ಹವಾಮಾನ ವೈಪರೀತ್ಯದ ಈ ಹೊತ್ತಲ್ಲಿ, ಎಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಯಾರದ್ದೋ ಹಿತಾಸಕ್ತಿಗಾಗಿ ಅಲ್ಲ, ನಮ್ಮ ಉಳಿವಿಗೆ, ನಮ್ಮೆಲ್ಲರ ಭವಿಷ್ಯಕ್ಕಾಗಿ ನಾವು ಪರಿಸರದ ಕುರಿತು ಜಾಗೃತರಾಗಬೇಕಾಗಿದೆ. ಈ ದಿಸೆಯಲ್ಲಿ ಇಡೀ ಜಗತ್ತಿಗೆ ಆದರ್ಶರಾಗುವ ಅವಕಾಶ ಈಗ ನಮ್ಮ ಮುಂದಿದೆ...
ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರುಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!
ರಾಷ್ಟ್ರಕವಿ ಕುವೆಂಪು ಅವರ ಕವಿಯಾತ್ಮ ಹಸಿರುಗಟ್ಟಿತ್ತು. ದೇಹದಲ್ಲೂ ಹಸಿರು ರಕ್ತವೇ ಹರಿದಾಡಿತ್ತು. ಹೀಗೆ ಎಲ್ಲೆಲ್ಲೂ ಹಸಿರೇ ತುಂಬಿರಬೇಕೆಂದು ಕವಿ ಆಶಿಸಿದ್ದರು. ಆದರೆ ಶ್ರೀಗಂಧದ ಬೀಡೆಂದೇ ಬಣ್ಣಿಸಲಾಗುವ ಈ ಕರುನಾಡು ಇನ್ನೂ ಹಸಿರುಗಟ್ಟಿಲ್ಲ. ಎಲ್ಲಿ ನಮ್ಮ ಮನಸ್ಸು ದೇಹವೆಲ್ಲಾ ಹಸಿರುಗಟ್ಟಿತೋ, ನಾಡು ಹಸಿರಾದೀತೋ ಎಂದು ನಾವೆಲ್ಲರೂ ಬ್ಲೀಚಿಂಗ್ ಪೌಡರ್ ಹಾಕಿಕೊಂಡೇ ಕುಳಿತಿದ್ದೇವೆ. ಹೀಗಾಗಿಯೇ ಐದು ದಶಕಗಳಲ್ಲಿ ನಡೆದ ʻಹಸಿರುʼ ಚಳವಳಿಗಳು ಸದ್ದು ಮಾಡಿದ್ದು ಕಡಿಮೆ. ಆದರೆ ಕೆಲ ಚಳವಳಿಗಳು ಮಾತ್ರ ಹಸಿರು ಹಾದಿಯ ತೋರಿವೆ, ಬದುಕನ್ನು ಹಸನಾಗಿಸಿವೆ.
ಪರಿಸರ ಒಪ್ಪಿದೆವು ಅಪ್ಪಿದೆವು
‘ಸರ್ಕಾರಿ ಅಧಿಕಾರಿಗಳು, ಆಗಾಗ್ಗೆ ತನ್ನ ಭಾಷಣಗಳಲ್ಲಿ ಪರಿಸರ ಪ್ರೇಮ ಸ್ಫುರಿಸುತ್ತಿದ್ದ ಇಂದಿರಾಗಾಂಧಿಯವರಲ್ಲಿ ಭಾರತದ ಪರಿಸರ ಪ್ರೇಮದ ಮೂಲವನ್ನು ಕಾಣುತ್ತಾರೆ. ಆದರೆ ಭಾರತದ ಪರಿಸರ ಚಳವಳಿ ಎಂಬುದರ ಮೂಲ ಚಿಪ್ಕೋ ಆಂದೋಲನದಲ್ಲಿದೆ’ ಎನ್ನುತ್ತಾರೆ ಹೆಸರಾಂತ ಪರಿಸರ ಚಿಂತಕರಾದ ಪ್ರೊ.ಮಾಧವ ಗಾಡ್ಗೀಲ್ ಮತ್ತು ರಾಮಚಂದ್ರ ಗುಹಾ. ಹೀಗೆಯೇ, ನಮ್ಮ ರಾಜ್ಯದ ಪರಿಸರ ಚಳವಳಿಯ ಮೂಲವನ್ನೂ ಚಿಪ್ಕೋ ಚಳವಳಿಯಿಂದ ಪ್ರೇರಣೆ ಗೊಂಡಿದ್ದ ‘ಅಪ್ಪಿಕೋ’ ಚಳವಳಿಯಲ್ಲಿಯೇ ಗುರುತಿಸಬಹುದು.
