ಕೆರೆ ಮತ್ತು ಕೆರೆಜಾಲಗಳ ಅಭಿವೃದ್ಧಿಯ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ಬರದ ಸಮಸ್ಯೆಗೆ ಪರಿಹಾರ ಕಂಡುಕೊಂಡಿವೆ. ಇವುಗಳ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಜನಸಮುದಾಯವನ್ನೇ ಪ್ರಮುಖ ಭಾಗೀದಾರರನ್ನಾಗಿ ಮಾಡಿದ್ದರಲ್ಲಿ ಈ ಯೋಜನೆಗಳ ಯಶಸ್ಸು ಅಡಗಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಬರದ ವರ್ಷಗಳಲ್ಲಿ ನೀರಿನ ಕೊರತೆ ಎದುರಿಸುವ ಕರ್ನಾಟಕಕ್ಕೂ, ಕೆರೆಗಳ ಅಭಿವೃದ್ಧಿಯ ಈ ಯೋಜನೆಗಳು ಮಾದರಿಯಾಗಬಲ್ಲದು
ಅವಿಭಜಿತ ಆಂಧ್ರಪ್ರದೇಶವು ದೇಶದಲ್ಲೇ ಅತಿಹೆಚ್ಚು ಕೆರೆಗಳಿದ್ದ ರಾಜ್ಯ ಎನಿಸಿಕೊಂಡಿತ್ತು. 1995ರ ಲೆಕ್ಕಾಚಾರದ ಪ್ರಕಾರ ಅವಿಭಜಿತ ಆಂಧ್ರಪ್ರದೇಶದಲ್ಲಿ 74,000ಕ್ಕೂ ಹೆಚ್ಚು ಕೆರೆಗಳಿದ್ದವು. ರಾಜ್ಯದ ಶೇ 24ರಷ್ಟು (10 ಲಕ್ಷ ಹೆಕ್ಟೇರ್) ಕೃಷಿ ಭೂಮಿಗೆ ಈ ಕೆರೆಗಳೇ ನೀರನ್ನು ಒದಗಿಸುತ್ತಿದ್ದವು. ಆದರೆ ನಂತರದ ವರ್ಷಗಳಲ್ಲಿ ಕೆರೆ ಮೇಲಿನ ಅವಲಂಬನೆ ಕಡಿಮೆಯಾಯಿತು. ಜತೆಗೆ ಕೊಳವೆ ಬಾವಿಗಳ ಬಳಕೆಯೂ ಹೆಚ್ಚಾಯಿತು. ಹತ್ತೇ ವರ್ಷಗಳಲ್ಲಿ ರಾಜ್ಯದಲ್ಲಿನ ಅಂತರ್ಜಲದ ಮಟ್ಟ 1,000 ಅಡಿಗಿಂತಲೂ ಕೆಳಗೆ ಇಳಿಯಿತು. 2005ರ ವೇಳೆಗೆ ನೀರಾವರಿಗೆ ಕೆರೆಗಳನ್ನು ಅವಲಂಬಿಸಿದ್ದ ಕೃಷಿ ಜಮೀನಿನ ವಿಸ್ತೀರ್ಣ 5 ಲಕ್ಷ ಹೆಕ್ಟೇರ್‌ಗೆ ಕುಸಿದಿತ್ತು. ಜಲಸಂರಕ್ಷಣೆಗೆ ಆಂಧ್ರಪ್ರದೇಶ ಮುಂದಾಗಲು ಅನಿವಾರ್ಯವಾದ ಸನ್ನಿವೇಶ ಬಂದೊದಗಿತ್ತು.
