15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಎಲ್ಲಾ ರಾಜ್ಯಗಳಿಗೆ ನಿಗದಿಯಾದ ಕೇಂದ್ರದ ತೆರಿಗೆ ಪಾಲಿನಲ್ಲಿ ಆದ ಬದಲಾವಣೆಯು ಏಕಪ್ರಕಾರವಾಗಿಲ್ಲ. ಬಿಜೆಪಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವ ದಕ್ಷಿಣ ಮತ್ತು ಪೂರ್ವ ಭಾರತದ ರಾಜ್ಯಗಳಿಗೆ ಹೆಚ್ಚು ಲಾಭವಾಗುವಂತೆ ಈ ಬದಲಾವಣೆ ಮಾಡಲಾಗಿದೆ. ಬಿಜೆಪಿಯೇ ಅಧಿಕಾರದಲ್ಲಿ ಇದ್ದರೂ ಕರ್ನಾಟಕದ ಪಾಲನ್ನು ಭಾರಿ ಪ್ರಮಾಣದಲ್ಲಿ ಇಳಿಸಲಾಗಿದೆ. ಪಾಲು ಹಂಚಿಕೆಯಲ್ಲಿ ಜನಸಂಖ್ಯೆಗೆ ನೀಡುತ್ತಿದ್ದ ಅಂಕವನ್ನು 10ರಿಂದ 12.5ಕ್ಕೆ ಏರಿಕೆ ಮಾಡಿದ್ದರಿಂದ ಹೀಗಾಗಿದೆ.
––––––––
ರಾಜ್ಯಗಳಿಂದ ಕೇಂದ್ರ ಸರ್ಕಾರವು ಸಂಗ್ರಹಿಸುವ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಹಣಕಾಸು ಆಯೋಗ ನಿಗದಿ ಮಾಡುತ್ತದೆ. ಹೀಗೆ 15ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಭಾರಿ ಪ್ರಮಾಣದ ಲಾಭವಾಗಿದೆ. ಆದರೆ ಕರ್ನಾಟಕಕ್ಕೆ ಭಾರಿ ಪ್ರಮಾಣದ ಅನ್ಯಾಯವಾಗಿದೆ.
ರಾಜ್ಯಗಳ ಜನಸಂಖ್ಯೆ, ತಲಾದಾಯ ಅಂತರ, ವಿಸ್ತೀರ್ಣ ಮತ್ತಿತರ ಮಾನದಂಡಗಳನ್ನು ಬಳಸಿಕೊಂಡು ಅವುಗಳಿಗೆ ಎಷ್ಟು ಪ್ರಮಾಣದ ತೆರಿಗೆ ಪಾಲನ್ನು ನೀಡಬೇಕು ಎಂದು ಹಣಕಾಸು ಆಯೋಗವು ನಿರ್ಧರಿಸುತ್ತದೆ. ಹೀಗಾಗಿ ಕಡಿಮೆ ತೆರಿಗೆ ಪಾವತಿಸುವಂತಹ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನದಂತಹ ದೊಡ್ಡ ಮತ್ತು ಭಾರಿ ಜನಸಂಖ್ಯೆಯ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲು ಹಂಚಿಕೆಯಾಗುತ್ತದೆ. ಅತಿಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ಕರ್ನಾಟಕ, ತಮಿಳುನಾಡಿನಂತಹ ರಾಜ್ಯಗಳಿಗೆ ಕೇಂದ್ರದ ತೆರಿಗೆ ಆದಾಯದಲ್ಲಿ ದೊರೆಯುವ ಪಾಲು ಕಡಿಮೆ ಇರುತ್ತದೆ. 2020–21ನೇ ಆರ್ಥಿಕ ವರ್ಷದವರೆಗೂ ಇದೇ ರೀತಿಯ ಹಂಚಿಕೆ ನಡೆಯುತ್ತಿತ್ತು.