1983ರ ಸೆಪ್ಟೆಂಬರ್ 8ರಂದು ಶಿರಸಿ ತಾಲ್ಲೂಕಿನ ಕೆಳಾಸೆ ಕುದರಗೋಡ ಅರಣ್ಯದಲ್ಲಿ ʻಚಿಪ್ಕೋʼ ಮಾದರಿಯಲ್ಲಿಯೇ, ಅರಣ್ಯ ಕಡಿತಲೆಯನ್ನು ತಡೆಯಲು ʻಅಪ್ಪಿಕೋʼ ಚಳವಳಿಯನ್ನು ಅಲ್ಲಿನ ಸ್ಥಳೀಯರು, ಅದರಲ್ಲಿಯೂ ಮುಖ್ಯವಾಗಿ ಯುವಕರು, ಮಹಿಳೆಯರು ಮತ್ತು ಶಾಲಾ ಮಕ್ಕಳು ನಡೆಸಿದ್ದರು. ಅಲ್ಪ ಸಮಯದಲ್ಲಿಯೇ ಉತ್ತರ ಕನ್ನಡದಿಂದ ಕೊಡಗಿನವರೆಗೆ ಈ ಚಳವಳಿ ಹಬ್ಬಿತ್ತು. ನೈಸರ್ಗಿಕ ಕಾಡನ್ನು ಕಡಿದು ಏಕ ಜಾತಿಯ ಸಾಗುವಾನಿ ನೆಡುತೋಪು ನಿರ್ಮಾಣ ಮತ್ತು ಪ್ಲೈವುಡ್ ಕಾರ್ಖಾನೆಗಳಿಗೆ ನೀಡಲಾಗುವ ಮರ ಕಡಿಯುವ ಪರವಾನಗಿ ವಿರುದ್ಧ ಈ ಹೋರಾಟ ನಡೆದಿತ್ತು. ಕೊನೆಗೆ, ಈ ಜನಾಂದೋಲನಕ್ಕೆ ಮಣಿದು, ಅರಣ್ಯದಲ್ಲಿನ ಹಸಿರು ಮರಗಳನ್ನು ಕಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಆಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು.
80ರ ದಶಕದಲ್ಲಿಯೇ ಪರಿಸರಕ್ಕೆ ಸಂಬಂಧಿಸಿ ನಡೆದ ಇನ್ನೊಂದು ಬಹುದೊಡ್ಡ ಆಂದೋಲನ, ʻಪಶ್ಚಿಮಘಟ್ಟ ಉಳಿಸಿ ಅಭಿಯಾನʼ. 1987ರಲ್ಲಿ ಕೊಡಗಿನ ತಲಕಾವೇರಿಯಿಂದ ಆರಂಭಗೊಂಡಿದ್ದ ಈ ಪಾದಯಾತ್ರೆ ಉತ್ತರ ಕನ್ನಡದ ಸೂಪಾ ಮೂಲಕ ಗೋವಾವನ್ನು ಪ್ರವೇಶಿಸಿತ್ತು. ಪಶ್ಚಿಮಘಟ್ಟದ ಮಹತ್ವ ಮತ್ತು ಅರಣ್ಯ ಸಂರಕ್ಷಣೆಯ ಅನಿವಾರ್ಯ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಆಂದೋಲನ ಯಶಸ್ವಿಯಾಗಿತ್ತು.
