ADVERTISEMENT

ಅನುಭವ ಮಂಟಪ: ದಾರಿ ಯಾವುದಯ್ಯಾ ‘ಮೀಸಲು ಮನೆಗೆ’?

Published 5 ಡಿಸೆಂಬರ್ 2022, 19:08 IST
Last Updated 5 ಡಿಸೆಂಬರ್ 2022, 19:08 IST
   

ಭಾರತದಲ್ಲಿ ‘ಮೀಸಲಾತಿ’ ಎಂಬುದು ಹೊಸ ವ್ಯಾಖ್ಯಾನಗಳಿಗೆ ಒಳಗಾಗುತ್ತಿದೆ. ಒಂದು ಕಾಲದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಸಮಾಜದ ಮೇಲ್ಪದರಿನಲ್ಲಿರುವ ಜಾತಿ, ವರ್ಗಗಳ ಜನರೂ ಇಂದು ತಮಗೂ ಮೀಸಲಾತಿ ಬೇಕು ಎಂದು ಬೀದಿಗಿಳಿದಿದ್ದಾರೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಹೊರತಳ್ಳಲ್ಪಟ್ಟ ಜನರನ್ನು ಒಳಗೊಳ್ಳುವ ಕಾರಣಕ್ಕಾಗಿ ರೂಪುಗೊಂಡ ಮೀಸಲಾತಿ ವ್ಯವಸ್ಥೆ ಇಂದು ರಾಜಕೀಯ ಕಾರಣಕ್ಕಾಗಿ ತನ್ನ ಮೂಲ ಆಶಯವನ್ನೇ ಕಳೆದುಕೊಂಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯ ನಿವಾರಣೆಗಾಗಿ ರೂಪುಗೊಂಡ ವ್ಯವಸ್ಥೆ ಇಂದು ಆರ್ಥಿಕ ಅಸಮಾನತೆಯ ನಿವಾರಣೆಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿದೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ನಿರುದ್ಯೋಗ, ಬಡತನದಂತಹ ಸಮಸ್ಯೆಗಳನ್ನು ಪರಿಹಾರ ಮಾಡಲಾಗದ ಪ್ರಭುತ್ವ ತನ್ನ ವೈಫಲ್ಯಗಳನ್ನು ಮರೆಮಾಚಲು ಸಾಮಾಜಿಕ ಕ್ಷೇತ್ರದಲ್ಲಿ ಇಂಥ ಗೊಂದಲಗಳನ್ನು ಹುಟ್ಟು ಹಾಕುತ್ತಿದೆ.

ಸಾಮಾಜಿಕ ಅಸಮಾನತೆ ಹಾಗೂ ಆರ್ಥಿಕ ಅಸಮಾನತೆಯನ್ನು ಪರಿಹಾರ ಮಾಡಲು ಪ್ರಭುತ್ವವು ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅದಕ್ಕೆ ಸೂಕ್ತ ಮಾರ್ಗದರ್ಶನವನ್ನೂ ನಮ್ಮ ಸಂವಿಧಾನ ಕೊಟ್ಟಿದೆ. ಆರ್ಥಿಕ ಅಸಮಾನತೆಯ ಬೆಂಕಿಯಲ್ಲಿ ಬೆಂದವರು, ಅದಕ್ಕೆ ಕಾರಣವಾದ ಪ್ರಭುತ್ವದ ನೀತಿಯನ್ನು ಪ್ರಶ್ನಿಸದೇ ಸಾಮಾಜಿಕ ಸಮಾನತೆಗಾಗಿ ಜಾರಿಯಾದ ಮೀಸಲಾತಿ ವ್ಯವಸ್ಥೆಯನ್ನು ಪ್ರಶ್ನಿಸುವುದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಮೀಸಲಾತಿ ಇನ್ನೆಷ್ಟು ದಿನ ಎಂದು ಪ್ರಶ್ನಿಸುವವರು, ಅಸ್ಪೃಶ್ಯತೆ ಇನ್ನೆಷ್ಟು ದಿನ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕು.

