ADVERTISEMENT

ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಕಟ್ಟಕಡೆಯ ಮನುಷ್ಯನಿಗೂ ಸಿಗಲಿ ಅವಕಾಶ

ಸಮಾನ ಅವಕಾಶ, ಪ್ರಾತಿನಿಧ್ಯಕ್ಕಾಗಿ ನಡೆದ ಅಹಿಂಸಾ ಹೋರಾಟ

ಪ್ರಜಾವಾಣಿ ವಿಶೇಷ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
   
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಕ್ಕಾಗಿ ಮಾಸಾಶನ ಕೊಡುವುದಾದರೆ ಸಮಾನ ಅವಕಾಶಕ್ಕಾಗಿ, ಪ್ರಾತಿನಿಧ್ಯಕ್ಕಾಗಿ ಜೀವನವಿಡೀ ಹೋರಾಡಿ ಬದುಕು ಕಳೆದುಕೊಂಡ, ಸುಪ್ರೀಂ ಕೋರ್ಟ್‌ನ ಕಣ್ಣು ಕೂಡ ತೆರೆಸಿದ ಒಳಮೀಸಲು ಹೋರಾಟಗಾರರಿಗೆ ಯಾಕೆ ಮಾಸಾಶನ ಕೊಟ್ಟು ಹೋರಾಟಗಾರರ ಸಂಧ್ಯಾ ಕಾಲವನ್ನು ಗೌರವಿಸಬಾರದು? ಈ ತ್ಯಾಗ ಬಲಿದಾನವನ್ನು, ಅನ್ಯಾಯ ಅಸಮಾನತೆಯನ್ನು ಆಳುವ ಸರ್ಕಾರ ಈಗಲಾದರೂ ಅರಿತು ಮೀಸಲಾತಿಯನ್ನು ಜಾತಿವಾರು ಹಂಚುವ ಪ್ರಕ್ರಿಯೆಗೆ ಶೀಘ್ರ ಮುಂದಾಗಬೇಕಿದೆ.

ಎಪ್ಪತ್ತರ ದಶಕದಲ್ಲಿ ಶುರುವಾದ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಶೋಷಣೆ, ದಬ್ಬಾಳಿಕೆಗಳ ವಿರುದ್ಧ ದಿಟ್ಟವಾಗಿ ಸಂಘರ್ಷಕ್ಕೆ ಇಳಿದಿದ್ದರ ಜೊತೆಗೆ ಭೂ ಒಡೆತನದ ಪ್ರಶ್ನೆಯನ್ನೂ ಕೈಗೆತ್ತಿಕೊಂಡಿತ್ತು. ಶಿಕ್ಷಣ, ಸಂಘಟನೆ, ಹೋರಾಟವನ್ನು ತನ್ನ ಮೂಲ ಧ್ಯೇಯವನ್ನಾಗಿಸಿಕೊಂಡು ಅದರ ಅನುಷ್ಠಾನಕ್ಕಾಗಿ ಅತ್ತ ಕೇರಿಗಳನ್ನು ಇತ್ತ ದಲಿತ ವಿದ್ಯಾರ್ಥಿ ಹಾಸ್ಟೆಲ್‌ಗಳನ್ನು ಕೇಂದ್ರವಾಗಿಸಿಕೊಂಡು ಡಿಎಸ್‌ಎಸ್ ಕಾರ್ಯಪ್ರವೃತ್ತವಾಗಿತ್ತು. ಅದರ ಭಾಗವಾಗಿ ಹೋರಾಟದ ಹಾಡುಗಳ ಮೂಲಕ ಮತ್ತು ಅಂಬೇಡ್ಕರ್ ತತ್ವ ಚಿಂತನೆಯ ಮೂಲಕ ಹಾಸ್ಟೆಲ್‌ಗಳಿಗೆ ಡಿಎಸ್‌ಎಸ್‌ನವರು ಪ್ರವೇಶಿಸುತ್ತಿದ್ದರು.  

