
ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ ಯೋಜನೆಯಡಿ ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1,000 ಸಾಮರ್ಥ್ಯದ ಬಹುಮಹಡಿ ವಿದ್ಯಾರ್ಥಿನಿಲಯಗಳ ಕಾಮಗಾರಿ ತೆವಳುತ್ತಾ ಸಾಗುತ್ತಿದೆ.
2022ರಲ್ಲಿ ಘೋಷಣೆಯಾದ ಈ ಯೋಜನೆಯು ಪೂರ್ಣಗೊಂಡರೆ ಉನ್ನತ ವ್ಯಾಸಂಗದ 5,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಗುಲಬರ್ಗಾ ವಿ.ವಿ, ಧಾರವಾಡದ ಕರ್ನಾಟಕ ವಿ.ವಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ. ಮತ್ತು ಮಂಗಳೂರು ವಿ.ವಿ.ಯಲ್ಲಿನ ಕಟ್ಟಡ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿನ ಕಟ್ಟಡ ಕಾಮಗಾರಿ ಕೊನೆಯ ಹಂತ ತಲುಪಿದೆ.
‘ಮೈಸೂರು ವಿ.ವಿ.ಯ ಬಹುಮಹಡಿ ವಿದ್ಯಾರ್ಥಿನಿಲಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಜಂಟಿಯಾಗಿ ನಿರ್ವಹಣೆ ಮಾಡಲಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮುಖ್ಯ ಜವಾಬ್ದಾರಿ ನೀಡಲಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕಾಮಗಾರಿ ಮುಗಿದ ನಂತರ ಇಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭಕ್ತ ಮಾರ್ಕಂಡೇಯ ‘ಪ್ರಜಾವಾಣಿ’ಗೆ ತಿಳಿಸಿದರು.
ವಾರ್ಡನ್‌ಗಳು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಊಟದ ಚಿತ್ರಗಳನ್ನು ಕಳಿಸಿದರೆ ನೋಡಲ್ ಅಧಿಕಾರಿಗಳು ಅದರ ಗುಣಮಟ್ಟ ಪರಿಶೀಲಿಸುವರು.–ಜಾವೇದ್ ಕೆ.ಕರಂಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ), ಕಲಬುರಗಿ
ಜಿಪಿಎಸ್ ವಿವರವುಳ್ಳ ಫೋಟೊ ಕಡ್ಡಾಯ
ವಿದ್ಯಾರ್ಥಿ ನಿಲಯಗಳಲ್ಲಿ ಕೊಡುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿರುತ್ತವೆ. ಆಹಾರ ವ್ಯತ್ಯಾಸದಿಂದಾಗಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾದ ನಿದರ್ಶನಗಳೂ ಇವೆ. ಮೆನು ಪ್ರಕಾರ ಆಹಾರ ನೀಡಲಾಗುತ್ತಿಲ್ಲ, ಸಮಯಕ್ಕೆ ಸರಿಯಾಗಿ ಆಹಾರ ಕೊಡಲಾಗುತ್ತಿಲ್ಲ ಎಂಬ ಆರೋಪಗಳೂ ಇವೆ.
ಇಲಾಖೆ ಸಿದ್ಧಪಡಿಸಿರುವ ಮೆನುವಿನ ವೇಳಾಪಟ್ಟಿಯಂತೆ ಹಾಸ್ಟೆಲ್‌ಗಳಲ್ಲಿ ಆಹಾರ ನೀಡಲಾಗುತ್ತಿದೆಯೇ? ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆಯೇ? ದಿನಸಿ, ತರಕಾರಿಗಳು ನಿಗದಿತ ಪ್ರಮಾಣದಷ್ಟೇ ಬರುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಲು ಜಿಪಿಎಸ್ ವಿವರ ಸಹಿತ ಫೋಟೊಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿದೆ. ಎಲ್ಲ ಜಿಲ್ಲೆಗಳಲ್ಲೂ ಇದರ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ.
ಹಾಸ್ಟೆಲ್ ವಾರ್ಡನ್‌ಗಳು, ಅಧಿಕಾರಿಗಳು ಇರುವ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಪ್ರತಿ ಹಾಸ್ಟೆಲ್‌ನ ವಾರ್ಡನ್‌ಗಳು ಸಿದ್ಧಪಡಿಸಿದ ಆಹಾರ, ಸಮಯಕ್ಕೆ ಸರಿಯಾಗಿ ಪೂರೈಸುತ್ತಿರುವ, ಖರೀದಿ ಮಾಡಿರುವ ದಿನಸಿ, ತರಕಾರಿಗಳ ಜಿಪಿಎಸ್ ವಿವರ ಸಹಿತ ಚಿತ್ರಗಳನ್ನು ತೆಗೆದು ಗ್ರೂಪ್‌ಗಳಿಗೆ ಕಡ್ಡಾಯವಾಗಿ ಹಂಚಬೇಕು.
ಈ ವ್ಯವಸ್ಥೆ ಬಂದ ನಂತರ ದೂರುಗಳು ಕಡಿಮೆಯಾಗಿವೆ ಎಂಬುದು ಅಧಿಕಾರಿಗಳ ಹೇಳಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.