ಸಂವಿಧಾನದ 17ನೇ ವಿಧಿ, ‘ಅಸ್ಪೃಶ್ಯತೆಯನ್ನು ನಿರ್ಮೂಲನಗೊಳಿಸಲಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ’ ಎಂದು ಘೋಷಿಸುತ್ತದೆ. ಈ ಆಶಯ ಜಾರಿಯಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ ಅಸ್ಪೃಶ್ಯತೆ ಕುರಿತು ಇಂದಿಗೂ ನಡೆಯುತ್ತಿರುವ ಅಮಾನವೀಯ ಆಚರಣೆಗಳು ನಮ್ಮ ಸಾಮಾಜಿಕ ಸಮಾನತೆಯ ಗುರಿಯ ವೈಫಲ್ಯಗಳನ್ನೇ ತೋರಿಸುತ್ತವೆ. ಇಂಥ ವೈಫಲ್ಯಗಳನ್ನು ಸರಿಪಡಿಸುವ ಗುರಿಯೊಂದಿಗೇ ಹುಟ್ಟಿಕೊಂಡಿದ್ದು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಜನರಿಗಾಗಿ ಮೀಸಲಾತಿ ನೀತಿ. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ಇತ್ತು. ಕೊಲ್ಲಾಪುರ ಸಂಸ್ಥಾನದಲ್ಲಿ ಸಾಹುಮಹಾರಾಜರು 1902ರಲ್ಲಿ ಮೀಸಲಾತಿ ಜಾರಿ ಮಾಡಿದ್ದರು. ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿದ ಮಿಲ್ಲರ್ ಸಮಿತಿಯು 1919ರಲ್ಲಿ ನೀಡಿದ ವರದಿಯ ಆಧಾರದಲ್ಲಿ ಮೀಸಲಾತಿಯನ್ನು ತರಲಾಗಿತ್ತು. ಈ ಮೀಸಲಾತಿಯು ಸಾಮಾಜಿಕ ಅಸಮಾನತೆ ಹೋಗಲಾಡಿಸುವುದನ್ನೇ ಗುರಿಯಾಗಿಸಿಕೊಂಡಿದ್ದವು. ಭಾರತದ ಸಂವಿಧಾನ ರಚಿಸುವಾಗಲೂ ಮೀಸಲಾತಿ ಸಾಮಾಜಿಕ ಅಸಮಾನತೆಯನ್ನೇ ಗುರಿಯಾಗಿಸಿಕೊಂಡಿತ್ತು. ಪ್ರಸ್ತುತ 2019ರ ಸಂವಿಧಾನದ 103ನೇ ತಿದ್ದುಪಡಿ ಮೀಸಲಾತಿಯ ಮೂಲ ಆಶಯಕ್ಕೆ ವ್ಯತಿರಿಕ್ತವಾಗಿದೆ.