ಒಂದೆಡೆ ಈ ಹಿಂದಿನಂತೆ ನೀರು ಒದಗಿಸಲಾಗದ ಕೆರೆಗಳು. ಮತ್ತೊಂದೆಡೆ ಕುಸಿದ ಅಂತರ್ಜಲದ ಮಟ್ಟ. ಆಗ ಅಧಿಕಾರದಕಲ್ಲಿದ್ದ ವೈ.ಎಸ್.ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಯಿತು. ಇದಕ್ಕಾಗಿ ಒಂದು ಯೋಜನೆಯನ್ನು ತಯಾರಿಸಿತು. ಯೋಜನೆ ಅನುಷ್ಠಾನಕ್ಕೆ ಅಗತ್ಯವಿದ್ದ ಹಣಕಾಸು ನೆರವು ಪಡೆದುಕೊಳ್ಳಲು ಸರ್ಕಾರವು ವಿಶ್ವಬ್ಯಾಂಕ್ ಅನ್ನು ಎಡತಾಕಿತು. ಯೋಜನೆಗೆ ಹಣಕಾಸು ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ ನೀಡಿತು. ಜತೆಗೆ, ‘ಬೇರೆಲ್ಲಾ ನೀರು ಸಂರಕ್ಷಣೆ ಯೋಜನೆಗಳಿಗಿಂತ ಈ ಯೋಜನೆ ಭಿನ್ನವಾಗಿದೆ. ಇದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ನೋಡಬೇಕಿದೆ’ ಎಂದು ಯೋಜನೆಗೆ ಒಪ್ಪಿಗೆ ಕೊಡುವಾಗ ಹೇಳಿತ್ತು.
ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ರಾಯಲಸೀಮಾ ಮತ್ತು ಇತರ ಪ್ರದೇಶಗಳಲ್ಲಿನ ಒಟ್ಟು 3,000 ಕೆರೆಗಳನ್ನು ಈ ಯೋಜನೆಗೆ ಆಯ್ಕೆಮಾಡಿಕೊಳ್ಳಲಾಗಿತ್ತು. ಕೆರೆಗಳ ಹೂಳೆತ್ತುವುದಕ್ಕೆ ಮಾತ್ರ ಈ ಯೋಜನೆ ಸೀಮಿತವಾಗಿರಲಿಲ್ಲ. ಕೆರೆಗಳನ್ನು ಪರಿಪೂರ್ಣವಾಗಿ ಪುನರುಜ್ಜೀವನಗೊಳಿಸಲಾಯಿತು. ಮೊದಲಿಗೆ ಕೆರೆಗಳ ಏರಿಗಳನ್ನು ಸರಿಪಡಿಸಲಾಯಿತು. ಹೂಳನ್ನು ತೆಗೆಯುವ ಮೂಲಕ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಕೆರೆಗಳಿಗೆ ನೀರು ಹರಿದುಬರುವ ಹೊಳೆ–ತೊರೆಗಳ ಪಾತ್ರಗಳ ಒತ್ತುವರಿಯನ್ನು ತೆರವು ಮಾಡಲಾಯಿತು. ಮಳೆ ಬಂದಾಗ ನೀರು ಸರಾಗವಾಗಿ ಕೆರೆಗಳಿಗೆ ಹರಿದುಬರುವಂತೆ ಮಾಡಲಾಯಿತು. ಜತೆಗೆ ಒಂದು ಕೆರೆ ತುಂಬಿದರೆ, ನೀರು ಮುಂದಿನ ಕೆರೆಗೆ ಹರಿದುಹೋಗುವಂತೆ ಮಾಡಲಾಯಿತು. ಕೆರೆಯ ನೀರು ಕೃಷಿ ಜಮೀನುಗಳಿಗೆ ಹರಿದುಹೋಗುವಂತೆ ಮಾಡಲು ಕಿರುಗಾಲುವೆಗಳನ್ನು ನಿರ್ಮಿಸಲಾಯಿತು.