80ರ ದಶಕದಲ್ಲಿ ಡಿಎಸ್‌ಎಸ್‌, ದಲಿತ ರಾಜಕಾರಣದ ಹೊಸ ಭರವಸೆಯಾದ ಬಿಎಸ್‌ಪಿ ಕಡೆಗೆ ನಿಧಾನಕ್ಕೆ ತನ್ನ ಒಲವನ್ನು ವಿಸ್ತರಿಸಿಕೊಳ್ಳತೊಡಗಿತು. ಆಗ ಬಿಎಸ್‌ಪಿ ಉತ್ತರ ಪ್ರದೇಶದಲ್ಲಿ ದಲಿತ ರಾಜಕಾರಣದ ಹೊಸ ಶಕೆ ಆರಂಭಿಸಿತ್ತು. ದೇಶದಲ್ಲಿ ಬಿಎಸ್‌ಪಿ ಭರವಸೆ ಮೂಡಿಸಿತ್ತು. 

ಸುಮಾರು 2002-2003ರ ಸಂದರ್ಭ. ನಾವು ಹಳ್ಳಿಯಿಂದ ಬಂದು ತುಮಕೂರಿನ ಎಸ್‌ಸಿ-ಎಸ್‌ಟಿ ಕಾಲೇಜು ಹಾಸ್ಟೆಲ್‌ಗೆ ಓದಲು ಸೇರಿಕೊಂಡಿದ್ದೆವು. ವಾರಕ್ಕೆ ಅಥವಾ ತಿಂಗಳಿಗೆ ಎರಡು ಮೂರು ಬಾರಿಯಾದರೂ ದಲಿತ ಸಂಘರ್ಷ ಸಮಿತಿಯವರು (ಡಿಎಸ್ಎಸ್) ಬರುತ್ತಿದ್ದರು. ವಿದ್ಯಾರ್ಥಿಗಳನ್ನೆಲ್ಲ ಡೈನಿಂಗ್ ಹಾಲ್‌ನಲ್ಲಿ ಕೂರಿಸಿಕೊಂಡು ದಲಿತ ವಿದ್ಯಾರ್ಥಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ದಲಿತ ವಿದ್ಯಾರ್ಥಿ ನಿಲಯಗಳಿಗೆ ಡಿಎಸ್‌ಎಸ್‌ನವರಲ್ಲದೆ ಬೇರೆ ಯಾರೂ ಪ್ರವೇಶಿಸುತ್ತಿರಲಿಲ್ಲ. ಹಾಗೆ ಬೇರೆಯವರು ಬರಲು ನಾವು ಅಷ್ಟು ಸುಲಭಕ್ಕೆ ಬಿಟ್ಟುಕೊಳ್ಳುತ್ತಲೂ ಇರಲಿಲ್ಲ.

ADVERTISEMENT

ಡಿಎಸ್‌ಎಸ್‌ನವರು ಬಂದಂತೆಯೇ ನಂತರದ ದಿನಗಳಲ್ಲಿ ‘ಮಾದಿಗ ದಂಡೋರ’ ಹೆಸರಿನ ಜಾತಿ ಗುಂಪೊಂದು ಹಾಸ್ಟೆಲ್‌ಗಳಿಗೆ ನುಸುಳತೊಡಗಿತು. ಒಂದರ್ಥದಲ್ಲಿ ಅವರು ನುಸುಳಿಕೊಂಡೇ ಬರುತ್ತಿದ್ದರು. ಯಾಕೆಂದರೆ, ದಂಡೋರ ಹೆಸರಿನ ಸಂಘಟನೆಯಲ್ಲಿ ಅಂತಹ ಮುಂಚೂಣಿ ನಾಯಕರು ಯಾರೂ ಇರುತ್ತಿರಲಿಲ್ಲ. ಆಗಿನ್ನೂ ಮೀಸೆ ಚಿಗುರುತ್ತಿದ್ದ ಹುಡುಗರು, ಕಾಲೇಜು ಬಿಟ್ಟ ಗಡ್ಡಧಾರಿಗಳು, ನಿರುದ್ಯೋಗಿಗಳು ಇರುತ್ತಿದ್ದರು.