ADVERTISEMENT

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ವರ್ಗದ ಜನಾಂಗಗಳನ್ನು ಒಳಗೊಂಡು ಎಲ್ಲರೂ ‘ಮೀಸಲಾತಿಯ ಮನೆ’ಗೆ ನುಗ್ಗುವ ಪೈಪೋಟಿಯಲ್ಲಿದ್ದಾರೆ. ಮೀಸಲು ಮನೆ ಇಕ್ಕಟ್ಟಾಗಿದೆ ಮತ್ತು ಮೀಸಲು ಮನೆಯ ದಾರಿಯನ್ನೂ ಮುಚ್ಚಲಾಗಿದೆ. 1990ರ ನಂತರ ಭಾರತದ ಪ್ರಭುತ್ವ ಅನುಸರಿಸುತ್ತಿರುವ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ನೀತಿಗಳಿಂದ ನಮ್ಮ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ತಳಪಾಯವೇ ಬದಲಾಗುತ್ತಿದೆ. ಆಳುವ ವರ್ಗ ಮತ್ತು ಆಳುವ ಪಕ್ಷಗಳ ಆದ್ಯತೆಗಳು ಬದಲಾಗಿವೆ, ಮಾತ್ರವಲ್ಲ ಶಿಕ್ಷಣ, ಕೈಗಾರಿಕೆ, ಕೃಷಿ, ಸಾಮಾಜಿಕ ನ್ಯಾಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಮತ್ತು ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಗೆ ಪೂರಕವಾದ ನೀತಿಗಳು ಪ್ರಭುತ್ವದಿಂದ ಜಾರಿಯಾಗುತ್ತಿವೆ. ಕೃಷಿ, ಕೈಗಾರಿಕೆ, ಸೇವಾವಲಯ, ಎಲ್ಲ ಉತ್ಪಾದನಾ ಕ್ಷೇತ್ರಗಳಲ್ಲೂ ಸರ್ಕಾರದ ಪ್ರವೇಶ ಮತ್ತು ಮಧ್ಯಸ್ಥಿಕೆಯನ್ನು ಕಾರ್ಪೊರೇಟ್‌ ವಲಯವು ನಿರಾಕರಿಸುತ್ತದೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ ಕೈಗಾರಿಕೆ, ವ್ಯಾಪಾರ, ಸೇವಾವಲಯದ ಕ್ಷೇತ್ರಗಳನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಳ್ಳಬೇಕೆಂದು ಭಾರತದ ಅಂದಿನ ದೊಡ್ಡ ಬಂಡವಾಳಗಾರರು ಬಯಸಿದ್ದರು. 1944ರ ‘ಟಾಟಾ–ಬಿರ್ಲಾ ಯೋಜನೆ’ ಅದನ್ನು ಸ್ಪಷ್ಟಪಡಿಸಿತ್ತು. ಆದರೆ ಭಾರತ ಸರ್ಕಾರ, ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಖಾಸಗಿ ಬಂಡವಾಳಗಾರರ ಪ್ರಸ್ತಾವನೆಯನ್ನು ನಿರಾಕರಿಸಿದರು. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಉತ್ಪಾದನಾ ವಲಯದಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ಕೊಟ್ಟರೆ, ಎರಡು ಮತ್ತು ಮೂರನೇ ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರಭುತ್ವ ಮಾಲೀಕತ್ವದ ಕೈಗಾರಿಕೆಗಳ ಆರಂಭಕ್ಕೆ ಆದ್ಯತೆ ಕೊಟ್ಟರು. ಪ್ರಭುತ್ವವು ಸಾರ್ವಜನಿಕ ಕೈಗಾರಿಕೆಗಳ ಆರಂಭಕ್ಕೆ ಚಾಲನೆ ಕೊಟ್ಟಿತು. ಉಕ್ಕು ಮತ್ತು ಕಬ್ಬಿಣ ಕೈಗಾರಿಕೆ, ಮೆಷಿನ್‌ ಟೂಲ್ಸ್‌, ಗಣಿಗಾರಿಕೆ, ವಿದ್ಯುಚ್ಛಕ್ತಿ, ತೈಲ, ಗ್ಯಾಸ್‌, ರಾಸಾಯನಿಕ, ಬೀಜ–ಗೊಬ್ಬರ ಇಂಥ ಎಲ್ಲ ವಲಯಗಳಲ್ಲಿಯೂ ಸಾರ್ವಜನಿಕ (ಪ್ರಭುತ್ವ ಮಾಲೀಕತ್ವ) ಕೈಗಾರಿಕೆಗಳನ್ನು ಆರಂಭಿಸಲಾಯಿತು.