ಈ ಎಲ್ಲಾ ಕಾಮಗಾರಿಗಳನ್ನು ಈ ಹಿಂದೆ ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಈ ಯೋಜನೆ ಅಡಿಯಲ್ಲಿ ಬಳಕೆದಾರರ ಗುಂಪುಗಳನ್ನು ರಚಿಸಲಾಯಿತು. ಒಂದು ಕೆರೆಯ ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ನಿವಾಸಿಗಳು, ಪಂಚಾಯಿತಿಗಳು ಬಳಕೆದಾರರ ಗುಂಪಿನಲ್ಲಿದ್ದವು. ಗ್ರಾಮಸ್ಥರನ್ನೇ ಕೆಲಸಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ಗ್ರಾಮಸ್ಥರು ನೀಡಿದ ಶ್ರಮದಾನಕ್ಕೆ ಪ್ರತಿಯಾಗಿ ಹೂಳನ್ನು ಅವರ ಹೊಲಗಳಿಗೆ ಸಾಗಿಸಲಾಯಿತು, ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಿತ್ತು. ನಂತರ ಕೆರೆ–ಕಾಲುವೆಗಳ ನಿರ್ವಹಣೆಯನ್ನು ಬಳಕೆದಾರರ ಗುಂಪುಗಳಿಗೇ ನೀಡಲಾಯಿತು. ಕೆರೆಗಳಲ್ಲಿ ಮೀನುಸಾಕಣೆ ಹೊಣೆಯನ್ನು ಈ ಗುಂಪುಗಳಿಗೇ ವಹಿಸಲಾಯಿತು. ಈ ಎಲ್ಲವೂ ಜನರ ಹಣಕಾಸು ಸ್ಥಿತಿಯನ್ನು ಸುಧಾರಿಸಿದವು.
ಯೋಜನೆ ಪ್ರಕಾರ ಕಾಮಗಾರಿಯು 2012ಕ್ಕೇ ಪೂರ್ಣಗೊಳ್ಳಬೇಕಿತ್ತಾದರೂ ಪೂರ್ಣಗೊಂಡಿದ್ದು 2016ಕ್ಕೆ. ಆದರೆ, 2014ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿ, ತೆಲಂಗಾಣ ಮತ್ತು ಆಂಧ್ರಪ್ರದೇಶ ಎಂದು ಎರಡು ರಾಜ್ಯಗಳನ್ನು ರಚಿಸಲಾಯಿತು. ನೂತನ ಆಂಧ್ರಪ್ರದೇಶದ ಟಿಡಿಪಿ ಸರ್ಕಾರ ಮತ್ತು ತೆಲಂಗಾಣದ ಟಿಆರ್‌ಎಸ್ (ಈಗ ಬಿಆರ್‌ಎಸ್) ಸರ್ಕಾರವು ಯೋಜನೆಯನ್ನು ಮುಂದುವರಿಸಿದವು. ಈ ಯೋಜನೆಯಂತೆಯೇ ಎರಡೂ ರಾಜ್ಯಗಳು ತಮ್ಮದೇ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ, ಇಡೀ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದವು. ಈ ಯೋಜನೆಗಳ ಪರಿಶೀಲನೆ ನಡೆಸಿದ ವಿಶ್ವಬ್ಯಾಂಕ್, ‘ಈ ಯೋಜನೆಗಳು ಬಹುತೇಕ ಯಶಸ್ವಿಯಾಗಿವೆ. ಸಮುದಾಯವನ್ನು ಒಳಗೊಂಡು ಜಲಸಂರಕ್ಷಣೆಯನ್ನು ಹೇಗೆ ಪರಿಣಾಮಕಾರಿಯಾಗಿ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆ’ ಎಂದು 2019ರಲ್ಲಿ ವರದಿ ನೀಡಿತು.
ಬೃಹತ್ ಜಲಾಶಯಗಳು
ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹ ಸಾಮರ್ಥ್ಯ ಇರುವ ನಾಗಾರ್ಜುನ ಸಾಗರ (408 ಟಿಎಂಸಿ ಅಡಿ), ಪೋಲವರಂ (194 ಟಿಎಂಸಿ ಅಡಿ), ಶ್ರೀಶೈಲ (216 ಟಿಎಂಸಿ) ಬೃಹತ್ ಜಲಾಶಯಗಳಿವೆ. ಇವುಗಳ ನೀರನ್ನು ತೆಲಂಗಾಣದ ಜತೆಗೂ ಹಂಚಿಕೊಳ್ಳಲಾಗುತ್ತದೆ. ಇವುಗಳು ಅರ್ಧದಷ್ಟು ಭರ್ತಿಯಾದರೂ ಎರಡೂ ರಾಜ್ಯಗಳಲ್ಲಿ ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತವೆ. ಬರದ ವರ್ಷಗಳಲ್ಲೂ ನೀರಿನ ಕೊರತೆ ಉಂಟಾಗದೇ ಇರಲು ಇಂತಹ ಬೃಹತ್ ಜಲಾಶಯಗಳೂ ಕಾರಣ ಎನ್ನಲಾಗಿದೆ.
'ನನ್ನ ಊರು ನನ್ನ ಕೆರೆ'
ತೆಲಂಗಾಣಕ್ಕೆ ಕೆರೆಗಳೇ ಆಧಾರ. ನೀರನ್ನು ಸಂರಕ್ಷಿಸಿಕೊಂಡರೆ ಮಾತ್ರವೇ ಇಲ್ಲಿನ ಕೃಷಿ, ಜೀವನಾಡಿಗಳಿಗೆ ನೀರುಣಿಸಲು ಸಾಧ್ಯವಾಗುತ್ತದೆ. ಆಂಧ್ರಪ್ರದೇಶದಿಂದ ಬೇರ್ಪಟ್ಟ ತೆಲಂಗಾಣವು ನೀರಿನ ಮೂಲಾಧಾರವಾಗಿರುವ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿತ್ತು. ಕೆರೆಗಳ ಅಭಿವೃದ್ಧಿಯೇ ಹೊಸ ರಾಜ್ಯದ ಆದ್ಯತೆಯಾಯಿತು. ಈ ಹಿನ್ನೆಲೆಯಲ್ಲಿಯೇ 2015ರಲ್ಲಿ ಮಿಷನ್ ಕಾಕತೀಯ (ನನ್ನ ಊರು, ನನ್ನ ಕೆರೆ) ಯೋಜನೆಯನ್ನು ತೆಲಂಗಾಣ ಜಾರಿ ಮಾಡಿದೆ.
ಕಿರು ಜಲಮೂಲಗಳಾದ ಕೆರೆ, ಕಿರು ಅಣೆಕಟ್ಟೆ ಹಾಗೂ ಚೆಕ್‌ಡ್ಯಾಂ ಮುಂತಾದವುಗಳ ಅಭಿವೃದ್ಧಿಯ ಮೂಲಕ ಸಣ್ಣ ರೈತರ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಯೋಜನೆ ಜಾರಿಗೆ ಮೊದಲು ರಾಜ್ಯದಲ್ಲಿರುವ ಕಿರು ಜಲಮೂಲಗಳ ಗಣತಿಯನ್ನು ಕೈಗೊಳ್ಳಲಾಯಿತು.
ಗಣತಿಯಲ್ಲಿ ಒಟ್ಟು 46,000ಕ್ಕೂ ಹೆಚ್ಚು ಕಿರು ಜಲಮೂಲಗಳನ್ನು ಪತ್ತೆ ಮಾಡಲಾಯಿತು. ಪ್ರತಿ ವರ್ಷ ಶೇ 20ರಷ್ಟು ಅಂದರೆ, 9,306 ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಯಿತು.
ಕಿರು ಜಲಮೂಲಗಳ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಯೋಜನೆಯ ಮುಖ್ಯ ಕಾರ್ಯೋದ್ದೇಶವನ್ನಾಗಿ ಮಾಡಿಕೊಳ್ಳಲಾಗಿತ್ತು. ಕಿರು ಜಲಮೂಲಗಳಲ್ಲಿ ಸುಮಾರು 255 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಬೇಕು. ಈ ಮೂಲಕ ಸುಮಾರು 20 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.
ಕಾಕತೀಯ ರಾಜಮನೆತನದ ಕಾಲದಿಂದಲೂ ತೆಲಂಗಾಣ ಪ್ರದೇಶದಲ್ಲಿ ಕೆರೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿತ್ತು. ಹಾಗಿದ್ದರೂ ಕಾಲಾಂತರದಲ್ಲಿ ಇವುಗಳ ನಿರ್ವಹಣೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಲಾಗಿತ್ತು. ಈ ಕಾರಣದಿಂದಲೇ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯು ಕಡಿತಗೊಳ್ಳುತ್ತಾ ಬಂದಿತ್ತು. 2014ರಲ್ಲಿ ಸರ್ಕಾರವು ಕಿರು ಜಲಮೂಲಗಳ ಗಣತಿ ಕೈಗೊಂಡಾಗ, 46,531 ಕಿರು ಜಲಮೂಲಗಳ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ 9ರಿಂದ 10 ಲಕ್ಷ ಎಕರೆಯಷ್ಟಿತ್ತು.