ಈ ಪಾದಯಾತ್ರೆಯನ್ನು ಉದ್ಘಾಟಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು, ‘ಅರಣ್ಯಗಳ ಮರ ಕಡಿದು, ಅಲ್ಲಿ ಗಣಿ ಅಗೆದು, ಲೂಟಿ ಮಾಡಿ ತಮ್ಮ ಬದುಕನ್ನು ನಡೆಸುವವರಲ್ಲಿ ಅರಣ್ಯನಾಶದಿಂದ ಎಷ್ಟೆಲ್ಲ ಹಾನಿಯಾಗಿದೆ ಎಂದು ಹೇಳಿದರೂ ತಿಳಿಯಲಾರದ ಅಜ್ಞಾನ ತುಂಬಿದೆ. ಶಕ್ತಿ ಉತ್ಪಾದನೆಯ ನೆಪದಲ್ಲಿ, ಉದ್ಯಮ ವರ್ಧನೆಯ ನೆಪದಲ್ಲಿ ಇನ್ನೂ ಉಳಿದಿರುವ ನೈಸರ್ಗಿಕ ಸಂಪತ್ತನ್ನು ನಾವು ಕೊಚ್ಚಿ ಕಡಿದು- ಮುಗಿಸುತ್ತಾ ಬಂದಿದ್ದೇವೆ. ಇದು ಇಲ್ಲಿಗೇ ನಿಲ್ಲಬೇಕು’ ಎಂದು ಗುಡುಗಿದ್ದರು.
ಈ ಅಭಿಯಾನದ ಬೆನ್ನಲ್ಲೇ ಉತ್ತರ ಕನ್ನಡದಲ್ಲಿ ಕೈಗಾ ಅಣು ಸ್ಥಾವರ ಸ್ಥಾಪನೆ ವಿರುದ್ಧ ಹೋರಾಟ ಆರಂಭಗೊಂಡಿತ್ತು. ಸಾಹಿತಿ ಶಿವರಾಮ ಕಾರಂತರೇ ನೇತೃತ್ವ ವಹಿಸಿದ್ದರು. ಇದನ್ನು ಚುನಾವಣಾ ವಿಷಯವಾಗಿಸುವ ಉದ್ದೇಶದಿಂದ 1989ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಕೂಡ. ಆದರೆ, ಈ ಹೋರಾಟಕ್ಕೆ ಫಲ ಸಿಗಲಿಲ್ಲ. ಹರಿಹರದ ಪಾಲಿಫೈಬರ್ ಕಾರ್ಖಾನೆಯ ಮಾಲಿನ್ಯದ ವಿರುದ್ಧ ನಡೆದ ಚಳವಳಿ ಕೂಡ 80ರ ದಶಕದಲ್ಲಿಯೇ ನಡೆದ ಮತ್ತೊಂದು ಪರಿಸರ ಹೋರಾಟವಾಗಿತ್ತು. 1981ರ ಜನವರಿಯಲ್ಲಿ ‘ಪ್ರಜಾವಾಣಿ’ಯು ‘ವಿಷದ ನೆರಳಿನಲ್ಲಿ ನಲವಾಗಲು’ ಎಂಬ ಸಂದರ್ಶನದ ವರದಿಯನ್ನು ಪ್ರಕಟಿಸುವ ಮೂಲಕ ಈ ಕಾರ್ಖಾನೆಯ ಮಾಲಿನ್ಯದ ಕುರಿತು ರಾಜ್ಯದ ಗಮನ ಸೆಳೆದಿತ್ತು. ಮುಂದೆ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ, ಪಶ್ಚಿಮಘಟ್ಟ ಉಳಿಸಿ ಆಂದೋಲನ ಮತ್ತು ರಾಣೆಬೆನ್ನೂರಿನ ತುಂಗಭದ್ರಾ ಪರಿಸರ ಸಮಿತಿ ಈ ಮಾಲಿನ್ಯದ ವಿರುದ್ಧ ವ್ಯವಸ್ಥಿತ ಹೋರಾಟ ಕಟ್ಟಿದ್ದವು.