1948ರ ಕೈಗಾರಿಕಾ ನೀತಿ ನಿರ್ಣಯದ ಪ್ರಕಾರ, ಸಾರ್ವಜನಿಕ ವಲಯವನ್ನು ಸ್ಥಿರೀಕರಿಸುವ ಯೋಜನೆ ರೂಪಿಸಲಾಯಿತು. 1949ರ ರಿಸರ್ವ್‌ ಬ್ಯಾಂಕ್‌ ರಾಷ್ಟ್ರೀಕರಣ, ವಿಮಾನಯಾನ ರಾಷ್ಟ್ರೀಕರಣ, 1953ರಲ್ಲಿ ಇಂಪೀರಿಯಲ್‌ ಬ್ಯಾಂಕ್‌ ರಾಷ್ಟ್ರೀಕರಣ, 1956ರಲ್ಲಿ ಜೀವ ವಿಮಾ ಕ್ಷೇತ್ರ ಹಾಗೂ ಚಿನ್ನದ ಗಣಿಗಳ ರಾಷ್ಟ್ರೀಕರಣ ಯೋಜನೆಗಳು ಸ್ವತಂತ್ರ ಭಾರತದ ಕೈಗಾರಿಕಾ ಕ್ಷೇತ್ರದ ಸ್ವಾವಲಂಬನೆಗೆ ಕಾರಣವಾದವು. ಪರಿಣಾಮ ಸ್ಪಷ್ಟವಾಗಿತ್ತು. 1950–51ರಲ್ಲಿ ದೇಶದಲ್ಲಿ ಖಾಸಗಿ ಬಂಡವಾಳ ₹800 ಕೋಟಿ. ಸಾರ್ವಜನಿಕ ವಲಯದ ಬಂಡವಾಳ ₹922.6 ಕೋಟಿ ಇತ್ತು. ಆದರೆ, ಒಂದು ದಶಕದಲ್ಲಿ– 1960–61ರಲ್ಲಿ ಖಾಸಗಿ ಬಂಡವಾಳ ₹1,269.7 ಕೋಟಿ ಇದ್ದರೆ, ಸಾರ್ವಜನಿಕ ವಲಯದ ಬಂಡವಾಳ ₹2,961 ಕೋಟಿಯಾಗಿತ್ತು. 1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿ 8,000ದಷ್ಟಿದ್ದ ಬ್ಯಾಂಕ್‌ ಶಾಖೆಗಳನ್ನು ಮೂವತ್ತು ವರ್ಷಗಳಲ್ಲಿ 60,000 ಶಾಖೆಗಳಿಗೆ ಏರಿಸಲಾಯಿತು. ಬ್ಯಾಂಕ್‌ಗಳನ್ನು ಗ್ರಾಮಗಳಿಗೆ ವಿಸ್ತರಿಸಲಾಯಿತು. ಆರ್ಥಿಕ ವಲಯವನ್ನು ಒಡೆತನಕ್ಕೆ ಪಡೆದ ಪ್ರಭುತ್ವ ದೇಶದಾದ್ಯಂತ ಸೇವಾ ವಲಯ ಹಾಗೂ ಉತ್ಪಾದನಾ ವಲಯದಲ್ಲಿ ಸಾರ್ವಜನಿಕ ಬಂಡವಾಳ ಹೂಡಿತು. ಅದರ ಪರಿಣಾಮವಾಗಿ ದೇಶದ ಎಲ್ಲ ಕಡೆ ಸಾರ್ವಜನಿಕ ವಲಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿ ಅಲ್ಲಿ ಮೀಸಲಾತಿಯೂ ಜಾರಿಗೆ ಬಂದಿತು. ಹೀಗೆ ರಾಷ್ಟ್ರೀಕರಣ ನೀತಿಯಿಂದಾಗಿ ದೇಶದ ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗ ಸೃಷ್ಟಿ, ಉದ್ಯೋಗದಲ್ಲಿ ಸಾಮಾಜಿಕ ನ್ಯಾಯ ಎಲ್ಲವೂ ಸಾಧ್ಯವಾಗಿ ದೇಶ ಪ್ರಗತಿಯತ್ತ ಸಾಗಿತ್ತು.