ಹೀಗೆ ಬಂದವರು, ‘ದಲಿತ ಹೆಸರಿನಲ್ಲಿ ನಮ್ಮ ತಟ್ಟೆಯ ಅನ್ನವನ್ನು ಅಣ್ಣ-ತಮ್ಮಂದಿರು ಕಬಳಿಸಿದ್ದಾರೆ. ನಮಗೆ ಅನ್ನ ಇಲ್ಲವಾಗಿದೆ. ಹಣ್ಣು ತಿಂದು ನಮ್ಮ ಬಾಯಿಗೆ ಸಿಪ್ಪೆ ಸವರಲಾಗುತ್ತಿದೆ. ಬನ್ನಿ, ಮೀಸಲಾತಿ ಹಂಚಿಕೆಗಾಗಿ ಹೋರಾಡೋಣ’ ಎಂದು ಮನವೊಲಿಸುತ್ತಿದ್ದರು. ಅದೇ ಹಿಂದಿನ ರಾತ್ರಿ ಡಿಎಸ್‌ಎಸ್‌ನವರು ಬಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ನಡೆಯಲಿರುವ ಬಹುಜನ ಸಮಾವೇಶಕ್ಕೆ ಸ್ವಯಂ ಕಾರ್ಯಕರ್ತರಾಗಿ ತೆರಳಬೇಕಾಗಿ ಹುರಿದುಂಬಿಸಿ ಹೋಗಿರುತ್ತಿದ್ದರು. ಡಿಎಸ್‌ಎಸ್ ಹೆಸರಲ್ಲಿ ರಾತ್ರಿ ರಾಜಾರೋಷವಾಗಿ ಬರುತ್ತಿದ್ದವರಲ್ಲಿ ಹಿರಿಯರೂ, ದಪ್ಪಮೀಸೆಯವರೂ, ನೌಕರರು, ಸಾಮಾಜಿಕವಾಗಿ ಈಗಾಗಲೇ ಒಳ್ಳೆಯ ವರ್ಚಸ್ಸು ಇದ್ದವರು ಇದ್ದರೆ ದಂಡೋರದ ಹೆಸರಿನಲ್ಲಿ ಬರುತ್ತಿದ್ದವರಲ್ಲಿ ಹೀಗೆ ಯಾವುದೇ ಭೂಷಣ ಇದ್ದವರಿರುತ್ತಿರಲಿಲ್ಲ.

ಬಹುತೇಕ ಒಂದೇ ಜಾತಿಯವರಾದ ಇವರು ತಮ್ಮ ಆಶಯದ ಈಡೇರಿಕೆಗೆ ಬೇರೆ ಬೇರೆ ಮಾರ್ಗಿಗಳಾಗಿ ಹಾಸ್ಟೆಲ್‌ಗಳಿಗೆ ಎಡತಾಕುತ್ತಿದ್ದರು. ಮಾದಿಗ ದಂಡೋರದವರು ಬಂದಿದ್ದರೆಂದು ಡಿಎಸ್‌ಎಸ್‌ನವರಿಗೇನಾದರೂ ತಿಳಿದರೆ, ‘ಅವರು ಮನೆ ಮುರುಕರು, ಅವರನ್ನು ಹಾಸ್ಟೆಲ್‌ಗೆ ಸೇರಿಸಬೇಡಿ, ಒಡಕು ಮೂಡಿಸುವವರು’ ಎಂದು ಗರ್ಜಿಸುತ್ತಿದ್ದರು. ಅಕಸ್ಮಾತ್ ಪರಸ್ಪರರು ಎದುರು ಬದುರಾದರೆ ಇವರ ಮುಖಭಾವದಲ್ಲಿ ವ್ಯಂಗ್ಯ, ವಿಡಂಬನೆಯೂ ತೇಲಿ ಹೋಗುತ್ತಿತ್ತು. ಒಮ್ಮೊಮ್ಮೆ ಮಾತಿನ ಚಕಮಕಿಯೂ ನಡೆದದ್ದಿದೆ.

ಸಮಾನತೆಯ ಒಂದೇ ಆಶಯ ಇಟ್ಟುಕೊಂಡು ಹಳೆಬೇರು ಹೊಸ ಚಿಗುರಿನಂತೆ ಬರುತ್ತಿದ್ದ ಇವರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಮಂದಗಾಮಿ- ತೀವ್ರಗಾಮಿ ಗುಂಪುಗಳನ್ನು ನೆನಪಿಗೆ ತರುವಂತಿದ್ದರು.