ಬೀದರ್ ಹೋರಾಟ; ಹೊಸ ತಿರುವು
ಪಶ್ಚಿಮ ಘಟ್ಟದ ಭಾಗದಲ್ಲಿ ನಡೆಯುತ್ತಿದ್ದ ಪರಿಸರ ಹೋರಾಟ ಉತ್ತರ ಕರ್ನಾಟಕದೆಡೆಗೂ ವಿಸ್ತರಿಸಿದ್ದು ಬೀದರ್ ಹೋರಾಟದ ಮೂಲಕ. ರಾಜ್ಯ ಸರ್ಕಾರ ಹಿಂದುಳಿದಿದ್ದ ಬೀದರ್ ಜಿಲ್ಲೆಯನ್ನು ಕೈಗಾರಿಕೀಕರಣ ಮಾಡುವ ಉದ್ದೇಶದಿಂದ 1984ರಲ್ಲಿ ಯೋಜನೆ ರೂಪಿಸಿ, 1,300 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಎಸ್ಟೇಟ್ ಆಗಿ ಪರಿವರ್ತಿಸಿತ್ತು. ಇಲ್ಲಿ ಕಾರ್ಖಾನೆ ಆರಂಭಿಸುವ ಕಂಪನಿಗಳಿಗೆ ಸಬ್ಸಿಡಿ ಕೂಡ ಘೋಷಿಸಲಾಗಿತ್ತು. ಹೀಗಾಗಿ 45ಕ್ಕೂ ಹೆಚ್ಚು ಫಾರ್ಮಾ ಕಂಪನಿಗಳು ಅರಂಭವಾಗಿದ್ದವು. ಇವುಗಳ ರಾಸಾಯನಿಕ ತ್ಯಾಜ್ಯದ ವಿಲೇವಾರಿಗೆ ಸರ್ಕಾರ ವ್ಯವಸ್ಥೆ ಮಾಡಿರಲಿಲ್ಲ. ಪರಿಣಾಮ ಇದು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿ, ಮೊದಲಿಗೆ ಸಾವಿರಾರು ಜಾನುವಾರುಗಳು ಬಲಿಯಾಗಿದ್ದವು. ಅಂತರ್ಜಲ ವಿಷವಾಗಿತ್ತು. ಅಸಹನೀಯ ವಿಷಪೂರಿತ ವಾಸನೆ ಕೂಡ ಹರಡಿತು. ಮಣ್ಣಿನಲ್ಲಿ ರಾಸಾಯನಿಕಗಳ ಲವಣಾಂಶ ಹೆಚ್ಚಾಗಿ ಹೊಲಗಳು ಬಂಜರಾದವು. ಇದರ ವಿರುದ್ಧ ಕರ್ನಾಟಕ ವಿಮೋಚನಾ ರಂಗದ ನೇತ್ವತದಲ್ಲಿ ಜನಾಂದೋಲನ ನಡೆದು, ಮಾಲಿನ್ಯಕ್ಕೆ ತಡೆ ಬಿದ್ದಿತ್ತು. ಕಾರ್ಖಾನೆಗಳ ಮಾಲಿನ್ಯದ ವಿರುದ್ಧ ಇದೇ ರೀತಿಯಾಗಿ ಭದ್ರಾವತಿ, ಮೈಸೂರು, ನಂಜನಗೂಡು ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ-ಪುಟ್ಟ ಹೋರಾಟಗಳು ಐದು ದಶಕಗಳಲ್ಲಿ ನಡೆದಿವೆ.