ಆದರೆ, ಈ ಎಲ್ಲ ಸಾಧನೆಗಳನ್ನೂ ಇಂದಿನ ಖಾಸಗೀಕರಣ ಉದಾರೀಕರಣ ನೀತಿ ಮಣ್ಣು ಪಾಲಾಗಿಸಿದೆ. ಖಾಸಗೀಕರಣದಿಂದ ದೇಶ ಸ್ವಾವಲಂಬನೆ ಮತ್ತು ಸಾಮಾಜಿಕ ನ್ಯಾಯವನ್ನು (ಮೀಸಲಾತಿ ವ್ಯವಸ್ಥೆ) ಕಳೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ‘ಆಸ್ತಿ ನಗದೀಕರಣ ಯೋಜನೆ’ಯಲ್ಲಿ ಎಲ್ಲ ಸಾರ್ವಜನಿಕ ವಲಯದ ಕೈಗಾರಿಕೆ, ಉದ್ಯಮಗಳನ್ನು ಮಾರಾಟ ಮಾಡುತ್ತಿದೆ. ಈಗಾಗಲೇ 1991ರಿಂದ ಇಲ್ಲಿಯವರೆಗೆ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಸುಮಾರು ₹11 ಲಕ್ಷ ಕೋಟಿಯಷ್ಟು ಬಂಡವಾಳ ಹಿಂಪಡೆಯಲಾಗಿದೆ. ಈಗ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರಿ
₹6 ಲಕ್ಷ ಕೋಟಿ ಸಂಗ್ರಹಿಸುವ ಯೋಜನೆ ಜಾರಿ ಮಾಡುತ್ತಿದ್ದಾರೆ. ಎಲ್ಲ ಸಾರ್ವಜನಿಕ ವಲಯದ ಕೈಗಾರಿಕೆ, ಉದ್ಯಮಗಳ ಉದ್ಯೋಗಗಳಲ್ಲಿ ಮೀಸಲಾತಿ ಮಾಯವಾಗಿ ಗುತ್ತಿಗೆ, ಹೊರಗುತ್ತಿಗೆ ಉದ್ಯೋಗ ಜಾರಿಯಾಗುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲ ಸೇರಿ ಅಂದಾಜು 60 ಲಕ್ಷ ಉದ್ಯೋಗಗಳಿದ್ದರೆ ಅದರಲ್ಲಿ ಶೇ 30ರಿಂದ ಶೇ 40ರಷ್ಟು ಖಾಲಿ ಹುದ್ದೆಗಳು. ಕರ್ನಾಟಕದಲ್ಲಿ ಮಂಜೂರಾದ ಸರ್ಕಾರಿ ಉದ್ಯೋಗಗಳ
ಸಂಖ್ಯೆ 7,79,439 ಆಗಿದ್ದರೆ, 2,69,572 ಹುದ್ದೆಗಳು ಖಾಲಿ ಇವೆ. ಇಂಥ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಮೀಸಲು ಮನೆಗೆ ತಳ್ಳುವ ಉದ್ದೇಶವೇನು ಎಂಬ ಪ್ರಶ್ನೆ ಕಾಡುತ್ತದೆ.

ಖಾಸಗಿ ವಲಯದಲ್ಲಿರುವ ಉದ್ಯೋಗಗಳೂ ಅತಂತ್ರವಾಗಿವೆ. ಕೇಂದ್ರ ಸರ್ಕಾರ ತಂದ ಕಾರ್ಮಿಕ ಸಂಹಿತೆ ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ. ಶಿಕ್ಷಣ ಖಾಸಗೀಕರಣ, ಕೈಗಾರಿಕೆ ಖಾಸಗೀಕರಣ, ಸರ್ಕಾರಿ ಕೆಲಸದಲ್ಲಿಯೂ ಗುತ್ತಿಗೆ, ಹೊರಗುತ್ತಿಗೆ, ಖಾಸಗಿ ವಲಯದಲ್ಲಿ ಕಾಯಂ ಕೆಲಸಗಾರರಿಗಿಂತ ಗುತ್ತಿಗೆ ಕೆಲಸಗಾರರ ಸಂಖ್ಯೆಯೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ಮೀಸಲಾತಿ, ಸಾಮಾಜಿಕ ನ್ಯಾಯ ಅರ್ಥ ಕಳೆದುಕೊಂಡಿದೆ.

ಮೀಸಲು ಮನೆಯನ್ನು ಇಕ್ಕಟ್ಟಾಗಿಸಿ ಮೀಸಲಾತಿಯ ಮಾರ್ಗವನ್ನು ಮುಚ್ಚುತ್ತಿರುವಾಗ ಮೀಸಲಾತಿ ಬಯಸುವ ಎಲ್ಲ ವರ್ಗ, ಜಾತಿಯ ಜನ ಪರಸ್ಪರ ಕಚ್ಚಾಡದೇ ಮೊದಲು ಸರ್ಕಾರದ ಖಾಸಗೀಕರಣ ನೀತಿಯ ವಿರುದ್ಧ ಮತ್ತು ಉದ್ಯೋಗ ಸೃಷ್ಟಿಗಾಗಿ ಒತ್ತಾಯಿಸಿ ಹೋರಾಟ ಮಾಡಬೇಕಾಗಿದೆ. ಭಾರತದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಖಾಸಗೀಕರಣದ ವಿರುದ್ಧ ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ನಿರಂತರ ಹೋರಾಡುತ್ತಿವೆ. ಮೀಸಲಾತಿಗಾಗಿ ಹೋರಾಡುವ ಜನಸಮೂಹ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ಸರ್ಕಾರದ ಖಾಸಗೀಕರಣ ನೀತಿಯ ವಿರುದ್ಧ ಹೋರಾಡಬೇಕಿದೆ. ಮೊದಲು ಇರುವ ಉದ್ಯೋಗಗಳು ಉಳಿಯಬೇಕು, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಬೇಕು. ಸಾಮಾಜಿಕ–ಆರ್ಥಿಕ ಸಮಾನತೆ ಸಾಧಿಸುವವರೆಗೆ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ವಲದಯಲ್ಲಿ ಮೀಸಲಾತಿಗಾಗಿ ಕೆಲಸದ ಭದ್ರತೆಗಾಗಿ ಹೋರಾಡಬೇಕಿದೆ. ಉದ್ಯೋಗ ಕ್ಷೇತ್ರವೇ ನಾಶವಾಗುತ್ತಿರುವಾಗ ಮೀಸಲಾತಿಗಾಗಿ ಪೈಪೋಟಿ ಅರ್ಥಹೀನ. ತಕ್ಷಣದಲ್ಲಿ ಎಲ್ಲ ಜಾತಿ, ವರ್ಗದ ಬಡವರು ಒಂದಾಗಿ ಸಂವಿಧಾನದ ಆಶಯ, ಸಾರ್ವಜನಿಕ ಸಂಪತ್ತಿನ ರಕ್ಷಣೆಗೆ ಹೋರಾಡಬೇಕಿದೆ.

ಲೇಖಕ: ‘ಹೊಸತು’ ನಿಯತಕಾಲಿಕದ ಸಂಪಾದಕ

...................

‘ಉದ್ಯೋಗ 0, ಮೀಸಲು 100, ಉಪಯೋಗ ಏನು?’

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ದಮನಕ್ಕೆ ಒಳಗಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳ ಏಳಿಗೆಯ ಆಶಯದಿಂದ ಮೀಸಲಾತಿಯನ್ನು ತರಲಾಗಿತ್ತು ಮತ್ತು ಅದನ್ನು ಎಲ್ಲರೂ ಸ್ವಾಗತಿಸಿದ್ದರು. ಈಗ ಮೀಸಲಾತಿಯನ್ನು ಎಲ್ಲ ಸಮುದಾಯಗಳಿಗೆ ವಿಸ್ತಾರ ಮಾಡಲಾಗಿದೆ. ಆದರೆ, ಅವಶ್ಯಕ ಸಂಖ್ಯೆಯಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎಂಬುದು ಇಂದಿನ ವಾಸ್ತವವಾಗಿದೆ. ಉದ್ಯೋಗಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಮೂಲ ಕಾರಣ ಇಂದಿನ ಬಂಡವಾಳಶಾಹಿ ವ್ಯವಸ್ಥೆ. ವ್ಯವಸ್ಥೆಯು ಬಿಕ್ಕಟ್ಟಿನಲ್ಲಿ ಇರುವ ಕಾರಣ ಉದ್ಯೋಗಗಳು ಸೃಷ್ಟಿ ಆಗುವುದಿಲ್ಲ. ಅಂದರೆ, ಉದ್ಯೋಗ 0, ಮೀಸಲಾತಿ 100. ಇದರಿಂದ ಏನು ಪ್ರಯೋಜನ? ಇದು ವಾಸ್ತವ. ಇಲ್ಲಿ ಸರ್ಕಾರಗಳು ಜಾತಿ, ಉಪಜಾತಿ, ಹಲವು ಸಮುದಾಯಗಳ ಮೀಸಲಾತಿ ಎಂದು ಹೇಳಿ, ಜನರ ನಡುವೆ ಒಡಕು ತರುವ ಪ್ರಯತ್ನ ಮಾಡುತ್ತಿದೆ. ಇದು ಸರ್ಕಾರಗಳ ಒಡೆದು ಆಳುವ ನೀತಿ. ಹಾಗಾಗಿ, ಜನಸಾಮಾನ್ಯರು ಜಾತಿ, ಸಮುದಾಯಗಳ ವಿಭಜನೆಗೆ ಬಲಿಯಾಗದೆ, ಸಂಘಟಿತರಾಗಿ, ಎಲ್ಲ ಸಮುದಾಯಗಳಿಗೂ, ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ವ್ಯವಸ್ಥೆಗಾಗಿ ಹೋರಾಟ ನಡೆಸಬೇಕಿದೆ. ಎಲ್ಲರಿಗೂ ಉದ್ಯೋಗ ಸಿಗುವಂತಹ ವ್ಯವಸ್ಥೆಗಾಗಿ ಎಲ್ಲರೂ ಹೋರಾಡಬೇಕು. ಅದೇ ಸಮಯದಲ್ಲಿ ತಕ್ಷಣದ ಪರಿಹಾರಕ್ಕಾಗಿ ಸರ್ಕಾರವು ಉದ್ಯೋಗವನ್ನು ಒದಗಿಸುವವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು.