ಹೀಗೆ ತನ್ನದೇ ಸಮುದಾಯದವರಿಂದ, ಮಾತೃ ಸಂಸ್ಥೆ ಡಿಎಸ್‌ಎಸ್‌ನಿಂದ ಮನೆ ಮುರುಕರು, ಕಮ್ಯುನಲ್‌ಗಳು ಎಂದು ಕರೆಸಿಕೊಂಡ ಮಾದಿಗ ದಂಡೋರದ ಅಂದಿನ ಯುವಕರೇ ಇವತ್ತು ಹಂಚಿ ತಿನ್ನುವ ಹೊಸ ಸಮಾನತೆಯ ಪಾಠಕ್ಕೆ ಭಾಷ್ಯ ಬರೆದಿದ್ದಾರೆ ಎಂಬುದು ಬೆರಗುಗೊಳಿಸುವ ಸಂಗತಿ. ಆಗಸ್ಟ್ 1ರಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠದ ಆರು ಸದಸ್ಯರು, ಇವರು ಎತ್ತಿದ ಪ್ರಶ್ನೆ ಸಂವಿಧಾನ ಬದ್ದವಾದುದು, ನ್ಯಾಯಯುತವಾದುದು ಎಂಬುದನ್ನು ಒಪ್ಪಿ ರಾಜ್ಯಗಳ ವ್ಯಾಪ್ತಿಗೆ ಆ ಅಧಿಕಾರವನ್ನು ಬಿಟ್ಟುಕೊಡುವ ಮೂಲಕ ಇಂಥದ್ದೊಂದು ಸಾಧ್ಯತೆಯನ್ನು ಎತ್ತಿಹಿಡಿದಿದ್ದಾರೆ.

ಅಂದು ಸುಮಾರು 300 ವರ್ಷಗಳು ನಡೆದದ್ದು ಸ್ವಾತಂತ್ರ್ಯ ಸಂಗ್ರಾಮವಾದರೆ, ಇಂದು, ಅಂದರೆ ಸ್ವಾತಂತ್ರ್ಯ ನಂತರದಲ್ಲಿ, ಸಮಾನ ಅವಕಾಶಕ್ಕಾಗಿ, ಪ್ರತಿನಿಧೀಕರಣಕ್ಕಾಗಿ, ತಮ್ಮ ಪಾಲಿನ ಹಕ್ಕಿಗಾಗಿ ಸುಮಾರು ಮೂರು ದಶಕಗಳು ನಡೆದದ್ದು ಸಮಾನತೆಯ ಸಂಗ್ರಾಮವೇ ಸರಿ. ನಾಗರಿಕ ಸಮಾಜದಲ್ಲಿ ಬದುಕಲು ಒಬ್ಬ ವ್ಯಕ್ತಿಗೆ ‘ಸ್ವಾತಂತ್ರ್ಯ’ ಎಷ್ಟು ಮುಖ್ಯವೋ ‘ಸಮಾನತೆಯೂ’ ಅಷ್ಟೇ ಮುಖ್ಯ ಎಂಬುದನ್ನು ಬಾಬಾ ಸಾಹೇಬರು ಸಂವಿಧಾನದ ಮೂಲಕವೂ ಮನಗಾಣಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀಮಂತರು, ವ್ಯಾಪಾರಿಗಳು, ಸುಶಿಕ್ಷಿತರು, ದೊಡ್ಡ ದೊಡ್ಡ ಜ್ಯಾತ್ಯಸ್ಥರಿದ್ದರೆ ಸಮಾನತೆಗಾಗಿ ನಡೆದ ಈ ಒಳಮೀಸಲಾತಿ ಹೋರಾಟದಲ್ಲಿ ಅವಕಾಶ ವಂಚಿತರು, ಹೊಟ್ಟೆಗಿಲ್ಲದ ದಲಿತರು, ಅಸ್ಪೃಶ್ಯ ಎಡಗೈನವರು ಇದ್ದರೆಂಬುದು ಸೂರ್ಯನಷ್ಟೆ ಸತ್ಯ. ಸ್ವಾತಂತ್ರ್ಯ ಹೋರಾಟವಾದರೂ ಅಲ್ಲಲ್ಲೆ ಘಟಿಸಿದ ಹಿಂಸೆಯ ಚರಿತ್ರೆಯನ್ನು, ರಕ್ತಸಿಕ್ತ ಅಧ್ಯಾಯಗಳನ್ನು ಹೊಂದಿದೆ. ಆದರೆ ಪ್ರಜಾಪ್ರಭುತ್ವದ ಮೇಲೆ, ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿರುವ ಈ ಒಳಮೀಸಲು ಹೋರಾಟ ಎಂದೂ ಹಿಂಸೆಯ ದಾರಿ ತುಳಿಯದೆ ಅಹಿಂಸೆಗೆ ಮಾದರಿಯಾಗಿ ನಿಂತಿದೆ.