ಗಣಿಗಾರಿಕೆ ವಿರುದ್ಧ ಗೆಲುವು
ಪಶ್ಚಿಮಘಟ್ಟ ಪ್ರದೇಶದಲ್ಲಿನ ಮ್ಯಾಂಗನೀಸ್ ಗಣಿಗಾರಿಕೆ ವಿರುದ್ಧ ಆರಂಭವಾದ ರಾಜ್ಯದಲ್ಲಿನ ಗಣಿಗಾರಿಕೆ ವಿರುದ್ಧದ ಪರಿಸರ ಹೋರಾಟ, ಸಂಡೂರಿನ ದೇವದಾರಿಯಲ್ಲಿನ ಗಣಿಗಾರಿಕೆಯನ್ನು ತಡೆಯುವಲ್ಲಿಗೆ ಬಂದು ನಿಂತಿದೆ. ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕುದುರೆಮುಖ ಐರನ್ ಓರ್ ಕಂಪನಿಯು (ಕೆಐಒಸಿಎಲ್) ನಾಡಿನ ಜೀವ ನದಿಯಾದ ತುಂಗಾ ನದಿಯ ಮೂಲವಾದ ಗಂಗಡಿಕಲ್ಲಿನಲ್ಲಿ ಮತ್ತು ನೆಲ್ಲಿಬೀಡುವಿನಲ್ಲಿ ಗಣಿಗಾರಿಕೆ ನಡೆಸಲು ಮುಂದಾದಾಗ ತುಂಗಾನದಿ ತೀರದ ಜನತೆ, ಪ್ರಗತಿಪರ ಸಂಘಟನೆಗಳು, ಪರಿಸರವಾದಿಗಳು, ರೈತ ಸಂಘಟನೆಗಳು ಒಟ್ಟಾಗಿ ಸೇರಿ ʻತುಂಗಾ ಮೂಲ ಉಳಿಸಿʼ ಎಂಬ ಹೋರಾಟ ನಡೆಸಿದ್ದವು. ನಂತರ ಕುದುರೆಮುಖ ಕಂಪನಿಯ ಗಣಿಗಾರಿಕೆ ಅವಧಿಯನ್ನು ವಿಸ್ತರಿಸುವುದನ್ನು ವಿರೋಧಿಸಿ, ʻತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟʼ ರಚಿಸಿಕೊಂಡು ಬೃಹತ್ ಹೋರಾಟ ನಡೆಸಲಾಗಿತ್ತು.
ನೂರಕ್ಕೂ ಹೆಚ್ಚು ಸಂಘಟನೆಗಳು ಈ ಹೋರಾಟ ಒಕ್ಕೂಟದ ಭಾಗವಾಗಿದ್ದ ಕಾರಣದಿಂದಾಗಿ ರಾಜ್ಯದ ಪರಿಸರ ಹೋರಾಟದಲ್ಲಿ ಇದೊಂದು ಮೈಲಿಗಲ್ಲಾಯಿತು. ಜಾಗೃತ ಜನರ ಹೋರಾಟ, ನ್ಯಾಯಾಲಯದ ಆದೇಶದ ಕಾರಣದಿಂದಾಗಿ ಕೊನೆಗೆ ಕುದುರೆಮುಖ ಕಂಪನಿಯ ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದಾದ ಒಂದು ದಶಕದ ನಂತರ, ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆಯ ವಿರುದ್ಧ ದನಿ ಎದ್ದಿತು. ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಲಯದ ಮೆಟ್ಟಿಲೇರಿದರೆ, ಇತ್ತ ರಾಜಕೀಯ ವಿರೋಧ ಕೂಡ ಬಲವಾಗಿತ್ತು. ಈ ಅಕ್ರಮ ಗಣಿಗಾರಿಕೆಯ ಕುರಿತು ನಡೆದಿದ್ದ ಲೋಕಾಯುಕ್ತ ತನಿಖೆಯಿಂದ ಕೇವಲ ಮೂರು ವರ್ಷಗಳಲ್ಲಿ ರಾಜ್ಯಸರ್ಕಾರಕ್ಕೆ ₹36 ಸಾವಿರ ಕೋಟಿ ನಷ್ಟವಾಗಿರುವುದು ಬಹಿರಂಗಗೊಂಡಿತ್ತು. ಈ ಕಾರಣಕ್ಕಾಗಿಯೇ ಲೋಕಾಯುಕ್ತ ತನಿಖಾ ವರದಿಯು, ‘ಕಬ್ಬಿಣದ ಅದಿರಿನ ರಫ್ತು ಹಾಗೂ ಕರ್ನಾಟಕದೊಳಗಿನ ಇದರ ವ್ಯವಹಾರಗಳನ್ನು ನಿಷೇಧಿಸಬೇಕುʼ ಎಂದು ಶಿಫಾರಸು ಕೂಡ ಮಾಡಿತ್ತು. 2011ರ ಜುಲೈ 29ರಂದು ಸುಪ್ರೀಂ ಕೋರ್ಟ್ ಬಳ್ಳಾರಿ ಜಿಲ್ಲೆಯಲ್ಲಿನ ಎಲ್ಲಾ ಗಣಿಗಾರಿಕೆ ಚಟುವಟಿಕೆಯನ್ನು ನಿಷೇಧಿಸಿತ್ತು. ನಂತರ ಆಗಸ್ಟ್ 28ರಂದು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಾರಿಕೆಯನ್ನೂ ನಿಷೇಧಿಸಲಾಯಿತು. ಇತ್ತೀಚೆಗೆ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಸಲ್ಲಿಕೆಯಾಗಿವೆ. ಇದರ ವಿರುದ್ಧ ಜಾಗೃತ ಸಮುದಾಯ ಹೋರಾಟದ ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಲು ಹಿಂದೇಟು ಹಾಕಿದೆ. ಶಿವಮೊಗ್ಗ ಜಿಲ್ಲೆಯ ಅಂಬಾರಗುಡ್ಡದಲ್ಲಿ ಗಣಿಗಾರಿಕೆ ನಡೆಸುವ ಪ್ರಯತ್ನ ಕೂಡ ಜನರ ವಿರೋಧದ ಕಾರಣದಿಂದ ಮಣ್ಣುಪಾಲಾಗಿದೆ.
ಹೋರಾಟದ ಹೊಳೆಗೆ ಹತ್ತಾರು ತೊರೆ
ರಾಜ್ಯದಲ್ಲಿ ಪರಿಸರದ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟದ ಹೊಳೆಗೆ ಹತ್ತಾರು ತೊರೆಗಳು ಬಂದು ಸೇರಿಕೊಂಡಿವೆ. ಶರಾವತಿ ಟೇಲ್‌ರೇಸ್ ಅಣೆಕಟ್ಟು ನಿರ್ಮಾಣದ ವಿರುದ್ಧ, ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ, ಮಂಗಳೂರಿನ ತಣ್ಣೀರಬಾವಿ ಹಡಗು ಗುಜರಿ ಸ್ಥಾಪನೆ ವಿರುದ್ಧ ಹೋರಾಟಗಳು ನಡೆದವು. ಮಂಗಳೂರಿನಲ್ಲಿ ಕೊಜೆಂಟ್ರಿಕ್ಸ್‌ಗೆ ವಿರೋಧ ವ್ಯಕ್ತವಾಯಿತು, ಎಂಆರ್‌ಪಿಎಲ್ ಮಾಲಿನ್ಯದ ವಿರುದ್ಧ ಜನ ಬೀದಿಗಿಳಿದರು. ಪಶ್ಚಿಮ ಘಟ್ಟದಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ವಿರುದ್ಧ ಹೋರಾಟ ನಡೆದವು. ಈ ಹೊತ್ತಿನಲ್ಲಿಯೇ ನೀಲಗಿರಿ ಮತ್ತು ಅಕೇಶಿಯಾ ನೆಡುತೋಪುಗಳ ನಿರ್ಮಾಣದ ವಿರುದ್ಧವು ಪಶ್ಚಿಮಘಟ್ಟ ಪ್ರದೇಶದಲ್ಲಿ ಹೋರಾಟ ಜೋರಾಗಿತ್ತು. ಒತ್ತುವರಿ ವಿರುದ್ಧವೂ ಪರಿಸರವಾದಿಗಳು ಹೋರಾಟ ಕಟ್ಟಿದ್ದರು. ಮೈಸೂರು ಜಿಲ್ಲೆಯ ಚಾಮಲಾಪುರದಲ್ಲಿ ವಿದ್ಯುತ್ ಕೇಂದ್ರದ ವಿರುದ್ಧ ನಡೆದ ಹೋರಾಟ ರಾಜ್ಯದ ಗಮನ ಸೆಳೆದಿತ್ತು. ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಭಾಗವಹಿಸಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಗುಬ್ಬಗದ್ದೆಯ ಅರಣ್ಯ ಉಳಿಸುವ ಹೋರಾಟ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಇನ್ನು, ನೇತ್ರಾವತಿ ತಿರುವು ಯೋಜನೆ, ಗುಂಡ್ಯ ಜಲವಿದ್ಯುತ್ ಯೋಜನೆ, ಕೊಡಗಿನಲ್ಲಿ ಕೇರಳಕ್ಕೆ 400 ಕೆ.ವಿ ಹೈಟೆನ್ಶನ್ ವಿದ್ಯುತ್ ಮಾರ್ಗ ನಿರ್ಮಿಸುವ ಯೋಜನೆ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ವಿರುದ್ಧ ನಡೆದ ಹೋರಾಟಗಳು ಕೂಡ ಪರಿಸರದ ದೃಷ್ಟಿಯಿಂದ ಮಹತ್ವ ಪಡೆದಿವೆ. ಶರಾವತಿ ಉಳಿಸಿ ಆಂದೋಲನ, ಕೊಪ್ಪಳಕ್ಕೆ ಹಿಂದೆ ನೀರೊದಗಿಸುತ್ತಿದ್ದ ಹಿರೇಹಳ್ಳವನ್ನು ಉಳಿಸುವ ಚಳವಳಿ, ತುಂಗಭದ್ರಾ ಮಾಲಿನ್ಯದ ವಿರುದ್ಧ ಹೋರಾಟ, ಪಲ್ಗುಣಿ ನದಿ ಉಳಿವಿಗಾಗಿ ನಡೆಸಲಾಗುತ್ತಿರುವ ಚಟುವಟಿಕೆಗಳು, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಹೋರಾಟ ಕೂಡ ಗಮನಸೆಳೆಯುತ್ತಿವೆ.
ಹವಾಮಾನ ವೈಪರೀತ್ಯದ ಈ ಹೊತ್ತಲ್ಲಿ, ಎಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಯಾರದ್ದೋ ಹಿತಾಸಕ್ತಿಗಾಗಿ ಅಲ್ಲ, ನಮ್ಮ ಉಳಿವಿಗೆ, ನಮ್ಮೆಲ್ಲರ ಭವಿಷ್ಯಕ್ಕಾಗಿ ನಾವು ಪರಿಸರದ ಕುರಿತು ಜಾಗೃತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಆದರ್ಶರಾಗುವ ಅವಕಾಶ ಈಗ ನಮ್ಮ ಮುಂದಿದೆ.