ಅಜಯ್ ಕಾಮತ್,ರಾಜ್ಯ ಕಾರ್ಯದರ್ಶಿ, ಎಐಡಿಎಸ್‌ಒ

‘ಖಾಸಗಿ ವಲಯದಲ್ಲಿ ಮೀಸಲಾತಿ ಸಕಾಲ’

ಮೀಸಲಾತಿಯ ಕಾರಣದಿಂದ ವಿದ್ಯಾಭ್ಯಾಸದ ಅವಕಾಶವನ್ನು, ಉದ್ಯೋಗವನ್ನು ಪಡೆದುಕೊಂಡವರನ್ನು ಅವಮಾನಿಸುವ, ಅವರೊಳಗೊಂದು ಕೀಳರಿಮೆಯನ್ನು ಬೆಳೆಸುವ ಸಮಾಜದ ನಡುವೆಯೂ ಮತ್ತೊಮ್ಮೆ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿದೆ. ಕಾನೂನಾತ್ಮಕವಾಗಿ ಈಗ ಮತ್ತಷ್ಟು ವಂಚಿತ ಸಮುದಾಯದ ಪ್ರತಿಭೆಗಳು ಮೀಸಲಾತಿಯ ಮೂಲಕ ವ್ಯವಸ್ಥೆಯೊಳಗೆ ಪ್ರವೇಶ ಪಡೆಯಬಹುದಾಗಿದೆ. ಆದರೆ ನಮ್ಮ ಸರ್ಕಾರಿ ಉದ್ಯೋಗ ಮಾರುಕಟ್ಟೆ ಹೇಗಿದೆ ಎಂದರೆ ಕ್ರೀಡಾಪಟುಗಳು ಸಿದ್ಧವಾಗಿ ನಿಂತಿದ್ದಾರೆ, ಆದರೆ ಆಡಲು ಕ್ರಿಡಾಂಗಣವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಹೀಗಾದರೆ ಅವರೆಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು? ಮೀಸಲಾತಿಯನ್ನು ಹೆಚ್ಚಿಸಿದ್ದು ಸಂತೋಷದ ಸಂಗತಿಯೇ ಆದರೂ ಸಿಗುವ ಸರ್ಕಾರಿ ಉದ್ಯೋಗಗಳು ಎಲ್ಲಿವೆ? ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯದಲ್ಲಿ ಮೀಸಲಾತಿಗೆ ಅವಕಾಶವಿಲ್ಲ. ಹೀಗಿದ್ದರೆ ಮೀಸಲಾತಿ ಹೆಚ್ಚಳದಿಂದ ಏನು ಪ್ರಯೋಜನ? ಇದಕ್ಕೊಂದೇ ಪರಿಹಾರವೆಂದರೆ ಖಾಸಗಿ ಉದ್ಯೋಗ ರಂಗದಲ್ಲಿ ಮೀಸಲಾತಿಯನ್ನು ಒಂದು ಸೀಮಿತ ಅವಧಿಗೆ ಅನ್ವಯಿಸಬೇಕು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು, ಐಟಿ ವಲಯವೂ ಸೇರಿದಂತೆ ಉದ್ಯೋಗ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಲಿ.