ಒಳಮೀಸಲಾತಿ ಹೋರಾಟ ಆಂಧ್ರ, ಪಂಜಾಬ್ ರಾಜ್ಯಗಳ ಹೋರಾಟದ ಪ್ರೇರಣೆಯಿಂದ ಕರ್ನಾಟಕದಲ್ಲಿ ‘ಮಾದಿಗ ದಂಡೋರ’ ಎಂಬ ಹೆಸರಿನ ಏಕಜಾತಿಯಿಂದಲೇ ಶುರುವಾಯಿತಾದರೂ, ದಶಕಗಳು ಕಳೆದಂತೆ ಬೇರೆ ಬೇರೆ ಸಮುದಾಯಗಳ ಪ್ರಾಜ್ಞರನ್ನು, ಸೋದರ ಜಾತಿಯ ಸಹ ಅಸ್ಪೃಶ್ಯರನ್ನು, ಬುದ್ಧಿಜೀವಿಗಳನ್ನು, ಸಾಹಿತಿ-ಕಲಾವಿದರನ್ನು, ಅಲೆಮಾರಿ, ಅರೆ-ಅಲೆಮಾರಿ ಜನರನ್ನು ಒಳಗೊಂಡಂತೆ ಆಂತರಿಕವಾಗಿ ತಾನೂ ಬೆಳೆಯುತ್ತ ತನ್ನ ಹರವನ್ನೂ ವಿಸ್ತರಿಸಿಕೊಂಡಿತು. ಈ ಮಧ್ಯೆ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ (ಎಂಆರ್‌ಎಚ್‌ಎಸ್‌) ಎಂದು ನಂತರ ‘ಪರಿಶಿಷ್ಟ ಜಾತಿಗಳ ಐಕ್ಯತಾ ಹೋರಾಟ ಸಮಿತಿ’ ಎಂದೂ ಕರೆದುಕೊಂಡಿತು. ತಾರತಮ್ಯದಿಂದ ಕೂಡಿರುವ ವಿವಿಧ ಇಲಾಖೆಯ ನೇಮಕಾತಿಯ ನಿಖರ ಅಂಕಿ ಅಂಶಗಳೊಂದಿಗೆ ಇನ್ನಷ್ಟು ಸ್ಪಷ್ಟವಾಗಿ ತನ್ನ ಹೋರಾಟವನ್ನು ಮೊನಚುಗೊಳಿಸಿಕೊಂಡಿತು. ಈ ಮೂರು ದಶಕದಲ್ಲಿ ಪರಿಶಿಷ್ಟ ಜಾತಿಯ ಎಡಗೈನ ಯಾವುದೇ ಅಭ್ಯರ್ಥಿ ಶೇ 15ರ ಮೀಸಲಾತಿ ಅಡಿ ಸ್ಪರ್ಧಿಸಿ ನೌಕರಿ ಗಿಟ್ಟಿಸಿಕೊಂಡಿದ್ದಾನೆಂದರೆ, ಅದು ಸಾಮಾನ್ಯ ಕ್ಷೇತ್ರದಲ್ಲಿ ಸೆಣಸಿ ಗೆದ್ದಷ್ಟೆ ದುಬಾರಿಯಾದುದು ಮತ್ತು ಮಹತ್ವವುಳ್ಳದ್ದು ಎಂದು ವ್ಯಾಖ್ಯಾನಿಸಲಾಗಿದೆ. ‘ಬಲಾ’ಢ್ಯರ ನಡುವೆ ಈ ಸಮುದಾಯ ಅಷ್ಟರಮಟ್ಟಿಗೆ ಅಂಚಿಗೆ ಸರಿದಿತ್ತು.