ಪರಿಸರ ಜಾಗೃತಿ ಮೂಡಿಸಿದ ಸುಂದರಲಾಲ್ ಬಹುಗುಣ
ಉತ್ತರ ಕನ್ನಡದ ಶಿರಸಿಯಲ್ಲಿ1981ರ ಜನವರಿಯಲ್ಲಿ ಬೃಹತ್ ಅಣೆಕಟ್ಟುಗಳ ಸಾಧಕ ಬಾಧಕಗಳ ಚರ್ಚೆಗೆ ರಾಷ್ಟ್ರಮಟ್ಟದ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಚಿಪ್ಕೋ ಖ್ಯಾತಿಯ ಸುಂದರಲಾಲ್ ಬಹುಗುಣ ಭಾಗವಹಿಸಿದ್ದರು. ಹೀಗೆ ಬಂದವರು ರಾಜಸ್ಥಾನದಲ್ಲಿ ಮರ ಕಡಿಯುವುದನ್ನು ತಪ್ಪಿಸಲು ಹೋಗಿ ಜೀವ ಕೊಟ್ಟ ಅಮೃತಳ ಕತೆ ಹೇಳುತ್ತಲೇ ಚಿಪ್ಕೋ ಚಳವಳಿಯ ಯಶಸ್ಸನ್ನೂ ಮನವರಿಕೆ ಮಾಡಿಕೊಡುತ್ತಾ ರಾಜ್ಯದಲ್ಲಿ ಅಪ್ಪಿಕೋ ಚಳವಳಿ ಆರಂಭವಾಗಲು ಕಾರಣಕರ್ತರಾದರು. ಮುಂದೆ ನಾಲ್ಕಾರು ಬಾರಿ ರಾಜ್ಯಕ್ಕೆ ಬಂದರು. ತುಂಗಾ ಮೂಲ ಉಳಿಸಿ ಹೋರಾಟ ಗುಂಡ್ಯ ಜಲವಿದ್ಯುತ್ ಯೋಜನೆ ವಿರುದ್ಧದ ಹೋರಾಟ ಸೇರಿದಂತೆ ಅನೇಕ ಪರಿಸರ ಹೋರಾಟದಲ್ಲಿ ಅವರು ಭಾಗವಹಿಸಿದ್ದರು. ರಾಜ್ಯದ ಪರಿಸರವಾದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ನೀಡಿದರು. ಇವರ ಬಾಯಿಂದ ಅಮೃತಳ ಕತೆ ಕೇಳಿದ ಪಿ. ಲಂಕೇಶ್ ಅವರು ಟೀಕೆ-ಟಿಪ್ಪಣಿಯಲ್ಲಿ ಹೀಗೆ ದಾಖಲಿಸಿದ್ದಾರೆ; ‘ನಾವು ಉಣ್ಣುವ ಅನ್ನ ಜೀವ ಕೊಡುವ ಉಸಿರು ನೀರು ನೆರಳು ಗಂಧ ಉಡುಪು ವಸತಿ ಎಲ್ಲದಕ್ಕೆ ಕಾರಣವಾದ ಸಸ್ಯರಾಶಿಯ ಬಗೆಗಿನ ಅಮೃತಳ ಕತೆಯನ್ನು ಸುಂದರಲಾಲ್ ಬಹುಗುಣ ಎಂಬ ಹಿಮಾಲಯದ ತಪ್ಪಲಿನ ವ್ಯಕ್ತಿ ನಮಗೆ ಹೇಳಿದರು. ಕನ್ನಡ ನಾಡಿನ ಎಲ್ಲ ಜಾಣ ಜಾಣೆಯರ ಮನಸ್ಸಿನಲ್ಲಿ ಈ ಅಮೃತಮಯ ಕತೆ ಅನುರಣಿಸಲೆಂದು ನಮ್ಮ ಸಸ್ಯ ಸಂಪತ್ತು ಸಜೀವವಾಗಿ ಉಳಿಯುಂತಾಗಲೆಂದು ಆಶಿಸುವೆ’.
ಲೇಖಕ: ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.