ಸಾಮಾಜಿಕ ನ್ಯಾಯದ ನಿರಾಕರಣೆ ಆಗುವುದನ್ನು ತಡೆಯಲು ಖಾಸಗಿ ವಲಯವೂ ಮೀಸಲಾತಿ ಎನ್ನುವ ತತ್ವದೊಳಗೆ ಬರುವಂತಾಗಬೇಕು. ಇಂತಹ ಉದ್ಯೋಗಗಳಿಗೆ ಬೇಕಾದ ತರಬೇತಿಯೂ ಸಿಗುವಂತಾಗಲಿ. ಆಗ ಮಾತ್ರ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎನ್ನುವ ಮಾತು ಕಾರ್ಯರೂಪಕ್ಕೆ ಬರಲು ಸಾಧ್ಯ. ಜತೆಗೆ ಸರ್ಕಾರಗಳ ನಿರ್ಲಕ್ಷ್ಯದಿಂದ ಭರ್ತಿಯಾಗದೆ ಉಳಿದ ಬ್ಯಾಕ್‍ಲಾಗ್ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿಮಾಡುವ ಗುರಿಯನ್ನು ಇರಿಸಿಕೊಂಡರೆ ಮಾತ್ರ ಮೀಸಲಾತಿ ಹೆಚ್ಚಳ ತುತ್ತು ಅನ್ನವಾಗಿ ಕೈಗೆಟುಕಬಹುದು. ಇಲ್ಲವಾದರೆ ಅದು ಕನಸಿನ ಗಂಟು. ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ತಟ್ಟೆಯ ಅನ್ನವನ್ನು ಇಲ್ಲದವರೊಂದಿಗೆ ಹಂಚಿಕೊಳ್ಳುವ ಉದಾರತೆಯ ಒಳಮೀಸಲಾತಿಯೂ ಕೂಡಲೇ ಜಾರಿಯಾಗಲಿ.

ಡಾ. ರೋಹಿಣಾಕ್ಷ ಶಿರ್ಲಾಲು,ಅಧ್ಯಕ್ಷ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌, ಕರ್ನಾಟಕ ಘಟಕ

‘ಗುಲಾಮಿತನದ ಸಮಾಜ ಸೃಷ್ಟಿಸುವ ಹುನ್ನಾರ’

ಮೀಸಲಾತಿ ಎಂಬುದು ದಲಿತರ, ದಮನಿತರ, ಸಾವಿರಾರು ವರ್ಷಗಳಿಂದ ನೋವುಂಡ ಸಮುದಾಯಗಳಿಗೆ ಸಾಮಾಜಿಕ ಸ್ತರದಲ್ಲಿ ನೀಡಲಾದ ಸಮಾನತೆಯ ವ್ಯವಸ್ಥೆ. ಇದನ್ನು ವಿರೋಧಿಸಿ ಸೃಷ್ಟಿಯಾದ ಚಿಂತನೆಗಳೇ ಅಧಿಕಾರ ಹಿಡಿದಿರುವಾಗ ಮೀಸಲಾತಿ ಉಳಿಯುತ್ತದೆಯೇ? ಹೆಚ್ಚಿಸುವುದರಿಂದ ನ್ಯಾಯ ಸಿಗುತ್ತದೆ ಎನ್ನುವುದು ಹಗಲುಗನಸು.‌ ತುಂಬಾ ಯೋಜಿತವಾಗಿ ಮೀಸಲಾತಿಯನ್ನು ನಗಣ್ಯ ಮಾಡುವ ರದ್ದು ಮಾಡುವ ಪ್ರಕ್ರಿಯೆಯ ಭಾಗವೇ ಖಾಸಗೀಕರಣ. ಸರ್ಕಾರಿ ಸ್ತರದಲ್ಲಿ ಮೊದಲಿಗೆ ಉದ್ಯೋಗಗಳನ್ನು ಗುತ್ತಿಗೆ ಆಧಾರದಲ್ಲಿ ಮಾಡಲಾಯಿತು. ಕಾಯಂ ಉದ್ಯೋಗಗಳಿಗೆ ತಿಲಾಂಜಲಿ ನೀಡಲಾಗುತ್ತಿದೆ. ಇದೆಲ್ಲವೂ ಕೊನೆಗೆ ಗುಲಾಮಿತನದ ಸಮಾಜ, ವರ್ಣಾಶ್ರಮದ‌ ಸಮಾಜ ಸೃಷ್ಟಿಸುವ ಹುನ್ನಾರದ ಭಾಗವಷ್ಟೇ...

ಆದರ್ಶ ಹುಂಚದಕಟ್ಟೆ,ರಾಷ್ಟ್ರೀಯ ವಕ್ತಾರ,ಯುವ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.