ಮೂರು ದಶಕ ನಡೆದ ಈ ಹೋರಾಟದಲ್ಲಿ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಲೆಕ್ಕವಿಲ್ಲದಷ್ಟು ಕಾಲ್ನಡಿಗೆ ಜಾಥಾಗಳು ನಡೆದಿವೆ, ಸಂಕಲ್ಪ ಯಾತ್ರೆ, ಸೈಕಲ್ ಜಾಥಾ, ಅರೆಬೆತ್ತಲೆ ಮೆರವಣಿಗೆಗಳು ಜರುಗಿವೆ. ಮೈಮೇಲೆ ಮಲ ಸುರಿದುಕೊಂಡು ಹೋರಾಟ ಮಾಡಿದ ಘಟನೆಗಳಿವೆ. ಹುಬ್ಬಳ್ಳಿ ಸಮಾವೇಶದಿಂದ ಹಿಂತಿರುಗುವಾಗ ಅಪಘಾತದಲ್ಲಿ ಎಂಟು ಜನ ಯುವಕರು ಪ್ರಾಣ ತೆತ್ತಿದ್ದಾರೆ. ಲಕ್ಷಾಂತರ ಪ್ರತಿಭಟನೆಗಳು, ಬೀದಿ ಹೋರಾಟಗಳು, ಸಾವಿರಾರು ವಿಚಾರ ಗೋಷ್ಠಿಗಳು, ಅರಿವು ಮೂಡಿಸುವ ಕಾರ್ಯಕ್ರಮಗಳು, ಜನಪ್ರತಿನಿಧಿಗಳ ಮನವೊಲಿಕೆ ಅಂತೆಯೇ ಘೇರಾವ್ ಕಾರ್ಯಕ್ರಮ... ಹೀಗೆ ರಾಜ್ಯದ ಒಂದಲ್ಲ ಒಂದು ಮೂಲೆಯಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಹೋರಾಟ ಪ್ರತಿದಿನ ನಡೆದಿದೆ. ಅಷ್ಟರ ಮಟ್ಟಿಗೆ ಈ ಮೂರು ದಶಕದಲ್ಲಿ ಚಳವಳಿ ತನ್ನ ಕಾವನ್ನು ಉಳಿಸಿಕೊಂಡು ದಿನೇ ದಿನೇ ಹೆಚ್ಚಿಸಿಕೊಂಡೇ ಬಂದಿದೆ.

ಈ ಮಧ್ಯೆ ಚಳವಳಿಗಾಗಿ, ತನ್ನ ಸಮುದಾಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಿಕ್ಕಾಗಿ ಮನೆ- ಮಠ ತೊರೆದು ಜೀವ-ಜೀವನ ಕಳೆದುಕೊಂಡ ಹೋರಾಟಗಾರರು ತಮ್ಮ ಕನಸು ನನಸಾಗದೆ ಅಸುನೀಗಿದ ಅನೇಕ ಉದಾಹರಣೆಗಳಿವೆ. ಈ ಸಾಲಿನಲ್ಲಿ ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ, ಪ್ರೊ.ಟಿ.ಯಲ್ಲಪ್ಪ ಭೂತಯ್ಯ, ಸಿ.ಎಸ್. ಪಾರ್ಥಸಾರಥಿ, ಎಂ.ಜಯುಣ್ಣ, ಹೂಡಿ ವೆಂಕಟೇಶ್, ಕಾಕೋಳು ಲಕ್ಕಪ್ಪ ಹೀಗೆ ಹೆಸರಿಸಬಹುದಾದ ಮತ್ತು ಹೆಸರಿಗೆ ಸಿಗದ ಸಾವಿರಾರು ಪ್ರಾಣಗಳಿವೆ.