ಕಿರು ಜಲಮೂಲಗಳ ನಿರ್ವಹಣೆ: ಕೆರೆಗಳಲ್ಲಿ ದೊಡ್ಡ ಪ್ರಮಾಣದ ಹೂಳು ತುಂಬಿಕೊಂಡಿದ್ದರಿಂದ ಕೆರೆಗಳ ನೀರಿನ ಸಂಗ್ರಹಣ ಸಾಮರ್ಥ್ಯವು ಕಡಿಮೆಯಾಗಿತ್ತು. ಜೊತೆಗೆ, ಕೆರೆಗಳ ತಡೆಗೋಡೆಗಳಲ್ಲಿ ಬಿರುಕು, ನೀರು ಸರಾಗವಾಗಿ ಸಾಗಲು ಕಾಲುವೆಗಳು ಇಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಇದ್ದವು. ಮಿಷನ್ ಕಾಕತೀಯ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮುಂದಾಯಿತು.
ಕೆರೆಗಳ ಹೂಳೆತ್ತುವುದು, ತಡೆಗೋಡೆ ಮತ್ತು ಕಾಲುವೆಗಳ ದುರಸ್ತಿ, ಅಗತ್ಯ ಇದ್ದಲ್ಲಿ ದೊಡ್ಡ ಅಥವಾ ಮಾಧ್ಯಮ ಗಾತ್ರದ ಜಲಮೂಲಗಳಿಂದ ಕಿರು ಜಲಮೂಲಗಳಿಗೆ ನೀರುಣಿಸುವುದು ಸೇರಿದಂತೆ ಸಮಸ್ಯೆಗೆ ಹಲವು ಪರಿಹಾರಗಳನ್ನು ಯೋಜನೆಯಲ್ಲಿ ವಿವರಿಸಲಾಗಿತ್ತು.
ಮಿಷನ್ ಕಾಕತೀಯವು ಜಾರಿಯಾದ ಎಂಟು ವರ್ಷಗಳ ನಂತರವೂ ಯಶಸ್ವಿಯಾಗಿ ತೆಲಂಗಾಣದಲ್ಲಿ ಮುಂದುವರಿಯುತ್ತಿದೆ. ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿ ವಿಸ್ತರಣೆಯಾಗಿದೆ, ಅಂತರ್ಜಲ ಮಟ್ಟದಲ್ಲಿ ಕೂಡ ಏರಿಕೆಯಾಗಿದೆ ಹಾಗೂ ಸಣ್ಣ ರೈತರ ಆದಾಯದಲ್ಲಿ ಕೂಡ ಏರಿಕೆ ಕಂಡುಬಂದಿದೆ. ಮೀನುಗಾರಿಕೆ ಕೂಡ ಚೇತರಿಸಿಕೊಂಡಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಕೆರೆಗಳಗೊಂದಿಗೆ ಹಳೆಯ ಕೆರೆಗಳ ನಿರ್ವಹಣೆಯನ್ನೂ ಸರ್ಕಾರ ಮಾಡುತ್ತಿದೆ.
46,531: ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೆರೆಗಳ ಸಂಖ್ಯೆ
ಆಂಧ್ರದಲ್ಲಿ ನೀರು-ಚೆಟ್ಟು
ನೂತನ ಆಂಧ್ರಪ್ರದೇಶ ರಚನೆಯಾದ ನಂತರ, 2015ರಲ್ಲಿ ಅಂದಿನ ಸರ್ಕಾರವು ಆಂಧ್ರವನ್ನು ‘ಬರ ಪರಿಣಾಮ ನಿರೋಧಕ’ ರಾಜ್ಯವನ್ನಾಗಿ ರೂಪಿಸಲು ಯೋಜನೆ ಹಾಕಿಕೊಂಡಿತು. ವಿಶ್ವ ಬ್ಯಾಂಕ್ ಯೋಜನೆಯ ಮಾದರಿಯಲ್ಲೇ, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಯೋಜನೆಯನ್ನು ರೂಪಿಸಿತು. ಈ ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ಇಟ್ಟ ಹೆಸರು ‘ನೀರು–ಚೆಟ್ಟು’.