ಆದರೆ 15ನೇ ಹಣಕಾಸು ಆಯೋಗವು ನಡೆಸಿದ ಲೆಕ್ಕಾಚಾರದ ನಂತರ ಈ ಸ್ಥಿತಿಯಲ್ಲೂ ಬದಲಾಗಿದೆ. ಅತಿಹೆಚ್ಚು ತೆರಿಗೆ ಪಾವತಿಸುವ ಬೇರೆ ರಾಜ್ಯಗಳಿಗೆ ಕೇಂದ್ರದ ತೆರಿಗೆ ಪಾಲಿನ ಪ್ರಮಾಣ ಏರಿಕೆಯಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾಗಳ ತೆರಿಗೆ ಪಾಲು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2018–19ರಲ್ಲಿ ಈ ರಾಜ್ಯಗಳಿಗೆ ದೊರೆತ್ತಿದ್ದ ತೆರಿಗೆ ಪಾಲಿನ ಮೊತ್ತಕ್ಕಿಂತ 2022–23ರಲ್ಲಿ ಪಡೆದ ಮೊತ್ತವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಮಾತ್ರ. 2018–19ರಲ್ಲಿ ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಆದಾಯದ ಪಾಲಿನ ರೂಪದಲ್ಲಿ ₹35,894 ಕೋಟಿ ದೊರೆತಿತ್ತು. ಆದರೆ ಬದಲಾದ ಲೆಕ್ಕಾಚಾರದ ಪ್ರಕಾರ 2022–23ರಲ್ಲಿ ದೊರೆತ ಕೇಂದ್ರದ ತೆರಿಗೆ ಆದಾಯದ ಪಾಲಿನ ಮೊತ್ತ ₹34,496 ಕೋಟಿ ಮಾತ್ರ. ಅಂದರೆ ಐದು ವರ್ಷಗಳ ಹಿಂದೆ ದೊರೆತಿದ್ದಕ್ಕಿಂತ ಕಡಿಮೆ ಪಾಲು ಕರ್ನಾಟಕಕ್ಕೆ ದೊರೆತಿದೆ.
15ನೇ ಹಣಕಾಸು ಆಯೋಗದ ಲೆಕ್ಕಾಚಾರದ ಆಧಾರದಲ್ಲೇ ತೆರಿಗೆ ಆದಾಯವನ್ನು ಹಂಚಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಈಗಾಗಲೇ ಹಲವು ಬಾರಿ ಹೇಳಿದೆ. ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ತೆರಿಗೆ ಆದಾಯದಲ್ಲಿ ಕರ್ನಾಟಕಕ್ಕೆ ಶೇ 4.74ರಷ್ಟು ಪಾಲು ಸಂದಾಯವಾಗಬೇಕು ಎಂದು 14ನೇ ಹಣಕಾಸು ಆಯೋಗ ಹೇಳಿತ್ತು. ಅದರಂತೆ 2019–20ರವರೆಗೆ ಕರ್ನಾಟಕ್ಕೆ ಶೇ 4.74ರಷ್ಟು ತೆರಿಗೆ ಪಾಲು ದೊರೆಯುತ್ತಿತ್ತು. 15ನೇ ಹಣಕಾಸು ಆಯೋಗವು ಕರ್ನಾಟಕದ ಪಾಲನ್ನು ಶೇ 3.64ಕ್ಕೆ ಇಳಿಸಿತು. 15ನೇ ಹಣಕಾಸು ಆಯೋಗವು ಮಾಡಿದ ಲೆಕ್ಕಾಚಾರದಿಂದ ಕೇಂದ್ರದ ತೆರಿಗೆ ಆದಾಯದಲ್ಲಿ ಎಲ್ಲಾ ರಾಜ್ಯಗಳ ಪಾಲು ಮತ್ತು ಮೊತ್ತ ಏರಿಕೆಯಾಯಿತು. ಇಳಿಕೆಯಾಗಿದ್ದು ಕರ್ನಾಟಕ ಮತ್ತು ಕೇರಳಕ್ಕೆ ಮಾತ್ರ. ಆಯೋಗವು ಈ ನಿರ್ಧಾರಕ್ಕೆ ಹೇಗೆ ಬಂತು ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಏಕೆಂದರೆ ತೆರಿಗೆ ಪಾಲು ಲೆಕ್ಕಾಚಾರದಲ್ಲಿ ಎಲ್ಲಾ ರಾಜ್ಯಗಳಿಗೆ ಪ್ರತ್ಯೇಕ ವಿಧಾನಗಳನ್ನು ಅನುಸರಿಸಿದೆ. ಈ ಹಿಂದೆ ಹೆಚ್ಚು ಪಾಲು ಪಡೆಯುತ್ತಿದ್ದ ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದಿಂದ ಹೆಚ್ಚಿನ ಲಾಭವೇನೂ ಆಗಿಲ್ಲ. ಅಂದರೆ ಅವು ಪಡೆಯುತ್ತಿದ್ದ ತೆರಿಗೆ ಪಾಲಿನಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿ ಇರದ ಮತ್ತು ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿ ಇರುವ ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾಗಳ ತೆರಿಗೆ ಪಾಲು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡುವಾಗ ಈ ಮೂರೂ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದವು. ಈಗಲೂ ಅಧಿಕಾರದಲ್ಲಿ ಇವೆ. ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಈ ರಾಜ್ಯಗಳಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದ ಹಣಕಾಸು ಆಯೋಗವನ್ನು ಕೇಂದ್ರ ಸರ್ಕಾರವು ಬಳಸಿಕೊಂಡಿತೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.