ಇತ್ತ ಪ್ರಾತಿನಿಧ್ಯದಿಂದಲೂ ವಂಚಿತವಾಗಿರುವ ನಿರುದ್ಯೋಗಿ ವಿದ್ಯಾರ್ಥಿ ಸಮೂಹ ಒಂದು ಕಡೆಯಾದರೆ, ಅತ್ತ ಈ ಅನ್ಯಾಯವನ್ನು ಪ್ರಶ್ನಿಸುತ್ತಲೇ ಇಡೀ ಮಾದಿಗ ಸಮುದಾಯ ತನ್ನ ಅಮೂಲ್ಯ ಸಮಯ ಮತ್ತು ಆಯಸ್ಸನ್ನು ಬೀದಿಯಲ್ಲೇ ಕಳೆದು ಇನ್ನಷ್ಟು ಬರಡಾಗಿದೆ, ಪಾತಾಳ ಹೊಕ್ಕಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಕ್ಕಾಗಿ ಮಾಸಾಶನ ಕೊಡುವುದಾದರೆ ಸಮಾನ ಅವಕಾಶಕ್ಕಾಗಿ, ಪ್ರಾತಿನಿಧ್ಯಕ್ಕಾಗಿ ಜೀವನವಿಡೀ ಹೋರಾಡಿ ಬದುಕು ಕಳೆದುಕೊಂಡ, ಸುಪ್ರೀಂ ಕೋರ್ಟ್‌ನ ಕಣ್ಣು ಕೂಡ ತೆರೆಸಿದ ಒಳಮೀಸಲು ಹೋರಾಟಗಾರರಿಗೆ ಯಾಕೆ ಮಾಸಾಶನ ಕೊಟ್ಟು ಹೋರಾಟಗಾರರ ಸಂಧ್ಯಾ ಕಾಲವನ್ನು ಗೌರವಿಸಬಾರದು ಎಂಬ ಪ್ರಶ್ನೆಯೂ ಎದ್ದಿದೆ. ಈ ತ್ಯಾಗ ಬಲಿದಾನವನ್ನು, ಅನ್ಯಾಯ ಅಸಮಾನತೆಯನ್ನು ಆಳುವ ಸರ್ಕಾರ ಈಗಲಾದರೂ ಅರಿತು ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪಬೇಕಾದ ಅವಕಾಶಗಳನ್ನು ತಲುಪಿಸುವ ಪ್ರಯತ್ನದ ಭಾಗವಾಗಿರುವ ಮೀಸಲಾತಿಯನ್ನು ಜಾತಿವಾರು ಹಂಚುವ ಪ್ರಕ್ರಿಯೆಗೆ ಶೀರ್ಘ ಮುಂದಾಗಬೇಕಿದೆ.

ಕಂಟಲಗೆರೆ ಗುರುಪ್ರಸಾದ್, ಸಾಹಿತಿ

‘ಇತ್ತೀಚಿನ ದತ್ತಾಂಶವೇ ಮಾನದಂಡವಾಗಬೇಕು’

ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಒಳ ಮೀಸಲಾತಿಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯ ಸರ್ಕಾರ ನಿಖರವಾದ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕಿದೆ. ಇಲ್ಲಿ ನಿಖರವಾದ ದತ್ತಾಂಶದ ಪ್ರಶ್ನೆ ಎದುರಾಗುತ್ತದೆ. ಯಾವುದೇ ಒಂದು ಜಾತಿ ಮೀಸಲಾತಿ ಸೌಲಭ್ಯ ಬಳಸಿಕೊಳ್ಳುವುದರಲ್ಲಿ ಎಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ, ಅದಕ್ಕೆ ಕಾರಣವಾದ ಅಂಶಗಳಾವುವು, ಜನಸಂಖ್ಯೆ ಪ್ರಮಾಣ ಎಷ್ಟಿದೆ, ಶೈಕ್ಷಣಿಕ ಮಟ್ಟ ಯಾವ ಪ್ರಮಾಣದಲ್ಲಿದೆ, ಸರ್ಕಾರಿ ಉದ್ಯೋಗ ಪಡೆದವರ ಸಂಖ್ಯೆ ಎಷ್ಟು.. ಇಂತಹ ಪ್ರಶ್ನೆಗಳಿಗೆ ಸಿಗಬಹುದಾದ ಕರಾರುವಾಕ್ ಉತ್ತರವೇ ಕೋರ್ಟ್‌ ಹೇಳಿರುವ ನಿಖರವಾದ ದತ್ತಾಂಶ.