ರಾಜ್ಯದ ಕಡಿಮೆ ಮಳೆಯ ಮತ್ತು ಬರಪೀಡಿತ ಪ್ರದೇಶಗಳ ಕೃಷಿ ಜಮೀನುಗಳಿಗೆ ನೀರಾವರಿ, ಕುಡಿಯುವ ಮತ್ತು ಕೈಗಾರಿಕೆಯ ಉದ್ದೇಶಕ್ಕೆ ಅಗತ್ಯವಾದ ನೀರನ್ನು ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಇಡೀ ರಾಜ್ಯಕ್ಕೆ ಯೋಜನೆಯನ್ನು ವಿಸ್ತರಿಸುವುದರಿಂದ ಆಯಾ ಪ್ರದೇಶವು ನೀರಿನ ಅಗತ್ಯಕ್ಕಾಗಿ ಸ್ವಾವಲಂಬನೆ ಸಾಧಿಸುವುದು ಯೋಜನೆಯ ಉದ್ದೇಶವಾಗಿತ್ತು. ದೊಡ್ಡ, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳ ವ್ಯಾಪ್ತಿಯಿಂದ ಹೊರಗೆ ಉಳಿದ ಪ್ರದೇಶಗಳಿಗೂ ನೀರಾವರಿ ಒದಗಿಸುವುದು, ರಾಜ್ಯದಲ್ಲಿ ಹಸಿರಿನ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆಯುವುದೂ ಈ ಯೋಜನೆಯ ಪ್ರಮುಖ ಗುರಿಗಳಾಗಿದ್ದವು.
ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಚೆಕ್‌ಡ್ಯಾಂಗಳು, ನದಿ–ತೊರೆ ಪಾತ್ರಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಯಿತು. ಎಲ್ಲಾ ಕೆರೆಗಳ ಏರಿಗಳನ್ನು ಸರಿಪಡಿಸಲಾಯಿತು. ಹೂಳು ತೆಗೆದು ಕೆರೆಯ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಎಲ್ಲಾ ಕೆರೆಗಳ ಮಧ್ಯೆ ಸಂಪರ್ಕ ಕಲ್ಪಿಸುವ ಕಾಲುವೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು. ಕಾಲುವೆಗಳ ಒತ್ತುವರಿಯನ್ನು ತೆರವು ಮಾಡಲಾಯಿತು. ನೀರು ಹೆಚ್ಚು ಇರುವ ಪ್ರದೇಶದಲ್ಲಿನ ನೀರನ್ನು ಕಡಿಮೆ ನೀರಿನ ಪ್ರದೇಶದ ಕೆರೆಗಳಿಗೆ ಹರಿಸಲು ಹೊಸ ಕಾಲುವೆಗಳನ್ನು ನಿರ್ಮಿಸಲಾಯಿತು. ಯೋಜನೆಯ ಭಾಗವಾಗಿ ಈಗ 40,000ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಬಾವಿ, ಕಟ್ಟೆ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ.
2015ರ ನಂತರ ಬಂದ ಎಲ್ಲಾ ಸರ್ಕಾರಗಳೂ ಈ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿವೆ. ಈಗಿನ ಸರ್ಕಾರವು ಗೋದಾವರಿ ನದಿಯಿಂದ ಕೃಷ್ಣಾ ನದಿಗೆ ನೀರು ಹರಿಸುವ ಯೋಜನೆಯನ್ನು ಅನುಷ್ಠಾನ ಮಾಡಿದೆ.
40,817: ಈ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೆರೆಗಳ ಸಂಖ್ಯೆ
ಆಧಾರ: ವಿಶ್ವಬ್ಯಾಂಕ್ ವರದಿ, ಕೇಂದ್ರ ಸರ್ಕಾರದ ಜಲಮೂಲ ಗಣತಿ ವರದಿ, ತೆಲಂಗಾಣ ಜಲಸಂಪನ್ಮೂಲ ಇಲಾಖೆ ವರದಿಗಳು, ಆಂಧ್ರಪ್ರದೇಶ ಜಲಸಂಪನ್ಮೂಲ ಇಲಾಖೆ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.