ಒಡಿಶಾವು 2018–19ರಲ್ಲಿ ಪಡೆಯುತ್ತಿದ್ದ ತೆರಿಗೆ ಪಾಲಿನ ಮೊತ್ತವನ್ನು ಪರಿಗಣಿಸಿದರೆ, 2023–24ರಲ್ಲಿ ಪಡೆದುಕೊಳ್ಳಲಿರುವ ತೆರಿಗೆ ಪಾಲಿನ ಮೊತ್ತದಲ್ಲಿ ₹10,000 ಕೋಟಿಗಿಂತಲೂ ಹೆಚ್ಚು ಏರಿಕೆಯಾಗಿದೆ. ಆಂಧ್ರ ಪ್ರದೇಶದ ತೆರಿಗೆ ಪಾಲು ಈ ಅವಧಿಯಲ್ಲಿ ₹8,551 ಕೋಟಿ, ತಮಿಳುನಾಡಿನದ್ದು ₹11,026 ಕೋಟಿಯಷ್ಟು ಏರಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲಿನಲ್ಲಿ ಏರಿಕೆಯಾದ ಮೊತ್ತ ₹1,358 ಕೋಟಿ ಮಾತ್ರ. ಇದು ಕೇವಲ ಶೇ 3.8ರಷ್ಟು.
2018–19ರಲ್ಲಿ ಮೇಲಿನ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ಅನುದಾನವು ಕರ್ನಾಟಕಕ್ಕೆ ದೊರೆಯುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದ ಶಿಫಾರಸಿನ ನಂತರ ಕರ್ನಾಟಕಕ್ಕೆ ದೊರೆಯುತ್ತಿರುವ ಪಾಲು ಈ ಎಲ್ಲಾ ರಾಜ್ಯಗಳಿಗಿಂತ ಕಡಿಮೆ. 14ನೇ ಹಣಕಾಸು ಆಯೋಗವು ನಿಗದಿ ಮಾಡಿದ್ದ ಪಾಲಿನಷ್ಟೇ ಮೊತ್ತ ಕರ್ನಾಟಕಕ್ಕೆ ದೊರೆಯುವಂತಿದ್ದರೆ, 2023–24ರಲ್ಲಿ ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಕ್ಕೆ ₹48,517 ಕೋಟಿ ಬರಬೇಕಿತ್ತು. ಆದರೆ ಈ ಸಾಲಿಗೆ ನಿಗದಿ ಮಾಡಿರುವುದು ₹37,252 ಕೋಟಿ. 15ನೇ ಹಣಕಾಸು ಆಯೋಗದ ನೀತಿಯಿಂದಾಗಿ 2023–24ರ ಆರ್ಥಿಕ ವರ್ಷವೊಂದರಲ್ಲೇ ಕರ್ನಾಟಕಕ್ಕೆ ₹11,265 ಕೋಟಿಯಷ್ಟು ಖೋತಾ ಆಗಿದೆ. ಹೀಗೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡಿದ ಅನ್ಯಾಯವಿದು.
ಮೋದಿ ತವರು ರಾಜ್ಯಕ್ಕೆ ಶೇ 51ರಷ್ಟು ಏರಿಕೆ
ಈ ಅವಧಿಯಲ್ಲಿ ಅತಿಹೆಚ್ಚು ಏರಿಕೆಯಾಗಿದ್ದು ಗುಜರಾತಿಗೆ. 2018–19ರಲ್ಲಿ ₹23,489 ಕೋಟಿಯಷ್ಟು ತೆರಿಗೆ ಪಾಲು ಪಡೆದಿದ್ದ ಗುಜರಾತ್, 2023–24ರಲ್ಲಿ ₹35,525 ಕೋಟಿ ಪಡೆಯಲಿದೆ. ಗುಜರಾತಿನ ತೆರಿಗೆ ಪಾಲು ಈ ಅವಧಿಯಲ್ಲಿ ₹12,036 ಕೋಟಿಯಷ್ಟು, ಅಂದರೆ ಶೇ51ರಷ್ಟು ಏರಿಕೆಯಾಗಿದೆ. ದೇಶದ ಬೇರೆ ಯಾವುದೇ ರಾಜ್ಯದ ತೆರಿಗೆ ಪಾಲು ಇಷ್ಟೊಂದು ಪ್ರಮಾಣದ ಏರಿಕೆಯಾಗಿಲ್ಲ.
ಆಧಾರ: ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಹಣಕಾಸು ಸಚಿವಾಲಯವು ನೀಡಿದ ಲಿಖಿತ ಉತ್ತರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.