‘ಕರ್ನಾಟಕದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಇದೆ, ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಜನಗಣತಿ ವರದಿ ಇದೆ; ಇವುಗಳ ದತ್ತಾಂಶವನ್ನೇ ಬಳಸಿಕೊಳ್ಳಬಹುದು’ ಎಂದು ವಾದಿಸ ಲಾಗುತ್ತಿದೆ. ಆದರೆ, ಈ ವರದಿಗಳಲ್ಲಿನ ದತ್ತಾಂಶ, ಸಂಬಂಧಿಸಿದ ಆಯೋಗಗಳು ಕಾರ್ಯಾರಂಭ ಮಾಡಿದ ವರ್ಷ ಮತ್ತು‌ ಒಳ ಮೀಸಲಾತಿ ಜಾರಿಗೆ ಬರಬಹುದಾದ ವರ್ಷದ ನಡುವೆ ದೀರ್ಘ ಅಂತರ ಇದೆ.

ಸದಾಶಿವ ಆಯೋಗ ನೇಮಕಗೊಂಡು 17 ವರ್ಷ ತುಂಬಿದೆ. ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿಯ ಅಂಕಿಅಂಶಗಳೂ ಕೂಡ ಇತ್ತೀಚಿನ‌ದ್ದಲ್ಲ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ವರ್ಷವನ್ನು (2024) ಲೆಕ್ಕಹಿಡಿದು ಹೇಳಿದರೆ ಹೊಸದರಂತೆ ಕಂಡರೂ ವಾಸ್ತವವಾಗಿ 9 ವರ್ಷಗಳಷ್ಟು ಹಳೆಯ ವರದಿಯಿದು. ಹಾಗಾಗಿ, ಸಮೀಕ್ಷೆಗೆ ಒಳಪಡಿಸಲಾದ ವಿಷಯವಾರು ಅಂಕಿಅಂಶಗಳು ಒಂದಷ್ಟು ಪ್ರಮಾಣದಲ್ಲಿ ಏರುಪೇರಾಗಿರುವ ಸಾಧ್ಯತೆ ಇದ್ದೇ ಇದೆ. ಇದಲ್ಲದೆ, ಈ ವರದಿಯ ಅಂಕಿಅಂಶಗಳ ಸಾಚಾತನದ ಬಗ್ಗೆ ವರದಿ ಸಲ್ಲಿಕೆಯಾದ ಸಂದರ್ಭದಲ್ಲಿಯೇ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಈ ವರದಿ ಜಾರಿಯ ಪರವಾಗಿ ಸರ್ಕಾರದ ಮೇಲೆ ಒತ್ತಡ ಇರುವಂತೆಯೇ ವಿರುದ್ಧವಾಗಿಯೂ ಇದೆ.

ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಗಣತಿಯಲ್ಲಿ ಸಂಗ್ರಹಿಸುವ ದತ್ತಾಂಶ ಹತ್ತು ವರ್ಷಗಳಲ್ಲಿ ಬದಲಾವಣೆಯಾಗಿರುತ್ತದೆ ಎನ್ನುವುದು ಇದಕ್ಕೆ ಕಾರಣ. ವಸ್ತುಸ್ಥಿತಿ ಹೀಗಿರುವಾಗ, 10–15 ವರ್ಷಗಳಷ್ಟು ಹಳೆಯ ದತ್ತಾಂಶ ಆಧಾರವಾಗಿಟ್ಟುಕೊಂಡು ಒಳ ಮೀಸಲಾತಿ ಕಲ್ಪಿಸುವುದು ನ್ಯಾಯಸಮ್ಮತವಲ್ಲ. ಒಳ ಮೀಸಲಾತಿಗೆ ಕರಾರುವಾಕ್ ದತ್ತಾಂಶವೇ ಮಾನ ದಂಡವಾಗಬೇಕು ಮತ್ತು ಅಂತಹ ದತ್ತಾಂಶ ಇತ್ತೀಚಿನದ್ದಾಗಿರಬೇಕು.

–ರೇಚಂಬಳ್ಳಿ ದುಂಡಮಾದಯ್ಯ, ಸಾಹಿತಿ

ರೇಚಂಬಳ್ಳಿ ದುಂಡಮಾದಯ್ಯ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.